ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲರ್ ಕನಸಿನ ಬೆನ್ನೇರಿ...

Last Updated 12 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಅಮೆರಿಕನ್ ಡಾಲರುಗಳ ಕನಸಿನ ಬೆನ್ನು ಹತ್ತಿ ಆ ದೇಶವನ್ನು ಪ್ರವೇಶಿಸುವ ಅಕ್ರಮ ಹಾದಿಯಲ್ಲೇ ಗುಜರಾತಿ ಕುಟುಂಬವೊಂದು ಮೊನ್ನೆ ಮಂಜುಗಲ್ಲಾಯಿತು.

ಕಲೋಲ್ ಜಿಲ್ಲೆಯ ಗಾಂಧೀನಗರದಿಂದ ಇಪ್ಪತ್ತು ಕಿಲೋಮೀಟರು ದೂರದಲ್ಲಿರುವ ಪುಟ್ಟ ಗ್ರಾಮ ಡಿಂಗೂಚ. ಇಲ್ಲಿನ ಜನಸಂಖ್ಯೆ 3,600. ಆದರೆ ಇಲ್ಲಿ ವಾಸ್ತವವಾಗಿ ವಾಸಿಸುವವರ ಸಂಖ್ಯೆ ವಿರಳ. ಬಹುತೇಕರು ಅಮೆರಿಕ ಮತ್ತು ಕೆನಡಾಗೆ ವಲಸೆ ಹೋಗಿದ್ದಾರೆ. ಇಲ್ಲಿನ ಬಹುತೇಕ ಮನೆಗಳು ಒಡೆಯರಿಲ್ಲದೆ ಕದವಿಕ್ಕಿವೆ. ತೆರೆದಿರುವ ಬಹಳಷ್ಟು ಮನೆಗಳಲ್ಲಿ ಕೂಡ ಬಾಡಿಗೆದಾರರಿದ್ದಾರೆ.

ಈ ಗ್ರಾಮದ ನಾಲ್ವರು ವಾರಗಳ ಹಿಂದೆ ಮಡಿದ ದುರಂತದ ಕತೆಯಿಂದಾಗಿ ಡಿಂಗೂಚ ಸುದ್ದಿಯಲ್ಲಿದೆ. ಕೆನಡಾದ ಮೂಲಕ ಕಳ್ಳ ಮಾರ್ಗದಲ್ಲಿ ಅಮೆರಿಕೆಯನ್ನು ಪ್ರವೇಶಿಸುವ ಪ್ರಯತ್ನದಲ್ಲಿ ಅವರು ಮರಗಟ್ಟಿ ಸತ್ತರು. ಮೂವತ್ತೊಂಬತ್ತರ ಹರೆಯದ ಜಗದೀಶ ಪಟೇಲ್, ಆತನ ಪತ್ನಿ ವೈಶಾಲಿ ಪಟೇಲ್, ಮಗಳು ವಿಹಾಂಗಿ ಪಟೇಲ್ ಹಾಗೂ ಗಂಡುಕೂಸು ಧಾರ್ಮಿಕ್ ಪಟೇಲ್ ದುರ್ಮರಣದಿಂದ ಶೋಕದ ಉರಿಯಲ್ಲಿ ಬೆಂದಿದೆ ಡಿಂಗೂಚ.

ವಿದೇಶಗಳಿಗೆ ಈ ಗ್ರಾಮಸ್ಥರ ವಲಸೆ ಇಂದು ನೆನ್ನೆಯದಲ್ಲ, ದಶಕಗಳಷ್ಟು ಹಳೆಯದು. ಅರವತ್ತರ ದಶಕದಲ್ಲಿ ಮೊದಲಾದದ್ದು. ವಿದ್ಯಾರ್ಥಿ ವೀಸಾದಲ್ಲಿ ತೆರಳಿ ಅಲ್ಲಿಯೇ ನೆಲೆಸಿದವರು ಸೂಜಿಗಲ್ಲುಗಳಾಗಿ ಸೆಳೆದರು ಇತರರನ್ನು. ಅಮೆರಿಕೆಯಲ್ಲಿ ಮೊಟೆಲ್, ಗ್ಯಾಸ್ ಸ್ಟೇಷನ್ ಇಟ್ಟು ಹಣ ಗಳಿಸುವ ಆಸೆ, ಕುರುಡು ಪೈಪೋಟಿ.

ಆದರೆ ಗ್ರಾಮಸ್ಥರು ಡಿಂಗೂಚ ತೊರೆದು ವಿದೇಶಗಳಿಗೆ ಹೋಗುವುದಾದರೂ ಯಾಕೆ ಎಂಬ ಪ್ರಶ್ನೆಗೆ ಅವರೇ ಉತ್ತರ ಹೇಳುತ್ತಾರೆ - ಓದು ಕಲಿತವರಿಗೆ ಅವರ ಅರ್ಹತೆಗೆ ತಕ್ಕಂತಹ ನೌಕರಿಗಳು ಇಲ್ಲಿ ಇಲ್ಲ, ನಿರುದ್ಯೋಗದ ಕಾರಣ ಜನ ವಿದೇಶಗಳತ್ತ ನೋಡದೆ ವಿಧಿಯಿಲ್ಲ ಎನ್ನುತ್ತಾರೆ ಆ ಗ್ರಾಮದ ಅಮೃತ್ ಪಟೇಲ್.

‘ಇಲ್ಲಿ ನೌಕರಿಗಳಿದ್ದಿದ್ದರೆ ನನ್ನ ಮಕ್ಕಳು ಹೊರದೇಶಗಳಿಗೆ ಹೋಗುತ್ತಲೇ ಇರಲಿಲ್ಲ. ಮಕ್ಕಳು ವಿದ್ಯಾವಂತರಾದ ನಂತರವೂ ಕೃಷಿಯನ್ನೇ ಆಧರಿಸಲು ಇಷ್ಟಪಡುವುದಿಲ್ಲ. ಅಮೆರಿಕ, ಕೆನಡಾ, ದಕ್ಷಿಣ ಆಫ್ರಿಕಾ ಎಲ್ಲಿಗೆ ಹೋದರೂ
ಅಲ್ಲಿ ಪಟೇಲರ (ಪಾಟೀದಾರ್ ಎಂದೂ ಕರೆಯಲಾಗುವ ಗುಜರಾತಿನ ಬಲಿಷ್ಠ ಜಾತಿ) ಸಮುದಾಯದ ನೆರವಿನ ಜಾಲ ಹಬ್ಬಿ ಹರಡಿದೆ. ಮೊಟೆಲ್ ಉದ್ಯಮ, ಡಂಕಿನ್ ಡೋನಟ್, ಸಬ್‌ವೇ ಸ್ಯಾಂಡ್‌ವಿಚ್, ಗ್ಯಾಸ್ ಸ್ಟೇಷನ್ ಇತ್ಯಾದಿ ವ್ಯಾಪಾರ ವ್ಯವವಹಾರಗಳಲ್ಲಿ ನೆಲೆ ನಿಂತಿರುವ ಪಾಟೀದಾರರು ಗುಜರಾತಿನಿಂದ ಬರುವ ತಮ್ಮ ಬಂಧುಗಳನ್ನು ಬೆಂಬಲಿಸಿ ಬೆಳೆಸುತ್ತಾರೆ. ಅಕ್ರಮವಾಗಿ ಆ ದೇಶವನ್ನು ಪ್ರವೇಶಿಸಿದವರಿಗೂ ತಲಾ ಹತ್ತು ಸಾವಿರ ಡಾಲರುಗಳ ಧನಸಹಾಯ ನೀಡಿ ಕೈಹಿಡಿದು ಮೇಲೆತ್ತುತ್ತಾರೆ. 10-15 ಸಾವಿರ ಡಾಲರುಗಳು ಅವರಿಗೆ ದೊಡ್ಡ ಲೆಕ್ಕವೇ ಅಲ್ಲ’ ಎನ್ನುತ್ತಾರೆ ಅಮೃತ್ ಭಾಯಿ. ಆರು ತಿಂಗಳು ಭಾರತದಲ್ಲಿ, ಆರು ತಿಂಗಳು ಅಮೆರಿಕೆಯಲ್ಲಿ ಇವರ ವಾಸ. ಮಕ್ಕಳೆಲ್ಲ ಅಮೆರಿಕೆಯ ಅಧಿಕೃತ ನಾಗರಿಕರು.

ಅಮೆರಿಕನ್ ಡಾಲರ್ ಮತ್ತು ಗ್ರೀನ್ ಕಾರ್ಡಿನದು ಸೂಜಿಗಲ್ಲಿನ ಸೆಳೆತ. ಸಕ್ರಮ ವಲಸೆ ಸುಲಭವಲ್ಲ. ಹೀಗಾಗಿ ಅಪಾಯ ಮೈಮೇಲೆರಗಿದರೂ ಸರಿಯೇ, ಅಕ್ರಮ ವಲಸೆಗೆ ಸಿದ್ಧ ಗುಜರಾತಿಗಳು.

ಮಾನವ ಕಳ್ಳಸಾಗಣೆಗೆ ನೆರವಾಗುವ ಕಸಬುದಾರ ದಲ್ಲಾಳಿಗಳ ದೊಡ್ಡ ಜಾಲವೇ ಗುಜರಾತಿನಲ್ಲಿದೆ. ಭಾರೀ ಮೊತ್ತ ಪಡೆದು ಕಳ್ಳದಾರಿಯಲ್ಲಿ ದೇಶ-ವಿದೇಶಗಳ ಗಡಿ ದಾಟಿಸುವ ಅಂತರರಾಷ್ಟ್ರೀಯ ಏಜೆಂಟರೊಂದಿಗೆ ಇವರ ಸಂಪರ್ಕ ಉಂಟು. ಡಿಂಗೂಚದ ಇಂತಹ ಒಬ್ಬ ದಲ್ಲಾಳಿ ಇಲ್ಲಿಯವರೆಗೆ 8-10 ಕುಟುಂಬಗಳನ್ನು ಯಶಸ್ವಿಯಾಗಿ ಅಮೆರಿಕೆಯನ್ನು ಮುಟ್ಟಿಸಿಬಿಟ್ಟಿದ್ದಾನೆ.

ಇದೇ ದಲ್ಲಾಳಿ ಇತ್ತೀಚೆಗೆ ರವಾನಿಸಿದ ಇಂತಹ ಕುಟುಂಬವೊಂದು ನಾಪತ್ತೆಯಾಗಿತ್ತು. ಅದಕ್ಕಾಗಿ ಶೋಧ ಕಾರ್ಯಗಳು ವ್ಯಾಪಕವಾಗಿ ನಡೆದಿದ್ದವು. ಗುಜರಾತಿನ ಅಪರಾಧ ತನಿಖಾ ಇಲಾಖೆಯಲ್ಲದೆ ಅಮೆರಿಕ ಮತ್ತು ಕೆನಡಾದ ಭದ್ರತಾ ಏಜೆನ್ಸಿಗಳು ಈ ದುರಂತದ ಸುತ್ತಣ ಮಾನವ ಕಳ್ಳಸಾಗಣೆ ಕುರಿತು ತನಿಖೆ ನಡೆಸುತ್ತಿವೆ.

ಆನಂದ್, ಅಮ್ರೇಲಿ, ಮೆಹಸಾಣ, ಖೇಡಾ, ಗಾಂಧೀನಗರ ಜಿಲ್ಲೆಗಳ ಪಟೇಲ್ ಪ್ರಾಬಲ್ಯದ ಹಳ್ಳಿಗಳ ಮಧ್ಯಮ ತರಗತಿಯ ಕುಟುಂಬಗಳಿಗೆ ಅಮೆರಿಕ ವಲಸೆ ಮಾಮೂಲು ವಿಚಾರ. ಇವರ ಪೈಕಿ ಕಳ್ಳದಾರಿ ಹಿಡಿಯುವವರ ಸಂಖ್ಯೆ ಸಣ್ಣದೇನಲ್ಲ. ಅಮೆರಿಕದಲ್ಲಿ ನೆಲೆಸುವುದು ಪಟೇಲರಲ್ಲಿ ಪ್ರತಿಷ್ಠೆಯ ಪ್ರತೀಕ.

ಜನವರಿ ಮೊದಲ ವಾರ ಅಮೆರಿಕದ ವೀಸಾ ಕಾಗದಪತ್ರಗಳ ವಿನಾ ಕೆನಡಾಗೆ ತೆರಳಿತ್ತು ಈ ಕುಟುಂಬ. ಅಮೆರಿಕ ಪ್ರವೇಶದ ದುಸ್ಸಾಹಸ ಜಗದೀಶನ ತಂದೆತಾಯಿಗಷ್ಟೇ ತಿಳಿದಿತ್ತು. ಕ್ಷೇಮವಾಗಿ ಕೆನಡಾ ತಲುಪಿದ್ದೇವೆಂದು ಜನವರಿ ಹದಿನೈದರಂದು ಬಂದ ಸಂದೇಶವೇ ಮಗನ ಕಟ್ಟಕಡೆಯ ಮಾತಾಗಿ ಪರಿಣಮಿಸಿತು.

ಅಮೆರಿಕ-ಕೆನಡಾ ಗಡಿ ಭಾಗದ ದಕ್ಷಿಣ ಮಾನಿಟೋಬಾದಲ್ಲಿ ಈ ನತದೃಷ್ಟ ಕುಟುಂಬದ ಕಳೇಬರಗಳು ಜನವರಿ 19ರಂದು ಪತ್ತೆಯಾದವು. ಹಿಮದ ಬಿರುಗಾಳಿ ಬೀಸಿ ಉಷ್ಣಾಂಶ ಮೈನಸ್ 35 ಡಿಗ್ರಿಗೆ ಕುಸಿದ ಭಯಾನಕ ಚಳಿಯಲ್ಲಿ ಎರಗಿತ್ತು ಸಾವು.

ಜಗದೀಶ ಮತ್ತು ವೈಶಾಲಿ ಶಾಲಾ ಶಿಕ್ಷಕರಾಗಿದ್ದವರು. ಶಿಕ್ಷಕ ನೌಕರಿ ತೊರೆದು ಕಲೋಲದಲ್ಲಿ ತಮ್ಮನ ಸಿದ್ಧ ಉಡುಪು ವ್ಯಾಪಾರದಲ್ಲಿ ಕೈಕಲೆಸಿದ್ದ ಜಗದೀಶ. ಈ ವ್ಯಾಪಾರವನ್ನೂ ಕೈಬಿಟ್ಟು ಕೆಲ ತಿಂಗಳ ಹಿಂದೆ ಕುಟುಂಬಸಹಿತ ಡಿಂಗೂಚದ ತಂದೆ ತಾಯಿಯ ಮನೆಗೆ ಹಿಂದಿರುಗಿದ್ದ. ಕೆನಡಾ ಮೂಲಕ ಅಮೆರಿಕೆಯನ್ನು ಸುರಕ್ಷಿತವಾಗಿ ತಲುಪಲು ಈ ಕುಟುಂಬ ಏಜೆಂಟರಿಗೆ ನೀಡಿದ್ದ ಮೊತ್ತ ಒಂದೂವರೆ ಕೋಟಿ ರೂಪಾಯಿ ಎನ್ನಲಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಡಿಂಗೂಚದಿಂದ ಹೀಗೆ ಕಳ್ಳದಾರಿಯಲ್ಲಿ ಅಮೆರಿಕೆಯಲ್ಲಿ ಇಳಿದ ಕುಟುಂಬಗಳು ಹತ್ತಕ್ಕೂ ಹೆಚ್ಚು ಎಂಬುದು ಅನಧಿಕೃತ ಅಂದಾಜು.

ಡಿಂಗೂಚದಂತಹ ಹತ್ತಾರು ‘ಅನಿವಾಸಿ ಭಾರತೀಯ’ ಹಳ್ಳಿಗಳು ಗುಜರಾತಿನಲ್ಲಿವೆ. ಇವೆಲ್ಲವುಗಳ ಸಾಮಾಜಿಕ-ಆರ್ಥಿಕ-ರಾಜಕೀಯ ಸಂರಚನೆ ಹೆಚ್ಚು ಕಡಿಮೆ ಏಕಪ್ರಕಾರದ್ದು. ಪಟೇಲರು ಮತ್ತು ಠಾಕೂರರೇ ಈ ಹಳ್ಳಿಗಳ ಪ್ರಬಲ ಜಾತಿಗಳು. ತಳಜಾತಿಗಳು ಬೇರೆಯೇ ಲೋಕದಲ್ಲಿ ವಾಸಿಸುತ್ತವೆ. ಸಿರಿಸಂಪತ್ತು ಅವುಗಳನ್ನು ಸೋಕುವುದು ವಿರಳ. ಜಾತಿವ್ಯವಸ್ಥೆಯ ಭೇದ ಭಾವಕ್ಕೆ ಕೊರತೆಯೇ ಇಲ್ಲ. ಪರಂಪರಾಗತ ಉಕ್ಕಿನ ಚೌಕಟ್ಟು ಸಡಿಲಾಗಿಲ್ಲ. ಇವೆಲ್ಲವುಗಳ ಅಡಿಪಾಯವೆನಿಸಿದ ಭೂಮಿ ಸಂಬಂಧಗಳು ಇನ್ನಷ್ಟು ಕಟ್ಟುನಿಟ್ಟು.

ಡಿಂಗೂಚದಲ್ಲೂ ಪಟೇಲರು ಮತ್ತು ಠಾಕೂರರ ಜನಸಂಖ್ಯೆ ಹೆಚ್ಚೂಕಡಿಮೆ ಸರಿಸಮ ಇದೆ. ಎಪ್ಪತ್ತಕ್ಕೂ ಹೆಚ್ಚು ಕುಟುಂಬಗಳು ಅಮೆರಿಕೆಯಲ್ಲಿ ನೆಲೆಸಿವೆ. ಆಸ್ಟ್ರೇಲಿಯಾ ಮತ್ತು ಕೆನಡಾಕ್ಕೂ ವಲಸೆ ಹೋಗಿವೆ.

ರೈತಾಪಿ ಕುಟುಂಬ ಇಲ್ಲವೇ ಕೆಳಮಧ್ಯಮವರ್ಗಕ್ಕೆ ಸೇರುವ ಜಗದೀಶ್ ಮತ್ತು ವೈಶಾಲಿಯಂತಹ ಬಹುತೇಕರು ಕಳ್ಳದಾರಿಯಿಂದ ಸುರಕ್ಷಿತವಾಗಿ ಅಮೆರಿಕೆ ತಲುಪಿದರೂ ಅಲ್ಲಿ ಅವರಿಗೆ ದೊಡ್ಡ ಉದ್ಯೋಗಗಳೇನೂ ದೊರೆಯುವುದಿಲ್ಲ. ಅನಿವಾಸಿ ಭಾರತೀಯರು ನಡೆಸುವ ಗ್ಯಾಸ್ ಸ್ಟೇಷನ್‌ಗಳು, ಮೊಟೆಲ್‌ಗಳು, ಡಿಪಾರ್ಟ್ಮೆಂಟಲ್ ಸ್ಟೋರ್‌ಗಳ ಕಡಿಮೆ ಆದಾಯದ ಚಾಕರಿಗಳೇ ಗತಿ. ಇವರು ಕಳ್ಳದಾರಿಯಿಂದ ಬಂದವರೆಂದು ಅವರು ಪೊಲೀಸರಿಗೆ ಹಿಡಿದುಕೊಡುವುದಿಲ್ಲ. ಇವರು ಅಮೆರಿಕೆಯಲ್ಲಿ ಚಾಲ್ತಿಯಲ್ಲಿರುವ ದುಬಾರಿ ಕೂಲಿ ಕೇಳುವುದಿಲ್ಲ. ಈ ಅಲಿಖಿತ ಒಪ್ಪಂದದಲ್ಲಿ ಅನಿರೀಕ್ಷಿತ ಘಟಿಸಿ ಧನವಂತರಾಗುವುದು ಅಪರೂಪ. ಆದರೆ ಇಲ್ಲಿ ಭಾರತದಲ್ಲಿ ಇವರು ಅಮೆರಿಕೆಯವರೆಂಬ ಪ್ರತಿಷ್ಠೆ.

ಗುಜರಾತಿನ ಅಗ್ರಗಣ್ಯ ಅನಿವಾಸಿ ಭಾರತೀಯ ಗ್ರಾಮ ಆನಂದ್ ಜಿಲ್ಲೆಯ ಧರ್ಮಜ. ಏಷ್ಯಾದ ಅತ್ಯಂತ ಶ್ರೀಮಂತ ಹಳ್ಳಿಯೆಂದು ಪ್ರಸಿದ್ಧ. ಅತಿ ಹೆಚ್ಚಿನ ಅನಿವಾಸಿ ಭಾರತೀಯ ಹಣ ಇಲ್ಲಿಗೆ ಹರಿದು ಬರುತ್ತದೆ. ಧರ್ಮಜ ಗ್ರಾಮದ ಜನಸಂಖ್ಯೆ 11,333. ಇಷ್ಟು ಕಡಿಮೆ ಜನಸಂಖ್ಯೆಗೆ ಇಲ್ಲಿರುವ ಬ್ಯಾಂಕುಗಳು ಹದಿಮೂರು! ಠೇವಣಿ ಸಾವಿರ ಕೋಟಿ ರೂಪಾಯಿ.

ಇಲ್ಲಿನ ಮನೆಗಳು ಮಹಲುಗಳೆಂದೇ ಕರೆಯಬೇಕಾದಷ್ಟು ಭವ್ಯ. ಆದರೆ ಧರ್ಮಜದ ದಲಿತರ ಮನೆಗಳು ಈ ಮಾತಿಗೆ ಹೊರತು. ಸಿರಿವಂತಿಕೆ ಅವರ ಹಟ್ಟಿಯತ್ತ ಹರಿದು ಬಂದಿಲ್ಲ. ಊನಾದ ದಲಿತರನ್ನು ಕಾರಿನ ಬಂಪರ್‌ಗೆ ಬಿಗಿದು ಕಟ್ಟಿ ಅಮಾನುಷವಾಗಿ ಥಳಿಸಿದ ಘಟನೆ ಜಗಜ್ಜಾಹೀರಾದ ನಂತರ ಧರ್ಮಜದ ದಲಿತ ಮುಂದಾಳು ಕಾಂತಿಭಾಯಿ ಮಕ್ವಾನ ಬೌದ್ಧ ಧರ್ಮ ಸ್ವೀಕರಿಸಿದರು. ಆನಂತರ ಇಡೀ ಹಟ್ಟಿಯೇ ಆತನ ಹಿಂದೆ ನಡೆದು ಬುದ್ಧನಿಗೆ ಶರಣೆಂದಿದೆ.

ಇತ್ತೀಚೆಗೆ ಪಾಟೀದಾರರ ಕ್ರೋಧಕ್ಕೆ ಬೆದರಿ 274 ದಲಿತ ಕುಟುಂಬಗಳ ಪೈಕಿ 250 ಕುಟುಂಬಗಳು ದಲಿತ ಹಟ್ಟಿಯನ್ನು ತೊರೆದು ಹೋಗಿದ್ದವು. ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಮತದಾನ ಮಾಡಲು ಮುಂದಾಗಿದ್ದೇ ದಲಿತರ ಮಹಾಪರಾಧವಾಗಿತ್ತು. ಮತದಾನ ಮಾಡದಂತೆ ಅವರನ್ನು ತಡೆಯಲಾಗಿತ್ತು.

ಸೂರತ್ ಜಿಲ್ಲೆಯ ಯೇನಾ ಎಂಬುದು ರಾಜ್ಯದ ಮತ್ತೊಂದು ಅನಿವಾಸಿ ಭಾರತೀಯ ಗ್ರಾಮ. ಯಾವುದೇ ‘ಸ್ಮಾರ್ಟ್ ಸಿಟಿ’ಗಿಂತ ಕಮ್ಮಿಯಿಲ್ಲದ ಗ್ರಾಮ. ಆದರೆ ಈ ಶ್ರೇಯಸ್ಸು ನೂರಕ್ಕೆ ನೂರು ಈ ಗ್ರಾಮದ ಅನಿವಾಸಿ ಭಾರತೀಯರದೇ. ಯೇನಾದ ಜನಸಂಖ್ಯೆ 4,700. ಈ ಪೈಕಿ 2000ಕ್ಕೂ ಹೆಚ್ಚು ಮಂದಿ ಬ್ರಿಟನ್, ಅಮೆರಿಕ, ಕೆನಡಾದಲ್ಲಿ ನೆಲೆಸಿದ್ದಾರೆ.

ಕಛ್ ಜಿಲ್ಲೆಯ ಮಾಧಾಪಾರ್ ಗ್ರಾಮದ ಅಧಿಕಾಂಶ ಬ್ಯಾಂಕ್ ಠೇವಣಿಗಳು ಆಫ್ರಿಕಾ ಮತ್ತು ಬ್ರಿಟನ್‌ನಲ್ಲಿ ನೆಲೆಸಿರುವ ಲೇವಾ ಪಟೇಲರದು. ಇವರು ಮೂರು ಅಥವಾ ನಾಲ್ಕನೆಯ ತಲೆಮಾರಿನ ಅನಿವಾಸಿ ಭಾರತೀಯರು. ಇವರ ತಾತ ಮುತ್ತಾತಂದಿರು 19ನೆಯ ಶತಮಾನದಲ್ಲಿ ಆಫ್ರಿಕಾಗೆ ವಲಸೆ ಹೋಗಿದ್ದರು. ಹೀಗೆ ವಲಸಿಗ ವರ್ತಕರ ಪರವಾಗಿ ವಕಾಲತ್ತು ವಹಿಸಲೆಂದು ಮಹಾತ್ಮ ಗಾಂಧಿ ಕೂಡ ಆಫ್ರಿಕೆಗೆ ತೆರಳಿದ್ದರು. 1950ರ ದಶಕದಲ್ಲಿ ಬರಗಾಲ ಬಿದ್ದಾಗ ಎದ್ದಿದ್ದು ವಲಸೆಯ ಎರಡನೆಯ ಅಲೆ.

ಹೆಚ್ಚೆಂದರೆ 7,600 ಮಹಲುಗಳಿರುವ ಮಾಧಾಪಾರದ ಹದಿನೇಳು ಬ್ಯಾಂಕುಗಳಲ್ಲಿ ಒಟ್ಟು 5,000 ಕೋಟಿ ರೂಪಾಯಿಯಷ್ಟು ಠೇವಣಿಯಿದೆ! ವಿಶ್ವದ ಅತ್ಯಂತ ಶ್ರೀಮಂತ ಹಳ್ಳಿಯೆಂದು ಮಾಧಾಪಾರವನ್ನು ಕರೆಯುವುದುಂಟು. 1968ರಷ್ಟು ಹಿಂದೆಯೇ ಲಂಡನ್‌ನಲ್ಲಿ ಮಾಧಾಪಾರ್ ಗ್ರಾಮ ಸಂಘವನ್ನು ಸ್ಥಾಪಿಸಲಾಗಿತ್ತು. ವಿದೇಶಗಳಲ್ಲಿನ ಮಾಧಾಪಾರದ ಜನರನ್ನು ಸಭೆ ಸೇರಿಸುವುದು ಈ ಸಂಘದ ಉದ್ದೇಶವಾಗಿತ್ತು.

ಕಛ್ ಸೀಮೆಯ ಹಿಂದೂ-ಮುಸ್ಲಿಮರು ಶತಮಾನಗಳಿಂದಲೂ ವಿದೇಶಗಳಲ್ಲಿ ವ್ಯಾಪಾರ ವಹಿವಾಟಿನ ಸಾಹಸಕ್ಕೆ ಹೆಸರುವಾಸಿ. ಮಾಧಾಪಾರದ ಜನ ಆಫ್ರಿಕಾ ಮತ್ತು ಬ್ರಿಟನ್ ನಂತರ ಸ್ವಿಟ್ಜರ್ಲೆಂಡ್‌, ನ್ಯೂಜಿಲೆಂಡ್, ಹಾಗೂ ಅಮೆರಿಕೆಗೆ ಹಿಂಡುಹಿಂಡಾಗಿ ವಿಸ್ತರಿಸಿ ಹಬ್ಬಿಕೊಂಡವರು. ಬಡತನವನ್ನೇ ಹಾಸಿ ಹೊದ್ದಿರುವ ಕಛ್‌ನ ಅನೇಕ ಹಳ್ಳಿಗಳಿವೆ. ಅವುಗಳನ್ನು ಮಾಧಾಪಾರಕ್ಕೆ ಹೋಲಿಸಿ ಅಧ್ಯಯನ ಮಾಡಬೇಕೆನ್ನುತ್ತಾರೆ ಹಿರಿಯ ರಾಜಕೀಯ ಸಮಾಜಶಾಸ್ತ್ರಜ್ಞ ಡಿ.ಎಲ್.ಶೇಠ್.

ತಮ್ಮ ಬೇರುಗಳು ಹುಟ್ಟಿದ ಹಳ್ಳಿಗಳೊಂದಿಗೆ ಗುಜರಾತಿನ ಅನಿವಾಸಿ ಭಾರತೀಯರ ಬಂಧ ಎಂದೂ ಕಡಿದು ಹೋಗದಷ್ಟು ಗಟ್ಟಿ. ಹುಟ್ಟಿದ ನೆಲವನ್ನು ಸಕಲ ಸೌಕರ್ಯಗಳೊಂದಿಗೆ ‘ಸಮೃದ್ಧ’ಗೊಳಿಸುತ್ತಾರೆ. ಬಹುತೇಕರು ಮುಪ್ಪಿನ ಕಾಲಕ್ಕೆ ವಾಪಸು ಬಂದು ಇಲ್ಲಿಯೇ ಕಡೆಗಾಲ ಕಳೆದು ಮಣ್ಣು ಸೇರುತ್ತಾರೆ.

ಅನಿವಾಸಿ ಭಾರತೀಯ ಗುಜರಾತಿಗಳ ಪೈಕಿ ಬಹಳ ಮಂದಿ ತಮ್ಮ ಸಂಪಾದನೆಯನ್ನು ತಮ್ಮ ಹಳ್ಳಿಗಳ ಬ್ಯಾಂಕುಗಳಲ್ಲಿಯೇ ಠೇವಣಿ ಇರಿಸುತ್ತಾರೆ. ತಾವು ನೆಲೆಸಿರುವ ವಿದೇಶಗಳಲ್ಲಿನ ಬ್ಯಾಂಕುಗಳಲ್ಲಿ ಅವರಿಗೆ ನಂಬಿಕೆಯಿಲ್ಲ. ವಿಶೇಷವಾಗಿ ಆಫ್ರಿಕಾದಿಂದ ಹಲವು ಸಲ ಪಲಾಯನ ಮಾಡಬೇಕಾದ ಸಂದರ್ಭಗಳನ್ನು ಅವರು ಎದುರಿಸಿದ್ದಾರೆ. ಉಗಾಂಡಾದ ಇದಿ ಅಮೀನ್ ಆಳ್ವಿಕೆ ಇವರ ಆಸ್ತಿಪಾಸ್ತಿಗಳೆಲ್ಲವನ್ನೂ ಮುಟ್ಟುಗೋಲು ಹಾಕಿಕೊಂಡುಬಿಟ್ಟಿತ್ತು. ತಾವು ನೆಲೆಸಿರುವ ದೇಶಗಳಲ್ಲಿನ ಕೆಲವು ಸ್ಥಳೀಯ ಬ್ಯಾಂಕುಗಳು ತಾವೂ ಮುಳುಗಿ ಗುಜರಾತಿಗಳ ಗಳಿಕೆಯ ಠೇವಣಿಗಳನ್ನೂ ಮುಳುಗಿಸಿವೆ. ಭಾರತೀಯ ಬ್ಯಾಂಕುಗಳಲ್ಲಿ ಠೇವಣಿ ಇರಿಸಿದರೆ ತೆರಿಗೆ ರಿಯಾಯತಿಗಳು ಸೇರಿದಂತೆ ಹಲವು ರಿಯಾಯಿತಿಗಳೂ ಲಭ್ಯ. ತಮ್ಮ ನಿವೃತ್ತ ಬದುಕಿಗಾಗಿ ಉಳಿಸಿದ ಇಡುಗಂಟು ಇದೆಂದೂ ಗುಜರಾತಿಗಳು ಭಾವಿಸುತ್ತಾರೆ.

ಮದುವೆ ಮಾರುಕಟ್ಟೆ ಪ್ರವೇಶಿಸುವ ವರನಿಗೆ ತನ್ನ ಮನೆ, ಉದ್ಯೋಗ, ಸಂಬಳ, ಸಂಪಾದನೆ ಕುರಿತು ಪ್ರಶ್ನೆಗಳು ಎದುರಾಗುವುದು ಸ್ವಾಭಾವಿಕ. ಆದರೆ ‘42 ಹಳ್ಳಿಗಳ ಪಾಟೀದಾರ ಸಮಾಜ’ಕ್ಕೆ (ಗಾಂಧೀನಗರ ಮತ್ತು ಮೆಹಸಾಣ ಜಿಲ್ಲೆಗಳ 42 ಹಳ್ಳಿಗಳ ಪಾಟೀದಾರ ಸಮುದಾಯ) ಸೇರಿದ ವಧುವನ್ನು ಬಯಸುವ ವರ ಹೆಚ್ಚುವರಿ ಪ್ರಶ್ನೆಯೊಂದನ್ನು ಎದುರಿಸುತ್ತಾನೆ- ನಿನ್ನ ಬಂಧುಗಳು ಸಂಬಂಧಿಕರು ಯಾರಾದರೂ ಅಮೆರಿಕೆಯಲ್ಲಿ ಇಲ್ಲವೇ ಕನಿಷ್ಠ ಪಕ್ಷ ಕೆನಡಾದಲ್ಲಿ ನೆಲೆಸಿದ್ದಾರೆಯೇ? ಇಲ್ಲ ಎಂಬುದು ಆತನ ಉತ್ತರವಾದರೆ ಆ ವಧುವಿನ ಆಸೆಯನ್ನು ಕೈಬಿಡಬೇಕು.

ಮಹಿಳೆಯರು ಎನ್‌ಆರ್‌ಐ ವರನನ್ನೇ ಬಯಸುತ್ತಾರೆ. ಅಮೆರಿಕೆಯಲ್ಲಿ ಈಗಾಗಲೇ ನೆಲೆಸಿರುವ ಗುಜರಾತಿ ವರನಿಗೆ ಅಲ್ಲಿಯೇ ನೆಲೆಸಿದ ಗುಜರಾತಿ ವಧು ಬೇಕು. ಅದಕ್ಕಾಗಿ ಆಕೆಗೆ ‘ವಧುದಕ್ಷಿಣೆ’ಯನ್ನೂ ತೆರುತ್ತಾನೆ ಆತ. ವಧುವನ್ನು ಅಕ್ರಮವಾಗಿ ಅಮೆರಿಕೆಗೆ ಸಾಗಿಸಲು ಆಕೆಯ ಕುಟುಂಬ ಮಾಡಿದ್ದ ವೆಚ್ಚವನ್ನು ಒಳಗೊಂಡಿರುತ್ತದೆ ಈ ‘ವಧುದಕ್ಷಿಣೆ’.

ಡಿಂಗೂಚ ಗ್ರಾಮದ ಭವಿನ್ ಪಟೇಲ್ ಪ್ರಕಾರ ಅಮೆರಿಕ ಇಲ್ಲವೇ ಇತರ ವಿದೇಶಗಳಿಗೆ ಹೋಗದಿರುವ ಪುರುಷನಿಗೆ ವಧು ಸಿಗುವುದು ಅತಿ ಕಠಿಣ. ಅಂತಹ ಎಷ್ಟೋ ಪುರುಷರು ಅವಿವಾಹಿತರಾಗಿ ಉಳಿದಿದ್ದಾರೆ. ಈ ಕಾರಣಕ್ಕಾಗಿಯೇ ಅಪಾಯಕರ ಎನಿಸಿದರೂ ಕಳ್ಳ ಮಾರ್ಗಗಳಲ್ಲಿ ಅಮೆರಿಕೆಗೆ ಹೋಗಲು ಬಯಸುತ್ತಾರೆ.

ಭುಜ್‌ನಿಂದ ಹದಿನೈದು ಕಿ.ಮೀ.ದೂರದ ಹಳ್ಳಿ ಬಲಾದಿಯಾ. ಅನಿವಾಸಿ ಭಾರತೀಯರ ಈ ಹಳ್ಳಿ ಏಳು ವರ್ಷಗಳ ಹಿಂದೆ 2015ರಲ್ಲೇ 2000 ಕೋಟಿ ರೂಪಾಯಿ ಬ್ಯಾಂಕ್ ಠೇವಣಿಗಳನ್ನು ಹೊಂದಿತ್ತು. ಮಾಧಾಪಾರದ ಬ್ಯಾಂಕ್ ಠೇವಣಿಗಳ ಮೊತ್ತ ಅದಾಗಲೇ 5000 ಕೋಟಿ ರೂಪಾಯಿ ದಾಟಿತ್ತು. ಕೇವಲ 1,863 ಕುಟುಂಬಗಳ ಕೇರಾ ಎಂಬ ಮತ್ತೊಂದು ಹಳ್ಳಿಯ ಬ್ಯಾಂಕ್ ಠೇವಣಿಗಳ ಮೊತ್ತ ಕೂಡ 2000 ಕೋಟಿ ರೂಪಾಯಿಯಾಗಿತ್ತು. ಮೂರೂ ಹಳ್ಳಿಗಳಲ್ಲಿನ ಬ್ಯಾಂಕ್ ಶಾಖೆಗಳ ಸಂಖ್ಯೆ 30 ದಾಟಿತ್ತು. 24 ಎ.ಟಿ.ಎಂ. ಇದ್ದವು. 100ರಿಂದ 500 ಕೋಟಿ ಬ್ಯಾಂಕ್ ಠೇವಣಿಗಳಿರುವ ಇತರೆ ಹಳ್ಳಿಗಳಿವೆ. ಅವು ನಾನ್ಪುರ, ಸುಖ್ಪಾರ್, ಕೋಡಕಿ, ರಾಂಪಾರ್ ವೇಕರ, ಮಾನ್ಕುವ, ಭರಸರ್ ಹಾಗೂ ಸಾಮ್ತರಾ.

ಕಛ್ ಜಿಲ್ಲೆಯ ಒಟ್ಟು ಎನ್‌ಆರ್‌ಐ ಠೇವಣಿಗಳು ಏಳು ವರ್ಷಗಳಷ್ಟು ಹಿಂದೆಯೇ 9,181 ಕೋಟಿ ರೂಪಾಯಿಯನ್ನು ತಲುಪಿದ್ದವು. ಈ ಬಾಬತ್ತಿನಲ್ಲಿ ಅಹಮದಾಬಾದ್‌ಗೆ ಮೊದಲ ಸ್ಥಾನ. ಕಛ್‌ನದ್ದು ಎರಡನೆಯ ಸ್ಥಾನ. ಎನ್‌ಆರ್‌ಐ ಮತ್ತು ಇತರರ ಠೇವಣಿಗಳೂ ಸೇರಿ ಕಛ್ ಜಿಲ್ಲೆಯ ಬ್ಯಾಂಕುಗಳಲ್ಲಿನ ಠೇವಣಿ 24,353 ಕೋಟಿ ರೂಪಾಯಿ ದಾಟಿತ್ತು. ಈ ಹಳ್ಳಿಗಳ ನಿವಾಸಿಗಳು ಕೀನ್ಯಾ, ಉಗಾಂಡ, ಮೊಝಾಂಬಿಕ್, ತಾಂಜಾನಿಯಾ, ದಕ್ಷಿಣ ಆಫ್ರಿಕಾ, ಬ್ರಿಟನ್ ಹಾಗೂ ಆಸ್ಟ್ರೇಲಿಯಾದ ಅನಿವಾಸಿ ಭಾರತೀಯ ಗುಜರಾತಿಗಳು.

ಠೇವಣಿಗಳಿಗೆ ಆಕರ್ಷಕ ಬಡ್ಡಿದರಗಳನ್ನು ಜಾಹೀರುಗೊಳಿಸುವ ಭಾರೀ ಭಿತ್ತಿಬರಹಗಳು ಈ ಹಳ್ಳಿಗಳಲ್ಲಿ ಮಾಮೂಲು ನೋಟ. ಪಂಜಾಬಿನಲ್ಲಿ ಡೋಬ್ ಸೀಮೆ ಕೂಡ ಅನಿವಾಸಿ ಭಾರತೀಯರ ವಿಪುಲ ಸಂಖ್ಯೆಗೆ ಹೆಸರಾದದ್ದು. ಒಟ್ಟು 80 ಲಕ್ಷ ಅನಿವಾಸಿ ಭಾರತೀಯರ ಪೈಕಿ 20 ಲಕ್ಷ ಮಂದಿ ದಲಿತರಿದ್ದಾರೆ.

ಈ ಶತಕೋಟಿ ಇಲ್ಲವೇ ಸಾವಿರ ಕೋಟ್ಶಧೀಶ ಅನಿವಾಸಿ ಹಳ್ಳಿಗಳು ನಮ್ಮವು ಎಂದು ಬಹು ಜನರು ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಹೆಮ್ಮೆಪಡುವ ಕಾಲ ಇನ್ನೂ ಬರಬೇಕಿದೆ. ಏಕಮುಖವಾಗಿರುವ ಸಂಪತ್ತಿನ ಚಲನೆ ಬಹುಮುಖವೂ ಬಹುಜನವೂ ಆಗಬೇಕಿದೆ. ಇಲ್ಲವಾದರೆ ಈ ಸಿರಿಸಂಪತ್ತಿಗೆ ಅರ್ಥವಿರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT