ಬುಧವಾರ, ನವೆಂಬರ್ 25, 2020
20 °C

ಯಕ್ಷಗಾನ: ವರ್ತಮಾನದ ವಾಸುದೇವ

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

Prajavani

‘ಯಾವುದೇ ಕಲೆ ಆಗಿರಲಿ, ಬಹುತೇಕ ಪ್ರೇಕ್ಷಕರು ಆನಂದಿಸಲಿಕ್ಕಾಗಿಯೇ ಬರುತ್ತಾರೆ. ಅಲ್ಲಿ ವಿಮರ್ಶೆಗೆ ಜಾಗವೇ ಇಲ್ಲ. ನನ್ನದು ಬಾಲಿಶ ಶೈಲಿ. ಜನರಿಗೆ ಬೇಕಾಗಿರುವುದೂ ಅದೆ’ ಹೀಗೆಂದು ನೇರವಾಗಿ ಹೇಳುತ್ತಿದ್ದವರು ಮಲ್ಪೆ ವಾಸುದೇವ ಸಾಮಗ. ತಮ್ಮ ನೇರ ಮಾತು ಮತ್ತು ವಿಕ್ಷಿಪ್ತ ಶೈಲಿಯಿಂದ ಜನಪ್ರಿಯರಾಗಿದ್ದ ಸಾಮಗ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು. ಅವರನ್ನು ಹೊಗಳುವವರು ಎಷ್ಟಿದ್ದರೋ ಬೈಯ್ಯುವವರೂ ಅಷ್ಟೇ ಇದ್ದರು. ಆದರೆ ಅದ್ಯಾವುದಕ್ಕೂ ಅವರು ತಲೆ ಕೆಡಿಸಿಕೊಂಡಿರಲಿಲ್ಲ. ಅವರನ್ನು ಒಪ್ಪಬಹುದು ಅಥವಾ ಬಿಡಬಹುದು. ಆದರೆ ಅವರನ್ನು ನಿರ್ಲಕ್ಷಿಸಲು ಸಾಧ್ಯವೇ ಇರಲಿಲ್ಲ.

ಯಕ್ಷಗಾನಕ್ಕೆ ಬೇಕಾದ ಶಾರೀರ, ಶರೀರ, ವಿದ್ವತ್ತು, ಮಾತುಗಾರಿಕೆ ಎಲ್ಲವೂ ಅವರಿಗೆ ಇತ್ತು. ಯಾವುದೇ ಸನ್ನಿವೇಶವನ್ನು ವರ್ತಮಾನಕ್ಕೆ ಇಳಿಸುತ್ತಿದ್ದ ಅವರ ಶೈಲಿ ಅದು ಅವರದ್ದೇ ಆಗಿತ್ತು. ಅದನ್ನು ನಕಲು ಮಾಡುವುದೂ ಕಷ್ಟ. ಅವರದ್ದು ಯಾವಾಗಲೂ ಲಘು ಶೈಲಿ. ಅವರಿಗೆ ಗಂಭೀರ ಶೈಲಿ ಬರುತ್ತಿರಲಿಲ್ಲ ಎಂದಲ್ಲ. ರಾವಣ, ಕೌರವ, ಭೀಷ್ಮ, ಬಲಿ ಮುಂತಾದ ಪಾತ್ರಗಳಲ್ಲಿ ಅವರು ತಾವು ಎಂತಹ ವಿದ್ವತ್‌ಪೂರ್ಣ ವ್ಯಕ್ತಿ ಎಂಬುದನ್ನು ನಿರೂಪಿಸಿದ್ದರು. ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುವಷ್ಟು ಭಾವನಾತ್ಮಕವಾಗಿಯೂ ಅವರು ಅರ್ಥ ಹೇಳಬಲ್ಲವರಾಗಿದ್ದರು.

ಒಮ್ಮೆ ಕೀಚಕವಧೆ ಪ್ರಸಂಗದಲ್ಲಿ ಅವರದ್ದು ವಲಲನ ಪಾತ್ರ. ವಲಲನಾಗಿ ಪ್ರವೇಶ ಮಾಡಿದ ಸಾಮಗರು ಅಡುಗೆ ಬಗ್ಗೆ ಸಾಕಷ್ಟು ಮಾತನಾಡಿದರು. ದೂರದಲ್ಲಿ ಕುಳಿತಿದ್ದ ಪ್ರೇಕ್ಷಕನೊಬ್ಬ ‘ಸಾಕು ನಿಲ್ಲಿಸು ಮಾರಾಯಾ‘ ಎಂದು ಕೂಗಿದ. ತಕ್ಷಣವೇ ಮೈಕ್ ಬಳಿಗೆ ಬಂದ ಸಾಮಗರು ‘ಪಂಡಿತನೊಬ್ಬ ಕತ್ತಲೆಯಲ್ಲಿ ಫಟಿಂಗನಾಗಬಹುದು. ಆದರೆ ಫಟಿಂಗನೊಬ್ಬ ಬೆಳಕಿಗೆ ಬಂದರೂ ಪಂಡಿತನಾಗಲಾರ. ಕತ್ತಲೆಯಲ್ಲಿ ಕುಳಿತವನೆ ಬೆಳಕಿಗೆ ಬಾ’ ಎಂದು ಕರೆದರು. ಆತ ಬಾಯಿಮುಚ್ಚಿಕೊಂಡ.

ಸಾಮಗರು ಯಾವುದೇ ಪಾತ್ರ ಮಾಡಿದರೂ ಅದು ಲೌಕಿಕ ಅಲೌಕಿಕಗಳ ಸಂಗಮ. ಭೀಷ್ಮನ ಪಾತ್ರ ಮಾಡಿಕೊಂಡು ಅವರು ಸೈನಿಕರ ಬಗ್ಗೆ ಹೇಳುವ ಮಾತುಗಳು ಹೀಗಿದ್ದವು. ‘ದಿನಕ್ಕೆ 10 ಸಾವಿರ ಸೈನಿಕರನ್ನು ಕೊಂದು ಹಾಕುತ್ತೇನೆ ಎನ್ನುವುದು ಭೀಷ್ಮನ ಪ್ರತಿಜ್ಞೆ. ಅವರ ದೃಷ್ಟಿಯಲ್ಲಿ ಸೈನಿಕರು ಎಂದರೆ ಸಾಯುವುದಕ್ಕೇ ಇರುವವರು. ಸತ್ತ ಮೇಲೆ ರಾಷ್ಟ್ರಧ್ವಜ ಮುಚ್ಚಿ ಗೌರವ ಸೂಚಿಸುತ್ತಾರೆ. ಮನೆಗೆ ಹೆಣ ತಂದಾಗ ಹೆಂಡತಿ ಮಕ್ಕಳನ್ನೂ ಪ್ರಶ್ನೆ ಮಾಡುತ್ತಾರೆ (ಟಿವಿಯವರು ಕೈಯಲ್ಲಿ ಮೈಕ್ ಹಿಡಿದ ರೀತಿ ಅಭಿನಯ ಮಾಡುತ್ತಾ) ಯೋಧನ ಪತ್ನಿಯೂ ತನ್ನ ಮಕ್ಕಳನ್ನು ಸೈನ್ಯಕ್ಕೆ ಕಳಿಸುವುದಾಗಿ ಹೇಳುತ್ತಾಳೆ. ಸೈನಿಕರಿಗೆ ಜಮೀನು, ಸಕಲ ಸೌಲಭ್ಯ, ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ ಎಲ್ಲಾ ಕೊಡ್ತಾರೆ. ಯಾಕೆಂದರೆ ಅವರು ನಮಗಾಗಿ ಸಾಯುತ್ತಾರೆ ಎಂಬ ಕಾರಣಕ್ಕೆ. ಇತ್ತ ನಮ್ಮ ಆಡಳಿತಗಾರರು ದೇಶ ಸೇವೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ನುಂಗುತ್ತಾರೆ. ಅದೇನಾದರೂ ಸೈನಿಕರಿಗೆ ಗೊತ್ತಾದರೆ ಹಿಂದೆ ಇದ್ದ ಕೋವಿ ಮುಂದೆ ಬರುತ್ತದೆ. ಅದನ್ನು ತಪ್ಪಿಸುವುದಕ್ಕಾಗಿಯೇ ದೇಶ ಸೇವೆ ಎಂಬುದನ್ನು ಅವರ ತಲೆಯಲ್ಲಿ ತುಂಬುತ್ತಾರೆ’ ಎಂದು ಸಾಮಗರು ಭೀಷ್ಮನ ಬಾಯಲ್ಲಿ ಅರ್ಜುನನಿಗೆ ಹೇಳುತ್ತಾರೆ.

ತಕ್ಷಣವೇ ಅವರು ನನ್ನ ಬಗ್ಗೆ ನಿನಗೆ ಸರಿಯಾದ ಮಾಹಿತಿ ಬೇಕಿದ್ದರೆ ಕಮಲನಾಭನನ್ನು ಕೇಳು ಎನ್ನುತ್ತಾರೆ. ಆತನನ್ನು ಯಾಕೆ ಕಮಲನಾಭ ಎನ್ನುತ್ತಾರೆ ಗೊತ್ತೋ ಎಂದು ಕೇಳಿ ‘ದೇವರಿಗೆ ಹೊಕ್ಕಳು ಇಲ್ಲ. ಯಾರು ತಾಯಿಯ ಗರ್ಭದಿಂದ ಜನಿಸುತ್ತಾರೋ ಅವರಿಗೆ ಮಾತ್ರ ಹೊಕ್ಕಳು ಇರುತ್ತದೆ. ದೇವರು ಯಾವ ತಾಯಿಯ ಗರ್ಭದಿಂದ ಜನಿಸಿದವನಲ್ಲ. ಅದಕ್ಕೆ ಅವನಿಗೆ ಹೊಕ್ಕಳು ಇಲ್ಲ. ಆದರೆ ನಾವು ಅವನಿಗೆ ಕಮಲವನ್ನು ಹೊಕ್ಕಳು ಮಾಡಿದ್ದೇವೆ. ಕಮಲವೇ ಯಾಕೆ? ಗುಲಾಬಿ, ಸೇವಂತಿಗೆ, ದಾಸವಾಳ ಹೂವುಗಳು ಯಾಕೆ ಅಲ್ಲ? ಯಾಕೆ ಅಲ್ಲ ಎಂದರೆ ಕಮಲ ಸಾವಿರ ದಳ ಹೊಂದಿದ್ದರೂ ಎಲ್ಲ ದಳಗಳೂ ಸಮಾನವಾಗಿ ವಿಕಸಿತವಾಗುತ್ತವೆ. ದೇವರು ತನ್ನ ಅಂತಃಕರಣದ ಪ್ರಭಾವವನ್ನು ಸರ್ವಜೀವಿಗಳಿಗೂ ಸಮಾನವಾಗಿ ಹೊರಸೂಸುವುದರಿಂದ ಆತ ಕಮಲನಾಭ’ ಎಂದು ಹೇಳುತ್ತಾರೆ. ಹೀಗೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗುವುದು ಸಾಮಗರಿಗೆ ಸಲೀಸು. ತಂದೆ ರಾಮದಾಸ ಸಾಮಗ, ದೊಡ್ಡಪ್ಪ ಶಂಕರನಾರಾಯಣ ಸಾಮಗ ಅವರ ಪರಂಪರೆಯನ್ನು ಮುನ್ನಡೆಸುವ ಸಾಮರ್ಥ್ಯ ಅವರಿಗೆ ಇತ್ತು. ಆದರೂ ಅವರು ದಾರಿಯನ್ನು ಕೊಂಚ ಬದಲಿಸಿದರು.

ಸಾಮಗರು ರಾವಣನ ಪಾತ್ರ ಮಾಡಿಕೊಂಡು ದೂತನಿಗೆ ಹೇಳುವ ಮಾತು ‘ವಾರ್ತಾವಾಹಕರು ಯಾವುದನ್ನೂ ಹೆಚ್ಚು ಮಾಡಬಾರದು, ಕಡಿಮೆಯೂ ಮಾಡಬಾರದು. ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳಬೇಕು’ ಎಂದು ಹೇಳುವ ಮಾತು ಇಂದಿನ ಮಾಧ್ಯಮ ಕ್ಷೇತ್ರದ ಎಲ್ಲರೂ ಅರಿಯಬೇಕಾದ ಮಾತು. ಸಾಮಗರ ಟ್ರಂಪ್ ಕಾರ್ಡ್ ಎಂದರೆ ಉತ್ತರಭೂಪನ ಪಾತ್ರ. ಆರಂಭದಲ್ಲಿ ಜಂಬಕೊಚ್ಚಿಕೊಳ್ಳುವುದರಿಂದ ಹಿಡಿದು ಬೃಹನ್ನಳೆಯೇ ಅರ್ಜುನ ಎನ್ನುವುದು ಗೊತ್ತಾದಾಗ ಆಡುವ ಮಾತುಗಳು ಅವರನ್ನು ಕಲಾವಿದನ ಉತ್ತುಂಗಕ್ಕೆ ಏರಿಸಿದ್ದವು.

‘ರಾಮನದು ಎಂತಹ ಪಿತೃಭಕ್ತಿ. ಅಪ್ಪ ಸಾಯುವ ಕಾಲಕ್ಕೆ ನಾಲ್ಕು ಹನಿ ನೀರು ಹಾಕಲಿಲ್ಲ. ನಾನಾದರೆ ನಾಳೆ ಸಾಯುವ ಅಪ್ಪನಿಗೆ ಇಂದೇ ಒಂದು ಕೊಡ ನೀರು ಹಾಕುತ್ತೇನೆ. ಸಾಯುವವನ ಬಾಯಿಗೆ ಹಾಕುವುದು ನಾಲ್ಕು ಹನಿ ನೀರು ಎನ್ನುವುದು ನನಗೆ ಗೊತ್ತು. ಕೊಡಪಾನ ಎಂದು ಹೇಳಿದ್ದು ಕೇವಲ ನನ್ನ ಪಿತೃಭಕ್ತಿಯ ಪ್ರದರ್ಶನಕ್ಕೆ ಅಷ್ಟೆ’ ಎಂದು ಉತ್ತರಭೂಪನ ಅರ್ಥಕ್ಕೆ ತೊಡಗುವ ಸಾಮಗರು ಬ್ರಹ್ಮ, ವಿಷ್ಣು, ಮಹೇಶ್ವರ, ಇಂದ್ರ ಹೀಗೆ ಎಲ್ಲರನ್ನೂ ಹೀಗಳೆಯುತ್ತಾರೆ.

‘ಬ್ರಹ್ಮನ ಪೀಠ ಕಮಲ. ಬಳುಕುವ ಕಮಲದ ಪೀಠ ಎಂದೂ ಸ್ಥಿರವಲ್ಲ. ಬಹುತೇಕ ಜನ ತಮ್ಮ ಜೀವನದ ಅರ್ಧ ಆಯುಷ್ಯವನ್ನು ನಿದ್ದೆಯಲ್ಲಿಯೇ ಕಳೆಯುತ್ತಾರೆ. ಸೃಷ್ಟಿಕರ್ತನಾದ ಬ್ರಹ್ಮ ಕೂಡ ನಿದ್ದೆಯಲ್ಲಿಯೇ ಆಯುಷ್ಯ ಕಳೆಯುತ್ತಾನೆ. ಯಾಕೆಂದರೆ ಕಮಲ ಹಗಲು ಹೊತ್ತಿನಲ್ಲಿ ಮಾತ್ರ ಅರಳಿರುತ್ತದೆ. ರಾತ್ರಿ ಮುದುಡುತ್ತದೆ. ಮುದುಡಿದ ಕಮಲದಲ್ಲಿ ನಿದ್ದೆ ಬಿಟ್ಟು ಬೇರೇನು ಮಾಡಲು ಸಾಧ್ಯ? ಬೇರೆ ಏನನ್ನೂ ಮಾಡುತ್ತಿರಲಿಲ್ಲ ಎನ್ನುವುದಕ್ಕೆ ನನ್ನ ಬಳಿ ಸಾಕ್ಷ್ಯ ಇದೆ. ಬ್ರಹ್ಮನ ಮಾನಸ ಪುತ್ರ ನಾರದ. ಯಾಕೆಂದರೆ ಮುದುಡಿದ ತಾವರೆಯಲ್ಲಿ ಬ್ರಹ್ಮನಿಗೆ ಅಲ್ಲಾಡಲು ಆಗಲ್ಲ. ಇನ್ನು ತಾಯಿ ಗರ್ಭಿಣಿ ಆಗುವುದು ಹೇಗೆ?  ಅದಕ್ಕೇ ನಾರದ ಮಾನಸ ಪುತ್ರ’.

ಸಾಮಗರ ಉತ್ತರಭೂಪನ ಪ್ರಕಾರ ಸ್ವರ್ಗದಲ್ಲಿ ಹೆಬ್ಬಾಗಿಲು ಹಿಂದಕ್ಕೆ ಇದೆ. ಕಾರಣ? ರಾಕ್ಷಸರು ದಾಳಿ ಮಾಡಿದಾಗ ಓಡಲು ಬೇಕಲ್ಲ. ಇಂದ್ರ ಮಾತ್ರ ಓಡುವುದಲ್ಲ. 33 ಕೋಟಿ ದೇವತೆಗಳೂ ಓಡಬೇಕಲ್ಲ. ಅದಕ್ಕೇ ಸ್ವರ್ಗದಲ್ಲಿ ಹಿಂಬಾಗಿಲೇ ಹೆಬ್ಬಾಗಿಲು. ಕೃಷ್ಣ ದೇವರಾಗಿದ್ದು ಯಾಕೆ ಗೊತ್ತೇ? 16,008 ಪತ್ನಿಯರ ಗಂಡ ಆತ. ಅಷ್ಟೊಂದು ಪತ್ನಿಯರನ್ನು ಸಂಭಾಳಿಸುವವ ದೇವರೇ ಆಗಿರಬೇಕು. ಅದಕ್ಕೇ ನಾನು ದೇವರಾಗುವ ಯತ್ನದಲ್ಲಿ ಇದ್ದೇನೆ. ಉದ್ಯೋಗಂ ಪುರುಷ ಲಕ್ಷಣಂ ಎನ್ನುತ್ತಾರೆ. ಅಂದರೆ ಪುರುಸೊತ್ತು ಇದ್ದಾಗ ಮೀಸೆ ತಿರುವುವುದೇ ಉದ್ಯೋಗ. ಅದಕ್ಕೇ ಹಾಗೆ ಹೇಳುತ್ತಾರೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆ ಇದೆ. ಇದಕ್ಕೆ ವ್ಯತಿರಿಕ್ತವಾಗಿದ್ದು ಮೀಸೆ ಮಾತ್ರ. ಮೀಸೆ ಗಿಡವಾಗಿದ್ದಾಗ ಬಗ್ಗಲ್ಲ. ಮರವಾದಾಗಲೇ ಬಗ್ಗುವುದು. ಸೈನಿಕರು ಮನುಷ್ಯರಲ್ಲ. ಮನುಷ್ಯರಾದ ಯಾರೂ ಆಯುಧವನ್ನು ಕೈಯಲ್ಲಿ ಹಿಡಿದಿರುವುದಿಲ್ಲ. ಸೈನಿಕರು ನಡೆಸುವ ಹಿಂಸೆ, ಅನಾಚಾರ, ಅತ್ಯಾಚಾರವನ್ನು ನೋಡಿದರೆ ಅವರನ್ನು ಮನುಷ್ಯರು ಎಂದು ಹೇಳಲಾಗದು. ಹೀಗೆ ಉತ್ತರಭೂಪನ ಮಾತುಗಳು ಪ್ರೇಕ್ಷಕರನ್ನು ನಗೆಯ ಕಡಲಲ್ಲಿ ತೇಲಿಸುವ ಹಾಗೆ ವಿಚಾರಕ್ಕೂ ಹಚ್ಚುತ್ತಿದ್ದವು.

ಯಕ್ಷಗಾನ ಕಲೆಯ ಬಗ್ಗೆ ಅವರಿಗೆ ವಿಪರೀತ ಪ್ರೀತಿ ಇತ್ತು. 38 ವರ್ಷಗಳು ಬೇರೆ ಬೇರೆ ಮೇಳದಲ್ಲಿ ಕುಣಿದ ಅವರು ನಂತರ ‘ಸಂಯಮಂ’ ಎಂಬ ತಂಡ ಕಟ್ಟಿಕೊಂಡು ತಾಳಮದ್ದಳೆ ಕೂಟ ನಡೆಸುತ್ತಿದ್ದರು. ‘ನಿಮ್ಮಲ್ಲಿ ಅವರಿದ್ದಾರಾ, ಇವರಿದ್ದಾರಾ ಎಂದೆಲ್ಲಾ ಕೇಳಿದರೆ ನಮ್ಮದು ಕೂಟ ಇಲ್ಲ. ನಮ್ಮಲ್ಲಿ ಕಲಾವಿದರು ಇದ್ದಾರೆ’ ಎಂದು ನೇರವಾಗಿಯೇ ಹೇಳುತ್ತಿದ್ದ ಅವರು ಯಕ್ಷಗಾನ ಯಾವಾಗ ವ್ಯಕ್ತಿ ಕೇಂದ್ರಿತವಾಯಿತೋ ಆಗಲೇ ಅದು ಬೆಲೆ ಕಳೆದುಕೊಂಡಿತು ಎನ್ನುತ್ತಿದ್ದರು. ಈಗ ಯಕ್ಷಗಾನಕ್ಕೆ ಪ್ರೇಕ್ಷಕರು ಬರುವುದಿಲ್ಲ. ಬರುವ ಮಂದಿಯಲ್ಲಿ ಒಂದಿಷ್ಟು ಜನ ಭಾಗವತನಿಗೆ, ಇನ್ನಷ್ಟು ಜನ ಹಾಸ್ಯಗಾರನಿಗೆ, ಪ್ರಮುಖ ವೇಷಧಾರಿ ನೋಡಲು ಬರುತ್ತಾರೆ. ಯಕ್ಷಗಾನವನ್ನೇ ನೋಡಲು ಬರುವವರು ಎಷ್ಟು ಮಂದಿ ಎಂಬುದು ಅವರ ಪ್ರಶ್ನೆ. ಯಕ್ಷಗಾನ ಮಾತ್ರ ದಿಢೀರನೆ ಸಿದ್ಧವಾಗುತ್ತದೆ ಎಂದರೆ ಅದಕ್ಕೆ ಬೆಲೆ ಇಲ್ಲ. ಯಕ್ಷಗಾನಕ್ಕೂ ಶ್ರಮ ಪಡಬೇಕು ಎಂದು ಹೇಳುತ್ತಿದ್ದ ಸಾಮಗ ಈಗ ಮರೆಯಾಗಿದ್ದಾರೆ. ಅಲ್ಲಿಗೆ ಯಕ್ಷಲೋಕದ ಒಂದು ವರ್ಣರಂಜಿತ ಯುಗ ಮುಗಿದಿದೆ. ಸಾಮಗ ಪರಂಪರೆ ಮುಂದುವರಿಸಲು ಅವರ ಪುತ್ರ ಪ್ರದೀಪ ಸಾಮಗ ಇದ್ದಾರೆ ಎನ್ನುವುದೇ ಸಮಾಧಾನ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.