ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಹದ ಬರಹ ಮುಗಿಸಿದ ಬಂಟ್ವಾಳದ ತಮ್ಮಯರು

Last Updated 15 ಸೆಪ್ಟೆಂಬರ್ 2019, 10:38 IST
ಅಕ್ಷರ ಗಾತ್ರ

ಸಾಹಿತ್ಯ ಮತ್ತು ಕಲೆಯ ಅಭಿರುಚಿಯಲ್ಲಿ ಬೆಳೆದವರು ಯಾವುದೇ ವೃತ್ತಿರಂಗದಲ್ಲಿದ್ದರೂ ಅವರ ಭಾವಕೋಶ ಬತ್ತುವುದಿಲ್ಲ ಎಂಬುದಕ್ಕೆ ಸಾಹಿತಿ ತಮ್ಮಯರು ಸೂಕ್ತ ಸಾಕ್ಷಿ.

ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಿಗರಾಗಿ ಎಪ್ಪತ್ತರ ದಶಕದಲ್ಲಿ ಸೇವೆಗೆ ಸೇರಿ ಉಪ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದವರು. ಸರ್ಕಾರಿ ಇಲಾಖೆಗಳೆಂದರೆ ಜನರು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ, ‘ನಿಮಗೇನಾಗಬೇಕು’ ಎಂದು ಜನರ ಬಳಿಗೆ ಹೋಗಿ ವಿಚಾರಿಸುತ್ತಾ ಬಂಟ್ವಾಳದ ಜನಸ್ನೇಹಿ ಅಧಿಕಾರಿ ಎಂಬ ಪ್ರೀತಿಗೆ ಪಾತ್ರರಾದವರು.

ಬೆಳ್ತಂಗಡಿ ತಾಲ್ಲೂಕಿನ ನೆರಿಯ ಎಂಬ ದಟ್ಟ ಕಾನನದ ಮಧ್ಯೆ ಅಪ್ಪಟ ಗ್ರಾಮೀಣ ಬದುಕಿನ ಸುಖ, ದುಃಖಗಳನ್ನು ಉಂಡುಬೆಳೆದ ತಮ್ಮಯರು ತನ್ನ ಬದುಕಿನ ಬವಣೆಯನ್ನು ಮರೆಯದೆ ಇರುವುದರಿಂದ ಈ ಬಗೆಯ ಸ್ಪಂದನೆ ಸಾಧ್ಯವಾಯಿತು ಎಂಬುದು ಅವರ ಒಡನಾಡಿಗಳ ನುಡಿ.

ತಮ್ಮಯರು ತನ್ನ ಬದುಕಿನ ವ್ಯಾಪ್ತಿಯನ್ನು ವೃತ್ತಿಗೆ ಸೀಮಿತಗೊಳಿಸಿದವರಲ್ಲ. ವೃತ್ತಿ ನಿಮಿತ್ತ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ನೆಲೆನಿಂತವರು. ಅಲ್ಲೊಂದು ಯುವಕ ಮಂಡಲ ತೆರೆದು ಸಾಹಿತ್ಯ-ಕಲೆ ವಾತಾವರಣ ಸೃಷ್ಟಿಸಿದ ಹೆಗ್ಗಳಿಕೆ ತಮ್ಮಯರಿಗೆ ಸಲ್ಲುತ್ತದೆ. ನಾಟಕ, ಯಕ್ಷಗಾನದಲ್ಲಿ ಸ್ವತಃ ಪಾತ್ರನಿರ್ವಹಿಸುತ್ತಾ ಜೀವನ ಸ್ವಾರಸ್ಯವನ್ನು ಕಾಪಾಡಿಕೊಂಡವರು.

ಕತೆ, ಕವನ, ಚುಟುಕು, ಲೇಖನಗಳನ್ನು ತನ್ನ ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿದ ತಮ್ಮಯರು ಬರೆದ ‘ಹಿಂತಿರುಗಿ ನೋಡಿದಾಗ’ ಎಂಬ ಆತ್ಮಕಥನ ಕೇವಲ ವ್ಯಕ್ತಿಯ ಚರಿತ್ರೆಯಾಗಿರದೆ; ಅರ್ಧಶತಮಾನಗಳ ಹಿಂದಿನ ತುಳುನಾಡಿನ ಜನಜೀವನದ ಚರಿತ್ರೆಯಾಗಿ ಮಹತ್ವ ಪಡೆದಿದೆ. ವರ್ತಮಾನದ ಕಣ್ಣಿನಿಂದ ನೋಡಿದರೆ ಸರ್ವಸೌಲಭ್ಯ ವಂಚಿತ ಲೋಕದಂತೆ ಭಾಸವಾದರೂ ಯಂತ್ರಗಳಿಲ್ಲದ ಕೇವಲ ಮಾನವರ ಮತ್ತು ಸಾಕುಪ್ರಾಣಿಗಳ ನಿರಾಳ ಮುಕ್ತ ಜಗತ್ತನ್ನು ಅನಾವರಣ ಮಾಡಿದೆ. ನಾವು ಇಂದು ಕಳೆದುಕೊಂಡ ಅಮೂರ್ತ ಸಂಗತಿಗಳನ್ನು ಹುಡುಕಬೇಕಾಗಿರುವುದು ಇಂತಹ ಕೃತಿಗಳಿಂದಲೇ ಎಂಬ ಸತ್ಯದ ದರ್ಶನವಾಗುತ್ತದೆ.

ಉಳಿದಂತೆ ‘ಹಣತೆ’ ಎಂಬ ಕವನ ಸಂಕಲನ, ‘ಕರಿಕೋಟು’ ಎಂಬ ಕಥಾಸಂಕಲನ, ‘ಚುಟುಕುಗಳ ಗುಚ್ಛ’ ಎಂಬ ಕೃತಿಗಳನ್ನು ಹೊರತಂದವರು. ತುಳು ಲಿಪಿಯನ್ನು ಅಧ್ಯಯನ ಮಾಡಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಕಲಿಸಿದರು. ತುಳು ಲಿಪಿಯಲ್ಲಿ ಪತ್ರಿಕೆ, ಪುಸ್ತಕ ಹೊರತಂದರು. ತುಳು ಲಿಪಿಯಲ್ಲಿ ಪತ್ರವ್ಯವಹಾರ ಮಾಡಿ ಭಾಷೆಯ ಬೆಳವಣಿಗೆಗೆ ಪ್ರಯತ್ನಿಸಿದರು. ಸಾಹಿತಿ ನೀರ್ಪಾಜೆ ಭೀಮಭಟ್ಟರಿಗೆ ಹೆಗಲಾಗಿ ಸಾಹಿತ್ಯ ರಥ ಎಳೆದವರು. ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಜಿಲ್ಲಾ ಸಾಹಿತ್ಯ ಪರಿಪತ್ತಿನ ಗೌರವ ಕಾರ್ಯದರ್ಶಿಯಾಗಿ ಸಾಹಿತ್ಯ ಕಾರ್ಯಕ್ರಮಗಳ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದವರು. ಎಲ್ಲಾ ಧರ್ಮದ ಗೆಳೆಯರೊಂದಿಗೆ ಬೆರೆತು ಬಾಲ್ಯ ಕಂಡ ತಮ್ಮಯರು ಸಹಬಾಳ್ವೆಯನ್ನು ಜೀವನ ಮಂತ್ರವನ್ನಾಗಿಸಿದವರು.

ಕೆಲವು ತಿಂಗಳ ಹಿಂದೆ ತಮ್ಮಯರು ಅನಾರೋಗ್ಯಕ್ಕೆ ತುತ್ತಾದಾಗ ದಿ.ಏರ್ಯಲಕ್ಷ್ಮೀ ನಾರಾಯಣ ಆಳ್ವರು ದುಃಖಿತರಾಗಿ ತನ್ನ ಬಲಗೈಯನ್ನೇ ಕಳೆದುಕೊಂಡಂತಾಗಿದೆ ಎಂದಿದ್ದರಂತೆ. ಅನಾರೋಗ್ಯದ ಮಧ್ಯೆಯೂ ಲವಲವಿಕೆಯಿಂದ ಓಡಾಡುತ್ತಿದ್ದ ತಮ್ಮಯರು ಏರ್ಯರ ಮರಣ ಕಂಡು ಮರುಗಿದವರು.ಮತ್ತೆ ಆತ್ಮವಿಶ್ವಾಸ ತಂದುಕೊಂಡು ತನ್ನ ಕೆಲವು ಬರಹಗಳ ಪ್ರಕಟಣೆಯ ಯೋಚನೆ ಇದೆ ಎನ್ನುತ್ತಲೇ ಕಾಲದ ಕರೆಗೆ ತಲೆಬಾಗಿ ಇಹದ ಬರಹ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT