ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಸಿರಿಗೆ ವರಮಹಾಲಕ್ಷ್ಮೀ

Last Updated 2 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಲಕ್ಷ್ಮೀ ಎಂದ ಕೂಡಲೇ ನಮ್ಮೆಲ್ಲರ ಕಿವಿ ನೆಟ್ಟಗಾಗುತ್ತದೆ ಅಲ್ಲವೆ? ಅವಳ ಕೃಪಾಕಟಾಕ್ಷ ಯಾರಿಗೆ ತಾನೆ ಬೇಡ?

ಲಕ್ಷ್ಮೀ ಎಂದರೆ ಶ್ರೀ; ಎಂದರೆ ಸಂಪತ್ತು, ಹಣ–ಐಶ್ವರ್ಯ. ಆದರೆ ಇದಿಷ್ಟೇ ಅರ್ಥ ಅಲ್ಲ; ನಮ್ಮ ಜೀವನವನ್ನು ಸಮೃದ್ಧಗೊಳಿಸುವ ವಿವರಗಳೆಲ್ಲವೂ ಲಕ್ಷ್ಮಿಯ ಸ್ವರೂಪವೇ ಹೌದು; ವಿದ್ಯೆ, ರೂಪ, ಶಕ್ತಿ, ಬುದ್ಧಿ – ಇವೂ ಕೂಡ ಲಕ್ಷ್ಮಿಯೇ.

ಇಂಥ ಲಕ್ಷ್ಮಿಯನ್ನು ಪೂಜಿಸಲು ಇರುವ ವ್ರತಗಳಲ್ಲಿ ಒಂದು ವರಮಹಾಲಕ್ಷ್ಮೀವ್ರತ. ಶ್ರಾವಣಮಾಸದ ಶುಕ್ಲಪಕ್ಷದ ಹುಣ್ಣಿಮೆಗೆ ಹತ್ತಿರದ ಶುಕ್ರವಾರದಂದು ಈ ವ್ರತವನ್ನು ಆಚರಿಸುವುದು ವಾಡಿಕೆ. ಶ್ರಾವಣ ಶುಕ್ಲಪಕ್ಷದ ಎರಡನೆಯ ಶುಕ್ರವಾರ ವ್ರತವನ್ನು ಆಚರಿಸಬೇಕು ಎಂಬ ಮಾತು ಕೂಡ ಇದೆ. ಸ್ತ್ರೀಯರು ಈ ವ್ರತವನ್ನು ಆಚರಿಸುತ್ತಾರೆ. ಅಂದು ಮನೆಯನ್ನು ತೋರಣದಿಂದ ಸಿಂಗರಿಸಿ, ಸಂಭ್ರಮದಿಂದ ಪೂಜೆ ಮಾಡಿ, ಬಗೆಬಗೆಯ ಅಡುಗೆಯನ್ನು ಮಾಡಿ, ಪ್ರಸಾದವನ್ನು ಸ್ವೀಕರಿಸಿ ಸಂಭ್ರಮಿಸುತ್ತಾರೆ. ಮನೆಗೆ ಬಂಧುಗಳನ್ನೂ ಗೆಳತಿಯರನ್ನೂ ಆಹ್ವಾನಿಸಿ ಬಾಗಿನವನ್ನು ನೀಡಿ ನಲಿಯುತ್ತಾರೆ.

ದೇವತೆಗಳು ಮತ್ತು ರಾಕ್ಷಸರು ಕ್ಷೀರಸಾಗರವನ್ನು ಮಥನಮಾಡಿದಾಗ ತೋರಿಕೊಂಡವಳೇ ಲಕ್ಷ್ಮೀ. ಅವಳು ಮಹಾವಿಷ್ಣುವಿನ ಮಡದಿಯಾಗಿ ಅವನ ವಕ್ಷಸ್ಥಳದಲ್ಲಿ ನೆಲಸಿದಳು.

ವ್ರತದ ದಿನ ಸಂಕಲ್ಪಪೂರ್ವಕವಾಗಿ ಶ್ರೀಲಕ್ಷ್ಮಿಯನ್ನು ಕಳಶದಲ್ಲಿ ಆವಾಹಿಸಿ, ಷೋಡಶೋಪಚಾರ ವಿಧಾನದಿಂದ ಅವಳನ್ನು ಪೂಜಿಸಬೇಕು. ಬಗೆಬಗೆಯ ಹೂವುಗಳಿಂದಲೂ ಪತ್ರೆಗಳಿಂದಲೂ ಅರ್ಚಿಸಬೇಕು. ಸಿಹಿಯ ನೈವೇದ್ಯವನ್ನು ನಿವೇದಿಸಬೇಕು. ಪೂಜೆಯ ಕೊನೆಯಲ್ಲಿ ಕೈಗೆ ಪೂಜಿತವಾದ ದಾರವನ್ನು ಕಟ್ಟಿಕೊಳ್ಳಲಾಗುತ್ತದೆ. ಆಗ ಈ ಶ್ಲೋಕವನ್ನು ಹೇಳಿಕೊಳ್ಳಲಾಗುತ್ತದೆ:

ದಾರಿದ್ರ್ಯಸಾಗರೇ ಮಗ್ನಾ ಭೀತಾಹಂ ಭವಭೀತಿತಃ /

ದೋರಂ ಗೃಹ್ಣಾಮಿ ಕಮಲೇ ಮಮಾಭೀಷ್ಟಪ್ರದಾ ಭವ //

(ಬಡತನದ ಕಡಲಿನಲ್ಲಿ ಮುಳುಗಿರುವೆ. ಈ ಸಂಸಾರಸಾಗರ ನನ್ನನ್ನು ಭಯಗೊಳಿಸುತ್ತಿದೆ. ಪೂಜೆಗೊಂಡಿರುವ ಈ ದೋರವನ್ನು ತೆಗೆದುಕೊಳ್ಳುತ್ತೇನೆ. ನನ್ನ ಬಯಕೆಗಳನ್ನು ಪೂರೈಸು.)

ನಮ್ಮ ಜೀವನ ಸುಖಮಯವಾಗಿರಬೇಕಾದರೆ ನಮಗೆ ಹಲವು ರೀತಿಯ ಸಂಪತ್ತು ಬೇಕು. ಸಂಪತ್ತು ಬೇಕು ಎಂದರೆ ನಾವು ಕಾಯಕದಲ್ಲಿ ತೊಡಗಬೇಕು. ನಮ್ಮೊಳಗಿರುವ ಚೈತನ್ಯವೇ ಆ ಕ್ರಿಯಾಶೀಲತೆಗೆ ಮೂಲ ಇಂಧನ. ಹೀಗಾಗಿ ಲಕ್ಷ್ಮಿಯ ಪೂಜೆ ಎಂದರೆ ಅದು ಕೇವಲ ಸಂಪತ್ತಿನ ಪೂಜೆಯೂ ಅಲ್ಲ, ಪ್ರದರ್ಶನವಂತೂ ಮೊದಲೇ ಅಲ್ಲ. ನಮ್ಮಲ್ಲಿ ಸುಪ್ತವಾಗಿರುವ ಶಕ್ತಿಯನ್ನು ಸರಿಯಾಗಿ ವಿನಿಯೋಗಮಾಡಿ, ನಮ್ಮ ಬದುಕಿಗೆ ಬೇಕಾದ ಎಲ್ಲ ವೀಧದ ಸವಲತ್ತುಗಳನ್ನು ಸಂಪಾದಿಸಿಕೊಳ್ಳುವ ಸತ್‌–ಸಂಕಲ್ಪವೇ ವರಾಮಹಾಲಕ್ಷ್ಮೀವ್ರತ ಸಂಕಲ್ಪದ ನಿಜವಾದ ತಾತ್ಪರ್ಯ. ನಮ್ಮ ಬದುಕಿನ ಸೌಂದರ್ಯಕ್ಕೂ ಸಂಪತ್ತಿಗೂ ಕಾರಣವಾಗಿರುವ ನಮ್ಮ ಅಂತರಂಗದ ಶ್ರೀಯನ್ನು ಶ್ರೀಮಂತಗೊಳಿಸಿಕೊಳ್ಳುವುದೇ ಈ ವ್ರತದ ದಿಟವಾದ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT