ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿದ ಮೇಲೂ ಉಳಿದವರು

Last Updated 14 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡದ ಒಂದು ಯುಗದ ಆದರ್ಶಗಳನ್ನೆಲ್ಲ ಮೈಗೂಡಿಸಿಕೊಂಡು ಜಿಲ್ಲೆಯ ಸುಸಂಸ್ಕೃತಿಯ ಪ್ರತಿನಿಧಿಯಾಗಿ ಬದುಕಿದ್ದ ಎ.ಜಿ. (ಆಲಂಗಾರು ಗೋವಿಂದಭಟ್ಟರ ಮಗ) ತಿರುಮಲೇಶ್ವರ ಭಟ್ ಅವರ ಜನ್ಮ ಶತಮಾನೋತ್ಸವ ಈಗ.

1941ರಲ್ಲಿ ವೈಯಕ್ತಿಕ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಅವರು ಸೆರೆಮನೆವಾಸ ಅನುಭವಿಸಿದವರು. ಸ್ವಾತಂತ್ರ್ಯ ಲಭ್ಯವಾದ ಮೇಲೆ ದೇಶಾಭಿಮಾನಿಯಾಗಿ ಸಾರ್ವಜನಿಕ ಜೀವನದಲ್ಲಿ ಬಹಳಷ್ಟು ಸಾಧಿಸಿದ ‘ಎಜಿಟಿ’, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲವನ್ನು ಕೇಂದ್ರೀಕರಿಸಿಕೊಂಡು ರಾಜಕೀಯವಾಗಿ, ಸಾಮಾಜಿಕವಾಗಿ ಜನಪರ ಕಾರ್ಯಗಳನ್ನು ಮಾಡಿದವರು. ಸಹಕಾರಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಸಾಕಷ್ಟು ದುಡಿದವರು. 1950ರಲ್ಲಿ ಆರಂಭವಾದ ‘ವಿಠಲ ಹೈಸ್ಕೂಲ್‌’ ಸ್ಥಾಪನೆಯಲ್ಲಿ ಅವರು ಮುಖ್ಯ ಪಾತ್ರವಹಿಸಿದ್ದರು. 1940-50ರ ದಶಕಗಳಲ್ಲಿ ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದವರು.

‘ಎಜಿಟಿ’ ಅವರು ಸಕ್ರಿಯರಾಗಿದ್ದ ಕಾಲಘಟ್ಟ ದೇಶದ ಸ್ವಾತಂತ್ರ್ಯ ಹೋರಾಟದ ಕಾಲ, ಸಮಾಜ ಸುಧಾರಣೆಯಾಗಿ ಮೂಲಸೌಕರ್ಯಗಳನ್ನು ಹಳ್ಳಿಹಳ್ಳಿಗಳಲ್ಲಿ ಸ್ಥಳೀಯ ಮುಖಂಡರೇ ಒದಗಿಸಬೇಕಾಗಿದ್ದ ಕಾಲ. ದಕ್ಷಿಣ ಕನ್ನಡದ ಹಲವು ಪ್ರದೇಶಗಳಲ್ಲಿ ‘ಎಜಿಟಿ’ ಅವರಂತಹ ಆದರ್ಶವಾದಿ ಸ್ಥಳೀಯ ನಾಯಕರಿದ್ದ ಕಾರಣ ಈ ಪ್ರದೇಶ ಹೆಚ್ಚು ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಯಿತು.

ಅದು ದೇಶದ ಸಮಾಜಪರ ಆದರ್ಶ ವ್ಯಕ್ತಿಗಳೆಲ್ಲ ಗಾಂಧೀಜಿಯವರ ನಾಯಕತ್ವವನ್ನು ಒಪ್ಪಿ ಒಂದು ಕಡೆ ಸಮಾಜ ಸುಧಾರಣೆಯನ್ನು ಮಾಡುತ್ತ, ಇನ್ನೊಂದು ಕಡೆ ಬ್ರಿಟಿಷ್ ಪ್ರಭುತ್ವಕ್ಕೆ ಪ್ರತಿಭಟನೆ ತೋರಿಸುತ್ತಾ ಅವರನ್ನು ದೇಶ ಬಿಟ್ಟು ತೊಲಗಿ ಎಂದು ಒತ್ತಾಯಿಸುತ್ತಿದ್ದ ಕಾಲ. ಕನ್ನಡ ಸಾಹಿತ್ಯದಲ್ಲಿ ಇದು ನವೋದಯದ ಕಾಲ. ಸಾಹಿತ್ಯ, ಬದುಕು, ಆದರ್ಶ ಇವೆಲ್ಲ ಬೇರೆಬೇರೆಯಲ್ಲ ಎಂದು ಕಾಯಾ, ವಾಚಾ, ಮನಸಾ ಪರಹಿತಕ್ಕಾಗಿ ಬದುಕಿದ ಹಲವರು ದೇಶದಲ್ಲಿ ಇದ್ದರು ಆ ಘಟ್ಟದಲ್ಲಿ. ದಕ್ಷಿಣ ಕನ್ನಡದಲ್ಲಿ ಆ ರೀತಿಯಲ್ಲಿ ಬದುಕಿ ಒಟ್ಟಾರೆ ಈ ಪ್ರದೇಶದ ಸಮಾಜಕ್ಕೆ ಒಂದು ಘನತೆ ತಂದುಕೊಟ್ಟ ಕುದ್ಮುಲ್ ರಂಗರಾವ್, ಕಾರ್ನಾಡ ಸದಾಶಿವರಾವ್, ಎಸ್.ಯು. ಪಣಿಯಾಡಿ, ಶಿವರಾಮ ಕಾರಂತ, ಕಯ್ಯಾರ ಕಿಂಞಣ್ಣ ರೈಯವರಂತಹ ಹಲವಾರು ಧೀಮಂತ ವ್ಯಕ್ತಿಗಳ ಸಾಲಿನಲ್ಲಿ ‘ಎಜಿಟಿ’ಯವರೂ ಒಬ್ಬರು.

ಭಟ್ಟರ ಸ್ಮರಣೆ ಜನಮಾನಸದಿಂದ ಅಳಿದುಹೋಗದೆ ನಿರಂತರವಾಗಿ ಉಳಿದುಕೊಂಡು ಬಂದಿರುವುದಕ್ಕೆ ಕಾರಣವೆಂದರೆ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ತಮ್ಮ ಕರ್ತವ್ಯ ಮುಗಿಯಿತು ಎಂದು ಶಸ್ತ್ರ ಸಂನ್ಯಾಸ ಮಾಡಿ ಎಲ್ಲರೊಳಗೊಂದಾಗಿ ಅಜ್ಞಾತವಾಸಕ್ಕೆ ಸಂದುಹೋಗದಿರುವುದು. ಊರಿಗಾಗಿ ಶಾಲೆ, ಸಹಕಾರಿ ಸಂಘಗಳನ್ನು ಕಟ್ಟಿ, ಗ್ರಾಮ ಸಮಾಜವನ್ನು ಹಸನುಗೊಳಿಸುವ ಕಾಯಕದಲ್ಲಿ ಅವರು ತೊಡಗಿಕೊಂಡರು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಭ್ರಷ್ಟ ಮಣೆಗಾರ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ಕೈಜೋಡಿಸಿ ಜನರನ್ನು ಬೆದರಿಸಿ ಲಂಚ ಸಂಗ್ರಹಿಸುತ್ತಿದ್ದಾಗ, ಅದನ್ನು ಬಯಲು ಮಾಡಲು ಲಂಚ ಕೊಟ್ಟವರನ್ನು ಒಗ್ಗೂಡಿಸಿ, ಪ್ರತಿಭಟನೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಿದ್ದು ಅವರ ಹೋರಾಟದ ಬದುಕಿಗೆ ಒಂದು ಉದಾಹರಣೆ. ವಿಟ್ಲ ಪೇಟೆಯಿಂದ ಸುಮಾರು ಮೂರುಮೈಲು ದೂರದಲ್ಲಿರುವ ಆಲಂಗಾರು ಮನೆಯ ಹವೀಕ ಬ್ರಾಹ್ಮಣ ಕುಟುಂಬದಲ್ಲಿ ‘ಎಜಿಟಿ’ (ಜನನ: 1918ರ ಸೆಪ್ಟೆಂಬರ್‌ 12) ಜನಿಸಿದರು. ಅವರ ಹೈಸ್ಕೂಲ್‌ ವಿದ್ಯಾಭ್ಯಾಸ ಪುತ್ತೂರು ಬೋರ್ಡು ಹೈಸ್ಕೂಲ್‌ ಮತ್ತು ನೀಲೇಶ್ವರದ ರಾಜಾಸ್ ಹೈಸ್ಕೂಲಿನಲ್ಲಿ ನಡೆಯಿತು. ನೀಲೇಶ್ವರದಲ್ಲಿದ್ದಾಗ ವಿಠಲದಾಸ ಶೆಟ್ಟಿ (ಮಾಜಿ ಸಚಿವರು) ಮತ್ತು ಕುಳುಕಂದ ಶಿವರಾಯರು (ನಿರಂಜನ, ಕನ್ನಡ ಕಾದಂಬರಿಕಾರ) ಇವರ ಗೆಳೆಯರಾಗಿದ್ದರು. ಇವರ ಒಡನಾಟದ ಪ್ರಭಾವದಿಂದೆಂಬಂತೆ ರಾಜಕೀಯ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ಎಜಿಟಿಯವರು ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಶಿವರಾಮ ಕಾರಂತರ ಸ್ನೇಹವನ್ನೂ ಸಂಪಾದಿಸಿ, ಅವರ ಆತ್ಮೀಯರ ಬಳಗದಲ್ಲಿ ಗುರುತಿಸಿಕೊಂಡರು.

ಭಟ್ಟರ ಬಗ್ಗೆ ಬಂಧು ಬಳಗದವರಿಗೆ ಬಹಳ ಗೌರವವಿತ್ತು. ಹೆಚ್ಚಿನವರಿಗೆ ಅವರು ‘ಅಪ್ಪಣ್ಣ’. ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುವಾಸ ಅನುಭವಿಸಿದ ‘ಕಾಂಗ್ರೆಸ್ ಅಪ್ಪಣ್ಣ’ ಎನ್ನುವುದು ಹವೀಕರಿಗೆಲ್ಲ ಒಂದು ಗೌರವದ ಹೆಸರಾಗಿತ್ತು.

1941ರಲ್ಲಿ ‘ಎಜಿಟಿ’ ವೈಯಕ್ತಿಕ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಬ್ರಿಟಿಷ್ ಪ್ರಭುತ್ವದ ವಿರುದ್ಧ ಜನಜಾಗೃತಿ ಮೂಡಿಸಲು ಊರೂರುಗಳಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಹೋಗುವುದು ಈ ವೈಯಕ್ತಿಕ ಸತ್ಯಾಗ್ರಹದ ಶೈಲಿ. ದಾರಿಯಲ್ಲಿ ಸಭೆ ಸಮಾರಂಭ, ಯಕ್ಷಗಾನ, ನಾಟಕಗಳು ನಡೆಯುತ್ತಿದ್ದರೆ ಅವಕಾಶ ಕೇಳಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕೆಲವೊಮ್ಮೆ ಸರ್ಕಾರದ ಭಯದಿಂದ ಸಂಘಟಕರು ಅವಕಾಶ ಕೊಡದೆ ಇರುತ್ತಿದ್ದುದೂ ಇತ್ತು. ಹಾಗೆಯೇ ಗಾಂಧೀಜಿಯವರ ಸತ್ಯಾಗ್ರಹದ ಅಭಿಮಾನಿಗಳಾದ ನೂರಾರು ಜನರು ಇಂತಹ ಸತ್ಯಾಗ್ರಹಿಗಳಿಗೆ ತಂಗಲು ಆಶ್ರಯ ಕೊಟ್ಟು ಊಟೋಪಚಾರ ನೀಡುತ್ತಿದ್ದರು.

ಹಾಗೆ ವಿಟ್ಲದಿಂದ ಹೊರಟ (ಮಾರ್ಚ್ 5, 1941) ‘ಎಜಿಟಿ’ ಹೊನ್ನಾವರದವರೆಗೆ ಮುಂದುವರಿದರು. ಕೊನೆಗೆ ಅಲ್ಲಿ ಬಂಧನಕ್ಕೊಳಗಾಗಿ (ಜೂನ್‌ 27, 1941) ಹಿಂಡಲಗಾ ಜೈಲಿಗೆ ಕಳುಹಿಸಲ್ಪಟ್ಟರು. ಬಿಡುಗಡೆಯಾದ ಮೇಲೆ ಉತ್ತರ ಕರ್ನಾಟಕದಲ್ಲಿ ಬೇಂದ್ರೆ ಮುಂತಾದ ಸಾಹಿತಿಗಳನ್ನು ಭೇಟಿಯಾಗಿ ಊರಿಗೆ ಮರಳಿದ ‘ಎಜಿಟಿ’ ಅವರು, ಈಗಾಗಲೇ ವಿಶೇಷ ಆಸಕ್ತಿ ಬೆಳೆಸಿಕೊಂಡ ಪ್ರೀತಿಯ ಕ್ಷೇತ್ರಗಳಾದ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡರು.

ಮಂಗಳೂರಿನ ‘ಕರ್ನಾಟಕ ವ್ಯವಸಾಯ ವರ್ತಕರ ಸಂಘ’ದಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಿದರು. ಅವರು ಮಂಗಳೂರಿನಲ್ಲಿದ್ದಾಗ ಕಯ್ಯಾರ ಕಿಂಞಣ್ಣ ರೈ ಮತ್ತು ನಿರಂಜನರ ಗೆಳೆಯರಾಗಿದ್ದು ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು. ಸಾಹಿತ್ಯದ ಓದು, ಬರವಣಿಗೆಗಳನ್ನು ‘ಎಜಿಟಿ’ ನಿರಂತರವಾಗಿ ಮಾಡಿಕೊಂಡು ಬಂದಿದ್ದರು. ಅವರ ಕಥೆಗಳು, ಕವಿತೆಗಳು, ಲೇಖನಗಳು ಅಂದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಊರಿನಲ್ಲಿ ನೆಲೆಸಿದ ಮೇಲೆ ವಿಟ್ಲ ಪರಿಸರದ ‘ನವಭಾರತ’ ವರದಿಗಾರರಾಗಿದ್ದರು. ‘ಎಜಿಟಿ’ಯವರ ತಾಯಿ ಸೌಭದ್ರಮ್ಮ. ಹೀಗಾಗಿ ಅವರು ‘ಸುಭದ್ರಾತನಯ’ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದರು.

ಸಾಹಿತಿ ಸರವು ರಾಮಭಟ್ ಅವರ ಸಹೋದರಿ ಪರಮೇಶ್ವರಿ ಅವರನ್ನು ಮದುವೆಯಾದ ‘ಎಜಿಟಿ’ ವಿಟ್ಲದಲ್ಲಿಯೇ ನೆಲೆನಿಂತು ಕೃಷಿಕರಾದರು. ಈ ದಂಪತಿಗೆ ನಾಲ್ವರು ಮಕ್ಕಳು. ‘ಎಜಿಟಿ’ಯವರು 1959ರಲ್ಲಿ ತಮ್ಮ 41ನೆಯ ವಯಸ್ಸಿನಲ್ಲಿ ಕ್ಯಾನ್ಸರ್ ರೋಗಕ್ಕೆ ಬಲಿಯಾದರು. 1947ರಲ್ಲಿ ಕಾಸರಗೋಡಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯರಾಗಿ ದುಡಿದಿದ್ದರು. 1945-46ರಲ್ಲಿ ಆಲಂಗಾರು ಸಮೀಪ ಮಾಡತಡ್ಕ ಎಂಬಲ್ಲಿ ಪ್ರಾಥಮಿಕ ಶಾಲೆ ಆರಂಭಿಸುವುದರಲ್ಲಿ ಮುಖ್ಯಪಾತ್ರ ವಹಿಸಿದ್ದರು. ಜಿಲ್ಲಾ ವಿದ್ಯಾಧಿಕಾರಿಗಳಾಗಿದ್ದ ಶ್ರೀರಾಮರಾವ್ ಅವರ ಸಲಹೆಯಂತೆ ವಿಟ್ಲದಲ್ಲಿ ಹೈಸ್ಕೂಲ್ ಸ್ಥಾಪನೆಗೂ ಕಾರಣರಾದರು.

ಮದರಾಸು ಸರಕಾರ ವಿಟ್ಲದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಲು ಮುಂದಾಯಿತು. ಈ ಉದ್ದೇಶಕ್ಕಾಗಿ ಅಡಿಕೆ ತೋಟ ಬೇಕಿತ್ತು. ವಿಟ್ಲ ಅರಮನೆಯ ಅಡಿಕೆ ತೋಟವನ್ನು ಸಂಶೋಧನಾ ಉದ್ದೇಶಕ್ಕಾಗಿ ಕೆಲವು ವರ್ಷಗಳ ಕಾಲ ಮದರಾಸು ಸರಕಾರದ ಸುಪರ್ದಿಗೆ ಬಿಟ್ಟುಕೊಡಲು ‘ಎಜಿಟಿ’ಯವರು ಅರಸರನ್ನು ಒಪ್ಪಿಸಿದರು. ಮುಂದೆ ಈ ಸಂಸ್ಥೆ ಅಭಿವೃದ್ಧಿಗೊಂಡು ಇದೀಗ ಕೇಂದ್ರ ಅಡಿಕೆ ಸಂಶೋಧನಾ ಕೇಂದ್ರವಾಗಿ ಅಡಿಕೆ ಬಗ್ಗೆ ಸಂಶೋಧನೆ ನಡೆಸಿ, ಅಡಿಕೆ ಕೃಷಿಕರಿಗೆ ಮಾರ್ಗದರ್ಶನ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT