ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಲೆನ್ಸ್‌... ಇದು ಮೌನದ ಸಮಯ!

Last Updated 5 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಪ್ರಶಾಂತ್‌ ಭೂಷಣ್‌ ಅವರ ಎರಡೂ ಟ್ವೀಟ್‌ಗಳು ಒಟ್ಟಾಗಿ ನೂರು ಪದಗಳನ್ನೂ ಮೀರಿಲ್ಲ. ಅವರಿಗೆ ಒಂದು ರೂಪಾಯಿಯ ದಂಡದ ಶಿಕ್ಷೆ ವಿಧಿಸಲು ಸುಪ್ರೀಂ ಕೋರ್ಟ್‌ 190 ಪುಟಗಳ ತೀರ್ಪು ಬರೆದಿದೆ. ನಿಜಕ್ಕೂ ಅಷ್ಟೊಂದು ಮಹತ್ವ ನೀಡುವ ಪ್ರಕ್ರಿಯೆ ಇದಾಗಿತ್ತೇ? ‘ನಿಂದನೆ’ಯಿಂದ ಕಳೆದುಹೋಗಿದ್ದ ಘನತೆಯನ್ನು ಈ ಪ್ರಕ್ರಿಯೆಯಿಂದ ಪುನರ್‌ಸ್ಥಾಪಿಸಲು ಸಾಧ್ಯವಾಯಿತೇ? ಚರ್ಚೆಯ ಇನ್ನೊಂದು ಮುಖ್ಯ ವಿಷಯ ಆಗಬೇಕಾಗಿದ್ದ ವಾಕ್‌ ಸ್ವಾತಂತ್ರ್ಯದ ಪ್ರಶ್ನೆಯನ್ನು ಹಿಂದೆ ಸರಿಸಲಾಯಿತೇ?

ಅದು 2007ನೇ ಇಸ್ವಿಯ ಒಂದು ದಿನ. ಭಾರತದ ಆಗಿನ ಮುಖ್ಯ ನ್ಯಾಯಮೂರ್ತಿಯವರು (ಸಿಜೆಐ) ಸುಪ್ರೀಂ ಕೋರ್ಟ್‌ನ ತಮ್ಮ ಕೋರ್ಟ್‌ರೂಮ್‌ ಮುಂಭಾಗದಲ್ಲಿ ಎಲ್ಲ ನ್ಯಾಯಮೂರ್ತಿಗಳ –ಅದೂ ಅತ್ಯುತ್ತಮವಾದ ಫ್ರೇಮ್‌ಗಳಲ್ಲಿ ಅಳವಡಿಸಿದ್ದ– ಫೋಟೊಗಳನ್ನು ಎದ್ದು ಕಾಣುವಂತೆ ಹಾಕಿಸಿದ್ದರು. ಕೋರ್ಟ್‌ಗೆ ಬರುವವರಿಗೆಲ್ಲ ನ್ಯಾಯಮೂರ್ತಿಗಳ ಮುಖ ಪರಿಚಯ ಇರಲಿ ಎನ್ನುವ ಉದ್ದೇಶ ಅವರದಾಗಿತ್ತು ಎನಿಸುತ್ತದೆ. ಆದರೆ, ತೂಗು ಹಾಕಿದ್ದ ಆ ಫೋಟೊಗಳು ವಕೀಲರನ್ನೇನೂ ಪ್ರಭಾವಿಸಿರಲಿಲ್ಲ.

ಹಿರಿಯ ವಕೀಲರಾಗಿದ್ದ ಕೆ.ಎನ್‌. ಭಟ್‌ ಅವರು ಖಾಸಗಿಯಾಗಿ ಕೆಲವು ನ್ಯಾಯಮೂರ್ತಿಗಳ ಬಳಿ ನಗುನಗುತ್ತಾ ಕೇಳಿಯೇಬಿಟ್ಟರು: ‘ನಾನೊಂದು ವೇಳೆ ಈ ಫೋಟೊಗಳಿಗೆ ಹೂಮಾಲೆಯನ್ನು ಹಾಕಿದರೆ ಅಥವಾ ಅವುಗಳ ಮುಂದೆ ಅಗರಬತ್ತಿಯನ್ನು ಹಚ್ಚಿಟ್ಟರೆ ಅದು ನ್ಯಾಯಾಂಗ ನಿಂದನೆ ಆಗುವುದೇ’ ಎಂದು. ನ್ಯಾಯಮೂರ್ತಿಗಳಿಗೆ ಅದರ ಹಿಂದಿನ ಸಂದೇಶ ಸ್ಪಷ್ಟವಾಗಿ ಸಿಕ್ಕಿತ್ತು. ಸ್ವಲ್ಪವೇ ಸಮಯದಲ್ಲಿ ಆ ಫೋಟೊಗಳನ್ನೆಲ್ಲ ತೆರವುಗೊಳಿಸಲಾಯಿತು.

ಕಾನೂನಿನ ಕುರಿತ ಎಲ್ಲ ತಮಾಷೆಯ ಪ್ರಸಂಗಗಳಂತೆ, ಭಟ್‌ ಅವರ ಈ ಹಾಸ್ಯ ಪ್ರಕರಣಕ್ಕೂ ಅಂತಹುದೇ ಕಾನೂನಿನ ತಳಹದಿಯೊಂದು ಇದೆ. ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್‌ 2 (ಸಿ) (ಐ) ಪ್ರಕಾರ, ‘ಕೋರ್ಟ್‌ನ ಘನತೆಗೆ ಅಪಚಾರ ಉಂಟುಮಾಡುವ ಇಲ್ಲವೇ ಅಪಚಾರ ಉಂಟುಮಾಡುವ ಉದ್ದೇಶದ ಅಥವಾ ಅದರ ಅಧಿಕಾರವನ್ನು ಕುಗ್ಗಿಸುವ ಇಲ್ಲವೇ ಕುಗ್ಗಿಸುವ ಉದ್ದೇಶದ ಯಾವುದೇ ನಡವಳಿಕೆಯು (ಹೇಳಿಕೆ ಅಥವಾ ಕ್ರಿಯೆ) ಕ್ರಿಮಿನಲ್‌ ಸ್ವರೂಪದ ನ್ಯಾಯಾಂಗ ನಿಂದನೆ ಆಗುತ್ತದೆ’. ಈ ಸೆಕ್ಷನ್‌ನ ವ್ಯಾಖ್ಯಾನ ಹಾಗೂ ಅದರಲ್ಲಿ ಬಳಕೆಯಾಗಿರುವ ಪದಗಳ ಅರ್ಥ ಎಷ್ಟು ವಿಶಾಲವಾಗಿದೆ ಎಂದರೆ, ಯಾವುದೇ ಹೇಳಿಕೆ ಅಥವಾ ಕ್ರಿಯೆಯ ವಿಷಯವಾಗಿಯೂ ‘ಇದು ಕೋರ್ಟ್‌ನ ಘನತೆಯನ್ನು ಕುಗ್ಗಿಸುವ ಯತ್ನ’ ಎಂಬ ತೀರ್ಪಿಗೆ ಬಂದುಬಿಡಬಹುದು.

ಪ್ರಸಕ್ತ ವರ್ಷದ ಜೂನ್‌ನಲ್ಲಿ ಪ್ರಶಾಂತ್‌ ಭೂಷಣ್‌ ಅವರು ಮಾಡಿದ ಹಲವು ಟ್ವೀಟ್‌ಗಳಲ್ಲಿ ಈ ಕೆಳಗಿನ ಎರಡೂ ಸೇರಿದ್ದವು. ‘ಸುಪ್ರೀಂ ಕೋರ್ಟ್‌ ಅನ್ನು ಲಾಕ್‌ಡೌನ್‌ ಸ್ವರೂಪದಲ್ಲಿಟ್ಟು, ನಾಗರಿಕರ ನ್ಯಾಯ ಪಡೆಯುವ ಮೂಲಭೂತ ಹಕ್ಕನ್ನೇ ನಿರಾಕರಿಸಿರುವ ಸಿಜೆಐ, ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ ₹ 50 ಲಕ್ಷ ಬೆಲೆಬಾಳುವ ಮೋಟರ್‌ ಸೈಕಲ್‌ನಲ್ಲಿ ನಾಗ್ಪುರದ ರಾಜಭವನದ ಆವರಣದಲ್ಲಿ ಸವಾರಿ ಮಾಡುತ್ತಾರೆ!’ ಎನ್ನುವುದು ಮೊದಲ ಟ್ವೀಟ್‌.

‘ಭಾರತದಲ್ಲಿ ಕಳೆದ ಆರು ವರ್ಷಗಳಲ್ಲಿ ಅಧಿಕೃತವಾಗಿ ತುರ್ತು ಪರಿಸ್ಥಿತಿಯನ್ನು ವಿಧಿಸದೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ಹಾಳು ಮಾಡಲಾಯಿತು ಎಂಬುದನ್ನು ಚರಿತ್ರೆಕಾರರು ಮುಂದೆ ದಾಖಲಿಸುವಾಗ, ಸುಪ್ರೀಂ ಕೋರ್ಟ್‌ನ ಪಾತ್ರವನ್ನೂ ಅವರು ಗುರುತಿಸುತ್ತಾರೆ. ಅದರಲ್ಲೂ ಮುಖ್ಯವಾಗಿ, ಹಿಂದಿನ ನಾಲ್ಕು ಸಿಜೆಐಗಳ ಪಾತ್ರವನ್ನು ತಪ್ಪದೇ ಉಲ್ಲೇಖಿಸುತ್ತಾರೆ’ ಎನ್ನುವುದು ಅವರ ಎರಡನೇ ಟ್ವೀಟ್‌.

ವಿಡಿಯೊ ಕಾನ್ಫರೆನ್ಸ್‌ ಮೂಲಕ ತ್ವರಿತವಾಗಿ ವಿಚಾರಣೆ ನಡೆಸಿದ ಕೋರ್ಟ್‌, ತನ್ನ 108 ಪುಟಗಳ ತೀರ್ಪಿನಲ್ಲಿ ಭೂಷಣ್‌ ತಪ್ಪಿತಸ್ಥರು ಎಂದು ಘೋಷಿಸಿದೆ. ಕೋರ್ಟ್‌ ಅಭಿಪ್ರಾಯದಂತೆ, ಆ ಎರಡೂ ಟ್ವೀಟ್‌ಗಳು ‘ಸಾಂವಿಧಾನಿಕ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುವಂತಹ ಪ್ರಯತ್ನವಾಗಿವೆ’ ಮತ್ತು ‘ಈ ವಿಷಯದಲ್ಲಿ ಅತ್ಯಂತ ಕಠಿಣ ನಿಲುವಿನಿಂದ ನಡೆದುಕೊಳ್ಳುವುದು ಅಗತ್ಯವಾಗಿದೆ’.

ಮೊದಲ ಟ್ವೀಟ್‌ ಕುರಿತಂತೆ ಕೋರ್ಟ್‌ ಹೇಳಿದ್ದು: ‘ಟ್ವೀಟ್‌ನ ಮೊದಲ ಭಾಗದ ಸತ್ಯಾಂಶದ ಕುರಿತಾಗಲಿ ಅಥವಾ ಇತರ ವಿಷಯಗಳ ಕುರಿತಾಗಲಿ ನಾವಿಲ್ಲಿ ಚರ್ಚಿಸಲು ಇಚ್ಛಿಸುವುದಿಲ್ಲ. ಏಕೆಂದರೆ, ಈ ವಿಚಾರಣೆಯು ರಾಜಕೀಯ ಚರ್ಚೆಗೆ ವೇದಿಕೆ ಆಗುವುದನ್ನು ನಾವು ಬಯಸುವುದಿಲ್ಲ. ನ್ಯಾಯಾಂಗದ ಆಡಳಿತ ವ್ಯವಸ್ಥೆಗೆ ಆಗುತ್ತಿರುವ ಹಾನಿಯ ವಿಷಯವಷ್ಟೇ ನಮ್ಮಲ್ಲಿ ಕಳವಳವನ್ನು ಉಂಟು ಮಾಡಿರುವುದು. ನಮ್ಮ ದೃಷ್ಟಿಯಲ್ಲಿ, ಈ ಟ್ವೀಟ್‌, ಸುಪ್ರೀಂ ಕೋರ್ಟ್‌ ಹಾಗೂ ಸಿಜೆಐ ಘನತೆಗೆ ಧಕ್ಕೆ ತಂದಿದೆ. ಹೀಗಾಗಿ ಇದು ನೇರವಾಗಿ ನ್ಯಾಯಾಂಗದ ದೂಷಣೆಯಾಗಿದೆ’.

ಎರಡನೇ ಟ್ವೀಟ್‌ ಕುರಿತಂತೆ ಕೋರ್ಟ್‌ ಅಭಿಪ್ರಾಯಪಟ್ಟಿದ್ದು: ‘ಸುಪ್ರೀಂ ಕೋರ್ಟ್‌ ಹಾಗೂ ಹಿಂದಿನ ನಾಲ್ಕು ಸಿಜೆಐಗಳ ವಿರುದ್ಧ ಟೀಕೆ ಮಾಡಿರುವುದು ನಿಚ್ಚಳವಾಗಿದೆ. ಈ ಟೀಕೆಯು ಯಾವುದೇ ಒಬ್ಬ ನ್ಯಾಯಮೂರ್ತಿಯನ್ನು ಉದ್ದೇಶಿಸಿ ಮಾಡಿದ್ದಲ್ಲ. ಬದಲು, ಇಡಿಯಾಗಿ ಸುಪ್ರೀಂ ಕೋರ್ಟ್‌ ಸಂಸ್ಥೆಯ ವಿರುದ್ಧ, ಸಿಜೆಐ ಕಚೇರಿ ವಿರುದ್ಧ ಮಾಡಿದ ಟೀಕೆಯಾಗಿದೆ. ಕಳೆದ ಆರು ವರ್ಷಗಳಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಕುಸಿಯಲು ಸುಪ್ರೀಂ ಕೋರ್ಟ್‌ನ ಪೀಠಗಳನ್ನು ಅಲಂಕರಿಸಿದ ನ್ಯಾಯಮೂರ್ತಿಗಳ, ಅದರಲ್ಲೂ ಮುಖ್ಯವಾಗಿ ಹಿಂದಿನ ನಾಲ್ವರು ಸಿಜೆಐಗಳ ಪಾತ್ರವಿದೆ ಎನ್ನುವ ಸಂದೇಶವನ್ನು ಈ ಟ್ವೀಟ್‌ ನೀಡುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ’.

***

ನ್ಯಾಯಾಂಗ ನಿಂದನೆ ಕಾಯ್ದೆ–1971 ರೂಪುಗೊಂಡ ಹಿಂದಿನ ಇತಿಹಾಸದ ಕುರಿತು ಒಂದು ಸಣ್ಣ ದೃಷ್ಟಿ ಹರಿಸುವುದು ಇಲ್ಲಿ ಅತ್ಯಗತ್ಯ. ಭಾರತೀಯ ಸಂವಿಧಾನದಲ್ಲಿ ನ್ಯಾಯಾಂಗದ ದೂಷಣೆಯನ್ನು ತಡೆಯುವ ನಿಬಂಧನೆಗಳ ಪಟ್ಟಿಯನ್ನು ಮಾಡುವಾಗ, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲಿನ ಇಂತಹ ಕೆಲವು ನಿರ್ಬಂಧಗಳು ಸಕಾರಣದಿಂದ ಕೂಡಿದ್ದಲ್ಲದೆ ಸಮಂಜಸವಾಗಿವೆ ಎಂದು ಭಾವಿಸಲಾಗಿದೆ. ಸಂವಿಧಾನದ ರಚನಾಕಾರರು, ನ್ಯಾಯಾಂಗ ದೂಷಣೆಯನ್ನು ತಡೆಯುವುದು ಎಂದರೆ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು ಎಂದೇನೂ ಮೊದಲಿಗೆ ಅಂದುಕೊಂಡಿರಲಿಲ್ಲ.

ಶಾಸನಸಭೆಯ ಕಲಾಪದ ಕೊನೆಯಲ್ಲಿ, ಅಂದರೆ 1949ರ ಅಕ್ಟೋಬರ್‌ 17ರಂದು (ಸಂವಿಧಾನ ಜಾರಿಗೆ ಬರುವುದಕ್ಕಿಂತ ಕೆಲವೇ ವಾರಗಳ ಮೊದಲು), ನ್ಯಾಯಾಂಗದ ದೂಷಣೆಯನ್ನು ತಡೆಯುವುದಕ್ಕೆ ಸೀಮಿತವಾಗಿ ವಾಕ್‌ ಸ್ವಾತಂತ್ರ್ಯದ ಮೇಲೆ ನಿರ್ಬಂಧ ವಿಧಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಯಿತು. ಸಂವಿಧಾನದಲ್ಲಿ ವಾಕ್‌ ಸ್ವಾತಂತ್ರ್ಯವನ್ನು ಕಲ್ಪಿಸುವ ಕುರಿತು ಸುದೀರ್ಘ ಚರ್ಚೆ ನಡೆದ ಒಂದು ವರ್ಷದ ಬಳಿಕ, ಅದೂ ಕೆಲವು ಸದಸ್ಯರ ಒತ್ತಾಯದ ಪರಿಣಾಮವಾಗಿ, ವಾಕ್‌ ಸ್ವಾತಂತ್ರ್ಯದ ಮೇಲಿನ ಕೆಲವು ನಿರ್ಬಂಧಗಳಿಗೆ ಅವಕಾಶವನ್ನು ಕಲ್ಪಿಸಲಾಯಿತು.

ನ್ಯಾಯಾಂಗ ದೂಷಣೆಯನ್ನು ತಡೆಯಲು ವಾಕ್‌ ಸ್ವಾತಂತ್ರ್ಯದ ಮೇಲೆ ನಿರ್ಬಂಧ ವಿಧಿಸುವ ಪ್ರಸ್ತಾವಕ್ಕೆ ಬಹುತೇಕ ಸದಸ್ಯರು ವಿರುದ್ಧವಾಗಿದ್ದರು. ಹಾಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದವರಲ್ಲಿ ಆರ್‌.ಕೆ. ಸಿಧ್ವಾ ಪ್ರಮುಖರಾದವರು. ‘ಹೈಕೋರ್ಟ್‌ ನ್ಯಾಯಮೂರ್ತಿಗಳು ದೋಷರಹಿತರೇನಲ್ಲ. ಹೀಗಾಗಿ ಸಾರ್ವಜನಿಕ ಜೀವನದ ಹಿತದೃಷ್ಟಿಯಿಂದ ಅವರು ಕೂಡ ವಿಮರ್ಶೆಗೆ ಒಳಪಡುವುದು ಅತ್ಯಗತ್ಯ’ ಎಂದು ಅವರು ಪ್ರತಿಪಾದಿಸಿದ್ದರು. ನ್ಯಾಯಾಂಗ ನಿಂದನೆ ದೂರಿನ ವಿಚಾರಣಾ ಪ್ರಕ್ರಿಯೆ ಮುಂದೆ ಎಂತಹ ವಿರೋಧಾಭಾಸದಿಂದ ಕೂಡಿರಲಿದೆ ಎಂಬ ವಿಷಯವಾಗಿಯೂ ಅವರು ಬೆಳಕು ಚೆಲ್ಲಿದ್ದರು.

‘ಹೈಕೋರ್ಟ್‌ ನ್ಯಾಯಮೂರ್ತಿಗಳೇ ನಿಂದನೆಯಂತಹ ಪ್ರಕರಣಗಳಲ್ಲಿ ದೂರುದಾರರು. ಅವರೇ ನ್ಯಾಯಪೀಠದಲ್ಲಿ ಕುಳಿತು ತೀರ್ಪು ಕೊಡುತ್ತಾರೆ. ನ್ಯಾಯಾಂಗ ನಿಂದನೆಯಾಗಿದೆ ಎಂದು ಮೊದಲೇ ಅಭಿಪ್ರಾಯಕ್ಕೆ ಬಂದ ಅವರು ಅದೇ ತೆರನಾದ ತೀರ್ಪನ್ನೇ ನೀಡುತ್ತಾರೆ’ ಎಂದು ಸಿಧ್ವಾ ಹೇಳಿದ್ದರು. ನ್ಯಾಯಾಂಗ ದೂಷಣೆಯನ್ನು ನಿರ್ಬಂಧಿಸುವಂತಹ ಇಂತಹ ನಿಯಮ ಜಗತ್ತಿನ ಬೇರೆ ಯಾವ ಸಂವಿಧಾನದಲ್ಲಿದೆ ಎಂದು ಅವರು ಪ್ರಶ್ನಿಸಿದ್ದರು. ಈ ತೆರನಾದ ಅವಕಾಶವು ‘ನ್ಯಾಯಮೂರ್ತಿಯವರನ್ನು ಇತರೆಲ್ಲರಿಗಿಂತ ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತದೆ’ ಮತ್ತು ಅವರನ್ನು ‘ಮಹಾನ್‌ ದೇವರನ್ನಾಗಿ ಮಾಡುತ್ತದೆ’ ಎಂದೂ ಎಚ್ಚರಿಸಿದ್ದರು.

ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಕುರಿತಾಗಿ ನೀಡುವ ಹೇಳಿಕೆಗಳು ತೀರ್ಪಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎನ್ನುವ ಉದ್ದೇಶಕ್ಕೆ ಸೀಮಿತವಾಗಿ ದೂಷಣೆಯನ್ನು ತಡೆಯುವುದು ಅಗತ್ಯವಾಗಿದೆ; ಅದಕ್ಕೆ ಸೀಮಿತವಾಗಿ ವಾಕ್‌ ಸ್ವಾತಂತ್ರ್ಯದ ಮೇಲೆ ನಿರ್ಬಂಧ ವಿಧಿಸಬೇಕು ಎನ್ನುವುದು ಆಗಿನ ಪ್ರಸ್ತಾವವಾಗಿತ್ತು. ಸಂವಿಧಾನ ರಚನಾ ಸಭೆಗಳಲ್ಲಿ ನಡೆದ ಚರ್ಚೆಗಳ ವಿವರಗಳ ಮೇಲೆ ಕಣ್ಣು ಹಾಯಿಸಿದರೆ ಇದು ಸ್ಪಷ್ಟವಾಗುತ್ತದೆ. ಆದರೆ, ಭಾರತದ ಕೋರ್ಟ್‌ಗಳು ಆರಂಭದಿಂದಲೂ ‘ಘನತೆಗೆ ಅಪಚಾರ ಬಗೆದ’ ಕಾರಣಕ್ಕಾಗಿ ನ್ಯಾಯಾಂಗ ನಿಂದನೆಯ ‘ಅಸ್ತ್ರ’ವನ್ನು ಮೇಲಿಂದ ಮೇಲೆ ಬಳಸುತ್ತಾ ಬಂದಿವೆ. ಈ ಮಧ್ಯೆ, ಸಂವಿಧಾನದ ಆಶಯಗಳಿಗೆ ಪೂರಕವಾಗಿ ನ್ಯಾಯಾಂಗ ನಿಂದನೆ ಕಾಯ್ದೆ–1971 ಅನ್ನು ರೂಪಿಸಲಾಗಿದೆ.

ಈ ಮೇಲಿನ ಎಲ್ಲ ಅಂಶಗಳನ್ನು ಅವಲೋಕಿಸಿದಾಗ ಭೂಷಣ್‌ ಅವರನ್ನು ತಪ್ಪಿತಸ್ಥರು ಎಂದು ಘೋಷಿಸಿರುವುದು ಸೋಜಿಗ ಉಂಟುಮಾಡಿದೆ. ಭೂಷಣ್‌ ಅವರ ಅಭಿವ್ಯಕ್ತಿಯನ್ನು ವಾಕ್‌ ಸ್ವಾತಂತ್ರ್ಯದ ಸ್ವರೂಪದಲ್ಲೇ ನೋಡಬೇಕಿತ್ತು ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಬಲು ಅಪರೂಪವಾಗಿ ವಾಕ್‌ ಸ್ವಾತಂತ್ರ್ಯದ ಪರವಾದ ಧ್ವನಿಗಳು ಇಷ್ಟೊಂದು ದೊಡ್ಡ ಸ್ವರದಲ್ಲಿ ಕೇಳಿಬಂದಿವೆ. ದೇಶದ ಉದ್ದಗಲಕ್ಕೂ ಸಾವಿರಾರು ವಕೀಲರು, ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ಗಣ್ಯ ವ್ಯಕ್ತಿಗಳು, ಸಾಮಾನ್ಯ ನಾಗರಿಕರು ಎಲ್ಲರೂ ತೀರ್ಪನ್ನು ಟೀಕಿಸಿದ್ದಾರೆ.

ಶಿಕ್ಷೆಯನ್ನು ಪ್ರಕಟಿಸುವ ಸಂದರ್ಭ ಬಂದಾಗ, ಭೂಷಣ್‌ ಅವರಿಂದ ಕ್ಷಮೆ ಕೇಳುವಂತೆ ಮಾಡಿ, ಪ್ರಕರಣವನ್ನು ಮುಕ್ತಾಯಗೊಳಿಸಲು ಕೋರ್ಟ್‌ ಎಲ್ಲ ಪ್ರಯತ್ನವನ್ನೂ ಮಾಡಿತು. ಆದರೆ, ತಮ್ಮ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡು ನಿಂತ ಅವರು, ಕ್ಷಮೆ ಕೇಳಲು ಕೊನೆಗೂ ಒಪ್ಪಲಿಲ್ಲ. ‘ನನಗೆ ಯಾವುದೇ ಕರುಣೆ ತೋರಬೇಕಿಲ್ಲ. ನನ್ನ ವಿಷಯವಾಗಿ ಹೃದಯ ವೈಶಾಲ್ಯ ಮೆರೆಯುವಂತೆಯೂ ನಾನು ಬೇಡುವುದಿಲ್ಲ. ನಾನು ತಪ್ಪು ಮಾಡಿರುವುದಾಗಿ ತೀರ್ಮಾನಿಸಿರುವ ಕೋರ್ಟ್‌, ಕಾನೂನುಬದ್ಧವಾಗಿ ವಿಧಿಸುವ ದಂಡವನ್ನು ಸಂತೋಷದಿಂದ ಪಾವತಿಸಲು ಸಿದ್ಧನಿದ್ದೇನೆ. ದೇಶದ ನಾಗರಿಕನಾಗಿ ಹಾಗೆ ನಡೆದುಕೊಳ್ಳುವುದು ನನ್ನ ಆದ್ಯ ಕರ್ತವ್ಯವೂ ಆಗಿದೆ’ ಎಂದು ಹೇಳಿಕೆ ನೀಡಿದರು.

ಕೋರ್ಟ್‌ ನೀಡಿದ 82 ಪುಟಗಳ ಶಿಕ್ಷೆಯ ಆದೇಶದಲ್ಲಿ ಈ ರೀತಿ ದಾಖಲಿಸಿದೆ: ‘ನಿಂದಕರು ಆಪಾದನೆಗಳನ್ನೆಲ್ಲ ಹಿಂಪಡೆದು ವಿಷಾದ ವ್ಯಕ್ತಪಡಿಸುವುದು ಒಳಿತು ಎಂದು ಅಟಾರ್ನಿ ಜನರಲ್‌ ಅವರು ಸಲಹೆ ನೀಡಿದ್ದರು. ಆದರೆ, ಅವರ ಸಲಹೆಯನ್ನು ನಿಂದಕರು ಪುರಸ್ಕರಿಸಲಿಲ್ಲ. 2020ರ ಆಗಸ್ಟ್‌ 24ರಂದು ಈ ಕೋರ್ಟ್‌ಗೆ ಸಲ್ಲಿಸಿದ್ದ ಎರಡನೇ ಹೇಳಿಕೆಗೆ ಭಾರಿ ಪ್ರಚಾರ ಸಿಗುವಂತೆ ನೋಡಿಕೊಂಡ ನಿಂದಕರು, ಪ್ರಕರಣ ವಿಚಾರಣೆ ಹಂತದಲ್ಲಿ ಇದ್ದಾಗಲೇ ಹಲವು ಸಂದರ್ಶನಗಳನ್ನೂ ನೀಡಿದರು. ಆ ಮೂಲಕ ಕೋರ್ಟ್‌ನ ಘನತೆಯನ್ನು ಮತ್ತಷ್ಟು ಕುಗ್ಗಿಸಲು ಯತ್ನಿಸಿದರು. ಇಂತಹ ನಡವಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದರೆ ದೇಶದಾದ್ಯಂತ ವಕೀಲರು ಹಾಗೂ ದಾವೆದಾರರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಆದರೆ, ಕಠಿಣ ಶಿಕ್ಷೆ ವಿಧಿಸದೆ ಹೃದಯ ವೈಶಾಲ್ಯ ಮೆರೆಯಲು ನಾವು ಇಚ್ಛಿಸಿದ್ದೇವೆ. ನಿಂದಕರಿಗೆ ಸಾಂಕೇತಿಕವಾಗಿ ಒಂದು ರೂಪಾಯಿ ದಂಡ ವಿಧಿಸುತ್ತಿದ್ದೇವೆ’.

ಭೂಷಣ್‌ ಅವರ ಎರಡೂ ಟ್ವೀಟ್‌ಗಳು ಒಟ್ಟಾಗಿ ನೂರು ಪದಗಳನ್ನು ಮೀರಿಲ್ಲ. ಸುಪ್ರೀಂ ಕೋರ್ಟ್‌ ಅವರಿಗೆ ಒಂದು ರೂಪಾಯಿಯ ದಂಡದ ಶಿಕ್ಷೆ ವಿಧಿಸಲು ಒಟ್ಟಾರೆ 190 ಪುಟಗಳ (108 + 82) ತೀರ್ಪು ಬರೆದಿದೆ. ನಿಜಕ್ಕೂ ಅಷ್ಟೊಂದು ಮಹತ್ವ ನೀಡುವ ಪ್ರಕ್ರಿಯೆ ಇದಾಗಿತ್ತೇ? ನ್ಯಾಯಾಂಗದ ಘನತೆಯನ್ನು ಇದರಿಂದ ಪುನರ್‌ಸ್ಥಾಪಿಸಲು ಸಾಧ್ಯವಾಯಿತೇ? ಕೋರ್ಟ್‌ನ ಅಧಿಕಾರವನ್ನು ಕುಗ್ಗಿಸುತ್ತಿರುವವರು ಯಾರು? ಇಲ್ಲಿ ದೊಡ್ಡವರಾದದ್ದು ಯಾರು ಮತ್ತು ಏಕೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದನ್ನು ಓದುಗರಿಗೇ ಬಿಡುತ್ತೇನೆ. ಏಕೆಂದರೆ, ನನ್ನ ಉತ್ತರಗಳು ಹೊಸದೊಂದು ನಿಂದನೆ ಪ್ರಕರಣಕ್ಕೆ ಕಾರಣವಾಗಬಹುದು. ಹೀಗಾಗಿ, ಸದ್ಯ ಉಳಿದಿರುವುದು ಮೌನ ಒಂದೇ.

ಲೇಖಕ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT