ದೇವಿರಮ್ಮನ ಬೆಟ್ಟದಲ್ಲಿ ಫಜೀತಿ

7

ದೇವಿರಮ್ಮನ ಬೆಟ್ಟದಲ್ಲಿ ಫಜೀತಿ

Published:
Updated:
Deccan Herald

ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ ಗಿರಿ ಅದ್ಭುತ ಗಿರಿ ಶೃಂಗ. ಈ ಬೆಟ್ಟದ ಶ್ರೇಣಿಯಲ್ಲಿ ದೇವೀರಮ್ಮ ದೇವಿಯ ಹಬ್ಬ ನಡೆಯುತ್ತದೆ. ಆ ಸಮಯದಲ್ಲಿ ಜನರು ದೇವೀರಮ್ಮನ ಬೆಟ್ಟ ಹತ್ತುತ್ತಾರೆ. ಎಲ್ಲ ಬೆಟ್ಟದಂತೆ ಅಲ್ಲಿ ಮೆಟ್ಟಿಲುಗಳಿಲ್ಲ. ವರ್ಷದಲ್ಲಿ 3 ದಿನ ಮಾತ್ರ ಈ ಬೆಟ್ಟ ಹತ್ತಿ ದೇವಿಯ ಪೂಜೆ ಮಾಡುವುದು. ಈ ಬೆಟ್ಟ ಹತ್ತಲು ಎರಡು ಮಾರ್ಗಗಳು ಇವೆ. ಒಂದು ಬಾಬಾಬುಡನ್ ಗಿರಿ ತಪ್ಪಲಿನಿಂದ ಮಾಣಿಕ್ಯಧಾರ ಜಲಪಾತ. ಮತ್ತೊಂದು ದಾರಿ ಮಲ್ಲೇನಹಳ್ಳಿ ಊರಿನಿಂದ ಬೆಟ್ಟಕ್ಕೆ ಹೋಗುವುದು. ಬೆಟ್ಟ ಹತ್ತುವ ದಾರಿ ಕಿರಿದಾಗಿದೆ.

ನಾನು ನನ್ನ ಮಗ, ಮಗಳು, ಮಧ್ಯರಾತ್ರಿ ಎರಡು ಘಂಟೆಗೆ ಮಲ್ಲೇನಹಳ್ಳಿ ಮೂಲಕ ಬೆಟ್ಟವೇರಲು ಆರಂಭಿಸಿದೆವು. ಕತ್ತಲಲ್ಲಿ ಬೆಟ್ಟಕ್ಕೆ  ದೀಪಾಲಂಕಾರ ಮಾಡಿದ್ದರು.. ಕ್ಯಾಮೆರಾ  ತಂದ  ಮಕ್ಕಳು  ಫೋಟೊ  ತೆಗೆಯುತ್ತ ಬರುತ್ತಿದ್ದರು. ನಾನು ಆಸಕ್ತಿ ಇಲ್ಲದ್ದರಿಂದ ನನ್ನ  ಪಾಡಿಗೆ ನಡೆಯುತ್ತಿದ್ದೆ. ಮಕ್ಕಳೆಲ್ಲ ಒಂದು ಕಡೆಯಾದರೆ ನಾನು ಒಬ್ಬಳೆ ಬೇರೆಯಾಗಿಬಿಟ್ಟೆ. ಕಿರು ದಾರಿಯಲ್ಲಿ ನಡೆಯುತ್ತ ಸಾಗಿದಂತೆ ಜನ ಜಾಸ್ತಿಯಾಗಿ ನಡೆಯಲು ಜಾಗವಿಲ್ಲದಂತಾಯ್ತು.

ಪಕ್ಕಕ್ಕೆ ಸರಿದರೆ ಪಾತಾಳ. ಬೆಟ್ಟದ ಹುಲ್ಲು ಹಿಡಿದು ಹತ್ತಲು ಆರಂಭಿಸಿದೆ. ಕಷ್ಟಕರವೆನಿಸುತ್ತಿತ್ತು. ಒಂದು ಜಾಗದಲ್ಲಿ ಒಂದಷ್ಟು ಜನ ಕೂತಿದ್ದರು. ಇಲ್ಲಿಂದ ದೇವರ ದರ್ಶನಕ್ಕೆ  ಹೋಗಲು  ಸಾಧ್ಯವಿಲ್ಲವೆಂದು ಚರ್ಚಿಸುತ್ತಿದ್ದರು.   ಗುಂಪಿನಲ್ಲಿದ್ದ ಸ್ಥಳೀಯರು ಬೇರೊಂದು ದಾರಿಯಲ್ಲಿ  ಕರೆದುಕೊಂಡು  ಹೋದರು. ದೇವರ ದರ್ಶನದ  ಸರತಿಯಲ್ಲಿ ನಿಂತು ದರ್ಶನ ಮಾಡಿದೆನು.  ಆದರೆ ಮಕ್ಕಳು ಸಿಗಲಿಲ್ಲ.

ದೇವರ ದರ್ಶನ ಮುಗಿದ ನಂತರ ಹೊರಟು ಸ್ವಲ್ಪ ಕೆಳಗೆ ಇಳಿದೆನು. ಮಕ್ಕಳ ಪತ್ತೆಯೆ ಇಲ್ಲ. ಬೆಟ್ಟ ಇಳಿದಾದ ನಂತರ ಪ್ರವೇಶ ದ್ವಾರದ ಬಳಿ ಕಾಯ್ದರೆ ಸಿಗುತ್ತಾರೆ ಎಂದು ಜನರ ಜೊತೆಯಲ್ಲಿ ನಡೆದುಕೊಂಡು ಹೋದೆ. ನಾವು ಪರ್ವತ ಏರಿದ ಹಾದಿ ಅದಲ್ಲವೆಂದು  ಅನುಮಾನವಾಯ್ತು.  ಸಹ ಪ್ರಯಾಣಿಕರಲ್ಲಿ  ‘ಇದು ಮಲ್ಲೇನಹಳ್ಳಿ ದಾರಿಯಾ?’ ಎಂದು ವಿಚಾರಿಸಿದರೆ ‘ಅಲ್ಲ, ಮಾಣಿಕ್ಯಧಾರ ಜಲಪಾತದ ದಾರಿ’ ಎಂದರು. ದಾರಿ ತಪ್ಪಿದ್ದು ಸ್ಪಷ್ಟವಾಯ್ತು. ಬಸ್ಸು ಹತ್ತಿ ಮಲ್ಲೇನಹಳ್ಳಿಗೆ ಹೋಗಬೇಕಾದರೆ ಬಾಬಾಬುಡನ್ ಗಿರಿಗೆ ಹೋಗಬೇಕು, ಮಾಣಿಕ್ಯಧಾರ ಜಲಪಾತಕ್ಕೂ, ಬಾಬಾ ಬುಡನ್ ಗಿರಿಗೂ ಇರುವ  ದೂರ 12 ಕಿ.ಮೀ. 

ಪರ್ಸ್‌ ಮಗನ ಬಳಿ ಕೊಟ್ಟಿದ್ದೆ. ಸಹ ಪ್ರಯಾಣಿಕರ ಮೊಬೈಲು ಪಡೆದು ಕರೆ ಮಾಡಿದರೆ  ನೆಟ್‌ವರ್ಕ್‌ ಇಲ್ಲ. ನಡೆಯುತ್ತಾ ಸಾಗಿದೆ. ಯಾವ ವಾಹನದಲ್ಲಿಯೂ ಡ್ರಾಪ್ ಕೇಳಲು ಸಾಧ್ಯವಿಲ್ಲದಷ್ಟು ತುಂಬಿದ್ದವು. ನಡೆಯಲು ಶುರು ಮಾಡಿದೆ. ಅಷ್ಟರಲ್ಲಿ ವಾಹನ ಸಿಕ್ಕಿತು. ಬಾಬಾಬುಡನ್ ಗಿರಿಗೆ ಬಿಟ್ಟರು. ಅಲ್ಲಿಂದ ಯಾವುದೇ ವಾಹನ ಮಲ್ಲೇನಹಳ್ಳಿಗೆ ಹೋಗಲು ಇರಲಿಲ್ಲ. ಏನು  ಮಾಡುವುದು ತಿಳಿಯಲಿಲ್ಲ. ಮನೆಯವರಿಗೆ ಸಹ ಪ್ರಯಾಣಿಕರ  ಮೊಬೈಲ್  ಪಡೆದು  ವಿಷಯ ತಿಳಿಸಿದೆ. ಅವರು ಮಕ್ಕಳಿಗೆ ಫೋನಾಯಿಸಿದರು.

ಅತ್ತಕಡೆ ಬೆಟ್ಟದಲ್ಲಿ ಮಕ್ಕಳು ನನ್ನನ್ನು ಕಾಣದೆ, ಹುಡುಕಿದ್ದಾರೆ, ದ್ವನಿವರ್ಧಕದಲ್ಲಿಯೂ  ಪ್ರಚಾರ  ಮಾಡಿದ್ದಾರೆ.ಬೆಟ್ಟ  ಇಳಿದಿದ್ದಾರೆ. ಮತ್ತೆ  ಕಾಣದೆ ಬೆಟ್ಟ  ಹತ್ತಿದ್ದಾರೆ. ಹಸಿವು, ಬಾಯಾರಿಕೆಯಿಂದ ಕಂಗೆಟ್ಟಿದ್ದಾರೆ. ಅಷ್ಟರಲ್ಲಿ ಅಪ್ಪ ದೂರವಾಣಿ  ಕರೆ  ಮಾಡಿ  ಬೈಯ್ದಿದ್ದಾರೆ. ಮಕ್ಕಳು  ಬಾಬಾ ಬುಡನ್  ಗಿರಿಗೆ  ಕಾರಲ್ಲಿ ಬಂದರು. ನಾನು ದತ್ತಪೀಠದ ಬಳಿ  ಮಾರ್ಗಸೂಚಿ ಕೆಳಗೆ  ಅವರಿಗಾಗಿ ಕಾದು ಕುಳಿತೆ.

ಮಕ್ಕಳು  ಬಂದರು,  ಪಾಪ  ಮುಖಗಳನ್ನು  ನೋಡಿ ಅಯ್ಯೋ  ಅನಿಸಿತು. ದಾರಿಯಲ್ಲಿ  ಮಕ್ಕಳು ‘ನಿಮ್ಮನ್ನ   ಇಲ್ಲೆ   ಬಾಬಾಬುಡನ್ ಗಿರಿಯ  ಕಣಿವೆಗೆ  ತಳ್ಳಿ ಹೋಗಬೇಕು ಅನಿಸುತ್ತಿದೆ’ ಎಂದರು. ಹೀಗೆ ಆಕಸ್ಮಿಕವಾಗಿ ದೇವಿರಮ್ಮನ ಬೆಟ್ಟಕ್ಕೆ ಏಕಾಂಗಿಯಾಗಿ ಪ್ರವಾಸ ಹೋಗಿ ಬಂದ ಅನುಭವ ನನ್ನದು. 
-ಎಚ್. ಸಿ .ಸುಜಾತ, ಶಿವಮೊಗ್ಗ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !