ಮೌಲಿಕ, ಸೃಜನಶೀಲ ಸ್ಮರಣೆ

ಭಾನುವಾರ, ಜೂನ್ 16, 2019
28 °C

ಮೌಲಿಕ, ಸೃಜನಶೀಲ ಸ್ಮರಣೆ

Published:
Updated:
Prajavani

ಬೆಟ್ಟದ ನವಿಲುಗಳು

ನಿರ್ಗಮಿಸಿದ ಗೆಳೆಯನ ನೆನಪಿನಲ್ಲಿ ತಾಳ್ಯ ಮತ್ತು ಮಲಗಿಯವರು ಬರೆದಿರುವ ಮುನ್ನುಡಿ 70ರ ದಶಕದ ಕರ್ನಾಟಕದ ತೀವ್ರ ಸಾಮಾಜಿಕ ಕ್ಷೋಭೆ ಮತ್ತು ಅದಕ್ಕೆ ತರುಣಲೋಕದ ಪ್ರತಿಸ್ಪಂದನೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದೆ. ‘ಈ ಕೃತಿ ಚಲಂರ ಕನಸುಗಳೇನಾಗಿದ್ದವು ಎಂಬುದನ್ನು ತಿಳಿಸುತ್ತಲೇ, ಒಂದು ಕಾಲಘಟ್ಟದ ಯುವಕರು ಎಂಥ ಬದುಕನ್ನು ಬಯಸಿದ್ದರೆಂಬುದನ್ನೂ ಅನಾವರಣಗೊಳಿಸುತ್ತದೆ’ ಎಂದು ಅವರು ಸರಿಯಾಗಿಯೇ ಗುರುತಿಸಿದ್ದಾರೆ.

***

ಕೆಲವು ಲೇಖಕರಿರುತ್ತಾರೆ– ಮೌಲಿಕವಾದ ಸಾಕಷ್ಟು ಕಥೆ, ಕವಿತೆಗಳನ್ನು ಬರೆದಿರುತ್ತಾರೆ. ಆದರೆ ಅದನ್ನೆಲ್ಲ ಯೋಜಿಸಿ ಪುಸ್ತಕರೂಪದಲ್ಲಿ ತರಬೇಕೆಂದು ಅವರಿಗೆ ಅನ್ನಿಸುವುದೇ ಇಲ್ಲ. ಇನ್ನು ಕೆಲವರಿರುತ್ತಾರೆ– ಬರೆಯಲು ಶುರು ಮಾಡಿದೊಡನೆಯೇ ಅವರಿಗೆ ಇದನ್ನು ಹೇಗೆ ಯಾವ ರೂಪದಲ್ಲಿ ಪುಸ್ತಕದಲ್ಲಿ ತರಬಹುದು ಎನ್ನುವ ಯೋಚನೆ, ಯೋಜನೆ ಹೊಳೆದಿರುತ್ತದೆ. ಮೊದಲ ಗುಂಪಿಗೆ ಸೇರಿದ ಅಪರೂಪದ ಸೃಜನಶೀಲ ಕಲಾವಿದ ಚಲಂ ಬೆನ್ನೂರಕರ್‌. ಸಂತೆಬೆನ್ನೂರಿನ ಚಲಂ 70ರ ದಶಕದ ಕರ್ನಾಟಕದ ಸಮಾಜವಾದಿ ಕೋಲಾಹಲದ ಉತ್ಪನ್ನ. ಕವಿ, ಕಥೆಗಾರ, ಕಲಾವಿದ, ಸಾಕ್ಷ್ಯಚಿತ್ರ ನಿರ್ಮಾಪಕ, ಆ್ಯಕ್ಟಿವಿಸ್ಟ್‌– ಹೀಗೆ ಬಹುಮುಖ ವ್ಯಕ್ತಿತ್ವದ ಚಲಂ ಬದುಕಿದ್ದಾಗ ಅವರ ಯಾವ ಪುಸ್ತಕಗಳೂ ಪ್ರಕಟವಾಗಲಿಲ್ಲ. ಅವರು ತೀರಿಕೊಂಡ ಎರಡು ವರ್ಷಗಳ ಬಳಿಕ ಸಂಸ್ಮರಣೆಯ ನೆಪದಲ್ಲಿ ಪ್ರಕಟವಾಗಿರುವ ಕೃತಿ ‘ಬೆಟ್ಟದ ನವಿಲುಗಳು’. ಕನ್ನಡದ ಅತ್ಯುತ್ತಮ ಪದ್ಯ–ಗದ್ಯ ಬರಹಗಾರರಾದ ಚಂದ್ರಶೇಖರ ತಾಳ್ಯ ಮತ್ತು ಕೇಶವ ಮಳಗಿ ಸಂಪಾದಿಸಿರುವ ಈ ಕೃತಿ ಒಂದು ಸ್ವತಂತ್ರ ಸೃಜನಶೀಲ ಕೃತಿಯಂತೆಯೇ ರೂಪುಗೊಂಡಿದೆ. ಇದನ್ನು ಸಂಸ್ಮರಣಾ ಕೃತಿಯೆಂದು ಕರೆದಿದ್ದರೂ, ಇಲ್ಲಿ ಚಲಂ ಬಗ್ಗೆ ಇತರರು ಬರೆದ ಲೇಖನಗಳಿಲ್ಲ. ಎಲ್ಲವೂ ಚಲಂ ಅವರೇ ಬರೆದದ್ದು.

ಕನ್ನಡದಲ್ಲಿ ಬರೆದ ಕಥೆ, ಕವಿತೆಗಳಲ್ಲದೆ, ಇಂಗ್ಲಿಷ್‌ನಲ್ಲಿ ಬರೆದ ಲೇಖನ, ಸಂದರ್ಶನ, ಪತ್ರಗಳ ಕನ್ನಡ ಅನುವಾದಗಳ ಸಂಗ್ರಹ ಮೊತ್ತ ಈ ಕೃತಿ. ‘ಕ್ರಾಂತಿ ಪ್ರೀತಿ ಇತ್ಯಾದಿ ಚಿಲ್ಲರೆ ಸಂಗತಿಗಳು ಎಂಬ ವಿಡಂಬನೆಯು’ ಎನ್ನುವ ದೀರ್ಘ ತಲೆಬರಹದ ಕಥೆಯೊಂದಿಗೆ ಪುಸ್ತಕ ಆರಂಭವಾಗುತ್ತದೆ. ಕಥೆ, ಪ್ರಬಂಧ, ಸ್ವಗತ, ನಾಟಕ, ಕವಿತೆ ಎಲ್ಲವೂ ಆಗಿರುವ ಈ ಬರಹ, ಚಲಂ ವ್ಯಕ್ತಿತ್ವದಂತೆ ವಿಕ್ಷಿಪ್ತ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಕಥೆಗೆ ಅಲ್ಲಲ್ಲಿ ಸಬ್‌ಹೆಡಿಂಗ್‌ ಕೊಟ್ಟು ಮುಂದಿನ ತಿರುವಿನ ಕುರಿತು ಕುತೂಹಲ ಹುಟ್ಟಿಸುವ ನಿರೂಪಣೆ ಗಮನ ಸೆಳೆಯುತ್ತದೆ. ಇರುವ ಇನ್ನೊಂದು  ಕಥೆ ‘ಆಗಮನ ಮತ್ತು ನಿರ್ಗಮನ’ ಕಥೆಯಾಗದ ಪುಟ್ಟ ಟಿಪ್ಪಣಿಯಂತಿದೆ. ಭಾರತೀಯ ಸಂಗೀತಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ ‘ಧ್ವನಿಮುದ್ರಿಕೆಯ ತಾರೆ’ ಗೋಹರ್‌ ಜಾನ್‌ ಕುರಿತ ದೀರ್ಘ ಲೇಖನ, ಕವಿ ಎಚ್‌.ಎಸ್‌.ಶಿವಪ್ರಕಾಶ್‌ ಅವರದೊಂದು ಲೇಖನವನ್ನು ಓದಿ ಅವರಿಗೆ ಬರೆದಿರುವ ಪತ್ರ, ‘ಅತ್ತಿಹಣ್ಣು ಮತ್ತು ಕಣಜ’ ಚಿತ್ರದ ಕುರಿತು ನಿರ್ದೇಶಕ, ಗೆಳೆಯ ಎಂ.ಎಸ್‌.ಪ್ರಕಾಶ್‌ಬಾಬುಗೆ ಬರೆದಿರುವ ವಿಮರ್ಶಾತ್ಮಕ ಪತ್ರ, 20ಕ್ಕೂ ಹೆಚ್ಚು ಕವಿತೆಗಳು– ಹೀಗೆ ಈ ಪುಸ್ತಕ ಸೃಜನಶೀಲ ಕುಸುರಿ ಕೆಲಸದ ಚದುರಿದ ಸಂತೆಯಂತಿದೆ.

ನಿರ್ಗಮಿಸಿದ ಗೆಳೆಯನ ನೆನಪಿನಲ್ಲಿ ತಾಳ್ಯ ಮತ್ತು ಮಲಗಿಯವರು ಬರೆದಿರುವ ಮುನ್ನುಡಿ 70ರ ದಶಕದ ಕರ್ನಾಟಕದ ತೀವ್ರ ಸಾಮಾಜಿಕ ಕ್ಷೋಭೆ ಮತ್ತು ಅದಕ್ಕೆ ತರುಣಲೋಕದ ಪ್ರತಿಸ್ಪಂದನೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದೆ. ‘ಈ ಕೃತಿ ಚಲಂರ ಕನಸುಗಳೇನಾಗಿದ್ದವು ಎಂಬುದನ್ನು ತಿಳಿಸುತ್ತಲೇ, ಒಂದು ಕಾಲಘಟ್ಟದ ಯುವಕರು ಎಂಥ ಬದುಕನ್ನು ಬಯಸಿದ್ದರೆಂಬುದನ್ನೂ ಅನಾವರಣಗೊಳಿಸುತ್ತದೆ’ ಎಂದು ಅವರು ಸರಿಯಾಗಿಯೇ ಗುರುತಿಸಿದ್ದಾರೆ.

ಟಿ.ಜಿ.ವೈದ್ಯನಾಥನ್‌ರನ್ನು ತನ್ನ ಗುರು ಎಂದು ಸ್ವೀಕರಿಸಿದ್ದ; ಕನ್ನಡದ ಅತ್ಯುತ್ತಮ ಸೈನ್‌ಬೋರ್ಡ್‌ ಬರಹಗಾರನಾಗಿದ್ದ; ‘ಕ್ಯಾಪಿಟಲ್‌’ನ ಅರ್ಥ ತಿಳಿದುಕೊಳ್ಳಲು ನರಹರಿರಾವ್‌ ಅವರ ಶಿಷ್ಯತ್ವ ಸ್ವೀಕರಿಸಿದ್ದ; ಸ್ಟೇಟ್‌ ಬ್ಯಾಂಕ್‌ನಲ್ಲಿ ಗುಮಾಸ್ತನ ಕೆಲಸ ಸಿಕ್ಕಿದರೂ ಸೇರಿಕೊಳ್ಳದೆ ಸಿಯೇಡ್ಸ್ (CIEDS) ಸಂಸ್ಥೆ ಸೇರಿ, ಸಾಮಾಜಿಕ ಕಾರ್ಯಕರ್ತನಾಗಿ ಅಹರ್ನಿಶಿ ದುಡಿದ ಚಲಂ ಬೆನ್ನೂರಕರ್‌ ಅವರ ಇಡೀ ವ್ಯಕ್ತಿತ್ವವನ್ನು ಹೀಗೆ ಅವರ ಬರಹಗಳ ಮೂಲಕವೇ ಅನಾವರಣಗೊಳಿಸುವ ವಿಶಿಷ್ಟ ಕ್ರಮದಿಂದಾಗಿ ಇದೊಂದು ಗಮನಾರ್ಹ ಕೃತಿ ಎನ್ನಿಸಿಕೊಳ್ಳುತ್ತದೆ. ಚಲಂರ ಇಲ್ಲಿನ ಕವಿತೆಗಳು ಅವರ ವಿಭಿನ್ನ ಆಲೋಚನಾಕ್ರಮ ಮತ್ತು ಅಭಿವ್ಯಕ್ತಿಯ ಸಂಕೇತಗಳಾಗಿ ಕಾಣಿಸಿಕೊಂಡಿವೆ.

ಕವಿತೆಗಳನ್ನು ಬರೆಯಲು ಚಲಂಗೆ ಇಂಥಹದ್ದೇ ಸಂಗತಿಗಳು ಬೇಕೆಂದಿಲ್ಲ. ಅನ್ನಿಸಿದ್ದು, ಅನ್ನಿಸದ್ದು ಎಲ್ಲವೂ ಇಲ್ಲಿ ಕವಿತೆಗಳಾಗಿವೆ. ‘ಎಲಿಜಬೆತ್‌ ಟೇಲರಳ ಮೊಲೆಗಳ ಮೇಲೆ ಮೆರೆಯುವ ವಜ್ರ’ಗಳಿಂದ ಹಿಡಿದು, ‘ಬಿದಿರು ಮೆಳೆಯೊಡಲ ಸಂಜೆಗತ್ತಲಲ್ಲಿ, ಬರುವ ತಲೆಮಾರುಗಳ ಕತ್ತಿಗೆ ಹೆಣೆವ ಕನಸುಗಳ ಕಂಠೀಹಾರದ’ವರೆಗೆ ಇಲ್ಲಿ ಕವಿತೆಗಳ ವಸ್ತುಗಳಿವೆ. ಆದರೆ ಕಾವ್ಯ, ಬರಹ, ಸಂದರ್ಶನ ಎಲ್ಲದರಲ್ಲೂ ಚಲಂ ಆಶಯ ಒಂದೇ– ‘ಹಳಸಿ ನಾರುವ ಮುನ್ನ/ ತಂದ ಬುತ್ತಿಯ ಬಿಚ್ಚಿ ಕೈತುತ್ತ ಹಂಚೋಣ/ ಕೆರೆಯ ಅಂಗಳದುದ್ದ ಕೊಯ್ದ ಇಟ್ಟಿಗೆಸಾಲು/ ಸುಟ್ಟ ಗೋಡೆಗಳಾಗುವ ಮುನ್ನ.’

ಸದ್ದಿಲ್ಲದೆ ಬರೆಯುತ್ತಾ, ಜನರ ಜೊತೆಗೆ ಬೆರೆಯುತ್ತಾ ಇನ್ನಿಲ್ಲವಾದ ಗೆಳೆಯನೊಬ್ಬನ ಬಗ್ಗೆ ಹೀಗೂ ಒಂದು ವಿಭಿನ್ನ, ಸೃಜನಶೀಲ ಕೃತಿ ಸಂಸ್ಮರಣೆಯನ್ನು ದಾಖಲಿಸಬಹುದು ಎನ್ನುವುದನ್ನು ತೋರಿಸಿರುವುದು ಈ ಕೃತಿಯ ಹೆಗ್ಗಳಿಕೆ. ತಾಳ್ಯ ಮತ್ತು ಮಳಗಿ ಮುನ್ನುಡಿಯಲ್ಲಿ ಬರೆದಂತೆ ಇದೊಂದು ಯಾತನಾಮಯ ಮತ್ತು ಪರಿಶ್ರಮದಾಯಕ ಕೆಲಸವೇ. ಚಲಂ ಆರಂಭಿಕ ಹಂತದಲ್ಲಿ ಬರೆದ ಲೇಖನಗಳು ಮತ್ತು ಕೆಲವು ಕಥೆಗಳು ಸಿಗದಿದ್ದರೂ ಸಿಕ್ಕಷ್ಟನ್ನು ಮೊಗೆದು ಬಾಚಿ ಕೊಟ್ಟಿರುವ ಅವರ ಪ್ರಯತ್ನ ಸ್ತುತ್ಯರ್ಹ. ಈಗ ಬರುತ್ತಿರುವ ಕೆಲವು ಸ್ಮರಣಗ್ರಂಥಗಳಂತೆ ಹಳಹಳಿಕೆ ಮತ್ತು ಅರ್ಧಸತ್ಯಗಳ ಸಂಗ್ರಹವಲ್ಲದ ಈ ‘ಫ್ರೀಸ್ಟೈಲ್‌’ ಪುಸ್ತಕದ ಮುದ್ದಿಡುವಂತಹ ಮುದ್ರಣ, ಹೆಚ್‌.ಆರ್‌.ಆಪ್ತ ಅವರ ಮುಖಪುಟ ಚಿತ್ರ ಮತ್ತು ಎಂ.ಎಸ್‌.ಪ್ರಕಾಶಬಾಬು ವಿನ್ಯಾಸ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.

ಸಿವಕಾಸಿಯ ಬಾಲಕಾರ್ಮಿಕರ ಬಗ್ಗೆ ‘ಕುಟ್ಟಿ ಜಪಾನಿನ್‌ ಕುಯಂದೈಗಳ್‌’ ಲೈಂಗಿಕ ಅಲ್ಪಸಂಖ್ಯಾತರ ಕುರಿತ ‘ಆಲ್‌ ಅಬೌಟ್‌ ಅವರ್ ಫಮಿಲಾ’, ‘ಲೆಸನ್ಸ್‌ ಫ್ರಂ ಲಾತೋರ್‌’ ಮತ್ತಿತರ ಸಾಕ್ಷ್ಯಚಿತ್ರಗಳ ಮೂಲಕ 90ರ ದಶಕದಲ್ಲಿ ಸುದ್ದಿ ಮಾಡಿದ್ದ ಚಲಂ, ಈ ಕೃತಿಯ ಮೂಲಕ ಮತ್ತೊಮ್ಮೆ ಜೀವಂತರಾಗಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.

ಲೇ: ಚಲಂ ಬೆನ್ನೂರಕರ್

ಪ್ರ: ಕಥನ ಪ್ರಕಾಶನ, ಬೆಂಗಳೂರು

ಮೊ: 94483 34622

ಪು: 125

ಬೆ: ₹ 10

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !