ಶನಿವಾರ, ಫೆಬ್ರವರಿ 4, 2023
17 °C

ಇರಾನ್‌ನ ದ್ರೌಪದಿಯರು! - ಹಿಜಾಬ್ ವಿರೋಧಿ ಪ್ರತಿಭಟನೆ

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

‘...ಸ್ವರ್ಗಕ್ಕೆ ಹೋಗಲೇಬೇಕು ಎಂಬ ನಿಮ್ಮ ಒತ್ತಾಯಕ್ಕಾಗಿ..., ಕಸದ ರಾಶಿಗಳಲ್ಲಿ ಆಹಾರ ಮತ್ತು ಕನಸುಗಳನ್ನು ಹುಡುಕುತ್ತಿರುವ ಬಡಮಕ್ಕಳಿಗಾಗಿ..., ಸುದೀರ್ಘ ಕತ್ತಲ ಬಳಿಕ ಮೂಡುವ ಸೂರ್ಯನಿಗಾಗಿ..., ನಾನು ಹುಡುಗನಾಗಿದ್ದರೆ ಚೆನ್ನಾಗಿತ್ತಲ್ಲವೇ ಎಂದು ಬಯಸುವ ಹುಡುಗಿಗಾಗಿ..., ಮುತ್ತು ಕೊಡುವ ಹೊತ್ತಿನ ಭಯಕ್ಕಾಗಿ…. ಮಹಿಳೆಯರಿಗಾಗಿ, ಜೀವನಕ್ಕಾಗಿ, ಸ್ವಾತಂತ್ರ್ಯಕ್ಕಾಗಿ…’

‘ಬರೊಯೆ’ (ಇಂಗ್ಲಿಷ್‌ನಲ್ಲಿ ‘ಫಾರ್’ ಎಂದು ಅರ್ಥ)- ಇರಾನಿನ 25 ವರ್ಷದ ಗಾಯಕ ಶರ್ವಿನ್ ಹಜಿಪೌರ್ ಅವರು ಬರೆದು, ಹಾಡಿರುವ ಈ ಗೀತೆಯು ರಾತ್ರಿ ಬೆಳಗಾಗುವುದರ ಒಳಗಾಗಿ ಇರಾನಿನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಯ ‘ರಾಷ್ಟ್ರಗೀತೆ’ಯಾಯಿತು. ಈ ಹಾಡನ್ನು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು. 4 ಕೋಟಿ ಜನ ಅದನ್ನು ಕೇಳಿದ್ದರು. ಮರುದಿನವೇ ಈ ಯುವ ಗಾಯಕನನ್ನು ಅಲ್ಲಿನ ಸರ್ವಾಧಿಕಾರಿ ಸರ್ಕಾರ ಬಂಧಿಸಿತು. ಇನ್‌ಸ್ಟಾಗ್ರಾಂನಿಂದ ಆ ಹಾಡನ್ನು ಅಳಿಸಿ ಹಾಕಿತು. ಆದರೆ, ಅಷ್ಟೊತ್ತಿಗಾಗಲೇ ಈ ಹಾಡು ಇರಾನ್ ಜನರ ಮೈಮನಸ್ಸಿನಲ್ಲಿ ಇಳಿದು, ಪ್ರತಿಭಟನೆಯ ಕಿಡಿಯ ಕಾವನ್ನು ಹೆಚ್ಚಿಸಿತ್ತು.

****

ನಿಖಾ ಶಕರಮಿಗೆ ಆಗಿನ್ನೂ 16 ವರ್ಷ. ಹಾಡುವ ಹುಚ್ಚು ಹತ್ತಿಸಿಕೊಂಡವಳು. ವಿದೇಶದಲ್ಲಿ ಮುಂದಿನ ವ್ಯಾಸಂಗ ಮಾಡಬೇಕು ಎಂದು ಕನಸು ಕಂಡವಳು. ತನ್ನ ಲೋಕದಲ್ಲೇ ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದ ನಿಖಾ, ಒಂದು ದಿನ ಹೊರಹೋದವಳು 15 ದಿನಗಳಾದರೂ ಮರಳಿ ಬರಲೇ ಇಲ್ಲ. ಮಗಳಿಗಾಗಿ ಅಲೆದಾಡಿದ ಪೋಷಕರಿಗೆ ಸಿಕ್ಕಿದ್ದು ಆಕೆಯ ಸಾವಿನ ಸುದ್ದಿ; ದೇಹದಿಂದ ಬೇರ್ಪಡಿಸಿ ಜಜ್ಜಿದ್ದ ತಲೆ, ಉದುರಿದ್ದ ಹಲ್ಲುಗಳು, ಕಳಚಿ ಬಿದ್ದಿದ್ದ ದವಡೆ. ಸರಿನಾ ಇಸ್ಮೈಲ್ಜದಿಸ್ ಎಂಬ ಯುವತಿಯದ್ದೂ ಇಂತಹುದೇ ಕತೆ. ತಲೆಯು ದೇಹದಿಂದ ಬೇರ್ಪಟ್ಟಿತ್ತು. ತಲೆ ಎರಡು ಹೋಳಾಗಿತ್ತು.

ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಯ ಮುಖವಾಗಿದ್ದವರು ಈ ಇಬ್ಬರೂ ಹೆಣ್ಣು ಮಕ್ಕಳು. ಈ ಕಾರಣಕ್ಕಾಗಿಯೇ ಅವರನ್ನು ಕೊಲ್ಲಲಾಯಿತು. ಹಿಜಾಬ್‌ ಹಾಕಿದ್ದು ‘ಸರಿಯಾಗಿಲ್ಲ’ ಎಂಬ ಕಾರಣಕ್ಕೆ ಬಂಧನಕ್ಕೆ ಒಳಗಾಗಿ, ಸೆರೆಯಲ್ಲಿಯೇ ಹತ್ಯೆಯಾದವರು ಮಹ್ಸಾ ಅಮೀನಿ. ಈ ಹತ್ಯೆಯ ಬಳಿಕ ಭಾರಿ ಜೋರಾಗಿ ಆರಂಭಗೊಂಡ ಪ್ರತಿಭಟನೆಯು ಈ ಇಬ್ಬರು ಯುವತಿಯರ ಹತ್ಯೆ ಬಳಿಕ ಇನ್ನೂ ತೀವ್ರಗೊಂಡಿತು.

ಈ ಹತ್ಯಾ ಸರಣಿಯು ಮುಖಕ್ಕೆ ಮಸಿ ಬಳಿಯಲಿದೆ ಎಂದು ಅರಿತ ಇರಾನಿನ ಸರ್ವೋಚ್ಚ ನಾಯಕ ಅಲಿ ಖೊಮೇನಿ ನೇತೃತ್ವದ ಸರ್ಕಾರವು ಸಾವಿನ ಕುರಿತು ಸುಳ್ಳು ಸುದ್ದಿ ಹರಡಲು ಮುಂದಾಯಿತು. ಈ ಇಬ್ಬರೂ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಡುವಂತೆ ಪೋಷಕರಿಗೆ ಹಿಂಸೆ ನೀಡಿತು. 

****

1979ರ ಇಸ್ಲಾಮಿಕ್‌ ಕ್ರಾಂತಿಯ ಬಳಿಕ, ಇರಾನ್ ಮಹಿಳೆಯರ ಬದುಕು ಅಸಹನೀಯವಾಗಿದೆ. ಧರ್ಮದ ಅಮಲೇರಿಸಿಕೊಂಡಿರುವ ಇರಾನ್‌ ಸರ್ಕಾರವು ಮಹಿಳೆಯನ್ನು ಧಾರ್ಮಿಕ ಚೌಕಟ್ಟಿನ ಒಳಗೆಯೇ ಕಟ್ಟಿಹಾಕುವ ಯತ್ನವನ್ನು ಮಾಡುತ್ತಲೇ ಬಂದಿದೆ. ಇದರ ವಿರುದ್ಧ ಮಹಿಳೆಯರು ಪ್ರತಿಭಟಿಸುತ್ತಲೇ ಬಂದಿದ್ದಾರೆ. ಈ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕುತ್ತಲೇ ಬಂದಿದೆ. ಹೀಗಾಗಿಯೇ ಅಮೀನಿ ಹತ್ಯೆಯು ಮಹಿಳೆಯರ ಸಹನೆಯ ಕಟ್ಟೆಯನ್ನು ಒಡೆಯಿತು. 

ಇಸ್ಲಾಮಿಕ್ ಕ್ರಾಂತಿ ಏಕಾಯಿತು?

ಇರಾನ್ ದೇಶವು ಆರ್ಥಿಕವಾಗಿ ಬಹಳ ಸದೃಢವಾಗಿತ್ತು. ಇಂಧನ, ಪ್ರಾಕೃತಿಕ ಸಂಪತ್ತು, ಮಾನವ ಸಂಪನ್ಮೂಲ ಹೀಗೆ ನಾನಾ ಕಾರಣಗಳಿಂದ ಇರಾನ್ ಸಮೃದ್ಧವಾಗಿತ್ತು. ಮೊಹಮ್ಮದ್ ರೇಝಾ ಶಾ ಪಹಲ್ಲವಿ (1919-1980) 1941ರಲ್ಲಿ ಇರಾನ್‌ನ ರಾಜನಾಗಿದ್ದರು.

ಸ್ವಿಟ್ಜರ್ಲೆಂಡ್‌ನಲ್ಲಿ ಓದಿ ಬಂದಿದ್ದ ಮೊಹಮ್ಮದ್‌ ಶಾ ಅವರು ಇರಾನ್‌ ಅನ್ನು ಆಧುನೀಕರಣಗೊಳಿಸಲು ಹಲವು ಪ್ರಯತ್ನ ಮಾಡಿದ್ದರು. ಮಹಿಳೆಯರ ವಿಚಾರದಲ್ಲಿ ಮೊಹಮ್ಮದ್‌ ಶಾ ಅವರು ತುಸುಮಟ್ಟಿಗೆ ಸುಧಾರಣಾವಾದಿ ಎನ್ನಿಸಿದ್ದರೂ ಸಾಮಾಜಿಕವಾಗಿ, ಕಾನೂನಾತ್ಮಕವಾಗಿ ಮಹಿಳೆಯರು ಪುರುಷರಿಗೆ ಸಮಾನರಾಗಿರಲಿಲ್ಲ. ಮಹಿಳೆಯರು ಹಿಜಾಬ್ ಧರಿಸುವುದನ್ನು ಮೊಹಮ್ಮದ್‌ ಶಾ ನಿಷೇಧಿಸಿದ್ದರು!

ಒಂದೆಡೆ, ಹಿಜಾಬ್‌ ನಿಷೇಧವು ಸ್ವತಃ ಮಹಿಳೆಯರಿಗೇ ಇಷ್ಟವಾಗಲಿಲ್ಲ. ಸಂಪ‍್ರದಾಯಸ್ಥ ಜನರಿಗೆ ‘ಅತಿಯಾದ ಆಧುನೀಕರಣ’ವನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಮತ್ತೊಂದೆಡೆ, ಅಮೆರಿಕದೊಂದಿಗೆ ಮೊಹಮ್ಮದ್‌ ಶಾ ಅವರ ಅತಿಯಾದ ಸ್ನೇಹವೂ ಜನರಿಗೆ ಇಷ್ಟವಾಗಿರಲಿಲ್ಲ. ಹೀಗಾಗಿಯೇ ರಾಜಪ್ರಭುತ್ವ ಬೇಡ, ಪ್ರಜಾಪ್ರಭುತ್ವ ಬೇಕು ಎಂದು ಅಲ್ಲಿನ ಜನರು ಬಯಸಿದ್ದರು.  

ಮೊಹಮ್ಮದ್ ಶಾ ಮತ್ತು ಮೌಲ್ವಿ ಅಯಾತ್‌–ಉಲ್ಲಾ ರೋಹುಲ್ಲಾ ಖೊಮೇನಿ ಮಧ್ಯೆ ಕ್ರಾಂತಿಯ ಕಾಲದಲ್ಲಿ ಹಲವು ಕಿತ್ತಾಟಗಳು ನಡೆದವು. ಖೊಮೇನಿಯನ್ನು ಗಡಿಪಾರು ಮಾಡಿ ಮೊಹಮ್ಮದ್‌ ಶಾ ಆದೇಶ ಹೊರಡಿಸಿದ್ದರು. ಅಲ್ಲಿಂದ ಕ್ರಾಂತಿಯ ದಿಕ್ಕು ಬದಲಾಯಿತು.

ತಮ್ಮ ವಿರುದ್ಧ ಭುಗಿಲೆದ್ದ ಜನರನ್ನು ಮೊಹಮ್ಮದ್‌ ಶಾ ಪೊಲೀಸರ ಮೂಲಕ ಹತ್ಯೆ ಮಾಡಿಸಿದರು. ಗಡಿಪಾರಾಗಿದ್ದ ಖೊಮೇನಿ ಫ್ರಾನ್ಸ್‌ನಲ್ಲಿ ಕೂತು, ಹೋರಾಟವನ್ನು ಮುನ್ನಡೆಸಿದರು. ಇರಾನ್‌ನ ಜಾತ್ಯತೀತರು, ಚಿಂತಕರು, ಕಮ್ಯುನಿಸ್ಟರು, ಇಸ್ಲಾಂ- ಮಾರ್ಕ್ಸ್‌ವಾದಿಗಳು ಹೀಗೆ ಎಲ್ಲಾ ಎಡ ಚಿಂತನೆಯವರು ಖೊಮೇನಿಯೊಂದಿಗೆ ಕ್ರಾಂತಿಗಾಗಿ ಕೈಜೋಡಿಸಿದರು.

ಖೊಮೇನಿ ಈ ಪ್ರತಿಭಟನೆಯ ಮುಖವಾಗಿ ಕಾಣಿಸಿಕೊಂಡರು. ‘ಇರಾನ್ ಜನರ ವಿಮೋಚನೆಕಾರ’ ಎಂದು ವಿದೇಶಿ ಮಾಧ್ಯಮಗಳು ಇವರನ್ನು ಹಾಡಿ ಹೊಗಳಿದವು. ಕ್ರಾಂತಿಯು ಮತ್ತಷ್ಟು ತೀವ್ರವಾಗುತ್ತಿದ್ದಂತೆ ಮೊಹಮ್ಮದ್ ಶಾ ಅವರು ಇರಾನ್ ತೊರೆದು ಬೇರೆ ದೇಶಕ್ಕೆ ಓಡಿ ಹೋದರು. ಖೊಮೇನಿ ಇರಾನ್‌ನ ಸರ್ವೋಚ್ಚ ನಾಯಕನಾದರು. 

12 ಸಾವಿರ ವಿರೋಧಿಗಳ ಹತ್ಯೆ

ತಮ್ಮ ಸರ್ವಾಧಿಕಾರಿ ಕ್ರಮಗಳಿಗೆ ವಿರೋಧ ತೋರಿದ 12 ಸಾವಿರಕ್ಕೂ ಹೆಚ್ಚು ಜನರನ್ನು ಖೊಮೇನಿ ಹತ್ಯೆ ಮಾಡಿಸಿದರು ಎಂಬ ವರದಿಗಳಿವೆ. ಜೊತೆಗೆ, ಧಾರ್ಮಿಕ ಗುರುವೇ ಸರ್ವಾಧಿಕಾರಿ ಎಂಬ ಕಾನೂನು ತಂದರು. ಧರ್ಮವನ್ನೇ ಆಳ್ವಿಕೆಯ ನೆಲೆಗಟ್ಟು ಮಾಡಿದರು. ಮಹಿಳೆಯರು ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸಿದರು.

ಪ್ರಜಾಪ್ರಭುತ್ವ ಸರ್ಕಾರಕ್ಕಾಗಿ ಖೊಮೇನಿ ಅವರನ್ನು ಜನರು ಬೆಂಬಲಿಸಿದ್ದರು. ಆದರೆ, ಖೊಮೇನಿ ಅವರನ್ನು ಬೆಂಬಲಿಸುವ ಮೂಲಕ ತಮಗೆ ತಿಳಿಯದಂತೆಯೇ  ಸರ್ವಾಧಿಕಾರಿ ಆಳ್ವಿಕೆಗೆ ಭದ್ರ ಬುನಾದಿ ಹಾಕಿಕೊಟ್ಟರು. ಸ್ವಾತಂತ್ರ್ಯದ ಕನಸು ಕಂಡಿದ್ದ ಮಹಿಳೆಯರ ಸ್ಥಿತಿ ಇನ್ನಷ್ಟು ದಯನೀಯವಾಯಿತು. ಅವರು ಬಂದಿಗಳಾದರು, ಮೂರನೇ ದರ್ಜೆಯ ಪ್ರಜೆಗಳಾದರು. 

40 ವರ್ಷದ ಸುದೀರ್ಘ ಹೋರಾಟ

ಟೆಹರಾನ್‌ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದ ಪ್ರೊಫೆಸರ್‌ ಆಗಿದ್ದ ಹೈದಾ ದರಾಗಹಿ ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ, ಹಿಜಾಬ್‌ ಕಡ್ಡಾಯವಾದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ: ‘ಕ್ರಾಂತಿಯ ನಂತರ ಕೆಲವೇ ದಿನಗಳಲ್ಲಿ ಬಂದ ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನ ಅದಾಗಿತ್ತು. ಈ ದಿನವನ್ನು ದೇಶದಾದ್ಯಂತ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದೆವು. ಆದರೆ, ಮಹಿಳಾ ದಿನದ ಮುನ್ನಾ ದಿನವೇ ಹಿಜಾಬ್ ಕಡ್ಡಾಯ ಮಾಡಿ ಖೊಮೇನಿ ಆದೇಶ ಹೊರಡಿಸಿದರು. ‘ಸರ್ಕಾರಿ ಕಚೇರಿಗಳಿಗೆ, ಕೆಲಸದ ಸ್ಥಳಗಳಿಗೆ ಹಿಜಾಬ್ ಧರಿಸಿಯೇ ಬರಬೇಕು. ‘ನಗ್ನ’ರಾಗಿ ಕಚೇರಿಗಳಿಗೆ ಬರಬೇಡಿ’ ಎಂದು ಆದೇಶದಲ್ಲಿ ಖೊಮೇನಿ ಹೇಳಿದ್ದರು’. 

‘ಸಂಭ್ರಮಾಚರಣೆಗೆಂದು ಸಿದ್ಧರಾಗಿದ್ದ ನಾವು ಪ್ರತಿಭಟನೆಗೆ ಅಣಿಯಾದೆವು. ಆಚರಣೆಗಾಗಿ ಹೇಳಿದ್ದ ಸ್ಥಳ ಮತ್ತು ಸಮಯದಲ್ಲೇ ಭಾರಿ ಪ್ರತಿಭಟನೆ ನಡೆಸಿದೆವು. ದೊಡ್ಡ ಮಟ್ಟದ ಪ್ರತಿಭಟನೆಯು ಹಲವು ದಿನಗಳ ಕಾಲ ನಡೆಯಿತು. ಪ್ರತಿಭಟನಕಾರರಿಗೆ ಇರಿದರು, ಕಲ್ಲು ತೂರಿದರು, ಇಟ್ಟಿಗೆಗಳಿಂದ ಹೊಡೆದರು, ಗಾಜಿನ ಚೂರುಗಳಿಂದ ಗಾಯ ಮಾಡಿದರು. ಪ್ರತಿಭಟನೆಯ ತೀವ್ರತೆಗೆ ಹಿಜಾಬ್‌ ಕಡ್ಡಾಯ ಆದೇಶವನ್ನು ಸರ್ಕಾರ ಹಿಂಪಡೆಯಿತು. ಅಷ್ಟರ ಮಟ್ಟಿಗೆ ಮಹಿಳೆಯರು ನಡೆಸಿದ ಪ್ರತಿಭಟನೆ ಯಶಸ್ವಿಯಾಗಿತ್ತು. ಆದರೆ, ಕೆಲವು ತಿಂಗಳ ಬಳಿಕ ಹಿಜಾಬ್‌ ಅನ್ನು ಸರ್ಕಾರ ಕಡ್ಡಾಯಗೊಳಿಸಿತು’ ಎಂಬುದನ್ನು ಹೈದಾ ನೆನಪಿಸಿಕೊಳ್ಳುತ್ತಾರೆ.

ಕೂದಲು ಮತ್ತು ಘನತೆ: ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹಲವು ಸಂಕೇತಗಳಿವೆ. ಮಹಿಳೆಯರು ತಮ್ಮ ಹಿಜಾಬ್ ಅನ್ನು ಬಿಚ್ಚಿ ಬೆಂಕಿಗೆ ಹಾಕುತ್ತಿರುವುದು ಮತ್ತು ತಮ್ಮ ಕೂದಲನ್ನು ಕತ್ತರಿಸಿಕೊಳ್ಳುತ್ತಿರುವುದು ಪ್ರತಿಭಟನೆಯ ಸಂಕೇತವೇ ಆಗಿದೆ. 

ಕೂದಲು ಹೆಣ್ಣಿನ ಸೌಂದರ್ಯದ ಪ್ರತೀಕ. ಅದೊಂದು ಘನತೆಯೂ ಹೌದು. 

ಕೂದಲು ಸೌಂದರ್ಯದ ಪ್ರತೀಕವಾದ್ದರಿಂದಲೇ ಇದಕ್ಕೊಂದು ಧಾರ್ಮಿಕ ಚೌಕಟ್ಟು ಕಟ್ಟುವ ಕೆಲಸವನ್ನು ಪುರುಷ ಪ್ರಧಾನ ಮನಃಸ್ಥಿತಿ ಮಾಡಿದೆ. ಕೂದಲೇ ಹೆಣ್ಣಿನ ಆಕರ್ಷಣೆ ಎಂಬ ಕಾರಣಕ್ಕೆ ಅವರು ಹಿಜಾಬ್‌ ಕಟ್ಟಿಕೊಂಡು ಕೂದಲನ್ನು ಮುಚ್ಚಿಕೊಳ್ಳಬೇಕು ಎಂಬ ಪರಿಕಲ್ಪನೆ ಇಸ್ಲಾಂನಲ್ಲಿ ಬಂತು. ಹಿಂದೂ ಸಂಪ್ರದಾಯದಲ್ಲಿ ಈ ರೀತಿಯ ನೇರವಾದ ನಿರ್ಬಂಧ ಇಲ್ಲದಿದ್ದರೂ, ಹೆಣ್ಣು ಮಕ್ಕಳು ಕೂದಲು ಬಿಚ್ಚಿ ಓಡಾಡುವುದನ್ನು ಇಷ್ಟಪಡದವರು ಬಹಳ ಮಂದಿ. ವಿಧವೆಯರು ತಲೆ ಬೋಳಿಸಿಕೊಳ್ಳಲೇಬೇಕಾದ ಕಟ್ಟುಪಾಡು ಇದ್ದದ್ದನ್ನು ಮರೆಯುವಂತಿಲ್ಲ.

ಸಂತಾಪ ಸೂಚಿಸಲು ಮತ್ತು ತಮ್ಮ ಸಿಟ್ಟನ್ನು ಹೊರಹಾಕಲು ಇರಾನ್ ಅಥವಾ ಮಧ್ಯಪ್ರಾಚ್ಯ ದೇಶಗಳಲ್ಲಿ ಕೂದಲನ್ನು ಕತ್ತರಿಸಿಕೊಳ್ಳುವ ಪದ್ಧತಿ ಇದೆ. ಇದಕ್ಕೆ ಚಾರಿತ್ರಿಕ ಹಾಗೂ ಸಾಹಿತ್ಯಿಕವಾದ ಇತಿಹಾಸವೂ ಇದೆ. 

ಕೂದಲು ಮತ್ತು ಪ್ರತಿಜ್ಞೆಯ ಸಂಕೇತ ಭಾರತೀಯರಿಗೆ ಹೊಸದೇನಲ್ಲ. ‘ಮುಡಿ ಕಟ್ಟುವುದಿಲ್ಲ’ ಎಂದು ಕುರುಕುಲದ ನಾಶಕ್ಕಾಗಿ ದ್ರೌಪದಿ ಮಾಡಿದ್ದ ಪ್ರತಿಜ್ಞೆಯು ಮಹಿಳಾ ಹೋರಾಟದ ಹಿನ್ನೆಲೆಯಲ್ಲಿ ಬಹಳ ಮುಖ್ಯ ಸಂಕೇತ. ಈ ಪ್ರತಿಜ್ಞೆಯ ಮೂಲಕವೇ ದ್ರೌಪದಿ ಪಾತ್ರ ಮತ್ತೆ ಮತ್ತೆ ಪ್ರಸ್ತುತವಾಗುತ್ತದೆ. 

ದ್ರೌಪದಿಯ ಮುಡಿಯನ್ನು ಪವಿತ್ರ ಜಲ ಸಿಂಪಡಿಸಿದ ‘ಶ್ರೀಮುಡಿ’ ಎಂದು ಕುಮಾರವ್ಯಾಸ ಕರೆದರೆ, ಕೌರವರನ್ನು ನಾಶ ಮಾಡಿದ ‘ಕೇಶಪಾಶ ಪ್ರಪಂಚ’ ಎನ್ನುತ್ತಾನೆ ಪಂಪ. ಇರಾನ್‌ನ  ಧರ್ಮಾಂಧ ಸರ್ಕಾರವು ಮಹಿಳೆಯರ ಮುಡಿಗೆ ಕೈಹಾಕಿದೆ. ದ್ರೌಪದಿಯ ಮುಡಿಗೆ ಕೈಹಾಕಿದ ದುಶ್ಶಾಸನನ ಕತೆ ನಮಗೆಲ್ಲಾ ಗೊತ್ತೇ ಇದೆ. 

ಪಂಪನ 'ವಿಕ್ರಮಾರ್ಜುನವಿಜಯ' ಪದ್ಯದಲ್ಲಿ, ದುಶ್ಶಾಸನನನ್ನು ಕೊಂದು ಆತನ ರಕ್ತವನ್ನು ದ್ರೌಪದಿಯ ಮುಡಿಗೆ ಹಚ್ಚಿ, ಮುಡಿ ಕಟ್ಟುವ ಸಂದರ್ಭದಲ್ಲಿ ಭೀಮನು ದ್ರೌಪದಿಗೆ ಹೀಗೆ ಹೇಳುತ್ತಾನೆ: ‘ಇದರೊಳ್ ಶ್ವೇತಾತಪತ್ರ ಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ ಪುದಿದು ಅಳ್ಕಾಡಿತ್ತು ಅಡಂಗಿತ್ತು ಇದರೊಳ್ ಕುರುರಾಜಾನ್ವಯ ಮತ್ಪ್ರತಾಪಕ್ಕೆ ಇದರಿಂದಂ ನೋಡು ಅಗುರ್ವು ಉರ್ವಿದುದು ಇದುವೆ ಮಹಾಭಾರತಕ್ಕಾದಿಯಾಯ್ತು ಅಬ್ಜದಳಾಕ್ಷಿ ಪೇಳ್‌ ಸಾಮಾನ್ಯಮೆ ಬಗೆಯೆ ಭವತ್ ಕೇಶಪಾಶ ಪ್ರಪಂಚಂ’

ಸಾರಾಂಶ:
ಬಿಳಿಗೊಡೆಗಳಿರುವ ದಶದಿಕ್ಕುಗಳ ರಾಜಚಕ್ರವು ಕೂದಲಿನಿಂದಾಗಿ ನಾಶವಾಗಿದೆ. ಈ ಕೂದಲು ಕುರು ರಾಜವಂಶವನ್ನು ನಾಶಮಾಡಿತು. ರಾಜರ ಸಮೂಹವು ಮಣ್ಣು ಮುಕ್ಕಿತು, ನೋಡು, ನಿನ್ನ ಕೂದಲಿನಿಂದಾಗಿಯೇ ನನ್ನ ಶಕ್ತಿಯು ಇಮ್ಮಡಿಯಾಯಿತು, ನಿನ್ನ ಕೂದಲೇ ಮಹಾಭಾರತಕ್ಕೆ ಕಾರಣವಾಯಿತು. ಕಮಲದ ಕಣ್ಣಿನವಳೇ, ನಿನ್ನ ಕೂದಲು ಸಾಮಾನ್ಯವೇ ಹೇಳು.

ಇರಾನ್‌ನ ದ್ರೌಪದಿಯರ ಹೋರಾಟ ಯಶಸ್ವಿಯಾಗಲಿ ಎಂದು ಭಾರತೀಯ ಮನಸ್ಸುಗಳೂ ಆಶಿಸುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು