ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಾವತಾರಿ ಶ್ರೀಕೃಷ್ಣ

Last Updated 22 ಆಗಸ್ಟ್ 2019, 11:58 IST
ಅಕ್ಷರ ಗಾತ್ರ

ಶ್ರೀಕೃಷ್ಣ ದಶಾವತಾರಗಳಲ್ಲಿ ಮಧ್ಯಮ ಕ್ರಮಾಂಕದ ಅವತಾರ. ನಮ್ಮ ಸಂಪ್ರದಾಯಗಳ ನಂಬಿಕೆಯಂತೆ ಅವತಾರಗಳಿಗೆ ಉದ್ದೇಶವಿದೆ. ಅಧರ್ಮ ಮಿತಿಮೀರಿದಾಗ ಭಗವಂತನು ಅವತಾರವನ್ನು ತಾಳಿ ಅದನ್ನು ಗೆಲ್ಲುತ್ತಾನೆ ಎಂಬುದನ್ನು ಪುಷ್ಟೀಕರಿಸುವ ಆಶಯವನ್ನು ಪ್ರತಿಯೊಂದು ಅವತಾರದ ಹಿಂದೆ ಗುರುತಿಸಬಹುದು. ಆರಂಭದ ಅವತಾರಗಳು ಸ್ಪಷ್ಟವಾದ ಉದ್ದೇಶದಿಂದ ಆದವು. ಕೊನೆಯ ಅವತಾರಗಳಿಗೂ ಈ ಸ್ಪಷ್ಟತೆಯಿದೆ. ಕಲಿಯುಗದ ಮುನ್ನ ದ್ವಾಪರ ಯುಗ. ಇದು ಹಿಂದು-ಮುಂದಿನದರ ಕೊಂಡಿ. ಸಂಧಿಕಾಲದ ಅವಧಿಯ ಅವತಾರವಾದ್ದರಿಂದ ಇದು ಬಹಳ ಸಂಕೀರ್ಣ ಅವತಾರ. ರಾಮ ಬೋಧಿಸಲಿಲ್ಲ, ಆದರ್ಶವಾಗಿ ಬಾಳಿದ. ಕೃಷ್ಣ ಬಾಳಿದಷ್ಟೇ ಅಲ್ಲ, ಆದರ್ಶಗಳನ್ನು ಬೋಧಿಸಬೇಕಾಯಿತು. ಮನುಕುಲದ ಗ್ರಹಣಶಕ್ತಿ ಯುಗಾಂತರಗಳಲ್ಲಿ ಹೇಗೆ ಕುಂಠಿತವಾಗುತ್ತಿದೆ ಎಂಬುದನ್ನೂ ಇಲ್ಲಿ ಗಮನಿಸಬಹುದು.

ಸಾಂಕೇತಿಕವಾದ ರೂಪ ತಳೆದ ಭಗವಂತ ಮೊದಲ ನಾಲ್ಕೈದು ಅವತಾರಗಳಲ್ಲಿ ತನ್ನ ಲೀಲೆಯನ್ನು ನಿರ್ದಿಷ್ಟ ಕಾಲ, ಕ್ರಿಯೆಗೆ ಮಿತಗೊಳಿಸಿಕೊಂಡಿದ್ದ. ವರಾಹವಾತಾರದಲ್ಲಿ ಭೂದೇವಿಯ ಮುಕ್ತಿಯಷ್ಟೇ ಸೀಮಿತ ಗುರಿ, ನರಸಿಂಹಾವತಾರದಲ್ಲಿ ಹಿರಣ್ಯಕಶಿಪುವಿನ ಸಂಹಾರವಷ್ಟೇ ಗುರಿ. ಆದರೆ ರಾಮಾವತಾರದಿಂದೀಚೆಗೆ ಅವನ ಲೀಲಾಸಮಯ ಸುದೀರ್ಘವಾಯಿತು. ರಕ್ಕಸರ ಗುರುತಿಸುವಿಕೆಯೂ ಇಲ್ಲಿಂದ ಮುಂದೆ ಸಂಕೀರ್ಣವಾಗುತ್ತ ಬಂತು. ಅವರು ನೇರವಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಬಹುರೂಪಿಗಳಾಗುವ ಕೌಶಲವನ್ನು ತೋರಿಸಲಾರಂಭಿಸಿದರು. ರಾಮನ ಇಡೀ ಬದುಕು ಆದರ್ಶದ ಭಾಷ್ಯ. ಅವನ್ನು ಮರೆಯಲ್ಲಿ ಪ್ರಶ್ನಿಸಿದರೇ ಹೊರತು ನೇರವಾಗಿ ನಿಂತು ಕೇಳಿದವರು ಕಡಿಮೆಯೇ. ಇತ್ತ ಶ್ರೀಕೃಷ್ಣನು ತನ್ನ ಕ್ರಿಯೆಗೆ ಸಮರ್ಥನೆಗಳನ್ನು ನೀಡುತ್ತ ಅನೇಕರ ಸಂದೇಹಗಳನ್ನು ಪರಿಹರಿಸುತ್ತ, ಎಲ್ಲರ ಪ್ರಶ್ನೆಗಳನ್ನು ಎದುರಿಸುತ್ತ ಬದುಕಬೇಕಾಯಿತು.

ಶ್ರೀಕೃಷ್ಣನನ್ನು ಅರಿಯಲು ಬುದ್ಧಿ ಬೇಕಾಗಿಲ್ಲ; ಹೃದಯ ಸಾಕು. ಯಶೋದೆಗೆ ಅವನು ಕಂದ. ಅವನು ಬಾಯಿಯಲ್ಲಿ ಬ್ರಹ್ಮಾಂಡ ತೋರಿದರೂ ಅವಳಿಗೆ ದಿಗ್ಭ್ರಮೆಯೇ ಹೊರತು ಬ್ರಹ್ಮಾನಂದವಿಲ್ಲ, ಅರ್ಜುನನಿಗೆ ಅವನ ವಿಶ್ವರೂಪ ಸಹಿಸಲಾಗದು. ಅವನು ಯಶೋದೆಯ ಕೂಸು, ಅರ್ಜುನನ ಸಖ. ಅವನು ಅಹಂಕಾರದ ಭಕ್ತಿಗೊಲಿಯುವುದಿಲ್ಲ. ಕುಚೇಲನ ಸ್ನೇಹಕ್ಕೆ ಒಲಿಯುತ್ತಾನೆ, ವಿದುರನ ಸರಳತೆಗೆ ಮಣಿಯುತ್ತಾನೆ. ಶಿಶುಪಾಲನ ಅಹಂಕಾರದ ತಲೆ ಕತ್ತರಿಸುತ್ತಾನೆ, ದುರ್ಯೋಧನನ ಅಧರ್ಮದ ತೊಡೆ ಮುರಿಯುತ್ತಾನೆ, ಕ್ರೂರ ಕೊಡವಾದ ಕಂಸನ ಎದೆಗೆ ಒದೆಯುತ್ತಾನೆ. ಗೋಪಿಯರಿಗೆ ಒಲಿಯುತ್ತಾನೆ, ರಾಧೆಯ ಪ್ರೇಮಕ್ಕೆ ಶರಣಾಗುತ್ತಾನೆ. ದ್ರೌಪದಿಯನ್ನು ರಕ್ಷಿಸುತ್ತಾನೆ, ಗೋವಳರಿಗೆ ಗೋವರ್ಧನದ ಕೊಡೆ ಹಿಡಿಯುತ್ತಾನೆ, ಅಧರ್ಮಕ್ಕೆ ಚಕ್ರದ ತಡೆ ಒಡ್ಡುತ್ತಾನೆ.

ಕೃಷ್ಣ ಕೇವಲ ಅವತಾರವಲ್ಲ, ನಮ್ಮ ಪರಂಪರೆಯ ಪ್ರತೀಕ. ಎಲ್ಲ ಮೌಲ್ಯಗಳ ಸಾರರೂಪ. ಅವನಲ್ಲಿ ದ್ವಂದ್ವಗಳಿಗೆ, ಹತಾಶೆಗೆ, ನಿಷ್ಕ್ರಿಯತೆಗೆ ತಾವಿಲ್ಲ. ಸದಾ ಸಕಾರಾತ್ಮಕ, ಕ್ರಿಯಾಶೀಲ. ಎಂತಹ ಸಮಯದಲ್ಲೂ ಎದೆಗುಂದದ, ಎಂತಹ ಸವಾಲನ್ನಾದರೂ ಸ್ವೀಕರಿಸುವ ಧೈರ್ಯಶಾಲಿ. ಶತ್ರು ಎಷ್ಟೇ ಬಲಿಷ್ಠನಾದರೂ ಅವನ ದೌರ್ಬಲ್ಯವನ್ನು ಗುರುತಿಸಬಲ್ಲ ಚಾಣಾಕ್ಷ. ಜಯಸಾಧನೆಗೆ ಸರಿಯಾದ ತಂತ್ರಗಾರಿಕೆ ಹೆಣೆಯಬಲ್ಲ ಧೀಮಂತ. ಇಷ್ಟೆಲ್ಲ ಗುಣಗಳಿದ್ದರೂ ನಿಃಸ್ವಾರ್ಥಿ, ನಿರಹಂಕಾರಿ. ತನ್ನವರು-ಪರರು ಎನ್ನದೆ ಎಲ್ಲರನ್ನೂ ಧರ್ಮ-ಅಧರ್ಮದ ತಕ್ಕಡಿಯಲ್ಲಿಟ್ಟು ತೂಗುವ ನಿಷ್ಪಕ್ಷಪಾತಿ. ಬಾಹುಬಲ-ಬುದ್ಧಿಬಲ-ಆತ್ಮಬಲ ಹೊಂದಿದ ಪೂರ್ಣಾವತಾರಿ ಶ್ರೀಕೃಷ್ಣ. ಅವನೇ ನಮ್ಮ ಇಂದಿನ ಆದರ್ಶ.

**

ಪ್ರಸಿದ್ಧ ರಹಸ್ಯ!

ಶ್ರೀಕೃಷ್ಣಾಷ್ಟಮೀ, ಶ್ರೀಕೃಷ್ಣಜಯಂತಿ, ಜನ್ಮಾಷ್ಟಮೀ, ಗೋಕುಲಾಷ್ಟಮೀ – ಹೀಗೆ ಹಲವು ಹೆಸರಗಳಿಂದ ಕರೆಯಲ್ಪಡುವ ಹಬ್ಬದಲ್ಲಿ ಪೂಜಿಸುವುದು ಶ್ರೀಕೃಷ್ಣನನ್ನು.

ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳೆಂದರೆ ಶ್ರೀರಾಮ ಮತ್ತು ಶ್ರೀಕೃಷ್ಣ. ಅದರಲ್ಲೂ ಶ್ರೀಕೃಷ್ಣನ ಪ್ರಭಾವ ನಮ್ಮ ಸಂಸ್ಕೃತಿಲ್ಲಿ ಇನ್ನೂ ಹೆಚ್ಚು. ಭಾರತೀಯ ಕಲಾಪ್ರಪಂಚವನ್ನೂ ದಾರ್ಶನಿಕತೆಯನ್ನೂ ಶ್ರೀಮಂತಗೊಳಿಸುತ್ತಲೇ ಇರುವ ದೇವರು ಅವನು.

ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮೀದಿನದಂದು, ರೋಹಿಣೀನಕ್ಷತ್ರದಲ್ಲಿ ಶ್ರೀಕೃಷ್ಣ ಜನಿಸಿದ್ದು ಎಂಬುದು ಪುರಾಣಗಳಲ್ಲಿ ಬರುವ ಒಕ್ಕಣೆ. ಭಾದ್ರಪದ ಮಾಸದಲ್ಲಿ ಜನಿಸಿದ ಎಂಬ ಅಭಿಪ್ರಾಯವೂ ಇದೆ. ಮಹಾಭಾರತ, ಭಾಗವತ, ಹರಿವಂಶ ಮುಂತಾದ ಕೃತಿಗಳಲ್ಲಿ ಕೃಷ್ಣನ ಬಗ್ಗೆ ವಿವರಗಳು ಸಿಗುತ್ತವೆ. ಶ್ರೀಕೃಷ್ಣನ ಜಯಂತಿಯನ್ನು ತುಂಬ ಸಂತೋಷ–ಸಡಗರಗಳಿಂದ ಆಚರಿಸಲಾಗುತ್ತದೆ. ಅವನು ಹುಟ್ಟಿದ್ದು ರಾತ್ರಿಯಾದ್ದರಿಂದ ಸಾಮಾನ್ಯವಾಗಿ ಅವನ ವಿಶೇಷ ಪೂಜೆಯನ್ನೂ ಅಂದು ರಾತ್ರಿಯಲ್ಲಿ ಸಲ್ಲಿಸುವುದು ವಾಡಿಕೆ.

‘ಶ್ರೀಕೃಷ್ಣ ಎಂಬುದು ಒಂದು ಪ್ರಸಿದ್ಧ ರಹಸ್ಯ. ಹಿಂದೂಜನರು ಅದನ್ನು ಶ್ರದ್ದೆಯಿಂಧ ಅಂಗೀಕರಿಸಿದ್ದಾರೆ. ವಿಚಾರಮಾಡಹೊರಟವರು ವಿಸ್ಮಿತರಾಗಿದ್ದಾರೆ. ಶ್ರೀಕೃಷ್ಣವ್ಯಕ್ತಿ ಮನಸ್ಸಿಗೆ ರಮಣೀಯವಾಗಿ, ಆದರೂ ಬುದ್ಧಿಗೆ ಪೂರ್ತಿ ಅರ್ಥವಾಗದ್ದಾಗಿ ಉಳಿದುಕೊಂಡಿದೆ. ಪ್ರಸಿದ್ಧ ದಶಾವತಾರಗಳಲ್ಲಿ ಶ್ರೀಕೃಷ್ಣಾವತಾರದಂತೆ ಬುದ್ಧಿಪ್ರಯತ್ನಕ್ಕೆ ದುಸ್ಸಾಧ್ಯವಾಗಿರುವ ಅವತಾರ ಇನ್ನಾವುದೂ ಇಲ್ಲ’ – ಎಂಬ ಡಿವಿಜಿ ಅವರ ಮಾತುಗಳು ಮನನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT