ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲವನ್ನೇ ಬಗ್ಗಿಸೋರು!

Last Updated 28 ಮೇ 2022, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ತಡವಾಗಿ ಬರುವುದು ಒಂದು ‘ಕೆಟ್ಟಚಾಳಿ’, ‘ಕೆಟ್ಟಗುಣ’ ‘ಮುಂದುವರಿಯಬಾರದ ನಡವಳಿಕೆ’ ಎಂದೇ ನಮ್ಮೆಲ್ಲರ ಗ್ರಹಿಕೆ. ನಮ್ಮ ಸ್ನೇಹಿತ/ಸ್ನೇಹಿತೆ ಮತ್ತೆ ಮತ್ತೆ ಪಾರ್ಟಿಗೆ ತಡವಾಗಿ ಬಂದಾಗ ನಮಗೆ ಅನ್ನಿಸುವುದೇನು?

ನೀವು ಹೇಗೆ? ಸಮಯಕ್ಕೆ ಸರಿಯಾಗಿ ಆಫೀಸಿಗೆ ಹೋಗುವ, ಐದು ನಿಮಿಷ ಮೊದಲೇ ಇದ್ದು ಬೀಗ ತೆರೆಯಲೆಂದು ಕಾಯುವ ‘ಪಂಕ್ಚುವಲ್’ ಜಾತಿಯವರಾ? ಅಥವಾ ಯಾರೇನೆಂದರೂ ತಲೆಕೆಡಿಸಿಕೊಳ್ಳದೆ, ‘ಲೇಟ್ ಲತೀಫ್’ ಎಂದರೂ ನಗುತ್ತಲೇ, ಊಟ/ಕಾರ್ಯಕ್ರಮ/ಆಫೀಸು ಎಲ್ಲದಕ್ಕೂ ತಡವಾಗಿಯೇ ಹೋಗುವವರಾ? ನಾನು ಮೊದಲನೆಯ ಜಾತಿಗೆ ಸೇರಿದವಳು. ಸ್ನೇಹಿತರಿಂದ-ಮನೆಯ ಜನರಿಂದ ಸಾಮಾನ್ಯವಾಗಿ ‘ನೀನೇ ಮೊದಲು ಹೋಗಿ ಕಸಗುಡಿಸಬೇಕಾಗುತ್ತೆ ನೋಡು/ಹಿಂದಿನ ರಾತ್ರಿನೇ ಹೋಗಿ ನೀನು ಅಲ್ಲೇ ಮಲಗಿಕೊಳ್ಳೋದೇ ವಾಸಿ’ ಎಂದು ಬೈಸಿಕೊಳ್ಳುವವಳು. ಹಾಗಾಗಿಯೇ ಈ ಎರಡನೇ ಜಾತಿಯ ‘ಲೇಟ್ ಲತೀಫ್’ಗಳ (ಬೇಕಾದ್ರೆ ‘ಲೇಟ್ ಲತಾ’ ಇಲ್ಲವೆ ‘ಲೇಟ್ ಲೋಕಪ್ಪ’ ಅಂತಲೂ ಹೇಳೋಣ) ಬಗ್ಗೆ ನನಗೆ ಒಂಥರಾ ತಾತ್ಸಾರ-ಕೋಪ ಮಿಶ್ರಿತ ಭಾವನೆ. ನನ್ನ ಕುಟುಂಬ-ಸುತ್ತಮುತ್ತ ಇರುವ ‘ಲೇಟ್ ಲತಾ-ಲೇಟ್ ಲೋಕಪ್ಪ’ಗಳನ್ನು ಗಮನಿಸುವುದು, ತಿದ್ದಲು ಪ್ರಯತ್ನಿಸುವುದು – ಇದು ನಾನು ಆಗಾಗ್ಗೆ ಮಾಡುವ ಕೆಲಸವೇ.

ಸಮಯ ಪ್ರಜ್ಞೆ-ಕಾಲಬದ್ಧತೆ ಇಂತಹ ವಿಷಯಗಳ ಬಗ್ಗೆ ಮಕ್ಕಳಿಗೆ ಭಾಷಣ ಮಾಡುವುದು, ವೇಳಾಪಟ್ಟಿಯಿಲ್ಲದೆ ಯಾವ ಕೆಲಸವನ್ನೂ ಮಾಡದಿರುವುದು, ಯಾರಾದರೂ ಲೇಖನ ಬರೆದುಕೊಡಲು ಕೇಳಿದರೆ, ಒಂದು ದಿನ ಮೊದಲೇ ಬರೆದು ಸರಿಯಾದ ಸಮಯಕ್ಕೆ ಅವರಿಗೆ ಮುಟ್ಟಿಸುವುದು, ಆಗಾಗ್ಗೆ ಇತರರು ಕೇಳುವ ‘ನಿಮಗೆ ಹೇಗೆ ಇಷ್ಟೆಲ್ಲಾ ಟೈಂ ಸಿಗುತ್ತೆ’ ಎಂಬ ಪ್ರಶ್ನೆಗೆ ಒಳಗೊಳಗೇ ಸಂತೋಷಿಸುತ್ತ ‘It’s a busy woman who finds time’ ಎಂದು ಉತ್ತರಿಸುವುದು, ಇವೆಲ್ಲ ನನಗೆ ಪ್ರಿಯವಾದ ಸಂಗತಿಗಳು. ಇಂತಹ ಸಮಯ ಪ್ರಜ್ಞೆಯ ನಾನು ಇತ್ತೀಚೆಗೆ ‘ಲೇಟ್ ಲೋಕಪ್ಪ’, ‘ಲೇಟ್ ಲತಾ’ಗಳ ಬಗ್ಗೆ ಮನೋವೈಜ್ಞಾನಿಕ ಅಧ್ಯಯನಗಳನ್ನು ಕುತೂಹಲದಿಂದ ಗಮನಿಸಿದಾಗ ನನಗೆ ಎದುರಾದದ್ದು ಕಾಲಬದ್ಧತೆ-ಸಮಯ ಪ್ರಜ್ಞೆಯೇ ಎಲ್ಲವೂ ಅಲ್ಲ ಎಂಬ ಸತ್ಯ!

ನಮ್ಮೆಲ್ಲರ ಆತ್ಮೀಯ ವಲಯಗಳಲ್ಲಿಯೂ ಯಾರಾದರೊಬ್ಬರು ಇಂಥ ಲೇಟ್ ಲತಾ-ಲೋಕಪ್ಪ ಇದ್ದೇ ಇರುತ್ತಾರೆ. ಪ್ರತಿ ಡೆಡ್‍ಲೈನ್‌ ಅನ್ನು ತಪ್ಪುವ ಸಹೋದ್ಯೋಗಿ, ಅರ್ಧಗಂಟೆ ತಡವಾಗಿಯೇ ಊಟಕ್ಕೆ ಬರುವ ಪತಿ, ‘ಬಂದೆ ಬಂದೆ, ಇಲ್ಲೇ ಇದ್ದೇನೆ’ ಎನ್ನುತ್ತಲೇ ಎಷ್ಟು ಹೊತ್ತಾದರೂ ಬರದೆ ಬೇಸರ ತರಿಸುವ ಸ್ನೇಹಿತೆ. ‘ಇಲ್ಲ, ನಮ್ಮ ಮಧ್ಯೆ ಯಾರೂ ಹಾಗಿರುವವರನ್ನು ನಾನು ನೋಡಿಯೇ ಇಲ್ಲವಲ್ಲ’ ಎಂದು ನೀವೆಂದರೆ, ಆ ವ್ಯಕ್ತಿ ನೀವೇ ಆಗಿರಲೂಬಹುದು! ‘ಲೇಟ್ ಲೋಕಪ್ಪ-ಲತಾ’ರ ಬಗ್ಗೆ ಅಧ್ಯಯನಗಳನ್ನು ವಿವರವಾಗಿ ಮನೋವಿಜ್ಞಾನಿಗಳು ದಾಖಲಿಸುತ್ತಿದ್ದಾರೆ. ಹೀಗೆ ಅಧ್ಯಯನಗಳನ್ನು ಮಾಡುತ್ತಿರುವ ವಿಜ್ಞಾನಿಗಳಲ್ಲಿಯೂ ‘ತಡವಾಗಿ ತಲುಪುವ’ ಗುಣ ಇದ್ದದ್ದೇ ಅವರನ್ನು ಈ ಬಗ್ಗೆ ಸಂಶೋಧಿಸಲು ಪ್ರೇರೇಪಿಸಿತು ಎನ್ನುವುದು ಸ್ವಾರಸ್ಯಕರ ಅಂಶ. ಮನೋವಿಜ್ಞಾನ ಇಂಥ ವ್ಯಕ್ತಿಗಳನ್ನು ‘Time benders’ ‘ಕಾಲವನ್ನು ಬಗ್ಗಿಸುವವರು’ ಎಂದು ಗುರುತಿಸುತ್ತದೆ. ಸಮಯಕ್ಕೆ ಸರಿಯಾಗಿ ತಲುಪಲೇಬೇಕೆಂಬ ಹಟವಾದಿಗಳನ್ನು ‘ಕಾಲವನ್ನು ಕಾಯುವವರು’ Time keepers ಎನ್ನುತ್ತದೆ.

ಸಾಮಾನ್ಯವಾಗಿ ತಡವಾಗಿ ಬರುವುದು ಒಂದು ‘ಕೆಟ್ಟಚಾಳಿ’, ‘ಕೆಟ್ಟಗುಣ’ ‘ಮುಂದುವರಿಯಬಾರದ ನಡವಳಿಕೆ’ ಎಂದೇ ನಮ್ಮೆಲ್ಲರ ಗ್ರಹಿಕೆ. ನಮ್ಮ ಸ್ನೇಹಿತ/ಸ್ನೇಹಿತೆ ಮತ್ತೆ ಮತ್ತೆ ಪಾರ್ಟಿಗೆ ತಡವಾಗಿ ಬಂದಾಗ ನಮಗೆ ಅನ್ನಿಸುವುದೇನು? ‘ಇವರು ನಮ್ಮ ಭಾವನೆಗಳನ್ನು ಲಕ್ಷಿಸುವುದಿಲ್ಲ. ಉದ್ದೇಶಪೂರ್ವಕವಾಗಿಯೇ ತಡವಾಗಿ ಬರುತ್ತಾರೆ’ ಎಂದಲ್ಲವೆ? ಆದರೆ ಅಧ್ಯಯನಗಳ ಪ್ರಕಾರ, ನಮ್ಮ ಭಾವನೆಗಳನ್ನು ಲಕ್ಷಿಸುವುದಕ್ಕೂ, ಸಮಯಕ್ಕೆ ಸರಿಯಾಗಿ ಬರುವುದಕ್ಕೂ ಯಾವ ಸಂಬಂಧವೂ ಇಲ್ಲ! ಸಾಮಾನ್ಯವಾಗಿ ಹೇಳುವುದಾದರೆ ಯಾವ ವ್ಯಕ್ತಿಯೂ ಉದ್ದೇಶಪೂರ್ವಕವಾಗಿ ತಡವಾಗಿ ಬರುವುದಿಲ್ಲ. ಈ ವಿಷಯದಲ್ಲಂತೂ ಅದು ಪೂರ್ತಿ ಉಲ್ಟಾ. ಅಂದರೆ ಉದ್ದೇಶಪೂರ್ವಕವಾಗಿ ಸಮಯಕ್ಕೆ ಸರಿಯಾಗಿ ಬರುವುದೇ ಹೆಚ್ಚು ಸಾಧ್ಯ. ತಡವಾಗಿ ಬರುವವರು ತಮ್ಮ ಕೆಲಸ-ಕಾರ್ಯಗಳನ್ನು ಒಳ್ಳೆಯ ಕ್ಷಮತೆಯಿಂದ ಮಾಡುವುದರಲ್ಲೇನೂ ಕಡಿಮೆಯಿಲ್ಲ.

ನೀವು ಆಫೀಸಿನಲ್ಲಿ ಯಾರು ತಡವಾಗಿ ಬರುವ ಪ್ರವೃತ್ತಿಯವರು ಎಂಬುದನ್ನು ಕಂಡು ಹಿಡಿಯಲು ಒಂದು ಸುಲಭ ಉಪಾಯವಿದೆ. ಆಫೀಸಿನ ಒಳಕ್ಕೆ ಹೋಗಿ ಅಲ್ಲಿ ಯಾರ ಮೇಜು ಹೆಚ್ಚು ಅಸ್ತವ್ಯಸ್ತ ಎಂದು ಗಮನಿಸಿದರೆ ಆ ವ್ಯಕ್ತಿಯೇ ನಮ್ಮ ‘ಲೇಟ್ ಲೋಕಪ್ಪ’! ಒಂದು ಕೆಲಸ ಮುಗಿಸುವ ಮುನ್ನ ಮತ್ತೊಂದಕ್ಕೆ ತಡವಾಗಿ, ಅವರು ಅದಕ್ಕಾಗಿ ಓಡಬೇಕಲ್ಲ! ಆದರೆ, ಅದರ ಬಗೆಗೆ ಅವರಿಗೇನೂ ಬೇಸರವಿಲ್ಲ. ಆತ್ಮವಿಶ್ವಾಸದಿಂದ ತಮ್ಮ ‘ತಡವಾಗಿ ಹೋಗುವ’ ಪ್ರವೃತ್ತಿಯನ್ನು ಅವರು ಅಪ್ಪಿಕೊಳ್ಳುತ್ತಾರೆ! ಕಾನ್ಯೆ ವೆಸ್ಟ್ ಎಂಬ ಸಂಗೀತಗಾರ ತನ್ನ ಟ್ರ್ಯಾಕ್ ಒಂದರಲ್ಲಿ ತನ್ನ ಕೇಳುಗರಿಗೆ ಹೇಳಿದ್ದು ಏನು ಗೊತ್ತೆ? ‘ನನ್ನ ತಡಮಾಡುವಿಕೆಯಿಂದ ನಾನು ನಿಮಗೆಲ್ಲಾ ಗೌರವ ನೀಡಿದ್ದೇನೆ’ ಎಂದೇ! ಈ ವ್ಯಕ್ತಿಗಳು ಸ್ವಸಂತೋಷದಲ್ಲಿ, ತಾವೇನು ಮಾಡುತ್ತಿದ್ದೇವೋ ಅದರಲ್ಲಿ ಮುಳುಗಿ ಹೋಗುವ ಆತ್ಮತೃಪ್ತರು. ಹಾಗಾಗಿಯೇ ಬೇರೆಯವರು ಏನೇ ಅಂದುಕೊಳ್ಳಲಿ, ಇವರಿಗೆ ತಮ್ಮ ಪ್ರವೃತ್ತಿಯನ್ನು ಬದಲಿಸಲು ಆಸಕ್ತಿಯೂ ಇರಲಾರದು.

ತಡವಾಗಿ ಬರುವ ಪ್ರವೃತ್ತಿ ಸ್ವತಃ ವ್ಯಕ್ತಿಗೆ ‘ದೊಡ್ಡದು’ ಎನಿಸಲಾರದು. ಸರಿ, ಆದರೆ ಆತನ/ ಆಕೆಯ ಹತ್ತಿರದ ಆತ್ಮೀಯರಿಗೆ ಕಿರಿಕಿರಿಯುಂಟು ಮಾಡಬಹುದು, ನೋವುಂಟು ಮಾಡಬಹುದು, ಸಂಬಂಧಗಳನ್ನೇ ಕಡಿದು ಹಾಕಬಹುದು ಅಥವಾ ದಾಂಪತ್ಯ ಕಲಹಗಳನ್ನು ಹೆಚ್ಚಿಸಬಹುದು. ಕುಟುಂಬದವರೇ ಅಲ್ಲವೆ ಈ ಪ್ರವೃತ್ತಿಯ ನಿತ್ಯ ಬಲಿಪಶುಗಳು! ಅವರವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಈ ಪ್ರವೃತ್ತಿಯನ್ನು ಆತ್ಮೀಯರು ಒಪ್ಪಿಕೊಂಡು ಬಿಡಬಹುದು (ಅವರು ಯಾವಾಗಲೂ ತಡತಾನೆ! ಬಿಟ್ಟುಬಿಡು) ಅಥವಾ ಅವರಿಂದ ದೂರವಾಗಲೂಬಹುದು (ಇನ್ನು ಈ ರೀತಿಯ ಅಶಿಸ್ತು - ನಿರ್ಲಕ್ಷ್ಯವನ್ನು ಸಹಿಸಲಾರೆ!).

ಇಂಥ ಸಮಸ್ಯೆಗಳು ಎದುರಾಗುವಾಗ, ಈ ವ್ಯಕ್ತಿಗಳನ್ನು ನಾವು punctually-challenged ಅಂದರೆ ‘ವಿಕಲಚೇತನ’ರಂತೆ, ವಿಕಲ ಸಮಯ ಪ್ರಜ್ಞೆಯುಳ್ಳವರು ಎಂದೇ ಕರೆಯಬೇಕಾಗುತ್ತದೆ. ವಿಕಲ ಸಮಯಪ್ರಜ್ಞೆಯುಳ್ಳ ವ್ಯಕ್ತಿಗಳ ಸಮಯದ ಗ್ರಹಿಕೆಯೇ ವಿಭಿನ್ನ. ಜೆಫ್ ಕಾಂಟೆ ಎಂಬ ಪ್ರೊಫೆಸರ್ ಸ್ಯಾಂಡಿಯಾಗೋ ವಿಶ್ವವಿದ್ಯಾಲಯದಲ್ಲಿ ಒಂದು ಅಧ್ಯಯನ ಕೈಗೊಂಡ. ತುಂಬಾ ಆತುರದಲ್ಲಿರುವ, ಸಮಯಕ್ಕೆ ಮೊದಲೇ/ಸರಿಯಾಗಿ ಧಾವಿಸುವ ವ್ಯಕ್ತಿಗಳದ್ದು ಒಂದು ಗುಂಪು; ಆರಾಮವಾಗಿ, ನಿಧಾನವಾಗಿ ತಮ್ಮದೇ ಸಮಯಕ್ಕೆ ಬರುವವರದ್ದು ಮತ್ತೊಂದು ಗುಂಪು. ಗಡಿಯಾರಗಳಿಲ್ಲದೆ ಅವರನ್ನು ಒಂದು ನಿಮಿಷ ಮುಗಿದ ಸಮಯ ಗುರುತಿಸಲು
ಕೇಳಲಾಯಿತು. ಮೊದಲ ಗುಂಪು ಅಂದಾಜು 58 ಸೆಕೆಂಡುಗಳು ಮುಗಿಯುವ ವೇಳೆಗೆ ಒಂದು ನಿಮಿಷವಾಯಿತು ಎಂದು ಗುರುತಿಸಿದರೆ, ಎರಡನೇ ಗುಂಪು 77 ಸೆಕೆಂಡುಗಳುಮುಗಿದಮೇಲೆ ಒಂದು ನಿಮಿಷ ಕಳೆಯಿತು ಎಂದು ಗುರುತಿಸಿತು!

ನಮಗೆ ಪ್ರಿಯರಾದವರ ಜೊತೆಯಲ್ಲಿದ್ದಾಗ/ಇಷ್ಟವಾದ ಕೆಲಸದಲ್ಲಿ ಮಗ್ನರಾದಾಗ ನಮಗೆ ಸಮಯ ಸರಿದದ್ದೇ ಗೊತ್ತಾಗುವುದಿಲ್ಲ ತಾನೆ! ಅದೇ ಟ್ರಾಫಿಕ್ ಸಿಗ್ನಲ್‍ನಲ್ಲಿ ಕಾಯುವಾಗ ಒಂದೊಂದು ಕ್ಷಣವೂ ಯುಗವಾದಂತೆ!

ಒಂದು ನಿಮಿಷಕ್ಕೆ 77 ಸೆಕೆಂಡುಗಳೆಂದು ಗುರುತಿಸುವುದಷ್ಟೇ ಅಲ್ಲ, ತಾವು ಎದುರಿಸುವ ಯಾವುದರ ಬಗೆಗೂ ಇಂತಹ ವ್ಯಕ್ತಿಗಳು ಬಹು ಆಶಾವಾದಿಗಳೂ ಆಗಿರುತ್ತಾರೆ. ಅಂದರೆ ತಾವು ತಡವಾಗಿ ಹೋದರೂ ಊಟ ಮುಗಿದಿರುವುದಿಲ್ಲ, ಊಟ ಒಂದೊಮ್ಮೆ ಮುಗಿದಿದ್ದರೂ ಪರವಾಗಿಲ್ಲ, ಮತ್ತೊಂದು ಹೋಟೆಲಿಗೆ ಹೋಗಿ ಊಟ ಮಾಡಿದರಾಯಿತು. ಮಧ್ಯೆ ಸಿಗುವ ವ್ಯಕ್ತಿಗಳೊಡನೆ ಸ್ವಲ್ಪ ಹರಟೆ ಹೊಡೆದೇ ಮುನ್ನಡೆದರಾಯಿತು... ಹೀಗೆ ಆತಂಕರಹಿತ ದಿನಚರಿ! ಅಚ್ಚರಿಯ ಮಾತೆಂದರೆ ಈ ಮನೋಭಾವ ಅನುಭವಗಳಿಗೆ ತೆರೆದುಕೊಳ್ಳುವ, ಚಿಕ್ಕ ಆಗುಹೋಗನ್ನೂ ಕುತೂಹಲದಿಂದ, ಸೂಕ್ಷ್ಮವಾಗಿ ಗಮನಿಸುವ ಗುಣದೊಂದಿಗೆ ಹೊಂದುತ್ತದೆ. ತಾನು ಹಿಡಿದ ಕೆಲಸದಲ್ಲಿ ಪೂರ್ತಿಯಾಗಿ ಮುಳುಗುವುದು, ಪರಿಶ್ರಮ ಪಡುವುದು ಇವು ಇಲ್ಲಿ ಮುಖ್ಯವಾಗಿಬಿಡುತ್ತವೆ. ಹಾಗಾಗಿಯೇ ‘ತಡ ಮಾಡುವ’, ( ಅರ್ಥಾತ್ ಕಾರ್ಯವೊಂದರಲ್ಲಿ ಮುಳುಗಿ ಇತರ ಎಲ್ಲವನ್ನೂ ಮರೆಯುವ) ಗುಣವನ್ನು ವ್ಯಕ್ತಿತ್ವದ ‘ಸೃಜನಶೀಲತೆ’ ಎಂಬ ಅಂಶದೊಂದಿಗೆ ಮನೋವಿಜ್ಞಾನ ಬಹುವಾಗಿ ಗುರುತಿಸುತ್ತದೆ.

ನಿಸರ್ಗದತ್ತವಾದ ವ್ಯಕ್ತಿತ್ವವನ್ನೂ ಪರಿಸರ-ಕಲಿಕೆಗಳು ಮಾರ್ಪಡಿಸಬಹುದು ಎಂಬುದನ್ನು ವಿಜ್ಞಾನ ನಿರೂಪಿಸಿ ತೋರಿಸಿದೆ. ಆದ್ದರಿಂದ ತಡವಾಗಿ ಬರುವ ನಡವಳಿಕೆಯ ವ್ಯಕ್ತಿಗಳು ಮನಸ್ಸು ಮಾಡಿದರೆ, ತಮ್ಮ ಆರಾಮದ ಮನೋಭಾವವನ್ನು ಕಾಯ್ದುಕೊಂಡೇ, ಸ್ವಲ್ಪ ಗಮನವಿಟ್ಟು, ‘ದೇಹದ ಅಲಾರಾಂ’ನಷ್ಟೇ ಗಮನಿಸದೆ, ಹೊರಗಿನ ಗಡಿಯಾರವನ್ನೂ ಆಗಾಗ್ಗೆ ನೋಡಿ, ಸಮಯಕ್ಕೆ ಕಿಂಚಿತ್ ಮಾತ್ರ ತಪ್ಪಿ, ‘ಅರೆ, ಇಷ್ಟಾದರೂ ಬೇಗ ಬಂದರಲ್ಲ’ ಎಂಬ ಸಂತಸವನ್ನು ಆತ್ಮೀಯರಲ್ಲಿ ಉಂಟು ಮಾಡಬಹುದು. ಕೌಟುಂಬಿಕ ಕಲಹಗಳನ್ನು ತಪ್ಪಿಸಬಹುದು. ತಡವಾಗಿ ಬರುವುದರಿಂದ ತಮಗಾಗುವ ನಷ್ಟ-ಪರಿಣಾಮಗಳನ್ನು ನೋಡಿ ರೈಲು ತಪ್ಪುವುದಕ್ಕಿಂತ, ಸಂಬಂಧಗಳು ಕಳೆದುಹೋದರೆ ಎಂದು ಸ್ವಲ್ಪ ಕಲ್ಪಿಸಿಕೊಂಡರೆ ಇದು ಸಾಧ್ಯವಾದೀತು.

ಲೇಟ್ ಲೋಕಪ್ಪ-ಲೇಟ್ ಲತಾರನ್ನು ಅರ್ಥ ಮಾಡಿಕೊಳ್ಳುವಾಗ, ಅವರ ತಡಮಾಡುವ ನಡವಳಿಕೆಯಿಂದ ಬೇಸರವಾಗುವಾಗ ಝೆನ್ ಕಥೆಯೊಂದನ್ನು ಅಗತ್ಯವಾಗಿ ನೆನಪಿಸಿಕೊಳ್ಳಬೇಕು. ಒಬ್ಬ ಬೌದ್ಧ ಭಿಕ್ಷು 10 ವರ್ಷಗಳ ಕಾಲ ‘ಝೆನ್ ತತ್ವ’ ಅಧ್ಯಯನ ಮಾಡಿ, ‘ಗುರು’ ಪದವಿಯನ್ನೇರಿದ ನಂತರ ಒಂದು ಮಳೆಯ ದಿನ ತನ್ನ ‘ಮಾಸ್ಟರ್’ನನ್ನು ಕಾಣಲು ಬಂದ. ಭಿಕ್ಷು ಒಳ ಬರುತ್ತಿದ್ದಂತೆ ಮಾಸ್ಟರ್ ಕೇಳಿದ, ‘ಚಪ್ಪಲಿ ಮತ್ತು ಕೊಡೆಯನ್ನು ವರಾಂಡದಲ್ಲಿ ಬಿಟ್ಟು ಬಂದೆಯಾ?’, ಭಿಕ್ಷು ‘ಹೌದು’ ಎಂದ. ಮಾಸ್ಟರ್ ಮತ್ತೆ ಕೇಳಿದ ‘ಕೊಡೆಯನ್ನು ಚಪ್ಪಲಿಯ ಬಲಭಾಗದಲ್ಲಿಟ್ಟೆಯೋ ಅಥವಾ ಎಡಭಾಗದಲ್ಲಿಟ್ಟೆಯೋ?’ ಭಿಕ್ಷುವಿಗೆ ತನಗೆ ಉತ್ತರ ಗೊತ್ತಿಲ್ಲವೆಂದೂ, ತಾನಿನ್ನೂ ಸಂಪೂರ್ಣ ಅರಿವು ಸಂಪಾದಿಸಿಲ್ಲವೆಂದೂ ಗೊತ್ತಾಯಿತು. ಮತ್ತೆ ‘ಮಾಸ್ಟರ್’ ಬಳಿ ಕಲಿಯಲು ತೊಡಗಿದ. ಈ ಕಥೆ ಹೇಳುವುದಾದರೂ ಏನು? ಒಂದೊಂದು ನಿಮಿಷಕ್ಕೂ ಅವಸರಿಸುವವರು, ಸಮಯವೊಂದೇ ಎಲ್ಲವೂ ಎಲ್ಲ, ಪ್ರತಿ ನಿಮಿಷವನ್ನೂ ಮಗ್ನತೆಯಿಂದ, ಮುಗ್ಧತೆಯಿಂದ ಕಣ್ಣರಳಿಸಿ ಸವಿಯುವುದೂ ಕಲಿಯುವುದೂ ಅಷ್ಟೇ ಉಪಯುಕ್ತ ಎನ್ನುವುದನ್ನು ಅರಿಯಬೇಕು. ಹತ್ತು ವರ್ಷಗಳ ನಂತರವೂ ಮತ್ತೆ ಗುರುವಿನ ಬಳಿ ಅಧ್ಯಯನಕ್ಕೆ ಕುಳಿತ ಭಿಕ್ಷುವಿಗೆ ಉಂಟಾದ ಅರಿವು ಈ ಸೂಕ್ಷ್ಮತೆಯ ಗ್ರಹಿಕೆ.

ನಾವು-ನೀವು ‘Time benders’ ಕಾಲವನ್ನು ಬಗ್ಗಿಸುವವರನ್ನು ತಾತ್ಸಾರದಿಂದ ಕಾಣುವ ಬದಲು ಅವರಿಂದ ಕಲಿಯಬೇಕಾಗಿದೆ! ಇಡೀ ಜಗತ್ತೇ ಕಾಣದೆಡೆಗೆ ಓಡುತ್ತಿರುವ ಈ ಸಮಯದಲ್ಲಿ ನಮ್ಮಷ್ಟಕ್ಕೆ ನಾವೇ ಒಂದು ಹೂವನ್ನು, ಒಂದು ಕವಿತೆಯನ್ನು, ಮಳೆ ಸುರಿಯುವುದನ್ನು, ತಡವಾದರೂ ಪರವಾಗಿಲ್ಲ, ಆನಂದಿಸುವುದನ್ನು ನಾವು ಕಲಿಯಬೇಕಾಗಿದೆ. ಆರಾಮವನ್ನು - ಸೂಕ್ಷ್ಮತೆಯನ್ನು, ಅನುಭವ ಹೀರುವ ಕಲೆಯನ್ನು ‘ಕಾಲ ಬಗ್ಗಿಸುವ’ ಪರಿಣತರಿಂದ ಕಲಿತು, ಕಿಂಚಿತ್ ಮಾತ್ರ ಶಿಸ್ತನ್ನು ಅವರಿಗೆ ಕಲಿಸಬೇಕಾಗಿದೆ. ಸಮಾಜವನ್ನು ‘ಸಮಯ ಸ್ವಸ್ಥ’ವಾಗಿಸಬೇಕಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT