ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪು: ಕಾವ್ಯಭಾವದ ವಾತ್ಸಲ್ಯ–ಜೀವಕ್ಕೂ ಪರಿಸರಕ್ಕೂ

Last Updated 26 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಪರಿಸರಕ್ಕಾಗಿ, ಜೀವಜಾಲಕ್ಕಾಗಿ, ಮಹಿಳೆಗಾಗಿ ಮತ್ತು ಭಾಷೆಗಾಗಿ ಹೋರಾಡುವುದರ ಜೊತೆಯಲ್ಲೇ ಪ್ರೀತಿ–ವಾತ್ಸಲ್ಯಕ್ಕೆ ಕಾವ್ಯದ ಕಾವು ನೀಡಿದ ಕವಯಿತ್ರಿ ಸುಗತಕುಮಾರಿ. ಕವಿತೆಗಳ ಮೂಲಕ ಹೃದಯ ತಣಿಸಿದ ಈ ‘ಟೀಚರ್‌’ ನೆಲ–ಜಲಕ್ಕಾಗಿ ಬೀದಿಗಳಿಯುವುದರ ಜೊತೆಯಲ್ಲಿ ಮಕ್ಕಳು–ದೀನರ ‘ಅಮ್ಮ’ನಾಗಿ ಸಾಮಾಜಿಕ ಕಾರ್ಯದ ಮತ್ತೊಂದು ಮುಖವನ್ನೂ ಹೊತ್ತಿದ್ದರು. ಹೀಗಾಗಿ ಕೇರಳದ ‘ಸಹೃದಯರ’ ವಲಯವನ್ನು ಹೋರಾಟದ ಹಾದಿಗೆ ಎಳೆದು ತರುವ ಕಾಂತೀಯ ಶಕ್ತಿಯಾದರು.

ಸುಗತಕುಮಾರಿ ಅವರಿಗೆ ಕಾವ್ಯವು ಎಲ್ಲ ಬಗೆಯ ವಾತ್ಸಲ್ಯ ಪ್ರಕಟಪಡಿಸುವುದಕ್ಕಿರುವ, ಸಕಲಜೀವಿಗಳ ಮೇಲಿನ ಕಾಳಜಿ ಬಿಂಬಿಸಲಿರುವ,ರೋಷ–ಆವೇಶವನ್ನು ಲಾಲಿತ್ಯಪೂರ್ಣವಾಗಿ ಹೊರಹಾಕುವ ಸಾಧನವಾಗಿತ್ತು. ಹೀಗಾಗಿ ಅವರು ಕಾಲವಾದಾಗ ಕಾವ್ಯಪ್ರಿಯರು, ಪರಿಸರ ಪ್ರೇಮಿಗಳು ಮತ್ತು ಸಾಮಾಜಿಕ ಹೋರಾಟಗಾರೆರೆಲ್ಲರೂ ‘ಪ್ರಕೃತಿ, ಭಾಷೆ ಮತ್ತು ಮಾನವಪ್ರೇಮದ ಕಾವಲುಗಾರ್ತಿಗೆ ವಿದಾಯ’ ಎಂದು ಉದ್ಗರಿಸಿದ್ದರು.

ಕೇರಳ ಮಹಿಳಾ ಆಯೋಗದ ಮೊದಲ ಅಧ್ಯಕ್ಷೆಯೂ ಅಲ್ಲಿನ ಪರಿಸರ ಹೋರಾಟದ ಆರಂಭಘಟ್ಟದ ಕಾರ್ಯಕರ್ತೆಯೂ ಆಗಿದ್ದ ಸುಗತಕುಮಾರಿ ಮಣ್ಣನ್ನು ಮಲಿನಗೊಳಿಸಿದವರನ್ನು, ಕಾಡಿನ ಹಂತಕರನ್ನು, ಪರಿಸರಕ್ಕೆ ವಿಷ ಸುರಿದವರನ್ನು ಟೀಕಿಸಿದಾಗ ನಿರ್ದಿಷ್ಟ ಸಮುದಾಯ ಅವರ ವಿರುದ್ಧ ತಿರುಗಿಬಿತ್ತು. ಕಾವ್ಯದ ಮೂಲಕ ಈ ಕ್ಷೋಬೆಯನ್ನು ತಣಿಸಲು ಕವಯಿತ್ರಿಗೆ ಸಾಧ್ಯವಾಯಿತು. ನಿರಾಶ್ರಿತರಿಗಾಗಿ ಸ್ಥಾಪಿಸಿದ ‘ಅಭಯ’ ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವ ನೂರಾರು ಮಂದಿ ಅವರ ಮಾತೃವಾತ್ಸಲ್ಯದಿಂದ ಪುನೀತರಾಗಿದ್ದರೆ, ಕವಿತೆಗಳಲ್ಲಿ ಹರಿಯುವ ಪ್ರೀತಿಯ ಝರಿಯಲ್ಲಿ ಮಿಂದು ತಂಪಾದವರು ಲಕ್ಷಾಂತರ ಮಂದಿ.

ಸಂಸ್ಕೃತಿ ಇಲಾಖೆ ನಡೆಸುವ ‘ಮಲಯಾಳಂ ಮಿಷನ್’ ಯೋಜನೆಗೆ ಆರಂಭದಿಂದಲೇ ಅವರು ಸಲಹೆಗಾರರಾಗಿದ್ದರು. ಬಾಲಸಾಹಿತ್ಯ (ಮಕ್ಕಳ ಸಾಹಿತ್ಯ) ಇನ್‌ಸ್ಟಿಟ್ಯೂಟ್‌ನ ‘ತಳಿರ್’ ಮಾಸಪತ್ರಿಕೆಯ ಮುಖ್ಯ ಸಂಪಾದಕರೂ ಆಗಿದ್ದರು. ತಿರುವನಂತಪುರ ಜವಾಹರ್‌ ಬಾಲಭವನದ ಪ್ರಾಂಶುಪಾಲರಾಗಿ, ಪರಿಸರ ರಕ್ಷಣಾ ಸಮಿತಿಯ ಕಾರ್ಯದರ್ಶಿಯಾಗಿ, ನವಭಾರತ ವೇದಿಕೆಯ ಉಪಾಧ್ಯಕ್ಷೆ, ಕನ್ಸ್ಯೂಮರ್ ಪ್ರೊಡಕ್ಷನ್ ಸೊಸೈಟಿಯ ಅಧ್ಯಕ್ಷೆಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಕೇರಳ ಫಿಲ್ಮ್ ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದೆಲ್ಲದ ನಡುವೆ ಕಾವ್ಯಕೃಷಿಯೂ ಸೊಂಪಾಗಿ ಬೆಳೆಯಿತು. ಭಾವಪೂರ್ಣ ಕವನಗಳನ್ನು ಬರೆದ ಮನಸ್ಸು ಪ್ರಕೃತಿಯ ಮೇಲೆ ಮಾನವನ ಆಕ್ರಮಣದ ಸುದ್ದಿ ಕೇಳಿದರೆ ಸಿಡಿದೆದ್ದು ಕೆಚ್ಚನ್ನೂ ಪ್ರದರ್ಶಿಸಿತು.

ಪಾಲಕ್ಕಾಡ್‌ ಜಿಲ್ಲೆಯ ಮಣ್ಣಾರ್‌ಕಾಡ್‌ನಲ್ಲಿ ಸೈಲೆಂಟ್ ವ್ಯಾಲಿ ರಕ್ಷಣೆಗಾಗಿ ನಡೆದ ಹೊರಾಟದಲ್ಲಿ ಸಕ್ರಿಯರಾಗಿದ್ದ ಸುಗತಕುಮಾರಿ ಅವರ ಪರಿಸರ ಪ್ರೇಮಕ್ಕೆ ‘ಹಚ್ಚಹಸಿರು’ ಉದಾಹರಣೆ ಎಂದರೆ ಅಟ್ಟಪ್ಪಾಡಿಯಲ್ಲಿ ನಿರ್ಮಿಸಿದ ಕೃಷ್ಣವನ. ಬರಡು ಗುಡ್ಡವಾಗಿದ್ದ ಈ ಪ್ರದೇಶವನ್ನು ಹಸಿರು ಲಾಸ್ಯವಾಡುವ ಕಾಡುಪ್ರದೇಶವಾಗಿ ಪರಿವರ್ತಿಸಿದವರು ಅವರು.

ಇರುವೆಗೂ ಬೇಕು ಇರವು

ಇರುವೆಯಿಂದ ಹಿಡಿದು ಆನೆಯ ವರೆಗೆ, ಹುಲ್ಲಿನಿಂದ ತೊಡಗಿ ಹುಲುಮಾನವನ ವರೆಗೆ, ಕ್ರಿಮಿ–ಕೀಟಗಳಾದಿಯಾಗಿ ಬೆಟ್ಟ ಗುಡ್ಡಗಳು, ಬೃಹತ್ ಮರಗಳ ವರೆಗೆ ಸಕಲ ಚರ–ಅಚರ ವಸ್ತುಗಳಿಗೂ ಭೂಮಿಯ ಮೇಲೆ ಬದುಕುವ ಸಮಾನ ಹಕ್ಕು ಇದೆ ಎಂದು ಪ್ರತಿಪಾದಿಸಿದ ಕವಯಿತ್ರಿ ಅವರು.

ಮಳೆ ಧಾರೆಧಾರೆಯಾಗಿ ಸುರಿದು ಹೋಯಿತು

ಸಾವಿರಗಟ್ಟಲೆ ಇರುವೆಗಳು ಸಮುದ್ರ ಪಾಲಾದವು

ಬಾಲಕನೊಬ್ಬ ಅದನ್ನೇ ನೋಡುತ್ತ ಸ್ಥಬ್ತನಾಗಿದ್ದಾನೆ

ಎಂಬ ಸಾಲುಗಳಲ್ಲಿ ಜೀವದ ನೋವು ಅವರನ್ನು ಕಾಡಿದ್ದು ಸ್ಪಷ್ಟವಾಗುತ್ತದೆ.

ಸುಗತಕುಮಾರಿ ಅವರ ಪ್ರೇಮಕವನಗಳೂ ವಿಮರ್ಶಕರ ಗಮನ ಸೆಳೆದಿವೆ. ವಿಪ್ರಲಂಬ ಶೃಂಗಾರವೇ ಎದ್ದು ಕಾಣುವ ಪ್ರಣಯಗೀತೆಗಳಲ್ಲಿ ಕೃಷ್ಣ–ರಾಧೆ ಅಥವಾ ಮೀರಾ ಪಾತ್ರಗಳು ಧಾರಾಳವಾಗಿ ಕಾಣಸಿಗುತ್ತವೆ. ಕೃಷ್ಣನನ್ನು ಪೂರ್ಣತೆಯ ಪ್ರತೀಕವಾಗಿ ಕಾಣುವ ಕವಯಿತ್ರಿ ಆ ಪೂರ್ಣತೆಗಾಗಿ ಹಪಹಪಿಸುವವರು ಆತನ ಪ್ರೇಯಸಿಯರು ಎಂದು ಬಣ್ಣಿಸಿದ್ದು, ಈ ಮೂಲಕ ಅನಶ್ವರ ಪ್ರೇಮಕ್ಕಾಗಿ ಕಾತರಪಡುವ ಭಾರತ ನಾರಿಯನ್ನು ಚಿತ್ರಿಸಹೊರಟಿದ್ದರು ಎಂದು ವಿಮರ್ಶಕರು ವ್ಯಖ್ಯಾನಿಸಿದ್ದಾರೆ.

ನಿಸ್ಪೃಹ ಪ್ರೀತಿಗೆ ಎಂದಾದರೊಂದು ದಿನ ಬೆಲೆ ಸಿಕ್ಕೇ ಸಿಗುತ್ತದೆ ಎಂಬ ಆಶಾವಾದವೂ ಅವರ ಕವಿತೆಗಳಲ್ಲಿ ಮೂಡಿದ್ದುಂಟು. ‘ಕತ್ತಲು ದೂರವಾಗಿ ಬೆಳಗು ನಸುನಗೆಯೊಂದಿಗೆ ಮರಳಲಿದೆ; ಮಂಜು ಮಾಯವಾದ ಮೇಲೆ ಹೂಗಳು ಬಿರಿಯಲೇಬೇಕಲ್ಲವೇ’ ಎಂಬುದು ಅಂಥ ಭರವಸೆಯ ಕವಿತೆಗಳಲ್ಲಿನ ಸಾಲುಗಳು. ಭಾವತೀವ್ರವಾದ, ಕಾಲ್ಪನಿಕ ಸೌಂದರ್ಯವನ್ನು ಪಸರಿಸುವ ಅವರ ಕಾವ್ಯದಲ್ಲಿ ಸ್ನಿಗ್ದ ಭಾವಗಳೂ ಸಾಮಾಜಿಕ ಕಳಕಳಿಯ ಸಮಷ್ಠಿ ಪ್ರಜ್ಞೆಯೂ ಏಕಕಾಲಕ್ಕೆ ಹೊರಸೂಸುತ್ತದೆ. ಕವಿತೆಗಳು ಅವರ ಹೋರಾಟಕ್ಕೆ ಮೊನಚು ತುಂಬಿದ ಆಯುಧಗಳೂ ಆಗಿದ್ದವು ಎಂಬ ವಾದವೂ ಇದೆ.

ಗಿಡವೊಂದನ್ನು ನೆಡೋಣ ಅಮ್ಮನಿಗಾಗಿ; ಗಿಡವೊಂದನ್ನು ನೆಡೋಣ ಮಕ್ಕಳಿಗಾಗಿ; ಒಂದು ಗಿಡ ನೆಡೋಣ ನೂರಾರು ಗಿಳಿಗಳಿಗಾಗಿ; ಒಂದು ಗಿಡ ನೆಡೋಣ ನೆಮ್ಮದಿಯ ನಾಳೆಗಾಗಿ; ಈ ಗಿಡವನ್ನು ಪ್ರಾಣವಾಯುವಿಗಾಗಿ ನೆಡೋಣ; ಮಳೆಗಾಗಿ ಪ್ರಾರ್ಥಿಸಿ ಈ ಗಿಡವನ್ನು ನೆಡೋಣ; ಸೊಬಗಿಗಾಗಿ, ನೆರಳಿಗಾಗಿ, ಸವಿ ಹಣ್ಣಿಗಾಗಿ ನೂರು ಗಿಡಗಳನ್ನು ನೆಡೋಣ...ಎಂದು, ‘ನಾಳೆಗಾಗಿ’ ಎಂಬ ಕವನದಲ್ಲಿ ಬರೆದ ಸಾಲುಗಳು ಅಭಿವೃದ್ಧಿಯ ಅಟ್ಟಹಾಸದ ನಡುವೆ ಮೂಡಿರುವ ಭರವಸೆಯ ಚಿಗುರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT