ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Valentine Week | ‘ಪ್ರೀತಿ’ ಬಂಧವೇ ಹೊರತು ಬಂಧನವಲ್ಲ

ಪ್ರೇಮಿಗಳ ದಿನದ ನೆಪದಲ್ಲೊಂದು ಲಹರಿ
Last Updated 11 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಪ್ರೇಮಿಗಳಲ್ಲಿ ಹಲವು ಥರ,

ಪ್ರೇಮಕ್ಕುಂಟು ಹಲವು ಥರ,

ದುರಂತವಿರಲಿ, ಸುಖಾಂತವಿರಲಿ,

ಪ್ರೇಮ ನಿರಂತರ.

ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಈ ಕವನದ ಸಾಲುಗಳು ಸುಖ, ದುಃಖದ ಆಚೆಗೆ ಪ್ರೀತಿ– ಪ್ರೇಮ ನಿರಂತರ ಎನ್ನುವ ಒಲವನ್ನು ಸಾರುತ್ತದೆ.

‘ಪ್ರೀತಿ’ ಹೆಣ್ಣು ಗಂಡಿಗೆ ಮಾತ್ರ ಸೀಮಿತವಾದುದಲ್ಲ. ಹೆಣ್ಣು ಹುಟ್ಟಿದಾಗ ಅಪ್ಪನ ಪ್ರೀತಿ, ನಡೆದು ಎಡವಿದಾಗ ಅಣ್ಣನ ಪ್ರೀತಿ, ಮಿಠಾಯಿ ಕದ್ದು ತಿಂದಾಗ ತಮ್ಮನ ಹುಸಿಮುನಿಸಿನ ಪ್ರೀತಿ, ಪ್ರಾಯಕ್ಕೆ ಬಂದಾಗ ಪ್ರಿಯಕರನ ಪ್ರೀತಿ, ಮದುವೆ ನಂತರ ಪ್ರಿಯಕರ ಗಂಡನಾಗಿ ಇರುವ ಪ್ರೀತಿ, ತಾಯಿಯಾದಾಗ ಮಗುವಿನ ಮೇಲೆ ತೋರುವ ಅಕ್ಕರೆಯ ಪ್ರೀತಿ, ಮಕ್ಕಳು ಹರೆಯಕ್ಕೆ ಬಂದಾಗ ಅವರಿಗಾಗಿ ಜೀವನ ಸವೆಸಿದ ಪ್ರೀತಿ, ಮುಪ್ಪಿನಲ್ಲಿ ಮೊಮ್ಮಕ್ಕಳನ್ನು ಆಡಿಸುವ ಪ್ರೀತಿ....ಇವೆಲ್ಲವೂ ಪ್ರೀತಿಗಿರುವ ಸಾಂಪ್ರದಾಯಕ ಮುಖಗಳು.

ಹೆಣ್ಣು ಮಕ್ಕಳಿಗೆ ಸ್ವಾವಲಂಬಿಯಾಗಿ ಬದುಕುವುದನ್ನು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ, ತಾನು ಇಷ್ಟ ಪಟ್ಟಿದ್ದನ್ನು ಓದುವ, ಮಾಡುವ ಸ್ವಾತಂತ್ರ್ಯ ತಕ್ಕಮಟ್ಟಿಗೆ ಹೆಣ್ಣು ಮಕ್ಕಳಿಗೆ ದೊರೆಯುತ್ತಿದೆ.ಇದಕ್ಕೆ ಕಾನೂನು ಕೂಡ ಹೆಣ್ಣು ಮಕ್ಕಳಿಗೆ ಸಹಾಯ ನೆರವಾಗುತ್ತಿದೆ. ಓದು ಮುಗಿದ ನಂತರ ಮದುವೆ ಮಾಡಿಕೊಂಡು ಮಕ್ಕಳನ್ನು ಹೆರುವುದು ಹಳೆಯ ಕಾಲ. ಓದಿದ ನಂತರ ಒಂದೆರೆಡು ವರ್ಷವಾದರೂ ಕೆಲಸ ಮಾಡುವ ‘ಇಷ್ಟ’ ಹೆಣ್ಣು ಮಕ್ಕಳಿಗಿದೆ.

‘ಪ್ರೀತಿ’ ಸಹಜವಾದದ್ದು, ಅದಕ್ಕೆ ವಿಶೇಷ ಅರ್ಥಗಳಿಲ್ಲ. ಇಷ್ಟ ಪಡುವುದು ಎನ್ನುವುದು ಇನ್ನೂ ಮಾಮೂಲು. ಪರಸ್ಪರ ಆಸಕ್ತಿಯಿಂದ ಪ್ರೀತಿ ಹತ್ತಿರವಾಗುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದರಿಂದ ಗಾಢವಾಗುತ್ತದೆ.

ಪ್ರೀತಿ ಎಂಬುದು ಒಂದು ಅನುಭಾವ, ಅದನ್ನು ಅಭಿವ್ಯಕ್ತಗೊಳಿಸಿ, ಅನಾವರಣ ಮಾಡಿ, ಅನುರೂಪವಾ ಗುವಂತೆ ಕಾಪಿಡಬೇಕು. ಇತ್ತೀಚಿನ ಪ್ರೀತಿ ಇಂಥವುಗಳನ್ನು ಬಿಟ್ಟು, ಕಾಲ ಕಳೆಯಲು, ವಯಸ್ಸಿನ ಆಕರ್ಷಣೆಗೆ‌ ಬಲಿಯಾಗಿ, ಬರಡಾಗುತ್ತಿದೆ.

ಪ್ರೀತಿಯೆಂದರೆ ಪರಸ್ಪರ ನಂಬಿಕೆ, ವಿಶ್ವಾಸ, ಜೀವನದ ಕನಸು ಎಲ್ಲವೂ ಅನುಗಾಲ ಉಳಿಯಬೇಕು. ಆದರೆ ಈ ಸಂಬಂಧಗಳು ಅಳಿಯುತ್ತಿವೆ. ಜೀವ, ಜೀವನ ಎಂದಿಗೂ ಪ್ರೀತಿಸಿದವರ ಜೊತೆಯೇ ಇರುತ್ತದೆ. ಕಾಲೇಜು ಜೀವನದ ಪ್ರೀತಿಗೆ ಜೀವನ ಭದ್ರತೆಯ ಭಯ ಇರುತ್ತದೆ. ಆಗ ಯಾವುದನ್ನು ಹೇಗೆ ಕಾಳಜಿ ಮಾಡಬೇಕು ಎಂದು ತಿಳಿಯುವುದಿಲ್ಲ. ಗಟ್ಟಿ ಜೀವಗಳು ಪ್ರೀತಿಯನ್ನು ಉಳಿಸಿಕೊಳ್ಳುತ್ತವೆ. ಜೊಳ್ಳು ಹಾರಿಹೋಗುತ್ತವೆ.

ಪ್ರೀತಿ ಸಮಯ ಕಳೆಯಲು, ದಬ್ಬಾಳಿಕೆ ಮಾಡಲು, ದ್ವೇಷ ಸಾಧಿಸಲು, ಸ್ವಾರ್ಥ ಪೂರೈಸಲು, ಅಡುಗೆ ಮಾಡಿ ಗಂಡನ ಹೊಟ್ಟೆ ತುಂಬಿಸಲು, ಹೆಣ್ಣಿನ ಆಸೆಗಳನ್ನು ತೀರಿಸಲು ಮಾತ್ರವಲ್ಲ. ಪರಸ್ಪರ ಹೊಂದಾಣಿಕೆಯೇ ಪ್ರೀತಿಯ ಮೂಲಮಂತ್ರ. ಹೊಂದಾಣಿಕೆಯನ್ನೂ ಮಾಡಿಕೊಳ್ಳುವ ವಿಷಯಲ್ಲಿ ಮಾತ್ರ ಮಾಡಿಕೊಂಡು, ತಪ್ಪಿದ್ದವರಿಗೆ ತಿಳಿಸಿ ಹೇಳಬೇಕು. ತಪ್ಪನ್ನು ತಪ್ಪು ಎಂದು ಅರ್ಥಮಾಡಿಕೊಳ್ಳದವರು ಸ್ವಪ್ರತಿಷ್ಠೆಯಿಂದ ಸಂಬಂಧಕ್ಕೆ ಎಳ್ಳು ನೀರು ಬಿಡುತ್ತಾರೆ.

ಪ್ರೀತಿ ವಯಸ್ಸಾದಂತೆ ಮುದುಡಿ ಹೋಗುವುದಲ್ಲ. ವಯಸ್ಸಿನ ಮೇಲೆ ಪ್ರೀತಿ ಕಡಿಮೆಯಾದರೆ ಅದು ನಿಜಕ್ಕೂ ಆಕರ್ಷಣೆಯ ಅಪರಾವತಾರವೇ ಸರಿ. ಪ್ರೀತಿ ಅರ್ಪಣೆಯಾಗಬೇಕು, ಆಗ ಅದು ತರ್ಕದಲ್ಲೂ ಗೆಲ್ಲುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರೀತಿ, ಪ್ರೀತಿಸದವರು ಸಿಗದಿದ್ದರೆ ಸಾಯುವುದು ಇಲ್ಲವೇ ಅವರ ಬದುಕನ್ನು ಹಾಳುಮಾಡುವುದು ನಡೆದಿದೆ. ಸಾಯುವುದು ಪರಮ ಹೇಡಿಗಳ ಕೆಲಸ. ಪ್ರೀತಿಸಿದವರ ಬದುಕು ಹಾಳು ಮಾಡುವುದು ಸಾಯಲೂ ಅರ್ಹತೆ ಇಲ್ಲದವರು ಮಾಡುವ ಕೆಲಸ.

ಪ್ರೀತಿ ಎಂದಿಗೂ ಜೀವನ ಪ್ರೀತಿಯನ್ನು ಕೊನೆಗೊಳಿಸಿಕೊಳ್ಳುವ ಮಟ್ಟಕ್ಕೆ ಇರಬಾರದು. ಗಂಡು–ಹೆಣ್ಣು ಬಿಟ್ಟು, ಪರಿಸರ, ಪುಸ್ತಕ, ಮಾಡುವ ಕೆಲಸ, ಸ್ನೇಹ, ಹೆತ್ತವರು, ಒಡಹುಟ್ಟಿದವರು ಇವರ ಮೇಲೂ ಪ್ರೀತಿ ಇರಬೇಕಲ್ಲವೇ..?

ಪ್ರೀತಿಸಿದವರು ಜೊತೆಗಿಲ್ಲ ಎಂದುಕೊಂಡು, ಜೊತೆಗಿರದ ಜೀವ ಎಂದೆಂದೂ ಜೀವಂತ ಎಂದು ಸ್ಟೇಟಸ್ ಹಾಕುವ ಬದಲು ಅವರ ನೆನಪಿನಲ್ಲಿ ಹಸಿದವರಿಗೆ ತುತ್ತು ಅನ್ನ ಕೊಡಿಸಿ, ಬಡಮಕ್ಕಳಿಗೆ ಪಾಠ ಕಲಿಸಿ. ಇವೂ ಪ್ರೀತಿ ಎಸಿಕೊಳ್ಳುತ್ತವೆ ಅಲ್ಲವೇ....

ಪ್ರೀತಿ ಯಾರ ಮೇಲೆ, ಹೇಗೆ, ಏಕೆ, ಯಾವಾಗ ಬರುತ್ತದೆ ಎಂದು ಗೊತ್ತಿಲ್ಲ. ಆದರೆ ಭಾವನೆಗಳು ಬದಲಾಗಿ, ಅದು ನಮ್ಮ ಸ್ಮೃತಿಪಟಲದಲ್ಲಿ ಅಚ್ಚೊತ್ತಿದಾಗ ಮಾತ್ರ ಪ್ರೀತಿ ಗರಿಗೆದರುವುದು. ಆದರೆ ನೆನಪಿರಲಿ ಪ್ರೀತಿಗಾಗಿ ಬದುಕಲ್ಲ. ಬದುಕಿನ ಒಂದು ಭಾಗ ಪ್ರೀತಿ. ಆದರೆ ಅದರ ಜೊತೆಗಿನ ಪಯಣ ಸುಂದರವಾಗಿರಬೇಕು. ಅಂತಹ ನಿರ್ಮಲವಾದ ಪ್ರೀತಿ ಎಲ್ಲರಿಗೂ ಸಿಗಲಿ..

ಪ್ರೇಮಿಗಳ ದಿನದ ಶುಭಾಶಯಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT