ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ಯ–ಪದ್ಯಗಳ ವೇದ

ಸ್ವಾಧ್ಯಾಯ
Last Updated 10 ಜುಲೈ 2018, 7:32 IST
ಅಕ್ಷರ ಗಾತ್ರ

ವೇದಗಳನ್ನು ಪರಿಚಯಿಸುವ ಪುಸ್ತಕಗಳು ಕನ್ನಡದಲ್ಲಿ ಸಾಕಷ್ಟು ಪ್ರಕಟವಾಗಿವೆ. ಯುವಜನರಿಗಾಗಿ ವೇದವನ್ನು ಪರಿಚಯಿಸುವ ಉದ್ದೇಶದಿಂದ ಭಾರತೀಯ ವಿದ್ಯಾಭವನ ‘ವೇದ–ವೇದಾಂಗ’ ಎಂಬ ಕೃತಿಯನ್ನು ಪ್ರಕಟಿಸಿದೆ. ಇದರ ಕರ್ತೃ ಎಚ್‌. ವಿ. ನಾಗರಾಜರಾವ್‌.

ಇದುವರೆಗೆ ನಾವು ಋಗ್ವೇದದ ಬಗ್ಗೆ ಸ್ವಲ್ಪ ಪರಿಚಯವನ್ನು ಮಾಡಿಕೊಂಡಿದ್ದೇವೆ. ಯಜುರ್ವೇದವನ್ನು ಕುರಿತು ಈಗ ತಿಳಿಯೋಣ; ‘ವೇದ–ವೇದಾಂಗ’ ಪುಸ್ತಕದಲ್ಲಿಯ ವಿವರಗಳನ್ನು ಹೀಗೆ ಸಂಗ್ರಹಿಸಬಹುದು:

‘ವೇದಕಾಲದಲ್ಲಿ ಸಂಸ್ಕೃತಿ ಯಜ್ಞಪ್ರಧಾನವಾಗಿತ್ತು. ಯಜ್ಞದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದ್ದ ಪುರೋಹಿತ ಅಧ್ವರ್ಯು. ಅವನು ಯಜುರ್ವೇದಪಾರಂಗತನಾಗಿರುತ್ತಿದ್ದನು. ಯಜ್ಞದ ದೃಷ್ಟಿಯಿಂದ ಅಧ್ವರ್ಯುವಿನ ಉಪಯೋಗಕ್ಕೆ ಸಂಗೃಹೀತವಾದ ನಿಯಮಗಳು ಯಜುರ್ವೇದಸಂಹಿತೆಯ ಮುಖ್ಯವಸ್ತು. ‘ಋಕ್‌’ ಎಂದರೆ ಛಂದೋಬದ್ಧವಾದ ಮಂತ್ರವೆಂದು ಈಗಾಗಲೇ ತಿಳಿದಿದ್ದೇವೆ. ಗದ್ಯರೂಪವಾದ ವೇದವಚನ ‘ಯಜುಸ್‌’ ಎಂಬ ಹೆಸರನ್ನು ಪಡೆಯುತ್ತದೆ.

‘ಯಜುರ್ವೇದದ ಶಾಖೆಗಳು ನೂರೊಂದು ಎಂದು ಪತಂಜಲಿ ಮಹರ್ಷಿಯು ಹೇಳಿದ್ದಾನೆ. ಇಂದು ಹೆಚ್ಚು ಶಾಖೆಗಳು ಉಳಿದುಕೊಂಡಿರುವುದೂ ಯಜುರ್ವೇದದ್ದೇ. ಕರ್ಮಾಚರಣೆಗೆ ಪ್ರಾಧಾನ್ಯವನ್ನಿತ್ತ ಭಾರತದಲ್ಲಿ ಇದು ಸಹಜವಾಗಿದೆ.

‘ಯಜುರ್ವೇದದಲ್ಲಿ ಕೃಷ್ಣ ಮತ್ತು ಶುಕ್ಲ ಎಂಬ ಎರಡು ಮುಖ್ಯವಿಭಾಗಗಳಿವೆ. ಕೃಷ್ಣಯಜುರ್ವೇದದಲ್ಲಿ ನಾಲ್ಕು ಸಂಹಿತೆಗಳು ಈಗ ಉಪಲಬ್ಧವಿವೆ. ಕಾಠಕಸಂಹಿತಾ, ಕಪಿಷ್ಠಲಸಂಹಿತಾ, ಮೈತ್ರಾಯಣೀಸಂಹಿತಾ, ತೈತ್ತಿರೀಯಸಂಹಿತಾ ಎಂದು ಇವು ಪ್ರಖ್ಯಾತವಾಗಿವೆ. ಶುಕ್ಲಯುಜುರ್ವೇದದ ಎರಡು ಶಾಖೆಗಳು ಉಳಿದಿವೆ. ಅವೆಂದರೆ ವಾಜಸನೇಯೀ ಸಂಹಿತೆಯ ಕಾಣ್ವಶಾಖೆ ಮತ್ತು ಮಾಧ್ಯಂದಿನ ಶಾಖೆ.

‘ಗದ್ಯಪದ್ಯಗಳ ಮಿಶ್ರಣವುಳ್ಳದ್ದು ಕೃಷ್ಣಯಜುರ್ವೇದ; ಪದ್ಯಗಳನ್ನು ಮಾತ್ರ ಹೊಂದಿರುವುದು ಶುಕ್ಲಯಜುರ್ವೇದ. ದಕ್ಷಿಣಭಾರತದಲ್ಲಿ ಪ್ರಚಲಿತ
ದಲ್ಲಿರುವುದು ಯಜುರ್ವೇದದ ತೈತ್ತಿರೀಯಸಂಹಿತೆ.

‘ತೈತ್ತಿರೀಯಸಂಹಿತೆಯಲ್ಲಿ ಏಳು ಕಾಂಡಗಳಿವೆ. ಇವುಗಳಿಗೆ ಕ್ರಮವಾಗಿ ಪ್ರಜಾವತಿ, ಸೋಮ, ಅಗ್ನಿ, ವಿಶ್ವೇದೇವತಾ, ಸ್ವಯಂಭು, ಆರುಣೀ, ಸಾಂಹಿತೀ ಎನ್ನುವ ಕಾಂಡಋಷಿಗಳು. ಋಗ್ವೇದದಲ್ಲಿರುವ ಅನೇಕ ಮಂತ್ರಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಋಗ್ವೇದದಲ್ಲಿ ಕಂಡುಬರುವ ದೇವತೆಗಳೇ ಇಲ್ಲೂ ಕಾಣಿಸುವರಾದರೂ ಯಜುರ್ವೇದದಲ್ಲಿ ರುದ್ರನ ಪ್ರಾಧಾನ್ಯ ಹೆಚ್ಚಾಗಿದೆ. ಕೃಷ್ಣಯಜುರ್ವೇದದಲ್ಲಿ ರುದ್ರಾಧ್ಯಾಯ ಎಂಬ ವಿಶಿಷ್ಟ ಅಧ್ಯಾಯವೇ ಇರುವುದು ಇದಕ್ಕೆ ಸಾಕ್ಷಿ.

‘ಕೃಷ್ಣಯಜುರ್ವೇದದ ತೈತ್ತಿರೀಯಸಂಹಿತೆ ಸಮಗ್ರವಾಗಿ ಯಾವ ಲೋಪವೂ ಇಲ್ಲದೆ ಉಳಿದಿದೆ. ಇತರ ಸಂಹಿತೆಗಳು ಪೂರ್ಣವಾಗಿ ಉಪಲಬ್ಧವಾಗಿಲ್ಲ. ಸ್ವರೂಪದಲ್ಲೂ ವಿಷಯಪ್ರತಿಪಾದನೆಯಲ್ಲೂ ಈ ಸಂಹಿತೆಗಳಲ್ಲಿ ನಿಕಟಸಾಮ್ಯವಿದೆ. ಮಂತ್ರ ಮತ್ತು ಬ್ರಾಹ್ಮಣ ಭಾಗಗಳು ಮಿಶ್ರಿತವಾಗಿರುವುದು ಕೃಷ್ಣಯಜುರ್ವೇದ, ಶುದ್ಧವಾದ ಮಂತ್ರಗಳ ಸಂಕಲನ ಶುಕ್ಲಯಜುರ್ವೇದ ಎಂದು ಕೆಲವರು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

‘ತೈತ್ತಿರೀಯಸಂಹಿತೆ ಎಂದು ಹೆಸರು ಬರಲು ಕಾರಣವಾಗಿ ಒಂದು ಆಖ್ಯಾನವನ್ನು ಹೇಳುತ್ತಾರೆ. ವೈಶಂಪಾಯನರಿಂದ ಯಾಜ್ಞವಲ್ಕ್ಯರು ಯಜುರ್ವೇದವನ್ನು ಕಲಿತಿದ್ದರು. ವೈಶಂಪಾಯನರಿಗೆ ಯಾವುದೋ ಕಾರಣಕ್ಕೆ ಕೋಪ ಬಂದು ‘ನಾನು ಕಲಿಸಿದ ವೇದಗಳನ್ನು ಕಕ್ಕಿಬಿಡು’ ಎಂದರಂತೆ. ಗುರುಶಾಪಕ್ಕೆ ಹೆದರಿ ಯಾಜ್ಞವಲ್ಕ್ಯರು ವೇದಗಳನ್ನು ವಮನ ಮಾಡಿದಾಗ ಇತರ ಶಿಷ್ಯರು ಗುರ್ವಾಜ್ಞೆಯಂತೆ ತಿತ್ತಿರಿ ಹಕ್ಕಿಗಳ ರೂಪದಲ್ಲಿ ಆ ಯಜಸ್ಸುಗಳನ್ನು ಭಕ್ಷಿಸಿದರಂತೆ. ಇದರಿಂದ ಈ ಸಂಹಿತೆಗೆ ತೈತ್ತಿರೀಯ ಎಂಬ ಹೆಸರು ಬಂದಿತು ಎಂಬುದು ಕಥೆ.

‘ಅನಂತರದಲ್ಲಿ ಯಾಜ್ಞವಲ್ಕ್ಯರು ಸೂರ್ಯೋಪಾಸನೆ ಮಾಡಿ ಆದಿತ್ಯನಿಂದ ಶುಕ್ಲಯಜುಸ್ಸನ್ನು ಪಡೆದುಕೊಂಡರು. ಇದರ ತಾತ್ಪರ್ಯ ಕೃಷ್ಣಯಜುರ್ವೇದಕ್ಕಿಂತ ಶುಕ್ಲಯಜುರ್ವೇದ ಸ್ವಲ್ಪ ಅರ್ವಾಚೀನ. ಶುಕ್ಲಯಜುರ್ವೇದಸಂಹಿತೆಯನ್ನೂ ಅದಕ್ಕೆ ಸಂಬಂಧಿಸಿದ ಶತಪಥಬ್ರಾಹ್ಮಣವನ್ನೂ ಯಾಜ್ಞವಲ್ಕ್ಯರೇ ಸಂಪಾದಿಸಿದರು. ಯಾಗಾನುಷ್ಠಾನದಲ್ಲಿ ಮತ್ತು ಮಂತ್ರಪಠನದಲ್ಲಿ‌ ಜನರಿಗಿದ್ದ ಅಚಲ ಶ್ರದ್ಧೆಯನ್ನು ನಾವು ಯಜುರ್ವೇದಸಂಹಿತೆಗಳಲ್ಲಿ ಕಾಣಬಹುದು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT