ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರ ಉಳಿಯ ಪೆಟ್ಟಿನಿಂದ ಏನಾಗಿದ್ದೇವೆ?

Last Updated 1 ಜನವರಿ 2021, 19:30 IST
ಅಕ್ಷರ ಗಾತ್ರ

ಮಕ್ಕಳಾಗಿದ್ದಾಗ ರಾಜಕುಮಾರ– ರಾಜಕುಮಾರಿಯರ ಕಥೆಯನ್ನು ಕೇಳಿರಲೇಬೇಕಲ್ಲವೇ? ಇಬ್ಬರೂ ಸಾಕಷ್ಟು ಕಷ್ಟಗಳನ್ನು ಎದುರಿಸಿದ ಮೇಲೆ ಮದುವೆಯಾಗಿ ಕೊನೆಯವರೆಗೂ ಸುಖವಾಗಿದ್ದರು ಎನ್ನುವಲ್ಲಿಗೆ ಕಥೆ ಮುಕ್ತಾಯವಾದಾಗ ನಾವೆಲ್ಲಾ ಸುಖವಾಗಿ ನಿದ್ದೆ ಹೋಗುತ್ತಿದ್ದೆವು! ವಾಸ್ತವ ಜಗತ್ತಿನ ಬದುಕು ಕೂಡ ಹೀಗೆಯೇ ಇರುತ್ತಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ? ಜನಪ್ರಿಯ ಸಿನಿಮಾ ಸಾಹಿತ್ಯಗಳೂ ಇಂತಹದೆ ಕತೆಯನ್ನು ಹೆಣೆದಿರುತ್ತವೆ.

ಹೀಗೆ ಮುಂದಿನ ಸುಖದ ನಿರೀಕ್ಷೆಯೇ ಇವತ್ತಿನ ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕೊಡುತ್ತದೆ ಎಂದುಕೊಂಡಾಗ ನಮ್ಮ ಹತಾಶೆ, ಅಸಹಾಯಕತೆಗಳು ಹೆಚ್ಚಾಗಬಹುದು. ಅದಕ್ಕಿಂತ ಮುಖ್ಯವಾಗಿ ಇವತ್ತಿನ ಕಷ್ಟಗಳನ್ನು ಕೊನೆಗೊಳಿಸುವುದರಲ್ಲಿಯೇ ಮನಸ್ಸನ್ನು ಕೇಂದ್ರೀಕರಿಸುವ ನಾವು ಅಂತಹ ಕಷ್ಟಗಳಿಂದ ಮುಂದಿನ ಬದುಕಿಗೆ ಉಪಯುಕ್ತವಾಗಬಹುದಾದ ಪಾಠಗಳನ್ನೇನೂ ಕಲಿಯುವುದಿಲ್ಲ. ಕಷ್ಟಗಳು ಕೊನೆಯಾಗುವ ಸೂಚನೆಗಳೇ ಸಿಗದಿದ್ದಾಗ ಆಂತರಿಕವಾಗಿ ಕುಸಿದು ಹೋಗುತ್ತೇವೆ.

2020ನ್ನೇ ಉದಾಹರಣೆಯಾಗಿ ನೋಡಿ. ಮಾರ್ಚ್‌ ತಿಂಗಳಿನಲ್ಲಿ ನಾವೆಲ್ಲಾ ಕೊರೊನಾ ಕಾಯಿಲೆಯ ಬಗ್ಗೆ ಮೊದಲು ಎಚ್ಚೆತ್ತುಕೊಂಡಾಗ ಜೀವನ ಅಲ್ಲೋಲಕಲ್ಲೋಲವಾಯಿತು. ಆದಷ್ಟು ಬೇಗ ಬದುಕು ಮೊದಲಿನಂತಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಇಡೀ ವರ್ಷವನ್ನು ಆತಂಕದಲ್ಲಿಯೇ ಕಳೆದಿದ್ದೇವೆ. ಮುಂದೆಯೂ ಎಚ್ಚರಿಕೆಯಲ್ಲಿಯೇ ಇರಬೇಕು, ಜನವರಿಯಲ್ಲಿ ಕಾಯಿಲೆಯ ಮತ್ತೊಂದು ಹೊಸ ಅಲೆ ಪ್ರಾರಂಭವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಅಂದರೆ ನಮ್ಮೆಲ್ಲರ ಬದುಕು ಸಂಪೂರ್ಣ ಸಹಜವಾಗಲು ಇನ್ನೂ ಸಾಕಷ್ಟು ಸಮಯದ ಅಗತ್ಯವಿದೆ ಎಂದಾಯಿತು. ಇದು ನಮ್ಮ ಕಿರಿಕಿರಿಗಳನ್ನು ಹೆಚ್ಚಿಸಬಹುದಾದರೂ ಕಳೆದ ಒಂಬತ್ತು ತಿಂಗಳುಗಳಲ್ಲಿ ನಾವು ಕಲಿತಿದ್ದೇನು ಎಂದು ನೆನಪು ಮಾಡಿಕೊಂಡರೆ ಮುಂಬರುವ ದಿನಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಬಹುದು. ಕಷ್ಟಗಳಿಂದ ಕಲಿಯುವುದೇನಿದೆ ಎಂದು ಸಿನಿಕರಾಗದೆ ಹಿನ್ನೋಟವನ್ನು ಬೀರಿದರೆ ಸಾಕಷ್ಟು ಅಂಶಗಳು ಗೋಚರಿಸುತ್ತವೆ.

ಅನಿರೀಕ್ಷಿತವಾಗಿ ಲಾಕ್‌ಡೌನ್‌ ಘೋಷಣೆಯಾದಾಗ ಮನೆಯಲ್ಲಿಯೇ ಇರುವುದು ಅನಿವಾರ್ಯವಾಯಿತು. ಒಂದೆರೆಡು ದಿನಗಳ ಕಿರಿಕಿರಿಯ ನಂತರ ನಮ್ಮ ಮನೆಯ ಮೂಲೆಗಳಲ್ಲಿ ಸೇರಿಕೊಂಡಿರುವ ದೂಳು, ಕಸಕಡ್ಡಿಗಳು ಸ್ವಚ್ಛವಾಗತೊಡಗಿದವು. ನಾವು ಅನಗತ್ಯವಾಗಿ ಕೊಂಡು ಸೇರಿಸಿಕೊಂಡಿದ್ದ ಸಾಕಷ್ಟು ವಸ್ತುಗಳನ್ನು ಉಪಯೋಗಿಸುವುದನ್ನು ಕಲಿತೆವು ಅಥವಾ ಕಸದ ಬುಟ್ಟಿಗೆ ಸೇರಿಸಿದೆವು! ನಮ್ಮ ಕೊಳ್ಳುಬಾಕತನದ ಹಲವಾರು ಮುಖಗಳು ನಮಗೇ ಪರಿಚಯವಾದವು.

ವೃತ್ತಿ ವ್ಯವಹಾರಗಳಿಗೆ ಹಿನ್ನಡೆಯಾಗಿ ಆದಾಯ ಕಡಿಮೆಯಾದಂತೆ ಖರ್ಚುಗಳನ್ನು ಕಡಿಮೆ ಮಾಡುವುದು ಅನಿವಾರ್ಯವಾಯಿತು. ಹೀಗೆ ಮಿತವಾಗಿ, ಸಂತೋಷವಾಗಿ ಬದುಕುವುದು ಕಷ್ಟವೇನಲ್ಲ ಎನ್ನುವ ಹೊಸ ಅರಿವನ್ನು ಗಳಿಸಿಕೊಂಡೆವು.

ಅನಗತ್ಯವಾಗಿ ವೈದ್ಯರ ಬಳಿ ಓಡುವುದು ಸಾಧ್ಯವಾಗದಿದ್ದಾಗ ಸಣ್ಣಪುಟ್ಟ ಕಾಯಿಲೆಗಳು ಒಂದೆರಡು ದಿನಗಳಲ್ಲಿ ಔಷಧಿಗಳಿಲ್ಲದೆ ಮಾಯವಾಗತೊಡಗಿದವು! ನಮ್ಮ ದೇಹ ನಾವಂದುಕೊಂಡಷ್ಟು ದುರ್ಬಲವಲ್ಲ ಎನ್ನುವ ಹೊಸ ಆತ್ಮವಿಶ್ವಾಸವನ್ನು ಪಡೆದುಕೊಂಡೆವು. ಹಣವನ್ನು ಉಳಿಸಿದ್ದಲ್ಲದೆ ಔಷಧಗಳ ಅಡ್ಡಪರಿಣಾಮಗಳಿಂದಲೂ ಬಚಾವಾದೆವು.

ಹೊರಗಡೆಯ ತಿಂಡಿ–ತಿನಿಸುಗಳಿಗೆ ಅವಕಾಶವಿಲ್ಲದಿದ್ದಾಗ ಮನೆಯಲ್ಲಿಯೇ ಹೊಸರುಚಿಗಳು ಸಿದ್ಧವಾಗತೊಡಗಿದವು. ಮನೆಯವರೆಲ್ಲರ ಸಹಕಾರವೂ ಹೆಣ್ಣುಮಕ್ಕಳಿಗೆ ದೊರೆಯಿತು. ಕಡಿಮೆ ರುಚಿಯಿದ್ದರೂ ಶುದ್ಧವಾದ ತಾಜಾ ಆಹಾರ ಎಲ್ಲರಿಗೂ ದೊರೆತು ಆರೋಗ್ಯವೂ ಸುಧಾರಿಸಿತು.

ಕುಟುಂಬದವರೆಲ್ಲರೂ ಒಟ್ಟಾಗಿ ಮನೆಯಲ್ಲಿಯೇ ಸಮಯ ಕಳೆಯುವುದು ಅನಿವಾರ್ಯವಾದಾಗ ಹೊಂದಿಕೊಂಡು ಬದುಕುವುದನ್ನು ಕಲಿಯಲೇ ಬೇಕಾಯಿತು. ಭಿನ್ನಾಭಿಪ್ರಾಯಗಳನ್ನು ಮರೆಯಲು ಮನೆಯ ಹೊರಗಡೆ ಸಮಯ ಕಳೆಯುವುದು ಸಾಧ್ಯವಾಗದಿದ್ದಾಗ ಅವುಗಳ ಬಗೆಗೆ ಚರ್ಚಿಸಿ ಹೊಸ ಸಮಾಧಾನಗಳನ್ನು ಹುಡುಕಿಕೊಂಡೆವು. ಕುಟುಂಬವಾಗಿ ಒಬ್ಬರಿಗೊಬ್ಬರು ಮಾನಸಿಕವಾಗಿ ಹತ್ತಿರವಾದೆವು.

ಬೆಳಗಿನ ಕಾಫಿ, ಮಧ್ಯಾಹ್ನದ ಹರಟೆ, ಸಂಜೆಯ ತಿರುಗಾಟ, ರಾತ್ರಿಯ ಕಾರು ‘ಬಾರುಗಳು’ ನಡೆಯದಿದ್ದರೆ ಟೆನ್ಷನ್‌ ಆಗುತ್ತದೆ ಎಂದುಕೊಂಡವರೂ ಕೂಡ ಅವುಗಳನ್ನು ಬಿಟ್ಟು ಬದುಕುವುದು ಸಾಧ್ಯ ಎಂದು ಕಂಡುಕೊಂಡೆವು. ನಮಗೇ ಗೊತ್ತಿರದ ಅಂತರಂಗದ ಗಟ್ಟಿತನದ ಪರಿಚಯ ಮಾಡಿಕೊಂಡೆವು.

ನೆರೆಯವರ ಜೊತೆ ಹೊಸ ಸಂಬಂಧಗಳು ಸೃಷ್ಟಿಯಾದವು. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಗುಂಪಾಗಿ ಬದುಕುವುದರಲ್ಲಿ ಇರುವ ಸಂತಸವನ್ನು ಪರಿಚಯ ಮಾಡಿಕೊಂಡೆವು.

ಹೀಗೆ ಪಟ್ಟಿಯನ್ನು ಉದ್ದವಾಗಿ ಬೆಳೆಸಬಹುದು. ಕೊರೊನಾದ ಭಯ ಮಾಯವಾಗಿ ಮತ್ತೆ ಬದುಕು ಮಾಮೂಲಿನ ಸ್ಥಿತಿಗೆ ಬರುತ್ತಾ ಹೋದಂತೆ ಇವೆಲ್ಲವೂ ನಮಗೆ ಗೊತ್ತಿಲ್ಲದಂತೆಯೇ ಕಳೆದುಹೋಗುವ ಸಾಧ್ಯತೆಗಳಿರುತ್ತವೆ. ಆದರೆ ಈ ಕಲಿಕೆಗಳನ್ನೆಲ್ಲಾ ಉಳಿಸಿಕೊಳ್ಳದಿದ್ದರೆ 2020 ಭಯಾನಕ ಅನುಭವಗಳ ವರ್ಷವಾಗಿ ಮಾತ್ರ ನಮ್ಮೊಳಗೆ ದಾಖಲಾಗುತ್ತದೆ.

2020 ನೀಡಿದ ಉಳಿಪೆಟ್ಟು ನಮ್ಮನ್ನು ಚೂರುಚೂರಾಗಿಸಿದೆಯೋ ಅಥವಾ ಸುಂದರ ಮೂರ್ತಿಯನ್ನಾಗಿಸಿದೆಯೋ ಎನ್ನುವುದನ್ನು 2021ರ ಅನುಭವಗಳು ನಮಗೆ ತೋರಿಸಲಿವೆ.

(ಲೇಖಕ: ಶಿವಮೊಗ್ಗದಲ್ಲಿ ಮನೋಚಿಕಿತ್ಸಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT