ಸೋಮವಾರ, ಆಗಸ್ಟ್ 8, 2022
21 °C

ಮನದುಂಬಿ ನಗಿಸಿದ ಕವಿ ಡಾ. ಸಿದ್ದಲಿಂಗಯ್ಯ

ಫಣಿಕುಮಾರ್‌ ಟಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಅವರಿಲ್ಲ‌ ಎನ್ನುವುದು ತಿಳಿದು ಮನಸ್ಸು ವಿಹ್ವಲವಾಯಿತು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರು ಸಾಕಷ್ಟು ಬಾರಿ ನನ್ನ ಬಳಿ ಬರುತ್ತಿದ್ದರು. ತೀರಾ ಇತ್ತೀಚಿನವರೆಗೂ ಅವರು ನನ್ನೊಂದಿಗೆ ಮಾತನಾಡಿದ್ದರು. ಅವರ ಪ್ರತಿಮಾತಿನಲ್ಲಿಯೂ ಇರುತ್ತಿದ್ದ,  ಅಂತಃಕರಣ. ಸಂಕಟವನ್ನು ಸಂತಸವಾಗಿ ಕಾಣುವ ಸಂತುಷ್ಟತೆ.

ಇಕ್ರಲಾ‌ ವದೀರ್ಲಾ ಹಳೆಯದಾಗದು/ನಲವತ್ತೇಳರ‌ ಸ್ವಾತಂತ್ರ್ಯ ಸಾಕಾಗದು ಅನ್ನುತ್ತಿದ್ದ ಅವರದ್ದು ಅದನ್ನು ಮೀರಿದ ಮಾನವೀಯ ನಡವಳಿಕೆ. ಅವರ ಮುಂದೆ ಕೂತಾಗ ಅವರ ಮಾತಿನ ಸೌಮ್ಯತೆಯಲ್ಲಿ ಅಷ್ಟು ದೊಡ್ಡ ಹೋರಾಟದ ಕಿಚ್ಚು ಹೇಗಿತ್ತು ಎನ್ನುವ ಕುತೂಹಲ. ಅವರನ್ನು ಹಲವು ಬಾರಿ ಆ ಕುರಿತು ಕೇಳಿದ್ದೇನೆ. ಅದರ‌ ಬಗ್ಗೆ ವ್ಯಾಮೋಹವಿಲ್ಲದ, ಪಕ್ವತೆಯ ಪ್ರತಿಕ್ರಿಯೆ ಅವರದ್ದು.

ಲೌಕಿಕದ‌ ಮಾತನಾಡುತ್ತಲೇ ಪಾರಮಾರ್ಥಿಕದ ಕುರಿತಾದ ಅವರ ಬೆರಗು. ಪಾರಮಾರ್ಥಿಕವಾದ್ದು ಅಂದಾಗ, ವೈದಿಕತೆಯೆಂಬ ಅಪಭ್ರಂಶ ಬೇಡ. ನಾನು ಅಪಾರ ಮೆಚ್ಚುವ ರಜನೀಶ್ ಅವರನ್ನೂ ಆವರಿಸಿಕೊಂಡಿದ್ದ. ಪುಣೆಯ ಓಶೋ ಆಶ್ರಮಕ್ಕೆ ಹಲವಾರು ಬಾರಿ ಹೋಗಿ ಬಂದಿದ್ದೇನೆ. ಆತನಂತಹ ವ್ಯಕ್ತಿ ಇನ್ನೊಮ್ಮೆ ಹುಟ್ಟಲಾರ. ಬುದ್ಧನನ್ನು ನಿಜವಾಗಿ ದರ್ಶಿಸಿದವನು ರಜನೀಶ್. ಮನೆಯಲ್ಲಿ ಆತನ ಕುರಿತಾದ ಸಾಹಿತ್ಯದ ದೊಡ್ಡ ಸಂಗ್ರಹವೇ ಇದೆ. ಬನ್ನಿ ತೆಗೆದುಕೊಂಡು ಹೋಗಿ ಅನ್ನುತ್ತಿದ್ದರು.

 ಹಲವಾರು ಬಾರಿ ನನ್ನೊಂದಿಗೆ ಅವರು ಮಾತನಾಡಿದ್ದರು. ಪ್ರತಿ ಬಾರಿಯೂ ನನ್ನ ಬರವಣಿಗೆ ನೆನೆದು ಬೆನ್ತಟ್ಟುತ್ತಿದ್ದರು. ಖುದ್ದಾಗಿ ಭೇಟಿಯಾದಾಗ ನನ್ನ ಜೊತೆಯಿದ್ದವರ ಮುಂದೆಯೂ ಅಭಿನಂದಿಸುತ್ತಿದ್ದರು. ಅವರಿಗೆ ನನ್ನನ್ನು ಹೊಗಳಿ‌ ಆಗಬೇಕಾದ್ದೇನಿರಲಿಲ್ಲ, ಆದರೆ ಅವರ ಗುಣ ಪರಿಪೂರ್ಣತೆ‌,  ಮುಂದೆ ನಿಂತವನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿತ್ತು. ಅವರ ಸಮಷ್ಟಿ ಸಂವೇದನೆಯೇ ಅವರನ್ನು ಎತ್ತರಕ್ಕೇರಿಸಿತ್ತು.

ಡಿ.ಆರ್. ಅವರು ಸಿದ್ದಲಿಂಗಯ್ಯನವರ ಆತ್ಮಕತನ ಊರುಕೇರಿಯ ಮೊದಲ ಭಾಗದಲ್ಲಿ "ದಲಿತನ ಸಿಟ್ಟಿನಿಂದ ಲೋಕ ಒಡೆದು ಹೋಗುವುದು ಅನುಮಾನದ ಸಂಗತಿ. ಆದರೆ, ಇಲ್ಲಿ ಆತ ಗೊಳ್ಳೆಂದು ನಗುವ ರೀತಿಗೆ ಲೋಕ ಬೆಚ್ಚಿ ಜಾರಿ ಬೀಳುವುದು ಖಾತ್ರಿ’ ಎಂದು ಬರೆದರು. ಅದು‌ ಸಿದ್ದಲಿಂಗಯ್ಯನವರ ಜೀವನದೃಷ್ಟಿಯನ್ನಷ್ಟೇ‌ ಪ್ರಕಟಿಸುವುದಿಲ್ಲ, ಒಂದು ಮಾನವೀಯ ಲೋಕಗ್ರಹಿಕೆಯನ್ನು, ಒಂದು ಭರವಸೆಯನ್ನು ಅದು ಪ್ರಮುಖವಾಗಿ ಪ್ರತಿಫಲಿಸುತ್ತದೆ.

ಮಾರ್ಕ್ಸ್, ಅಂಬೇಡ್ಕರ್, ಗಾಂಧಿ ಎಲ್ಲರ ಪ್ರಭಾವ ಅವರ ಸಾಹಿತ್ಯದ ಮೇಲಿತ್ತು ಅನ್ನುತ್ತಾರೆ. ಸುತ್ತಲಿನ ಎಲ್ಲ ಪ್ರಲೋಭನೆಗಳ ನಡುವೆಯೂ ಅವರ ಭಾಷಿಕ‌ ವಿನ್ಯಾಸವು ಹೃದ್ಯ ಚೌಕಟ್ಟಿನಾಚೆ ಚಲಿಸಲಿಲ್ಲ ಎನ್ನುವುದು ಅವರ ವೈಶಿಷ್ಟ್ಯ. ಅದಕ್ಕೆ ಹೋರಾಟವನ್ನು ಮೀರುವ, ಸ್ಪಂದನೆಯನ್ನು ಸಾರುವ ತುಡಿತ ಯಾವಾಗಲೂ ಇತ್ತು. ಹಾಗಾಗಿ ಅವರು ವಿಭಿನ್ನರಾಗಿ ಉಳಿದರು.

ಅವರು ಮಾತಿಗೆ ಕೂತರೆಂದರೆ ಎಲ್ಲೆಲ್ಲಿಯೂ ನಗೆಯ ಬುಗ್ಗೆಗಳೇ. ಒಮ್ಮೆ ಹೀಗೇ ನನ್ನ ಮುಂದೆ ‌ಕೂತು ಒಂದು ಘಟನೆ ನನ್ನ ಬಳಿ  ಹೇಳಿದ್ದರು. ಪುಟ್ಟಣ್ಣ ಕಣಗಾಲ್ ಧರಣಿ ಮಂಡಲ‌ ಮಧ್ಯದೊಳಗೆ ಚಿತ್ರ ನಿರ್ದೇಶಿಸುತ್ತಿದ್ದ ಸಂದರ್ಭ. ಕಣಗಾಲರು ಸಿದ್ದಲಿಂಗಯ್ಯನವರಿಗೆ ಒಂದು ಹಾಡು ಬರೆದುಕೊಡಿ ಅಂದರಂತೆ. ಶ್ರೀನಾಥ್ ಪದ್ಮಾವಾಸಂತಿ ನಡುವೆ ಪ್ರಣಯದ ಹಾಡು ಅದು. ಎಂಬತ್ತರ ದಶಕದಲ್ಲಿ‌‌‌ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಬಂಡಾಯ ಸಾಹಿತಿಗಳ ಅಘೋಷಿತ ತೀರ್ಮಾನದಂತೆ ತಮ್ಮ ಬಳಗದ ಯಾರೇ ಆದರೂ‌ ಪ್ರೀತಿ ಪ್ರೇಮದ ಕವನಗಳನ್ನು ಬರೆಯುವ ಹಾಗಿರಲಿಲ್ಲ. ಕಣಗಾಲರು ಕೇಳಿದಾಗ ಆಸೆಯಾಯಿತು. ಹಾಡಿನ‌ ಭೂಮಿಕೆ ಕೇಳಿದೆ, ಪ್ರಣಯ ಸನ್ನಿವೇಶವನ್ನು ತೀವ್ರಭಾವದಲ್ಲಿ ಬಣ್ಣಿಸಬೇಕೆಂಬ ನಿರೀಕ್ಷೆ. ಸಿನಿಮಾ ಹಾಡೆಂದರೆ ಒಬ್ಬನ ಕೆಲಸವಲ್ಲ. ರಾಗ ಹಾಕಬೇಕು. ನಿರ್ದೇಶಕ‌ ಮೆಚ್ಚಬೇಕು. ಸನ್ನಿವೇಶ‌‌ ಅರ್ಥವಾಗಬೇಕು. ಅದಕ್ಕೆ‌ ಸರಿಯಾದ ಪದಗಳನ್ನು ಹೊಂದಿಸಿ ಬರೆಯಬೇಕು. ಸಿನಿಮಾ ಹಾಡೆಂದರೆ ಒಂದು ರೀತಿ ಸಾಮೂಹಿಕ‌‌ ಜವಾಬ್ದಾರಿ ಅಂದರು.

ಸರಿ, ಒಪ್ಪಿಕೊಂಡು ಬಿಟ್ಟೆ. ಹಾಡೂ ಬರೆದುಬಿಟ್ಟೆ. ಗೆಳತೀ, ಓ ಗೆಳತೀ, ಅಪ್ಪಿಕೋ ಎನ್ನ ಅಪ್ಪಿಕೋ, ಬಾಳೆಲ್ಲಾ ಎನ್ನಾ ತಬ್ಬಿಕೋ! ಶಾನುಭೋಗರ ಸಿನಿಮಾಕ್ಕೆ ದಲಿತ ಸಾಹಿತಿ ಹಾಡು ಬರೆಯುವುದೇ ಎಂದು ಬಂಡಾಯ ಸಾಹಿತಿಗಳು ನನ್ನ ಮೇಲೇ ಬಂಡಾಯವೆದ್ದಾರು ಎಂಬ ಭಯವಾಯಿತು. ಕಣಗಾಲರನ್ನು ಕೋರಿಕೊಂಡೆ. ದಯವಿಟ್ಟು ನನ್ನ‌ ಹೆಸರು ಹೇಳಬೇಡಿ ಅಂದೆ. ಬೇರಾವುದಾದರೂ ಹೆಸರು ಹೇಳಿ ಎಂದರು. ನನ್ನ ಹೆಸರು ಆದಿತ್ಯ ಎಂದು ಹೇಳಿಬಿಡಿ ಎಂದೆ. ಸರಿ, ಚಿತ್ರ ಬಿಡುಗಡೆ ಆಯಿತು. ಚೆನ್ನಾಗೇನೂ ಓಡಲಿಲ್ಲ. ಆದರೆ ನನ್ನ ದುರಾದೃಷ್ಟಕ್ಕೆ ಆ ಗೀತ ಸಾಹಿತ್ಯಕ್ಕೆ ನನಗೆ  83-84ರ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ ಬಂದುಬಿಟ್ಟಿತು. ಸಂತೋಷಕ್ಕಿಂತಲೂ‌‌ ಗಾಬರಿ‌ ಆಗ ನನಗೆ.

ರಾಜ್ಯ ಸರ್ಕಾರ‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಿತು. ಗೌರವವನ್ನು ಸ್ವೀಕರಿಸಲು ಧೈರ್ಯ ಮಾಡಿಯೇ ಬಿಟ್ಟೆ. ಗೀತ ಸಾಹಿತಿಯ ಹೆಸರು ಕರೆದಾಗ ನಾನು ವೇದಿಕೆಗೆ ಹೋಗಿನಿಂತ ಮೇಲೆ ಜಗತ್ತಿಗೆ ಗೊತ್ತಾಯ್ತು. ಆಮೇಲೆ ನನ್ನ ಪಾಡು ಯಾರಿಗೂ ಬೇಡ. ಹೀಗೆ, ಬಂದಾಗಲೆಲ್ಲ ಮನತುಂಬಿ‌ ನಗಿಸದ ಹೊರತು ಅವರು ಹೋಗುತ್ತಿರಲಿಲ್ಲ. ಒಂದು ಗ್ರೀನ್ ಟೀ ಕುಡಿಯುತ್ತಿದ್ದರು. ಸಕ್ಕರೆ ಬೇಡ, ನನ್ನ ಸಿಹಿಮಾತು ಕೇಳಿ ಅನ್ನುತ್ತಿದ್ದರು. ಅವರೊಂದು ಅಪ್ಪಟ ಮಾನವೀಯ ಸಾಧ್ಯತೆಯಾಗಿದ್ದರು.

ಅವರ ಚಹರೆ, ಅವರ ಆಲೋಚನೆ, ಆತ್ಮವೈಭವದ ಸೋಂಕಿಲ್ಲದ ಅವರ ಆತ್ಮೀಯತೆ, ಘನತೆ... ಎಲ್ಲದರ ವಿಶಿಷ್ಟ ಬಿಂಬಗಳು. ಮನಸ್ಸಿನ ಮೇಲೆ. ಇಂದು ಅವರು ನೆನಪಿಗೆ ಸೇರಿಹೋದದ್ದು ಖಿನ್ನನಾಗಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು