ಕೊರಗರ ಕಡ್ಡಾಯಿ ನಿನಾದ

7

ಕೊರಗರ ಕಡ್ಡಾಯಿ ನಿನಾದ

Published:
Updated:

ಇತ್ತೀಚೆಗೆ ಉಡುಪಿಯಲ್ಲಿ ನಡೆದ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತದ ವಿದ್ವಾನ್ ಟಿ.ಎಂ. ಕೃಷ್ಣ ಭಾಗವಹಿಸಿ, ಸಂಜೆ ಸಂಗೀತ ಕಛೇರಿ ನಡೆಸಿಕೊಟ್ಟರು. ಬಳಿಕ ಕಾರ್ಕಳದ ಬಳಿಯ ಮಾಳ ಎಂಬ ಹಳ್ಳಿಯಲ್ಲಿ ಕಲಾವಿದ ಪುರುಷೋತ್ತಮ ಅಡವೆ ಅವರ ಮಣ್ಣಪಾಪು ಮನೆಯಲ್ಲಿ ಹುಭಾಶಿಕ ಕೊರಗರ ಯುವ ಕಲಾ ತಂಡದವರಿಂದ ಡೋಲು (ಕಡ್ಡಾಯಿ) ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಕೃಷ್ಣ, ಕಲಾವಿದರೊಂದಿಗೆ ಮಾತುಕತೆ ನಡೆಸಿದರು. ತಂಡದ ರೂವಾರಿಗಳಲ್ಲೊಬ್ಬರಾದ ಗಣೇಶ ಬಾರಕೂರು ಬೇರೆ ಬೇರೆ ಸಂದರ್ಭಗಳಲ್ಲಿ ಡೋಲು ನುಡಿಸುವುದರಿಂದ ಹಿಡಿದು ಅಜಲು ಪದ್ಧತಿಯಡಿ ಇಡೀ ಸಮುದಾಯ ಶತಮಾನಗಳ ಕಾಲ ಮೇಲ್ಜಾತಿಗಳಿಂದ ಅಮಾನುಷ ತುಳಿತಕ್ಕೊಳಗಾಗಿದ್ದನ್ನು ತೆರೆದಿಟ್ಟರು. ಸಂವಾದದ ಸಂಗ್ರಹ ರೂಪ ಇಲ್ಲಿದೆ.

‘ಹಿಂದಿನ ಕಾಲದಲ್ಲಿ ಮೈಕು ಅದೆಲ್ಲ ಇಲ್ಲಾಗಿತ್ತು. ಗುತ್ತಿನ ಮನೆಯಲ್ಲಿ ಸಾವಾಗಿದೆ ಎಂದು ಇಡೀ ಊರಿಗೆ ಗೊತ್ತಾಗಬೇಕಲ್ಲ. ಅದಕ್ಕೆ ನಮ್ಮ ಕರೆದು ಡೋಲು ಬಾರಿಸಲು ಹೇಳ್ತಿದ್ದರು. ಇದೊಂದು ವಿಚಿತ್ರ. ನಮ್ಮ ಮನೆಯಲ್ಲಿ ಸಾವು ಆದ್ರೆ ನಾವು ನುಡಿಸೋದಿಲ್ಲ. ನಮ್ಮ ಹಿರಿಯರಿಗೆ ಗೊತ್ತು ಯಾಕೆ ಅಂತ. ನೋಡಿ, ಬ್ರಾಹ್ಮಣರು ಕರಿಯೂದಿಲ್ಲ ನಮಗೆ. ಶೆಟ್ಟರು, ಬಿಲ್ಲವರು, ಮೊಗವೀರರು ನಮ್ಮನ್ನು ಕರೀತಾರೆ. ಅವರ ಮನೆಯಲ್ಲಿ ಸಾವು ಆದಾಗ, ನಾವು ಹೋಗಿ ಡೋಲು ನುಡಿಸಿದರೆ ಸತ್ತವರಿಗೆ ಸ್ವರ್ಗ ಸಿಗುತ್ತದೆ ಅಂತ ನಂಬಿಕೆ ಇದೆ.ಅಜಲು ಅಂತ ಇದೆ. ಅಂದರೆ ಒಂದು ವ್ಯಾಪ್ತಿಯ ಹಳ್ಳಿಗಳಲ್ಲಿ ಕೊರಗರು ಬಿಟ್ಟಿ ಚಾಕರಿ ಮಾಡೂದು. ಆಗೆಲ್ಲ ಸರಿಯಾಗಿ ಸಂಭಾವನೆ ಕೊಡ್ತಿರಲಿಲ್ಲ. ಮನೆ ಹತ್ತಿರವೂ ಬಿಟ್ಟುಕೊಳ್ತಿರಲಿಲ್ಲ. ಅವರ ಮನೆ ಇಲ್ಲಿ ಇದ್ರೆ ನಾವು ಓ ಅಷ್ಟು ದೂರದಲ್ಲಿ ಮರದ ಕೆಳಗೆ ನಿಂತು ನುಡಿಸಬೇಕು. ಈಗೆಲ್ಲ ಸ್ವಲ್ಪ ಮನೆ ಹತ್ತಿರಕ್ಕಾದ್ರೂ ಕರೀತಾರೆ’.

‘ಅದು ಅವರಿಗೆ ಶುಭ ಅಂತೆ. ಆದರೆ ನಮಗೆ ಅಶುಭ. ಆ ಎಲ್ಲ ಹಿಂಸೆಗಳು ನಮಗೇ ಗೊತ್ತು. ಏಳು ಜನ ಹೋಗಿ ನುಡಿಸುವುದು. ಹಿಂದಿನ ಕಾಲದಲ್ಲಿ ಇಷ್ಟು ಸಣ್ಣ ಡೋಲು ತೆಕಂಡು ಹೋಗ್ತಿರಲಿಲ್ಲ. ತುಂಬ ದೊಡ್ಡದು. ನಮಗೆಲ್ಲ ಎತ್ತಕ್ಕೆ ಆಗೂದಿಲ್ಲ ಅಷ್ಟು ದೊಡ್ಡದು. ಈಗಲೂ ಸಾವಿನ ಮನೆಗೆ ತೆಕ್ಕಂಡು ಹೋಗೋ ಡೋಲು ಬೇರೆಯೇ. ಅದನ್ನು ಜಾತ್ರೆ, ವೇದಿಕೆ ಇತ್ಯಾದಿ ಕಾರ್ಯಕ್ರಮಕ್ಕೆ ಬಳಸೋದಿಲ್ಲ’.

‘ಸಾವಿನ ಮನೆಯ ಡೋಲು ಹರಿದುಹೋದರೂ ಈ ಡೋಲನ್ನು ತೆಕ್ಕಂಡು ಹೋಗೂದಿಲ್ಲ. ಬೇರೆಯವರ ಮನೆಗೆ ಹೋಗಿ, ಅದೇ ಡೋಲನ್ನು ತೆಕ್ಕಂಡು ಹೋಗ್ತೇವೆ. ಮತ್ತೆ ಸಾವಿನ ಮನೆಯಿಂದ ಬಂದ ತಕ್ಷಣ ಡೋಲನ್ನು ಹಂಗೇ ಒಳಗೆ ತೆಕ್ಕಳೋದಿಲ್ಲ. ಅವರು ನಮ್ಮನ್ನು ಕಂಡ್ರೆ ಹ್ಯಾಗೆ ಮಡಿಮೈಲಿಗೆ ಮಾಡ್ತಾರೋ ಹಂಗೆ ನಮಗೂ ಅವರು ಮೈಲಿಗೆಯೇ. ತೆಂಗಿನಕಾಯಿ ಒಡೆದು, ಆ ಕಾಯಿ ನೀರು ಡೋಲಿಗೆ ಪ್ರೋಕ್ಷಣೆ ಮಾಡಿ ಶುದ್ಧ ಮಾಡಿ ಒಳಗೆ ತೆಕ್ಕೋಳ್ತೇವೆ’

‘ಒಮ್ಮೆ ನಮ್ಮ ತಂದೆಯವರೊಟ್ಟಿಗೆ ಅಂಬಲಪಾಡಿಯಲ್ಲಿ ಸಾವಿನ ತಕ್ಕು ನುಡಿಸಲು ಹೋಗಿದ್ದು ನನಗಿನ್ನೂ ನೆನಪಿದೆ. ನನಗೆ ಆಗ ಸುಮಾರು ಹದಿನಾರು ವರ್ಷ. ನಮಗೆ ಮನೆಯಿಂದ ದೂರ ಇದ್ದ ಒಂದು ಹಳೇ ಕೊಟ್ಟಿಗೆಯಲ್ಲಿ ನಿಂತು ನುಡಿಸಕ್ಕೆ ಹೇಳಿದ್ರು. ಹೊರಗೆ ಧೋ... ಅಂತ ಮಳೆ. ಅದು ಕೋಳಿ ಮೊಟ್ಟೆ ಇಡೂ ಜಾಗ. ನಮಗೆ ಅಲ್ಲಿ ನಿಲ್ಲಲಿಕ್ಕೂ ಆಗದು. ಅಷ್ಟು ವಾಸನೆ, ಕೆಂಜಿರುವೆ. ಆ ಹಿಂಸೆ ಹೇಳತೀರದು. ಸಂಜೆಯಿಂದ ಮರುದಿನ ಬೆಳಿಗ್ಗೆವರೆಗೆ ಅಲ್ಲೇ ನಿಂತು ಬಾರಿಸಿದ್ದು. ಮಲಗುವುದು ಬಿಡಿ, ಅಲ್ಲಿ ಕೂರಲಿಕ್ಕೂ ಜಾಗ ಇಲ್ಲ. ಒಂದಾ ಎರಡಾ ಆ ಹಿಂಸೆ, ಅವಮಾನ ಎಲ್ಲ’

ಸಾವಿನ ಮನೆಯಲ್ಲಿ ಡೋಲು ನುಡಿಸುವಾಗ ಅನುಭವಿಸಿದ ಕ್ರೌರ್ಯ, ಹಿಂಸೆ, ನೋವನ್ನು ಹೇಳುತ್ತಿದ್ದ ಗಣೇಶ ಬಾರಕೂರರ ದನಿಯಲ್ಲಿ ತಣ್ಣನೆಯ ಆಕ್ರೋಶವಿತ್ತು. ಅವರ ಮಾತುಗಳಿಗೆ ಕಿವಿಯಾದವರು ಟಿ.ಎಂ. ಕೃಷ್ಣ ಮತ್ತು ಚೆನ್ನೈನಿಂದ ಬಂದಿದ್ದ ಕಲಾ ವಿಮರ್ಶಕ ಸದಾನಂದ ಮೆನನ್. ಅಮಾನುಷ ಜಾತಿ ಪದ್ಧತಿಯ ಕಬಂಧಬಾಹುವಿನಲ್ಲಿ ಸಂಗೀತ ಕ್ಷೇತ್ರ ಹ್ಯಾಗೆ ಚಿನ್ನದ ಪಂಜರದ ಗಿಳಿಯಾಗಿದೆ ಎಂದು ನೇರಾನೇರ ಮಾತನಾಡುವ ಛಾತಿಯ ಕೃಷ್ಣ ಗಮನವಿಟ್ಟು ಆಲಿಸುತ್ತಿದ್ದರು.

ಗಣೇಶರ ಜೊತೆಗಿದ್ದ ಹುಭಾಶಿಕ ತಂಡದವರು ಸಾವಿನ ತಕ್ಕು ನುಡಿಸಿ ತೋರಿಸಿದರು. ನಂತರ ಕೊರಗಜ್ಜನಿಗೆ ಧಾರ್ಮಿಕ ಅಥವಾ ಶುಭ ಕಾರ್ಯ ಮಾಡುವಾಗ ಶುರುವಿಗೆ ನುಡಿಸುವುದನ್ನು ತೋರಿಸಿದರು.

‘ಮತ್ತೆ ಮದುವೆಯಾಗುವಾಗ ಗಂಡಿನ ಮನೆಯಿಂದ ದಿಬ್ಬಣ ಹೋಗುವಾಗ, ಗೊತ್ತಾಗಬೇಕಲ್ಲ ಹೆಣ್ಣಿನ ಮನೆಯವರಿಗೆ ದಿಬ್ಬಣ ಬರ್ತಾ ಇದೆ... ಆಗ ನುಡಿಸುವ ತಕ್ಕು ಬೇರೆಯದೆ. ನೋಡಿ, ಬೇರೆ ಎಲ್ಲ ಸಮುದಾಯಗಳಲ್ಲಿ ಹೆಣ್ಣುಮಗು ಹುಟ್ಟಿದರೆ ಏನೋ ಒಂದು ತಿಳಿದುಕೊಳ್ತಾರೆ, ಆದ್ರೆ ಕೊರಗ ಸಮುದಾಯದಲ್ಲಿ ಮಾತ್ರ ಹೆಣ್ಣುಮಗುವಿಗೆ ಹೆಚ್ಚು ಪ್ರಾಧಾನ್ಯ. ಹೆಣ್ಣು ಹುಟ್ಟಿದರೆ ನಾಮಕರಣ ಸಂದರ್ಭದಲ್ಲಿ ಮಗುವಿನ ತಂದೆ, ತಾಯಿ, ಎರಡೂ ಕಡೆಯ ಕುಟುಂಬದವರು ಸೇರಿ ಈ ತಕ್ಕನ್ನು ನುಡಿಸ್ತಾರೆ. ಈಗ ಹಗಲು ಮಾಡುತ್ತಾರೆ. ಮೊದಲೆಲ್ಲ ರಾತ್ರಿ ನುಡಿಸಿ ಕುಣಿದು, ಆಮೇಲೆ ನಾಮಕರಣ ಮಾಡುತ್ತಿದ್ದೆವು’ ಹೀಗೆ ಗಣೇಶರು ವಿವರಿಸುತ್ತಿದ್ದಂತೆ ತಂಡದವರು ಎರಡೂ ತಕ್ಕನ್ನು ನುಡಿಸಿ ತೋರಿಸಿದರು.

‘ನಮ್ಮ ಸಮುದಾಯದಲ್ಲಿ ಕಲಹ ಆದಾಗ, ಹಿರಿಯರು, ಯಜಮಾನರು ಇದ್ದವರು ಎಲ್ಲರನ್ನು ಸೇರಿಸಿ ರಾಜಿ ಪಂಚಾಯಿತಿ ಮಾಡಿಸ್ತಾರೆ. ಅದೆಲ್ಲ ಆದ ತಕ್ಷಣ ಹಿಂದೆಲ್ಲ ಬೇಟೆಯಾಡಿ ಆಮೆ ಬೇಟೆ ಆಡಿ, ಅಡುಗೆ ಮಾಡಿ, ಊಟಕ್ಕೆ ಮೊದಲು ಈ ತಕ್ಕನ್ನು ನುಡಿಸಿ, ಕುಣಿದು ಆಮೇಲೆ ಊಟ ಮಾಡುವುದು. ಹಿಂದೆಲ್ಲ ಇತ್ತು ಆ ಪದ್ಧತಿ. ಈಗ ಇಲ್ಲ’. ಈಗ ತಂಡದವರು ರಾಜಿ ಪಂಚಾಯಿತಿಯ ತಕ್ಕನ್ನು ನುಡಿಸಿದರು.

‘ಇದೆಲ್ಲ ಹಳೇ ತಕ್ಕು ಅಂತ ಜನ ಎಲ್ಲ ತಿರಸ್ಕಾರ ಮಾಡಿದ್ರು. ಆಗ ನಾವೇನು ಮಾಡಿದೆವು ಅಂದರೆ... ಇದಕ್ಕೆ ಸ್ವಲ್ಪ ಹೊಸದು ಸೇರಿಸಿದೆವು. ಅಂದರೆ ಹಳೇದು ಇಟ್ಟುಕೊಂಡೆ ಸ್ವಲ್ಪ ತೀಡಿದೆವು’

‘ಹೀಗೆ ಮಾಡಿ ಅಂತ ಯಾರಾದರೂ ಕೇಳಿದರೇ ಅಥವಾ ನೀವೇ ಮಾಡಿಕೊಂಡಿದ್ದಾ...’ ಕೃಷ್ಣರಿಗೆ ಕುತೂಹಲ.

‘ಯಾರೂ ಹೇಳಿದ್ದಲ್ಲ... ನಮಗೆ ಆಲೋಚನೆಗಳು ಹೇಗೆ ಬಂತು ಅಂದರೆ... ಜನ ನಮ್ಮನ್ನು ತಿರಸ್ಕಾರ ಮಾಡಿದ್ರು. ಏನು, ಇದು ಕೇಳಿದ್ದೇ ಕೇಳೂದು ಅಂತ. ಸಾಂಪ್ರದಾಯಿಕ ತಕ್ಕನ್ನು ಬಿಡದೆ ಅದಕ್ಕೆ ಹೊಸದನ್ನು ಸೇರಿಸಿದೆವು. ಈಗ ಜನರಿಗೆ ಹೊಸದಾಗಿದೆ. ಜಾತ್ರೆ, ವೇದಿಕೆ ಕಾರ್ಯಕ್ರಮಗಳಿಗೆ ಕರೀತಾರೆ’

‘ಡೋಲಿಗೆ ಬಳಸುವ ಚರ್ಮ ಯಾವುದರಿದ್ದು?’

‘ದನ ಅಥವಾ ಎತ್ತಿನದು. ಆದರೆ, ಎಳೆಯದು ಅಥವಾ ಮುದಿ ದನದ್ದು ಸರಿಹೋಗೂದಿಲ್ಲ. ಚರ್ಮ ತುಂಬಾ ತೆಳ್ಳಗೆ. ವಯಸ್ಕ ದನ ಅಥವಾ ಎತ್ತಿನದ್ದು ಆಗಬೇಕು. ಆದರೆ, ಈಗ ಮೂರು ನಾಕು ವರ್ಷದಿಂದ ಸತ್ತ ದನ ಅಥವಾ ಎತ್ತಿನ ಚರ್ಮ ಸಿಗೂದು ಕೂಡ ಕಷ್ಟವಾಗಿದೆ. ಯಾಕೆ ಅಂತ ಗೊತ್ತಲ್ಲ ನಿಮಗೆ. ಸತ್ತ ನಂತರ ಮಣ್ಣು ಮಾಡತಾರಲ್ಲ. ಚರ್ಮ ಮಣ್ಣು ಪಾಲಾದ್ರೆ ಅಡ್ಡಿಯಿಲ್ಲ ಅವರಿಗೆ. ಆದರೆ, ನಾವು ತಕ್ಕೊಳ್ಳಬಾರದು. ತುಂಬ ಕಷ್ಟ ಇದೆ. ಆ ದಳ ಈ ದಳದವರು ಬಂದು ಗಲಾಟೆ!’ ಎಂದು ಗಣೇಶರು ಬೇಸರದಿಂದ ಹೇಳಿದರು.

‘ಚರ್ಮ ಸಿಗಲೇ ಇಲ್ಲ ಎಂದಾದರೆ ಏನು ಮಾಡ್ತೀರಿ...’

‘ಏನೇ ಆದರೂ ಪ್ಲಾಸ್ಟಿಕ್ ಅಥವಾ ಬೇರೆ ಏನೂ ಬಳಸಬಾರದು ಎಂದು ನಿರ್ಧಾರ ಮಾಡಿದ್ದೇವೆ. ಮುಂದೆ ಹಂಗೇನಾದರೂ ಆದರೆ ಇದನ್ನು ಹಂಗೇ ಇಡ್ತೇವೆ ನಿಜ. ಆದರೆ, ಚರ್ಮದ ಬದಲಿಗೆ ಬೇರೆ ಬಳಸೂದಿಲ್ಲ’ ತಂಡದವರು ಗಟ್ಟಿಯಾಗಿ ಹೇಳಿದರು.

ನಂತರ ಕೃಷ್ಣರ ಆಸಕ್ತಿ ತಿರುಗಿದ್ದು ಡೋಲು ನುಡಿಸುವ ಶೇಖರ ಬಾರಕೂರು, ಶರತ್ ಕುಂಭಾಶಿ, ಚಂಡೆ ನುಡಿಸುವ ಗಣೇಶ ವಂಡಾರು, ಕೊಳಲು ನುಡಿಸುವ ವಿಜಯ ಕಳತ್ತೂರು ಮತ್ತು ತಾಳ ಹಿಡಿದ ನವೀನ ಬಾರಕೂರು, ಈ ಐವರು ಹ್ಯಾಗೆ ಒಬ್ಬರಿಗೊಬ್ಬರು ಸಂವಹನ ಮಾಡಿಕೊಂಡು ನುಡಿಸುತ್ತಾರೆ ಎಂದು.

ಕೃಷ್ಣ ಕೇಳಿದರು, ‘ಇವರು ನುಡಿಸುವಾಗ, ಈಸ್ ದೇರ್ ಎ ಸಿಸ್ಟಂ ಆಫ್ ಕೀಪಿಂಗ್ ಟೈಮಿಂಗ್... ಅಂದ್ರೆ ಇಲ್ಲಿ ಎ ಕಾನಸ್ಟಂಟ್ ಟೈಮ್ ಗೋಯಿಂಗ್, ಈಸ್ ದೇರ್ ಸಮ್ ವಿಶುವಲ್ ಕ್ಲೂ ಆರ್ ಈಸ್ ದೇರ್ ಸಮ್ ವೇ ಆಫ್ ಸಿಸ್ಟಂ ಟು ಫಾಲೋ’

‘ನಮಗೆ ಎಲ್ಲ ತಲೇಲಿ ಇರ್ತದೆ, ಒಬ್ಬರಿಗೊಬ್ಬರು ನೋಡದೆ ಮಾಡ್ತೇವೆ’ ಡೋಲು ಮತ್ತು ಚಂಡೆ ನುಡಿಸುತ್ತಿದ್ದವರು ಈಗ ದನಿಗೂಡಿಸಿದರು.

‘ದೇರ್ ಈಸ್ ಸಮ್ ಅಬಸ್ಟ್ರಾಕ್ಟ್ ವೇ ಆಫ್ ಬ್ರಿಂಗಿಂಗ್ ಟುಗೆದರ್’ ಕೃಷ್ಣ ಅಚ್ಚರಿಯಿಂದ ಹೇಳಿದರು.

‘ನಾವೆಲ್ಲ ನಮ್ಮ ಹಿರಿಯರು ನುಡಿಸಿದ್ದನ್ನು ಕೇಳಿ ಹಂಗೇ ಕಲಿತಿದ್ದೇವೆ. ಆದರೆ, ಈಗ ಹುಡುಗರಿಗೆ ಕಲಿಸುವಾಗ, ವೇದಿಕೆಯಲ್ಲಿ ನುಡಿಸುವಾಗ, ಕೈಸನ್ನೆ, ಕಣ್ಸನ್ನೆ ಮಾಡ್ಲೇಬೇಕಾಗುತ್ತೆ. ಯಾವುದು ಆದ ಮೇಲೆ ಯಾವುದು ಎಂದು ಸನ್ನೆಯಲ್ಲೇ ಹೇಳ್ತೇವೆ’ ಗಣೇಶರು ವಿವರಿಸಿದರು.

‘ವೇದಿಕೆಗೆ ನುಡಿಸುವುದು ಎಂದು ಮೊದಲು ನುಡಿಸಿದರಲ್ಲ. ಅದರಲ್ಲಿ ಕ್ಲಿಯರ್ ಪ್ಯಾಟರ್ನ್ ಇದೆ. ಆದ್ರೆ ಈ ಸಾವಿನ ತಕ್ಕು ನುಡಿಸಿದರಲ್ಲ, ಇದರಲ್ಲಿ ನಿಗದಿತ ಟೈಮಿಂಗ್ ಅಥವಾ ಪ್ಯಾಟರ್ನ್ ಇಲ್ಲ. ನೋಡಿ, ಇವರ ತಲೆಯಲ್ಲಿ ಅದು ಡಿಫಾಲ್ಟ್ ಆಗಿ ಕೂತುಬಿಟ್ಟಿದೆ’ ಕೃಷ್ಣ ಉಳಿದವರಿಗೆ ವಿವರಿಸಿ ನಕ್ಕರು.

‘ಶಿವರಾಮ ಕಾರಂತರು ಇದೇ ರಿದಮ್ ಅನ್ನು ಅವರ ಚಕ್ರವ್ಯೂಹ ಯಕ್ಷಗಾನ ಪ್ರಯೋಗದಲ್ಲಿ ಅಭಿಮನ್ಯು ಸತ್ತ ದುಃಖದ ಸನ್ನಿವೇಶದಲ್ಲಿ ರೂಪಕತಾಳದಲ್ಲಿ ಬಳಸಿಕೊಂಡಿದ್ದಾರೆ ಅಂತ ಸಂಜೀವ ಸುವರ್ಣರು ಹೇಳ್ತಾರೆ’ ಎಂದು ಜೊತೆಗಿದ್ದ ಯಕ್ಷಗಾನ ಕಲಾವಿದರೊಬ್ಬರು ವಿವರಿಸಿದರು.

ಇನ್ನೊಬ್ಬ ಕಲಾವಿದರು ‘ಷಡುರಥರು ಒಂದಾಗಿ ಕೊಂದರೈ ಹಸುಳೆಯನು...’ ಎಂದು ಬಾಯಲ್ಲಿ ಹೇಳುತ್ತ ರೂಪಕ ತಾಳ ತಟ್ಟಿದರು.

ಪಟಕ್ಕನೆ ಕೃಷ್ಣ ಗುರುತಿಸಿದರು. ‘ಹೌದು. ಇದು ಇದು ಸಿಕ್ಸ್ ಬೀಟ್. ಆದರೆ, ಇವರ ಡೋಲಿನ ಒಂದು ಸೌಂದರ್ಯ ಅಂದರೆ, ಬಡಿತದಲ್ಲಿ ಒಂದು ಬಗೆಯ ಇಲಾಸ್ಟಿಸ್ಟಿಸಿಟಿ ಇದೆ. ರೂಪಕತಾಳದಲ್ಲಿ ಅದು ಇಲ್ಲ. ನೀವೀಗ ರೂಪಕ ತಾಳ ಹಾಕಿ. ಅವರಿಗೆ ನುಡಿಸಲಿಕ್ಕೆ ಹೇಳಿ. ಅವರು ನುಡಿಸುವುದು ಪರಿಪೂರ್ಣವಾಗಿ ರೂಪಕತಾಳದಲ್ಲಿ ಬೀಳುವುದಿಲ್ಲ. ಅವರ ಬಡಿತ ಅವರದೇ ಆದ ಒಂದು ಸಮಯದ ಗ್ರಹಿಕೆಯಲ್ಲಿದೆ. ಅವರಿಗೆ ಗೊತ್ತು ವಾಟ್ ದಟ್ ಸೆನ್ಸ್ ಈಸ್... ನಮಗೆ ಗೊತ್ತಿಲ್ಲ. ನಮಗೆ ಅದು ಆಫ್ ಬೀಟ್ ಅನ್ನಿಸುತ್ತೆ. ಆದರೆ, ಅದು ಆಫ್ ಬೀಟ್ ಅಲ್ಲ. ಹಿಂಗಾಗಿ ಅವರ ನಾದ ತುಂಬ ಅದ್ಭುತವಾಗಿದೆ’ ಕೃಷ್ಣ ವಿವರಿಸಿದರು.

‘ಡೋಲು ಮತ್ತೆ ಚಂಡೆಯನ್ನು ಯಾರು ತಯಾರು ಮಾಡುತ್ತಾರೆ’ ಇದೀಗ ಎಲ್ಲರಿಗೂ ಕುತೂಹಲ.

‘ನಮ್ಮವರೇ ಮಾಡುತ್ತಾರೆ. ನಾನು ಎಲ್ಲಿಂದಾದರೂ ಕಷ್ಟಪಟ್ಟು ಚರ್ಮ ಹಿಡಿದುಕೊಂಡು ಬರ್ತೇನೆ. ವಿಜಯ ಕಳತ್ತೂರು ಹೀಗೆ ಅದನ್ನು ಬೆಳಕಿಗೆ ಹಿಡಿದು ನೋಡಿದವರೆ, ಇದಾಗೂದಿಲ್ಲ ಅಂತಾರೆ! ದುಡ್ಡು ಕೊಟ್ಟಿದ್ದು ದಂಡ. ಮತ್ತೆ ಕೆಲವು ಸಲ ಚೆನ್ನಾಗಿದೆ. ಇದಾಗಬಹುದು ಅಂತಾರೆ. ನಂಗೆ ಅದು ಗೊತ್ತಾಗೂದಿಲ್ಲ. ಇವರಿಗೆ ಕೈಯಲ್ಲಿ ಹಿಂಗೆ ಹಿಡಿದು ನೋಡಿದರೆ ಸಾಕು. ಎಷ್ಟು ದಪ್ಪ ಅಥವಾ ತೆಳು ಇದೆ ಅಂತ ಗೊತ್ತಾಗತದೆ. ಮತ್ತೆ ಇದಕ್ಕೆ ಬಳಸುವ ಮರ ಅಂದರೆ ಹೊನ್ನೆ ಅಥವಾ ಹಲಸು. ಯಕ್ಷಗಾನ ತಂಡದವರು ಚಂಡೆ ಮಾಡಲಿಕ್ಕೆ ಕೂಡ ನಮ್ಮ ಹತ್ರ ಬಂದು ಚರ್ಮ ತೆಕ್ಕಂಡು ಹೋಗ್ತಾರೆ. ನಾವು ಹದ ಮಾಡಿ ಇಟ್ಟಿರ್ತೇವಲ್ಲ...’ ಗಣೇಶ ವಿವರಿಸಿದರು.

ಕೊಳಲು ನುಡಿಸುವ ವಿಜಯ ಕಳತ್ತೂರರು ಸೂಕ್ತ ಬಿದಿರನ್ನು ಹುಡುಕಿಕೊಂಡು ಕೊಳಲು ಮಾಡುವುದರ ಜೊತೆಗೆ ಡೋಲು ಮತ್ತು ಚಂಡೆಯನ್ನು ಮಾಡುತ್ತಾರೆ. ‘ಇವರು ಆಲ್‍ರೌಂಡರ್’ ಎಂದು ತಂಡದವರು ಹೆಮ್ಮೆಯಿಂದ ಹೇಳುತ್ತಾರೆ.

ಯಾವ ಭಾಗದ ಚರ್ಮ ಬಳಸುತ್ತೀರಿ ಎಂದು ಕೇಳಿದ್ದಕ್ಕೆ ‘ಡೋಲಿನ ಎರಡೂ ಬದಿಗೆ ಬೆನ್ನಿನ ಭಾಗದ ಚರ್ಮ ಬಳಸ್ತೇವೆ’ ಎಂದು ತಂಡದವರು ವಿವರಿಸಿದರು.

ಕೃಷ್ಣ ಅಚ್ಚರಿಯಿಂದ ‘ಅರೆ ಹೌದಾ’ ಎನ್ನುತ್ತಾ ಹೋಗಿ ಮುಟ್ಟಿ ನೋಡಿ, ಓ ನೋಡಿ ಬೆನ್ನುಮೂಳೆ ಗುರುತು ಕಾಣುತ್ತೆ...’ ಎಂದು ಉದ್ಗರಿಸಿದರು. ಚರ್ಮವನ್ನು ಹ್ಯಾಗೆ ಮರಕ್ಕೆ ಬಿಗಿದು ಗಟ್ಟಿಗೊಳಿಸುತ್ತಾರೆ ಎಂದು ಕೇಳಿಕೊಂಡರು. ಅಷ್ಟಕ್ಕೇ ಸುಮ್ಮನಾಗದೆ ಕಲಾವಿದರಿಂದ ಒಂದು ಡೋಲನ್ನು ತೆಗೆದುಕೊಂಡು ತಮ್ಮ ಕೊರಳಿಗೆ ಹಾಕಿಕೊಂಡು ನುಡಿಸಲು ಪ್ರಯತ್ನಿಸಿದರು. ಕೊನೆಗೂ ತಂಡದವರ ನಾದಕ್ಕೆ ಸ್ವಲ್ಪ ಹತ್ತಿರ ಎನ್ನಿಸುವಂತೆ ನುಡಿಸಿಯೇ ಬಿಟ್ಟರು. ಇನ್ನುಳಿದ ಶಾಸ್ತ್ರೀಯ ಸಂಗೀತಗಾರರಿಂದ ಟಿಎಂಕೆ ತುಂಬ ಭಿನ್ನ ಎನ್ನಿಸುವುದು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ಅಪ್ಪಟ ಮನುಷ್ಯ ಎನ್ನಿಸುವುದು ಇಂತಹ ನಿಲುವುಗಳಿಂದಲೇ! 

***

–ಕಡ್ಡಾಯಿ ಬಾರಿಸುತ್ತಿರುವ ಟಿ.ಎಂ. ಕೃಷ್ಣ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !