ಸೋಮವಾರ, ಜೂನ್ 14, 2021
25 °C
ಇಂದು ವಿಶ್ವ ಚಾಕೋಲೇಟ್‌ ದಿನ

ಚಾಕೋಲೇಟ್‌ಗೂ ಒಂದು ದಿನವಂತೆ

ಪ್ರಜಾವಾಣಿ ಫೀಚರ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಮಾನವನ ಅದ್ಭುತ ಸೃಷ್ಟಿಗಳಲ್ಲಿ ಚಾಕೊಲೇಟ್‌ ಕೂಡ ಒಂದು.

ಪುಟ್ಟ ಮಗುವಿನಿಂದ ವೃದ್ಧರವರೆಗೂ ಬಾಯಲ್ಲಿ ನೀರೂರಿಸುವ ಈ ಚಾಕೊಲೇಟ್‌ಗೂ ಒಂದು ದಿನ ಮೀಸಲಿಡಲಾಗಿದೆ. ಪ್ರತಿ ವರ್ಷ ಜುಲೈ 7ರಂದು ವಿಶ್ವ ಚಾಕೊಲೇಟ್‌ ದಿನ ಆಚರಿಸಲಾಗುತ್ತದೆ.

ಇದು ಶುರುವಾಗಿದ್ದು ದಶಕದ ಹಿಂದೆ. ಜುಲೈ 7, 2009ರಂದು ಮೊದಲ ಬಾರಿಗೆ ವಿಶ್ವ ಚಾಕೊಲೇಟ್‌ ದಿನವನ್ನು ಆಚರಿಸಲಾಯಿತು. 1550ರಲ್ಲಿ ಯುರೋಪ್‌ ಖಂಡಕ್ಕೆ ಚಾಕೊಲೇಟ್‌ ಪರಿಚಯಿಸಿದ ನೆನಪಿನಲ್ಲಿ ಈ‌ ದಿನಾಚರಣೆ ಶುರುವಾಯಿತು ಎಂದು ಹೇಳಲಾಗುತ್ತದೆ.

ಚಾಕೊಲೇಟ್ ಕೇವಲ ಬಾಯಿ ರುಚಿಗಾಗಿಯಷ್ಟೇ ಅಲ್ಲ. ಅಳುವ ಮಗುವನ್ನು ಸಮಾಧಾನಪಡಿಸಲು, ಪ್ರಿಯತಮೆಯ ಮುನಿಸು ನಿವಾರಿಸಲು, ಹುಟ್ಟಿದ ದಿನ, ಗೆಲುವಿನ ಸಮಯದಂತಹ ಸಂಭ್ರಮದ ಕ್ಷಣಗಳನ್ನು ಸವಿಯಲು ಈ ಚಾಕೊಲೇಟ್ ನೆರವಾಗುತ್ತದೆ. ಪ್ರೀತಿ, ಗೆಳೆತನದಂತಹ ಬಾಂಧವ್ಯ ಬೆಸುಗೆಗೆ ಕೊಂಡಿಯಾಗುವ, ಹಲವು ಸಂತಸದ ಕ್ಷಣಗಳಿಗೆ ಸಾಕ್ಷಿಯಾಗುವ ಚಾಕೊಲೇಟ್‌ ಇತಿಹಾಸ ಬಹಳ ಕುತೂಹಲಕಾರಿಯಾಗಿದೆ.

ಶತಮಾನಗಳ ಹಿಂದಿನ ಇತಿಹಾಸ

ಚಾಕೊಲೇಟ್‌ ಕುರಿತ ಇತಿಹಾಸ ಕೆದಕಿದರೆ, ಅದು ನಮ್ಮನ್ನು ಕ್ರಿಸ್ತ ಪೂರ್ವ 450ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ಮೆಜೊ ಅಮೆರಿಕ ಅಥವಾ ಮಧ್ಯ ಅಮೆರಿಕದಲ್ಲಿ ಹುಟ್ಟಿದ ಚಾಕೊಲೇಟ್‌ ಈಗ ವಿಶ್ವವನ್ನೇ ಆಳುತ್ತಿದೆ. ಮಧ್ಯ ಅಮೆರಿಕ ಮತ್ತು ಮೆಕ್ಸಿಕೊ ಭಾಗದ ಆ್ಯಜ್‌ಟೆಕ್‌‌ ಜನಾಂಗದ ನವಾಟಲ್‌ ಭಾಷೆಯ  Xocolātl ಪದವೇ ಈಗ ಚಾಕೊಲೇಟ್‌ ಆಗಿದೆ.

ಚಾಕೋಲೇಟ್‌ ತಯಾರಿಸಲು ಬಳಸುವ ಪುಟ್ಟ ಕೊಕೊ ಬೀಜಗಳು ದೇವರು ನೀಡಿದ ಜ್ಞಾನದ ಭಂಡಾರ ಎಂದು ಆ್ಯಜ್‌ಟೆಕ್‌ ಜನಾಂಗ ಬಲವಾಗಿ ನಂಬಿತ್ತು. ಕೊಕೊ ಬೀಜಗಳು ಆ ಕಾಲದ ಕರೆನ್ಸಿಗಳಂತೆ ಚಲಾವಣೆಯಲ್ಲಿದ್ದವು ಎಂದರೆ ಆ ಕಾಲದಲ್ಲೇ ಅದರ ಜನಪ್ರಿಯತೆ ಎಷ್ಟಿತ್ತು ಎಂದು ಊಹಿಸಬಹುದು.

ಪಾನೀಯ ರೂಪದಿಂದ...

ಆರಂಭದಲ್ಲಿ ಚಾಕೊಲೇಟ್ ಈಗ ನೋಡುತ್ತಿದ್ದೇವಲ್ಲ, ಆ ರೂಪದಲ್ಲಿ ಇರಲಿಲ್ಲ.‌ ಆರಂಭದಲ್ಲಿ ಇದು ಪಾನೀಯವಾಗಿ ಜನಪ್ರಿಯವಾಗಿತ್ತು. 1519ರಲ್ಲಿ ಮೊಂಟೆಜುಮಾ ಎಂಬ ಆ್ಯಜ್‌ಟೆಕ್‌ ದೊರೆ ಕಾಫಿಯಂತೆ ಕಹಿಯಾದ ‘ಚಿಲೇಟ್‌’ ಪಾನೀಯವನ್ನು ಸ್ಪೇನ್‌ ಪ್ರವಾಸಿ ಹರ್ಮನ್‌ ಕೋರ್ಟಸ್‌ಗೆ ನೀಡಿದ. ಅದನ್ನು ಆತ ಸ್ಪೇನ್‌ಗೆ ಕೊಂಡೊಯ್ದು ಪರಿಚಯಿಸಿದ. ಅದು ಅಲ್ಲಿಂದ ಮುಂದೆ ಫ್ರಾನ್ಸ್‌, ಇಂಗ್ಲೆಂಡ್‌ಗೆ ರೂಪಾಂತರವಾಗುತ್ತಾ ಹೋಯಿತು. ಕಹಿಯಾಗಿದ್ದ ಚಾಕೊಲೇಟ್‌ ಪಾನೀಯಕ್ಕೆ ಹಾಲು, ಸಕ್ಕರೆ, ಯಾಲಕ್ಕಿ ಬೆರೆತವು.

ಕ್ರಿ.ಶ 1800ರಿಂದ ಈಚೆಗೆ ಆ ಪಾನೀಯ ಚಾಕೊಲೇಟ್‌ ರೂಪ ಪಡೆಯಿತು. ಈಗ ಚಾಕೊಲೇಟ್‌ ತಯಾರಿಕೆ  ದೊಡ್ಡ ಉದ್ಯಮದ ರೂಪ ಪಡೆದಿದೆ. ಈ ಉದ್ಯಮ ಎಂದಿಗೂ ನಷ್ಟ ಅನುಭವಿಸಿದ ಕುರುಹುಗಳಿಲ್ಲ. 20ನೇ ಶತಮಾನದವರೆಗೂ ಅಮೆರಿಕದ ಯೋಧರಿಗೆ ನೀಡುವ ಪಡಿತರದಲ್ಲಿ ಚಾಕೊಲೇಟ್‌ ಕಡ್ಡಾಯವಾಗಿ ಇರುತ್ತಿತ್ತು. 

ಕಾಫಿ ಬೀಜಗಳನ್ನು ಹೋಲುವ ಥಿಯೊಬ್ರೊಮಾ ಕಕಾವ್‌ (Theobroma cacao) ಗಿಡದ ಪುಟ್ಟ ಬೀಜಗಳು ಇಂದು ಇಡೀ ವಿಶ್ವವನ್ನೇ ತಮ್ಮ ತೆಕೆಗೆ ತೆಗೆದುಕೊಂಡಿವೆ. ಶತಮಾನಗಳಿಂದ ಚಾಕೊಲೇಟ್‌ ಎಲ್ಲರ ಮೆಚ್ಚಿನ ತಿನಿಸಾಗಿ, ಪಾನೀಯವಾಗಿ ಬೆಳೆದುಬಂದು ಬಂದ ಪರಿಯೇ ಅಚ್ಚರಿ ಹುಟ್ಟಿಸುವಂಥದ್ದು.

ಇಂದು ಚಾಕೋಲೇಟ್‌ ಗೊತ್ತಿಲ್ಲದ ಜನರಿಲ್ಲ, ಬಳಸದ ದೇಶವಿಲ್ಲ. ಚಾಕೋಲೇಟ್ ಒಂದು‌ ಸಭ್ಯ ಸಂಸ್ಕೃತಿ, ನಾಗರಿಕತೆಯ ಸಂಕೇತವಾಗಿ ಹೊರಹೊಮ್ಮಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು