ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಪುಟ್ಟ ಪೆಟ್ಟಿಗೆಯಲ್ಲಿ ಕಂಡ ದೊಡ್ಡ ಜಗತ್ತು

Last Updated 30 ಜನವರಿ 2021, 19:30 IST
ಅಕ್ಷರ ಗಾತ್ರ

ಎನ್.ಬಿ. ಚಂದ್ರಮೋಹನ್ ತಮ್ಮ ಕಾವ್ಯದ ನಿರಂತರ ಓದಿನ ಫಲವಾಗಿ ಮೆಚ್ಚಿಕೊಂಡಿರುವ, ವಿವಿಧ ದೇಶಗಳ ಇಪ್ಪತ್ತು ಕವಿಗಳ ಪುಟ್ಟ ಕವಿತೆಗಳೂ ಸೇರಿ ಒಟ್ಟು ನಲವತ್ತಾರು ಕವನಗಳ ಅನುವಾದದ ಸಂಕಲನ ಈ ‘ಪುಟ್ಟ ಪೆಟ್ಟಿಗೆ’. ಇಲ್ಲಿ ಅನುವಾದಗೊಂಡಿರುವ ಕವನಗಳು ಹಲವು ಕಾಲ ದೇಶ ಭಾಷೆಗಳಿಂದ ಆಯ್ಕೆ ಮಾಡಿರುವಂತಹವು. ಕವಿತೆಗಳ ರೂಪ, ಹಿನ್ನೆಲೆಗಳು ಬೇರೆ ಬೇರೆಯವು. ಆದರೆ, ಈ ಕವಿತೆಗಳಲ್ಲಿ ನಿರ್ವಹಿಸಿರುವ ತಾತ್ವಿಕ ಚಿಂತನೆಗಳು ವಿಶ್ವಾತ್ಮಕವಾಗಿವೆ. ಜೈವಿಕ, ಅನುಭಾವಿಕ, ಸಾಮಾಜಿಕ, ರಾಜಕೀಯ, ಮಾನವಿಕ ಮೌಲ್ಯಗಳ ಅನ್ವೇಷಣೆಯ ಶೋಧನೆಯ ವಿವರಗಳು ಇಲ್ಲಿ ಕಾವ್ಯತ್ವವನ್ನು ಪಡೆದಿವೆ.

ಪೋಲೆಂಡ್, ಸರ್ಬಿಯಾ, ರಷ್ಯಾ, ಆಫ್ರಿಕಾ, ಪ್ಯಾಲೆಸ್ಟೈನ್ - ಮುಂತಾದ ದೇಶಗಳ ಇಂಗ್ಲಿಷ್ ಅನುವಾದಗಳಿಂದ ಲಭ್ಯವಾಗಿರುವ ಕವಿತೆಗಳನ್ನು ಕನ್ನಡ ಭಾಷೆಗೆ ತರುವುದು ಕಷ್ಟದಾಯಕವಾದದ್ದು. ಏಕೆಂದರೆ ಮೂಲಕವಿತೆಯ ಶರೀರದಲ್ಲಿರುವ ಲಯ, ಛಂದಸ್ಸು, ಭಾವ, ತಾತ್ವಿಕತೆ ಇವೆಲ್ಲಾ ಪರಸ್ಪರ ಪೂರಕವಾಗಿದ್ದು, ಮೂಲ ಭಾಷೆಯಲ್ಲಿ ಪರಿಪೂರ್ಣತೆಯನ್ನು ಪಡೆದಿರುತ್ತವೆ. ಇದು ಕೆಡದಂತೆ ಕನ್ನಡ ಭಾಷೆಗೆ ಒಗ್ಗಿಸಬೇಕು, ಆ ಮೂಲಕ ಕನ್ನಡದ ಓದುಗನಿಗೆ ಅನುಭವಗಳು ಪರಕೀಯವಾಗದಂತೆ ನೋಡಿಕೊಳ್ಳಬೇಕು.

ಇಲ್ಲಿನ ಅನುವಾದಗಳಲ್ಲಿ ಮೂಲ ಧ್ವನ್ಯರ್ಥಗಳನ್ನು ಹಿಡಿದಿಡಲಾಗಿದೆ. ಉತ್ತಮ ಅನುವಾದವು ಮೂಲ ಕವಿತೆಯನ್ನು ಅರ್ಥೈಸುವ ಕ್ರಿಯೆಯೂ ಆಗಿರುತ್ತದೆ. ಧ್ವನಿಶಕ್ತಿಯನ್ನೇ ಅವಲಂಬಿಸಿ ಮಾಡುವ ಕವಿತೆಯ ಅನುವಾದ ತುಂಬಾ ಕಷ್ಟಕರ. ಚಂದ್ರಮೋಹನ್ ಅವರ ಅನುವಾದದ ಸ್ವರೂಪವನ್ನು ತಿಳಿಯಲು ರಷ್ಯಾದ ಬೋರಿಸ್ ಸ್ಲಟ್‍ಸ್ಕಿ ಅವರ ‘ಸಾಗರದಲ್ಲಿ ಕುದುರೆಗಳು’ ಎಂಬ ಕವಿತೆಯನ್ನು ನೋಡಬಹುದು. ಸಮುದ್ರದಲ್ಲಿರುವ ಹಡಗೊಂದನ್ನು ಶತ್ರುಗಳು ಸ್ಫೋಟಿಸುತ್ತಾರೆ. ಅದರಲ್ಲಿದ್ದ ನಾವಿಕರಿಗೆ ಲಭ್ಯವಿದ್ದ ಕೆಲವೇ ಜೀವ ನಾವೆಗಳು ಸಾಕಾಗುತ್ತವೆ. ಅದರೊಳಗಿದ್ದ ಕುದುರೆಗಳು ಸಾಗರದಲ್ಲಿ ಈಜಿ ದಡ ಸೇರುತ್ತೇವೆ ಎಂಬ ಆತ್ಮವಿಶ್ವಾಸದಿಂದ ನಾವೆಗಳನ್ನು ಹಿಂಬಾಲಿಸಿ ಈಜತೊಡಗುತ್ತವೆ. ಅವುಗಳಿಗೆ ನಾಲ್ಕು ಸಾವಿರ ಕಾಲುಗಳಿದ್ದರೂ ಸಾಗರವನ್ನು ಈಜಿ ದಡ ಸೇರಲು ವಿಫಲವಾಗಿ ಸಾಯುತ್ತವೆ. ತನ್ನ ಕಣ್ಣೆದುರೇ ಚೂರು ಉಸಿರಿಗಾಗಿ ಅವು ಪರದಾಡುವುದನ್ನು ಕೊನೆಗೆ ಒದ್ದಾಡಿ ಸತ್ತದ್ದನ್ನು ಕಂಡ ಕವಿಯ ಮನಸ್ಸಿನಲ್ಲಿ ಬಹಳ ದಿನಗಳಾದರೂ ನೆನಪಾಗಿ ಕಾಡುತ್ತದೆ. ಅವನ ಮನಸ್ಸಿನ ಸ್ಥಿತಿಯನ್ನು ವರ್ಣಿಸುವ ಸಾಲುಗಳು ಹೀಗಿವೆ.

‘ಎಷ್ಟೆಲ್ಲ ಘಟನೆಗಳ ಬಲು ಬೇಗ ಮರೆಯುವೆನು,
ಅದೇಕೋ ಆ ನತದೃಷ್ಟ ಕುದುರೆಗಳ
ಸಾವಿನ ನೆನಪು
ನನ್ನೆದೆಯೊಳಗೆಂದಿಗೂ ಮಾಸದ
ನೆನಪು ನೋವು.’

ಇಲ್ಲಿ ಕುದುರೆಗಳು ಅಸಹಾಯಕತೆಯಿಂದ ಇರುವ ಕೋಟ್ಯಂತರ ಮನುಷ್ಯರ ಸಂಕೇತಗಳಾಗಿವೆ. ಯುದ್ಧದಿಂದಾಗಿರುವ ಸಾವು, ನೋವು, ಹಿಂಸೆಗಳಿಂದ ಬದುಕುತ್ತಿರುವ ಮನುಷ್ಯರ ಸ್ಥಿತಿಯನ್ನೂ ಮತ್ತು ನಮ್ಮಲ್ಲಿ ಎಷ್ಟೇ ಸಾಮರ್ಥ್ಯವಿದ್ದರೂ ಸಾವಿನ ಎದುರಿಗೆ ನಾವು ಅಸಹಾಯಕರಾಗುತ್ತೇವೆ ಎಂಬುದನ್ನು ತಿಳಿಸುವ ಈ ಕವನ ಅದನ್ನು ಕಂಡ ವ್ಯಕ್ತಿಗೆ ಅದರ ನೆನಪು ಮತ್ತಷ್ಟು ಹಿಂಸೆಯನ್ನು ಕೊಡುತ್ತದೆ ಎಂಬುದನ್ನೂ ಮನಮುಟ್ಟುವಂತೆ ಅಭಿವ್ಯಕ್ತಿಸುತ್ತದೆ. ಮೇಲಿನ ಸಾಲುಗಳಲ್ಲಿರುವ ಅನುಭವ ನಮಗೆ ಪರಕೀಯವೆನಿಸುವುದೇ ಇಲ್ಲ.

ವಾಸ್ಕೊ ಪೋಪ ಅವರ ‘ಹಂದಿ’, ‘ಕಥೆಯೊಂದರ ಕಥೆ’, ‘ಪುಟ್ಟ ಪೆಟ್ಟಿಗೆ’ಯ ಎಂಟು ಕವಿತಾಗುಚ್ಛ, ತಮ್ಮ ರಚನಾ ಶೈಲಿ, ಅಪರೂಪದ ಪ್ರತಿಮಾ ವಿಧಾನಗಳ ಮೂಲಕ ವಿಶೇಷ ಧ್ವನಿ ಸಾಧ್ಯತೆಗಳನ್ನು ಒಳಗೊಂಡಿವೆ. ‘ಪುಟ್ಟ ಪೆಟ್ಟಿಗೆ’ಯ ಕವಿತಾಗುಚ್ಛವು ಅನುಭಾವದ ನೆಲೆಗಳನ್ನು ಶೋಧಿಸುತ್ತದೆ. ಈ ಜಗತ್ತಿಗೆ ಅಂತ್ಯವೂ ಇಲ್ಲ, ಆದಿಯೂ ಇಲ್ಲ. ದೇಶಕಾಲಗಳು ಅನಂತವಾದವು ಎಂಬ ಅನುಭಾವಿಕ, ತಾತ್ವಿಕತೆಗಳನ್ನು ಒಳಗೊಂಡಿರುವ ಈ ಗುಚ್ಛವು ಜೈವಿಕ ಜಾಲವೆಲ್ಲವೂ ಕೊನೆಗೆ ಪೆಟ್ಟಿಗೆಯಲ್ಲಿಯೇ ಸೇರಬೇಕು ಎಂಬ ಆಶಯವನ್ನೂ ಒಳಗೊಂಡಿದೆ. ಸತ್ತವರೆಲ್ಲರೂ ಈ ಪೆಟ್ಟಿಗೆಗೆ ಸೇರಲೇಬೇಕು. ಇದು ನಿರಂತರ ಎಂಬುದನ್ನೂ ಧ್ವನಿಸುತ್ತದೆ. ಇಂತಹ ಸಂಕೀರ್ಣವಾದ ಅನುಭಾವಿಕ ನೆಲೆಗಳುಳ್ಳ ಕಾವ್ಯವನ್ನು ಅದರ ಎಲ್ಲಾ ಧ್ವನಿ ಸಾಧ್ಯತೆಗಳೊಂದಿಗೆ ಅನುವಾದಿಸುವುದು ಸಮರ್ಥ ಅನುವಾದಕನಿಂದ ಸಾಧ್ಯ. ಅನುವಾದದಲ್ಲಿ ಕಾವ್ಯ ನಷ್ಟವಾಗುತ್ತದೆ ಎಂಬ ಮಾತೊಂದಿದೆ. ಯಾರೂ ಕೂಡಾ ನೂರಕ್ಕೆ ನೂರರಷ್ಟು ಪರಿಪೂರ್ಣವಾಗಿ ಕಾವ್ಯವನ್ನು ಅನುವಾದಿಸಲು ಸಾಧ್ಯವಾಗುವುದಿಲ್ಲ. ಆದರೆ ಮೂಲದ ಆಶಯಗಳಿಗೆ ಅಪಚಾರವಾಗದಂತೆ ಅನುವಾದಿಸಲು ಸಮರ್ಥಕನಾದವನಿಗೆ ಸಾಧ್ಯ ಎಂಬುದು ಈ ಕವಿತೆಗಳನ್ನು ಓದಿದರೆ ಸ್ಪಷ್ಟವಾಗುತ್ತದೆ.

ಚಂದ್ರಮೋಹನ್ ಅವರ ಅನುವಾದದ ಭಾಷೆಯಲ್ಲಿ ಆರ್ಭಟವಿಲ್ಲ. ಅವರು ತಮ್ಮ ಭಾಷೆಯನ್ನು ಮೂಲ ಕಾವ್ಯದ ಜೊತೆ ಹೊಂದಿಕೊಳ್ಳುವಂತೆ ಮಾಡಿ ರೂಪಿಸಿಕೊಂಡಿದ್ದಾರೆ. ಬಹಳಷ್ಟು ಕವಿತೆಗಳು ಸಂಕೀರ್ಣ ತಾತ್ವಿಕತೆಯನ್ನು ತನ್ನ ಒಡಲೊಳಗೆ ಇರಿಸಿಕೊಂಡಿವೆ. ಇವುಗಳನ್ನು ಸರಳವಾಗಿ ನಮ್ಮ ಮುಂದಿಡುವ ಪ್ರಯತ್ನ ಮಾಡುತ್ತಾರೆ. ಕಾವ್ಯ ಭಾಷೆ ಬಿಗಿಯಾಗಿರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಪದ ನುಡಿಗಟ್ಟುಗಳನ್ನು ಬಳಸಿದ್ದಾರೆ. ಜ್ವಿಗ್‍ನ್ಯೂ ಹರ್ಬರ್ಟ್ ಅವರ ‘ನಾನು ಬಣ್ಣಿಸಲು ಬಯಸುತ್ತೇನೆ’ ಎಂಬ ಕವಿತೆಯ ಸಾಲುಗಳನ್ನು ಗಮನಿಸಬಹುದು:

‘ಸುಮ್ಮನೆ ಹೇಳಬೇಕೆಂದರೆ
ಹುಚ್ಚನ ಹಾಗೆ ನಾನು ಓಡುತ್ತೇನೆ
ನನ್ನ ಮಾರ್ದವತೆ ಮತ್ತು ಉಡ್ಡಾಣದುತ್ಸಾಹವನ್ನು
ಮುಷ್ಟಿಯಲಿ ಬಿಗಿ ಹಿಡಿದು
ನೀರಿನಲಿ ರೂಹಾಗಿಲ್ಲ
ಆದರೆ ನೀರಿನಲಿ ಆಕೃತಿಯ ಕಂಡರಿಸಲೆಳೆಸಿದ್ದು.’

ಇಲ್ಲಿ ಅನುವಾದಿತಗೊಂಡಿರುವ ಕವನಗಳ ಬಹಳಷ್ಟು ಕವಿಗಳು ಕನ್ನಡಿಗರಿಗೆ ಗೊತ್ತಿಲ್ಲ. ಪಾಲ್‍ ಸೆಲಾನ್, ಅಲಿ ಕರೀಂ, ಪ್ಲಾವಿಯನ್ ರನೈವೋ, ತಹೀರ್ ಸೊಹ್ರಾಬ್, ನಜೀಮ್ ಹಿಕ್ಮತ್ ಮುಂತಾದವರ ಕವಿತೆಗಳ ಸ್ವರೂಪವನ್ನು ಅರಿಯಲು ಈ ಅನುವಾದಗಳು ಸಹಾಯಕ. ಹಿಕ್ಮತ್ ಇಪ್ಪತ್ಮೂರು ವರ್ಷ ಟರ್ಕಿಯ ಕಾರಾಗೃಹದಲ್ಲಿ ಜೀವ ಸವೆಸಿದ ಕವಿ. ಈ ಕೃತಿಯ ಪ್ರಾರಂಭದಲ್ಲಿ ಅವರ ಮಾತುಗಳನ್ನು ಅನುವಾದಿಸಿ ಕೊಡಲಾಗಿದೆ.

‘ಬದುಕನ್ನು ಬಿಂಬಿಸುವ ಕಲೆಯೇ ನಿಜವಾದ ಕಲೆ, ನಮ್ಮೆಲ್ಲ ಸಂಘರ್ಷಾತ್ಮಕ ಹೋರಾಟಗಳನ್ನೂ ಸ್ಫೂರ್ತಿಗಳನ್ನೂ ಗೆಲುವು ಸೋಲುಗಳನ್ನೂ ಜೀವನಪ್ರೀತಿಯನ್ನೂ ಮನುಷ್ಯ ಸ್ವಭಾವದ ಮತ್ತೆಲ್ಲ ಅಂಶಗಳನ್ನೂ ಒಬ್ಬ ಅದರಲ್ಲಿ ಕಂಡುಕೊಳ್ಳುತ್ತಾನೆ. ಬದುಕಿನ ಬಗೆಗಿನ ಸುಳ್ಳು ಕಲ್ಪನೆಗಳನ್ನು ಕೊಡದಿರುವ ಕಲೆಯೇ ನಿಜವಾದ ಕಲೆ. ಹೊಸ ಕವಿ ಗದ್ಯಕ್ಕೆ, ಪದ್ಯಕ್ಕೆ ಮತ್ತು ಮಾತಿಗೆ ಬೇರೆ ಬೇರೆ ಭಾಷೆಗಳನ್ನು ಕಂಡುಕೊಳ್ಳುವುದಿಲ್ಲ. ಅವನು ಕವಿತೆ ಬರೆಯುವುದು ಕೃತಕವಾಗಿ ಕಟ್ಟಿಕೊಂಡ ಸುಳ್ಳಿನ ಭಾಷೆಯಲ್ಲಲ್ಲ. ಅದು ಸಹಜ, ಜೀವಂತ, ವರ್ಣರಂಜಿತ, ಗಂಭೀರ, ತೀರ ಸಂಕೀರ್ಣವಾದ ಸಾಮಾನ್ಯ ಭಾಷೆಯಾಗಿರುತ್ತದೆ’.

ಸಂಕೀರ್ಣವಾದ ಭಾಷೆಯಲ್ಲಿರುವ ಕವಿತೆಗಳನ್ನು ಇಂಗ್ಲಿಷ್‍ನಿಂದ ಚಂದ್ರಮೋಹನ್ ಅವರು ಹೊಸ ನುಡಿಗಟ್ಟುಗಳ ಮೂಲಕ ಕನ್ನಡ ಭಾಷೆಗೆ ಒಳಗು ಮಾಡಿದ್ದಾರೆ. ಈ ಮೂಲಕ ಕನ್ನಡ ಭಾಷೆಯನ್ನು ಬೆಳೆಸಲು ಪ್ರಯತ್ನಿಸಿದ್ದಾರೆ. ಎಚ್.ಎಸ್. ರಾಘವೇಂದ್ರರಾವ್ ಅವರ ಮುನ್ನುಡಿ ಈ ಅನುವಾದಗಳಿಗೆ ಉತ್ತಮ ಪ್ರವೇಶಿಕೆಯನ್ನು ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT