ಮಸಣದಲ್ಲಿ ಮಾನವೀಯತೆ

ಬುಧವಾರ, ಏಪ್ರಿಲ್ 24, 2019
28 °C

ಮಸಣದಲ್ಲಿ ಮಾನವೀಯತೆ

Published:
Updated:
Prajavani

ಈಗ್ಗೆ ಹದಿಮೂರು ವರ್ಷಗಳ ಹಿಂದೆ ಇದೇ ಆಗಸ್ಟ್‌ 2014ರಲ್ಲಿ ನಮ್ಮ ಕುಟುಂಬದವರೆಲ್ಲ ಅತ್ಯಂತ ಪ್ರೀತಿಸುತ್ತಿದ್ದ, ಗೌರವಿಸುತ್ತಿದ್ದ ನನ್ನ ದೊಡ್ಡಮ್ಮನವರು ವಿಧಿವಶರಾದಾಗ ಹೆಣ್ಣು ಗಂಡಾದಿಯಾಗಿ ಇಡೀ ಕುಟುಂಬ ರೋದಿಸಿದ್ದು, ಕಂಬನಿಗರೆದಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

72 ವರ್ಷ ವಯಸ್ಸಾದರೂ ಅವರು ಕುಟುಂಬದ ಎಲ್ಲರ ಮೇಲೆ ಮೂಡಿಸಿದ ಛಾಪು ಆ ದುಃಖಕ್ಕೆ ಕಾರಣವಾಗಿತ್ತು. ಮಸಣದಲ್ಲಿ ಚಿತೆಗಿಟ್ಟಾಗಲಂತೂ ಎಲ್ಲರ ರೋದನ ಮುಗಿಲು ಮುಟ್ಟಿತ್ತು. ಅಂತಹ ವ್ಯಕ್ತಿತ್ವ ಅವರದ್ದು.

ಸಂಸ್ಕಾರದ ಮೂರನೆಯ ದಿನ ಮಸಣಕ್ಕೆ ಹೋಗಿ ಹಾಲು ತುಪ್ಪ ಬಿಟ್ಟು ಅಸ್ಥಿ ಹಾಗೂ ಬೂದಿಯನ್ನು ತಂದು ಸಂಗಮದಲ್ಲಿ ವಿಸರ್ಜನೆ ಮಾಡುವುದು ನಮ್ಮ ಸಂಪ್ರದಾಯ. ಅಂತೆಯೆ ಕುಟುಂಬದವರೆಲ್ಲರೂ ಮಸಣಕ್ಕೆ ಹೋದೆವು. ಅಲ್ಲಿಯ ಕಾವಲುಗಾರನನ್ನು ಕುಟುಂಬದ ಹಿರಿಯ ಗಂಡಸರು ಅಸ್ಥಿ ಗಡಿಗೆಯನ್ನು ಕೇಳಲು ಅತ ತುಸು ಕೋಪದಿಂದಲೇ ‘ನೀವೇನು ಬೂದಿ ತುಂಬಿಡಕ್ಕೆ ನನಗೆ ಹೇಳಿದ್ರಾ? ನೀವೇ ಹೇಳದೆ ನಾನು ಹೆಂಗೆ ತೆಗೆದಿಡಲಿ?’ ಎಂದುಬಿಟ್ಟ.

ಒಮ್ಮೆಗೇ ಎಲ್ಲರೂ ಗಾಬರಿಯಿಂದ ಎಂಥ ಕೆಲಸ ಮಾಡಿದೆವು ಎಂದು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. (ವಾಸ್ತವವಾಗಿ ಚಿತೆ ಆರಿದ ಮೇಲೆ ಅಸ್ಥಿ ಮತ್ತು ಬೂದಿಯನ್ನು ಒಂದು ಗಡಿಗೆಯಲ್ಲಿ ತುಂಬಿಸಿಡುವ ವ್ಯವಸ್ಥೆಯನ್ನು ಅಲ್ಲಿ ಮಸಣ ಕಾಯುವಾತನಿಗೆ ವಹಿಸಿ ಬರಬೇಕಾದ್ದು ಅಲ್ಲಿನ ನಿಯಮವಂತೆ, ಅತಿಯಾದ ದುಃಖದಲ್ಲಿ ಯಾರಿಗೂ ಅದರ ನೆನಪೇ ಇಲ್ಲದೆ ವಾಪಸಾಗಿದ್ದೆವು.)

ಅಲ್ಲೇ ಇದ್ದ ನಾನು ತುಂಬಾ ನೋವಿನಿಂದ ಅಯ್ಯೋ ಎಂಥಾ ಕೆಲಸ ಆಯ್ತು ಏನು ಮಾಡೋದು ಈಗ ಎಂದು ದಿಕ್ಕೇ ತೋಚದಂತೆ ನಿಂತಾಗ, ಆತ ತನ್ನ ಗುಡಿಸಲೊಳಗೆ ಹೋಗಿ ಒಂದು ಅಸ್ಥಿ ತುಂಬಿದ ಗಡಿಗೆಯನ್ನು ತಂದು ನಮ್ಮ ಮುಂದೆ ಹಿಡಿದು, ‘ತಗೊಳ್ಳಿ ನೀವು ಯಾರೂ ಹೇಳ್ದೆ ಇದ್ರೂ ಈ ಮೇಡಮ್ಮೋರ ಮುಖ ನೋಡಿ ನಾನೆ ತುಂಬಿಟ್ಟಿದ್ದೆ. ಅವ್ರು ಅವತ್ತು ಬಹಳಾ ಅಳ್ತಿದ್ದನ್ನ ನೋಡಿ ಅವರ ಹತ್ರದ್ದೇ ಸಾವು ಅಂತ ತೆಗೆದಿಟ್ಟಿದ್ದೆ ಸ್ವಾಮಿ’ ಎಂದ.

ನಾನು ಅಚ್ಚರಿ ಮತ್ತು ಸಂತೋಷದಿಂದ ಒಮ್ಮೆ ಆತನ ಮುಖವನ್ನು ದಿಟ್ಟಿಸಿದೆ. ಕೂಡಲೆ ಆತ ‘ಮೇಡಮ್ಮೋರೆ ನಾನು ನಿಮ್ಮ ಆಫೀಸಲ್ಲಿ ಬಾಯ್ಲರ್‌ಗೆ ಸೌದೆ ಒಡೆಯೋಕೆ ಬರ‍್ತಿದ್ದೆ. ನನ್ನ ಸೌದೆ ಬಿಲ್ಲನ್ನ ನೀವೆ ಮಾಡ್ತಿದ್ದಿರಿ. ನೀವು ನನ್ನ ಮರ‍್ತಿರಬೌದು ನಾನು ಮರ‍್ತಿಲ್ಲ. ಯಾಕಂದ್ರೆ ಎಷ್ಟೋ ಸಲ ಸ್ಯಾನೆ ರಜ ಬಂದು ಬಿಲ್ ತಡ ಆಗುತ್ತೆ ಅಂತ ಕೇಳ್ಕಂಡಾಗ, ನೀವು ಜಲ್ದಿ ಬಿಲ್ ಪಾಸ್ ಮಾಡ್ಕೊಟ್ಟಿದ್ರಿ ಮೇಡಮ್ಮೋರೆ’ ಎಂದಾಗ ನನಗೂ ಅಚ್ಚರಿಯೊಂದಿಗೆ ಕಣ್ತುಂಬಿ ಬಂತು. ಹತ್ತು ವರ್ಷಗಳ ಹಿಂದೆ ನಾನು ಲೆಕ್ಕಪತ್ರ ವಿಭಾಗದಲ್ಲಿದ್ದಾಗ ಆತನನ್ನು ನೋಡಿದ್ದು ನೆನಪಾಗಿ ‘ಹೌದು ತುಂಬಾ ಥ್ಯಾಂಕ್ಸ್, ನಿಮ್ಮಿಂದ ತುಂಬಾ ಉಪಕಾರವಾಯ್ತು’ ಎಂದೆ.

ಕೂಡಲೇ ಆತ ‘ಇರ‍್ಲಿ ಬುಡಿ ಮೇಡಮ್ಮೋರೆ. ಅಷ್ಟು ದೊಡ್ಮಾತು ಯಾಕೆ. ಮನುಸ್ರು ಮನುಸ್ರಿಗಾಗ್ದಲೆ ಇನ್ಯಾರಾದಾರೂ’ ಅಂದ.

ಆತ ತೋರಿದ ಕೃತಜ್ಞತೆಗೆ ಎಷ್ಟು ಹಣ ಕೊಟ್ಟರೂ ಸಾಲದೆನಿಸಿತು. ಆದರೆ ಹಾಗೇನೂ ಕೊಡಲಿಲ್ಲ. ಕುಟುಂಬದ ಸದಸ್ಯರೆಲ್ಲ ‘ಸದ್ಯ ನಮ್ಮ ರಾಜಿಯಿಂದ ಇವತ್ತು ಎಂಥ ಅಚಾತುರ್ಯ ತಪ್ಪಿತು’ ಎಂದು ಒಂದು ನಿಟ್ಟುಸಿರು ಬಿಟ್ಟು ಮುಂದಿನ ಕಾರ್ಯಕ್ಕೆ ಹೊರಟರು.

ಹೌದು, ನಾವು ಮಾಡಿದ ಸಹಾಯ ಎಂದೋ ನಮ್ಮನ್ನ ಯಾವುದಾದ್ರೂ ರೂಪದಲ್ಲಿ ಯಾವುದಾದ್ರೂ ಸ್ಥಳದಲ್ಲಿ ಕಾಪಾಡುತ್ತೆ ಎಂದು ನನ್ನಮ್ಮ ಪದೇ ಪದೇ ಹೇಳುತ್ತಿದ್ದ ಮಾತು ಸತ್ಯ ಎನಿಸಿತು. ಆತ ಮಸಣದಲ್ಲಿ ಮಾನವೀಯತೆ ಮೆರೆದು, ನಾವು ಮರೆಯದ ವ್ಯಕ್ತಿಯಾದ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !