ಮಂಗಳವಾರ, ಡಿಸೆಂಬರ್ 10, 2019
19 °C

‘ಹಕ್ಕಿಪಿಕ್ಕಿ’ಗಳಿಗೆ ರೆಕ್ಕೆ ಬಂದಾಗ...

Published:
Updated:
Prajavani

‘ಹಕ್ಕಿಯ ಪಿಕ್ಕೆ’ ಹುಡುಕುತ್ತಾ ಕಾಡಿನಿಂದ ನಾಡಿಗೆ ಬಂದ ಈ ಸಮುದಾಯದ ಅನೇಕರ ಬದುಕು ಹಳೆ ಜಾಡಿನಲ್ಲೇ ಸಾಗಿದೆ. ಆದರೆ, ಬದಲಾದ ಕಾಲಘಟ್ಟಕ್ಕೆ ಒಗ್ಗಿಕೊಂಡ ಒಂದಷ್ಟು ಮಂದಿ, ಬೇರೆಯವರು ಬೆರಗಾಗುವಂತೆ ಬೆಳೆದಿದ್ದಾರೆ. ಹೀಗೆ ಬದಲಾಗಿರುವ ಆ ಸಮುದಾಯದ ಕೆಲ ಯುವಕರು ಕರಕುಶಲ ವಸ್ತುಗಳನ್ನು ತಯಾರಿಸಿ, ವಿದೇಶಗಳಲ್ಲಿ ಮಾರಾಟ ಮಾಡುತ್ತಿದ್ದಾರೆ!

ನಿಜ, ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿರುವ ಹಕ್ಕಿಪಿಕ್ಕರ ಕಾಲೊನಿಗೆ ಒಮ್ಮೆ ಭೇಟಿ ನೀಡಿದರೆ, ಇಂಥದ್ದೊಂದು ಅಚ್ಚರಿಯ ಬೆಳವಣಿಗೆಯನ್ನು ಗಮನಿಸಬಹುದು. ಈ ಹಿಂದೆ ಕೆರೆ ಅಂಚಿನ ಕೊಳೆಗೇರಿ ಪ್ರದೇಶವಾಗಿದ್ದ ಈ ಕಾಲೊನಿ ಸರ್ಕಾರದ ನೆರವಿನಿಂದ ಈಗ ಸುಂದರ ಬಡಾವಣೆಯಾಗಿದೆ. ಆ ಬಡಾವಣೆಯ ಮನೆ ಮನೆಗಳಲ್ಲಿ ಹೂವಿನ ಸರ, ಮಣಿಸರ, ಮಣಿಯುಂಗುರ, ಪ್ರಾಣಿ –ಪಕ್ಷಿಗಳ ಗೊಂಬೆಗಳಂತಹ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಾರೆ.

ಈ ಕಾಲೊನಿಯಲ್ಲಿರುವ ಒಬ್ಬೊಬ್ಬರ ಮನೆಯಲ್ಲೂ ಅಲಂಕಾರಿಕ ಹೂವುಗಳು ಗೊಂಬೆ, ಆಟಿಕೆಗಳು ತಯಾರಾಗುತ್ತವೆ. ಕೆಲವರು ಉಲನ್‌ ಸ್ವೆಟರ್‌ ನೇಯ್ಗೆ ಮಾಡುತ್ತಾರೆ. ಕಾಲೊನಿಯ ಪ್ರತಿ ಮನೆಯಂಗಳವೂ ಕಚ್ಚಾ ಸಾಮಗ್ರಿಗಳ ಗೋದಾಮಿನಂತಿದೆ. ಬಿಡಿ ಕಚ್ಚಾ ಸಾಮಗ್ರಿಗಳ ಮೂಲಕ ಗೊಂಬೆ, ಅಲಂಕಾರಿಕ ಹೂವು ಬುಟ್ಟಿ, ಮಣಿಸರ, ಸ್ವೆಟರ್‌ ತಯಾರಿಸಿ ಬೀದಿ ವ್ಯಾಪಾರಿಗಳಿಗೆ ಸಗಟು ಮಾರಾಟ ಮಾಡುತ್ತಾರೆ.

ಬದುಕಿಗೆ ಹೊಸ ಸ್ಪರ್ಶ

ಒಂದು ಕಾಲದಲ್ಲಿ ಸಮುದಾಯದವರು ರಸ್ತೆಬದಿ ಆಟಿಕೆಗಳನ್ನು ತಯಾರಿಸಿ, ತಲೆ ಮೇಲೆ ಹೊತ್ತು ಮನೆ ಮನೆಗೆ ತಿರುಗಿ ಮಾರುತ್ತಿದ್ದರು. ಆದರೆ ಈಗ ಇವರ ವಸ್ತುಗಳೆಲ್ಲ ಆನ್‌ಲೈನ್‌ಲ್ಲಿ ವಹಿವಾಟಾಗುತ್ತಿವೆ. ದೊರೆತ ಶಿಕ್ಷಣ, ಬದಲಾದ ತಂತ್ರಜ್ಞಾನದಿಂದಾಗಿ, ಮೂಲೆ ಗುಂಪಾಗಿದ್ದ ಇಂಥವರ ಕೌಶಲ, ಕಲೆ ಅನಾವರಣಗೊಳ್ಳಲು ಹೊಸ ಹೊಸ ವೇದಿಕೆಗಳೂ ಸಿಕ್ಕಿವೆ. ಸಮುದಾಯದ ಕೆಲ ವಿದ್ಯಾವಂತರಂತೂ ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡುವಂತಹ ಕೌಶಲ ರೂಢಿಸಿಕೊಂಡಿದ್ದಾರೆ.

ಆಟಿಕೆಗಳಷ್ಟೇ ಅಲ್ಲ, ಗಿಡಮೂಲಿಕೆ ಔಷಧಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಔಷಧ ತಯಾರಿಕೆ, ಬಳಸುವ ವಿಧಾನದ ವಿಡಿಯೊ ಚಿತ್ರೀಕರಣ ಮಾಡಿ, ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. 

ಗಿಡಮೂಲಿಕೆ, ಮಸಾಜ್‌

ಕೈಕಾಲು ಊತಕ್ಕೆ ಗಿಡಮೂಲಿಕೆಗಳನ್ನು ನೀಡುವ ಕೌಶಲ ಬೆಳೆಸಿಕೊಂಡಿರುವ ಇವರು, ಮನೆಗಳಿಗೆ ಹೋಗಿ ಬಾಡಿ ಮಸಾಜ್ ಮಾಡಿಬರುತ್ತಾರೆ. ನೋವು ನಿವಾರಕ ಎಣ್ಣೆ ನೀಡಿ ಉಪಚರಿಸುತ್ತಾರೆ. ಸಮುದಾಯದ ಪಾರಂಪರಿಕ ಜ್ಞಾನ, ವಿನಯ, ನಾಜೂಕು ಇವರ ಬದುಕು ಮತ್ತು ವ್ಯಕ್ತಿತ್ವ ಬದಲಾಯಿಸಿದೆ. ಕಳ್ಳರೆಂದು ಭಾವಿಸಿ ದೂರ ಇಡುತ್ತಿದ್ದ ಜನರೇ ಪ್ರೀತಿ, ವಿಶ್ವಾಸದಿಂದ ಕಾಣುವಂತೆ ಆಗಿದೆ. ಸಾಂಪ್ರದಾಯಿಕ ನಾಟಿ ವೈದ್ಯ ಪದ್ಧತಿ ಜತನದಿಂದ ಮುಂದುವರಿಸಿದ್ದಾರೆ.

ದೇಶ, ಭಾಷೆ ಗಡಿಯ ದಾಟಿ

ಈ ಅಲೆಮಾರಿ ಸಮುದಾಯ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಹಂಚಿಹೋಗಿದೆ. ಕೆಲವರು ಪಾರಂಪರಿಕ ಪದ್ಧತಿ ಮುಂದುವರಿಸಿದರೆ, ಇನ್ನೂ ಕೆಲವರು ಕೃಷಿ ಕಾರ್ಮಿಕರಾಗಿದ್ದಾರೆ. ಆದರೆ, ಬೆಂಗಳೂರು, ಹಾಸನ ಸೇರಿದಂತೆ ರಾಜ್ಯದ ಕೆಲವು ಪಟ್ಟಣಗಳಲ್ಲಿ ನೆಲೆಸಿರುವ ಇಂಥ ಹಕ್ಕಿಪಿಕ್ಕಿ ಕುಶಲಕರ್ಮಿಗಳು, ತಮ್ಮ ಮಾರುಕಟ್ಟೆಯ ವಹಿವಾಟನ್ನೂ ಹೊರ ರಾಜ್ಯ, ಹೊರ ದೇಶಗಳಿಗೂ ವಿಸ್ತರಿಸಿದ್ದಾರೆ. ಸಾಲ ಮಾಡಿ ಪಾಸ್‌ಪೋರ್ಟ್‌, ವೀಸಾ ಮಾಡಿಸಿಕೊಂಡು ವಿದೇಶಕ್ಕೆ ಹೋಗಿ ಬರುವವರಿದ್ದಾರೆ. ಟಿಬೆಟ್, ಶ್ರೀಲಂಕಾ, ಯೂರೋಪ್‌ ಹಾಗೂ ಆಫ್ರಿಕಾ ಖಂಡದ ರಾಷ್ಟ್ರಗಳಿಗೆಲ್ಲ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ. ಅಮೆರಿಕದಂತಹ ದೈತ್ಯ ರಾಷ್ಟ್ರದಲ್ಲೂ ಕೂದಲು, ತೈಲ, ಬೇರು, ಮಾರಾಟ ಮಾಡಿದ್ದಾರೆ. ವಿದೇಶಗಳನ್ನು ಸುತ್ತಿ ಸುತ್ತಿ ಕೆಲವರದ್ದು ಮೂರ್ನಾಲ್ಕು ಪಾಸ್‌ಪೋರ್ಟ್ ಪುಸ್ತಕಗಳು ತುಂಬಿವೆ. ಭಾಷೆ-ಜನ ಗೊತ್ತಿಲ್ಲದ ದೇಶಗಳಲ್ಲೂ ವ್ಯಾಪಾರ ಮಾಡುವ ಇವರ ಕೌಶಲವನ್ನು ಮೆಚ್ಚಲೇಬೇಕು.

‘ವಿದೇಶಗಳಲ್ಲಿ ನೆಲೆಸಿರುವ ದೇಶವಾಸಿಗಳನ್ನು ಸಂಪರ್ಕಿಸಿ ವ್ಯಾಪಾರ ಕುದುರಿಸುವುದೇ ದೊಡ್ಡ ಸಾಹಸ. ಉತ್ಪನ್ನಗಳ ಮಾರಾಟಕ್ಕೆ ಕೆಲ ದೇಶಗಳಲ್ಲಿನ ಕಾನೂನು –ನಿಯಮ ಅಡ್ಡಿಯಾಗುತ್ತದೆ. ಆದರೆ, ಜನರ ವಿಶ್ವಾಸ ಬಹಳ ಮುಖ್ಯ. ಕೊಂಚ ಯಾಮಾರಿದರೂ ಕಾನೂನು ಕುಣಿಕೆಗೆ ಸಿಲುಕಬೇಕಾ
ಗುತ್ತದೆ’ ಎನ್ನುತ್ತಾ ವ್ಯಾಪಾರದ ಕಠಿಣ ಹಾದಿ ತೆರೆದಿಟ್ಟರು ಕೆಂಗೇರಿ ಹಕ್ಕಿಪಿಕ್ಕಿ ಕಾಲೊನಿ ನಿವಾಸಿ ಮಯೂರ. ಇವರು ವ್ಯಾಪಾರಕ್ಕಾಗಿ ಇತ್ತೀಚೆಗೆ ಸ್ಕಾಟ್‌ಲ್ಯಾಂಡ್‌ಗೆ ಹೋಗಿದ್ದಾರೆ.

‘ತುತ್ತಿನ ಚೀಲ ತುಂಬಿಸಿಕೊಳ್ಳಲು ಏನೇನೋ ಕೆಲಸ ಮಾಡಿದವರು. ಎಂಥೆಂಥ ಅವಮಾನಗಳಿಂದ ಹೊರಬಂದು ಬದುಕು ಕಟ್ಟಿಕೊಂಡಿದ್ದಾರೆ’ ಎಂದು ಈ ಸಮುದಾಯದ ಹಕ್ಕುಗಳ ಪರ ಹೋರಾಟದಲ್ಲಿ ತೊಡಗಿರುವ ಸಾವಿತ್ರಿ ಬಾಫುಲೆ ಸಂಘಟನೆ ಸಂಚಾಲಕಿ ಚಂದ್ರಮ್ಮ ಅಭಿಪ್ರಾಯಪಡುತ್ತಾರೆ.

ಇಷ್ಟೆಲ್ಲ ರೂಪಾಂತರಗೊಂಡು, ಬದುಕು ಕಟ್ಟಿಕೊಳ್ಳುತ್ತಿರುವ ಹಕ್ಕಿಪಿಕ್ಕಿ ಅಲೆಮಾರಿಗಳಿಗೆ ಯಾವುದೇ ಆಸ್ತಿಯಿಲ್ಲ. ಬ್ಯಾಂಕ್, ಸಾಂಸ್ಥಿಕ ವ್ಯವಸ್ಥೆಗಳಿಂದ ಸಾಲವೂ ಸಿಗುವುದಿಲ್ಲ. ಬದಲಿಗೆ ಈ ಸಮುದಾಯದ ಜನರನ್ನು ವಂಚಿಸುವ ಪ್ರಯತ್ನಗಳು ನಡೆಯುತ್ತಿವೆಯಂತೆ. ಇವುಗಳ ನಡುವೆಯೂ ಕೆಲವರು ಕೈ ಸಾಲ ಪಡೆದು ಕಸುಬು ನಡೆಸುತ್ತಿದ್ದಾರೆ. ‘ವ್ಯಾಪಾರ ವೃದ್ಧಿಗಾಗಿ ಸಹಕಾರ ಸಂಘವೊಂದನ್ನು ಸ್ಥಾಪನೆ ಮಾಡುವ ಚಿಂತನೆ ನಡೆದಿದೆ’ ಎನ್ನುತ್ತಾರೆ ಅಖಿಲ ಕರ್ನಾಟಕ ಹಕ್ಕಿಪಿಕ್ಕಿ ಸಂಘದ ಖಜಾಂಚಿ ಕಲ್ಲೇಶ್.

ಸರ್ಕಾರ ಅಥವಾ ಸಂಘ ಸಂಸ್ಥೆಗಳು ಇವರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದರೆ ಈ ಸಮುದಾಯ ಮತ್ತಷ್ಟು ಆರ್ಥಿಕವಾಗಿ ಸದೃಢವಾಗುತ್ತದೆ.

ಸೌಲಭ್ಯ ವಂಚಿದ ಸಮುದಾಯ

ಈ ಸಮುದಾಯವನ್ನು ಕಾಡಿನಿಂದ ಹೊರತಳ್ಳಲ್ಪಟ್ಟ ನಂತರ ಅರಣ್ಯ ಕಿರುಉತ್ಪನ್ನಗಳ ಮಾರಾಟ ನಿಂತು ಹೋಗಿದೆ. ಸರ್ಕಾರ ಭೂಮಿ ನೀಡಿ, ಔಷಧಿ ಸಸ್ಯಗಳನ್ನು ಬೆಳೆಯಲು ಅವಕಾಶ ನೀಡಿದರೆ ಪಾರಂಪರಿಕ ವೃತ್ತಿಗೂ ಘನತೆ ಸಿಗುತ್ತದೆ. ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿದರೆ ಜೀವನ ಮಟ್ಟವೂ ಸುಧಾರಿಸಲಿದೆ. ತುಂಡು ಭೂಮಿ, ನಿವೇಶನ, ಶಿಕ್ಷಣಕ್ಕಾಗಿ ಕಳೆದ 25 ವರ್ಷದಿಂದ ಹೋರಾಟ ನಡೆದಿದೆ ಎನ್ನುತ್ತಾರೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿ ನಿವಾಸಿ ಹೂವರಾಜು.

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 11892 ಸಾವಿರ ಜನಸಂಖ್ಯೆ ಇದೆ. ಸಮಾಜ ಕಲ್ಯಾಣ ಇಲಾಖೆಯ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕೋಶದಲ್ಲಿ ಈ ಸಮುದಾಯವನ್ನು ಸೇರಿಸಲಾಗಿದೆ. ಆದರೆ, ಸರ್ಕಾರದ ಯೋಜನೆಗಳು ಈ ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇಲ್ಲೂ ಬಲಾಢ್ಯ ಸಮುದಾಯಗಳೇ ಸೌಲಭ್ಯ ಕಬಳಿಸುತ್ತಿವೆ ಎಂದು ಬೊಟ್ಟು ಮಾಡುತ್ತಾರೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಎರಡನೇ ಪಕ್ಷಿರಾಜ‍ಪುರ ನಿವಾಸಿ, ಸಮುದಾಯದ ಮುಖ್ಯಸ್ಥೆ ಸುನಂದಾ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು