ಬೂಕರ್ ಟಿ. ವಾಷಿಂಗ್ಟನ್ ಆತ್ಮಕಥೆ; ಗುಲಾಮರಲ್ಲಿ ಗುಲಾಮ

7

ಬೂಕರ್ ಟಿ. ವಾಷಿಂಗ್ಟನ್ ಆತ್ಮಕಥೆ; ಗುಲಾಮರಲ್ಲಿ ಗುಲಾಮ

Published:
Updated:

ನಾ ನು ಹುಟ್ಟಿದ್ದು ವರ್ಜೀನಿಯಾ ಪ್ರಾಂತ್ಯದ ಫ್ರಾಂಕ್ಲಿನ್ ಕೌಂಟಿಯಲ್ಲಿರುವ ಪ್ಲಾಂಟೇಷನ್ (ತೋಟ)ವೊಂದರಲ್ಲಿ. ಹುಟ್ಟಿದ ಸ್ಥಳ ಮತ್ತು ದಿನಾಂಕದ ಬಗ್ಗೆ ನಿಖರವಾಗಿ ತಿಳಿಯದು. ಇರಲಿ, ನಾನು ಎಲ್ಲೋ ಒಂದು ಸ್ಥಳದಲ್ಲಿ ಮತ್ತು ಎಂದೋ ಒಂದು ದಿನದಂದು ಹುಟ್ಟಿರುವುದು ಸುಳ್ಳಲ್ಲ. ನನಗೆ ತಿಳಿದಂತೆ ನಾನು ಹುಟ್ಟಿದ್ದು, ಹೇಲ್ಸ್‌ಫೋರ್ಡ್ ಎಂದು ಕರೆಯುವ ಪ್ರದೇಶದ ಕೂಡು ರಸ್ತೆಯ ಬಳಿಯ ಅಂಚೆ ಕಚೇರಿಯ ಹತ್ತಿರದಲ್ಲಿ.

ಪ್ರಾಯಶಃ 1858 ಅಥವಾ 1859ರಲ್ಲಿ ಜನ್ಮ ತಾಳಿರಬೇಕು. ನನಗೆ ಜನ್ಮದಿನ ಅಥವಾ ಜನಿಸಿದ ತಿಂಗಳು ಗೊತ್ತಿಲ್ಲ. ನನ್ನ ಅತ್ಯಂತ ಎಳೆಯ ವಯಸ್ಸಿನ ನೆನಪುಗಳೆಂದರೆ ಪ್ಲಾಂಟೇಷನ್ ಮತ್ತು ಗುಲಾಮರ ವಸತಿಗಳ ಚಿತ್ರಗಳು. ಗುಲಾಮರ ವಸತಿಗಳು ಪ್ಲಾಂಟೇಷನ್‍ನ ಅವಿಭಾಜ್ಯ ಅಂಗಗಳು. ಅಲ್ಲಿನ ಕೇಬಿನ್ ಎಂಬ ಗೂಡುಗಳೇ ಗುಲಾಮರ ವಸತಿಗಳು. ಮರದ ಕೊರಡುಗಳನ್ನು ಜೋಡಿಸಿ ಕಟ್ಟಿದ ಕೇಬಿನ್‍ಗಳು ಗುಲಾಮರ ಪಾಲಿಗೆ ನರಕ ಕೂಪಗಳು.

ನನ್ನ ಬದುಕು ಅರಂಭಗೊಂಡಿದ್ದು ಅತ್ಯಂತ ದಾರಿದ್ರ್ಯ ಮತ್ತು ದುಃಖ ತುಂಬಿದ ಅಸಹಾಯಕ ಪರಿಸರದಲ್ಲಿ. ಇದಕ್ಕೆ ನಮ್ಮ ತೋಟದ ಮಾಲೀಕರ ಕ್ರೌರ್ಯ ಕಾರಣವಲ್ಲ. ಇತರೆ ಮಾಲೀಕರುಗಳಿಗೆ ಹೋಲಿಸಿದರೆ ಅವರು ಕ್ರೂರಿಗಳಲ್ಲ. ನಾನು ಹುಟ್ಟಿದ್ದು ಒಂದು ಮಾದರಿ ಗುಲಾಮ ಕುಟುಂಬವೊಂದರ ಮಾದರಿ ಕೇಬಿನ್‍ನಲ್ಲಿ. ಅದರ ವಿಸ್ತೀರ್ಣ ಹದಿನಾಲ್ಕು ಅಡಿ ಅಗಲ ಮತ್ತು ಹದಿನಾರು ಅಡಿ ಉದ್ದ. ಈ ಗೂಡಿನಲ್ಲಿ ನಾವು ಮೂವರು- ನನ್ನ ತಾಯಿ, ಒಬ್ಬ ಸೋದರ ಮತ್ತು ಒಬ್ಬಳು ಸೋದರಿ- ‘ಅಮೆರಿಕದ ಅಂತರ್ಯುದ್ಧ’ ಮುಗಿಯುವವರೆಗೆ ಜೀವಿಸಿದೆವು. ಅಂತರ್ಯುದ್ಧ ಮುಗಿದ ನಂತರ ನಮ್ಮನ್ನು ಸ್ವತಂತ್ರರನ್ನಾಗಿಸಿ ಬಿಡುಗಡೆಗೊಳಿಸಿದರು.

ನನ್ನ ಪೂರ್ವಿಕರ ಬಗ್ಗೆ ನನಗೆ ಏನೇನೂ ತಿಳಿಯದು. ಆಫ್ರಿಕಾ ಖಂಡದಿಂದ ಅಮೆರಿಕ ರಾಷ್ಟ್ರಕ್ಕೆ ಗುಲಾಮರನ್ನು ಸಾಗಿಸುವಾಗ ಕರಿಜನರು ಪಟ್ಟ ಹಿಂಸೆ ಮತ್ತು ಸಂಕಷ್ಟಗಳ ಬಗ್ಗೆ ಗುಲಾಮರ ವಸತಿಗಳಲ್ಲಿ ಮೆಲುದನಿಯಲ್ಲಿ ಮಾತನಾಡಿಕೊಳ್ಳುತ್ತಿದ್ದದ್ದು ನನ್ನ ಕಿವಿಗೆ ಬೀಳುತ್ತಿತ್ತು. ನನ್ನ ಒಡನಾಟದ ಕರಿಯರು ತಮ್ಮ ಪೂರ್ವಿಕರು ಪಟ್ಟ ಆ ಹಿಂಸೆಗಳನ್ನು ಮೆಲುಕುಹಾಕುತ್ತಿದ್ದದ್ದು ನಾನು ದೊಡ್ಡವನಾದ ಮೇಲೂ ಮುಂದುವರಿದಿತ್ತು. ನನ್ನ ಪೂರ್ವಿಕರು ಸಹ ಗುಲಾಮರ ಹಡಗಿನಲ್ಲಿ ಕೂತು ಅಂಥದೇ ನೋವು ಅನುಭವಿಸಿರಬೇಕು. ನನ್ನ ತಾಯಿಯಿಂದ ಆಚೆಗೆ ನನ್ನ ಪೂರ್ವಿಕರ ಚರಿತ್ರೆ ತಿಳಿಯದು. ಆ ಬಗ್ಗೆ ತಿಳಿದುಕೊಳ್ಳಲು ನಾನು ಮಾಡಿದ ಪ್ರಯತ್ನಗಳು ವಿಫಲವಾಗಿವೆ. ಆಕೆಗೊಬ್ಬ ಮಲಸೋದರ ಮತ್ತು ಮಲಸೋದರಿಯಿದ್ದಳೆಂದು ನನ್ನ ನೆನಪು.

ಗುಲಾಮ ಪದ್ಧತಿ ಊರ್ಜಿತವಾಗಿದ್ದ ಕಾಲದಲ್ಲಿ ಕರಿಯರ ಕುಟುಂಬಗಳ ಚರಿತ್ರೆಯ ಅಥವಾ ಕೌಟುಂಬಿಕ ದಾಖಲೆಗಳ ಬಗ್ಗೆ ಯಾರೂ ಗಮನಹರಿಸುತ್ತಿರಲಿಲ್ಲ. ಪ್ರಾಯಶಃ ನನ್ನ ತಾಯಿ ಬಿಳಿಯ ಖರೀದಿದಾರನ ಗಮನಸೆಳೆದಿರಬಹುದು. ಅನಂತರ ಆತ ಅವಳ ಮಾಲೀಕನಾದ. ನಾನು ಹುಟ್ಟಿದ ನಂತರ ನನಗೂ ಮಾಲೀಕನಾದ. ಗುಲಾಮರ ಕುಟುಂಬಕ್ಕೆ ಅವಳ ಸೇರ್ಪಡೆ ಹೊಸದಾಗಿ ಖರೀದಿಸಿ ತಂದ ಹಸು ಅಥವಾ ಕುದುರೆಯಷ್ಟೇ ಕುತೂಹಲ ಹುಟ್ಟಿಸಿರಬಹುದು. ನನ್ನ ತಂದೆಯ ಬಗ್ಗೆ ಗೊತ್ತಿರುವ ಮಾಹಿತಿ ಇದಕ್ಕಿಂತಲೂ ಕಡಿಮೆ. ಅವನ ಹೆಸರೂ ನನಗೆ ತಿಳಿಯದು. ನನಗೆ ತಿಳಿದುಬಂದ ಮಾಹಿತಿಯ ಪ್ರಕಾರ ಹತ್ತಿರದ ಪ್ಲಾಂಟೇಷನ್‍ವೊಂದರಲ್ಲಿದ್ದ ಬಿಳಿಯನೊಬ್ಬ ನನ್ನ ಜನ್ಮದಾತ. ಅವನು ಯಾರೇ ಆಗಿರಲಿ, ಆತ ನನ್ನ ಬಗ್ಗೆ ಒಂದಿನಿತು ಕಾಳಜಿಯನ್ನು ವ್ಯಕ್ತಪಡಿಸಿದ್ದನ್ನು ನಾನು ಕೇಳಿಲ್ಲ ಅಥವಾ ನನ್ನನ್ನು ಸಾಕಲು ಸಹಾಯ ಮಾಡಿದ್ದು ನೆನಪಿಲ್ಲ. ಆದರೆ, ಅವನಲ್ಲಿ ಖಂಡಿತಾ ತಪ್ಪು ಹುಡುಕಲಾರೆ. ಅವನು ಆ ಕಾಲದಲ್ಲಿ ರಾಷ್ಟ್ರವೊಂದು ರೂಪಿಸಿದ್ದ ವ್ಯವಸ್ಥೆಯ ಕೂಸು.

ನಾವಿದ್ದ ಮರದ ಕೇಬಿನ್ ನಮ್ಮ ಮಲಗುವ ಸ್ಥಳ ಮಾತ್ರವಲ್ಲ, ಪ್ಲಾಂಟೇಷನ್‍ನ ಕೆಲಸಗಾರರಿಗೆ ಅಡುಗೆ ಮನೆಯೂ ಆಗಿತ್ತು. ನನ್ನ ತಾಯಿ ಆ ತೋಟದ ಅಡುಗೆಯಾಳು. ಕೇಬಿನ್‍ಗೆ ಗಾಜಿನ ಕಿಟಕಿಗಳಿರಲಿಲ್ಲ. ಪಾರ್ಶ್ವದಲ್ಲಿ ಕಿಂಡಿಗಳಿದ್ದವು. ಬಿಸಿಲಿದ್ದಾಗ ಬೆಳಕು, ಚಳಿಗಾಲದಲ್ಲಿ ಶೀತವಾಯು ಅಲ್ಲಿಂದಲೇ ತೂರಿಬರುತ್ತಿದ್ದವು. ಬಾಗಿಲು ಎಂದು ಕರೆಸಿಕೊಳ್ಳುವ ಸಾಧನವೂ ಮನೆಗೆ ಸೇರಿತ್ತು. ಬಾಗಿಲು- ನಿಲಕ್ಕೆ ಸಂಪರ್ಕ ಕಲ್ಪಿಸಿದ್ದ ಕೀಲುಗಳು ಅದನ್ನು ಹಿಡಿದುಕೊಳ್ಳಲೋ ಬೇಡವೊ ಎಂಬ ಅನುಮಾನದಿಂದಲೇ ಕಾಲ ದೂಡುತ್ತಿದ್ದವು. ಬಾಗಿಲು ಬಿರುಕು ಬಿಟ್ಟು ಕಿಟಕಿಯಂತಿತ್ತು. ಈ ಕಿಂಡಿಗಳ ಜೊತೆಗೆ ಕೇಬಿನ್‍ನ ಬಲಭಾಗದ ಗೋಡೆಯ ಕೆಳಗಡೆ ‘ಬೆಕ್ಕಿನ ಕಿಂಡಿ’ಯೊಂದಿತ್ತು.

ಯುದ್ಧಪೂರ್ವ ದಿನಗಳಲ್ಲಿ ವರ್ಜೀನಿಯಾದ ಪ್ರತಿಯೊಂದು ಭವನ ಮತ್ತು ಕೇಬಿನ್‍ನಲ್ಲಿ ಇಂಥ ಬೆಕ್ಕಿನ ಕಿಂಡಿಗಳು ಕಡ್ಡಾಯವಾಗಿ ಇರುತ್ತಿದ್ದವು. ಈ ಬೆಕ್ಕಿನ ಕಿಂಡಿಗಳು ಏಳು ಅಥವಾ ಎಂಟು ಅಂಗುಲ ಚೌಕಾಕಾರದ ಕಿಂಡಿಗಳಾಗಿದ್ದು ರಾತ್ರಿಯ ವೇಳೆಯಲ್ಲಿ ಬೆಕ್ಕು ತನಗಿಷ್ಟ ಬಂದ ವೇಳೆಯಲ್ಲಿ ಬಂದು ಹೋಗಲು ಅನುಕೂಲ ಕಲ್ಪಿಸುತ್ತಿದ್ದವು. ನಾವಿದ್ದಂಥ ಕೇಬಿನ್‍ಗೆ ಇಂಥ ವಿಶೇಷ ಕಿಂಡಿಯ ಅಗತ್ಯವಿರಲಿಲ್ಲ. ಮನೆಯ ಎಲ್ಲ ಭಾಗದಲ್ಲೂ ಬೆಕ್ಕಿಗೆ ಸ್ವಾಗತ ಕೋರುವಂಥ ಹಲವಾರು ಕಿಂಡಿಗಳಿದ್ದವು. ಮನೆಯೊಳಗಿನ ಇಲಿಗಳನ್ನು ಬಲಿ ಹಾಕಲು ಬೆಕ್ಕಿನ ಸಂಚಾರಕ್ಕಾಗಿ ಅಂಥ ಕಿಂಡಿಗಳನ್ನು ಅಳವಡಿಸುತ್ತಿದ್ದರೆಂದು ಕಾಣುತ್ತದೆ. ಕೇಬಿನ್‍ಗೆ ಮರದ ನೆಲಹಾಸಿರಲಿಲ್ಲ. ಗಟ್ಟಿಯಾಗಿದ್ದ ಬರಿ ಮಣ್ಣಿನ ನೆಲವೇ ಹಾಸಿಗೆ.

ಆ ನೆಲದ ಮಧ್ಯಭಾಗದಲ್ಲಿ ಚಳಿಗಾಲದಲ್ಲಿ ಆಲೂಗಡ್ಡೆಯನ್ನು ಸಂಗ್ರಹಿಸಲು ಆಳವಾದ ಗುಂಡಿಯಿತ್ತು. ಅದರ ಮೇಲೆ ಮರದ ಹಲಗೆಗಳನ್ನು ಮುಚ್ಚಿರುತ್ತಿದ್ದರು. ಈ ಆಲೂಗಡ್ಡೆ ಬಿಲಗಳಿಗೆ ಸಂಬಂಧಿಸಿದ ಒಂದು ಚಿತ್ರ ಮಾತ್ರ ಮಾಸದೆ ಉಳಿದಿದೆ. ಆ ಗುಂಡಿಗೆ ಆಲೂಗಡ್ಡೆಗಳನ್ನು ತುಂಬುವ ಇಲ್ಲವೇ ಅದರಿಂದ ಹೊರತೆಗೆಯುವ ಸಮಯದಲ್ಲಿ ನಾನು ಒಂದೆರಡು ಗೆಡ್ಡೆಗಳನ್ನು ಸಂಪಾದಿಸಿ ಸುಟ್ಟು ಆನಂದದಿಂದ ಆಸ್ವಾದಿಸುತ್ತಿದ್ದೆ. ನಮ್ಮ ತೋಟದಲ್ಲಿ ಅಡುಗೆ ಮಾಡುವ ಸ್ಟೌ ಇರಲಿಲ್ಲ. ಮಾಮೂಲಿ ಸೌದೆ ಒಲೆಯ ಮೇಲೆ ಮಣ್ಣಿನ ಮಡಕೆ ಮತ್ತು ಬಾಣಲೆಗಳನ್ನು ಇಟ್ಟು ಅದರಲ್ಲೇ ಅಡುಗೆ. ಎಲ್ಲ ಬಿಳಿಯರು ಮತ್ತು ಗುಲಾಮರಿಗೆ ನನ್ನ ತಾಯಿಯೇ ಅಡುಗೆ ಬೇಯಿಸುತ್ತಿದ್ದಳು. 

ನಾನು ಗುಲಾಮನಾಗಿದ್ದ ಕಾಲದಲ್ಲಿ ಶಾಲೆಗೆ ಹೋದವನಲ್ಲ. ಒಮ್ಮೆ ನನ್ನ ಕಿರು ಯಜಮಾನಿಯ ಪುಸ್ತಕಗಳನ್ನು ಹೊತ್ತು ಶಾಲೆಯ ಬಳಿಗೆ ಹೋಗಿದ್ದೆ. ಅಲ್ಲಿ ಎರಡು ಮೂರು ಡಜನ್ ಹುಡುಗ, ಹುಡುಗಿಯರು ಒಪ್ಪವಾಗಿ ಕುಳಿತು ಅಭ್ಯಾಸ ಮಾಡುತ್ತಿದ್ದ ಚಿತ್ರ ನನ್ನ ಮೇಲೆ ಗಾಢ ಪರಿಣಾಮ ಬೀರಿತು. ಶಾಲೆಯಲ್ಲಿ ಓದುವುದು ಸ್ವರ್ಗದಲ್ಲಿ ವಿಹರಿಸುವುದಕ್ಕೆ ಸಮಾನ ಎನಿಸಿತು.

ಅದೊಂದು ಮುಂಜಾವು. ಸೂರ್ಯ ಇನ್ನೂ ಉದಯಿಸಿರಲಿಲ್ಲ. ನನಗೆ ಎಚ್ಚರವಾಯಿತು. ನನ್ನವ್ವ ಮಂಡಿಯೂರಿ ಪ್ರಾರ್ಥಿಸುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು. ಲಿಂಕನ್ ಮತ್ತು ಅವರ ಪಡೆಗೆ ಜಯ ಸಿಗಲಿ; ಮುಂದೊಂದು ದಿನ ನನ್ನ ಮಕ್ಕಳು ಸ್ವತಂತ್ರರಾಗಲಿ ಎಂದು ಪ್ರಾರ್ಥಿಸುತ್ತಿದ್ದಳು. ನಾವೆಲ್ಲ ಗುಲಾಮರು; ನಮ್ಮನ್ನು ವಿಮೋಚನೆ ಮಾಡುವ ಪ್ರಶ್ನೆ ಸಾರ್ವಜನಿಕವಾಗಿ ಚರ್ಚೆಯಲ್ಲಿದೆ ಎಂಬ ವಿಷಯ ಸ್ಪಷ್ಟವಾಗಿ ನನಗೆ ತಿಳಿದದ್ದು ಅಂದು. ಅಮೆರಿಕದ ದಕ್ಷಿಣ ಪ್ರಾಂತ್ಯದಲ್ಲಿನ ಗುಲಾಮರಿಗೆ ಓದು, ಪುಸ್ತಕ ಮತ್ತು ಪತ್ರಿಕೆಗಳ ಸಂಪರ್ಕವಿರಲಿಲ್ಲ. ಆದರೂ, ತಮ್ಮ ಬದುಕಿನ ಪ್ರಶ್ನೆಯ ಬಗ್ಗೆ ಭುಗಿಲೆದ್ದಿರುವ ಆಂದೋಲನದ ಅನುದಿನದ ಮಾಹಿತಿಯನ್ನು ಅವರು ಪಡೆಯುತ್ತಿದ್ದ ವಿಧಾನ ಪವಾಡಸದೃಶವಾಗಿತ್ತು. ಕರಿಯರ ಸ್ವಾತಂತ್ರ್ಯಕ್ಕಾಗಿ ಗ್ಯಾರಿಸನ್, ಲವ್‍ಜಾಯ್ ಇತರರು ಚಳವಳಿ ಆರಂಭಿಸಿದ ಕಾಲದಿಂದ ದಕ್ಷಿಣ ಪ್ರಾಂತ್ಯದ ಕರಿಯರು ಚಳವಳಿಯ ಪ್ರಗತಿ ಬಗ್ಗೆ ಮಾಹಿತಿಯ ಜಾಲವೊಂದನ್ನು ರೂಪಿಸಿಕೊಂಡಿದ್ದರು.

ಅಂತರ್ಯುದ್ಧಕ್ಕೆ ಸಿದ್ಧತೆಗಳಾಗುತ್ತಿದ್ದ ಕಾಲ ಮತ್ತು ಯುದ್ಧ ನಡೆದ ಕಾಲದಲ್ಲೂ ನಾನು ಇನ್ನೂ ಬಾಲಕ. ಆದರೆ, ಆಗ ನನ್ನ ತಾಯಿ ಮತ್ತು ತೋಟದ ಇತರೆ ಗುಲಾಮರು ಪಿಸುಮಾತಿನಲ್ಲಿ ಚರ್ಚೆ ಮಾಡುತ್ತಿದ್ದದ್ದು ನೆನಪಾಗುತ್ತದೆ. ಈ ಚರ್ಚೆಗಳಿಂದ ಅವರು ಅನುದಿನದ ವರ್ತಮಾನಗಳನ್ನು ತಿಳಿಯುತ್ತಿದ್ದು ಗುಪ್ತ ಮಾಹಿತಿ ಜಾಲವನ್ನು ಹೆಣೆದುಕೊಂಡಿದ್ದು ಸ್ಪಷ್ಟವಾಗುತ್ತದೆ. ಈ ಮಾಹಿತಿ ಜಾಲವು ಈಗ ‘ಗಾಳಿಸುದ್ದಿಯ ತಂತಿಜಾಲ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಅಬ್ರಹಾಂ ಲಿಂಕನ್‍ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ನಗರಗಳಿಂದ ಮತ್ತು ಮುಖ್ಯರಸ್ತೆಯಿಂದ ನೂರಾರು, ಸಾವಿರಾರು ಮೈಲಿ ದೂರದ ಮೂಲೆ ಮೂಲೆಯಲ್ಲಿದ್ದ ಕರಿಯರಿಗೆ ಚುನಾವಣೆಯಲ್ಲಿ ತಮ್ಮ ದಾಸ್ಯದ ಸಮಸ್ಯೆ ಆದ್ಯತೆ ಪಡೆದಿರುವ ವಿಷಯಗಳ ಅರಿವಿತ್ತು. ಉತ್ತರ ಮತ್ತು ದಕ್ಷಿಣ ಪ್ರಾಂತ್ಯದ ನಡುವೆ ಅಂತರ್ಯುದ್ಧ ಆರಂಭವಾದ ನಂತರ ಆ ಯುದ್ಧವು ಪ್ರಧಾನವಾಗಿ ಗುಲಾಮರ ವಿಮೋಚನೆಯ ಪರ- ವಿರುದ್ಧದ ಸಂಘರ್ಷವೆಂಬುದು ನಮ್ಮ ತೋಟದ ಪ್ರತಿಯೊಬ್ಬ ಗುಲಾಮನಿಗೂ ತಿಳಿದಿತ್ತು. ಉತ್ತರ ಪ್ರಾಂತ್ಯ ಗೆಲುವು ಸಾಧಿಸಿದರೆ ಗುಲಾಮರ ವಿಮುಕ್ತಿ ಖಂಡಿತ ಎಂಬುದು ನಾಗರಿಕ ಸಂಪರ್ಕದಿಂದ ದೂರವಾಗಿ ಮೂಲೆ ಮೂಲೆಯಲ್ಲಿ ವಾಸಿಸುತ್ತಿದ್ದ ಎಲ್ಲ ಗುಲಾಮರಿಗೂ ಮನವರಿಕೆಯಾಗಿತ್ತು.

‘ಫೆಡೆರಲ್’ ಸೇನೆಯ ಪ್ರತಿಯೊಂದು ವಿಜಯವನ್ನು ಮತ್ತು ‘ಕಾನ್ಫೆಡರೇಟ್’ ಪಡೆಯ ಪ್ರತಿ ಸೋಲನ್ನು ಗುಲಾಮರು ತೀವ್ರವಾದ ಆಸಕ್ತಿ ಮತ್ತು ಕುತೂಹಲದಿಂದ ಗಮನಿಸುತ್ತಿದ್ದರು. ಬಹುತೇಕ ಸಂದರ್ಭದಲ್ಲಿ ಬಿಳಿಯ ಯಜಮಾನರಿಗಿಂತ ಮೊದಲೇ ಕರಿಯ ಗುಲಾಮರಿಗೆ ಸಂಘರ್ಷದ ಫಲಿತಾಂಶ ತಿಳಿಯುತ್ತಿತ್ತು. ಬಿಳಿಯರ ಅಂಚೆಯನ್ನು ತರಲು ದೂರದ ಅಂಚೆ ಕಚೇರಿಗೆ ಹೋಗುತ್ತಿದ್ದ ಗುಲಾಮರು ಅಲ್ಲಿ ನೆರೆದ ಬಿಳಿಯರು ಯುದ್ಧ ಮತ್ತು ಚುನಾವಣೆ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಂಡು ಮಾಹಿತಿಯನ್ನು ತಮ್ಮ ತಮ್ಮಲ್ಲೇ ವಿನಿಮಯ ಮಾಡಿಕೊಳ್ಳುತ್ತಿದ್ದರು.

ನನ್ನ ಬಾಲ್ಯ ಅಥವಾ ಯೌವ್ವನದ ಆರಂಭದಲ್ಲಿ ನನ್ನ ಕುಟುಂಬದ ಎಲ್ಲ ಸದಸ್ಯರು ಒಂದು ದಿನವಾದರೂ ಒಟ್ಟಾಗಿ ಮೇಜಿನ ಸುತ್ತ ಕುಳಿತು ಊಟಕ್ಕೆ ಮೊದಲು ದೇವರ ಪ್ರಾರ್ಥನೆ ಸಲ್ಲಿಸಿದ ಸಂದರ್ಭ ಒದಗಿ ಬರಲಿಲ್ಲ. ಅಥವಾ ಒಟ್ಟಾಗಿ ಕಲೆತು ಊಟ ಮಾಡುವ ಅವಕಾಶ ಒಂದು ದಿನವೂ ಸಂಭವಿಸಲಿಲ್ಲ. ವರ್ಜೀನಿಯಾದ ತೋಟದಲ್ಲಿ ಬದುಕಿದ್ದ ಕಾಲದಲ್ಲಿ ಮತ್ತು ನಂತರದ ಅನೇಕ ವರ್ಷಗಳ ಕಾಲ ಮಕ್ಕಳಿಗೆ ಮೂಕ ಪ್ರಾಣಿಗಳಿಗೆ ಮೇವನ್ನು ಎಸೆಯುವಂತೆ ಊಟವನ್ನು ಎಸೆಯುತ್ತಿದ್ದರು. ನಮ್ಮ ಕುಟುಂಬದ ಮಕ್ಕಳು ತಗಡಿನ ತಟ್ಟೆಯನ್ನು ಕಾಲುಗಳ ಸಂದಿನಲ್ಲಿ ಹಿಡಿದು ಬರಿಕೈಯಿಂದ ತಿನ್ನುತ್ತಿದ್ದರು. ದೊಡ್ಡವರು ಅಡುಗೆ ಮಾಡುವ ಮಡಕೆ ಅಥವಾ ಬಾಣಲೆ ಅಥವಾ ತವಗಳಲ್ಲಿಯೇ ಹಾಕಿಕೊಂಡು ತಿನ್ನುತ್ತಿದ್ದರು. ಮುರುಕು ಬ್ರೆಡ್ಡಿನ ತುಂಡು, ಅದರ ಜೊತೆಗೆ ಕೆಲವೊಮ್ಮೆ ಮಾಂಸದ ತುಣುಕು ಸಿಕ್ಕರೆ ಅದೇ ದೊಡ್ಡ ಪುಣ್ಯ. ಎಲ್ಲೋ ಒಮ್ಮೆ ಹಾಲಿನ ರುಚಿಯ ಸೌಭಾಗ್ಯವೂ ದೊರಕುತ್ತಿತ್ತು. ಹಲವಾರು ಬಾರಿ ನಾನು ಊಟದ ಸಮಯಕ್ಕೆ ಯಜಮಾನರ ಭವನಗಳಲ್ಲಿ ಹಾಜರಿರಬೇಕಿತ್ತು.

***

ಯುದ್ಧವು ದೀರ್ಘಕಾಲ ಮುಂದುವರಿದಾಗ ಅದರ ಬಿಸಿ ಬಿಳಿಯರಿಗೂ ತಟ್ಟಿತು. ಹಲವಾರು ಬಾರಿ ಅವರು ಆಹಾರದ ಅಭಾವವನ್ನು ಕರಿಯರಿಗಿಂತಲೂ ಹೆಚ್ಚು ಎದುರಿಸಬೇಕಾಯಿತು. ಕರಿಯರ ಆಹಾರ ಪ್ರಧಾನವಾಗಿ ಹಂದಿ ಮಾಂಸ ಮತ್ತು ಮೆಕ್ಕೆ ಜೋಳದ ಬ್ರೆಡ್ ಆಗಿತ್ತು. ಇದನ್ನು ಪ್ಲಾಂಟೇಷನ್‍ಗಳಲ್ಲಿ ಬೆಳೆಸಿಕೊಳ್ಳುತ್ತಿದ್ದರು. ಬಿಳಿಯರ ಆಹಾರದಲ್ಲಿ ಪ್ಲಾಂಟೇಷನ್‍ಗಳಲ್ಲಿ ಬೆಳೆಯದ ಕಾಫಿ, ಟೀ, ಸಕ್ಕರೆ ಇತ್ಯಾದಿ ಬೆರೆತುಹೋಗಿದ್ದವು. ಬಿಳಿಯರು ಅವುಗಳನ್ನು ಬಿಡಲಾರದಷ್ಟು ಮೈಗೂಡಿಸಿಕೊಂಡಿದ್ದರು. ಆದರೆ ಯುದ್ಧದ ಸಮಯದಲ್ಲಿ ಅವುಗಳಿಗೆ ಅಭಾವ ತಲೆದೋರಿತು. ಬಿಳಿಯರಿಗೆ ಅದು ತೀರ ಸಂಕಷ್ಟಗಳನ್ನು ತಂದೊಡ್ಡಿತು. ಕಾಫಿಯ ಸ್ಥಾನಕ್ಕೆ ಹುರಿದ ಮೆಕ್ಕೆಜೋಳ ಮತ್ತು ಸಕ್ಕರೆಯ ಬದಲಿಗೆ ಒಂದು ಬಗೆಯ ಕಾಕಂಬಿಯನ್ನು ಬಳಕೆಗೆ ತಂದರು.

ನಾನು ಈಗ ನೀಡಿದ ಮಾಹಿತಿಯೆಲ್ಲವೂ ಕರಿಯರು ತಮ್ಮ ಮಾಲೀಕರಾದ ಬಿಳಿಯರ ಬಗ್ಗೆ ಸಹಜವಾಗಿಯೇ ದ್ವೇಷ ಅಥವಾ ಕಹಿಭಾವನೆ ಬೆಳೆಸಿಕೊಂಡಿದ್ದರು ಎಂಬ ತೀರ್ಮಾನಕ್ಕೆ ಬರಲು ಕಾರಣವಾಗಬಹುದು. ಏಕೆಂದರೆ ಬಹುಪಾಲು ದಕ್ಷಿಣ ಪ್ರಾಂತ್ಯದ ಬಿಳಿಯರು ಅಂತರ್ಯುದ್ಧದಲ್ಲಿ ಭಾಗವಹಿಸಿದ್ದರು. ಗುಲಾಮಿ ಪರಂಪರೆಯ ಮುಂದುವರಿಕೆಗೆ ಬಳಿಯರ ಸಂಪೂರ್ಣ ಒಲವಿತ್ತು. ದಕ್ಷಿಣ ಪ್ರಾಂತ್ಯದ ಬಿಳಿಯರು ಗುಲಾಮರನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದರು. ಅಪಮಾನುಷತೆಯನ್ನು ಮೈಗೂಡಿಸಿಕೊಂಡ್ಡಿದ್ದರು, ನಿಜ. ಆದರೆ, ಇಬ್ಬರ ನಡುವಿನ ಸಂಬಂಧಗಳ ವಸ್ತುಸ್ಥಿತಿ ಬೇರೆಯದೇ ಆಗಿತ್ತು. ಅಂತರ್ಯುದ್ಧ ಸಮಯದಲ್ಲಿ ನಮ್ಮ ತೋಟದ ಕಿರಿಯ ಯಜಮಾನನೊಬ್ಬ ಜೀವ ಕಳೆದುಕೊಂಡ; ಇನ್ನಿಬ್ಬರು ಗಾಯಗೊಂಡರು.

***

ನನ್ನ ಜನಾಂಗದ ಪ್ರತಿನಿಧಿಗಳು ವಚನಪರಿಪಾಲಕರು. ಅವರು ವಚನಭ್ರಷ್ಟರಾದ ಪ್ರಸಂಗಗಳೇ ಇರಲಿಲ್ಲ. ವರ್ಜೀನಿಯಾದಲ್ಲಿ ಈ ಹಿಂದೆ ಇದ್ದ ಮಾಜಿ ಗುಲಾಮನೊಬ್ಬನ ಪ್ರಕರಣ ಇಲ್ಲಿ ನೆನಪಾಗುತ್ತದೆ. ಆತನನ್ನು ಕೆಲವು ವರ್ಷಗಳ ಹಿಂದೆ ಓಹಿಯೋ ಪ್ರಾಂತ್ಯದ ಸಣ್ಣ ಪಟ್ಟಣದಲ್ಲಿ ಭೇಟಿಯಾಗಿದ್ದೆ. ಈ ಮೊದಲು ವರ್ಜೀನಿಯಾದ ಸಣ್ಣ ತೋಟವೊಂದರಲ್ಲಿ ಆತ ಜೀತದಾಳಾಗಿದ್ದ. ಗುಲಾಮರ ವಿಮೋಚನೆಯ ಘೋಷಣೆಯಾಗುವ ಮೂರ್ನಾಲ್ಕು ವರ್ಷಗಳ ಮೊದಲು ಅವನು ತನ್ನ ಮಾಲೀಕನೊಡನೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದ.

ಆ ಪ್ರಕಾರ ಆತ ಯಜಮಾನನಿಗೆ ವರ್ಷಕ್ಕೆ ಇಂತಿಷ್ಟು ಎಂದು ಹಣ ನೀಡಬೇಕು. ಪ್ರತಿಯಾಗಿ ತನಗಿಷ್ಟ ಬಂದೆಡೆ ಆತ ದುಡಿದು ಸಂಪಾದಿಸುವ ಸ್ವಾತಂತ್ರ್ಯವನ್ನು ಮಾಲೀಕ ನೀಡಿದ್ದ. ಓಹಿಯೋದಲ್ಲಿ ದುಡಿಮೆಗೆ ಹೆಚ್ಚು ಕೂಲಿ ಸಿಗುತ್ತದೆಂದು ಆತ ಅಲ್ಲಿಗೆ ಹೋಗಿ ದುಡಿಯಲಾರಂಭಿಸಿದ. ವಿಮೋಚನಾ ಘೋಷಣೆಯಾದಾಗ ಅವನಿಂದ ಮಾಲೀಕನಿಗೆ ಮುನ್ನೂರು ಡಾಲರ್ ಸಂದಾಯ ಬಾಕಿಯಿತ್ತು. ವಿಮೋಚನಾ ಆಜ್ಞೆ ಹೊರಬಿದ್ದ ನಂತರ ಕರಿಯರು ಸ್ವತಂತ್ರರಾದರು. ನಿಯಮದ ಪ್ರಕಾರ ಬಾಕಿ ಕೊಡಬೇಕಿರಲಿಲ್ಲ. ಆದರೆ ಈತ ಓಹಿಯೋ ಪ್ರಾಂತ್ಯದಿಂದ ನಡೆದು ಬಂದು ಮಾಲಿಕನಿಗೆ ಸಲ್ಲಬೇಕಾದ ಹಣಕ್ಕೆ ಬಡ್ಡಿಯನ್ನು ಸೇರಿಸಿ ಕೊಟ್ಟು ಋಣಮುಕ್ತನಾದ. ನನ್ನೊಡನೆ ಮಾತನಾಡುತ್ತಾ ಆತ ನೀಡಿದ ವಿವರಣೆ- ‘ಕಾನೂನಿನ ಪ್ರಕಾರ ನಾನು ಸಾಲಗಾರನಲ್ಲ ಎಂಬುದು ತಿಳಿದಿತ್ತು. ಆದರೆ ನಾನು ಯಜಮಾನನಿಗೆ ಮಾತುಕೊಟ್ಟಿದ್ದೂ ನಿಜ; ಅದನ್ನು ಉಳಿಸಿಕೊಳ್ಳಬೇಕಾದ್ದು ನನ್ನ ಕರ್ತವ್ಯ. ಅದನ್ನು ಉಳಿಸಿಕೊಳ್ಳದಿದ್ದರೆ ಪಡೆದ ಸ್ವಾತಂತ್ರ್ಯವನ್ನು ಆನಂದಿಸಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ’.

***

ಗುಲಾಮ ಪದ್ಧತಿಯು ನಮ್ಮನ್ನು ಹಿಂಡಿರಬಹುದು. ಆದರೆ ಈ ಪದ್ಧತಿಯಿಂದ ಬಿಳಿಯರಿಗೂ ಸಾಕಷ್ಟು ಹಾನಿಯಾಗಿದೆ ಎಂದು ನನಗೆ ಬುದ್ಧಿ ತಿಳಿದಾಗಿನಿಂದ ಗಾಢವಾಗಿ ಅನಿಸುತ್ತಿದೆ. ನಮ್ಮ ತೋಟದ ಬಿಳಿಯ ಮಾಲೀಕರನ್ನು ಕಂಡಾಗ ಇದು ನಿಜವೆನಿಸುತ್ತದೆ. ಗುಲಾಮ ವ್ಯವಸ್ಥೆಯ ಹುಟ್ಟು ಮತ್ತು ಬೆಳವಣಿಗೆ ಕೂಲಿ ಮತ್ತು ದುಡಿಮೆಯನ್ನಾಧರಿಸಿದೆ.

ಶ್ರಮವನ್ನು ಕೀಳಾಗಿ ಕಾಣುವುದು ಸಾಮಾನ್ಯ. ಹಾಗಾಗಿ ಕರಿಯರು ಮತ್ತು ಬಿಳಿಯರಿಬ್ಬರೂ ಶ್ರಮದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ನಮ್ಮ ಪ್ರಾಂತ್ಯದಲ್ಲಿ ಗುಲಾಮ ಪದ್ಧತಿಯು ಬಿಳಿಯರ ಸ್ವಾವಲಂಬನೆಯ ಬದುಕನ್ನು ನೆಲದೊಳಗೆ ಬಚ್ಚಿಟ್ಟ ವಸ್ತುಗಳನ್ನು ಯಾರಾದರು ಕದ್ದರೆ ಅವರಿಗೆ ಕೇಡು ತಪ್ಪುವುದಿಲ್ಲ ಎಂಬ ನಂಬಿಕೆ ಬಲವಾಗಿತ್ತು. ಗುಲಾಮರು ದಾಳಿಕೋರ ಯಾಂಕಿ ಸೈನಿಕರಿಗೆ ಏನು ಬೇಕಾದರೂ- ಊಟ, ಬಟ್ಟೆ, ಮದ್ಯ ನೀಡಲು ಸಿದ್ಧರಿದ್ದರು. ಅದರೆ, ಪ್ರಾಣ ಹೋದರೂ ಬಚ್ಚಿಟ್ಟ ವಸ್ತುಗಳನ್ನು ತೋರಿಸುತ್ತಿರಲಿಲ್ಲ.

ಸ್ವಾತಂತ್ರ್ಯದ ದಿನ ಹತ್ತಿರವಾದಂತೆ ಗುಲಾಮರ ವಸತಿಯಲ್ಲಿ ಸಂತಸದ ಹಾಡುಗಳು ಅಲೆಅಲೆಯಾಗಿ ಹೊಮ್ಮುತ್ತಿದ್ದವು. ಹಾಡುಗಳ ದನಿಯಲ್ಲಿ ಶಕ್ತಿ ತುಂಬಿತ್ತು. ದನಿಯಲ್ಲಿ ಭಾವೋತ್ಕರ್ಷವಿತ್ತು. ಸರಿರಾತ್ರಿಯವರೆಗೂ ಅನುರಣಿಸುತ್ತಿದ್ದ ಹಾಡುಗಳು ಗುಲಾಮರು ಸ್ವತಂತ್ರ್ಯಗೊಂಡ ಕ್ಷಣವನ್ನು ಆರಾಧಿಸುತ್ತಿದ್ದವು. ಬಹುತೇಕ ಹಾಡುಗಳಲ್ಲಿ ಸ್ವಾತಂತ್ರ್ಯದ ಉಲ್ಲೇಖವಿತ್ತು. ಈ ಹಿಂದೆ ಕೂಡ ಅಂತಹುದೇ ಹಾಡುಗಳನ್ನು ಗುಲಾಮರು ಕಟ್ಟಿಹಾಡುತ್ತಿದ್ದದ್ದು, ನಿಜ. ಆದರೆ, ಆ ಹಾಡುಗಳಲ್ಲಿ ಪರಲೋಕದಲ್ಲಿ ದೊರೆಯುವ ಸ್ವಾತಂತ್ರ್ಯದ ಉಲ್ಲೇಖವಿತ್ತೇ ಹೊರತು ಈ ಲೋಕದ ಬದುಕಿಗೆ ಸಂಬಂಧವೇ ಇರಲಿಲ್ಲ. 

***

ಕೃತಿ: ದಾಸ್ಯದಿಂದ ಆಚೆಗೆ (ಆತ್ಮಕತೆ)
ಮೂಲ: ಬೂಕರ್ ಟಿ. ವಾಷಿಂಗ್ಟನ್
ಕನ್ನಡಕ್ಕೆ: ಕೆ. ಪುಟ್ಟಸ್ವಾಮಿ
ಬೆಲೆ: ₹ 200 
ಪ್ರಕಾಶಕರು: ಅಭಿನವ 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು 560040

ಬರಹ ಇಷ್ಟವಾಯಿತೆ?

 • 31

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !