ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮನೆಯಲ್ಲಿ ಊಟಕ್ಕೆ ಕುಳಿತು ಕಣ್ಣೀರು!

Last Updated 11 ಜುಲೈ 2018, 13:56 IST
ಅಕ್ಷರ ಗಾತ್ರ

ಅದು ಸ್ನೇಹಿತನ ತಂಗಿಯ ಮದುವೆ ಸಮಯ. ಆ ನಿಮಿತ್ತ ಎರಡು ದಿನ ಮುಂಚಿತವಾಗಿ ಹಾವೇರಿಗೆ ಹೋಗಿ ಬಿಡಾರ ಹೂಡಿದ್ದೆ. ಮದುವೆ ಮನೆಯಾದ್ದರಿಂದ, ಯಾವುದರ ಅರಿವೂ ಇಲ್ಲದಂತೆ ಯಾರ ಅಂಕೆಗೂ ಒಳಪಡದಂತೆ ದೇವರಿಗೆ ಬಿಟ್ಟ ಗೂಳಿಯಂತೆ ಹಾಯಾಗಿದ್ದೆವು. ಅಂದುಕೊಂಡಂತೆ ಮದುವೆ ಬಲು ಅದ್ದೂರಿಯಾಗಿ ನಡೆಯಿತು. ಎಲ್ಲರೂ ವಧು-ವರರನ್ನು ಹರಸಿ, ಆಶೀರ್ವದಿಸುತ್ತ ಫೋಟೊ-ವಿಡಿಯೊಗಳಿಗೆ ಫೋಸ್ ನೀಡುತ್ತ ಸಂತೋಷ ಸಂಭ್ರಮದಿಂದ ಕಾಲಕಳೆದರು.

ಮಧ್ಯಾಹ್ನ ಅಕ್ಷತೆ ಕಾರ್ಯಕ್ರಮ ಮುಗಿದು ಊಟದ ಸಮಯ. ಎಲ್ಲರೂ ಊಟಕ್ಕೆ ಹೋಗಲು ನಿರ್ಧರಿಸಿದರು. ‘ಸಿದ್ದ-ಶರಣರು ಹುಟ್ಟುವುದಾದರೆ ಪಕ್ಕದ ಮನೆಯಲ್ಲಿ ಹುಟ್ಟಲಿ, ನಮ್ಮ ಮನೆಯಲ್ಲಿ ಬೇಡ’ ಎನ್ನುವ ನಮ್ಮ ಜನ ತಮ್ಮ ತಮ್ಮ ಮಕ್ಕಳನ್ನು ಊಟಕ್ಕೆ ಕರೆದುಕೊಂಡು ಹೊರಟರು. ಆಗ ಅಲ್ಲಿ ಉಡುಗೊರೆಯಾಗಿ ಬಂದಂತಹ ಸಾಮಾನುಗಳನ್ನು ಕಾಯುವುದು ನಮ್ಮ ಹೆಗಲಿಗೆ ಬಿತ್ತು. ಮದುವೆ ಮನೆಯಾದ್ದರಿಂದ ಇಲ್ಲವೆನ್ನಲು ಬಾರದು. ಅದಕ್ಕಾಗಿ ಹ್ಞುಂ ಎಂದು ತಲೆಯಾಡಿಸುತ್ತ ಒಪ್ಪಿಗೆ ಸೂಚಿಸಿ ಅವರೆಲ್ಲರನ್ನು ಊಟಕ್ಕೆ ಕಳುಹಿಸಿ ನಾವು ಒಂದೆಡೆ ಹಲ್ಲು ಕಿರಿಯುತ್ತಾ ಮದುವೆ ಮನೆಯಲ್ಲಿ ಓಡಾಡುವ ನಾರೀಮಣಿಗಳನ್ನು ನೋಡುತ್ತಾ ಕುಳಿತೆವು. ಸಮಯ ಸುಮಾರು ನಾಲ್ಕು ಮೂವತ್ತರ ಹೊತ್ತಿಗೆ ಎಲ್ಲ ಮಹನೀಯರು ಪ್ರತ್ಯಕ್ಷರಾದರು. ನಾವು ಅವರು ಬರುವುದನ್ನೇ ಚಾತಕ ಪಕ್ಷಿಗಳಂತೆ ಕಾಯುತ್ತ ಕುಳಿತಿದ್ದೆವು. ಅವರು ಕಂಡ ಕೂಡಲೇ ಅವರಿಂದ ಯಾವ ಆದೇಶಕ್ಕೂ ಕಾಯದೆ ಸೀದಾ ಮೇಲೆದ್ದು ಅಡುಗೆ ಮನೆಯತ್ತ ಪಾದ ಬೆಳೆಸಿದೆವು.

ಸಂಪೂರ್ಣ ಖಾಲಿಯಾಗಿದ್ದ ಅಡುಗೆಮನೆಯಲ್ಲಿ ಎಲ್ಲ ಕೆಲಸದವರೂ ಊಟಕ್ಕೆ ಕುಳಿತಿದ್ದರು. ನಾವೂ ಅವರೊಂದಿಗೆ ಕುಳಿತರಾಯಿತೆಂದು ಅಲ್ಲೇ ಪಕ್ಕದಲ್ಲಿದ್ದ ಟೇಬಲ್‌ನ ಮೇಲೆ ಕುಳಿತೆವು. ಅತ್ತ ಕಡೆಯಿಂದ ಒಂದೊಂದಾಗಿ ಬಂದ ಭಕ್ಷ್ಯ-ಭೋಜನಗಳು ತಟ್ಟೆಯನ್ನು ಅಲಂಕರಿಸಿದವು. ಅವನ್ನು ನೋಡಿಯೇ ಅರ್ಧ ಹೊಟ್ಟೆ ತುಂಬುವಂತಿತ್ತು. ಇನ್ನೇನು ಊಟ ಆರಂಭಿಸಿ ಒಂದೆರೆಡು ತುತ್ತು ಗಂಟಲು ಸೇರಿರಬಹುದು, ಅಷ್ಟರಲ್ಲಾಗಲೇ ಆಕಸ್ಮಿಕವೆಂಬಂತೆ ಕರುಳು ಕಿತ್ತು ಬರುವಂತಹ ದೃಶ್ಯವೊಂದು ಕಣ್ಣಿಗೆ ಬಿತ್ತು.

ನಾವು ಕುಳಿತ ಟೇಬಲ್‌ಗೆ ನೇರವಾಗಿ ಅಡುಗೆ ಮನೆ. ಆ ಅಡುಗೆ ಮನೆಯ ಮೂಲೆಯ ಬಳಿ ಸುಮಾರು ಎಪ್ಪತೈದು ವಯಸ್ಸಿನ ಆಸುಪಾಸಿನ ಅಜ್ಜಿ. ತುಂಬಾ ಸೊರಗಿದ ಶರೀರ, ಸುಕ್ಕುಗಟ್ಟಿದ ಚರ್ಮ, ಕೆದರಿದ ತಲೆಗೂದಲು, ಬಾಡಿದ ಮುಖ. ಬಿಸಿಲಿಗೆ ಬಳಲಿದ ಹೂವಿನಂತಿದ್ದ ಅಜ್ಜಿಯೊಬ್ಬರು ಅಲ್ಲಿ ಕುಳಿತಿದ್ದರು. ಅವರುಹಸಿವಿನ ತೀವ್ರತೆ ತಾಳಲಾರದೆ ಅಲ್ಲೇ ಪಕ್ಕದ ಟೇಬಲ್ ಮೇಲಿದ್ದ ಬಾಳೆಹಣ್ಣೊಂದನ್ನು ಗಬಕ್ಕನೆ ಎತ್ತಿಕೊಂಡರು. ಮುಖವನ್ನು ಗೋಡೆಯತ್ತ ತಿರುಗಿಸಿ ಯಾರಿಗೂ ಕಾಣದಂತೆ ಮುಖಕ್ಕೆ ಸೆರಗನ್ನು ಎಳೆದುಕೊಂಡು ಎರಡೇ ಎರಡು ತುತ್ತಿಗೆ ಬಾಳೆಹಣ್ಣು ತಿಂದು ಮುಗಿಸಿ,ಯಾರಿಗೂ ಕಂಡಿಲ್ಲವೆಂಬಂತೆ ಅತ್ತ-ಇತ್ತ ನೋಡುತ್ತ ನಿಂತರು. ಅದು ಕಂಡದ್ದಷ್ಟೆ ತಡ, ಹೃದಯಕ್ಕೆ ಮುಳ್ಳು ಚುಚ್ಚಿದ ಅನುಭವವಾಯಿತು.

ಎಷ್ಟೊಂದು ಕಠಿಣ ಈ ಮಾನವಜನ್ಮ. ಅಜ್ಜಿಯ ಸ್ಥಿತಿ ಕಂಡು ಹೃದಯ ಹಿಂಡಿದಂತಾಗಿ ಕುಳಿತಲ್ಲಿಯೇ ಕಣ್ಣೀರಿಟ್ಟೆ. ಅದೇ ಮೊದಲ ಬಾರಿ ಎನಿಸುತ್ತೆ, ಅಷ್ಟೊಂದು ಭಾವಪರವಶನಾಗಿ ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತದ್ದು. ಅದರಿಂದ ಹೊರಬರಲು ಅದೆಷ್ಟೋ ದಿನಗಳು ಬೇಕಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT