ಶುಕ್ರವಾರ, ಫೆಬ್ರವರಿ 26, 2021
20 °C

ಎಲ್ಲರ ಸಂತೋಷಕ್ಕಾಗಿ ಹಬ್ಬ ಆಚರಿಸೋಣ: ಶ್ರೀ ರವಿಶಂಕರ ಗುರೂಜಿ

ಶ್ರೀ ಶ್ರೀ ರವಿ ಶಂಕರ Updated:

ಅಕ್ಷರ ಗಾತ್ರ : | |

Prajavani

2020 ಕೊನೆಗೊಳ್ಳುತ್ತಿರುವಂತೆ, ಸರಿಯುತ್ತಿರುವ ವರ್ಷವನ್ನೂ ಅದು ನಮಗೆ ಒದಗಿಸಿದ ಅನುಭವಗಳನ್ನೂ ನಾವು ಮೆಲುಕು ಹಾಕುತ್ತೇವೆ. 2020ರಲ್ಲಿಯೂ ಅನೇಕ ಬಹುಮಾನಗಳ ಜೊತೆಜೊತೆಗೆ ಮುಳ್ಳುಗಳೂ ನಮಗೆ ದೊರೆತಿದ್ದು, ಅವು ನಮಗೆ ಬಲವನ್ನು ನೀಡಿರುವುದಲ್ಲದೆ ಸಹನೆಯ ಪಾಠವನ್ನೂ ಕಲಿಸಿವೆ. ಕೆಲವು ವಿದ್ಯಮಾನಗಳು ಅನುಕೂಲಕರ, ಇನ್ನೂ ಕೆಲವು ಅಷ್ಟೊಂದು ಅನುಕೂಲಕರವಲ್ಲದ ಅಂಶಗಳನ್ನು ಹೊಂದಿರುತ್ತವೆ.

ಒಳ್ಳೆಯ ಮತ್ತು ಅನುಕೂಲಕರ ಅಂಶಗಳು ನಮಗೆ ಸಂತೋಷವನ್ನುಂಟುಮಾಡಿ, ಮನಸ್ಸಿಗೆ ಶಾಂತಿ ಮತ್ತು ಸಮಾಧಾನಗಳನ್ನು ಕೊಡುತ್ತವೆ. ನಮಗೆ ಇಷ್ಟವಾಗದ ಅಂಶಗಳು ನಮಗೆ ಬಲವನ್ನು ನೀಡುತ್ತವೆ; ನಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ನೆರವಾಗುತ್ತವೆ. ಏಕೆಂದರೆ, ಸವಾಲುಗಳು ನಮ್ಮ ಕೌಶಲಗಳನ್ನು ಉತ್ತಮಪಡಿಸಿಕೊಳ್ಳಲು ಸಹಾಯಮಾಡುತ್ತವೆ.

ಈ ವರ್ಷ, ಲಾಕ್‌ಡೌನ್‌ ಸಂದರ್ಭದಲ್ಲಿ ತಂತ್ತಜ್ಞಾನವನ್ನು ಬಳಸಿಕೊಂಡು, ಜಗತ್ತಿನಾದ್ಯಂತ ವಾಸವಾಗಿರುವ ಲಕ್ಷಾಂತರ ಜನರು ಆನ್‌ಲೈನ್‌ ಮೂಲಕ ಒಟ್ಟಿಗೆ ಸೇರಿ ದಿನಕ್ಕೆರಡು ಬಾರಿ ಧ್ಯಾನ ಮಾಡಿದೆವು. ಈ ಜಗತ್ತಿನಲ್ಲಿ ಬದುಕುತ್ತಿರುವ ನಮ್ಮ ಈ ಕಾಲವು ಒಂದು ಬಹುಮಾನ ಎಂದು ತಿಳಿದುಕೊಂಡರೆ ಜೀವನದ ಬಗ್ಗೆ ನಮ್ಮ ದೃಷ್ಟಿಯೇ ಬದಲಾಗುತ್ತದೆ.

2020ನೇ ವರ್ಷವು ತನ್ನೊಂದಿಗೆ, ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡ ಮಹಾನ್‌ ಸಾಂಕ್ರಾಮಿಕ ಪಿಡುಗನ್ನೂ ಹೊತ್ತು ತಂದಿತು. ಜನರು ಕಾಯಿಲೆಗೆ ತುತ್ತಾದರು, ಆತಂಕ– ಭಯಗಳನ್ನು ಎದುರಿಸಿದರು. ತಮ್ಮ ಪ್ರೀತಿಪಾತ್ರರ ಅಗಲುವಿಕೆಯ ದುಃಖವನ್ನೂ ಅನುಭವಿಸಿದರು. ‘ಇಷ್ಟೊಂದು ಅಪರಾಧ ಪ್ರಜ್ಞೆ ಮತ್ತು ವಿಷಾದ ತುಂಬಿಕೊಂಡಿರುವಾಗ ಹೊಸವರ್ಷವನ್ನು ಆಚರಿಸುವುದಾದರೂ ಹೇಗೆ’ ಎಂದು ಜನರು ಇಂದು ಗೊಂದಲಕ್ಕೊಳಗಾಗಿದ್ದಾರೆ. ‘ಇಷ್ಟೊಂದು ಜನರು ಜೀವ ಕಳೆದುಕೊಂಡಿರುವಾಗ, ಹೊಸವರ್ಷವನ್ನು ಸಂಭ್ರಮಿಸುವುದು ಹೇಗೆ’ ಎಂದು ನಮ್ಮನ್ನು ಕೇಳುತ್ತಾರೆ.

ನಿಮ್ಮ ತೃಪ್ತಿಗಾಗಿ ಮಾತ್ರ ನೀವು ಉತ್ಸವವನ್ನು ಆಚರಿಸಿದರೆ ನಿಮ್ಮಲ್ಲಿ ಅಪರಾಧಿ ಪ್ರಜ್ಞೆ ಉಂಟಾಗಬೇಕು. ಕೇವಲ ನಿಮ್ಮ ಸಂತೋಷಕ್ಕಾಗಿ ಔತಣಕೂಟ ಏರ್ಪಡಿಸಿದರೆ ಆಗ ನಿಮ್ಮಲ್ಲಿ ಅಪರಾಧಿ ಮನೋಭಾವ ಮೂಡುತ್ತದೆ, ಅಂಥ ಕೆಲಸ ಮಾಡಬೇಡಿ. ನಿಮ್ಮ ಗೆಳೆಯರು, ಕುಟುಂಬದ ಸದಸ್ಯರು ಮತ್ತಿತರ ಪ್ರೀತಿಪಾತ್ರರ ಮನೋಬಲ ಹೆಚ್ಚಿಸುವುದು ನಿಮ್ಮ ಉದ್ದೇಶವಾಗಿದ್ದರೆ ತಡಮಾಡಬೇಡಿ. ಅಂತಹ ಸಂದರ್ಭಗಳಲ್ಲಿ ನಮ್ಮ ಸಂಭ್ರಮಾಚರಣೆಯು ಅದು ಆನ್‌ಲೈನ್‌ ಆಗಿದ್ದರೂ, ಒಂದು ಸೇವೆಯೇ ಆಗುತ್ತದೆ. ಸಂಭ್ರಮಾಚರಣೆಯೂ ಒಂದು ಸೇವೆಯಾದರೆ ಯಾವ ಅಪರಾಧಿ ಪ್ರಜ್ಞೆಯೂ ಇರುವುದಿಲ್ಲ. ಮಿಗಿಲಾಗಿ, ಸೇವೆಯೇ ನಿಮ್ಮ ಉತ್ಸವವಾದಾಗ ಅಹಂಕಾರವು ಕರಗುತ್ತದೆ.

ಆದುದರಿಂದ, ಬರುವ ವರ್ಷದಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಸತ್ಯದ ಅರಿವನ್ನು ಪ್ರತಿಯೊಬ್ಬರಲ್ಲಿಯೂ ಮೂಡಿಸುವ ಮತ್ತು ಅವರ ಬಾಳಿನಲ್ಲಿ ಸಂತೋಷವನ್ನು ಉಂಟುಮಾಡುವ ಉದ್ದೇಶದಿಂದ ಉತ್ಸವಗಳನ್ನು ಆಚರಿಸೋಣ. ಯಾವುದು ಶಾಶ್ವತ? ಅದು ನಮ್ಮ ಚೈತನ್ಯ, ನಮ್ಮ ಆತ್ಮ – ಅದು ಬದಲಾಗುವುದಿಲ್ಲ, ಅದಕ್ಕೆ ಹುಟ್ಟುಸಾವುಗಳಿಲ್ಲ.

2020ರ ಅವಶೇಷಗಳ ಮೂಲಕ, 2021ರ ಆಗಮನದ ಮೂಲಕ ಜಗತ್ತಿನ ಸಾಮೂಹಿಕ ಪ್ರಜ್ಞೆಯನ್ನು ಉನ್ನತೀಕರಿಸುವ ಮಹತ್ತರವಾದ ಹೊಣೆ ನಮ್ಮ ಮೇಲಿದೆ. ಹೊಸದೊಂದು ಸೃಷ್ಟಿ ನಮ್ಮೆದುರು ನಿಂತಿದೆ, ಅದರ ಮೂಲಕ ಜಗತ್ತಿನ ಜನರಿಗೆ ಹೊಸ ಭರವಸೆಯ ಕಿರಣವೂ ಕಾಣಿಸುತ್ತಿದೆ. ನಮ್ಮನ್ನೂ, ನಮ್ಮ ಆಸುಪಾಸಿನ ಜನರನ್ನೂ ಮೇಲೆತ್ತುವ ಸಾಮರ್ಥ್ಯವು ಇಲ್ಲಿರುವ ನಮ್ಮೆಲ್ಲರಲ್ಲಿಯೂ ಇದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು