ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲಿಯಿಂದ ಬಂದವರು

Last Updated 20 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಕನ್ನಡ ಕರಾವಳಿಯ ಆರ್ಥಿಕತೆ ಹೊಸ ಆತಂಕವನ್ನು ಎದುರಿಸುತ್ತಿದೆ. ಸೌದಿ ಅರೇಬಿಯಾ ಸಹಿತ ಕೊಲ್ಲಿ ದೇಶಗಳಿಂದ ಕೆಲಸ ಬಿಟ್ಟು ಬರುವವರ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಹಲವು ವರ್ಷಗಳಿಂದ ಕೊಲ್ಲಿ ದೇಶಗಳಲ್ಲಿ ನೆಲೆಸಿ ಜೀವನವನ್ನು ಕಟ್ಟಿಕೊಂಡವರು ಈಗ ಊರಿಗೆ ಬಂದು ಮಾಡುವುದೇನು ಎನ್ನುವ ಸಂದಿಗ್ಧದಲ್ಲಿ ಸಿಲುಕಿದ್ದಾರೆ. ಮುಖ್ಯವಾಗಿ ಸೌದಿ ಅರೇಬಿಯಾದಲ್ಲಿ ಅಲ್ಲಿನ ಸರ್ಕಾರ ನಡೆಸುತ್ತಿರುವ ಸೌದೀಕರಣ ಭಾರತೀಯರನ್ನು ಅತಂತ್ರ ಸ್ಥಿತಿಗೆ ದೂಡಿದೆ.

ಸೌದಿ ಅರೇಬಿಯಾದಲ್ಲಿ ಈಗ ಹೊಸದಾಗಿ ಬಂದಿರುವ ಕಾನೂನಿನ ಪ್ರಕಾರ, ಅಲ್ಲಿನ ಅಂಗಡಿ ಮಳಿಗೆಗಳಲ್ಲಿ ಶೇಕಡ 70ರಷ್ಟು ಸೌದಿ ಪ್ರಜೆಗಳು ಕೆಲಸ ಮಾಡುವುದು ಕಡ್ಡಾಯ. ಭಾರತೀಯರು ನಡೆಸುತ್ತಿರುವ ವ್ಯಾಪಾರ ಮಳಿಗೆಗಳಿಗೂ ಇದು ಅನ್ವಯಿಸುತ್ತದೆ. ಒಬ್ಬ ಸೌದಿ ಪ್ರಜೆಯ ಲೈಸೆನ್ಸ್‌ನಲ್ಲಿ ಅಂಗಡಿ ಮುಂಗಟ್ಟುಗಳನ್ನು ನಡೆಸುವ ಸಾವಿರಾರು ಭಾರತೀಯರಿದ್ದಾರೆ. ಹಿಂದೆಲ್ಲಾ ಈ ಅಂಗಡಿಗಳಲ್ಲಿ ಭಾರತೀಯರು ಸ್ವತಂತ್ರವಾಗಿ ಕುಳಿತು ವ್ಯಾಪಾರ, ವಹಿವಾಟು ಮಾಡುತ್ತಿದ್ದರು. ಈಗ ಬಂದಿರುವ ಕಾನೂನಿನ ಪ್ರಕಾರ, ಯಾವುದೇ ಮಳಿಗೆಯಲ್ಲಿ 10 ನೌಕರರಲ್ಲಿ 7 ಮಂದಿ ಸೌದಿಯವರು ಇರುವುದು ಕಡ್ಡಾಯ. ಅಲ್ಲಿನ ಕಾನೂನಿನ ಪ್ರಕಾರವೇ ಅವರ ಸಂಬಳ, ಸವಲತ್ತುಗಳು ನಿರ್ಧಾರವಾಗುತ್ತವೆ. ಸ್ವದೇಶೀಯರಿಗೆ ಆದ್ಯತೆ ನೀಡುವ ಉದ್ದೇಶದಿಂದ ಆರಂಭಿಸಿರುವ ಈ ‘ಸೌದೀಕರಣ’ದ ಪರಿಕಲ್ಪನೆ ನಮ್ಮ ಕರಾವಳಿಯ ಜಿಲ್ಲೆಗಳ ಆರ್ಥಿಕತೆಯನ್ನು ಹಿಡಿದು ಅಲುಗಾಡಿಸುತ್ತಿದೆ.

ಒಂದೆಡೆ ದೇಶೀಯ ಆರ್ಥಿಕ ಮಾರುಕಟ್ಟೆಯಲ್ಲಿ ಏರಿಳಿತಗಳು ಕಂಡು ಬಂದಿದ್ದರೆ, ಮತ್ತೊಂದೆಡೆ ವಿದೇಶಗಳಿಗೆ ಹೋಗಿ, ಊರಿಗೆ ಹಣ ಕಳುಹಿಸುತ್ತಿದ್ದವರು ಇದ್ದಕ್ಕಿದ್ದಂತೆಯೇ ಧುತ್ತೆಂದು ತಾಯ್ನೆಲಕ್ಕೆ ಮರಳಿದ್ದಾರೆ. ಹಿಂದೆಲ್ಲ ತವರಿಗೆ ಬರುವಾಗ ಬಂಧುಬಾಂಧವರಿಗೆ ಕೈತುಂಬ ಉಡುಗೊರೆ ತರುತ್ತಿದ್ದವರು ಈ ಬಾರಿ ಬರಿಗೈಲಿ ವಾಪಸಾಗಿದ್ದಾರೆ. ಉಡುಗೊರೆ ಇಲ್ಲ ಎಂಬ ‌ಬೇಸರಕ್ಕಿಂತಲೂ ದೊಡ್ಡ ಸಂಕಟವೆಂದರೆ ಅವರ ಕಣ್ಣುಗಳಲ್ಲಿರುವ ಆತಂಕ. ಅಭದ್ರತೆ.

ದಕ್ಷಿಣ ಕನ್ನಡದ ಸುಳ್ಯದ ನಿವಾಸಿ ಸಿರಾಜ್‌ ಸುಳ್ಯ ಅವರು ತಾಂತ್ರಿಕ ಹುದ್ದೆಯಲ್ಲಿದ್ದವರು. ಈಗಾಗಲೇ ಕೆಲಸ ಕಳೆದುಕೊಂಡು ಊರಿಗೆ ಬಂದಿದ್ದಾರೆ. ಉದ್ಯೋಗವನ್ನು ನಂಬಿ ಒಳ್ಳೆಯದೊಂದು ಮನೆ ಕಟ್ಟಬೇಕು ಎಂಬುದು ಅವರ ಕನಸಾಗಿತ್ತು. ಅವರು ತಮ್ಮ ಕನಸನ್ನು ನನಸು ಮಾಡಲು ಪ್ರಯತ್ನಿಸುವಾಗಲೇ ಈ ಸಮಸ್ಯೆ ಎದುರಾಗಿದೆ. ಭಾರತದಲ್ಲಿ ಎಲ್ಲಿಯಾದರೂ ಸರಿ, ಒಂದು ಕೆಲಸ ಸಿಕ್ಕಿದರೆ ಹೋಗಲು ಸಿದ್ಧನಿದ್ದೇನೆ ಎನ್ನುತ್ತಾರೆ.

ಕುಂದಾಪುರದ ಇಕ್ಬಾಲ್‌ ಅವರದು ಇನ್ನೂ ಸಂಕಟದ ಸ್ಥಿತಿ. ಚಾಲಕರಾಗಿ ದುಡಿಯುತ್ತಿದ್ದ ಅವರು, ಕೆಲಸ ಕಳೆದುಕೊಂಡು ಊರಿಗೆ ಬಂದವರು ಇಲ್ಲೊಂದು ಐಸ್‌ಕ್ರೀಮ್‌ ಟೆಂಪೊ ಖರೀದಿಸಿದ್ದರು. ಜಾತ್ರೆಗಳಿಗೆ ಹೋಗಿ ಐಸ್‌ಕ್ರೀಮ್‌ ಮಾರಲು ನಿರ್ಧರಿಸಿದರು. ಆದರೆ, ಕೆಲವೇ ದಿನಗಳಲ್ಲಿ ಪತ್ನಿಯ ಅನಾರೋಗ್ಯ, ಅವಧಿಗೆ ಮುಂಚೆ ಹುಟ್ಟಿದ ಮಗುವಿನ ಆರೈಕೆಗಾಗಿ ಅವರು ಹಣ ಹೊಂದಿಸಬೇಕಾಯಿತು. ಸಣ್ಣಪುಟ್ಟ ಉಳಿತಾಯವನ್ನೂ ದಾಟಿ ಆಸ್ಪತ್ರೆಯ ಬಿಲ್‌ ಏರುತ್ತಿದೆ.

‘ಮುಸ್ಲಿಮರಷ್ಟೇ ಅಲ್ಲ. ಕ್ರೈಸ್ತರು ಮತ್ತು ಹಿಂದೂಗಳು ಕೂಡ ಸೌದಿಯಿಂದ ಸರದಿಯಂತೆ ವಾಪಸಾಗುತ್ತಿದ್ದಾರೆ. ಹಾಗಾಗಿ, ಕರಾವಳಿಯಲ್ಲಿ ಉದ್ಯಮ ವಲಯದಲ್ಲಿ ಪ್ರಗತಿ ಕಾಣುತ್ತಿಲ್ಲ.ರಿಯಲ್‌ ಎಸ್ಟೇಟ್‌, ಬಟ್ಟೆ ಉದ್ಯಮ ಎಲ್ಲವೂ ಹಿನ್ನಡೆ ಅನುಭವಿಸುತ್ತಿದೆ’ ಎನ್ನುತ್ತಾರೆ ಉದ್ಯಾವರದ ಜಯಲಕ್ಷ್ಮಿ ಕ್ಲೋತ್‌ ಸ್ಟೋರ್‌ನ ಮಾಲೀಕ ರವೀಂದ್ರ ಹೆಗ್ಡೆ. ‘ನಮ್ಮ ಅಂಗಡಿಯಲ್ಲಿ ಎಲ್ಲ ಸಮುದಾಯದವರ ಮದುವೆಗೆ ಬೇಕಾಗುವ ವಸ್ತ್ರ, ಮತ್ತಿತರ ವಸ್ತುಗಳನ್ನು ಮಾರಾಟ ಮಾಡುತ್ತೇವೆ. ಆದರೆ, ಕಳೆದ ಏಪ್ರಿಲ್‌ನಿಂದ ವ್ಯಾಪಾರದಲ್ಲಿ ಪ್ರಗತಿ ಕಾಣುತ್ತಿಲ್ಲ’ ಎನ್ನುವುದು ಅವರ ಅನಿಸಿಕೆ.ಸಾಮಾನ್ಯವಾಗಿ ಮಂಗಳೂರು ದುಬಾರಿ ನಗರ ಎಂಬ ‘ಪ್ರತಿಷ್ಠೆ’ಯ ಪಟ್ಟ ಗಿಟ್ಟಿಸಿಕೊಂಡಿದೆ. ಆದರೆ, ಪ್ರಸ್ತುತ ದುಬಾರಿ ನಗರದ ರಂಗುಮಸುಕಾಗುತ್ತಿದೆ.ರಿಯಾದ್‌ನಲ್ಲಿರುವ ಅಶ್ರಫ್‌ ಅವರು ಅಲ್ಲಿನ ಸ್ಥಿತಿಯನ್ನು ವಿವರಿಸುತ್ತಾರೆ. ‘ಇಲ್ಲಿ ಎಲ್ಲ ಕೆಲಸಗಳಿಗೂ ಸೌದಿ ಪ್ರಜೆಯನ್ನು ನೇಮಿಸುವ ಪ್ರಕ್ರಿಯೆ ಶುರುವಾಗಿದೆ. ಕೇರಳಿಗರೇ ಹೆಚ್ಚಿರುವ ಅಂಗಡಿಗಳಲ್ಲಿ ಹಳೆ ಸ್ಟಾಕ್‌ ಖಾಲಿ ಮಾಡುವ ಕೆಲಸ ನಡೆದಿದೆ. ಮನೆ ಬಾಡಿಗೆ, ವಿದ್ಯುತ್‌ ಬಿಲ್‌, ಆಹಾರದ ಬೆಲೆ ಜಾಸ್ತಿ ಆಗಿದೆ. ಏನೇ ಆಗಲಿ, ಊರಿಗೆ ತೆರಳುವ ವ್ಯವಸ್ಥೆ ಮಾಡಿ ಕೊಳ್ಳದೇ ಬೇರೆ ವಿಧಿಯಿಲ್ಲ’ ಎಂದು ಹೇಳುತ್ತಾರೆ.

ದಮ್ಮಾಮ್‌ನಲ್ಲಿರುವ ದಾವೂದ್‌ ಬಜಾಲ್‌ ಕೂಡ ಇದೇ ಮಾತನ್ನು ಹೇಳುತ್ತಾರೆ.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಮದ್ರಾಸ್‌ ಸರ್ಕಾರದ ವ್ಯಾಪ್ತಿಯಲ್ಲಿದ್ದ ಕರಾವಳಿ ಜಿಲ್ಲೆ ಕರ್ನಾಟಕದ ಇತರ ಭಾಗಗಳಿಗಿಂತ ಭಿನ್ನವಾಗಿಯೇ ಗುರುತಿಸಿಕೊಂಡಿತು. ಕೇರಳಕ್ಕೆ ಹೊಂದಿಕೊಂಡಂತೆ ಇರುವ ಕರಾವಳಿಯ ಆಚಾರ–ವಿಚಾರ ಮತ್ತು ಸಂಸ್ಕೃತಿ ಕೂಡ ಕೇರಳೀಯ ಶೈಲಿಯಲ್ಲೇ ಗೋಚರಿಸುತ್ತದೆ. ತದನಂತರದಲ್ಲಿ ಕರಾವಳಿ ಮೈಸೂರು ಪ್ರಾಂತ್ಯಕ್ಕೆ ಹೊಂದಿಕೊಂಡು ಕರ್ನಾಟಕದ ಜೊತೆಗೂಡಿ ಬದಲಾವಣೆಯತ್ತ ಮುಖ ಮಾಡಿತು. ಕೆಲವೇ ದಶಕಗಳಲ್ಲಿ ಭೂ ಸುಧಾರಣೆ ಕಾಯ್ದೆ ಬಂದಾಗ ಅದಕ್ಕೆ ಅತ್ಯುತ್ತಮವಾಗಿ ಸ್ಪಂದಿಸಿದ್ದು ಕೂಡ ಕರಾವಳಿಯ ಜಿಲ್ಲೆಗಳೇ. ಆದರೆ, ಈ ಸ್ಪಂದನೆಯು ಸಾಮಾಜಿಕವಾಗಿ ಭಾರೀ ಬದಲಾವಣೆಗೆ ಕಾರಣವಾಯಿತು. ಜಮೀನುದಾರರು ಮುಂಬೈ ಹಡಗು ಹತ್ತಿ ಹೋದರು. ಸೌದಿ, ದುಬೈ, ಗಲ್ಫ್‌ ದೇಶಗಳಲ್ಲಿ ಉದ್ಯೋಗ ಅರಸಿ ವಿಮಾನ ಏರುವುದು ಸಾಮಾನ್ಯವಾಯಿತು.

ಹೀಗೆ ಹೊರನಾಡಿಗೆ ಹೋದವರು ತಮ್ಮೂರಿಗೆ ಹಣ ಕಳುಹಿಸಲಾರಂಭಿಸಿದರು. ಇದೇ ಕಾರಣಕ್ಕೆ ಕರಾವಳಿಯ ಜಿಲ್ಲೆಗಳನ್ನು ಮನಿಆರ್ಡರ್‌ ಜಿಲ್ಲೆಗಳೆಂದು ಹೇಳುವುದು ವಾಡಿಕೆ. ಹಣದ ವರ್ಗಾವಣೆ, ಬ್ಯಾಂಕ್‌ಗಳಲ್ಲಿ ಉತ್ತಮ ಠೇವಣಿ ಇರುವ ಸುಸ್ಥಿತಿಯ ಜಿಲ್ಲೆಗಳು ಎಂಬ ಕ್ರೆಡಿಟ್ಟು ಕರಾವಳಿ ಜಿಲ್ಲೆಗೆ ಬಂದಿದ್ದರೆ ಅದಕ್ಕೆ ಹೀಗೆ ವಲಸೆ ಹೋದವರ ಕೊಡುಗೆಯೇ ಮೊದಲ ಕಾರಣ.ಆದರೆ, ಈಗ ಪರಿಸ್ಥಿತಿ ಬದಲಾಗಿದೆ.

ಮಂಗಳೂರಿನ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೌದಿಯಿಂದ ಬರುವ ವಿಮಾನ ಇಳಿದ ಕೂಡಲೇ ಹತ್ತಾರು ಮಂದಿ ತಮ್ಮ ಲಗೇಜುಗಳೊಂದಿಗೆ ಹೊರಬರುತ್ತಾರೆ. ಆದರೆ, ಅವರನ್ನು ಸ್ವಾಗತಿಸುವ ಮನೆಯವರ ಮುಖದಲ್ಲಿ ನಗುವಿಲ್ಲ. ಅಂದಾಜಿನ ಪ್ರಕಾರ ಸೌದಿ ಅರೇಬಿಯಾದಲ್ಲಿ 25 ಲಕ್ಷಕ್ಕೂ ಹೆಚ್ಚು ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ. ಆ ಪೈಕಿ 5 ಲಕ್ಷ ಮಂದಿಯಾದರೂ ಕರಾವಳಿಯವರಿದ್ದಾರೆ. ಆದರೆ, ಈ ಕುರಿತು ಅಧಿಕೃತ ಅಂಕಿಸಂಖ್ಯೆಗಳು ಇನ್ನೂ ಲಭ್ಯವಿಲ್ಲ.ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಎಷ್ಟು ಮಂದಿ ಎಂಬ ಸಮೀಕ್ಷೆ ನಡೆಸಬೇಕು ಎನ್ನುವ ಆಗ್ರಹ ಬಹುಕಾಲದಿಂದ ಕೇಳಿ ಬಂದಿತ್ತು. ಆದರೆ, ಸಮೀಕ್ಷೆ ನಡೆದಿಲ್ಲ.

ಸೌದಿ ಅರೇಬಿಯಾದಿಂದ ಕೆಲಸ ಕಳೆದುಕೊಂಡು ವಾಪಸ್‌ ಬರುವವರಿಗಾಗಿ ಸಾಲ ನೀಡುವ ಯೋಜನೆಯೊಂದನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಆ ಪ್ರಕಾರ 2018ರ ಜೂನ್‌ನಿಂದ ಸೆಪ್ಟೆಂಬರ್‌ 21ರ ವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆಯೇ 47 ಸಾವಿರ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ್‌ ಭಂಡಾರಿ ಹೇಳುತ್ತಾರೆ. ಕ್ರೈಸ್ತರು, ಜೈನರ ಅರ್ಜಿಗಳೂ ಬಂದಿವೆ. ಡಿಸೆಂಬರ್‌ ಒಳಗೆ ಈ ಅರ್ಜಿಗಳ ವಿಲೇವಾರಿ ಮಾಡಲಾಗುವುದು. ಸ್ವಯಂ ಉದ್ಯೋಗ, ಶ್ರಮ ಶಕ್ತಿ, ಕಿರುಸಾಲ ಸೆರಿದಂತೆ ಅನೇಕ ಯೋಜನೆಗಳನ್ನು ನಿಗಮ ಆರಂಭಿಸಿದೆ ಎಂದು ಅವರು ಹೇಳುತ್ತಾರೆ.

ಸೌದಿ ಅರೇಬಿಯಾ ಸರ್ಕಾರದ ಹೊಸ ನಿಯಮಾವಳಿಯಿಂದ ಉದ್ಯೋಗ ಕಳೆದುಕೊಂಡು ಸ್ವದೇಶಕ್ಕೆ ಮರಳುವರಿಗೆ ಪರ್ಯಾಯ ಉದ್ಯೋಗ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿಯೇ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಕೇಂದ್ರ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದರು. ಆದರೆ, ಕೌಂಟರ್‌ ಇನ್ನೂ ತೆರೆದಿಲ್ಲ.

ಸೌದೀಕರಣದ ಉದ್ಯಮಗಳು

ಸೆ. 11ರೊಳಗೆ ಸೌದೀಕರಣ ಆಗಿರುವುದು: ವಾಹನಗಳ ಶೋರೂಂ, ಅಟೊಮೊಬೈಲ್‌, ಸಿದ್ಧಉಡುಪು, ಪೀಠೋಪಕರಣ, ಮನೆಬಳಕೆ ವಸ್ತು.

ನ. 9ರೊಳಗೆ ಆಗಬೇಕಿರುವುದು: ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್‌, ವಾಚ್‌ ಅಂಗಡಿ, ಆಪ್ಟಿಕಲ್‌ ಮೆಡಿಲ್‌ ಶಾಪ್‌

2019ರ ಜ.7ರೊಳಗೆ ಆಗಬೇಕಿರುವುದು : ಕಟ್ಟಡ ಕಾಮಗಾರಿ ವಸ್ತುಗಳ ಮಾರಾಟ, ವಾಹನದ ಬಿಡಿ ಭಾಗಗಳ ಮಾರಾಟ ಮಳಿಗೆ, ಚಾಕೊಲೇಟ್‌ಅಂಗಡಿ

ತೆರೆಯದ ಕೌಂಟರ್‌

ಸೌದಿ ಅರೇಬಿಯಾ ಸರ್ಕಾರದ ಹೊಸ ನಿಯಮಾವಳಿಯಿಂದ ಉದ್ಯೋಗ ಕಳೆದುಕೊಂಡು ಸ್ವದೇಶಕ್ಕೆ ಮರಳುವರಿಗೆ ಪರ್ಯಾಯ ಉದ್ಯೋಗ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿಯೇ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಕೇಂದ್ರ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದರು. ಆದರೆ, ಕೌಂಟರ್‌ ಇನ್ನೂ ತೆರೆದಿಲ್ಲ.

ದಿರಿಸಿನಂಗಡಿಯಲ್ಲಿ ಗ್ರಾಹಕರಿಲ್ಲ
ದಿರಿಸಿನಂಗಡಿಯಲ್ಲಿ ಗ್ರಾಹಕರಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT