ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶವನ್ನೂ ನೋಡು, ಕೋಶವನ್ನೂ ಓದು

Last Updated 19 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

‘ದೇಶವನ್ನಾದರೂ ನೋಡು, ಕೋಶವನ್ನಾದರೂ ಓದು’ ಎನ್ನುವುದು ಕನ್ನಡದ ಜನಪ್ರಿಯ ನಾಣ್ಣುಡಿ. ಇದು ಪುಸ್ತಕ ಓದುವ ಕಾರ್ಯಕ್ಕೆ ತಿರುಗಾಟವು ಪರ್ಯಾಯ ಎನ್ನುವ ಭಾವವನ್ನು ನಮ್ಮಲ್ಲಿ ಮೂಡಿಸಿದೆ. ಯಾವುದು ಮಾಡಿದರೂ ಆದೀತು, ಜ್ಞಾನಾರ್ಜನೆಯಾಗುತ್ತದೆ ಎಂಬ ಭಾವ ಹಲವರಿಗಿದೆ. ಆದರೆ ಸತ್ಯದ ಮಾತೆಂದರೆ ಎರಡರಿಂದಲೂ ದೊರಕುವ ಜ್ಞಾನಗಳು ಬೇರೆಯೇ ಆಗಿವೆ. ಒಂದಕ್ಕೊಂದು ಪೂರಕವಾದಾವೆಯೇ ಹೊರತು, ಪರ್ಯಾಯವಂತೂ ಆಗಲಾರವು. ಹಿಮಾಲಯದ ಕುರಿತು ಅದೆಷ್ಟೇ ಪುಸ್ತಕಗಳನ್ನು ನೀವು ಓದಿದರೂ ಹಿಮಾಲಯದಲ್ಲಿ ಅಡ್ಡಾಡಿದ ಅನುಭವವನ್ನು ನೀಡಲಾರವು.

ಕನ್ನಡದ ಹಿರಿಯ ಕವಯಿತ್ರಿ ಲಲಿತಾ ಸಿದ್ಧಬಸವಯ್ಯನವರ ಒಂದು ಸೂಕ್ಷ್ಮ ಪದ್ಯವಿದೆ. ಅದರಲ್ಲಿ ಕವಯಿತ್ರಿ ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಆಕಾಶದಲ್ಲಿ ಇದ್ದಕ್ಕಿದ್ದಂತೆಯೇ ಮೂಡಿದ ಕಾಮನಬಿಲ್ಲನ್ನು ಕಂಡು ಸಂಭ್ರಮಗೊಳ್ಳುತ್ತಾಳೆ. ಅವಳ ಬಾಲ್ಯವೇ ಕಣ್ಣಮುಂದೆ ಚೆಲ್ಲಿದಂತೆ ರೋಮಾಂಚನವಾಗುತ್ತದೆ. ಮನೆಗೆ ಬಂದ ತಕ್ಷಣ ತನ್ನ ಸಂತೋಷವನ್ನು ಹಂಚಿಕೊಳ್ಳುವ ಸಲುವಾಗಿ ಮಗಳಿಗೆ ತಾನು ಕಂಡ ಕಾಮನಬಿಲ್ಲಿನ ಕುರಿತು ಹೇಳುತ್ತಾಳೆ. ಅದಕ್ಕೆ ಒಂದಿಷ್ಟೂ ಉತ್ಸಾಹ ತೋರದ ಮಗಳು, ಕಂಪ್ಯೂಟರಿನಲ್ಲಿ ಗೂಗಲಿಸಿ ನೂರಾರು ಕಾಮನಬಿಲ್ಲುಗಳನ್ನು ಅಮ್ಮನಿಗೆ ತೋರಿಸಿ ‘ಇದೇ ಅಲ್ವಾ!’ ಎನ್ನುತ್ತಾಳೆ. ನಿರುತ್ಸಾಹಗೊಂಡ ಕವಯಿತ್ರಿ ‘ಮಗಳೇ, ಒಂದು ದಿನ ನಿನಗೆ ಇವೆರಡೂ ಬೇರೆ ಎನ್ನುವ ಸತ್ಯ ಅರಿವಾಗುತ್ತದೆ’ ಎಂದು ಹೇಳುತ್ತಾಳೆ. ಸಚಿತ್ರಪೂರ್ಣ ಪುಸ್ತಕ ಸಿಕ್ಕರೂ ಅದು ಜೀವಂತ ಅನುಭವವನ್ನು ನೀಡಲಾರದು.

ಜ್ಞಾನವನ್ನು ಹಲವು ದಾರಿಗಳ ಮೂಲಕ ಪಡೆಯಬಹುದು. ಬಹುತೇಕ ಜ್ಞಾನದ ಅಂತಿಮ ಗುರಿ ಒಂದೇ ಎಂದು ತತ್ವಜ್ಞಾನಿಗಳು ಹೇಳುತ್ತಾರೆ. ಆದರೆ ಅವು ಕ್ರಮಿಸುವ ಮಾರ್ಗಗಳು ನಿಸ್ಸಂದೇಹವಾಗಿ ಬೇರೆಯೇ ಆಗಿರುತ್ತವೆ. ಒಂದಕ್ಕೊಂದು ಅಲ್ಲೊಮ್ಮೆ ಇಲ್ಲೊಮ್ಮೆ ಎಡತಾಕಬಹುದೇನೋ - ಬೇರೆ ಬೇರೆ ವಿಮಾನ ದಲ್ಲಿ ನ್ಯೂಯಾರ್ಕಿಗೆ ಹೋಗುವ ಯಾರಾದರೂ ಯಾವುದೋ ಅಪರಿಚಿತ ವಿಮಾನ ನಿಲ್ದಾಣದಲ್ಲಿ ಎದುರಾದಂತೆ! ಆದರೆ ಪ್ರತಿಯೊಬ್ಬರ ಪಯಣದ ಅನುಭವವೂ ಬೇರೆ. ಆದ್ದರಿಂದಲೇ ಚೀನಾದ ನಾಣ್ಣುಡಿಯೊಂದು ಹೆಚ್ಚು ಸಮಂಜಸವೆನ್ನಿಸುತ್ತದೆ. ಅದು ‘ಹತ್ತು ಸಾವಿರ ಪುಸ್ತಕಗಳನ್ನು ಓದುವೆಯಾದರೆ, ಕನಿಷ್ಠ ಹತ್ತು ಸಾವಿರ ಮೈಲಿಗಳಷ್ಟು ನಡೆ’ ಎನ್ನುತ್ತದೆ. ಓದು ಮತ್ತು ನಡೆಗಳೆರಡನ್ನೂ ಮುಖ್ಯವಾಗಿಸುವ ಮನೋಭಾವ ಚೀನಾ ಜನರದ್ದು. ಆದರೆ ಅಂತಹ ನಾಣ್ಣುಡಿಯಿದ್ದೂ, ಚೀನೀಯರು ಗಡಿ ದಾಟದಂತೆ ತಡೆಯುವ ರಾಜಮನೆತನಗಳು ಮತ್ತು ಸರ್ಕಾರಗಳು ಅಲ್ಲಿ ನೂರಾರು ವರ್ಷ ಆಡಳಿತ ಮಾಡಿದ್ದು ನಿಜಕ್ಕೂ ಶೋಚನೀಯ ಸಂಗತಿ.

ಹನ್ನೊಂದನೇ ಶತಮಾನದಲ್ಲಿ ಭಾರತಕ್ಕೆ ಬಂದ ಅಲ್‌-ಬಿರುನಿ ಎಂಬ ಪ್ರವಾಸಿ ಬಹು ವಿಶಿಷ್ಟ ಸಂಗತಿಯೊಂದನ್ನು ಹೇಳುತ್ತಾನೆ. ಅವನಿಗೆ ಜಗತ್ತಿನಲ್ಲಿ ತುಲಾನಾತ್ಮಕ ಅಧ್ಯಯನದ ಪಿತಾಮಹ ಎಂದು ಕರೆಯುತ್ತಾರೆ. ಹಲವು ಜ್ಞಾನಶಾಖೆಗಳಲ್ಲಿ ವಿದ್ವಾಂಸನಾದ ಈ ಪಂಡಿತ ಮೂಲತಃ ಉಜ್ಬೆಕಿಸ್ತಾನ್‌ನವನಾದರೂ ಅನಂತರ ಅಲ್ಲಾವುದ್ದೀನ್ ಖಿಲ್ಜಿಗೆ ಸೆರೆ ಸಿಕ್ಕಿ ಭಾರತಕ್ಕೆ ಬರುತ್ತಾನೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ ಸುಮಾರು 13 ವರ್ಷ ಅಡ್ಡಾಡುತ್ತಾನೆ. ಭಾಷೆ, ವಿಜ್ಞಾನ, ಖಗೋಳ ಶಾಸ್ತ್ರ, ಜ್ಯೋತಿಷ್ಯ, ಧರ್ಮ - ಹೀಗೆ ಹಲವು ಜ್ಞಾನ ಪ್ರಕಾರಗಳಲ್ಲಿ ಆಸಕ್ತಿಯುಳ್ಳ ಇವನು, ಈ ವಿಷಯಗಳಲ್ಲಿ ಭಾರತದ ಮನೋಭಾವವನ್ನು ಅರಿಯುವ ಸಲುವಾಗಿಯೇ ಸಂಸ್ಕೃತ ಭಾಷೆಯನ್ನು ಕರಗತ ಮಾಡಿಕೊಳ್ಳುತ್ತಾನೆ.

ಅನಂತರ ಆರ್ಯಭಟ, ವರಾಹಮಿಹೀರ - ಮುಂತಾದ ಎಲ್ಲಾ ಭಾರತದ ಆದಿಮ ವಿಜ್ಞಾನಿಗಳ ಗ್ರಂಥಗಳನ್ನು ಅಧ್ಯಯನ ಮಾಡುತ್ತಾನೆ. ಅನಂತರ ಅವುಗಳ ವಿಸ್ತೃತ ಚರ್ಚೆಯನ್ನು ಭಾರತದ ಪಂಡಿತರ ಜೊತೆಯಲ್ಲಿ ಅವರದೇ ಭಾಷೆಯಾದ ಸಂಸ್ಕೃತದಲ್ಲಿ ಮಾಡುತ್ತಾನೆ. ತನ್ನ ಅನುಭವಗಳನ್ನು ‘ತಾರೀಖ್ ಆಲ್-ಹಿಂದ್’ (ಹಿಂದೂಸ್ತಾನದ ಚರಿತ್ರೆ) ಪುಸ್ತಕದಲ್ಲಿ ಬರೆದಿದ್ದಾನೆ. ಅದರಲ್ಲಿ ಕೆಳಗಿನ ಅರ್ಥ ಬರುವಂತಹ ಮಾತುಗಳನ್ನು ಒಂದೆಡೆ ಹೇಳುತ್ತಾನೆ. ‘ಇಲ್ಲಿಯ ಪಂಡಿತರು ಸಾಕಷ್ಟು ಜ್ಞಾನಿಗಳು ಅನ್ನುವುದು ಸತ್ಯ. ಆದರೆ ಸಮಸ್ಯೆಯೆಂದರೆ ಇವರು ಜಗತ್ತಿನೆಲ್ಲೆಡೆ ಪ್ರವಾಸವನ್ನು ಮಾಡುವುದಿಲ್ಲ. ತಾವಿದ್ದ ಸ್ಥಳದಲ್ಲಿಯೇ ಇರುತ್ತಾರೆ. ಆ ಕಾರಣದಿಂದಾಗಿ ಇವರಿಗೆ ಹೊಸತನ್ನು ಸ್ವೀಕರಿಸುವ ಮತ್ತು ಗೌರವಿಸುವ ವಿಶಾಲ ಮನೋಭಾವ ಇಲ್ಲ. ಹೊರಗಿನವರು ಕುಲೀನರು (ಮ್ಲೇಚ್ಛರು) ಎನ್ನುವ ಅಸಡ್ಡೆ ಅವರಲ್ಲಿದೆ. ಆ ಕಾರಣದಿಂದ ನಮ್ಮನ್ನು ಮುಟ್ಟಿಸಿಕೊಳ್ಳದೆ, ಕೀಳಾಗಿ ಕಾಣುತ್ತಾರೆ. ಇಲ್ಲಿ ಜ್ಞಾನಲೋಕ ಸ್ಥಗಿತಗೊಂಡಿದೆ.’ ಲೋಕದರ್ಶನವಿಲ್ಲದ ಪಾಂಡಿತ್ಯವು ಶುಷ್ಕವಾಗುತ್ತದೆಂಬ ಕಳಕಳಿ ಅವನ ಮಾತಿನಲ್ಲಿ ಕಾಣುತ್ತದೆ.

ಸುಮಾರು ಹದಿನೆಂಟನೆಯ ಶತಮಾನದ ಮಧ್ಯಭಾಗದವರೆಗೂ ಭಾರತ ಮತ್ತು ಚೀನಾ ದೇಶಗಳಲ್ಲಿಯೇ ಪ್ರಪಂಚದ ಶೇಕಡಾ 80 ಭಾಗ ಸಂಪತ್ತು ಶೇಖರಣೆಗೊಂಡಿತ್ತು. ಪಶ್ಚಿಮ ದೇಶದ ಬಲಾಢ್ಯ ರಾಜರು ಕೊಳ್ಳೆ ಹೊಡೆಯಲು ಹುಡುಕಿಕೊಂಡು ಪೂರ್ವದೆಡೆಗೇ ಬರುತ್ತಿದ್ದರು. ಭಾರತದವರು ಹಾಗೆ ಪಶ್ಚಿಮದೆಡೆಗೆ ಹೋದ ನಿದರ್ಶನಗಳು ಇಲ್ಲವೇ ಇಲ್ಲ, ಅದರ ಅವಶ್ಯಕತೆಯೂ ಇವರಿಗೆ ಇರಲಿಲ್ಲ. ಆದರೆ ಅನಂತರದ ಶತಮಾನಗಳಲ್ಲಿ ಭಾರತ ಮತ್ತು ಚೀನಾ ಅವನತಿಯ ಕಡೆ ಮುಖ ಮಾಡಿದವು. ಈ ಪ್ರಕ್ರಿಯೆಗೆ ಹದಿನೈದು-ಹದಿನಾರನೆಯ ಶತಮಾನದಲ್ಲಿಯೇ ಪಶ್ಚಿಮದ ದೇಶಗಳು ಬುನಾದಿ ಹಾಕಿದವೆಂದು ಇತಿಹಾಸಜ್ಞರು ಅಭಿಪ್ರಾಯ ಪಡುತ್ತಾರೆ. ಈ ಕಾಲಘಟ್ಟದಲ್ಲಿ ಪಶ್ಚಿಮದ ಬಹುತೇಕ ದೇಶಗಳಲ್ಲಿ (ಮುಖ್ಯವಾಗಿ ಯೂರೋಪ್) ಸಾಹಸದ ಪ್ರವಾಸಗಳನ್ನು ಕೈಗೊಳ್ಳುವ ಮನೋಭಾವ ಬೆಳೆಯಿತು.

ಕೊಲಂಬಸ್ ಪಶ್ಚಿಮದ ಕಡೆಗೆ ಸಮುದ್ರಯಾನ ಮಾಡಿ, ಅಮೆರಿಕವನ್ನು ಕಂಡು ಹಿಡಿದು, ಅಲ್ಲಿಯ ಬೆಳ್ಳಿ ಮತ್ತು ಬಂಗಾರದ ಗಣಿಗಳನ್ನು ಕೊಳ್ಳೆ ಹೊಡೆಯಲು ಪ್ರಾರಂಭಿಸಿದ್ದೇ ಶ್ರೀಮಂತಿಕೆಯನ್ನು ಪಡೆಯುವ ಹೊಸದಾರಿಗಳು ಅವರಿಗೆ ತಿಳಿಯತೊಡಗಿದವು. ಸಾಮ್ರಾಜ್ಯದ ಸಂಪತ್ತನ್ನು ಹಿಗ್ಗಿಸಲು ಪಕ್ಕದ ರಾಜ್ಯದ ಮೇಲೆ ಯುದ್ಧಮಾಡಿ ಲೂಟಿ ಮಾಡುವುದೋ ಅಥವಾ ರೈತರ ಮೇಲಿನ ಸುಂಕಗಳನ್ನು ಮಿತಿಮೀರಿ ಹೆಚ್ಚಿಸುವುದೋ ಮಾತ್ರ ದಾರಿಯಲ್ಲ, ಅಪರಿಚಿತ ಭೂಭಾಗಗಳನ್ನು ಪತ್ತೆ ಹಚ್ಚಿ, ಅಲ್ಲಿಯ ಸಂಪತ್ತನ್ನು ತಂದರೂ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಂಡರು. ಈ ಜ್ಞಾನೋದಯ ರಾಜ-ಮಹಾರಾಜರಿಗೆ ಮಾತ್ರವಲ್ಲ, ಸಾಮಾನ್ಯ ಪ್ರಜೆಗಳಿಗೂ ಅರ್ಥವಾಯ್ತು. ಆದ್ದರಿಂದಲೇ ಸಾಮಾನ್ಯರೂ ಸಮುದ್ರಯಾನದ ಸಾಹಸಗಳಿಗೆ ಹಣ ಹೂಡಲು ಮುಂದೆ ಬರಲು ಪ್ರಾರಂಭಿಸಿದರು. ರಾಜನ ಬಂಡವಾಳ ಹೂಡಿಕೆ ಇಲ್ಲದೆ ಎಷ್ಟೋ ಸಮುದ್ರಯಾನಗಳು ನಡೆದವು. ಅಂತಹ ಪ್ರವಾಸಗಳಿಂದ ಬರುವ ಲಾಭವನ್ನು ತಮ್ಮ ಹೂಡಿಕೆಗೆ ತಕ್ಕಂತೆ ಹಂಚಿಕೊಳ್ಳುವ ಕಾನೂನು ಕ್ರಮ ಅಲ್ಲಿ ಅಭಿವೃದ್ಧಿ ಹೊಂದಿತು. ಆ ಕಾರಣದಿಂದಲೇ ಪ್ರವಾಸ ಮಾಡಿ, ಸಂಪತ್ತು ಮತ್ತು ಜ್ಞಾನ ಬೆಳೆಸುವ ಮನೋವೃತ್ತಿ ಅಲ್ಲಿ ಬೆಳೆಯತೊಡಗಿತು.

ಸಂಪತ್ತಿನ ಜೊತೆಗೆ ಲೋಕಸಂಚಾರದಿಂದಾಗಿ ವಿಜ್ಞಾನವೂ ಬೆಳೆಯತೊಡಗಿತು. ಈ ಎಲ್ಲಾ ಕಾರಣಗಳಿಂದಲೇ ಇಡೀ ಪ್ರಪಂಚವೇ ಯೂರೋಪಿಯನ್ನರ ಕಪಿಮುಷ್ಟಿಗೆ ಸಿಕ್ಕಿ ಹೋಯಿತು ಎಂದು ಪಂಡಿತರು ಅಭಿಪ್ರಾಯಪಡುತ್ತಾರೆ. ಯುರೋಪಿಯನ್ನರ ವಸಾಹತುಶಾಹಿ ಮನೋಭಾವವನ್ನು ನಾವು ಎಷ್ಟೇ ಕಟುವಾಗಿ ಟೀಕಿಸಿದರೂ ಅವರ ಅನ್ವೇಷಣೆಯ ಸಾಹಸಗಳನ್ನು ನಿರ್ಲಕ್ಷ್ಯ ಮಾಡುವುದು ಅಸಾಧ್ಯ. ಇಂತಹ ಅನ್ವೇಷಣೆಯ ಗುಂಪಿನೊಂದಿಗೆ ಸಮುದ್ರಯಾನ ಮಾಡಿದ್ದರಿಂದಲೇ ಡಾರ್ವಿನ್‌ನಂತಹ ಬಡವನೂ ‘ವಿಕಾಸವಾದ’ವನ್ನು ಅರ್ಥ ಮಾಡಿಕೊಂಡು ಜಗತ್ತಿಗೆ ತಿಳಿಸಲು ಸಾಧ್ಯವಾಗಿದ್ದು.

ಮೆಕ್ಸಿಕೋದ ಮೂಲ ನಿವಾಸಿಗಳ ಅಜ್‌ಟೆಕ್ ಸಾಮ್ರಾಜ್ಯ ಕುಸಿದು ಹೋಗಿದ್ದಕ್ಕೆ ಲೋಕಜ್ಞಾನವಿಲ್ಲದ್ದೂ ಒಂದು ಮುಖ್ಯ ಕಾರಣವಾಗಿದೆ. ಕೊಲಂಬಸ್‌ನು ಅಮೆರಿಕ ಕಂಡು ಹಿಡಿದ ನಂತರ ಸ್ಪೇನ್‌ನವರು ಯಥೇಚ್ಛವಾಗಿ ಅಲ್ಲಿಗೆ ಹೋಗತೊಡಗಿದರು. ಅಲ್ಲಿ ಕಸದಂತೆ ಬಿದ್ದಿದ್ದ ಬಂಗಾರ ಮತ್ತು ಬೆಳ್ಳಿಯನ್ನು ಕೊಳ್ಳೆ ಹೊಡೆದು ತಮ್ಮ ದೇಶಕ್ಕೆ ತರತೊಡಗಿದರು. ಅಜ್‌ಟೆಕ್‌ ಜನಾಂಗ ಸಾಮಾಜಿಕವಾಗಿ ಸ್ಪೇನ್‌ನವರಿಗಿಂತಲೂ ಮುಂದುವರಿದಿದ್ದರೂ ಲೋಕದರ್ಶನವಿಲ್ಲದ ಇವರಿಗೆ ಈ ಸ್ಪೇನ್ ಜನರ ಹಳದಿ ಲೋಹದ ಮೋಹ ಯಾಕೆಂದು ತಿಳಿಯುವುದಿಲ್ಲ.

ಅವರೊಮ್ಮೆ ಅತ್ಯಂತ ಮುಗ್ಧವಾಗಿ ‘ಈ ಲೋಹವನ್ನು ತೆಗೆದುಕೊಂಡು ಏನು ಮಾಡುತ್ತೀರಿ? ಇದರಿಂದ ಆಯುಧಗಳನ್ನು ಮಾಡಲೂ ಬರುವುದಿಲ್ಲ, ತಿನ್ನಲೂ ಬರುವುದಿಲ್ಲ, ಬಟ್ಟೆ ನೇಯಲೂ ಬರುವುದಿಲ್ಲ. ಒಂದಿಷ್ಟು ಆಭರಣಗಳನ್ನು ಮಾಡಿಕೊಳ್ಳಬಹುದು ಎಂಬುದು ಬಿಟ್ಟರೆ ಅದರಿಂದ ಯಾವ ಉಪಯೋಗವೂ ಇಲ್ಲ. ಅದರ ಬದಲು ಕೋಕೋ ಬೀಜಗಳೋ, ಆಹಾರ ಸಾಮಾಗ್ರಿಗಳೋ ನಿಮಗೆ ಹೆಚ್ಚು ಉಪಯೋಗಿ ಅಲ್ಲವೆ’ ಎಂದು ಕೇಳುತ್ತಾರೆ. ಇಂತಹ ಮುಗ್ಧರನ್ನು ಕಂಡ ಸ್ಪಾನಿಷ್ ಸೈನಿಕರು ಅತ್ಯಂತ ತಮಾಷೆಯ ಧ್ವನಿಯಲ್ಲಿ ‘ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಹೃದಯದ ಬೇನೆ ಇದೆ. ಅದಕ್ಕೆ ಈ ಹಳದಿ ಲೋಹವೇ ಔಷಧಿ’ ಎಂದು ಹೇಳುತ್ತಾರೆ.

ಮುಗ್ಧ ಅಜ್‌ಟೆಕ್ ಸಾಮ್ರಾಜ್ಯವನ್ನು ಕೈವಶ ಮಾಡಿಕೊಳ್ಳುವುದು ಸ್ಪೇನ್‌ನವರಿಗೆ ಕಷ್ಟವಾಗುವುದಿಲ್ಲ. ಅಜ್‌ಟೆಕ್ ಸಾಮ್ರಾಜ್ಯದ ಹತ್ತಿರದಲ್ಲಿಯೇ ದಕ್ಷಿಣ ಅಮೆರಿಕದಲ್ಲಿದ್ದ ಇಂಕಾ ಸಾಮ್ರಾಜ್ಯಕ್ಕೂ ಜಗತ್ತಿನ ಪರಿಚಯ ಇರಲಿಲ್ಲ. ಅವರು ತಮ್ಮ ಹತ್ತಿರದಲ್ಲಿಯೇ ಇದ್ದ ಅಜ್‌ಟೆಕ್ ಸಾಮ್ರಾಜ್ಯದ ತನಕವೂ ಪ್ರವಾಸ ಮಾಡಿರಲಿಲ್ಲ. ಸಮುದ್ರಯಾನದಲ್ಲಿ ಪ್ರಾವಿಣ್ಯ ಪಡೆದುಕೊಂಡಿದ್ದ ಸ್ಪಾನಿಷ್‌ ಸೈನಿಕರು ಇಂಕಾ ಸಾಮ್ರಾಜ್ಯವನ್ನೂ ನುಂಗಿ ನೀರು ಕುಡಿಯುವುದು ಕಷ್ಟವೇನೂ ಆಗಲಿಲ್ಲ.

ಭಾರತವು ಜಾಗತೀಕರಣಗೊಂಡ ನಂತರ ಪ್ರವಾಸದ ಸಂಸ್ಕೃತಿ ನಮ್ಮಲ್ಲೂ ಕಂಡು ಬರುತ್ತಿದೆ. ಬಾಣಂತನಕ್ಕೆಂದು ಅಮೆರಿಕಕ್ಕೆ ಹೋಗುವ ಅತ್ತೆಯರಿಂದ ಹಿಡಿದು, ದೈಹಿಕ ಸುಖಕ್ಕೆ ಥಾಯ್ಲೆಂಡ್‌ಗೆ ಹೋಗುವ ಯುವಕರ ತನಕ ಇದು ಹಬ್ಬುತ್ತಿದೆ. ಆದರೆ ಬಹುತೇಕ ಈ ಪ್ರವಾಸಗಳ ಉದ್ದೇಶ ಆಕರ್ಷಣೀಯ ಸ್ಥಳಗಳನ್ನು ನೋಡುವುದಕ್ಕೋ, ಕುಡಿದು ಕುಣಿದು ಕುಪ್ಪಳಿಸುವುದಕ್ಕೋ, ನಮ್ಮ ಬಂಧು-ಬಳಗ ಸ್ನೇಹಿತರನ್ನು ಕಾಣುವುದಕ್ಕೋ ಸೀಮಿತವಾಗುತ್ತಿವೆ. ಆದರೆ ಹೋದ ದೇಶದ ಜನಜೀವನವನ್ನು ತಿಳಿದುಕೊಳ್ಳುವ, ಆ ಮೂಲಕ ನಮ್ಮ ಶಕ್ತಿ-ದೌರ್ಬಲ್ಯಗಳನ್ನು ಅರಿತುಕೊಂಡು ದಾಖಲಿಸುವ ಮನೋಭಾವ ಅಷ್ಟು ಹೆಚ್ಚಾಗಿ ಕಾಣುವುದಿಲ್ಲ. ಜೊತೆಗೆ ಇಂತಹ ಪ್ರವಾಸಗಳು ಅತ್ಯಂತ ದುಬಾರಿಯಾಗಿದ್ದು, ಜನಸಾಮಾನ್ಯರು ತಮಗೆ ಸಂಬಂಧಿಸಿದ್ದಲ್ಲವೇನೋ ಎಂದು ನಿರ್ಲಕ್ಷಿಸುವಂತೆ ಮಾಡುತ್ತವೆ.

ಪ್ರವಾಸ ಕೈಗೊಳ್ಳುವುದರ ಗೂಢ ಸತ್ಯವೇನೆಂದರೆ ಅದಕ್ಕೆ ಬೇಕಾದ್ದು ಮನೋನಿಶ್ಚಯ, ಧೈರ್ಯ ಮತ್ತು ಸಾಹಸ ಮನೋಭಾವಗಳು ಮಾತ್ರವಾಗಿವೆಯೇ ಹೊರತು ಹಣವಲ್ಲ. ಏಳನೆಯ ಶತಮಾನದಲ್ಲಿ ಹತ್ತು ಸಾವಿರ ಮೈಲಿಗಿಂತಲೂ ಹೆಚ್ಚು ದೂರ ನಡೆದು ಚೀನಾದಿಂದ ಭಾರತಕ್ಕೆ ಬಂದ ಹುಯೇನ್‌ತ್ಸಾಂಗ್, ತನ್ನ ಪ್ರವಾಸವನ್ನು ಪ್ರಾರಂಭಿಸಿದಾಗ ಒಂದು ಚಿಕ್ಕಾಸೂ ಇಟ್ಟುಕೊಂಡಿರಲಿಲ್ಲ ಎನ್ನುವುದನ್ನು ನಾವು ಮರೆಯುವಂತಿಲ್ಲ. ಬೌದ್ಧ ಧರ್ಮದ ಸೂತ್ರಗಳನ್ನು ಸರಿಯಾಗಿ ತಿಳಿದುಕೊಂಡು, ಅವುಗಳನ್ನು ಚೀನೀ ಭಾಷೆಗೆ ಅನುವಾದ ಮಾಡಿಕೊಡುವುದು ಮಾತ್ರ ಅವನ ಬದುಕಿನ ಪರಮ ಗುರಿಯಾಗಿತ್ತು. ಅಂತಹ ದಿಟ್ಟ ನಿರ್ಧಾರ ಅವನ ಪ್ರವಾಸದ ಬಂಡವಾಳಕ್ಕೆ ಸಾಕಾಗಿತ್ತು. ಆ ನಿಟ್ಟಿನಲ್ಲಿ ನೋಡಿದರೆ ಇಂದು ಸಾಕಷ್ಟು ಯುವಜನರು ಸೈಕಲ್ ಮೂಲಕ ಭಾರತ ಸುತ್ತುವುದು, ಅತ್ಯಂತ ಕಡಿಮೆ ಬಂಡವಾಳದಲ್ಲಿ ಹೆಗಲಿಗೆ ಚೀಲವನ್ನು ಹೇರಿಕೊಂಡು ಸಾಮಾನ್ಯ ದರ್ಜೆಯ ಸಾರಿಗೆಯಲ್ಲಿ ದೂರ ರಾಜ್ಯಗಳಿಗೆ ಪ್ರವಾಸ ಮಾಡಿ ಬರುವುದು, ಕಾಲ್ನಡಿಗೆಯಲ್ಲಿ ತೀರ್ಥಕ್ಷೇತ್ರಗಳಿಗೆ ಹೋಗಿ ಬರುವುದು, ಹಿಮಾಲಯದ ಚಾರಣಗಳನ್ನು ಮಾಡುವುದು ನನಗೆ ಹೆಚ್ಚು ಅರ್ಥಪೂರ್ಣವಾಗಿ ಕಾಣುತ್ತದೆ.

ಭಾರತೀಯರು ಪ್ರವಾಸದ ಮಹತ್ವದ ಕುರಿತು ತಪ್ಪದೆ ನೆನಪಿಡಬೇಕಾದ ಅಂಶವೊಂದಿದೆ. ಕಳೆದ ಎರಡೂವರೆ ಸಾವಿರ ವರ್ಷಗಳಿಂದಲೂ ದೂರ ದೇಶದ ಪ್ರವಾಸಿಗರು ನಮ್ಮ ದೇಶವನ್ನು ಹುಡುಕಿಕೊಂಡು ಬಂದಿದ್ದಾರೆ. ಮೊರಕ್ಕೋ, ವೆನಿಸ್, ಗ್ರೀಸ್, ಅರಬ್, ಪರ್ಷಿಯಾ, ಪೋರ್ಚ್‌ಗೀಸ್, ಚೀನಾ, ಬ್ರಿಟಿಷ್, ಜರ್ಮನಿ - ಎಲ್ಲಾ ಕಡೆಯಿಂದಲೂ ಇಲ್ಲಿಗೆ ಪ್ರವಾಸಕ್ಕೆ ಬಂದು, ತಾವು ಕಂಡ ಸಂಗತಿಗಳನ್ನು ತಮ್ಮ ಭಾಷೆಯಲ್ಲಿ ಪಠ್ಯವಾಗಿ ಬರೆದಿಟ್ಟು ಹೋಗಿದ್ದಾರೆ. ಅವು ಪೂರ್ಣ ಸತ್ಯವೋ, ಉತ್ಪ್ರೇಕ್ಷೆಯೋ, ತಮ್ಮ ದೇಶದ ಜನರಿಗೆ ರುಚಿಗಟ್ಟುವಂತೆ ಮಸಾಲೆ ಬೆರೆಸಿ ಬರೆದ ಬರವಣಿಗೆಯೋ - ನಮಗೆ ಅಷ್ಟಾಗಿ ತಿಳಿಯುವುದಿಲ್ಲ. ಆದರೂ ಇಂದು ಅವು ನಮಗೆ ಮುಖ್ಯವಾಗಿವೆ. ಒಂದು ವೇಳೆ ಅವರೇನಾದರೂ ಇಲ್ಲಿಗೆ ಬರದಿದ್ದರೆ, ತಮ್ಮ ಪ್ರವಾಸ ಚರಿತ್ರೆಗಳನ್ನು ಬರೆಯದಿದ್ದರೆ ಇಂದು ನಮಗೆ ಖಂಡಿತಾ ಈ ಮಟ್ಟಿಗೆ ನಮ್ಮ ದೇಶದ ಇತಿಹಾಸ ತಿಳಿಯುತ್ತಿರಲಿಲ್ಲ.

ನಮ್ಮವರು ಬರೆದ ಶಾಸನಗಳು, ತಾಳೆಗರಿಗಳು, ಪುಸ್ತಕಗಳು, ಸ್ಮಾರಕಗಳು ನಮ್ಮ ಇತಿಹಾಸವನ್ನು ದಟ್ಟವಾಗಿ ಕಟ್ಟಿಕೊಡುವುದಿಲ್ಲ. ನಮ್ಮವರು ರಾಮಾಯಣ, ಮಹಾಭಾರತ, ಪುರಾಣ, ರಾಜನ ವೈಭವಗಳನ್ನು ಮತ್ತೆ ಮತ್ತೆ ಚಿತ್ರಿಸುವುದರಲ್ಲಿ ತೊಡಗಿಕೊಂಡಿದ್ದರೇ ಹೊರತು, ಜನಸಾಮಾನ್ಯರ ಕುರಿತು ಬರೆಯುವುದು ಬಹುತೇಕರ ಉದ್ದೇಶವಾಗಿರಲಿಲ್ಲ. ‘ಪ್ರವಾಸಿ ಕಂಡ ಭಾರತ’ವೇ ಇಂದು ನಮ್ಮ ಬಹುಪಾಲು ಇತಿಹಾಸದ ತಳಹದಿ.

ಇತ್ತೀಚೆಗೆ ನಾವು ದೇಶ ಪ್ರಗತಿಯ ಕುರಿತು ವಿಪರೀತವಾಗಿ ಮಾತಾಡುತ್ತೇವೆ. ಅದಕ್ಕಾಗಿ ಸಾಕಷ್ಟು ಹಣವನ್ನೂ ಮುಡುಪಾಗಿಟ್ಟು, ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತೇವೆ. ಆದರೆ ಪ್ರಗತಿಯೆಂಬುದನ್ನು ರೂಢಿಸಿಕೊಳ್ಳಲು ಮೊದಲು ದೇಶಪ್ರಜೆಗಳು ಸಿದ್ಧರಾಗಬೇಕಾಗುತ್ತದೆ. ಅದಕ್ಕೆ ನಮ್ಮ ಪೂರ್ವಗ್ರಹಗಳನ್ನು ಬದಿಗಿಟ್ಟು, ವಿಶಾಲ ಮನಸ್ಸನ್ನು ಗಳಿಸಿಕೊಳ್ಳಬೇಕಾಗುತ್ತದೆ. ಬಾಲ್ಯದಿಂದಲೇ ನಮ್ಮಲ್ಲಿ ಗಟ್ಟಿಯಾಗಿ ಬೇರೂರಿರುವ ಪೂರ್ವಗ್ರಹಗಳು ಬಿಳಲುಗಳನ್ನೂ ಬಿಟ್ಟಿರುತ್ತವೆ. ಇಂತಹ ಪೂರ್ವಗ್ರಹಗಳನ್ನು ಕಳಚಲು ಪ್ರವಾಸ ಅತ್ಯಂತ ಉಪಯುಕ್ತ ಸಾಧನ. ವಿದೇಶಗಳಿಗೆ ಹೋದ ನಮ್ಮ ಹಲವಾರು ಉನ್ನತ ಜಾತಿಯ ಜನರು ‘ಜಾತಿ ದ್ವೇಷ’, ‘ಅಸ್ಪೃಶ್ಯತೆ’ ಇತ್ಯಾದಿಗಳನ್ನು ಅಲ್ಲಿ ಬೇರೆ ಬೇರೆ ರೂಪದಲ್ಲಿ ಅನುಭವಿಸಿ ಅದರ ಕಠೋರತೆಯನ್ನು ಅರಿಯುತ್ತಾರೆ. ಪ್ರವಾಸವು ಪೂರ್ವಗ್ರಹಗಳ ಕಳೆ ಕಿತ್ತು, ಮನಸ್ಸೆಂಬ ಹೊಲವನ್ನು ಹದ ಮಾಡಿಡುತ್ತದೆ. ಆಗ ಪ್ರಗತಿಯ ಬೀಜಗಳನ್ನು ಸುಲಭವಾಗಿ ಬಿತ್ತಬಹುದಾಗಿದೆ. ‘ಹಸಿಕಸ’, ‘ಒಣಕಸ’ವನ್ನು ಪ್ರತ್ಯೇಕಿಸುವಂತಹ ಸಣ್ಣಸಣ್ಣ ಸಂಗತಿಗಳೂ ಎಷ್ಟು ಪ್ರಾಮುಖ್ಯ ಎಂಬುದು ಆಗ ಅರಿವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT