ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಹೇಳಿ ಈ ಕೊರೊನಾ ಕತೆ

Last Updated 25 ಮೇ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಒಂದೆಡೆ ಕೊರೊನಾ ಸೋಂಕಿನ ಭಯ, ಇನ್ನೊಂದೆಡೆ ದೇಶದಾದ್ಯಂತ ‘ದಿಗ್ಬಂಧನ’.. ಇವೆರಡೂ ಮಕ್ಕಳನ್ನು ಮನೆಯಲ್ಲೇ ಕೂಡಿ ಹಾಕುವಂತೆ ಮಾಡಿವೆ. ಹೀಗೆ ಮನೆಯೊಳಗೇ ಕುಳಿತಿರುವ ಮಕ್ಕಳನ್ನು ಸಂಭಾಳಿಸುವುದು ‍ಪೋಷಕರಿಗೆ ಬಹುದೊಡ್ಡ ಸವಾಲು. ಆದರೂ ಇಂಥ ಅನಿವಾರ್ಯದ ಸಂದರ್ಭದಲ್ಲಿ ಮಕ್ಕಳನ್ನು ಮನೆಯಲ್ಲೇ ಸುರಕ್ಷಿತವಾಗಿಟ್ಟುಕೊಳ್ಳಬೇಕು. ಜತೆಗೆ, ಅವರಿಗೆ ಬೇಸರವಾಗದಂತೆಯೂ ನೋಡಿಕೊಳ್ಳಬೇಕು. ಇದಕ್ಕಾಗಿ ಪೋಷಕರು ಹಲವು ಹೊಸ ಹೊಸ ದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ.

ಇಂಥ ಸಂಕಷ್ಟದ ಸಂದರ್ಭದಲ್ಲಿ ಪೋಷಕರು ಮತ್ತು ಮಕ್ಕಳಿಗೆ ‘ಪ್ರಥಮ್ ಬುಕ್‌’ ಪ್ರಕಾಶನ ಸಂಸ್ಥೆ ಹೊಸ ದಾರಿಯೊಂದನ್ನು ತೆರೆದಿಟ್ಟಿದೆ. ತಮ್ಮ ಸಂಸ್ಥೆಯ ಆನ್‌ಲೈನ್‌ ವೇದಿಕೆ ‘ಸ್ಟೋರಿವೀವರ್‌’ನಲ್ಲಿ ‘ಹೊಸ ಕೊರೊನಾ ವೈರಸ್‌: ನಮ್ಮ ರಕ್ಷಣೆ ಹೇಗೆ?’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ಇದರಲ್ಲಿ ಮಕ್ಕಳಿಗೆಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವ ಕತೆಗಳಿವೆ. ಮಕ್ಕಳು ದಿನವೂ ಓದುವ, ನೋಡುವ ಅವರಿಗೆ ಪರಿಚಿತ ಇರುವ ಪಾತ್ರಗಳ ಮೂಲಕವೇ ಕತೆ ಹೇಳುವುದು ಈ ಕೃತಿಯ ವಿಶೇಷ. ಹದಿನೈದು ಲೇಖಕರು ಕತೆ ಬರೆದಿದ್ದಾರೆ. ಕಲಾವಿದರು ಕತೆಗೆ ತಕ್ಕ ಬಣ್ಣ ಬಣ್ಣದ ಚಿತ್ರಗಳನ್ನು ರಚಿಸಿದ್ದಾರೆ. ಈ ಪುಸ್ತಕವನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಂಡು ಓದಬಹುದು. ಪುಸ್ತಕ ಓದಲು ಲಿಂಕ್ ಇಲ್ಲಿದೆ; https://storyweaver.org.in/stories/130458-hosa-corona-virus-namma-rakshane-hege

ಪಾತ್ರಗಳ ಜತೆ ಕತೆ ನಿರೂಪಣೆ

ಪ್ರಥಮ್ ಬುಕ್ಸ್‌ನ ಕತೆಯ ಪಾತ್ರಗಳಾದ ನೀಮಾ, ಮೀರಾ, ಫರೀದಾ, ಪಾರ್ಕು ಸುತ್ತುವ ಅಜ್ಜಿ, ಸೂರಜನಿಗೆ ಆಡುತ್ತಲೇ ಕಲಿಯುವುದನ್ನು ಕಲಿಸುವ ಅಜ್ಜಮ್ಮ, ಉಪ್ಪಿಟ್ಟು ತಿನ್ನಲು ಮುಖ ಸಿಂಡರಿಸುವ ಉಮಾ.. ಮೂಲಕ ಕೊರೊನಾದಿಂದ ದೂರವಿರಲು ಏನು ಮಾಡಬೇಕು? ಕೈ ತೊಳೆವ ಕ್ರಮವೂ ಸೇರಿದಂತೆ ಸುರಕ್ಷಿತವಾಗಿರುವುದು ಹೇಗೆ? ಎನ್ನುವುದನ್ನ ವಿವರಿಸಲಾಗಿದೆ. ಈ ಕತೆ ಪುಸ್ತಕದಲ್ಲಿ ಬರುವ ಮುಗ್ಧ ಪಾತ್ರಗಳು ಮಕ್ಕಳನ್ನು ಆಕರ್ಷಿಸಿದರೆ, ಜೀವಂತಿಕೆ ಸೂಸುವ ಚಿತ್ರಗಳು ಕೊನೆಯವರೆಗೂ ಕುತೂಹಲವನ್ನು ಉಳಿಸುತ್ತವೆ.

ಮಕ್ಕಳಿಗಾಗಿ ಪುಸ್ತಕ ಪ್ರಕಟಣೆ

‘ಪ್ರತಿ ಮಗುವಿನ ಕೈಯಲ್ಲೊಂದು ಪುಸ್ತಕ’ ಎಂಬ ಗುರಿಯೊಂದಿಗೆ 2004ರಲ್ಲಿ ಆರಂಭವಾದ ಸಂಸ್ಥೆ ಪ್ರಥಮ್ ಬುಕ್ಸ್. ಯಾವುದೇ ಬಗೆಯ ಲಾಭಾಪೇಕ್ಷೆಯಿಲ್ಲದ, ಕೈಗೆಟಕುವ ದರದಲ್ಲಿ ಗುಣಮಟ್ಟದ ಮಕ್ಕಳ ಪುಸ್ತಕಗಳನ್ನು ಪ್ರಕಟಿಸುವ ಉದ್ದೇಶ ಹೊಂದಿದೆ. ಈವರೆಗೆ ಭಾರತದ ವಿವಿಧ ಭಾಷೆಗಳಲ್ಲಿ 4ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ, ಲಕ್ಷಾಂತರ ಮಕ್ಕಳಿಗೆ ಓದುವ ಖುಷಿ ಹಂಚಿದೆ.

‘ಸ್ಟೋರಿವೀವರ್’ ಎಂಬುದು‌ ಪ್ರಥಮ್‌ ಬುಕ್ಸ್‌ನ ಡಿಜಿಟಲ್‌ ವೇದಿಕೆ. ಇಲ್ಲಿ ಭಾರತೀಯ ಹಾಗೂ ವಿಶ್ವದ ಇತರ ಭಾಷೆಗಳ ಕತೆಗಳನ್ನು ಪ್ರಕಟಿಸಲಾಗುತ್ತದೆ. ಮಕ್ಕಳು ತಮ್ಮ ಮಾತೃಭಾಷೆಯಲ್ಲೇ ಅಸಂಖ್ಯ ಕತೆಗಳನ್ನು ಉಚಿತವಾಗಿ ಓದಿ ಖುಷಿಪಡಬಹುದು. ಅಷ್ಟೇ ಅಲ್ಲ, ಬೇರೆ ಭಾಷೆಗೆ ಅನುವಾದಿಸಬಹುದು. ಡೌನ್‌ಲೋಡ್‌‌ ಮಾಡಿಕೊಳ್ಳಬಹುದು. ಮಕ್ಕಳ ಸಾಹಿತ್ಯ ಪ್ರಕಟಣೆಯಲ್ಲಿ ಇದೊಂದು ವಿನೂತನ ಪ್ರಯತ್ನ. ದಾನಿಗಳ ನೆರವು ಪಡೆದು ಓದಿನ ಆಕರಗಳಿಲ್ಲದ ಮಕ್ಕಳಿಗಾಗಿ ಈ ಪುಸ್ತಕಗಳನ್ನು ತಲುಪಿಸುವ, ಗ್ರಂಥಾಲಯ ವ್ಯವಸ್ಥೆಯನ್ನೂ ಸಂಸ್ಥೆ ಕಲ್ಪಿಸುತ್ತಿದೆ.

ಗೂಗಲ್ ಅನಾಲಿಟಿಕ್ಸ್‌(Google analytics) ಪ್ರಕಾರ, ಕೊರೊನಾ ಸಮಯದಲ್ಲಿ ಪ್ರಥಮ್ ಬುಕ್ಸ್‌ನ ಆನ್‌ಲೈನ್ ಅಂಗಳ ‘ಸ್ಟೋರಿವೀವರ್’ ಜಾಲತಾಣದ ಜಾಗತಿಕ ವೀಕ್ಷಣಾ ಹರಿವು ಹೆಚ್ಚಾಗಿದೆ. ಭಾರತೀಯ ಮಕ್ಕಳ ಜತೆಗೆ, ಇಟಲಿಯಲ್ಲೂ ಮಕ್ಕಳು ಸ್ಟೋರಿವೀವರ್ ಅನ್ನು ಅತಿ ಹೆಚ್ಚು ನೋಡಿದ್ದಾರೆ. ಶಾಲೆಗಳು ಮುಚ್ಚಿರುವ ಈ ಹೊತ್ತಿನಲ್ಲಿ ಕೇರಳದ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಶೈಕ್ಷಣಿಕ ಸಂಪನ್ಮೂಲವನ್ನು ಒದಗಿಸುವ ಜಾಲತಾಣ ‘ಕೈಟ್ಸ್’ (Kites) ಕೂಡ ಸ್ಟೋರಿ ವೀವರ್ ಅನ್ನು ಸಂಪನ್ಮೂಲವಾಗಿ ಬಳಸುತ್ತಿದೆ. ಯುನೆಸ್ಕೊ ಬಿಡುಗಡೆಗೊಳಿಸಿರುವ ಆನ್ ಲೈನ್ ಶೈಕ್ಷಣಿಕ ಸಂಪನ್ಮೂಲಗಳನ್ನೊದಗಿಸುವ ಜಾಲತಾಣಗಳ ಪಟ್ಟಿಯಲ್ಲಿ ಸ್ಟೋರಿ ವೀವರ್ ಅನ್ನೂ ಸೇರಿಸಿದೆ.

‘ಮಿಸ್ಡ್‌ ಕಾಲ್‌ ಕೊಡಿ ಕತೆ ಕೇಳಿ’

ಪ್ರಥಮ್ ಬುಕ್ಸ್, ಯುನೈಟೆಡ್‌ ವೇ ಇಂಡಿಯಾದ ಸಹಭಾಗಿತ್ವದಲ್ಲಿ ಶುರು ಮಾಡಿರುವ ‘ಮಿಸ್ಡ್ ಕಾಲ್ ಕೊಡಿ, ಕತೆ ಕೇಳಿ ಅಭಿಯಾನ’ದ ಮೂರನೇ ಆವೃತ್ತಿ ಆರಂಭವಾಗಿದೆ. ಇದರಲ್ಲಿ ಯಾವುದೇ ರೀತಿಯ ಫೋನ್‌ನಿಂದ (ಬೇಸಿಕ್ ಹ್ಯಾಂಡ್ ಸೆಟ್ ಮೂಲಕ ಕೂಡ) 08033094243. ಈ ಸಂಖ್ಯೆಗೆ ಮಿಸ್ಡ್‌ಕಾಲ್‌ ಕೊಟ್ಟರೆ, ನಂತರ ನಿಮ್ಮ ಫೋನ್‌ಗೆ ವಾಪಸ್‌ ಕರೆ (ಕಾಲ್ ಬ್ಯಾಕ್) ಬರುತ್ತದೆ. ಆ ಕರೆಯಲ್ಲಿ ಮಕ್ಕಳು ತಮಗೆ ಬೇಕಾದ ಭಾಷೆ ಆಯ್ಕೆ ಮಾಡಿಕೊಂಡು( ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಮರಾಠಿ) ನೂರಾರು ಆಡಿಯೊ ಕತೆಗಳನ್ನು ಕೇಳಬಹುದು. ‘ಈ ಆಡಿಯೊ ಕತೆಗಳು ವಿಜ್ಞಾನ, ತಂತ್ರಜ್ಞಾನ, ಗಣಿತ, ವನ್ಯಜೀವಿ ಮತ್ತು ಜೀವವೈವಿಧ್ಯ, ಕುಟುಂಬ, ಸ್ನೇಹ, ಜೀವನ ಕೌಶಲ, ಅನ್ವೇಷಣೆ ಸೇರಿದಂತೆ ಅನೇಕ ವೈವಿಧ್ಯಮಯ ವಿಷಯಗಳ ಬಗ್ಗೆ ಮಕ್ಕಳ ಕುತೂಹಲವನ್ನು ಹೆಚ್ಚಿಸುತ್ತವೆ’ ಎನ್ನುತ್ತಾರೆ ಪ್ರಥಮ್‌ ಬುಕ್ಸ್‌ನ ಸಿಇಒ ಹಿಮಾಂಶು ಗಿರಿ.

***

ಈ ಲಾಕ್‌ಡೌನ್ ಸಮಯದಲ್ಲಿ‘ಸ್ಟೋರಿ ವೀವರ್’ ಬಳಕೆದಾರರ ಸಂಖ್ಯೆ ಶೇ 180ರಷ್ಟು ಹೆಚ್ಚಾಗಿದೆ. ಕೊರೊನಾ ಪೀಡಿತ ಫ್ರಾನ್ಸ್ ಮತ್ತು ಇಟಲಿ ದೇಶಗಳ ಜನರು ಸ್ಟೋರಿ ವೀವರ್ ವೇದಿಕೆಯನ್ನು ಅತೀ ಹೆಚ್ಚು ಬಳಸಿಕೊಂಡಿದ್ದಾರೆ. ಇಲ್ಲಿದ್ದ ಪುಸ್ತಕಗಳನ್ನು ಓದುತ್ತಾ, ಮಕ್ಕಳಿಗೆ ಕೊರೊನಾ ವೈರಸ್‌ನ ಕುರಿತು ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ.

- ಪೂರ್ವಿ ಶಾ ನಿರ್ದೇಶಕಿ, ಸ್ಟೋರಿ ವೀವರ್

ಚಿತ್ರಕೃಪೆ: ಪ್ರಥಮ್ ಬುಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT