ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಟಿ.ವಿ ವೀಕ್ಷಣೆ: ಪೋಷಕರೇ ಸಮಯ ನಿಗದಿ ಮಾಡಲಿ!

Last Updated 7 ಜುಲೈ 2019, 19:45 IST
ಅಕ್ಷರ ಗಾತ್ರ

ಮಕ್ಕಳು ಮಾಧ್ಯಮಗಳಿಂದಾಗಿ ಕೆಟ್ಟು ಹೋಗುತ್ತಿದ್ದಾರೆ ಎಂದು ಶಿಕ್ಷಕರು ಹಾಗೂ ಮಕ್ಕಳ ಪಾಲಕರು ದೂರುತ್ತಾರೆ. ಕೆಡುವವರು ಹೇಗಿದ್ದರೂ ಕೆಟ್ಟು ಹೋಗುತ್ತಾರೆ. ಮಾಧ್ಯಮಗಳಿಲ್ಲದ ಕಾಲದಲ್ಲೂ ಜನ ಕೆಡುತ್ತಿದ್ದರು. ಈಗ ಕೆಡುವುದಕ್ಕೆ ಅವಕಾಶಗಳು ಹೆಚ್ಚಿವೆ; ಆಗ ಅಷ್ಟಿರಲಿಲ್ಲ, ವ್ಯತ್ಯಾಸ ಅಷ್ಟೇ. ಆದುದರಿಂದ ವಿದ್ಯುನ್ಮಾನ ಮಾಧ್ಯಮಗಳನ್ನು ನೋಡಲೇಬಾರದು ಎಂದು ಮಕ್ಕಳಿಗೆ ತಾಕೀತು ಮಾಡುವುದು ಸೂಕ್ತವಲ್ಲ. ಏಕೆಂದರೆ ಅನೇಕ ಸಲ ಶೈಕ್ಷಣಿಕ ಮಹತ್ವದ, ವಿಚಾರ ಜಾಗೃತಿಯ ಹಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ. ಯಾವುದನ್ನು ಎಷ್ಟು ಹೊತ್ತು ನೋಡಬೇಕು ಎಂಬುದನ್ನು ಹಿರಿಯರು ನಿರ್ಧರಿಸಬೇಕು.

ನೋಡಬಾರದ ಕಾರ್ಯಕ್ರಮಗಳಿದ್ದರೆ ಮಕ್ಕಳು ಓದುವ ಹೊತ್ತಿನಲ್ಲಿ ಹಿರಿಯರು ಕೂಡ ಕಾರ್ಯಕ್ರಮಗಳನ್ನು ನೋಡಬಾರದು. ಈ ಬಗೆಯ ನಿಗ್ರಹವನ್ನು ಅಳವಡಿಸಿಕೊಳ್ಳಬೇಕು. ಕಾರ್ಯಕ್ರಮಗಳ ಇತಿಮಿತಿ ಅದರ ದುಷ್ಪರಿಣಾಮಗಳು ಇತ್ಯಾದಿಗಳ ಬಗ್ಗೆ ಮಕ್ಕಳ ಜೊತೆ ಚರ್ಚಿಸಬೇಕು. ಅವರು ನಿತ್ಯವೂ ಓದುಗಾರಿಕೆಯಲ್ಲಿ ತೊಡಗಿದರೆ ಆಗ ಮಕ್ಕಳು ಕೂಡ ಪುಸ್ತಕಸ್ನೇಹಿಗಳಾಗುತ್ತಾರೆ. ಓದುಗಾರಿಕೆಯಿಂದ ಮಕ್ಕಳ ಭಾವಶಕ್ತಿ, ಕಲ್ಪನಾಶಕ್ತಿ, ವಿಚಾರಶಕ್ತಿ, ಅಭಿವ್ಯಕ್ತಿ ಶಕ್ತಿ ಶ್ರೀಮಂತವಾಗುತ್ತದೆ ಎಂಬ ಅರಿವನ್ನು ಹಿರಿಯರು ಬೆಳೆಸಿಕೊಳ್ಳಬೇಕು ಹಾಗೂ ಮಕ್ಕಳಲ್ಲಿ ಇಂಥ ಅರಿವನ್ನು ಮೂಡಿಸಬೇಕು.

ಪ್ರತಿನಿತ್ಯ ಮಕ್ಕಳು ಶಾಲೆ ಮುಗಿಸಿ ಬಂದೊಡನೆ ಹಿರಿಯರು ಅವರ ಜೊತೆ ಒಂದರ್ಧ ಗಂಟೆ ಕಾಲ ಕಳೆಯಬೇಕು. ಅವರ ಶಾಲೆ, ಶಿಕ್ಷಕರು, ಪಾಠ–ಪ್ರವಚನಗಳು, ಆಟೋಟಗಳು, ಗೆಳೆಯರು, ಸಾಧನೆ, ತೊಂದರೆ ಇತ್ಯಾದಿಗಳ ಬಗ್ಗೆ ಅವರೊಪ್ಪಿಸುವ ವರದಿಯನ್ನು ತಾಳ್ಮೆಯಿಂದ ಆಲಿಸಬೇಕು. ಅವರ ಸಾಧನೆಗಳನ್ನು ಮೆಚ್ಚಿಕೊಂಡಾಡಬೇಕು. ಸೋಲಿನ, ಅಪಮಾನದ ಸಂದರ್ಭಗಳಲ್ಲಿ ಅವರಲ್ಲಿ ಭಾವನಾತ್ಮಕ ಭರವಸೆ ತುಂಬಬೇಕು. ಅಗತ್ಯವಾದ ಸಹಾಯವನ್ನು ಒದಗಿಸಬೇಕು. ಕಲಿಕೆಯ ಸಮಸ್ಯೆಗಳು, ನಡವಳಿಕೆಯ ಸಮಸ್ಯೆಗಳು ಕಂಡು ಬಂದಲ್ಲಿ ಶಿಕ್ಷಕರ ಜೊತೆ ಚರ್ಚಿಸಬೇಕು. ನಿರಂತರವಾಗಿ ಶಾಲೆ, ಶಿಕ್ಷಕರು ಹಾಗೂ ಮಗುವಿನ ಜೊತೆ ಹಿರಿಯರು ಸಂಪರ್ಕದಲ್ಲಿರಬೇಕು.

ವಿಠ್ಠಲ ವಟವಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT