ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿದಾಯ್ತು ಆದಿವಾಸಿ ಪಾಲು

Last Updated 17 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಅರ್ಥ ವ್ಯವಸ್ಥೆ ಮತ್ತು ಶಿಕ್ಷಣದಲ್ಲಿ (ಆರೋಗ್ಯ ಕೂಡ) ಸರ್ಕಾರದ ಪಾತ್ರ ಕಿರಿದಾಗುತ್ತಾ ಸಾಗಿದೆ. ಸರ್ಕಾರದ ಪಾತ್ರವು ಕುಗ್ಗುತ್ತಿರುವ ಅದೇ ಹೊತ್ತಿನಲ್ಲಿ ಮೀಸಲಾತಿಗಾಗಿ ಬೇಡಿಕೆಯ ಸದ್ದು ಹೆಚ್ಚು ಹೆಚ್ಚು ಜೋರಾಗಿ ಕೇಳಿ ಬರುತ್ತಿದೆ. ಒಳ ಮೀಸಲಾತಿ ಬೇಡಿಕೆಯೂ ಧ್ವನಿ ಪಡೆದುಕೊಂಡಿದೆ. ‘ಒಳ’ಗಿದ್ದವರಿಗೆ ಅವಕಾಶ ಕುಗ್ಗುತ್ತಿರುವ ಆತಂಕ. ಯಾಕೀ ಧಾವಂತ? ಏನಿದರ ಹಿಂದಿನ ಮಜಕೂರು?

ಮೈಸೂರು ಜಿಲ್ಲೆಯಲ್ಲಿ ಮೂಲನಿವಾಸಿ ಬುಡಕಟ್ಟು ಸಮುದಾಯದ ಜನರೊಂದಿಗೆ ಜೀವಿಸಿದ 25 ವರ್ಷಗಳು ನನ್ನ ಬದುಕಿನ ಕೆಲವು ಅತ್ಯಮೂಲ್ಯ ಕ್ಷಣಗಳು. ಭವಿಷ್ಯದ ಬಗ್ಗೆ ಯಾವ ಚಿಂತೆಯೂ ಇಲ್ಲದೆ, ಭೂತಕಾಲದ ಕುರಿತು ಪಶ್ಚಾತ್ತಾಪವೂ ಇಲ್ಲದೆ ಪರಿಸರದ ಜತೆ ಹೊಂದಾಣಿಕೆ ಮಾಡಿಕೊಂಡು ವರ್ತಮಾನವನ್ನು ಹೇಗೆ ಕಳೆಯಬೇಕು ಎಂಬುದನ್ನು ಈ ಅವಧಿಯಲ್ಲಿ ಕಲಿತೆ. ‘ನಾನು ಬುಡಕಟ್ಟು ಸಮುದಾಯದ ವ್ಯಕ್ತಿಯಾಗಿ ಜನಿಸಬೇಕಿತ್ತು’ ಎಂದು ಎಷ್ಟೋ ಬಾರಿ ಅನಿಸಿದೆ. ಆದರೆ, ಪರಿಶಿಷ್ಟ ಪಂಗಡ ಅಥವಾ ಬುಡಕಟ್ಟು ಸಮುದಾಯ ಎಂದು ಯಾರನ್ನು ಕರೆಯಬಹುದು ಎಂಬುದಕ್ಕೆ ಭಾರತೀಯ ಸಂವಿಧಾನದಲ್ಲಿ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪರಿಗಣಿಸಿದಾಗ ಇದು ನನ್ನ ಆಶಯವಾಗಿ ಅಷ್ಟೇ ಉಳಿಯುತ್ತದೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 8ರಷ್ಟು ಜನರಿರುವ ಈ ಮೂಲನಿವಾಸಿಗಳಿಗೆ ತಮಗೆ ನ್ಯಾಯಬದ್ಧವಾಗಿ ದಕ್ಕಬೇಕಿದ್ದ ಹಕ್ಕುಗಳ ಕುರಿತು ಪೂರ್ಣ ಅರಿವೂ ಇಲ್ಲ, ಹಕ್ಕುಗಳನ್ನು ಪಡೆದೂ ಇಲ್ಲ. ವೇಗವಾಗಿ ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿರುವ ಈ ಸಮುದಾಯ ಆಧುನಿಕತೆಯ ಒತ್ತಡಕ್ಕೆ ಸಿಲುಕಿದೆ. ಸಂವಿಧಾನದ 342ನೇ ವಿಧಿಯ ಅನುಸೂಚಿಯಲ್ಲಿ ಉಲ್ಲೇಖವಾಗಿರುವ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳು (ಬುಡಕಟ್ಟು ಸಮುದಾಯ) ಎಂಬುದಾಗಿ ಸಂವಿಧಾನದ 366 (25)ನೇ ವಿಧಿ ಸ್ಪಷ್ಟವಾಗಿ ಹೇಳಿದೆ.

ಪ್ರಾಚೀನವಾದ ವಿಶಿಷ್ಟ ಸ್ವಭಾವ, ಭಿನ್ನವಾದ ಆಡುಭಾಷೆ ಮತ್ತು ಸಂಸ್ಕೃತಿ, ದೊಡ್ಡ ಜನಸಮೂಹದ ಜೊತೆ ಸಂಪರ್ಕಕ್ಕೆ ಬರಲು ಅಂಜಿಕೆ, ನಾಚಿಕೆ ಹೊಂದಿರುವುದು, ಭೌಗೋಳಿಕ ಪ್ರತ್ಯೇಕತೆ ಮತ್ತು ಆರ್ಥಿಕ ಹಿಂದುಳಿದಿರುವಿಕೆಗಳನ್ನು ಪರಿಶಿಷ್ಟ ಪಂಗಡಗಳನ್ನು ಗುರುತಿಸುವ ಪ್ರಮುಖ ಮಾನದಂಡಗಳೆಂದು ಲೋಕೂರ್‌ ಸಮಿತಿ ಮೊದಲ ಬಾರಿಗೆ ಹೇಳಿತ್ತು. ಬುಡಕಟ್ಟು ಸಮುದಾಯವು ಸಮತಟ್ಟು ಪ್ರದೇಶ, ಅರಣ್ಯ, ಗುಡ್ಡಗಾಡು, ಸಂಪರ್ಕವೇ ಕಷ್ಟವಾದ ಅರಣ್ಯದೊಳಗಿನ ಪ್ರದೇಶ ಸೇರಿದಂತೆ ಭಿನ್ನವಾದ ಪರಿಸರ ಮತ್ತು ಭೌಗೋಳಿಕ ಪ್ರದೇಶದಲ್ಲಿ ವಾಸಿಸುತ್ತಿದೆ. ದೇಶದಲ್ಲಿನ ಬುಡಕಟ್ಟು ಸಮುದಾಯಗಳು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ವಿವಿಧ ಸ್ತರಗಳಲ್ಲಿವೆ. ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ 705 ಸಮುದಾಯಗಳಲ್ಲಿ 75 ಸಮುದಾಯಗಳು ಅಪಾಯದ ಅಂಚಿನಲ್ಲಿರುವ ಬುಡಕಟ್ಟು ಗುಂಪುಗಳು (PVTG) ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಈ ಸಮುದಾಯಗಳು ಕೃಷಿಪೂರ್ವ ಹಂತದ ತಂತ್ರಜ್ಞಾನವನ್ನು ಬಳಸುತ್ತಿದ್ದು, ಈ ಸಮುದಾಯಗಳ ಜನಸಂಖ್ಯೆ ಸ್ಥಿರವಾಗಿದೆ ಅಥವಾ ಇಳಿಮುಖವಾಗಿದೆ. ಅತ್ಯಂತ ಕಡಿಮೆ ಪ್ರಮಾಣದ ಸಾಕ್ಷರತೆ ಹೊಂದಿರುವ ಈ ಬುಡಕಟ್ಟು ಗುಂಪುಗಳು ಆರ್ಥಿಕವಾಗಿ ತೀರಾ ದುರ್ಬಲವಾಗಿವೆ.

2011ರ ಜನಗಣತಿ ಪ್ರಕಾರ, ದೇಶದಲ್ಲಿ 10.43 ಕೋಟಿ ಮೂಲನಿವಾಸಿ ಬುಡಕಟ್ಟು ಸಮುದಾಯದ ಜನರು ವಾಸಿಸುತ್ತಿದ್ದಾರೆ. ಈ ಸಂಖ್ಯೆ ಕೆಲವು ರಾಜ್ಯಗಳಲ್ಲಿ ಲಕ್ಷದಷ್ಟಿದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ನೂರರ ಲೆಕ್ಕದಲ್ಲಿದೆ. ದೇಶದ ಮಧ್ಯ ಮತ್ತು ಈಶಾನ್ಯ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡಗಳ ಜನರು ವಾಸಿಸುತ್ತಿದ್ದಾರೆ.

ಬುಡಕಟ್ಟು ಸಮುದಾಯದ ಜನರು ದೇಶದಾದ್ಯಂತ ಈಗ ಕವಲು ದಾರಿಯಲ್ಲಿದ್ದಾರೆ. ಸಂಪೂರ್ಣವಾಗಿ ಸಾಂಪ್ರದಾಯಿಕ ಆರ್ಥಿಕತೆಯನ್ನು ಅವಲಂಬಿಸಿಕೊಳ್ಳಲೂ ಸಾಧ್ಯವಾಗದ, ವರ್ತಮಾನದ ಮಾರುಕಟ್ಟೆಯ ಬೇಡಿಕೆಗಳಿಗೆ ತಕ್ಕಂತೆ ಬದಲಾಗಲೂ ಆಗದ ಸ್ಥಿತಿಯಲ್ಲಿದ್ದಾರೆ. ವ್ಯಕ್ತಿಗತ ಮತ್ತು ಸಾಮುದಾಯಿಕ ನೆಲೆಯಲ್ಲಿ ಬದಲಾವಣೆಗಳ ಜತೆ ಸಂಘರ್ಷದಲ್ಲಿರುವ ಈ ಸಮುದಾಯ, ಪರಂಪರೆಯಿಂದ ಸಂಪೂರ್ಣವಾಗಿ ಕಳಚಿಕೊಳ್ಳಲೂ ಆಗದ ಮತ್ತು ವರ್ತಮಾನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೂ ಆಗದ ಇಕ್ಕಟ್ಟಿನ ಸ್ಥಿತಿಯಲ್ಲಿದೆ. ಈ ಸಮುದಾಯಗಳನ್ನು ಉದ್ದೇಶಿಸಿ ಕಾರ್ಯರೂಪಕ್ಕೆ ತರುತ್ತಿರುವ ಯೋಜನೆಗಳು ಬುಡಕಟ್ಟು ಜನರು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಸುಸ್ಥಿರವಲ್ಲದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಒತ್ತಡ ಸೃಷ್ಟಿಸುತ್ತಿವೆ. ‘ಅತ್ತ ದರಿ ಇತ್ತ ಪುಲಿ’ ಎಂಬ ಸಂಕಷ್ಟದ ಸ್ಥಿತಿಯಲ್ಲಿರುವ ಬುಡಕಟ್ಟು ಜನರ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇದೆ. ಇದರ ಪರಿಣಾಮವಾಗಿ ಕಾಡುವ ಬಡತನದ ನಡುವೆಯೇ ಜೀವನ ಸಾಗಿಸಬೇಕಾದ ಸ್ಥಿತಿ ಈ ಜನರದ್ದಾಗಿದೆ. ಬುಡಕಟ್ಟು ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನಮಟ್ಟ ಸುಧಾರಣೆಗಾಗಿ 1999ರಲ್ಲಿ ಕೇಂದ್ರ ಸರ್ಕಾರ ಪ್ರತ್ಯೇಕವಾದ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಆರಂಭಿಸಿತ್ತು. ಈ ಉದ್ದೇಶಕ್ಕಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 6,000 ಕೋಟಿಗೂ ಹೆಚ್ಚು ಮೊತ್ತವನ್ನು ವೆಚ್ಚ ಮಾಡುವ ಗುರಿ ಹೊಂದಿದೆ.

ಇತ್ತೀಚಿನ ದಶಕಗಳಲ್ಲಿ ಕರ್ನಾಟಕದಲ್ಲಿ ಹಲವು ಸಮುದಾಯಗಳು ತಮ್ಮನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ಹೋರಾಟ ನಡೆಸುತ್ತಿವೆ. ಹಲವು ಸಮುದಾಯಗಳು ಈಗಾಗಲೇ ಪರಿಶಿಷ್ಟ ಪಂಗಡಗಳ ಸ್ಥಾನಮಾನವನ್ನೂ ಪಡೆದಿವೆ. 1961ರಲ್ಲಿ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಕೇವಲ 1.92 ಲಕ್ಷ ಇತ್ತು. ಅದು ಆಗಿನ ರಾಜ್ಯದ ಒಟ್ಟು ಜನಸಂಖ್ಯೆಯ ಶೇ 0.81ರಷ್ಟು ಮಾತ್ರ. 90ರ ದಶಕದ ಆರಂಭದಲ್ಲಿ ಪ್ರಕಟಿಸಿದ ಪಟ್ಟಿಯಲ್ಲಿ ‘ನಾಯ್ಕದ’ ಸೇರಿ 49 ಉಪ ಪಂಗಡಗಳಿಗೆ ಪರಿಶಿಷ್ಟ ಪಂಗಡಗಳ ಸ್ಥಾನಮಾನ ನೀಡಲಾಯಿತು.

ಜೇನು ಕುರುಬ ಮತ್ತು ಕೊರಗ ಸಮುದಾಯಗಳಿಗೆ ಅಪಾಯದ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳೆಂಬ ಮಾನ್ಯತೆಯನ್ನೂ ನೀಡಲಾಗಿತ್ತು. ಬೆಟ್ಟ ಕುರುಬ, ಪಣಿಯ, ಪಂಜರಿಯ, ಕುಡಿಯ, ಮಲೆಕುಡಿಯ, ಯೆರವ, ಇರುಳಿಗ, ಹಸಲರು, ಗೌಡ್ಲು ಮತ್ತು ಇತರ ಕೆಲವು ಸಮುದಾಯಗಳನ್ನು ಅರಣ್ಯವಾಸಿ ಬುಡಕಟ್ಟುಗಳು ಎಂದು ಘೋಷಿಸಲಾಗಿತ್ತು. 2011ರ ವೇಳೆಗೆ ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆ 42.49 ಲಕ್ಷ ತಲುಪಿದ್ದು, ರಾಜ್ಯದ ಒಟ್ಟು ಜನಸಂಖ್ಯೆ ಶೇ 6.95ರಷ್ಟು ಪಾಲು ಹೊಂದಿದೆ. ಈ ಬೆಳವಣಿಗೆಗೆ ಪರಿಶಿಷ್ಟ ಪಂಗಡಗಳ ಜನರ ಸಂಖ್ಯೆ ಹೆಚ್ಚಿರುವುದು ಮಾತ್ರ ಕಾರಣವಾಗಿಲ್ಲ. ‘ನಾಯ್ಕದ’ ಎಂಬ ಪದದ ಆಧಾರದಲ್ಲಿ ‘ನಾಯಕ’ ಸೇರಿದಂತೆ ಹಲವು ಸಮುದಾಯಗಳನ್ನು 1994ರಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಿರುವುದು ಮುಖ್ಯ ಕಾರಣ.

ಬುಡಕಟ್ಟು ಸಮುದಾಯದ ಜನರು ದೇಶದಾದ್ಯಂತ ಈಗ ಕವಲು ದಾರಿಯಲ್ಲಿದ್ದಾರೆ. ಸಂಪೂರ್ಣವಾಗಿ ಸಾಂಪ್ರದಾಯಿಕ ಆರ್ಥಿಕತೆಯನ್ನು ಅವಲಂಬಿಸಿಕೊಳ್ಳಲೂ ಸಾಧ್ಯವಾಗದ, ವರ್ತಮಾನದ ಮಾರುಕಟ್ಟೆಯ ಬೇಡಿಕೆಗಳಿಗೆ ತಕ್ಕಂತೆ ಬದಲಾಗಲೂ ಆಗದ ಸ್ಥಿತಿಯಲ್ಲಿದ್ದಾರೆ. ವ್ಯಕ್ತಿಗತ ಮತ್ತು ಸಾಮುದಾಯಿಕ ನೆಲೆಯಲ್ಲಿ ಬದಲಾವಣೆಗಳ ಜತೆ ಸಂಘರ್ಷದಲ್ಲಿರುವ ಈ ಸಮುದಾಯ, ಪರಂಪರೆಯಿಂದ ಸಂಪೂರ್ಣವಾಗಿ ಕಳಚಿಕೊಳ್ಳಲೂ ಆಗದ ಮತ್ತು ವರ್ತಮಾನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೂ ಆಗದ ಇಕ್ಕಟ್ಟಿನ ಸ್ಥಿತಿಯಲ್ಲಿದೆ. ಈ ಸಮುದಾಯಗಳನ್ನು ಉದ್ದೇಶಿಸಿ ಕಾರ್ಯರೂಪಕ್ಕೆ ತರುತ್ತಿರುವ ಯೋಜನೆಗಳು ಬುಡಕಟ್ಟು ಜನರು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಸುಸ್ಥಿರವಲ್ಲದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಒತ್ತಡ ಸೃಷ್ಟಿಸುತ್ತಿವೆ. ‘ಅತ್ತ ದರಿ ಇತ್ತ ಪುಲಿ’ ಎಂಬ ಸಂಕಷ್ಟದ ಸ್ಥಿತಿಯಲ್ಲಿರುವ ಬುಡಕಟ್ಟು ಜನರ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇದೆ. ಪರಿಣಾಮವಾಗಿ ಕಾಡುವ ಬಡತನದ ನಡುವೆಯೇ ಜೀವನ ಸಾಗಿಸಬೇಕಾದ ಸ್ಥಿತಿ ಈ ಜನರದ್ದಾಗಿದೆ. ಬುಡಕಟ್ಟು ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನಮಟ್ಟ ಸುಧಾರಣೆಗಾಗಿ 1999ರಲ್ಲಿ ಕೇಂದ್ರ ಸರ್ಕಾರ ಪ್ರತ್ಯೇಕವಾದ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಆರಂಭಿಸಿತ್ತು. ಈ ಉದ್ದೇಶಕ್ಕಾಗಿ ಪ್ರತಿ ಆರ್ಥಿಕ ವರ್ಷದಲ್ಲಿ ₹ 6,000 ಕೋಟಿಗೂ ಹೆಚ್ಚು ಮೊತ್ತವನ್ನು ವೆಚ್ಚ ಮಾಡುವ ಗುರಿ ಹೊಂದಿತ್ತು.

ಇತ್ತೀಚಿನ ದಶಕಗಳಲ್ಲಿ ಕರ್ನಾಟಕದಲ್ಲಿ ಹಲವು ಸಮುದಾಯಗಳು ತಮ್ಮನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ಹೋರಾಟ ನಡೆಸುತ್ತಿವೆ. ಹಲವು ಸಮುದಾಯಗಳು ಈಗಾಗಲೇ ಪರಿಶಿಷ್ಟ ಪಂಗಡಗಳ ಸ್ಥಾನಮಾನವನ್ನೂ ಪಡೆದಿವೆ. 1961ರಲ್ಲಿ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಕೇವಲ 1.92 ಲಕ್ಷ ಇತ್ತು. ಅದು ಆಗಿನ ರಾಜ್ಯದ ಒಟ್ಟು ಜನಸಂಖ್ಯೆಯ ಶೇ 0.81ರಷ್ಟು ಮಾತ್ರ. 90ರ ದಶಕದ ಆರಂಭದಲ್ಲಿ ‘ನಾಯ್ಕದ’ ಜಾತಿಯ 49 ಉಪ ಪಂಗಡಗಳಿಗೆ ಪರಿಶಿಷ್ಟ ಪಂಗಡಗಳ ಸ್ಥಾನಮಾನ ನೀಡಲಾಯಿತು. ಜೇನು ಕುರುಬ ಮತ್ತು ಕೊರಗ ಸಮುದಾಯಗಳಿಗೆ ಅಪಾಯದ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳೆಂಬ ಮಾನ್ಯತೆಯನ್ನೂ ನೀಡಲಾಗಿತ್ತು. ಬೆಟ್ಟ ಕುರುಬ, ಪಣಿಯ, ಪಂಜರಿಯ, ಕುಡಿಯ, ಮಲೆಕುಡಿಯ, ಯೆರವ, ಇರುಳಿಗ, ಹಸಲರು, ಗೌಡ್ಲು ಮತ್ತು ಇತರ ಕೆಲವು ಸಮುದಾಯಗಳನ್ನು ಅರಣ್ಯವಾಸಿ ಬುಡಕಟ್ಟುಗಳು ಎಂದು ಘೋಷಿಸಲಾಗಿತ್ತು. 2011ರ ವೇಳೆಗೆ ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆ 42.49 ಲಕ್ಷ ತಲುಪಿದ್ದು, ರಾಜ್ಯದ ಒಟ್ಟು ಜನಸಂಖ್ಯೆ ಶೇ 6.95ರಷ್ಟು ಪಾಲು ಹೊಂದಿದೆ. ಈ ಬೆಳವಣಿಗೆಗೆ ಪರಿಶಿಷ್ಟ ಪಂಗಡಗಳ ಜನರ ಸಂಖ್ಯೆ ಹೆಚ್ಚಿರುವುದು ಮಾತ್ರ ಕಾರಣವಾಗಿಲ್ಲ. ‘ನಾಯ್ಕದ’ ಎಂಬ ಪದದ ಆಧಾರದಲ್ಲಿ ‘ನಾಯಕ’ ಸೇರಿದಂತೆ ಹಲವು ಸಮುದಾಯಗಳನ್ನು 1994ರಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಿರುವುದು ಮುಖ್ಯ ಕಾರಣ.

ಅಂದಿನ ಸರ್ಕಾರದ ನಿರ್ಧಾರವು ಇತರ ಸಮುದಾಯಗಳ ಸೇರ್ಪಡೆಗೆ ಹೆಬ್ಬಾಗಿಲು ತೆರೆದಂತಹ ಸ್ಥಿತಿಗೆ ಕಾರಣವಾಯಿತು. ನಂತರದ ದಿನಗಳಲ್ಲಿ ಹಲವು ಜಾತಿಗಳನ್ನು ಈ ‍ಪಟ್ಟಿಗೆ ಸೇರಿಸಲಾಗಿದೆ. ‘ಪರಿವಾರ’ ಮತ್ತು ‘ತಳವಾರ’ ಸಮುದಾಯಗಳು ಇತ್ತೀಚಿನ ಸೇರ್ಪಡೆ. ಇದರಿಂದಾಗಿ ರಾಜ್ಯದ ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಈ ವರ್ಷದ ಆರಂಭದಲ್ಲಿ 11 ಲಕ್ಷ ಜನರ ಸೇರ್ಪಡೆ ಆಗಿದೆ. ಹೊಸದಾಗಿ ಪಟ್ಟಿ ಸೇರುತ್ತಿರುವ ಸಮುದಾಯಗಳ ರಾಜಕೀಯ ಪ್ರಾಬಲ್ಯ, ಆರ್ಥಿಕ ಶಕ್ತಿಯು ಮೊದಲೇ ಸಂಕಷ್ಟದ ಸ್ಥಿತಿಯಲ್ಲಿರುವ ನಿಜವಾದ ಅರಣ್ಯ ವಾಸಿಗಳನ್ನು ಮತ್ತಷ್ಟು ಬಿಕ್ಕಟ್ಟಿಗೆ ತಳ್ಳಿದೆ.

1.6 ಲಕ್ಷ ಜನರಿರುವ ಕೊಡವರು ಮತ್ತು 50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಕುರುಬ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂಬ ಹೋರಾಟ ಆರಂಭವಾಗಿದೆ. ಮಡಿವಾಳ, ಬೆಸ್ತ, ಗೊಲ್ಲ ಮತ್ತು ಗಂಗಾಮತಸ್ಥರಂತಹ ಹಲವು ಸಮುದಾಯಗಳೂ ಇದೇ ಬೇಡಿಕೆ ಮುಂದಿಡುತ್ತಿವೆ. ಇದು ಬುಡಕಟ್ಟು ಸಮುದಾಯಗಳನ್ನು ಮತ್ತಷ್ಟು ಅಂಚಿಗೆ ತಳ್ಳುವ ಸಾಧ್ಯತೆ ಇದೆ. ಬಹುತೇಕ ಸಂದರ್ಭಗಳಲ್ಲಿ ಸರ್ಕಾರಗಳು ವಿವಿಧ ಜಾತಿಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಾಗ ಆ ಸಮುದಾಯಗಳ ಸಾಮಾಜಿಕ ಅಥವಾ ಆರ್ಥಿಕ ಹಿಂದುಳಿದಿರುವಿಕೆಯನ್ನಷ್ಟೇ ಪರಿಗಣಿಸಿಲ್ಲ. ಸಾಕ್ಷ್ಯಾಧಾರಗಳು ಅಥವಾ ಸಾಂವಿಧಾನಿಕ ಮಾರ್ಗಸೂಚಿಗಳಿಗಿಂತಲೂ ಆ ಸಮುದಾಯಗಳು ಹೊಂದಿರುವ ರಾಜಕೀಯ ಪ್ರಾಬಲ್ಯ ಮತ್ತು ಮತ ಬ್ಯಾಂಕ್‌ ಗಾತ್ರಗಳೇ ಹೆಚ್ಚಿನ ಪಾತ್ರ ನಿರ್ವಹಿಸಿವೆ. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಒಟ್ಟು ಜನಸಂಖ್ಯೆ 1.3 ಕೋಟಿ (ಶೇ 21) ತಲುಪಲಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಅವರ ಜನಸಂಖ್ಯೆಕ್ಕೆ ತಕ್ಕಂತೆ ಬಜೆಟ್‌ನಲ್ಲಿ ಅನುದಾನ ಒದಗಿಸುವುದಕ್ಕಾಗಿ ಕರ್ನಾಟಕ ಸರಕಾರವು 2013ರಲ್ಲಿ ಪರಿಶಿಷ್ಟ ಜಾತಿಯ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಕಾಯ್ದೆ ಜಾರಿಗೊಳಿಸಿತು. ಇದರ ಹೊರತಾಗಿಯೂ ಪರಿಶಿಷ್ಟ ಪಂಗಡಗಳಲ್ಲಿನ ಪ್ರಬಲ ಗುಂಪುಗಳು ಮತ್ತು ‘ಕೆನೆಪದರ’ದ ಜನರಿಗೆ ಹೆಚ್ಚು ಪಾಲು ದಕ್ಕಿದ್ದು, ನಿಜವಾಗಿಯೂ ಕೆಳಸ್ತರದಲ್ಲಿರುವ ಬುಡಕಟ್ಟು ಜನರಿಗೆ ಕಡಿಮೆ ಪಾಲು ದೊರಕಿದೆ ಎಂಬುದು ವಾಸ್ತವ. ಅರಣ್ಯದೊಳಗೆ ವಾಸಿಸುವ ಬುಡಕಟ್ಟು ಜನರಿಂದ ಬಂದ ಒಬ್ಬ ಚುನಾಯಿತ ಪ್ರತಿನಿಧಿಯೂ ರಾಜ್ಯದಲ್ಲಿ ಕಾಣಸಿಗುವುದಿಲ್ಲ. ಇತ್ತೀಚೆಗೆ ಸಿದ್ಧಿ ಸಮುದಾಯದ ವ್ಯಕ್ತಿಯೊಬ್ಬರಿಗೆ ನಾಮನಿರ್ದೇಶನದ ಮೂಲಕ ವಿಧಾನ ಪರಿಷತ್‌ ಸದಸ್ಯರ ಸ್ಥಾನ ನೀಡಲಾಗಿದೆ. ತನ್ನ ಎಲ್ಲ ನಾಗರಿಕರ ಹಿತರಕ್ಷಣೆ ಮಾಡುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಆದರೆ, ದುರ್ಬಲ ವರ್ಗದ ಮತ್ತು ಅಂಚಿಗೆ ತಳ್ಳಿರುವ ಸಮುದಾಯಗಳನ್ನು ಆದ್ಯತೆಯ ಮೇಲೆ ಪೊರೆಯಬೇಕಾದ ಜವಾಬ್ದಾರಿಯೂ ಸರ್ಕಾರಕ್ಕಿದೆ.

ಬಲ ಹೊಂದಿರುವವರು ಮತ್ತು ರಾಜಕೀಯವಾಗಿ ಪ್ರಭಾವ ಹೊಂದಿರುವ ಜನರ ರಕ್ಷಣೆಯ ಹೆಸರಿನಲ್ಲಿ ದುರ್ಬಲ ವರ್ಗಗಳ ಶಕ್ತಿಯನ್ನು ಮತ್ತಷ್ಟು ಕುಗ್ಗಿಸಬಾರದು. ಅರಣ್ಯವಾಸಿ ಬುಡಕಟ್ಟು ಸಮುದಾಯದ ಮೂಲನಿವಾಸಿ ಜನರಿಗೆ ಒಳ ಮೀಸಲಾತಿ ಕಲ್ಪಿಸುವುದು ಮತ್ತು ಕೆಲವು ವಿಶೇಷ ಹಕ್ಕುಗಳನ್ನು ನೀಡುವ ಮೂಲಕ ಅವರನ್ನು ರಕ್ಷಿಸುವ ಅಗತ್ಯವಿದೆ. ಎಲ್ಲ ಅರಣ್ಯವಾಸಿ ಬುಡಕಟ್ಟುಗಳನ್ನು ‘ಅಪಾಯದ ಅಂಚಿನಲ್ಲಿರುವ ಬುಡಕಟ್ಟು ಗುಂಪುಗಳ’ ಪಟ್ಟಿಗೆ ಸೇರಿಸುವ ಕುರಿತು ಯೋಚಿಸಬೇಕು. ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಬುಡಕಟ್ಟು ಜನರು ವಾಸಿಸುವ ಪ್ರದೇಶಗಳು, ರಾಷ್ಟ್ರೀಯ ಉದ್ಯಾನಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಸಂಸ್ಥೆಗಳ ಶೇಕಡ 50ರಷ್ಟು ಹುದ್ದೆಗಳನ್ನು ಈ ಸಮುದಾಯದ ಜನರಿಗೆ ಮೀಸಲಿಡಬೇಕು. ಅದು ಅರಣ್ಯವಾಸಿ ಬುಡಕಟ್ಟು ಜನರಿಗೆ ಒಂದಷ್ಟು ಸಮಾನತೆ ಮತ್ತು ಘನತೆಯನ್ನು ತಂದುಕೊಡುವ ಮಾರ್ಗವಾಗಬಲ್ಲುದು.

‘ಪರಿಶಿಷ್ಟ ಪಂಗಡ’ ಎಂದು ಗುರುತಿಸಬಹುದಾದ ಜನಾಂಗವೊಂದಷ್ಟೇ ಸಮಾಜಕ್ಕೆ ಈಗ ಅಗತ್ಯವಿಲ್ಲ. ನಿಜವಾದ ‘ಬುಡಕಟ್ಟು’ (ಗಿರಿಜನತ್ವ) ಜೀವನವನ್ನು ಮಾನ್ಯ ಮಾಡುವ ಮತ್ತು ಅದು ಒಳಗೊಂಡಿರುವ ಸುಸ್ಥಿರ ಜೀವನ ಶೈಲಿಯಿಂದ ಪಾಠಗಳನ್ನು ಕಲಿಯುವ ಪ್ರಯತ್ನ ಆಗಬೇಕಿದೆ.

ಲೇಖಕರು– ಡಾ. ಆರ್‌. ಬಾಲಸುಬ್ರಮಣ್ಯಂ, ಸಂಸ್ಥಾಪಕರು ಮತ್ತು ಅಧ್ಯಕ್ಷರು, ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌, (ಮೈಸೂರು ಜಿಲ್ಲೆಯಲ್ಲಿ 25 ವರ್ಷಗಳಿಂದ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT