ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡ ‘ವಿಕಾಸ’ಕ್ಕೆ ಒಳನಾಡ ಬಲ

Last Updated 16 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಮಾಯಿಪ್ಪಾಡಿ ಅರಮನೆಗೆ ಕೇರಳದಿಂದ ಬಂದ ಜಟ್ಟಿಯೊಬ್ಬ ತನ್ನನ್ನು ಸೋಲಿಸುವವರಿದ್ದರೆ ಮುಂದೆ ಬರಲಿ ಎಂದು ಸವಾಲೆಸೆದಿದ್ದ. ಮರುದಿನ ಕಾಳಗಕ್ಕೆ ವೇದಿಕೆ ಸಜ್ಜಾಯಿತು. ಅತಿಥಿ ಜಟ್ಟಿಗೂ ಅರಮನೆಯ ಜಟ್ಟಿಗೂ ರಾತ್ರಿ ಒಂದೇ ಕೊಠಡಿಯಲ್ಲಿ ಊಟಕ್ಕೆ ವ್ಯವಸ್ಥೆಯಾಗಿತ್ತು. ಅರಮನೆಯ ಜಟ್ಟಿ ಎಳ್ಳು ಬೇಕು ಎಂದ. ಎಳ್ಳು ಬಂತು. ಎಲ್ಲರೆದುರು ಅದನ್ನು ಮುಷ್ಟಿಯಲ್ಲಿ ಹಿಂಡಿ ಎಣ್ಣೆ ಮಾಡಿ ಅನ್ನಕ್ಕೆ ಹಾಕಿ ಊಟ ಮಾಡಿದ. ಕೇರಳದಿಂದ ಬಂದ ಜಟ್ಟಿ ರಾತ್ರೋರಾತ್ರಿ ಪರಾರಿಯಾಗಿದ್ದ!

ಅಹಂ ಹೊತ್ತು ಬಂದಿದ್ದವನನ್ನು ಹೀಗೆ ಸುಲಭವಾಗಿ ಮಣಿಸಿದಾತ ಪುಳ್ಕೂರು ಬಾಚ. ಬಲವಂತನೂ ಪರಾಕ್ರಮಿಯೂ ಆಗಿದ್ದ ಬಾಚನ ಕುರಿತ ಕಥೆಗಳು ಅನೇಕ ಇವೆ. ಕೇರಳದ ನಾಲ್ಕನೇ ತರಗತಿಗೆ ಒಮ್ಮೆ ಈತನ ವಿಷಯ ಪಠ್ಯವೂ ಆಗಿತ್ತು. ಯಕ್ಷಗಾನ ಪ್ರಸಂಗಗಳೂ ಬಾಚನ ಹೆಸರಿನಲ್ಲಿವೆ. ಪುಳ್ಕೂರು ಬಾಚ ಎಂಬ ಪುಸ್ತಕವೂ ರಚನೆಯಾಗಿದೆ.

ಹೌದು, ಕಾಸರಗೋಡಿನ ಪ್ರಸಿದ್ಧ ಮಧೂರು ದೇವಸ್ಥಾನದ ಹತ್ತಿರುವಿರುವ ಪುಳ್ಕೂರು ಎಂಬಲ್ಲಿನ ಬಾಚನ ಕುರಿತು ಸ್ಥಳೀಯರಲ್ಲಿ ಬಹುತೇಕರಿಗೆ ಇಂಥ ಮಾಹಿತಿಗಳು ಗೊತ್ತು. ಮಾಯಿಪ್ಪಾಡಿ ಮನೆತನದ ಇತಿಹಾಸ ಓದಿದವರಿಗೂ ಬಾಚನ ವಿಚಾರ ಹೊಸತಲ್ಲ. ಕೂಡ್ಲು ಗೋಪಾಲಕೃಷ್ಣ ದೇವಸ್ಥಾನದ ಎದುರು ಇರುವ ಆಳೆತ್ತರದ ಶಿಲಾಶಾಸನ ನೋಡಿದವರಿಗೂ ಬಾಚನ ಬಗ್ಗೆ ತಿಳಿದುಕೊಳ್ಳುವ ಅವಕಾಶದ ಬಾಗಿಲು ತೆರೆಯುತ್ತದೆ.

ಅಷ್ಟಕ್ಕೇ ಸೀಮಿತನಾಗಿದ್ದ ಬಾಚ ಈಗ ಕರ್ನಾಟಕದಾದ್ಯಂತ ಪ್ರಚಾರ ಪಡೆದಿದ್ದಾನೆ. ಬೆಂಗಳೂರಿನ ವಿಕಾಸ ಟ್ರಸ್ಟ್‌ನ ‘ಕಾಸರಗೋಡು ಕನ್ನಡ ವಿಕಾಸ ಮಾಹಿತಿ’ಯ ಜಾದೂ ಇದು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸದ್ದಿಲ್ಲದೆ ನಡೆದ ವಿಕಾಸ ಟ್ರಸ್ಟ್‌ನ ಅಭಿಯಾನ ಈಗ ವಿಧಾನಸೌಧದಿಂದ ಹಿಡಿದು ರಾಜ್ಯದ ಮೂಲೆಮೂಲೆಗೆ ತಲುಪಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಹೊರನಾಡು ಮತ್ತು ಒಳನಾಡು ಕನ್ನಡಿಗರನ್ನು ರೋಮಾಂಚನಗೊಳಿಸಿದೆ.

ವಿಕಾಸ ಮಾಹಿತಿಯಲ್ಲಿ ಕಾಸರಗೋಡಿಗೆ ಸಂಬಂಧಿಸಿದ 75 ಮಾಹಿತಿ ತುಣುಕುಗಳಿವೆ. ಒಂದೆರಡು ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಸಣ್ಣ ಲೇಖನಗಳಿವು. ಆದರೆ ‘ಕಿರಿದರೊಳ್ ಹಿರಿದು’ ಹೇಳುವ ಮಾಹಿತಿಯ ಹೂರಣಗಳು. ಕಯ್ಯಾರ ಕಿಞಣ್ಣ ರೈ, ಯು.ಪಿ.ಕುಣಿಕುಳ್ಳಾಯ, ಪುಂಡೂರು ವೆಕಂಟರಾಜ ಪುಣಿಂಚತ್ತಾಯ ಮುಂತಾಗಿ ಕನ್ನಡಕ್ಕಾಗಿ ಹೋರಾಡಿದ, ಕನ್ನಡದ ಸೇವೆ ಮಾಡಿದವರ ವ್ಯಕ್ತಿಚಿತ್ರಗಳು, ಮಧೂರು, ಮಲ್ಲ,ಕಣಿಪುರ ದೇವಸ್ಥಾನ, ಮಾಲಿಕ್ ದೀನಾರ್ ಮಸೀದಿ, ಬೇಳ ಚರ್ಚ್ ಮತ್ತಿತರ ದೇವಾಲಯಗಳ, ಮಠಗಳ ಮಾಹಿತಿ, ಸಿಪಿಸಿಆರ್‌ಐ, ಕೇಂದ್ರೀಯ ವಿದ್ಯಾಲಯ, ಐಎಡಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖ ಸಂಸ್ಥೆಗಳ ವಿವರ, ಅಮೃತಧಾರಾ ಗೋಶಾಲೆ, ತಳಂಗರೆ ಶಿಲಾಶಾಸನ, ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ, ಕಾಸರಗೋಡು ಗಿಡ್ಡ ತಳಿ, ಪೆರ್ಲ ಕೈಮಗ್ಗ, ತೊರೆಗೆ ಅಡ್ಡಲಾಗಿ ಕಟ್ಟುವ ಕಟ್ಟಗಳು, ನೀರಿನ ಸೆಲೆಯ ಸುರಂಗಗಳು, ಪೊಸಡಿ ಗುಂಪೆಯಂಥ ಪ್ರೇಕ್ಷಣೀಯ ಸ್ಥಳಗಳು, ನದಿಗಳು, ಕಂಬಳ, ನರಕ ಸೃಷ್ಟಿಸಿದ ಎಂಡೋಸಲ್ಫಾನ್... ಹೀಗೆ ಇದರಲ್ಲಿ ಏನುಂಟು, ಏನಿಲ್ಲ...

ಕಾಸರಗೋಡು ಕನ್ನಡಿಗರಿಗಾಗಿ...
ವಿಕಾಸ ಟ್ರಸ್ಟ್ ಆರಂಭಗೊಂಡದ್ದು ಸೇವೆಗಾಗಿ. ಅದರಲ್ಲೂ ಕನ್ನಡಿಗರ ಸೇವೆಗಾಗಿ; ಕಾಸರಗೋಡು ಕನ್ನಡಿಗರಿಗಾಗಿ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ರವಿನಾರಾಯಣ ಗುಣಾಜೆ ಇದರ ರೂವಾರಿ. ಸಾಮಾಜಿಕ ಕಾರ್ಯಗಳ ಜೊತೆಗೆ ಬೆಂಗಳೂರಿನಲ್ಲಿ ಇದ್ದುಕೊಂಡು ತಾಯ್ನೆಲದ ಸೇವೆ, ಕಾಸರಗೋಡು ಕನ್ನಡಿಗರಿಗೆ ಕರ್ನಾಟಕದಲ್ಲಿ ಅಗತ್ಯ ಅನುಕೂಲಗಳನ್ನು ಕಲ್ಪಿಸುವುದು, ಕಾಸರಗೋಡಿನ ಪ್ರವಾಸೋದ್ಯಮವನ್ನು ಉತ್ತೇಜಿಸಿವುದು ಮತ್ತು ಬೆಳೆಸುವುದು, ರಾಜಕೀಯವಾಗಿ ಕನ್ನಡಿಗರ ಪ್ರಾತಿನಿಧ್ಯಕ್ಕಾಗಿ ಶ್ರಮಿಸುವುದು ಮುಂತಾದ ಚಿಂತನೆಗಳೊಂದಿಗೆ ಕಳೆದ ವರ್ಷ ಜನವರಿಯಲ್ಲಿ ಶುರುವಾದ ಸಂಸ್ಥೆ ಇದು.

ಕೋವಿಡ್-19ರ ಸಂದರ್ಭದಲ್ಲಿ ಆರಂಭವಾದ ಕಾರಣ ಟ್ರಸ್ಟ್‌ನ ಆರಂಭಿಕ ಕೆಲಸಗಳೆಲ್ಲ ಆನ್‍ಲೈನ್ ಮೂಲಕವಷ್ಟೇ ನಡೆದಿದ್ದವು. ಮಾಹಿತಿಗಳು ವಾಟ್ಸ್ ಆ್ಯಪ್, ಇ–ಮೇಲ್ ಮುಂತಾದ ತಾಣಗಳಲ್ಲಿ ಹಂಚಿಕೆಯಾಗುತ್ತಿದ್ದವು. ‘ಡಿಜಿಟಲ್ ಸಂಘಟನೆ’ಯಾಗಿದ್ದ ಇದು ಈಗ ಆಫ್‍ಲೈನ್ ಮಾದರಿಗೆ ಕಾಲಿಟ್ಟಿರುವ ಕಾರಣ ಮಾಹಿತಿ ಎಲ್ಲೆಡೆ ಮುಕ್ತವಾಗಿ ಹಬ್ಬುತ್ತಿದೆ. ವೆಬ್‌ಸೈಟ್‌: https://vikasatrust.org

ಇನ್ನಷ್ಟು ವಿಸ್ತಾರಕ್ಕೆ ವಿಕಾಸ
ಮಾಹಿತಿ ಕೊರತೆ ನೀಗಬೇಕು, ಕಾಸರಗೋಡಿನ ಒಟ್ಟಾರೆ ಅಭಿವೃದ್ಧಿ ಆಗಬೇಕು ಎಂಬ ಉದ್ದೇಶದಿಂದ ಶುರು ಮಾಡಿದ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮಗಳನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸುವ ಯೋಜನೆ ಇದೆ. ಚೆನ್ನೈ ಮತ್ತು ಮುಂಬೈಯಲ್ಲಿ ಸದ್ಯದಲ್ಲೇ ಕೆಲಸಗಳು ಆರಂಭಗೊಳ್ಳಲಿವೆ. ಬೆಂಗಳೂರಿನಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಕಾಸರಗೋಡಿನವರಿದ್ದಾರೆ. ಅನೇಕರು ಇಲ್ಲಿ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯ ನೆರವು ನೀಡಲು ಟ್ರಸ್ಟ್ ಸಿದ್ಧ. ಮಾಹಿತಿ ಅಭಿಯಾನ ಪೋಸ್ಟರ್, ಕಾಸರಗೋಡಿನ ಸ್ಥಳನಾಮಗಳನ್ನು ಒಳಗೊಂಡ ನಕಾಶೆ ಇತ್ಯಾದಿ ಈಗಾಗಲೇ ಜನರ ಮತ್ತು ಜನಪ್ರತಿನಿಧಿಗಳ ಮೆಚ್ಚುಗೆ ಗಳಿಸಿದೆ. ದೂರದೂರಿನಲ್ಲಿದ್ದು ಜನಿಸಿದ ಊರಿಗಾಗಿ ಏನೇನು ಮಾಡಬಹುದೋ ಅದೆಲ್ಲವನ್ನೂ ಟ್ರಸ್ಟ್ ಮಾಡುತ್ತಿದೆ. ಇದರಿಂದ ಊರವರಿಗೆ ಖುಷಿಯೂ ನಮಗೆ ಧನ್ಯತೆಯೂ ಮೂಡುತ್ತಿದೆ.

–ರವಿನಾರಾಯಣ ಗುಣಾಜೆ, ವಿಕಾಸ ಟ್ರಸ್ಟ್ ರೂವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT