ಅವಳಿಗೆ ಸಿಕ್ಕ ಬರ್ತ್‌ ಡೇ ಗಿಫ್ಟು ಮತ್ತು ನನ್ನ ಆ್ಯಸಿಡಿಟಿ...

7

ಅವಳಿಗೆ ಸಿಕ್ಕ ಬರ್ತ್‌ ಡೇ ಗಿಫ್ಟು ಮತ್ತು ನನ್ನ ಆ್ಯಸಿಡಿಟಿ...

Published:
Updated:
Deccan Herald

ನನಗೆ ‘ಹುಟ್ಟಿದ ಹಬ್ಬ’ ಆಚರಿಸಿಕೊಳ್ಳಬೇಕು ಅಂತ ಮೊದಲ ಸಲ ಅನಿಸಿದಾಗ ಆರನೆತ್ತೆಯಲ್ಲಿದ್ದೆ. ಹಾಗೆ ಅನಿಸಿದಾಗ ನನ್ನ ಜನ್ಮದಿನ ಯಾವತ್ತು ಅನ್ನೂದೂ ಸರಿಯಾಗಿ ನೆನಪಿರಲಿಲ್ಲ. ಸೆಲಬ್ರೇಟ್ ಮಾಡಬೇಕು ಅನಿಸಲು ಕಾರಣ ಬೇರೆಯೇ ಇತ್ತು.

ಆಗ ನನ್ನ ಅಕ್ಕ ಎಂಟನೆತ್ತೆ. ಹೈಸ್ಕೂಲು. ಪ್ರಾಥಮಿಕ ಶಾಲೆಯಲ್ಲಿದ್ದ ನಂಗೆ ಹೈಸ್ಕೂಲು ಅನ್ನುವುದು ಬೆರಗಿನ ಜಗತ್ತು. ಆ ಬೆರಗಿಗೆ ಕುತೂಹಲದ ಒಗ್ಗರಣೆ ಹಾಕುವಂತೆ ಇವಳು ಪ್ರತಿದಿನ ಹೊಸ ಹೊಸ ಕಥೆ ಹೇಳ್ತಿದ್ದಳು. ‘ಒಂದು ಗಣಿತದ ಲೆಕ್ಕ ಎಷ್ಟು ದೊಡ್ಡ ಇರ್ತು ಗೊತ್ತಿದ್ದಾ...?’ ಎಂದು ಮೂರು ನಾಲ್ಕು ಪೇಜಲ್ಲಿ ತುಂಬಿಹೋಗಿದ್ದ ಪ್ರಮೇಯವನ್ನು ತೋರಿಸುತ್ತಿದ್ದಳು. ಮತ್ತೆ ಏನೇನೋ ಹೇಳಿ ಕೊನೆಗೆ ‘ನಿಂಗರ್ಥ ಆಗ್ತ್ಲೆ ಬಿಡು. ಅದೆಂತಾ ಕನ್ನಡ ಶಾಲೆ ಅಲ್ಲ ತಿಳ್ಕಾ’ ಎಂದು ಮೂತಿ ಮುರಿದು ಹೋಗುತ್ತಿದ್ದಳು (ನಮ್ ಕಡೆ ಪ್ರಾಥಮಿಕ ಶಾಲೆಗೆ ಕನ್ನಡಶಾಲೆ ಅಂತ್ಲೇ ಕರೆಯೂದು). ನನಗೋ ಅಡಿಯಿಂದ ಮುಡಿಯವರೆಗೂ ತಹತಹವೆದ್ದು ಯಾವಾಗ ಹೈಸ್ಕೂಲು ಮೆಟ್ಲು ಹತ್ತುತ್ತೀನೋ ಎಂದು ಚಡಪಡಿಸುವಂತಾಗುತ್ತಿತ್ತು.

ಎಂಟನೆ ಇಯತ್ತೆಯಲ್ಲಿದ್ದಾಗ ಅವಳ ಹುಟ್ಟಿದ ದಿನದಂದು ಪೆಪ್ಪರ್‌ಮೆಂಟ್‌ ಇಡೀ ಪ್ಯಾಕೇಟನ್ನೇ ಖರೀದಿಸಿ ಅವಳ ಕ್ಲಾಸಿನ ಎಲ್ಲರಿಗೂ ಹಂಚಿದ್ದಳು. ಅಪ್ಪನಿಗೆ ಯಾವಾಗ್ಲೂ ಅಕ್ಕನ ಮೇಲೆ ಲವ್ವು ಜಾಸ್ತಿ. ಆದ್ರೂ ‘ಕ್ಲಾಸಿಗೆಲ್ಲ ಪೆಪ್ಪರ್‌ಮೆಂಟ್‌ ಹಂಚಲಿಕ್ಕೆ ನಾವೆಂತ ಅಷ್ಟು ಶ್ರೀಮಂತರಾ?’ ಅಂತ ಕೇಳ್ತಾನೆ; ಆಮೇಲೆ ‘ನೋಡು ಜಾಸ್ತಿ ಶೋಕಿ ರೂಢಿ ಮಾಡ್ಕಳೂದು ಒಳ್ಳೆದಲ್ಲಾ’ ಅಂತ ಬುದ್ಧಿಹೇಳ್ತಾನೆ ಎಂದೆಲ್ಲ ನಿರೀಕ್ಷಿಸಿದ್ದ ನನಗೆ ನಿರಾಸೆಯೇ ಕಾದಿತ್ತು. ಒಂದೂ ಮಾತಾಡದೆ ಪೆಪ್ಪರ್‌ಮೆಂಟ್‌ ಪ್ಯಾಕೇಟು ತಂದು ಅವಳ ಕೈಗಿತ್ತಾಗ ನನಗೆ ನಾಭಿಯಾಳದಿಂದ ಅಸೂಯೆಯ ಬೆಂಕಿಯ ಸೆಲೆ ಮೇಲೆದ್ದು ಎದೆಯೆಲ್ಲ ಹಬ್ಬಿಕೊಂಡು ಜಗಳ ಆಡಬೇಕು ಎಂದು ಹೋದರೂ ಸಿಟ್ಟಿನಿಂದ ಕತ್ತು ಬಿಗಿದಂತಾಗಿ ಬೆ ಬೆ ಬೆ ಅಂತ ಏನೇನೋ ಅಂದಿದ್ದೆ. ಯಾಕೆಂದರೆ ನನಗೆ ನೆನಪೇ ಇಲ್ಲದೇ ನನ್ನ ಜನ್ಮದಿನ ಮುಗಿದ ಮೂರು ತಿಂಗಳಾಗಿತ್ತು. ಅದೇ ಸಿಟ್ಟಿನಲ್ಲಿ ಅವಳಿಗೆ ಜನ್ಮದಿನದ ಶುಭಾಶಯವನ್ನೂ ಹೇಳಿರಲಿಲ್ಲ. ‘ನಾನೂ ಮುಂದಿನ ವರ್ಷ ಚಾಕೊಲೆಟ್‌ ಕೊಡ್ತೆ ಎಲ್ಲವ್ಕೂವ... ನಂಗೂ ಕೊಡ್ಸ’ ಎಂದೆಲ್ಲ ಹೇಳಿ ಜಬರದಸ್ತು ಮಾಡಿ ಕಣ್ಣಲ್ಲಿ ಬರುವ ನೀರನ್ನು ತಡೆದುಕೊಂಡು ಬಾಯಿಗೆ ಅಕ್ಕ ಕೊಟ್ಟ ಒಂದೇ ಪೆಪ್ಪರ್‌ಮೆಂಟ್ ಒಗೆದುಕೊಂಡು ಸುಮ್ಮನಾಗಿದ್ದೆ. ಅಪ್ಪ ‘ಹಾ... ಅವ್ಳು ಹೈಸ್ಕೂಲು... ನೀನೂ ಹೈಸ್ಕೂಲು ಬಂದ್ಮೇಲೆ ಕೊಡು’ ಎಂದು ತೀರ್ಪುಕೊಟ್ಟಿದ್ದರು.

ನಾನು ಹೈಸ್ಕೂಲು ಬರುವಷ್ಟಕ್ಕೆ ಹುಟ್ಟಿದ ಹಬ್ಬದಂದು ಎಲ್ಲರಿಗೂ ಪೆಪ್ಪರ್‌ಮೆಂಟ್ ಕೊಡುವ ಉಮೇದು ಇಳಿದು ಹೋಗಿತ್ತು. ಆದರೂ ಹಳೆಯ ಉರಿಯನ್ನು ನೆನಪಿಸಿಕೊಂಡು ಹುಟ್ಟಿದ ಹಬ್ಬದ ಹಿಂದಿನ ದಿನ ಅಪ್ಪನ ಬಳಿ ‘ಎಲ್ರಿಗೂ ಚಾಕೊಲೆಟ್ ಕೊಡ್ತೆ’ ಎಂದೆ. ಎರಡು ವರ್ಷಗಳ ಹಿಂದೆ ಅಕ್ಕ ಹೀಗೆ ಕೇಳಿದಾಗ ಅಪ್ಪ ಏನೇನು ಬುದ್ದಿವಾದ ಹೇಳಬಹುದು ಎಂದುಕೊಂಡಿದ್ದೆನೋ ಅದೆಲ್ಲವನ್ನೂ ನನಗೆ ಹೇಳಿ, ‘ಶೋಕಿ ಬ್ಯಾಡ’ ಎಂದು ನಮ್ಮ ಮನೆ ಪರಿಸ್ಥಿತಿಗಳ ವಿವರವನ್ನೂ ಕೊಟ್ಟು ಕಳಿಸಿದ್ದ. ನನಗೂ ಯಾಕೋ ಹಟ ಮಾಡಿ ಸೆಲಬ್ರೇಟ್ ಮಾಡಿಕೊಳ್ಳಬೇಕು ಅನಿಸಲಿಲ್ಲ. 

ಅಲ್ಲಿಂದ ಮುಂದೆ ಈ ಬರ್ತ್‌ಡೇ ಬಗ್ಗೆ ಇದ್ದ ಆಸಕ್ತಿ ಹೊರಟು ಹೋಯ್ತು. ಮೊದಲೂ ಇರಲಿಲ್ಲ. ಈಗಲೂ ಇಲ್ಲ. ಆದರೆ ಈ ಫೇಸ್‌ಬುಕ್‌, ಕಂಡ ಕಂಡವರಿಗೆಲ್ಲ ಈವತ್ತು ಇವ್ನು/ ಇವ್ಳು ಹುಟ್ಟಿದ ದಿನವಂತೆ. ವಿಶ್‌ ಮಾಡಿ... ವಿಶ್ ಮಾಡಿ... ಅಂತ ಅಂಗಲಾಜಿ ಅಂಗಲಾಚಿ ವಿಶ್‌ ಮಾಡಿಸುವುದರಿಂದ ಗೋಡೆಯ ಮೇಲೆಲ್ಲ ಅಭಿನಂದನೆಯ ಚಿತ್ತಾರ ಮೂಡಿರ್ತದೆ. ಒಂದು ಸಾಲಿನ ಪ್ರತಿಕ್ರಿಯೆ ಟೈಪಿಸಿ ಕಾಪಿ ಮಾಡಿಕೊಂಡು ಎಲ್ಲರಿಗೂ ಅದನ್ನು ರಿಪ್ಲಾಯ್ ಮಾಡುವುದರಲ್ಲಿಯೇ ಆ ದಿನ ಕಳೆದುಹೋಗುತ್ತದೆ.

ಅತ್ಲಾಗೆ ಅಕ್ಕಂಗೆ ಮದ್ವೆ ಆಗಿ, ಮಗಳೂ ಆಗಿ, ಬದುಕಿನಲ್ಲಿ ಒಂದಿಷ್ಟು ಮಾಗಿ, ತನ್ನೆಷ್ಟೋ ಕನಸುಗಳನ್ನು ಕತ್ತರಿಸಿಕೊಂಡು, ಇನ್ನಷ್ಟು ಹುಟ್ಟಿಸಿಕೊಂಡು, ಕಳೆದುಕೊಂಡಿದ್ದು– ಪಡೆದುಕೊಂಡಿದ್ದೆಲ್ಲವನ್ನು ಅಳೆದು ತೂಗುತ್ತ ಸಾಗುತ್ತಿದ್ದಾಳೆ. ಅದೆಷ್ಟೋ ಬರ್ತ್‌ಡೇಗಳು ಗೊತ್ತಿಲ್ಲದೆಯೇ ಕಳೆದುಹೋಗಿವೆ. ನೆನಪಾದಾಗ ಹಾರೈಸಿಕೊಂಡಿದ್ದೇವೆ. ಮರೆತುಹೋದಾಗ ಮತ್ಯಾವಾಗಲೋ ನೆನಪಿಸಿಕೊಂಡು ನಕ್ಕಿದ್ದೇವೆ.

***

ಇಂದು ಬೆಳಿಗ್ಗೆ ಅಕ್ಕನ ಬರ್ತ್‌ಡೇ ಅಂತ ನೆನಪಿಸಿದ್ದೂ ಈ ಫೇಸ್‌ಬುಕ್ಕೇ! ‘ಓಹೋ... ಒಂದು ವಿಶ್‌ ವಗಾಯ್ಸಿಬಿಡ್ವ’ ಅಂತ ಫೋನ್ ಮಾಡಿದೆ. ರಿಸೀವ್ ಮಾಡಿದವಳೇ ನಾನು ಮಾತಾಡುವುದಕ್ಕೂ ಮುನ್ನವೇ ‘ಧನ್ಯವಾದಗಳು’ ಎಂದಳು. ‘ಆಯ್ತು ಬಿಡು ಇಡ್ತೆ’ ಎಂದೆ. ‘ಹೋಪ್ಪಾ...’ ಎಂದು ತಡೆದು ನನಗೆ ಮಾತಾಡಲಿಕ್ಕೆ ಬಿಡದೆ ಶುರುಮಾಡಿದಳು.

‘‘ಬೆಳಿಗ್ಗೆ ನಾನು ಮಲ್ಕೊಂಡೇ ಇದ್ದೆ. ಈ ಕೂಸಿಗೆ (ಮಗಳು ಲೌಕ್ಯಾ) ಹೀಗೆ ಮಲ್ಗಿದ್ದವ್ರನ್ನು ಎಬ್ಸಿ ಸರ್ಪೈಸ್ ಗಿಫ್ಟ್‌ ಕೊಡಬೇಕು ಅಂತ ಯಾರು ಹೇಳಿದ್ದಾರೋ ಏನೋ. ನನ್ನ ಎಬ್ಬಿಸಿ ಕಣ್ಣು ಮುಚ್ಚಿಸಿ, ಕೈ ಹಿಡಿದು ಕರ್ಕೊಂಡೋಗಿ ಹೊರಗೆ ನಿಲ್ಲಿಸಿ ಅಮ್ಮಾ ಕಣ್ಣು ತೆಗಿ ಅಂದ್ಲು. ತೆಗೆದೆ. ’ಇದು ನಿಂಗೆ ಬರ್ತ್‌ಡೇ ಗಿಫ್ಟು ಅಂದ್ಲು. ನನಗಿಂತ ಮೊದಲೇ ಎದ್ದು, ಒಂದು ಕಾಗದದ ಕಪ್‌ ಮಾಡಿ, ಮಧ್ಯ ಯಾವ್ದೋ ಗಿಡದ ಎಲೆ ತಂದಿಟ್ಟು, ಒಂದು ಹೂವು ಇಟ್ಟಿದ್ದಾಳೆ. ಅದ್ರ ಸುತ್ತಲೂ ಗುಂಡ್ ಗುಂಡ್‌ ಕಲ್ಲುಗಳು.. ಎಲ್ಲಿಂದ ಹೊತ್ಕೊಂಡು ಬಂದ್ಲೋ ಏನೋ... ಎಷ್ಟ್‌ ಚಂದ ಇದ್ದು ಗೊತ್ತಿದ್ದಾ...? ಫೋಟೊ ಕಳಿಸ್ತೆ ನಿಂಗೆ...’’ –ಅವಳ ಮಾತುಗಳಲ್ಲಿನ ಉಮೇದಿ ಎಷ್ಟು ಜೀವಂತವಾಗಿತ್ತು ಅಂದ್ರೆ ನನ್ನ ನಾಭಿಯೊಳಗಿಂದ ಮತ್ತೊಮ್ಮೆ ಅಸೂಯೆಯ ಹೊಗೆ ಏಳಲಾರಂಭಿಸಿತು. ಹಿಂದೆ ‘ಹೈಸ್ಕೂಲು ಅಂದ್ರೆ ಹೆಂಗಿರ್ತು ಗೊತ್ತಿದ್ದಾ?’ ಎಂದಷ್ಟೇ ಉತ್ಸಾಹ– ‘ನಿಂಗೆಂತಾ ಗೊತ್ತಾಗ್ತು, ಕನ್ನಡ ಶಾಲೆ ಹಾಗಲ್ಲ ಅದು’ ಅಂದಾಗಿನಷ್ಟೇ ಸೊಕ್ಕು ಎರಡೂ ಅವಳ ಮಾತಿನಲ್ಲಿ ಎದ್ದೆದ್ದು ಕಾಣತೊಡಗಿ ನನ್ನೊಳಗೆ ಆ್ಯಸಿಡಿಟಿ ಬುಗಿಲೆದ್ದು ಬಂತು. ಫೋನ್ ಕಟ್ ಮಾಡಿದ ಸ್ವಲ್ಪೊತ್ತಲ್ಲೇ ಫೋಟೊ ಬಂತು. ಅವಳು ಹೇಳಿದಷ್ಟೇನೂ ಚಂದ ಇರಲಿಲ್ಲ. ಹಾಗಾದ್ರೆ ಈ ಗಿಫ್ಟನ್ನೂ ಪರಮಚಂದವಾಗಿ ಕಾಣಲು ಸಾಧ್ಯವಾದ ಅವಳ ಕಣ್ಣುಗಳಲ್ಲಿ ಇರುವ ಯಾವ ಸಂಗತಿ ನನ್ನಲ್ಲಿಲ್ಲ? ಮಗಳು ಮೊದಲ ಬಾರಿಗೆ ಜನ್ಮದಿನಕ್ಕೆ ಹೀಗೆ ಶುಭಾಶಯ ಕೋರಿದಾಗ ಅವಳ ಮನಸಲ್ಲೆದ್ದ ಭಾವ ಅದೆಷ್ಟು ದಿವ್ಯವಾಗಿರಬಹುದು? ನನಗೆ ಮತ್ತೆ ಆ್ಯಸಿಡಿಟಿ ಹೆಚ್ಚಾಯ್ತು.

ನಾನೂ ಯಾರ ಬಳಿಯಾದ್ರೂ ಹಾಗೆ ಬರ್ತ್‌ಡೇ ವಿಶ್ ಮಾಡಿಸಿಕೊಳ್ಳಬೇಕು ಎನಿಸಿಕೊಳ್ಳಬೇಕು ಅನಿಸತೊಡಗಿತು.

ಛೆ, ಮೂರು ತಿಂಗಳ ಹಿಂದೆಯೇ ನನ್ನ ಬರ್ತ್‌ಡೇ ಮುಗಿದು ಹೋಗಿದೆ....

ಬದುಕು ಕೊಡುವ ತಪರಾಕಿ, ನೇವರಿಕೆ, ಕನವರಿಕೆ, ನೋವು, ನಲಿವುಗಳೆಲ್ಲದಕ್ಕೂ ನನಗಿಂತ ಮೊದಲೇ ಎರವಾಗುತ್ತಿರುವ ಅವಳಿಗೆ, ಸಂಕಷ್ಟದ ಸಂಗತಿಗಳಿಗೆ ಕಲ್ಲಾಗಿ ಎದುರುಗೊಂಡು ಅದರ ಮೂಲಕವೇ ಮಾಗುವ– ಸುಖದ ಗಳಿಗೆಗಳಲ್ಲಿ ಹೂವಿನಂತೆಯೇ ಅರಳುವ ಅದನ್ನು ಸುತ್ತಲಿನೆಲ್ಲವರಿಗೂ ಹಂಚುವ ಶಕ್ತಿ ಗುಣಗಳನ್ನು ದೇವರು ಕೊಡಲಿ ಎಂದು ಮನಸ್ಸು ಪ್ರಾರ್ಥಿಸುತ್ತಿದೆ.

ಆದ್ರೆ ಆ್ಯಸಿಡಿಟಿ ಕಡಿಮೆಯಾಗುತ್ತಿಲ್ಲ. ಏನಾದ್ರೂ ಆಗ್ಲಿ, ಅವಳಿಗೆ ಬರ್ತ್‌ಡೆ ವಿಶ್ ಮಾಡಿಲ್ಲ. ಮುಂದೆ ನಂಗೊಂದು ಮಗುವಾಗಿ ಅದು ನಂಗೆ ಮೊದಲ ಬಾರಿ ‘ಬರ್ತ್‌ಡೇ ಗಿಫ್ಟ್‌’ ಕೊಡುವ ಸುಖವನ್ನು ಅನುಭವಿಸುವವರೆಗೂ ಸಮಾಧಾನವೂ ಇಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !