ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Valentine Day Special: ಆಹಾ ಪ್ರೀತಿ

Last Updated 12 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಸಂಜೆಯ ಹೊತ್ತಿಗೆ ಸೂರ್ಯ ಮುಳುಗುವಾಗ ರಾಣಿಯ ದೇವಾಲಯದ ನೆರಳಿನಲ್ಲಿ ರಾಜನ ದೇವಾಲಯ ಒಂದಾಗಿರುತ್ತದೆ. 1300 ವರುಷಗಳ ನಂತರವೂ, ಈ ಇಬ್ಬರು ಪ್ರೇಮಿಗಳು ಹೀಗೆ ತಮ್ಮ ಸಮಾಧಿಯಿಂದ ಒಬ್ಬರನ್ನೊಬ್ಬರು ಪ್ರೀತಿಯಿಂದ ಸ್ಪರ್ಶಿಸುತ್ತಾರೆ, ಮುತ್ತು ಕೊಡುತ್ತಾರೆ!

***

ಗ್ವಾಟೆಮಾಲಾದ ಟಿಕಾಲ್ ಎಂಬ ಸ್ಥಳದಲ್ಲಿ ದಟ್ಟ ಅಡವಿಯ ನಡುವೆ ಒಂದು ದೇವಾಲಯವಿದೆ. ಮಾಯನ್ ನಾಗರಿಕತೆಯ ವೈಭವದ ಸೂರ್ಯ ದೊರೆ ಕಟ್ಟಿಸಿದ ದೇವಾಲಯವಿದು. ಅವನ ಹೆಸರು ಜಾಸಾ ಚಾನ್ ಕಾವೈ. ಆರಡಿ ಎತ್ತರವಿದ್ದ ಆತ 80 ವರ್ಷ ಜೀವಿಸಿದ್ದನಂತೆ. ಕ್ರಿ.ಶ. 720ರ ಸುಮಾರಿಗೆ ಆತ ಸತ್ತ ಮೇಲೆ ಈ ದೇವಾಲಯದ ಹತ್ತಿರವೇ ಆತನನ್ನು ಹೂಳಿದರು. ಮಾಯನ್ ನಾಗರಿಕತೆಯ ಶಾಸನಗಳ ಪ್ರಕಾರ ಈ ರಾಜನಿಗೆ ತನ್ನ ರಾಣಿಯ ಮೇಲೆ ತುಂಬ ಪ್ರೀತಿ. ತಾನು ಬದುಕಿದ್ದಾಗಲೇ ತನ್ನ ಹೆಸರಿನಿಂದ ಕಟ್ಟಿಸಿದ್ದ ದೇವಾಲಯದ ಎದುರಲ್ಲಿ ಅವಳಿಗೊಂದು ದೇವಾಲಯವನ್ನೇ ಕಟ್ಟಿಸಿಬಿಟ್ಟ. ಪ್ರತೀ ವಸಂತ ಮತ್ತು ಶರದ್ ಋತುವಿನಲ್ಲಿ ಸೂರ್ಯ, ರಾಜನ ದೇವಾಲಯದ ಹಿಂದಿನಿಂದ ಉದಯಿಸಿ, ರಾಣಿಯ ದೇವಾಲಯವನ್ನು ರಾಜನ ದೇವಾಲಯದ ನೆರಳಿನಲ್ಲಿ ಮುಳುಗಿಸಿಬಿಡುತ್ತಾನೆ. ಸಂಜೆಯ ಹೊತ್ತಿಗೆ ಸೂರ್ಯ ಮುಳುಗುವಾಗ ರಾಣಿಯ ದೇವಾಲಯದ ನೆರಳಿನಲ್ಲಿ ರಾಜನ ದೇವಾಲಯ ಒಂದಾಗಿರುತ್ತದೆ. 1300 ವರುಷಗಳ ನಂತರವೂ, ಈ ಇಬ್ಬರು ಪ್ರೇಮಿಗಳು ಹೀಗೆ ತಮ್ಮ ಸಮಾಧಿಯಿಂದ ಒಬ್ಬರನ್ನೊಬ್ಬರು ಪ್ರೀತಿಯಿಂದ ಸ್ಪರ್ಶಿಸುತ್ತಾರೆ, ಮುತ್ತು ಕೊಡುತ್ತಾರೆ!

ಜಗತ್ತಿನಾದ್ಯಂತ ಜನ ಪ್ರೀತಿಸುತ್ತಾರೆ, ಪ್ರೀತಿಗಾಗಿ ಹಾಡುತ್ತಾರೆ, ಕುಣಿಯುತ್ತಾರೆ. ಕವಿತೆ-ಕಥೆ-ಲಾವಣಿ ಬರೆಯುತ್ತಾರೆ. ಪುರಾಣ-ದಂತಕಥೆಗಳನ್ನು ರಚಿಸುತ್ತಾರೆ. ಅಷ್ಟೇಕೆ ಪ್ರೀತಿಗಾಗಿ ಪರಿತಪಿಸುವುದು, ಸಾಯುವುದು, ಕೊಲ್ಲುವುದು ಎಲ್ಲವೂ ನಾವು ಕಾಣಬಹುದಾದ ಸಾಮಾನ್ಯ ಸಂದರ್ಭಗಳೇ. ಸಮಾಜ ಶಾಸ್ತ್ರಜ್ಞರು ಗಂಡು-ಹೆಣ್ಣಿಗೆ ಸಂಬಂಧಿಸಿದ ‘ಪ್ರಣಯ‌’ ಎನ್ನುವ ಪ್ರೀತಿಯ ವಿಧ ಜಗತ್ತಿನ ಎಲ್ಲ ಸಮಾಜಗಳಲ್ಲಿ ‘ಇದೆ’ ಎಂದು ಗುರುತಿಸಿದ್ದಾರೆ. ‘ಪ್ರೀತಿ’ ನಡೆಯದ ಯಾವ ಸಮಾಜವನ್ನೂ ಅಧ್ಯಯನಗಳು ಗುರುತಿಸಿಲ್ಲ!

ಆದರೆ ‘ಪ್ರಣಯ’ ಎನ್ನುವುದು ಯಾವಾಗಲೂ ಸಂತೋಷದ ಅನುಭವವೇ ಆಗಬೇಕೆಂದಿಲ್ಲ. ಒಂದು ಅಧ್ಯಯನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೀತಿಯ ಬಗೆಗೆ ತುಂಬ ಪ್ರಶ್ನೆಗಳನ್ನು ಕೇಳಿದರು. ಅವುಗಳಲ್ಲಿದ್ದ ಎರಡು ಮುಖ್ಯ ಪ್ರಶ್ನೆಗಳು- ‘ನೀವು ಉತ್ಕಟವಾಗಿ, ನಿಜವಾಗಿಯೂ ಪ್ರೀತಿಸಿದವರು ಯಾರಾದರೂ ನಿಮ್ಮನ್ನು ತಿರಸ್ಕರಿಸಿದ್ದಾರೆಯೇ?’ ಮತ್ತು ‘ನಿಮ್ಮನ್ನು ತುಂಬ ಪ್ರೀತಿಸಿದ ಯಾರಿಗಾದರೂ ನೀವು ಈವರೆಗೆ ಕೈಕೊಟ್ಟಿದ್ದಿದೆಯೇ?’. ಶೇ 95ರಷ್ಟು ಜನ ಈ ಎರಡೂ ಪ್ರಶ್ನೆಗಳಿಗೆ ‘ಹೌದು‌’ ಎಂದೇ ಉತ್ತರಿಸಿದರು! ಅಂದರೆ ಪ್ರೀತಿಯಿಂದ ಇದ್ದಂತೆ, ಯಾವ ಪರಿಣಾಮವೂ ಆಗದೆ, ಇದ್ದಂತೆಯೇ ಹೊರಬರುವುದು ಬಡಪೆಟ್ಟಿಗೆ ಸಾಧ್ಯವಾಗದ ಕೆಲಸ ಎಂದು ಒಪ್ಪಲೇಬೇಕು!

ಎಮಿಲಿ ಡಿಕಿನ್‍ಸನ್ ಹೇಳುತ್ತಾರೆ: ‘Parting is all we need to know of hell’- ಅಗಲುವಿಕೆ-ವಿರಹವೆಂದರೆ ಅದು ನರಕ. ಅಂದರೆ ಪ್ರೇಮದ ಉದ್ವೇಗದಿಂದ ಎಷ್ಟು ಜನ ಈ ನಿಮಿಷದಲ್ಲಿ ಕುಣಿಯುತ್ತಿರಬಹುದೋ, ಅಷ್ಟೇ ಜನ ಬಹುಶಃ ತಮ್ಮ ಪ್ರೀತಿ ಕಳೆದುಕೊಂಡು ದುಃಖದಲ್ಲಿ ಮುಳುಗಿರಬಹುದು. ಒಟ್ಟಿನಲ್ಲಿ ‘ಪ್ರೇಮ’ ಎನ್ನುವುದು ಪ್ರಬಲವಾದ ಒಂದು ಸಂವೇದನೆ ಎನ್ನುವುದು ನಿಶ್ಚಿತ.

ಪುರುಷನಿಗೂ ಸ್ತ್ರೀಗೂ ಪ್ರೇಮದ ಅನುಭವದಲ್ಲಿ ವ್ಯತ್ಯಾಸವಿದೆಯೇ? ‘ಇದೆ’ ಎನ್ನುತ್ತದೆ ವಿಜ್ಞಾನ. ಮಹಿಳೆಯರು ಮುಖಕ್ಕೆ ಮುಖ ಕೊಟ್ಟು ಮಾತನಾಡಬಾರದು, ಕೊನೆಗೆ ನಾಚಿಕೆಯಿಂದ ಮುಖ ತಗ್ಗಿಸಬೇಕೆಂದು ಸಮಾಜ ಕಟ್ಟಳೆ ವಿಧಿಸಿದರೂ ಎದುರು-ಬದುರು ನಿಂತಾಗಲೇ ಹೆಣ್ಣಿಗೆ ಪ್ರೀತಿಯ ಅನುಭವ. ಮಾನವ ವಿಕಾಸ ತತ್ವದ ಪ್ರಕಾರ – ಇದು ಬಂದದ್ದು ‘anchoring gaze’- ‘ಹಿಡಿದಿಡುವ ದೃಷ್ಟಿ’ಯಲ್ಲಿ ಮಗುವನ್ನು ಮುಂದೆ ಹಿಡಿದು, ದೃಷ್ಟಿಸುತ್ತಾ ಮುದ್ದು ಮಾಡುವುದು, ಶಿಕ್ಷಿಸುವುದು, ಶಿಕ್ಷಣ ನೀಡುವುದು ಈ ಅಭ್ಯಾಸವನ್ನು ಮಹಿಳೆ ಮತ್ತೆ ಮತ್ತೆ ಮಾಡುವ ಅಭ್ಯಾಸದಿಂದ. ಅದೇ ಪುರುಷ? ಅನ್ಯೋನ್ಯತೆಯ ಅನುಭವ ಪುರುಷನಿಗೆ ಆಗುವುದು ಪಕ್ಕ ಪಕ್ಕ ಕುಳಿತುಕೊಳ್ಳುವುದರಿಂದ. ಇದು ಬಂದಿರುವುದು ಎಲ್ಲಿಂದ? ಮಿಲಿಯನ್‍ಗಟ್ಟಲೆ ವರುಷಗಳ ಹಿಂದೆ ಪುರುಷ ಶತ್ರುವನ್ನು ಎದುರಿಸುತ್ತಿದ್ದ, ಸ್ನೇಹಿತರ ಜೊತೆ ಪಕ್ಕ ಪಕ್ಕ ಕುಳಿತುಕೊಳ್ಳುತ್ತಿದ್ದ. ಪೊದೆಯ ಹಿಂದೆ ಕುಳಿತು, ನೇರವಾಗಿ ಎದುರು ನೋಡಿ, ಕಾಡುಕೋಣದ ತಲೆಯ ಮೇಲೆ ಗುರಿಯಿಟ್ಟು ಕಲ್ಲು ಹೊಡೆಯುತ್ತಿದ್ದ!

ಪ್ರೇಮ-ಕಾಮಗಳಿಗೂ ಹತ್ತಿರದ ಸಂಬಂಧವಿದೆ. ಆದರೆ ಈ ಸಂಬಂಧ ತುಂಬ ಸ್ಪಷ್ಟವಲ್ಲ. ಕೆಲವೊಮ್ಮೆ ಹೊಸತಾಗಿ ಮದುವೆಯಾದ ದಂಪತಿ ಬಂದು ‘ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ಮೇಲೆಯೇ ದೇಹ ಸಂಪರ್ಕ ಎಂದು ನಿರ್ಧರಿಸಿಕೊಂಡೆವು. ಹಾಗಾಗಿ ನಾವು ಇನ್ನೂ ನಿಜಾರ್ಥದಲ್ಲಿ ಗಂಡ-ಹೆಂಡತಿಯಾಗಿಲ್ಲ’ ಎಂದಾಗ ಪ್ರೇಮ-ಕಾಮಗಳ ಬಗೆಗೆ ಮನಸ್ಸು ಅಚ್ಚರಿಪಡುತ್ತದೆ. ವಿವಾಹಪೂರ್ವ ಲೈಂಗಿಕತೆ ಚರ್ಚಾರ್ಹವಾದರೂ ವಿವಾಹಾನಂತರ ದೇಹ ಸಂಬಂಧಕ್ಕೂ ಇಷ್ಟೆಲ್ಲಾ ಯೋಚಿಸುವವರು ಇದ್ದಾರಲ್ಲ ಎಂದು ಆಶ್ಚರ್ಯವಾಗುತ್ತದೆ. ಅಧ್ಯಾತ್ಮದಲ್ಲಿ, ಸಂಗೀತ ರಚನೆಗಳಲ್ಲಿ ‘ಕಾಮಿತ ಫಲದಾಯಿನಿ’ ಎಂದು ಬಂದಾಗಲೆಲ್ಲ ಕಾಮಕ್ಕೆ ಪಾವಿತ್ರ್ಯ ಬಂದು ಅದನ್ನು ರಕ್ಷಿಸಿದರೂ ಸರಳ ಕನ್ನಡದಲ್ಲಿ ಮಾತ್ರ ‘ಕಾಮ‌’ ಎಂದು ಬಂದರೆ ಸ್ವಲ್ಪ ಮುಜುಗರ. ಜೋರಾಗಿ ಮಾತನಾಡಲಾಗದ್ದು ಎಂದು ನಮಗೆ ಅನ್ನಿಸುವುದು ಏಕೋ? ಇಂಗ್ಲಿಷ್‍ನಲ್ಲಿ ಮಾತ್ರ ‘ಕಾಮ’ದ ದೈಹಿಕ ಕ್ರಿಯೆಗೂ ಪ್ರೇಮವನ್ನೇ ಜೊತೆಯಾಗಿಸಿ ‘Love making’ ಮಾಡಿಟ್ಟಿದ್ದಾರೆ! ಮನೋವೈದ್ಯೆಯಾಗಿ ನನಗೆ ಬೇಸರವೆನಿಸುವುದು ಪ್ರೀತಿ-ಪ್ರಣಯಗಳ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಜನ, ಒಮ್ಮೆ ಮದುವೆಯಾಯಿತು ಅಂದತಕ್ಷಣ ‘ಐ ಲವ್ ಯೂ’ ಎನ್ನುವುದು, ‘ಹೂ ಕೊಡುವುದು’ ಇತ್ಯಾದಿ ಪ್ರೀತಿಯ ‘ಕ್ರಿಯೆ’ಗಳನ್ನು ಹಾಸ್ಯಾಸ್ಪದವಾಗಿಸಿ, ‘ಏ ಅದೇನು ಮಕ್ಕಳಾಟ’ ಎಂದು ಪಕ್ಕಕ್ಕೆ ತಳ್ಳಿ, ಕೇವಲ ಆಗಾಗ ‘ಕಾಮ’ಕ್ಕೆ, ಜವಾಬ್ದಾರಿಗಳನ್ನು ನಿರ್ವಹಿಸುವ ‘ಉದಾತ್ತ ಪ್ರೇಮ’ಕ್ಕೆ ಸೀಮಿತವಾಗಿಸಿ ಬಿಡುತ್ತಾರೆ!

ಮನೋವಿಜ್ಞಾನಿಗಳು ಪ್ರೇಮಿಗಳನ್ನೂ ವಿರಹಿಗಳನ್ನೂ ಭಗ್ನಪ್ರೇಮಿಗಳನ್ನೂ ಅಧ್ಯಯನ ಮಾಡದೆ ಬಿಟ್ಟಿಲ್ಲ. ಈ ಮೂವರನ್ನೂ ಎಂಆರ್‌ಐ ಸ್ಕ್ಯಾನರ್‌ನಲ್ಲಿ ಹಾಕಿ ಪರೀಕ್ಷೆ ಮಾಡಿಯೇ ಮಾಡಿದ್ದಾರೆ. ಮಿದುಳಿನ ‘ಆನಂದ ಮಾರ್ಗ’ -ರಿವಾರ್ಡ್ ಪಾತ್‍ವೇ– ಎಂಬ ವ್ಯೂಹ ಪ್ರೇಮಿಗಳಲ್ಲಿ ಪೂರ್ತಿ ಕುಣಿದಾಡುತ್ತ ಇರುತ್ತದೆ. ಮಾದಕ ದ್ರವ್ಯದ ಅಮಲು ಹೇಗಿರುತ್ತದೆಂದು ನಿಮಗೆ ಗೊತ್ತಿರದಿದ್ದರೆ, ನೀವು ಪ್ರೀತಿಯಲ್ಲಿ ಬಿದ್ದರೆ ಆ ಅಮಲು ನಿಮಗೆ ಅನುಭವವಾಗುವುದು ಗ್ಯಾರಂಟಿ. ‘ನಾನು’ ಎಂಬ ಪರಿವೆ ಇಲ್ಲವಾಗಿ, ಮತ್ತೊಬ್ಬರು ನಿಮ್ಮ ಮಿದುಳನ್ನು ತುಂಬಿಬಿಡುತ್ತಾರೆ (ಹೃದಯವನ್ನಲ್ಲ! ಪ್ರೇಮಿಗಳ ದಿನಕ್ಕೆ ನೀವು ಕಳಿಸಬೇಕಾದ್ದು ಹೃದಯದ ಕಾರ್ಡಲ್ಲ, ಮಿದುಳಿನ ಕಾರ್ಡು!). ಇದಾದ ಮೇಲೆ ವಿರಹಿಗಳ ಕಥೆ-ವ್ಯಥೆ. ಇವರಲ್ಲಿ ಕಂಡುಬಂದದ್ದು ಗೀಳು. ಬಿಡಲಾಗದ ಗೀಳು-ವಿರಹಿಗಳ ಚಡಪಡಿಕೆ. ಅದಾದ ನಂತರ ಭಗ್ನಪ್ರೇಮಿಗಳು. ಸಹಜವಾಗಿ ಪ್ರೇಮ ಮುರಿದ ದುಃಖದ ಸ್ಥಿತಿಯಲ್ಲಿ ಇವರನ್ನು ಅಧ್ಯಯನ ಮಾಡುವುದು ಸುಲಭವಲ್ಲ. ಆದರೂ ವಿಜ್ಞಾನದ ಪ್ರೇಮಿಗಳಾದ ವಿಜ್ಞಾನಿಗಳು ಪ್ರಯತ್ನ ಮಾಡಿಯೇ ಬಿಟ್ಟಿದ್ದಾರೆ. ಅವರಿಗೆ ಆಶ್ಚರ್ಯ ಕಾದಿತ್ತು! ‘ಆನಂದದ ಮಾರ್ಗ’ಕ್ಕಿಂತ ಬೇರೆಯಾದ ಮಿದುಳಿನ ಭಾಗದಲ್ಲಿ ಚಟುವಟಿಕೆ ಕಾಣಬೇಕಿತ್ತು ತಾನೇ?! ಇಲ್ಲ, ಪ್ರಚೋದನೆ -ಚಟುವಟಿಕೆ ಎಲ್ಲವೂ ಕಂಡುಬಂದಿದ್ದು, ಅದೇ ‘ಆನಂದದ ಮಾರ್ಗ’ದಲ್ಲಿಯೇ. ‘ಈಕೆ ನನಗೆ ಕೈಕೊಟ್ಟಳು/ ಈತ ನನಗೆ ಕೈಕೊಟ್ಟ. ಅಂದಮೇಲೆ ಈ ವ್ಯಕ್ತಿಯನ್ನು ನಾನು ಮರೆಯಬೇಕು’ ಎಂದು ಯೋಚಿಸಬೇಕಷ್ಟೆ. ಊಹೂಂ, ಇಲ್ಲವೇ ಇಲ್ಲ! ರೋಮನ್‌ ಕವಿ ಟೆರೆನ್ಸ್ ಹೇಳಿದ: ‘The less my hope, the hotter my Love’-ತಿರಸ್ಕಾರ ಹೆಚ್ಚಾದಷ್ಟೂ ಪ್ರೇಮದ ಬಿಸಿ ಏರುತ್ತದೆ. ಇದು ವೈಜ್ಞಾನಿಕವಾಗಿಯೂ ಸತ್ಯವೇ! ಮಿದುಳಿನ ‘ಆನಂದ ಮಾರ್ಗ’ದಲ್ಲಿ ಬಯಕೆ-ಪ್ರೇರಣೆ, ತುಡಿತ ಎಲ್ಲವೂ ತಮ್ಮ ಚಟುವಟಿಕೆಯನ್ನು ಬೇಕಾದ ವಸ್ತು ಸಿಗದಿದ್ದಾಗ ಹೆಚ್ಚಿಸುತ್ತವೆ.

ಸ್ವಾರಸ್ಯಕರ ಸಂಗತಿ ಏನು ಗೊತ್ತೇ? ಭಗ್ನಪ್ರೇಮಿಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರವನ್ನು ಗ್ರಹಿಸುವ ಮಿದುಳಿನ ಭಾಗಗಳಲ್ಲಿಯೂ ಪ್ರಚೋದನೆ ಕಂಡು ಬಂದಿದೆ! ಅಂದರೆ ನೀವು ಪ್ರೀತಿಸಿದವರಿಂದ ತಿರಸ್ಕೃತರಾಗಿ ಸುಮ್ಮನೇ ಮಲಗಿ, ಯೋಚಿಸುತ್ತಿದ್ದೀರಿ ಎಂದುಕೊಳ್ಳಿ, ನಿಮ್ಮನ್ನು ಎಂಆರ್‌ಐ ಸ್ಕ್ಯಾನರ್‌ನಲ್ಲಿ ಮಲಗಿಸಿದರೆ ನೀವು ಲೆಕ್ಕಾಚಾರಕ್ಕೆ ತೊಡಗುತ್ತೀರಿ ‘ಏನು ತಪ್ಪಾಯಿತು? ಏನು ಕಳೆದುಕೊಂಡೆ?’. ಆಗ ಕೆಲಸ ಮಾಡುತ್ತಿರುವುದು ‘ಆನಂದದ ಮಾರ್ಗ’ವಲ್ಲ! ದೊಡ್ಡ ಲಾಭಕ್ಕಾಗಿ ‘ರಿಸ್ಕ್’ ತೆಗೆದುಕೊಳ್ಳುವಾಗ ನಮ್ಮ ಮಿದುಳಿನಲ್ಲಿ ಪ್ರಚೋದನೆಗೊಳ್ಳುವ ಭಾಗಗಳು.

ಪ್ರೇಮಕ್ಕಾಗಿ ಅಪರಾಧಗಳೂ ಸಾಮಾನ್ಯವಾಗಿ ನಡೆಯುತ್ತವಷ್ಟೆ. ಇಲ್ಲಿ ನಡೆಯುವುದು ನಿಜವಾಗಿ ಏನು? ವ್ಯಕ್ತಿಯೊಂದಿಗೆ ಆಳವಾದ ಬಾಂಧವ್ಯದಿಂದ ‘ಆನಂದ ಮಾರ್ಗ’ ಪ್ರಚೋದನೆಯಾದಾಗ, ಅದರಿಂದ ತೀವ್ರ ಶಕ್ತಿ, ತೀವ್ರ ಏಕಾಗ್ರತೆ, ಪ್ರೇರಣೆ ಮತ್ತು ಏನನ್ನಾದರೂ ಎದುರಿಸುವ ಧೈರ್ಯ ಇವೂ ತನ್ನಿಂತಾನೇ ಬುದ್ಧಿ-ಭಾವಗಳಿಗೆ ಒದಗುತ್ತವೆ. ಪ್ರೇಮದ ಹಸಿವಿಗಾಗಿ ಅಪರಾಧ ಮಾಡಲೂ ಹಿಂಜರಿಯುವುದಿಲ್ಲ.

ಪ್ಲೇಟೊ ಹೇಳುವ ‘ಪ್ರೇಮದ ದೇವತೆ ಯಾವಾಗಲೂ ಅವಶ್ಯಕತೆಯ ಸ್ಥಿತಿಯಲ್ಲಿರುತ್ತಾನೆ. ಪ್ರೇಮ ಹಸಿವು-ನೀರಡಿಕೆಗಳಂತೆ ಅದುಮಲು ಅಸಾಧ್ಯವಾದ ಒಂದು ತುಡಿತ, ದೇಹ ಮನಸ್ಸುಗಳ ಅಸಮತೋಲನ’, ಈ ಮಾತು ನೂರಾರು ವರ್ಷಗಳ ನಂತರವೂ ನಿಜವಾಗಿಯೇ ನಿಂತಿದೆ. ಮನುಷ್ಯರಾಗಿ ನಮಗೆ ಪ್ರೇಮ ಬೇಕೇಬೇಕು. ಪ್ರೀತಿ ನಮ್ಮೆಲ್ಲರಲ್ಲಿ ಇದೆ. ಅದಿರುವುದು ಹೃದಯದಲ್ಲಲ್ಲ! ನಮ್ಮ ಬುದ್ಧಿ-ಮನಸ್ಸುಗಳಲ್ಲಿ ಹುದುಗಿ ಮಿದುಳಿನಲ್ಲಿ ಅಡಗಿ ಕುಳಿತಿದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ನಮ್ಮ ಈ ಹೊತ್ತಿನ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT