ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಮ್ಮಂದಿರ ದಿನ 2022 | ಅಮ್ಮ ಪದವೇ ಸುಂದರ ಕಾವ್ಯ...

Last Updated 7 ಮೇ 2022, 20:11 IST
ಅಕ್ಷರ ಗಾತ್ರ

‘ಮದರ್ಸ್ ಡೇ’ ಅಥವಾ ತಾಯಂದಿರ ದಿನವನ್ನು 1908ರಲ್ಲಿ ಅಮೆರಿಕದಲ್ಲಿ ಆಚರಿಸಲು ನಿರ್ಧರಿಸಲಾಯಿತು. ಅಮೆರಿಕದ ಶಾಂತಿ ಕಾರ್ಯಕರ್ತೆ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾಳ ತಾಯಿ ಮೃತರಾದರು. ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು. ಅವರು ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಆರಂಭಿಸಿದರು. ಅಮೆರಿಕದ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್ ಮೇ 9, 1914 ರಂದು ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಆಚರಿಸಲು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿಯಾದ ನಂತರ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.

ಆದರೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಲಂಡನ್‍ನಲ್ಲಿ ತಾಯಂದಿರ ದಿನವನ್ನು ಮಾರ್ಚ್ ತಿಂಗಳ 4ನೇ ಭಾನುವಾರ ಆಚರಿಸಲಾಗುತ್ತದೆ. ಗ್ರೀಸ್ ದೇಶದಲ್ಲಿ ಫೆಬ್ರವರಿ 2ರಂದು ಆಚರಿಸಲಾಗುತ್ತದೆ. ಭಾರತ ಸೇರಿ ಹಲವು ದೇಶಗಳಲ್ಲಿ ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರ ತಾಯಂದಿರ ದಿನ ಆಚರಿಸಲಾಗುತ್ತದೆ.

ಆಡಿ ಬಾ ನನ್ನ ಕಂದ, ಅಂಗಾಲ ತೊಳೆದೇನು ತೆಂಗಿನ ಕಾಯಿ ತಿಳಿನೀರ, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಬಂಗಾರದ ಮೊರೆ ತೊಳೆದೇನಾ...ಎಂದು ಅಂದಿನ ತಾಯಂದಿರು ಹಾಡುತ್ತಿದ್ದರೆ, ಅವರಿಗೆ ಸಮಯವಿತ್ತು. ತನ್ನ ಕಂದನ ಸಾಕುವ ಖುಷಿಯಿತ್ತು. ಇಂದಿನ ತಾಯಂದಿರಿಗೆ ಮಗುವನ್ನು ಸಾಕುವ ಮನಸ್ಸಿದೆ, ಸಮಯವಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.

ಅಮ್ಮ ಎಂದಿಗೂ ಬದಲಾಗದ ಜೀವ. ಆದರೆ ಅಮ್ಮ ನಿರ್ವಹಿಸುವ ಪಾತ್ರಗಳು ಬದಲಾಗಿವೆ. ಬದಲಾದ ಕಾಲ ಘಟ್ಟದಲ್ಲಿ ಅಮ್ಮನ ಪರಿಸ್ಥಿತಿಯನ್ನು ನಿಭಾಯಿಸುವ ಸಂದರ್ಭಗಳು ಬದಲಾಯಿಸಿವೆ. ದುಡಿಮೆ, ಸಂಸಾರ, ಜೀವನದ ಮಜಲುಗಳು ಇಂದಿನ ಹೆಣ್ಣು ಮಕ್ಕಳನ್ನು ಬೇರೊಂದು ದಾರಿಯಲ್ಲಿ ನಡೆಸುತ್ತಿವೆ. ಅಮ್ಮನ ದಾರಿಯಲ್ಲಿ ಮನೆ, ಗಂಡ, ಮಕ್ಕಳು, ಸಂಸಾರ, ಹಬ್ಬ, ತವರುಮನೆ ಇವೇ ಉತ್ತುಂಗದಲ್ಲಿದ್ದ ಕಾಲ ಒಂದಿತ್ತು. ಆದರೆ ಮಗಳ ಕಾಲದಲ್ಲಿ ವಿದ್ಯೆ, ಸ್ನಾತಕೋತ್ತರ ಪದವಿ, ದುಡಿಮೆ, ಸ್ವಾವಲಂಬನೆ, ವೈಯಕ್ತಿಕ ಬದುಕು ಇವೇ ಪ್ರಾಶಸ್ತ್ಯ ಪಡೆದಿವೆ.

ಅಮ್ಮ ಇಂದು ಮಮ್ಮಿಯಾಗಿದ್ದಾಳೆ ಅಷ್ಟೇ... ಪ್ರೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂದಿನ ಅಮ್ಮ ಸ್ಪರ್ಧಾ ಜಗತ್ತಿನ ಅಮ್ಮನಾಗಿದ್ದಾಳೆ. ಎಲ್ಲದರಲ್ಲಿಯೂ ಸ್ಪರ್ಧೆಯೇ ಸರಿ ಎನ್ನುವ ಅಮ್ಮನಾಗಿದ್ದಾಳೆ. ದುಡಿಮೆಯ ಜೊತೆ ಮಗು ಸಾಕುವ ದೊಡ್ಡ ಜವಾಬ್ದಾರಿ ಇಂದು ದುಡಿಯುವ ಹೆಣ್ಣುಮಕ್ಕಳ ಮೇಲೆ ಇದೆ.

ಅಮ್ಮ ತ್ಯಾಗಮೂರ್ತಿ ಎಂಬ ಮಾತಿದೆ. ಅದು ಸತ್ಯವೂ ಹೌದು. ತನ್ನ ಖುಷಿಗಳನ್ನು ತ್ಯಾಗ ಮಾಡಿ ವರ್ಷಕ್ಕೆ ಒಂದು ಬಾರಿ ಬಟ್ಟೆ, ಪ್ರವಾಸ ಎಂದು ಖರ್ಚು ಮಾಡುತ್ತಿದ್ದರು ಅಂದಿನ ಅಮ್ಮಂದಿರು. ತಾವು ದುಡಿದು ಮಕ್ಕಳನ್ನು ಎಂಜಿನಿಯರ್‌, ಡಾಕ್ಟರ್‌ ಮಾಡುವ ಕನಸು ಕಟ್ಟಿಕೊಳ್ಳುತ್ತಾರೆ ಇಂದಿನ ಅಮ್ಮಂದಿರು.

ಅಮ್ಮನನ್ನು ವರ್ಣಿಸಲು ಪದಗಳ ಕೊರತೆಯಾಗಬಹುದು. ಆದರೆ ಪದಗಳಿಗೂ ನಿಲುಕದ ಪ್ರೀತಿಯ ಗಣಿ ಅಮ್ಮ. ಅಮ್ಮನ ದಿನವಿಂದು, ನಾ ಬೇಡುವೆನು ಇಂದು, ಜನ್ಮ, ಜನ್ಮಕ್ಕೂ ನಿನ್ನನ್ನೇ ತಾಯಿಯಾಗಿ ಆ ದೇವರು ನೀಡಲೆಂದು... ಎಂದೆಂದಿಗೂ ನಗುತಿರು ಅಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT