ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳ್‌ಬೇಕಾದ್ ಮಾತು ಹೇಳೋಕೆ ಎಷ್ಟೆಲ್ಲಾ ದಾರಿಗಳಿವೆ...

Last Updated 9 ಸೆಪ್ಟೆಂಬರ್ 2019, 4:15 IST
ಅಕ್ಷರ ಗಾತ್ರ

ಬೇಡಬೇಡ ಅಂದ್ರೂ ಕಿವಿಗೆ ಬೀಳುವ ಎಷ್ಟೋ ಮಾತುಗಳಲ್ಲಿ ಒಂದಷ್ಟು ಶಾಶ್ವತವಾಗಿ ಮನದ ಮೂಲೆಯಲ್ಲಿ ನೆಲೆ ನಿಂತು ಕಾಡುವುದೇಕೆ? ಮೂಡ್‌ ಫ್ರೆಶ್‌ ಆಗೋಕೆ ಇಂಥವೊಂದಿಷ್ಟು ನವಿರು ಭಾವನೆಗಳು ನೆರವಾದಾವು.
---

‘ನಾಗೇಂದ್ರ, ಆ ಹುಡುಗಿ ಫೋನ್‌ನಲ್ಲಿ ನಿನ್ನ ಫೋಟೊ ಇತ್ತು ಕಣೊ. ಪದೇಪದೆ ನೋಡ್ತಿದ್ಳು…’

‘ಎಲ್ಲಿ ಸಾರ್? ಯಾವ ಹುಡುಗಿ. ನಾನು ಯಾರಿಗೂ ಫೋಟೊ ಕಳ್ಸಿಲ್ಲ. ಎಲ್ಲೋ ಫೇಸ್‌ಬುಕ್‌ನಿಂದ ಡೌನ್‌ಲೋಡ್ ಮಾಡ್ಕೊಂಡಿರಬಹುದು…’

ಶೇವಿಂಗ್‌ ಕ್ರೀಂ ಗಲ್ಲಕ್ಕೆ ಹಚ್ಚುತ್ತಿದ್ದ ಆ ಯುವಕನ ಮೂಗಿನ ಕೆಳಗೆ ಹರೆಯ ಸೂಚಿಸುವ ಸಾಕ್ಷಿಗಳು. ಶೇವಿಂಗ್ ಚೆನ್ನಾಗಿ ಮಾಡಲಿ ಅನ್ನೋ ಆಸೆಗೆ ‘ಹುಡುಗಿ ನಿನ್ನ ಫೋಟೊ ನೋಡ್ತಿದ್ಳು’ ಅಂತ ಅವನ ಮನಸ್ಸಿಗೆ ಕೈಹಾಕಿದ್ರೋ ಅಥವಾ ನಿಜವಾಗಿ ಹೇಳಿದ್ರೋ ಒಂದರೆಕ್ಷಣ ಕಟಿಂಗ್‌ ಶಾಪ್‌ನಲ್ಲಿದ್ದ ಹತ್ತೂ ಸಮಸ್ತರು ಆ ನಾಗೇಂದ್ರನ ಕಡೆಗೆ ಅಸೂಯಾಭರಿತ ಆಸ್ಥೆಯಿಂದ ಕಣ್ಣಾಡಿಸಿದ್ದು ದಿಟ. ಎಲ್ಲರೂ ಪೇಪರ್‌ಗಳಲ್ಲಿ ಮುಳುಗಿದಂತೆ ಮತ್ತೊಮ್ಮೆ ಪೋಸು ಕೊಟ್ಟಾದ ಮೇಲೆ ಸಂಭಾಷಣೆ ಮತ್ತೆ ಚಾಲು.

‘ಯಾವ ಹುಡುಗಿ ಸಾರ್? ಹೇಗಿದ್ಳು?’

‘ನೀನು ಯಾರಿಗೂ ಕಳಿಸಿಲ್ಲ ಅಂದ್ಯಲ್ಲಾ ಬಿಡು ಮತ್ತೆ’

‘ಹಂಗಲ್ಲಾ ಸಾರ್, ಯಾವ್‌ ಬಸ್‌ನಲ್ಲಿ ನೋಡಿದ್ರಿ’

‘ಅದೇ ಕಣೋ 12ಬಿ’

‘ಓಹ್ ಅವ್ಳಾ? ನೀವ್ ಹೇಳೋದು ನಿಜಾನಾ? ಮತ್ತೆ ನನ್ಹತ್ರಾ ಅಷ್ಟ್ ನಾಟ್ಕ ಮಾಡ್ತಾಳೆ’ಹುಡುಗ ಏಕ್‌ದಂ ಖುಷಿಯಾದ.

ಪೇಪರ್‌ಗಳಲ್ಲಿ ಮುಳುಗಿದ್ದಂತೆ ಪೋಸು ಕೊಟ್ಟಿದ್ದವರ ಹೃದಯಗಳಲ್ಲೂ ನೆನಪಿನ ನದಿಯೊಂದು ಓಡುತ್ತಿತ್ತೇ?

ಅರ್ಥಮಾಡ್ಕೋಳ್ಳೋದು ಅಂದ್ರೆ...

‘ಏನು ದರಿದ್ರದವನಪ್ಪಾ? ಈ ಪ್ರಾಜೆಕ್ಟೂ, ಆ ಪ್ರೆಸೆಂಟೇಶನ್ನೂ, ಕ್ಲೇಂಟ್‌ ಮೀಟ್... ಅಂತ ಒಂದೇ ಸಮ ಪೀಡಿಸ್ತಾನೆ. ಇಡೀ ತಿಂಗಳು ಒಂದೇ ಸಮ ಕೆಲಸ ಮಾಡೋಕೆ ನನಗೆ ಅಗಲ್ಲ. ಇವನಿಗೆ ಅರ್ಥ ಮಾಡಿಸೋದಾದ್ರೂ ಹೇಗೆ?

ಚಪ್ಪಟೆ ತುದಿ ಮೂಗಿನ ಹುಡುಗಿಗೆ ವಿಪರೀತ ಸಿಟ್ಟು ಬಂದಿತ್ತು. ಎಸಿ ರೆಸ್ಟೊರಾದಲ್ಲಿಕೋಲ್ಡ್‌ ಕಾಫಿ ಕುಡಿದರೂ ಅದು ತಣಿಯಲಿಲ್ಲ. ‘ಜಗತ್ತಿನಲ್ಲಿರೋ ಹಾಳು ಗಂಡಸರನ್ನೆಲ್ಲಾ ಎರಡು ತಿಂಗಳ ಮಟ್ಟಿಗೆ ಹೆಣ್ಣು ಮಾಡಿಬಿಡಬೇಕು. ಆಗ ಅರ್ಥವಾಗುತ್ತೆ ಅವಕ್ಕೆ ನಮ್ಮ ಕಷ್ಟ ಏನು ಅಂತ’ ಅಂತೆಲ್ಲಾ ಗೋಳಾಡಿ ಯೂಟ್ಯೂಬ್ ಓಪನ್ ಮಾಡಿದ್ರೆ… ‘ಜಂಬ ಲಕಿಡಿ ಪಂಬಾ’ ಸಿನಿಮಾ ಕಣ್ಣಿಗೆ ಬಿತ್ತು.

ಇದೇನೋ ವಿಚಿತ್ರವಾಗಿದೆ ಹೆಸರು ಅಂತ ಒಳಹೊಕ್ಕರೆ ಆ ಸಿನಿಮಾದ್ದೂ ಇದೇ ಕಾನ್ಸೆಪ್ಟು. ಪ್ರೀತಿಸಿ ಮದುವೆಯಾದ ಜೋಡಿ ಜಗಳವಾಡಿ-ಹೊಡೆದಾಡಿ ಇನ್ನು ಸಾಧ್ಯವಿಲ್ಲ ಎಂಬ ಸ್ಥಿತಿ ಮುಟ್ಟುವ ಹೊತ್ತಿಗೆ ವಿಚ್ಛೇದನ ಕೊಡಿಸುವ ಲಾಯರ್ ಎಂಟ್ರಿ. ಅವನಿಗೋ ವಿಚ್ಛೇದನ ಕೊಡಿಸಿಯೇ ವಿಶ್ವದಾಖಲೆ ಮಾಡುವ ಹುಚ್ಚು. ಇನ್ನೇನು ಇಷ್ಟೇ ಈ ಫಿಲಂ ಅಂದುಕೊಳ್ಳುವಾಗಬರುತ್ತಾನೆ ಯಮರಾಯ. ಯುವಕನ ದೇಹಕ್ಕೆ ಯುವತಿಯ ಆತ್ಮ, ಯುವತಿಯ ದೇಹಕ್ಕೆ ಯುವಕನ ಆತ್ಮಗಳ ಪರಕಾಯ ಪ್ರವೇಶ. ಇಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಸುಖವಾಗಿ ಬದುಕಿದರು ಎಂಬಲ್ಲಿಗೆ ಶುಭಂ.

ಫಿಲಂ ನೋಡಿ ಖುಷಿಯಾದ ಹುಡುಗಿ ವಾಟ್ಸ್‌ಆಪ್‌ನಲ್ಲಿ ತನ್ನ ಬಾಸ್‌ಗೆ ಚಿತ್ರದ ಲಿಂಕ್ ಕಳಿಸಿ, ‘ನೋಡಿ ಸರ್, ಸಖತ್ ಕಾಮಿಡಿಯಾಗಿದೆ’ ಅಂತ ಒಕ್ಕಣೆ ಬರೆದಿದ್ದಳು.

ಮುಂದಿನ ವಾರದಿಂದ ಅವಳ ಬಾಸ್ ಹಾರಾಟ ಹಿಡಿತದಲ್ಲಿತ್ತು. ಅವನು ‘ಜಂಬ ಲಕಿಡಿ ಪಂಬಾ’ ನೋಡಿದ್ನಾ?

ಹೇಳದಿದ್ರೂ ಗೊತ್ತಾಯ್ತು...

‘ನೋಡಿ ನಾನು ಆನಂದ, ನೀವು ಅಶ್ವಿನಿ. ಲೇಡೀಸ್ ಫಸ್ಟ್‌ ಅನ್ನೋ ಥಿಯರಿ ತಗೊಂಡು ಯೋಚನೆ ಮಾಡಿ’

ಇವ್ನು ಏನು ಹೇಳ್ತಿದ್ದಾನೋ. ನಮ್ಮ ಹೆಸರುಗಳಿಗೂ ಲೇಡೀಸ್‌ ಫಸ್ಟ್ಥಿಯರಿಗೂ ಏನು ಸಂಬಂಧ? ಎಂದು ಗೊಣಗುತ್ತಲೇಮುಕ್ಕಾಲು ಮೂಗಿನ ಕೆಳಗಿಳಿದಿದ್ದ ಕನ್ನಡಕ ಸರಿಪಡಿಸಿಕೊಂಡು ಅವಳು, ‘ಏನ್ರೀ ಹಂಗಂದ್ರೆ’ ಅಂತ ಪೆದ್ದಳಂತೆ ಕೇಳಿದ್ದಳು.

‘ಅದೇ ಕಣ್ರೀ. ಕನ್ನಡದ ಮೊದಲ ಅಕ್ಷರ ಅ. ಅದರಲ್ಲಿ ಅಶ್ವಿನಿ ಆಗುತ್ತೆ. ಎರಡನೇ ಅಕ್ಷರ ಆ. ಅದರಿಂದ ಆನಂದ ಆಗುತ್ತೆ. ಅ - ಆ ಅಂದ್ರೆ ಅಶ್ವಿನಿ-ಆನಂದ ಆಗಬಹುದು ಅಲ್ವಾ?’

‘ಅಯ್ಯೋ ನಿನ್ನ, ನೀನು ಏನು ಹೇಳ್ತಿದ್ದೀ ಅಂತ ಈಗ ಗೊತ್ತಾಯ್ತು. ಅದನ್ನು ಹೇಳೋಥರ ಸರಿಯಾಗಿ ಹೇಳು. ಅಲ್ಲೀತನಕ ನಾನು ರಿಯಾಕ್ಟ್ ಮಾಡಲ್ಲ. ನಾನು ಏನು ಹೇಳ್ಲಿಲ್ಲ ಅಂತ ಇನ್ಯಾರ ಹತ್ತಿರಾನಾದ್ರೂ ಹೀಗೇ ನಾನು ಆನಂದ ನೀನು ಇಂದ್ರಾ. ನಾನು ಆ- ನೀನು ಇ ಅಂತ ಕಥೆ ಹೇಳೋಕೆ ಹೋದ್ರೆ ಕಪಾಳಕ್ಕೆ ಹಾಕ್ತೀನಿ’ ಹುಡುಗಿಯ ಕೋಪದ ಮಾತು ಕೇಳಿಸಿಕೊಂಡು ಕಬ್ಬನ್‌ಪಾರ್ಕ್ ಮೆಟ್ರೊ ಸ್ಟೇಷನ್‌ ಹತ್ತಿರ ಪಾನಿಪುರಿ ಕೊಡುತ್ತಿದ್ದ ಹೆಂಗಸಿಗೆ ನಗು ತಡೆಯೋಕೆ ಆಗಲಿಲ್ಲ.

‘ನೀನೇನೂ ಹೇಳಬೇಡ. ನಂಗೆ ಎಲ್ಲ ಅರ್ಥ ಆಯ್ತು’ ಎನ್ನುವಂತೆ ಕೆಂಪೇರಿದ ಹುಡುಗ, ತಳ್ಳುಗಾಡಿಯ ಹತ್ತಿರಕ್ಕೆ ಹೋಗಿ‘ಪಾನಿ ಕೊಡಿ, ಸ್ವಲ್ಪ ಸ್ವೀಟ್ ಹಾಕಿ’ ಅಂತ ಕೈ ಮುಂದಿಟ್ಟ.

ಹೇಳೋಥರ ಎಂದಾದರೂ ಒಮ್ಮೆ ಹೇಳಿರ್ತಾನೆ ಅಲ್ವಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT