ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿ ರುಚಿಯ ಸಪೋಟಾ ಬಗ್ಗೆ ಬಲ್ಲಿರಾ!

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಸಪೋಟಾ ಮರಗಳ ಹತ್ತಿರ ಹೋಗುತ್ತಿದ್ದಂತೆಯೇ ಅದರ ಸಿಹಿಯಾದ ಸುವಾಸನೆಗೆ ಮನಸೋಲದವರು ಇಲ್ಲ. ಬಾಯಿ ನೀರೂರಲು, ಒಂದೆರಡು ಕಿತ್ತು ತಿನ್ನೋಣವೆಂದೆನಿಸುವುದು ಸಹಜವೇ ಸರಿ! ಕೇವಲ ಸುವಾಸನೆಯೇ ಇಷ್ಟು ಸಿಹಿಯಾಗಿರುವಾಗ, ಇನ್ನು ಇದರ  ರುಚಿ ಇನ್ನೆಷ್ಟು ಸಿಹಿಯಾಗಿರಬಹುದು! ಒಂದೆರಡು ತಿಂದು, ಅದು ಸಾಲದೆಂದು ಇನ್ನಷ್ಟು ಹಣ್ಣುಗಳಿಗೆ ಹಂಬಲಿಸಿದವರೇ ಇದರ ರುಚಿಯನ್ನು ಅರಿತವರು!

ಸಪೋಟಾವನ್ನು ಇಂಗ್ಲಿಷ್‌ನಲ್ಲಿ ‘sapodilla’ ಅಥವಾ ಸಪೋಟಾ ಎಂದೇ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು Manilkara zapota. ಇದು ನಿತ್ಯಹರಿದ್ವರ್ಣ, ಉಷ್ಣವಲಯ ಪ್ರಭೇದ. ಇದು ಮೆಕ್ಸಿಕೊ, ಕೆರಿಬಿಯನ್ ಹಾಗೂ ಮಧ್ಯ ಅಮೇರಿಕ ದೇಶಕ್ಕೆ ಸ್ವಂತ. ಇದನ್ನು ಫಿಲಿಪೈನ್ಸ್ ದೇಶದಲ್ಲಿ ಸ್ಪೇನ್‌ನ ವಸಹಾತುಶಾಹಿ ಸಮಯದಲ್ಲಿ ಪರಿಚಯಿಸಲಾಯಿತು ಎಂದು ಹೇಳಲಾಗುತ್ತದೆ. ಈಗ ಭಾರತ, ಪಾಕಿಸ್ತಾನ, ವಿಯೆಟ್ನಾಂ, ಥಾಯ್ಲೆಂಡ್ ಹೀಗೆ ಆಗ್ನೇಯ ಏಷ್ಯಾ ದೇಶಗಳಲ್ಲಿ ಹಾಗೂ ಮಧ್ಯ-ದಕ್ಷಿಣ ಅಮೇರಿಕದ ಕೆಲವು ದೇಶಗಳಲ್ಲಿ ಬೆಳೆಯುವುದನ್ನು ನೋಡಬಹುದು.

ಇದು ಸುಮಾರು 100 ಅಡಿಗಳವರೆಗೆ (30 ಮೀ) ಬೆಳೆಯುವ ಮರ. ಆದರೆ, ಒಂದು ಅಂದಾಜು ತೆಗೆದುಕೊಂಡರೆ, ಸುಮಾರು 9-15ಮೀ. ವರೆಗೆ ಬಹುತೇಕ ಮರಗಳು ಬೆಳೆಯುತ್ತವೆ. ಇದು ಬಿರುಗಾಳಿಯನ್ನು ತಡೆಯಬಲ್ಲ ಪ್ರಭೇದ, ಹಾಗೂ ಇದರ ಮರ ‘ಚಿಕಲ್’ ಎಂಬ ಒಂದು ಅಂಟು ಪದಾರ್ಥವನ್ನು ಹೊರಸೂಸುತ್ತದೆ. ಇದರ ಎಲೆಗಳು ಮಧ್ಯಮ ಹಸಿರು ಬಣ್ಣವಿರುತ್ತವೆ ಮತ್ತು ಎಲೆಗಳಿಗೆ ಒಳ್ಳೆಯ ಹೊಳಪು ಇರುತ್ತದೆ.

ಇದರ ಎಲೆಗಳನ್ನು ಅಲಂಕಾರಕ್ಕೆ ಬಳಸಲಾಗುತ್ತದೆ. ಇದರ 6 ದಳದ, ಗಂಟೆಯಂತೆ ಕಾಣುವ ಬಿಳಿಯ ಹೂವುಗಳು ಚಿಕ್ಕದಾಗಿ ಇರುತ್ತವೆ, ಮತ್ತು ಅಷ್ಟಾಗಿ ದೂರದಿಂದ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಇದರ ಹಣ್ಣುಗಳು ಕಂದು ಬಣ್ಣದಲ್ಲಿರುತ್ತವೆ. ಕಾಯಿ ಹಂತದಲ್ಲಿ ಇದರ ಚರ್ಮ ಗಟ್ಟಿಯಾಗಿ, ಹಣ್ಣಾಗುತ್ತಲೇ, ನಿಧಾನಕ್ಕೆ ಮೃದುವಾಗುತ್ತಾ ಹೋಗುತ್ತದೆ. ಇದು  ‘ಬೆರಿ’ ಜಾತಿಯ ಹಣ್ಣು. ಅಂದರೆ, ಹೊರಚರ್ಮದಡಿ ರಸವತ್ತಾದ ಮಾಂಸವಿರುತ್ತದೆ. ಒಂದು ಹಣ್ಣಿನಲ್ಲಿ ಸುಮಾರು 1–6 ಬೀಜಗಳಿರುತ್ತವೆ.

ಈ ಬೀಜಗಳು ಹೊಳೆಯುವ ಕಪ್ಪು ಬಣ್ಣದಲ್ಲಿದ್ದು, ಬೀಜದ ನಡುವೆ ಬಿಳಿ ಬಣ್ಣದ ಗೆರೆ ಇರುತ್ತದೆ . ಇದರ ಹಣ್ಣಿಗೆ ಒಳ್ಳೆಯ ಸಿಹಿರುಚಿ ಇರುತ್ತದೆ. ಇದರ ಕಾಯಿಯಲ್ಲಿ ಸಂಕೋಚಕ(ಅಸ್ಟ್ರಿಂಜೆಂಟ್) ವೈಶಿಷ್ಟ್ಯಗಳನ್ನು ಹೊಂದಿರುವ ‘ಸ್ಯಾಪೊನಿನ್’ ಎನ್ನುವ ಹೆಚ್ಚು ಟ್ಯಾನಿನ್ ಅಂಶವಿರುತ್ತದೆ, ಹೀಗಾಗಿ ಇದನ್ನು ಕಾಯಿ ಹಂತದಲ್ಲಿ ಇರುವಾಗ ತಿನ್ನಲು ಸಾಧ್ಯವಿಲ್ಲ. ಈ ಅಂಶವು ನಾಲಿಗೆ ಹಾಗೂ ಗಂಟಲಿಗೆ ಕಿರಿಕಿರಿಯನ್ನುಂಟು ಮಾಡಬಹುದು.

ಇದು ಒಮ್ಮೊಮ್ಮೆ ಇಡೀ ವರ್ಷ ಹೂವುಗಳನ್ನು ಬಿಟ್ಟರೂ, ವಾರ್ಷಿಕವಾಗಿ ಎರಡು ಬಾರಿ ಮಾತ್ರ ಹಣ್ಣುಗಳನ್ನು ನೀಡುತ್ತದೆ. ಒಂದು ಮರವು ಹಣ್ಣುಗಳನ್ನು ನೀಡಲು ಸುಮಾರು5–8 ವರ್ಷಗಳು ಬೇಕಾಗುತ್ತವೆ.  

ಇದರ ಹಣ್ಣು ನೋಡುವುದಕ್ಕೆ ಗುಂಡಗೆ ಸುಮಾರು 4–6  ಸೆಂ.ಮೀ. ವ್ಯಾಸ, ಒರಟಾದ ಸಿಪ್ಪೆ, ಮತ್ತು ಕಂದು ಬಣ್ಣ ಇರುವುದರಿಂದ, ಇದರ ಒಂದು ವಿಧಕ್ಕೆ ‘ಕ್ರಿಕೆಟ್ ಬಾಲ್’ ಎಂದು ಕರೆಯಲಾಗುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT