ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಯ್ಲೆಟ್ ಡೇ: ಶೌಚಾಲಯ ಕಟ್ಟುವ ಉತ್ಸಾಹ, ಬಳಕೆಗಿಲ್ಲ

Last Updated 19 ನವೆಂಬರ್ 2019, 9:55 IST
ಅಕ್ಷರ ಗಾತ್ರ

ನೈರ್ಮಲ್ಯ ಹಾಗೂ ಆರೋಗ್ಯ ವಿಷಯದಲ್ಲಿ ಶೌಚಾಲಯ ಪಾತ್ರ ಪ್ರಮುಖವಾದದ್ದು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶೌಚಗೃಹಗಳ ನಿರ್ಮಾಣ ಅಭಿಯಾನವಾಗಿ ಬದಲಾಗಿದೆ. ಅವುಗಳ ಅಗತ್ಯ ಎಷ್ಟು ಎಂಬುದು ಸರ್ವೇಸಾಮಾನ್ಯರಿಗೂ ವೇದ್ಯವಾಗಿದೆ. ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ಸರ್ಕಾರ ಒಂದು ಕಾಲದಲ್ಲಿ ಒತ್ತಡ ಹೇರುತ್ತಿತ್ತು. ಆದರೆ, ಇದೀಗ ಜನರೇ ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ ಕೋರಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ.

ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಶೌಚಾಲಯಗಳ ನಿರ್ಮಾಣ ದಂಡಿಯಾಗಿಯೇ ನಡೆದಿದೆ. ಆದರೆ, ಅದರ ಬಳಕೆ ಮಾತ್ರ ಜನರು ಉತ್ಸಾಹ ತೋರುತ್ತಿಲ್ಲ! ಅವಳಿ ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಸುತ್ತು ಹಾಕಿದರೆ, ಈ ಸಂಗತಿ ಅರಿವಿಗೆ ಬರುತ್ತದೆ. ಅಲ್ಲಲ್ಲಿ ತಂಬಿಗೆ ಹಿಡಿದು ಬಯಲಿಗೆ ಹೋಗುವ ದೃಶ್ಯಗಳು ಕಣ್ಣಿಗೆ ಬೀಳುತ್ತವೆ.

‘ಸ್ವಚ್ಛ ಭಾರತ್ ಮಿಷನ್‌ ಅಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ 2012ರ ಬೇಸ್‌ಲೈನ್‌ ಸಮೀಕ್ಷೆಯಲ್ಲಿ ಗುರುತಿಸಲಾದ ಎಲ್ಲ 1.40 ಲಕ್ಷಕ್ಕೂ ಅಧಿಕ ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿವೆ. 2017ರ ನವೆಂಬರ್‌ನಲ್ಲಿ ಜಿಲ್ಲೆಯು ಬಯಲು ಶೌಚ ಮುಕ್ತ ಎಂದು ಘೋಷಣೆಯಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಹೇಳುತ್ತಾರೆ.

‘ಬೇಸ್‌ಲೈನ್ ಸರ್ವೆಯಿಂದ ಹೊರಗುಳಿದ ಅಂದರೆ, ಹೊಸದಾಗಿ ಮನೆ ನಿರ್ಮಿಸಿಕೊಂಡ ಇಲ್ಲವೇ ಕೂಡು ಕುಟುಂಬದಿಂದ ಬೇರೆಯಾದವರಿಂದ ಈತನಕ(ನವೆಂಬರ್ 14) 25 ಸಾವಿರದಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 10 ಸಾವಿರ ಕುಟುಂಬಗಳು ಶೌಚಾಲಯಗಳು ನಿರ್ಮಿಸಿಕೊಂಡಿವೆ. ಇನ್ನುಳಿದ ಉಳಿದ 16 ಸಾವಿರ ಶೌಚಾಲಯಗಳ ನಿರ್ಮಾಣ ವಿವಿಧ ಹಂತಗಳಲ್ಲಿ ನಡೆಯುತ್ತಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಬಿ.ಎಸ್‌.ಮೂಗನೂರಮಠ.

ಸಮುದಾಯ ಶೌಚಾಲಯನಿರ್ಮಾಣಕ್ಕೆ ನಿರುತ್ಸಾಹ

‘ಸ್ವಂತ ಜಾಗವಿಲ್ಲದ ಜನರು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಅಂಥವರಿಗಾಗಿ ಸರ್ಕಾರ ಸಮುದಾಯ ಶೌಚಾಲಯ ಯೋಜನೆ ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಈ ವರ್ಷ 75 ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಅವಕಾಶವಿದೆ. ಆದರೆ, ಈತನಕ ಕೇವಲ ಎಂಟು ಕಡೆ ಮಾತ್ರ ನಿರ್ಮಿಸಲಾಗುತ್ತಿದೆ. ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಗ್ರಾಮೀಣ ಭಾಗದ ಆಡಳಿತದಿಂದ ಬೇಡಿಕೆಯೇ ಇಲ್ಲ’ ಎನ್ನುತ್ತಾರೆಮೂಗನೂರಮಠ.

ಬೇಡಿಕೆ ಕುಸಿಯಲು ಹಲವು ಕಾರಣಗಳನ್ನು ಅವರು ನೀಡುತ್ತಾರೆ. ‘ಸಮುದಾಯ ಶೌಚಾಲಯ ನಿರ್ಮಿಸಲು ಉದ್ದೇಶಿತ ಪ್ರದೇಶದ ಸುತ್ತಲಿನ ಜನರು ಶೌಚಗೃಹಗಳ ನಿರ್ಮಾಣ ವಿರೋಧಿಸುತ್ತಾರೆ. ‘ಸ್ವಚ್ಛತೆಯ ಉಳಿಯುವುದಿಲ್ಲ, ದುರ್ನಾತ ಎದುರಿಸಬೇಕಾಗುತ್ತದೆ. ಹೀಗಾಗಿ ಇಲ್ಲಿ ಬೇಡ ಮತ್ತೆ ಎಲ್ಲಿಯಾದರೂ ಕಟ್ಟಿ’ ಎಂಬುದು ಮೊದಲ ಕಾರಣ. ಸಮುದಾಯ ಶೌಚಾಲಯಗಳ ನಿರ್ವಹಣೆ ಸಮಸ್ಯೆ ಎರಡನೇ ಕಾರಣ. ಜನರು ನಿಗದಿತ ಪ್ರಮಾಣದಲ್ಲಿ ನೀರು ಬಳಕೆ ಮಾಡದಿದ್ದರೆ ಸಮುದಾಯ ಶೌಚಾಲಯಗಳ ನಿರ್ವಹಣೆ ಸವಾಲಾಗಿ ಪರಿಣಮಿಸುತ್ತದೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಶೌಚಾಲಯಗಳ ಸ್ವಚ್ಛತೆಗೆ ಯಾರೂ ಮುಂದೆ ಬರುವುದಿಲ್ಲ’ ಎಂಬುದು ಅವರ ಅಭಿಪ್ರಾಯ.

ಅವಳಿ ನಗರದ ಸ್ಥಿತಿಗತಿ

‘2011ರ ಜನಗಣತಿ ಪ್ರಕಾರ ಅವಳಿ–ನಗರದಲ್ಲಿ 1.93 ಲಕ್ಷ ಕುಟುಂಬಗಳಿದ್ದವು. ಆ ಪೈಕಿ 17,543 ಕುಟುಂಬಗಳು ಶೌಚಾಲಯ ಹೊಂದಿರಲಿಲ್ಲ. ಸದ್ಯ ಅವಳಿ ನಗರದಲ್ಲಿ 2.18 ಲಕ್ಷ ಕುಟುಂಬಗಳಿರುವ ಅಂದಾಜಿದೆ. ಈ ಪೈಕಿ 5,950 ಕುಟುಂಬಗಳು ಶೌಚಾಲಯ ಹೊಂದಿಲ್ಲ. ಆದರೆ, ಈ ಕುಟುಂಬಗಳು ಸಮುದಾಯ ಶೌಚಾಲಯಗಳನ್ನು ಬಳಕೆ ಮಾಡುತ್ತಿವೆ’ ಎನ್ನುತ್ತಾರೆ ಹುಬ್ಬಳ್ಳಿ–ಧಾರವಾಡ ಪಾಲಿಕೆಯ ಪರಿಸರ ಎಂಜಿನಿಯರ್‌ ಕೆ.ಎಸ್‌.ನಯನಾ.

‘ಕಳೆದ ನಾಲ್ಕು ವರ್ಷಗಳಲ್ಲಿ ಕೊಳೆಗೇರಿ ಪ್ರದೇಶಗಳು, ಬಡಜನರು ವಾಸಿಸುವ ಪ್ರದೇಶಗಳ ಹೆಚ್ಚಿನ ಅರಿವು ಮೂಡಿಸಲಾಗಿದೆ. ಅದರ ಫಲವಾಗಿ 2016ರಿಂದ ಈ ತನಕ ಶೌಚಾಲಯ ನಿರ್ಮಾಣಕ್ಕಾಗಿ 20,490 ಕುಟುಂಬಗಳು ಅರ್ಜಿ ಸಲ್ಲಿಸಿವೆ’ ಎಂದು ಅವರು ವಿವರಿಸಿದರು.

ಪಾಳುಬಿದ್ದ ಶೌಚಾಲಯಗಳು

ಅವಳಿನಗರಕ್ಕೆ ನಿತ್ಯವೂ ಸಾವಿರಾರು ಜನ ನಾನಾ ಕಾರಣಗಳಿಗೆ ಬಂದು ಹೋಗು
ತ್ತಾರೆ. ಇವರ ಅನುಕೂಲಕ್ಕಾಗಿ ಕಟ್ಟಿರುವ ಶೌಚಾಲಯಗಳು ಕೆಟ್ಟ ನಿರ್ವಹಣೆಯ ಫಲವಾಗಿ ಹಾಳು ಬಿದ್ದಿವೆ. ಅವುಗಳ ನಿರ್ಮಾಣಕ್ಕೆ ಮಾಡಿದ ಲಕ್ಷಾಂತರ ರೂಪಾಯಿ ವ್ಯರ್ಥವಾಗುತ್ತಿದೆ. ಅವುಗಳನ್ನು ಪುನಃ ಆರಂಭಿಸಲು ಯಾರೂ ಆಸಕ್ತಿ ತೋರುತ್ತಿಲ್ಲ. ಆದರೆ, ಹೊಸ ಶೌಚಾಲಯ ನಿರ್ಮಾಣದ ಆಸಕ್ತಿ ಮಾತ್ರ ಕುಂದಿಲ್ಲ.

ಅನುದಾನ ಎಷ್ಟು?

ಸ್ವಚ್ಛ ಭಾರತ ಅಭಿಯಾನದಡಿ ಎಲ್ಲ ವರ್ಗದ ಜನರಿಗೆ ವೈಯಕ್ತಿಕ ಶೌಚಾಲಯ ಹೊಂದಲು ಹಣದ ನೆರವು ನೀಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಯುಜಿಡಿ ವ್ಯವಸ್ಥೆ ಹೊಂದಿದ್ದರೆ ₹10 ಸಾವಿರ ನೆರವು ನೀಡಲಾಗುತ್ತದೆ. ಒಳಚರಂಡಿ ವ್ಯವಸ್ಥೆ ಇಲ್ಲದಿದ್ದರೆ ಗುಂಡಿ ನಿರ್ಮಿಸಿಕೊಳ್ಳಲು ಹೆಚ್ಚುವರಿಯಾಗಿ ₹5 ಸಾವಿರ(ಒಟ್ಟು ₹15 ಸಾವಿರ) ನೀಡಲಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ವರ್ಗದವರಿಗೆ ₹12 ಸಾವಿರ ಹಾಗೂ ಪರಿಶಿಷ್ಟರಿಗೆ ₹15 ಸಾವಿರ ನೆರವು ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT