ಕಿರಿಕಿರಿಯ ಕರೆ!

7

ಕಿರಿಕಿರಿಯ ಕರೆ!

Published:
Updated:

‘ಇಂದು ರಾತ್ರಿ ಬಿಡುವಾಗಿದ್ದೀಯಾ?’, ‘ನೀನಿರುವಲ್ಲಿ ಅಥವಾ ನಾನಿರುವಲ್ಲಿ?’, ‘ನಿನ್ನ ಫೋಟೊಗಳನ್ನು ಕಳುಹಿಸು?’... ಈ ರೀತಿಯ ಅಸಂಬದ್ಧ ಪ್ರಶ್ನೆಗಳಿರುವ ಹಲವು ಸಂದೇಶಗಳು ಬೆಂಗಳೂರಿನ ಯುವತಿಯರು ಹಾಗೂ ಉದ್ಯೋಗನಿರತ ಮಹಿಳೆಯರ ಮೊಬೈಲ್‌ಗೆ ರವಾನೆಯಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ!

ಕೆಲವರಿಗೆ ಮೊಬೈಲ್‌ಗಳಿಗೆ ಕರೆಗಳೇ ಬರುತ್ತಿವೆ! ಇದರಿಂದ ಮನ ನೊಂದ ಮಹಿಳೆಯರು ತಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಬಹಿರಂಗವಾಗಿ ಹೇಳಲಾಗದೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ.

ಪ್ರಕರಣ 1: ಶ್ರದ್ಧಾ (ಹೆಸರು ಬದಲಿಸಲಾಗಿದೆ). ಖಾಸಗಿ ಕಂಪನಿಯ ಉದ್ಯೋಗಿ. ಇತ್ತೀಚೆಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ‘ಈ ರಾತ್ರಿ ನನ್ನೊಡನೆ ಕಳೆಯುತ್ತೀಯಾ’ ಎಂದು ಕೇಳಿದ್ದ. ‘ಡೇಟಿಂಗ್‌ ವೆಬ್‌ಸೈಟ್‌ವೊಂದರಿಂದ ನಿನ್ನ ಮೊಬೈಲ್‌ ನಂಬರ್‌ ಸಿಕ್ಕಿದೆ’ ಎಂದು ಆತ ಹೇಳಿದ್ದ. ಈ ರೀತಿಯ ಯಾವುದೇ ವೆಬ್‌ಸೈಟ್‌ನಲ್ಲಿ ನೋಂದಣಿಯಾಗದ ಶ್ರದ್ಧಾಗೆ ಈ ಕರೆಯಿಂದ ಕಿರಿಕಿರಿಯಾಗಿತ್ತು. ಎರಡು ದಿನಗಳಲ್ಲಿ ಇದೇ ರೀತಿಯ ‘ಡಜನ್‌’ಗೂ ಹೆಚ್ಚು ಅಪರಿಚಿತ ಕರೆಗಳು ಬಂದಿದ್ದವು. ಬೇಸರಗೊಂಡು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ 2: ರೂಪಾ (ಹೆಸರು ಬದಲಿಸಲಾಗಿದೆ). ಪ್ರಿಯಕರನೊಂದಿಗೆ ‘ಬ್ರೇಕ್ಅಪ್‌’ ಆದ ಮರು ದಿನ ಈ ಯುವತಿಯ ಹೆಸರು ಮತ್ತು ಮೊಬೈಲ್‌ ಸಂಖ್ಯೆ ‘ಎಸ್ಕಾರ್ಟ್‌ ಸರ್ವಿಸ್‌ ಸೈಟ್‌’ಗಳಲ್ಲಿ ಲಭ್ಯವಾಗುತ್ತಿತ್ತು. ಎರಡು ತಿಂಗಳಿಂದ ನಿತ್ಯ ಹಲವು ಕರೆಗಳು ಬಂದಿದ್ದವು. ಅವರು ಖಿನ್ನತೆಗೆ ಜಾರಿದ್ದರು. ಅವರೀಗ ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರದ್ಧಾ ಮತ್ತು ರೂಪಾ ಪ್ರಕರಣಗಳಂತೆಯೇ ಹಲವು ಯುವತಿಯರು, ಹೆಚ್ಚಾಗಿ ಒಂಟಿಯಾಗಿ ವಾಸಿಸುವ ಮಹಿಳೆಯರ ಹೆಸರು ಮತ್ತು ಮೊಬೈಲ್‌ ಸಂಖ್ಯೆಗಳು ಡೇಟಿಂಗ್‌ ಸೈಟ್‌ಗಳು ಮತ್ತು ಎಸ್ಕಾರ್ಟ್ಸ್‌ ಸರ್ವಿಸ್‌ ಸೈಟ್‌ಗಳಲ್ಲಿ ಲಭ್ಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಕುರಿತು ಅಪರಿಚಿತರಿಂದ ಕರೆ ಬಂದಾಗ ಹಲವರು ತಮ್ಮ ಮತ್ತು ಕುಟುಂಬದ ಮರ್ಯಾದೆಗೆ ಅಂಜಿ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಇದರ ಲಾಭ ಪಡೆದು ಕೆಲ ಕಿಡಿಗೇಡಿಗಳು, ಮಹಿಳೆಯರ ತೇಜೋವಧೆಗೆ ಮುಂದಾಗಿದ್ದಾರೆ.

ಹೈಕೋರ್ಟ್‌ ವಕೀಲ ಸಿಜಿ ಮಲಾಯಿಲ್ ಪ್ರಕಾರ ‘ಮಹಿಳೆಯರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಕೆಲ ಪುರುಷರು ಇಂಥ ಕೃತ್ಯಗಳನ್ನು ಎಸಗುತ್ತಿದ್ದಾರೆ. ಆರೋಪ ಸಾಬೀತಾದರೆ ಭಾರತೀಯ ದಂಡ ಸಂಹಿತೆ ಕಲಂ 509ರ ಪ್ರಕಾರ ದಂಡ ಮತ್ತು ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಎದುರಿಸಬೇಕಾಗುತ್ತದೆ’.

‘ಕೆಲ ಸಂದರ್ಭಗಳಲ್ಲಿ ಪುರುಷರು ತಮಗಾಗದ ಮಹಿಳೆಯರ ಮಾನಹಾನಿಗಾಗಿ ಈ ರೀತಿಯ ಅಪರಾಧ ಎಸಗುತ್ತಿದ್ದಾರೆ’ ಎನ್ನುತ್ತಾರೆ ಅವರು.

‘ಯಾವುದೇ ಸಂಬಂಧಗಳ ಕುರಿತು ತಿರಸ್ಕಾರ ಅಥವಾ ನಿರಾಕರಣೆ ಧೋರಣೆಯನ್ನು ಮಹಿಳೆಯರು ವ್ಯಕ್ತಪಡಿಸಿದಾಗ ಅದಕ್ಕೆ ಪ್ರತಿಕಾರವಾಗಿ ಪುರುಷರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಮಹಿಳೆ ತನ್ನ ಅಧೀನಳಾಗಿಯೇ ಇರಬೇಕು ಎಂಬ ಕೆಲ ಪುರುಷರ ಮನೋಸ್ಥಿತಿಯಿಂದಾಗಿ ಹೀಗೆಲ್ಲ ಆಗುತ್ತಿದೆ. ತನ್ನನ್ನು ಪ್ರಶ್ನಿಸುವ ಅಥವಾ ನಿರಾಕರಿಸುವ ಮಹಿಳೆಯ ಹೆಸರು, ಮೊಬೈಲ್‌ ಸಂಖ್ಯೆ, ಫೋಟೊಗಳನ್ನು ಡೇಟಿಂಗ್‌ ಅಥವಾ ಸೆಕ್ಸ್‌ ವೆಬ್‌ಸೈಟ್‌ಗಳಲ್ಲಿ ಬಿತ್ತರಿಸುವಂತೆ ಮಾಡಿ, ಮಹಿಳೆಯರ ಚಾರಿತ್ರ್ಯೆವಧೆ ಮಾಡಿ, ವಿಕೃತ ಆನಂದವನ್ನು ಅನುಭವಿಸುತ್ತಾರೆ’ ಎನ್ನುತ್ತಾರೆ ಸೆಂಟರ್‌ ಆಫ್‌ ಇಂಟರ್‌ನೆಟ್‌ ಆ್ಯಂಡ್‌ ಸ್ಟಡೀಸ್‌ನ ಕುಮರ್ಜೀತ್‌ ರೈ.

ಖಿನ್ನತೆಗೆ ಒಳಗಾಗುತ್ತಾರೆ: ಮಹಿಳೆಯರ ಚಾರಿತ್ರ್ಯವನ್ನು ಪ್ರಶ್ನಿಸುವ ಕೃತ್ಯಗಳು ನಡೆದಾಗ ಅವರು ಒತ್ತಡಕ್ಕೆ ಒಳಗಾಗಿ ಖಿನ್ನತೆಗೆ ಜಾರುತ್ತಾರೆ. ಈ ರೀತಿಯ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸುವ ಕೌಶಲ ಇಲ್ಲದ ಒಂಟಿ ಮಹಿಳೆಯರಂತೂ ಹೆಚ್ಚಿನ ಮಾನಸಿಕ ಸಮಸ್ಯೆಗಳಿಗೆ ಈಡಾಗುತ್ತಾರೆ. ಅಂಥವರಿಗೆ ಕುಟುಂಬ, ಸಮಾಜದ ಬೆಂಬಲ ಇರಬೇಕು ಎಂದು ನಿಮ್ಹಾನ್ಸ್‌ ಸೈಕೋಫಾರ್ಮಕಾಲಜಿಯ ಮುಖ್ಯಸ್ಥರಾದ ಡಾ. ಚಿತ್ತರಂಜನ್‌ ಅಂದ್ರಾಡೆ ಹೇಳುತ್ತಾರೆ.
ಶಿಕ್ಷಾರ್ಹ ಅಪರಾಧ

ಯಾವುದೇ ವ್ಯಕ್ತಿಯ ಗಮನಕ್ಕೆ ತಾರದೆ ಅವರಿಗೆ ಸಂಬಂಧಿಸಿದ ಎಂಥಹದ್ದೇ ಮಾಹಿತಿಯನ್ನು ಪ್ರಕಟಿಸುವುದು ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧ. ಒಪ್ಪಿಗೆ ಪಡೆಯದೆ ಫೋಟೊ ತೆಗೆದು, ಅದನ್ನು ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡಿದರಂತೂ ಶಿಕ್ಷೆಯ ಪ್ರಮಾಣ ಹೆಚ್ಚಿರುತ್ತದೆ. ಅಲ್ಲದೆ ಸಮ್ಮತಿಯಿಲ್ಲದೆ ಮಹಿಳೆಯರ ಮೊಬೈಲ್‌ ಸಂಖ್ಯೆ ಮತ್ತು ಫೋಟೊ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವುದು ಮಾನಹಾನಿ ಮತ್ತು ಕ್ರಿಮಿನಲ್‌ ಅಪರಾಧ.

*
ಇವು ಕ್ರಿಮಿನಲ್‌ ಅಪರಾಧಗಳಾಗಿದ್ದು, ಮಹಿಳೆಯರು ಹೆದರದೆ ಸೈಬರ್‌ ಪೊಲೀಸರಿಗೆ ದೂರು ನೀಡಬೇಕು. ಇಂಥ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡು ಮಹಿಳೆಯರು ದೂರು ನೀಡುತ್ತಾರೆ ಎಂಬುದು ಆರೋಪಿಗಳಿಗೆ ಗೊತ್ತಾದರೆ ಈ ರೀತಿಯ ಕೃತ್ಯಗಳು ತಾನಾಗಿಯೇ ಕಡಿಮೆ ಆಗುತ್ತವೆ.
–ಟಿ. ಸುನೀಲ್‌ ಕುಮಾರ್‌, ನಗರ ಪೊಲೀಸ್‌ ಕಮಿಷನರ್‌

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !