ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆನಪು ಅನಂತ’ | ಮನೆ ಹೊರಗೆ ಪೊಲೀಸ್...ಮನೆಯೊಳಗೆ ಡಯಾಲಿಸಿಸ್

‘ನೆನಪು ಅನಂತ’– ಎಸ್ತರ್‌ ಅನಂತಮೂರ್ತಿ ಮನದಾಳ
Last Updated 3 ಡಿಸೆಂಬರ್ 2022, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಯು.ಆರ್. ಅನಂತಮೂರ್ತಿ ಮನೆಯೊಳಗೆ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದರೆ, ಹೊರಗೆ ಪೊಲೀಸರು ನಿಂತಿದ್ದರು. ಇನ್ನೊಂದು ಕಡೆ ಸಾಹಿತಿಗಳು ಪ್ರತಿಭಟನೆ ಕೂತಿದ್ದರು. ಕೊನೆಗಾಲದಲ್ಲಿ ಅವರು ಹೇಳಿದ್ದೊಂದು ಮಾತನ್ನು ತಪ್ಪಾಗಿ ಅರ್ಥೈಸಿ ಅನೇಕರು ಸಾಕಷ್ಟು ಹಿಂಸೆ ಕೊಟ್ಟಿದ್ದರು.’

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಅನಂತಮೂರ್ತಿ ಅವರ ನೆನಪುಗಳ ಬುತ್ತಿಯನ್ನು ಅವರ ಪತ್ನಿ ಎಸ್ತರ್‌ ಅವರು ಹಂಚಿಕೊಂಡಿದ್ದು ಹೀಗೆ. ‘ನೆನಪು ಅನಂತ: ಯು.ಆರ್. ಅನಂತಮೂರ್ತಿ’ ಸಂವಾದದಲ್ಲಿ ಅವರು ಸಾಹಿತಿ ವನಮಾಲಾ ವಿಶ್ವನಾಥ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದಾಗ ಹಲವು ಭಾವನಾತ್ಮಕ ಕ್ಷಣಗಳು ಮರು ಅನಾವರಣಗೊಂಡವು.

ಮೊದಲ ಪಿಯು ವಿದ್ಯಾರ್ಥಿನಿಯಾಗಿದ್ದಾಗ ತಮಗೆ ಇಂಗ್ಲಿಷ್‌ ಪಾಠ ಹೇಳಲು ಬಂದ ಅನಂತಮೂರ್ತಿ ಅವರತ್ತ ಆಕರ್ಷಿತರಾದ ಸಂದರ್ಭವನ್ನು ಎಸ್ತರ್ ಮುಗುಳುನಗೆಯೊಂದಿಗೆ ನೆನಪಿಸಿಕೊಂಡರು. ವಿಲಿಯಂ ಬ್ಲೇಕ್‌ ಪದ್ಯ, ಶೇಕ್ಸ್‌ಪಿಯರ್‌ನ ‘ಟೆಂಪೆಸ್ಟ್‌’ ನಾಟಕವನ್ನು ಬಣ್ಣಿಸುತ್ತಿದ್ದ ರೀತಿ ಯಿಂದಲೇ ಅವರತ್ತ ಆಕರ್ಷಣೆ
ಗೊಂಡಿದ್ದನ್ನು, ಸಂಪ್ರದಾಯಸ್ಥ ಕುಟುಂಬದಲ್ಲಿನ ಎಲ್ಲರೂ ತಮ್ಮದೇ ಲೋಕದಲ್ಲಿದ್ದಾಗ ಸ್ನೇಹಿತರನ್ನೇ ಮಾಡಿಕೊಳ್ಳದ ತಮ್ಮಂಥ ಅಮಾಯಕ ಹುಡುಗಿ ಮೇಷ್ಟರಿಗೆ ಮೋಹಿತರಾದದ್ದನ್ನು ಅವರು ‘ನೆನಪು ಅನಂತ’ ಕೃತಿಯಲ್ಲಿ ಬರೆದ ಸಾಲುಗಳನ್ನು ಓದುವ ಮೂಲಕ ದಾಟಿಸಿದರು.

ತಮ್ಮ ಬಗೆಗೆ ಏನೆಲ್ಲ ಅನಿಸುತ್ತಿದೆಯೋ ಎಂದು ಒಂದು ಟಿಪ್ಪಣಿ ಬರೆಯುವಂತೆ ತರಗತಿಯ ಎಲ್ಲ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೂ ಅನಂತಮೂರ್ತಿ ಹೇಳಿದ್ದರು. ಆಗ ಎಸ್ತರ್‌ ಬರೆದ ಸವಿವರವಾದ ಬರಹವನ್ನು ಅವರು ವಿಶೇಷವಾಗಿ ಗಮನಿಸಿ, ‘ಚೆನ್ನಾಗಿ ಬರೆದಿರುವೆ’ ಎಂದು ನೋಡಿ ನಗೆ ಬೀರಿದ್ದನ್ನು ಸ್ಮರಿಸಿದರು.

ಮನೆಪಾಠದ ನೆಪ ಮಾಡಿಕೊಂಡು ತಮ್ಮಲ್ಲಿಗೆ ಬಂದ ಎರಡು ಜಡೆಯ ಹುಡುಗಿಯ ಮೇಲೆ ತಮಗೂ ಪ್ರೀತಿ ಹುಟ್ಟಿದ್ದನ್ನು ಅನಂತಮೂರ್ತಿ ಅವರೂ ‘ಸುರಗಿ’ ಕೃತಿಯಲ್ಲಿ ದಾಖಲಿಸಿರುವು ದನ್ನು ವನಮಾಲಾ ಉಲ್ಲೇಖಿಸಿದರು.

‘ಅಂತರ್ಧರ್ಮೀಯ ಮದುವೆ ಯಾದರೂ ತಮಗೆ ಹೊಂದಿಕೊಳ್ಳಲು ಕಷ್ಟವೇನೂ ಆಗಲಿಲ್ಲ. ಮಕ್ಕಳ ಮೇಲೆ ಯಾವ ಆಚರಣೆಯನ್ನೂ ಹೇರಲಿಲ್ಲ’ ಎಂದ ಎಸ್ತರ್‌, ಸದಾ ಜನರ ನಡುವೆ ಇರುತ್ತಿದ್ದ ತಮ್ಮ ಪತಿಯ ಮೇಲೆ ಅಸೂಯೆ ಹುಟ್ಟುತ್ತಿತ್ತು ಎಂದಾಗ ಸಭಿಕರಲ್ಲಿ ನಗೆಯುಕ್ಕಿತು.

ಹತ್ತು ತಿಂಗಳ ಮಗು ಶರತ್‌ನನ್ನು ಕರೆದುಕೊಂಡು ತಾವೊಬ್ಬರೇ ಇಂಗ್ಲೆಂಡ್‌ಗೆ ಹೋದ ಸಂದರ್ಭವನ್ನು ಅವರು ನೆನಪಿಸಿಕೊಂಡರು. ಫ್ಲ್ಯಾಟ್‌ ಒಂದರಲ್ಲಿ ಆಗಲೇ ಅನಂತಮೂರ್ತಿ ‘ಸಂಸ್ಕಾರ’ ಬರೆದು ಕೈಗಿತ್ತಿದ್ದನ್ನೂ
ಸ್ಮರಿಸಿದರು. ಆಗ ತಮಗೆ ಸಂಪೂರ್ಣವಾಗಿ ಗ್ರಹಿಸಲಾಗದೇ ಇದ್ದ ಆ ಕಾದಂಬರಿ ಆಮೇಲೆ ವಿಶ್ವಮಟ್ಟಕ್ಕೆ ವ್ಯಾಪ್ತಿಸಿದ್ದನ್ನು ಕಂಡು ಬೆರಗುಗೊಂಡಿದ್ದಾಗಿ ಹೇಳಿದರು.

‘ವಯಸ್ಸು 80 ದಾಟಿದರೂ ಯೌವನದ ಕಳೆ ಇತ್ತು’ ಎಂದು ಅನಂತಮೂರ್ತಿ ಅವರ ಬಗೆಗೆ ಎಸ್ತರ್‌ ಬರೆದಿದ್ದ ಸಾಲು ಹಾಗೂ ‘ವಯಸ್ಸು 70 ದಾಟಿದರೂ ಯೌವನದ ಕಳೆ ಹಾಗೆಯೇ ಇದೆ’ ಎಂದು ಅನಂತಮೂರ್ತಿ ಬರೆದ ಸಾಲನ್ನು ಒಂದಾದಮೇಲೆ ಒಂದನ್ನು ಹೇಳಿ ವನಮಾಲಾ ವಿಶ್ವನಾಥ ಇಬ್ಬರ ಬಾಂಧವ್ಯದ ಗಟ್ಟಿತನವನ್ನು ತೆರೆದಿಟ್ಟರು.

‘82ರ ಯುವತಿ’

‘ಮನೆಗೆ ಬರುವ ಜನರನ್ನು ಸಂಭಾಳಿಸಬೇಕಿತ್ತು. ಸದಾ ಜನರ ಜತೆಗೇ ಇರುತ್ತಿದ್ದ ಅನಂತಮೂರ್ತಿ ಅವರಲ್ಲಿ ನನಗೂ ಸ್ವಲ್ಪ ಜಾಗ ಕೊಡಿ ಎಂದು ಕೇಳಿದ್ದಿದೆ. ಅದಕ್ಕೇ ನಾನು ಸ್ಕೂಲಿಗೆ ಸೇರಿದೆ. 20 ವರ್ಷ ಕಾಮನ್‌ ಸ್ಕೂಲ್‌ನಲ್ಲಿ ಕೆಲಸ ಮಾಡಿದೆ. ಆರ್ಥಿಕವಾಗಿಯೂ ನಮಗೆ ಅದರಿಂದ ಅನುಕೂಲವಾಯಿತು. ಮಕ್ಕಳ ಕಲಿಕೆಗೂ ಮನೆಯ ವಾತಾವರಣ ಪೂರಕವಾಯಿತು’ ಎಂದು ಎಸ್ತರ್‌ ನೆನಪಿಸಿಕೊಂಡರು.

ಅನಂತಮೂರ್ತಿ ಅಗಲಿದ ಒಂದು ತಿಂಗಳ ನಂತರ ತಾವು ಊರೂರು, ದೇಶ ಸುತ್ತಲಾರಂಭಿಸಿದ್ದು ಹಾಗೂ ಹೊಸ ಸ್ನೇಹಿತರನ್ನು ಸಂಪಾದಿಸಿದ್ದನ್ನು ಹೇಳಿಕೊಂಡರು. ನೆಟ್‌ಫ್ಲಿಕ್ಸ್‌ನಲ್ಲಿ ಬರುವ ಸಿನಿಮಾಗಳನ್ನು ನೋಡುತ್ತಾ ಕಾಲಕಳೆಯುವುದು ತಮ್ಮ ಈಗಿನ ಅಭ್ಯಾಸ ಎಂದರು.

ಅದಕ್ಕೇ ಅವರನ್ನು ‘82ರ ಯುವತಿ’ ಎಂದು ವನಮಾಲಾ ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT