ಮೊಘಲ್ ರಾಜಕುಮಾರಿಯ ಆತ್ಮಕಥನ

7

ಮೊಘಲ್ ರಾಜಕುಮಾರಿಯ ಆತ್ಮಕಥನ

Published:
Updated:

ಹಿಂದೂ ಮಹಾರಾಣಿ ಆಗಬೇಕೆಂದು ಅಪೇಕ್ಷಿಸಿದ್ದ ಹೆಣ್ಣು ಮೊಘಲ್ ರಾಜಕುಮಾರಿ ಬಾದ್‌ಶಹ ಬೇಗಮ್ ಜಹನಾರಾ. ಇವಳ ಆತ್ಮಕಥೆಯನ್ನು ಲೇಖಕ ಸಂತೆ ನಾರಾಯಣ ಸ್ವಾಮಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ. 1659ರಲ್ಲಿ ಸಹೋದರ ಔರಂಗಜೇಬ್ ಆಕೆಯನ್ನು ಆಗ್ರಾ ಕೋಟೆಯ ಜೆಸ್ಸಾಮಿನ್ ಗೋಪುರದಲ್ಲಿ ಬಂಧನದಲ್ಲಿ ಇರಿಸಿದಾಗ ಆಕೆ ತನ್ನ ಆತ್ಮಕಥೆ ಬರೆದುಕೊಂಡಿದ್ದಳು.

1927ರಲ್ಲಿ ಭಾರತ ಪ್ರವಾಸದಲ್ಲಿದ್ದ ಸ್ವೀಡಿಷ್ ಲೇಖಕಿ ಆ್ಯಂಡ್ರಿಯಾ ಬ್ಯುಟೆನ್ಷನ್‌ಗೆ ದೆಹಲಿಯ ದರ್ಗಾವೊಂದರಲ್ಲಿ ಕಂಡ ಜಹನಾರಾಳ ಸಮಾಧಿ ಕುತೂಹಲ ಹುಟ್ಟಿಸುತ್ತದೆ. ಆಕೆಯ ಕುರಿತು ಮತ್ತಷ್ಟು ತಿಳಿಯಲು ಪ್ರೇರೇಪಿಸುತ್ತದೆ.

ಜೆಸ್ಸಾಮಿನ್ ಗೋಪುರದಲ್ಲಿ ಹುಡುಕಾಡುತ್ತಿದ್ದಾಗ, ಪರ್ಷಿಯನ್ ಭಾಷೆಯ ಈ ಆತ್ಮಕಥೆಯ ಹಸ್ತಪ್ರತಿ ಸಿಗುತ್ತದೆ. ಆ್ಯಂಡ್ರಿಯಾ 1931ರಲ್ಲಿ ಇಂಗ್ಲಿಷ್ ಭಾಷೆಗೆ ಅನುವಾದಿಸುತ್ತಾರೆ. ಸುಮಾರು 260 ವರ್ಷಗಳಿಂದ ಇವರಿಗಾಗಿಯೇ ಕಾದುಕೊಂಡಂತೆ ಕತ್ತಲಲ್ಲಿದ್ದ ಜಹನಾರಾಳ ಜೀವನಕಥೆ ಮತ್ತೊಂದು ಹೆಣ್ಣಿನ ಮೂಲಕ ಹೊರಜಗತ್ತಿಗೆ ತಿಳಿಯುವಂತಾಗುತ್ತದೆ.

ಮೊಘಲ್ ಚಕ್ರವರ್ತಿ ಅಕ್ಬರನ ಶಾಸನದಿಂದಾಗಿ ಮೊಘಲ್ ರಾಜಕುಮಾರಿಯರಿಗೆ ವಿವಾಹವಾಗಲು ಅವಕಾಶವೇ ಇರಲಿಲ್ಲ. ಷಹಜಹಾನ್ ಪುತ್ರಿ ಈಕೆ. ತನ್ನನ್ನು ರಕ್ಷಿಸುವ ಸೋದರನಾಗಿರಲಿ ಎಂದು ಹಿಂದೂ ಮಹಾರಾಜನೊಬ್ಬನಿಗೆ ರಕ್ಷಾಬಂಧನ ಕಟ್ಟುತ್ತಾಳೆ. ಕೊನೆಗೆ ಆತನಲ್ಲಿಯೇ ಪ್ರೀತಿ ಬೆಳೆಸಿಕೊಳ್ಳುತ್ತಾಳೆ. ತನ್ನ ಭಾವಲೋಕದಲ್ಲಿ ಸ್ವಯಂವರ ಸಹ ಏರ್ಪಡಿಸಿಕೊಳ್ಳುತ್ತಾಳೆ. ಆದರೆ ವಿಧಿಯೇ ಬೇರೆಯಾಗಿದ್ದು, ಕೊನೆಗೆ ಅಧ್ಯಾತ್ಮದಲ್ಲಿ ಆಸಕ್ತಳಾಗಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಶಿಷ್ಯೆಯಾಗಿ ಸರಳ ಜೀವನ ಸಾಗಿಸುತ್ತಾಳೆ.

ಹಿಂದೂ ಪುರಾಣದ ವ್ಯಕ್ತಿಗಳ ಜೀವನವನ್ನು ತನ್ನ ಜೀವನದ ಜತೆ ಹೋಲಿಸಿಕೊಳ್ಳಲು ಯತ್ನಿಸಿರುವುದು ಅವಳ ಆತ್ಮಕಥನದಲ್ಲಿ ಕಂಡುಬರುತ್ತದೆ. ಇದು ಜಹನಾರಾ ಹಿಂದೂ ಪುರಾಣ, ಚರಿತ್ರೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಳು ಎನ್ನುವುದಕ್ಕೆ ಸಾಕ್ಷಿ. ‘ನಾನು ಬಾದ್‌ಶಹ ಬೇಗಮಳಲ್ಲವೆ?

ನಾನು ಸಹ ರಾಜದಂಡವಿಡಿದುಕೊಂಡು ರಾಜಾಜ್ಞೆಗಳನ್ನು ಜಾರಿಗೊಳಿಸುವ ಅಧಿಕಾರ ಹೊಂದಿದ್ದೆ. ಆದರೆ ನನಗೆ ಹಿಂದೂ ಚರಿತ್ರೆಯ ನಳನಂತಹ ಇಲ್ಲವೇ ಅಯೋಧ್ಯೆಯ ಶ್ರೀರಾಮನಂತಹ ಗಂಡನೇ ಇಲ್ಲವಲ್ಲ... ದುಃಖ-ದುಮ್ಮಾನ, ರೋಷ ಕೋಪಗಳಿಂದ ನನ್ನಲ್ಲಿಯೇ ನಾನು ಬೆಂದುಹೋದೆ’ ಎನ್ನುವ ಆತ್ಮಕಥೆಯ ಈ ಕೆಲವು ಸಾಲುಗಳು ಆಕೆಯ ಮನೋಲೋಕದ ಪ್ರವೇಶಿಕೆಯಂತೆ ತೋರುತ್ತದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !