ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ಮ್ಯಾನ್‌ ಹೀರೊ ಆದ ಕಥೆ

Last Updated 17 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಕಾಮಿಕ್‌ ಪುಸ್ತಕಗಳಲ್ಲಿ ಬರುವ ಸೂಪರ್ ಹೀರೊಗಳ ಪೈಕಿ ಅತ್ಯಂತ ಹೆಚ್ಚು ಜನಪ್ರಿಯ ವ್ಯಕ್ತಿ ಸೂಪರ್‌ಮ್ಯಾನ್‌ ಎಂಬುದರಲ್ಲಿ ಅನುಮಾನವೇ ಇಲ್ಲ. ಸೂಪರ್‌ಮ್ಯಾನ್‌ ಪಾತ್ರ ಜನಪ್ರಿಯವಾದ ನಂತರ ಅಮೆರಿಕದಲ್ಲಿ ಕಾಮಿಕ್ ಪುಸ್ತಕಗಳಿಗೆ ಸುವರ್ಣ ಯುಗ ಆರಂಭವಾಯಿತು. ಕೆನಡಾದ ಕಲಾವಿದ ಜೋ ಶಸ್ಟರ್‌ ಮತ್ತು ಅಮೆರಿಕದ ಬರಹಗಾರ ಜೆರ್‍ರಿ ಸೀಗಲ್‌ ಈ ಪಾತ್ರದ ಸೃಷ್ಟಿಕರ್ತರು. ಈ ಪಾತ್ರ ಮೊದಲು ಕಾಮಿಕ್‌ ಪುಸ್ತಕಗಳಲ್ಲಿ ಬಂದಿದ್ದು 1938ರಲ್ಲಿ.

ಈತ ಅತ್ಯಂತ ಧೈರ್ಯವಂತ ವ್ಯಕ್ತಿ. ಅಪಾರ ಧೈರ್ಯ ಇರುವ, ಕಟ್ಟುಮಸ್ತಾದ ದೇಹ ಇರುವ, ನೀಲಿ ಬಣ್ಣದ ವಸ್ತ್ರ ತೊಟ್ಟ ವ್ಯಕ್ತಿ ಈತ ಎಂಬುದು ಚಿಕ್ಕ ಮಕ್ಕಳಿಗೂ ಗೊತ್ತು. ಸೂಪರ್‌ಮ್ಯಾನ್‌ ಹುಟ್ಟಿದ್ದು ಕ್ರಿಪ್ಟನ್ ಎನ್ನುವ ಅನ್ಯಗ್ರಹದಲ್ಲಿ. ಶಿಶುವಾಗಿದ್ದ ಸೂಪರ್‌ಮ್ಯಾನ್‌ನನ್ನು ಕ್ರಿಪ್ಟನ್ ಗ್ರಹ ನಾಶವಾಗುವ ತುಸು ಮೊದಲು ಭೂಮಿಗೆ ಕಳುಹಿಸಲಾಗುತ್ತದೆ. ಇಲ್ಲಿ ಆತ ಕ್ಲಾರ್ಕ್‌ ಕೆಂಟ್‌ ಎಂಬ ಹೆಸರಿನಲ್ಲಿ ಸಾಕುಮಗನಾಗಿ ಬೆಳೆಯುತ್ತಾನೆ.

ತನ್ನಲ್ಲಿ ಇರುವ ಅತಿಮಾನುಷ ಶಕ್ತಿಗಳ ಬಗ್ಗೆ ಅವನಿಗೆ ಅರಿವಾದಾಗ, ಅದನ್ನು ಮನುಕುಲದ ಒಳಿತಿಗಾಗಿ ಬಳಸಲು ಆರಂಭಿಸುತ್ತಾನೆ. ಕ್ಲಾರ್ಕ್‌ ಕೆಂಟ್‌ ಎಂಬುದು ಇವನ ಇನ್ನೊಂದು ರೂಪವೂ ಹೌದು. ಈ ರೂಪದಲ್ಲಿ ಸೂಪರ್‌ಮ್ಯಾನ್‌ ಸೌಮ್ಯ ಮಾತಿನ, ಕನ್ನಡಕ ಧರಿಸುವ, ಪತ್ರಕರ್ತ ಮತ್ತು ವರದಿಗಾರನಾಗಿ ಕಾಣಿಸಿಕೊಳ್ಳುತ್ತಾನೆ. ಅಂದಹಾಗೆ, ಎರಡು ರೂಪಗಳು ಇರುವುದು ಬಹುತೇಕ ಸೂಪರ್‌ಹೀರೊಗಳಲ್ಲಿ ಕಂಡುಬರುವ ಸಾಮಾನ್ಯ ಅಂಶ. ಭಾರತದ ಸೂಪರ್‌ಹೀರೊ ಶಕ್ತಿಮಾನ್‌ ಕೆಲವು ಸಂದರ್ಭಗಳಲ್ಲಿ ಗಂಗಾಧರ್‌ ಶಾಸ್ತ್ರಿಯಾಗಿ, ಪತ್ರಿಕಾ ಛಾಯಾಗ್ರಾಹಕನಾಗಿ ಕಾಣಿಸಿಕೊಳ್ಳುತ್ತಿದ್ದ, ನೆನಪಿದೆಯೇ?!

ಪುರಾಣಗಳಲ್ಲಿ ಬರುವ ಹರ್ಕ್ಯುಲಿಸ್ ಮತ್ತು ಸ್ಯಾಮ್ಸನ್‌ ‍ಪಾತ್ರಗಳ ಮಾದರಿಯಲ್ಲಿ ಸೂಪರ್‌ಮ್ಯಾನ್‌ನ ವ್ಯಕ್ತಿತ್ವ ರೂಪಿಸಲಾಗಿದೆ. ಈತನನ್ನು ಸೃಷ್ಟಿಸಿದವರು ಆಗಿನ ಕಾಲದ ಕಾಲ್ಪನಿಕ–ವೈಜ್ಞಾನಿಕ ಕಥೆಗಳಿಂದ ಬಹುವಾಗಿ ಪ್ರಭಾವಿತರಾಗಿದ್ದರು. ಅಲ್ಲದೆ, ರಾಬಿನ್‌ಹುಡ್‌ ಸಿನಿಮಾಗಳೂ ಅವರ ಮೇಲೆ ಪ್ರಭಾವ ಬೀರಿದ್ದವು. ಸೂಪರ್‌ಮ್ಯಾನ್‌ ಕುರಿತ ಕಥೆಗಳು ಹೆಚ್ಚೆಚ್ಚು ಜನಪ್ರಿಯ ಆದಂತೆಲ್ಲ, ಆತನ ಬಾಲ್ಯದ ಕುರಿತ ‘ಸೂಪರ್‌ಬಾಯ್‌’ ಕಥೆ ಕೂಡ ಜನಪ್ರಿಯ ಆಯಿತು.

ಕಾಲ ಸರಿದಂತೆಲ್ಲ, ಸೂಪರ್‌ಮ್ಯಾನ್‌ಗೆ ಹೆಚ್ಚೆಚ್ಚು ಶಕ್ತಿ ನೀಡಿದರು ಆತನ ಸೃಷ್ಟಿಕರ್ತರು. ಆತ ಹಾರಬಲ್ಲವನಾಗಿದ್ದ, ಅಸಾಧಾರಣ ಶ್ರವಣ ಶಕ್ತಿ ಅವನಿಗಿತ್ತು, ವಸ್ತುಗಳ ಮೇಲೆ ಗಾಳಿ ಊದಿ ಅವು ಮರಗಟ್ಟುವಂತೆ ಮಾಡಿಬಿಡುತ್ತಿದ್ದ. ಸೂಪರ್‌ಮ್ಯಾನ್‌ ಜಗತ್ತಿನಲ್ಲಿ ಇನ್ನಷ್ಟು ಪಾತ್ರಗಳೂ ಇದ್ದವು. ಇವನ ಕಥೆಗಳಲ್ಲೆಲ್ಲ ಅವು ಬಂದುಹೋಗುತ್ತಿರುತ್ತವೆ. ಲೂಯಿ ಲೇನ್‌ ಇವನ ಸಹೋದ್ಯೋಗಿ ಆಗಿದ್ದವಳು. ಮುಂದೆ ಅವರಿಬ್ಬರೂ ಮದುವೆ ಆಗುತ್ತಾರೆ.

ಜಿಮ್ಮಿ, ಪೆರ್‍ರಿ, ಲಾನಾ... ಇಂತಹ ಪಾತ್ರಗಳೆಲ್ಲ ಸೂಪರ್‌ಮ್ಯಾನ್‌ ಪರ ಇರುವವರು. ಕೆಟ್ಟ ವಿಜ್ಞಾನಿ ಲೆಕ್ಸ್‌ ಲೂಥರ್, ರಾಕ್ಷಸ ಡೂಮ್ಸ್‌ಡೇ... ಇವರು ಸೂಪರ್‌ಮ್ಯಾನ್‌ನ ವಿರೋಧಿಗಳು.

ಸೂಪರ್‌ಮ್ಯಾನ್‌ ಕಥೆ ಯಶಸ್ಸು ಕಂಡ ಪರಿಣಾಮವಾಗಿ ಇನ್ನಷ್ಟು ಸೂಪರ್‌ಹೀರೊಗಳು ಸೃಷ್ಟಿಯಾದರು. ಈತ ಜನರ ಮನಸ್ಸಿನ ಮೇಲೆ ಅದೆಷ್ಟು ಪ್ರಭಾವ ಬೀರಿದ್ದಾನೆ ಅಂದರೆ, ಇವನ ಬಗ್ಗೆ ಸಂಶೋಧಕರು, ಸಮಾಜ ವಿಜ್ಞಾನಿಗಳು ಅಧ್ಯಯನ ಕೂಡ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT