ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂ ತೊಟ್ಟ ಮರದ ಪಕ್ಷಿನೋಟ

Last Updated 5 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಸಾಹಿತ್ಯಕ್ಕಿಂಥ ಬದುಕು ದೊಡ್ಡದು ಎನ್ನುವುದು ಸಾಂಸ್ಕೃತಿಕ ಚರ್ಚೆಗಳಲ್ಲಿ ಆಗಾಗ ಬಳಕೆಯಾಗುವ ಮಾತು. ಆ ಮಾತಿನ ಮೂರ್ತರೂಪದ ಉದಾಹರಣೆಯಂತೆ ಸ. ರಘುನಾಥ ಅವರನ್ನು ನೋಡಬೇಕು. ಕಾವ್ಯ, ಕಥೆ, ಅನುವಾದ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅವರು ಮಾಡಿರುವ ಬರವಣಿಗೆ ಒಂದು ತೂಕದ್ದಾದರೆ, ಮೇಷ್ಟ್ರಾಗಿ ಶಾಲೆಯ ಒಳಗೆ ಮತ್ತು ಹೊರಗೆ ಮಾಡಿರುವ ಕೆಲಸ ಮತ್ತೊಂದು ತೂಕದ್ದು. ಹಾಗಾಗಿಯೇ ರಘುನಾಥರ ಸಾಹಿತ್ಯ ಅಥವಾ ಬದುಕು, ಯಾವುದಾದರೊಂದರ ಬಗ್ಗೆ ಮಾತನಾಡಿದರೂ ಅದು ಎರಡರ ಕುರಿತ ಮಾತೂ ಆಗಿರುತ್ತದೆ. ಬರಹಗಾರನೊಬ್ಬನ ವಿಷಯದಲ್ಲಿ ಇಂಥ ಅಭಿನ್ನತೆ ತೀರಾ ಅಪರೂಪದ್ದು.

‘ಕೆಮ್ಮಣ್ಣು’ ಲೇಖನಗಳ ಸಂಕಲನದಲ್ಲಿ ‘ಒಂದು ರೂಪಾಯಿ’ ಎನ್ನುವ ಬರಹವೊಂದಿದೆ. ಎಲ್ಲರಿಂದಲೂ ದೇಣಿಗೆ ಪಡೆಯುವ ಮೇಷ್ಟ್ರು, ತನ್ನಿಂದ ಏನನ್ನೂ ಕೇಳುತ್ತಿಲ್ಲವಲ್ಲ ಎನ್ನುವ ಸಿಟ್ಟಿನಲ್ಲಿ ಎಂದೂ ಸ್ಕೂಲಿನತ್ತ ಸುಳಿಯದ ಭೈರಪ್ಪ ಎನ್ನುವ ಅಜ್ಜ, ಮೊದಲ ಬಾರಿಗೆ ಶಾಲೆಯನ್ನು ಪ್ರವೇಶಿಸುತ್ತಾನೆ. ‘ಇದನ್ನು ಮಕ್ಕಳ ಕೆಲಸಕ್ಕೆ ಬಳಸಿಕೊ’ ಎಂದು ಮೇಷ್ಟ್ರ ಕೈಗೆ ಸಿಡುಕಿನಿಂದಲೇ ರೂಪಾಯಿ ನಾಣ್ಯವಿಡುತ್ತಾನೆ. ಆ ಒಂದು ರೂಪಾಯಿಯನ್ನು ಏನು ಮಾಡುವುದು ಎಂದು ಯೋಚಿಸುವ ಮೇಷ್ಟ್ರು, ಕೊನೆಗೆ ಆ ನಾಣ್ಯವನ್ನು ರಟ್ಟಿಗೆ ಅಂಟಿಸಿ, ಅದನ್ನು ಗೋಡೆಗೆ ನೇತುಹಾಕುತ್ತಾರೆ. ಒಂದು ದಿನ ವಿದ್ಯಾರ್ಥಿಯೊಬ್ಬ ಹಸಿದು ಶಾಲೆಗೆ ಬಂದಾಗ, ರಟ್ಟಿನಿಂದ ನಾಣ್ಯವನ್ನು ಕಿತ್ತು ಬನ್ನು ತರಿಸುತ್ತಾರೆ.

ಹೀಗೆ ಭೈರಪ್ಪಜ್ಜನ ರೂಪಾಯಿ ಬಾಲಕನೊಬ್ಬನ ಹಸಿವಿಗೆ ಉತ್ತರವಾಗುತ್ತದೆ. ಕೊಡುಗೆ ಎಷ್ಟು ಸಣ್ಣದಾದರೂ ಅದಕ್ಕಿರುವ ಮೌಲ್ಯವನ್ನು ಗುರ್ತಿಸುವ ಲೇಖಕರ ಮನೋಭಾವ, ಅವರ ಬದುಕಿನ ಧೋರಣೆಯೂ ಸಮಗ್ರ ಸಾಹಿತ್ಯದ ಪ್ರಮುಖ ಲಕ್ಷಣವೂ ಹೌದು. ಮೇಷ್ಟ್ರೊಬ್ಬರು ಕಲಿಸುವುದು ಹಾಗೂ ಕಲಿಸುತ್ತಲೇ ಕಲಿಯುವುದರ ಕೊಡುಕೊಳ್ಳುವಿಕೆಯ ರೂಪದಲ್ಲಿರುವ ‘ಕೆಮ್ಮಣ್ಣು’, ‘ರೇಗಡಿ’ ಸಂಪುಟಗಳ ಬರಹಗಳಲ್ಲಿ ಗ್ರಾಮಭಾರತದ ‘ಮಾನವೀಯ ಮಾರ್ಗ’ಕ್ಕೆ ಸಂಪರ್ಕ ಕಲ್ಪಿಸುವ ಕಿರುದಾರಿಗಳು ಅನಾವರಣಗೊಂಡಿರುವಂತಿದೆ.

ರಘುನಾಥರ ಕಥೆ, ಕಾವ್ಯ ಸೇರಿದಂತೆ ಸಮಗ್ರ ಸಾಹಿತ್ಯದ ಏಳು ಸಂಪುಟಗಳಲ್ಲಿನ ಒಟ್ಟಾರೆ ಬರವಣಿಗೆಯ ಕೇಂದ್ರದಲ್ಲಿರುವುದು, ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಹಾಗೂ ಅವರ ಮೂಲಕ ವ್ಯಕ್ತವಾಗುವ ಅಂತಃಕರಣದ ಒರತೆ. ‘ತಂಗಡಿ ಹುವ್ವು’, ‘ಬಿರೇಬೆತ್ಲೆ ವೆಂಕಟಸ್ವಾಮಿ’, ‘ಇಟ್ಟುಗೊಜ್ಜು’ – ಕಥಾಸಂಕಲನದ ಈ ಹೆಸರುಗಳೇ ಅವರ ಕಥನಗಳ ಕೇಂದ್ರವನ್ನು ಸೂಚಿಸುವಂತಿವೆ. ಸೂಲಗಿತ್ತಿ, ಕ್ಷೌರಿಕ, ಇಲಿ ಹಿಡಿಯುವವನು, ಕೂಲಿಕಾರ, ಕೃಷಿಕ – ಇಂಥ ಶ್ರೀಸಾಮಾನ್ಯರು ಅವರ ಕಥೆ–ಲೇಖನಗಳಲ್ಲಿ ಜೀವಂತಪಾತ್ರಗಳಾಗಿ ಓದುಗರಿಗೆ ಎದುರಾಗುತ್ತಾರೆ. ಗಾಂಧಿಯಿಂದ ಪ್ರೇರಣೆ ಪಡೆದಂತೆಯೇ ಬೀದಿಯಲ್ಲಿನ ತುಂಬು ಬಸಿರಿನ ಭಿಕ್ಷುಕಿಯಲ್ಲಿಯೂ ರಘುನಾಥರಿಗೆ ಗುರು ಕಾಣಿಸುತ್ತಾನೆ. ಮನುಷ್ಯನಲ್ಲಿನ ಕೇಡು ಕುರೂಪವನ್ನು ಗುರ್ತಿಸುವುದಕ್ಕಿಂತಲೂ ಒಳ್ಳೆಯತನದ ಚೆಲುವನ್ನು ಗುರ್ತಿಸುವುದು ಅವರ ಬರವಣಿಗೆಯ ಮುಖ್ಯ ಉದ್ದೇಶ. ‘ರೈತ ಬಾನ ಬೇಡುವಾಗ, ಹಕ್ಕಿ ಗೂಡು ಸೇರುವಾಗ, ಕೂಸು ಮೊಲೆಯ ಚೀಪುವಾಗ’, ‘ಬಾರದೇನು ಕವಿತೆ ಗೆಳತಿ, ಹಾಡದೇನು ಹೃದಯ ತುಂಬಿ’ ಎನ್ನುವ ಕವಿಯ ಉದ್ಗಾರ ಕಥೆ, ಲೇಖನ, ಅನುವಾದ ಸೇರಿದಂತೆ ಒಟ್ಟಾರೆ ಬರವಣಿಗೆಗೆ ಸಂಬಂಧಿಸಿದ ಸೂತ್ರರೂಪದ ಮಾತಿನಂತಿದೆ.

ಅಂತಃಕರಣದ ಬಗ್ಗೆ ಮನದುಂಬಿ ಮಾತನಾಡಿದರೂ, ಸಮಾಜದಲ್ಲಿನ ತರತಮಗಳ ಬಗ್ಗೆ ಮಾತನಾಡುವುದನ್ನು ಕವಿತೆ ಮರೆತಿಲ್ಲ. ಗ್ಲೋಬಿನ ಉದಾಹರಣೆಯ ಮೂಲಕ, ಏಕವಾಗಿಯೂ ಒಡೆದ ಮನೆಯಾಗಿಯೂ ವಿಶ್ವ ಕಾಣಿಸುವುದನ್ನು ಮಾರ್ಮಿಕವಾಗಿ ಚಿತ್ರಿಸುವ ಕವಿ – ‘ಗಾಂಧಿ ನಗೆಯಲಿ ಬಾಂಬುಗಳು ಕರಗಿ / ಆಫ್ರಿಕಾದಲ್ಲಿ ನವಿಲುಗಳು ಕುಣಿಯಲೆಂದು /ಸಹರಾದ ಹರಳು ಗೋಧಿ ಕಾಳಾಗಲೆಂದು /ಮಂಡೇಲಾ ಸುಗ್ಗಿ ಕಾಲದ ಕನಸು ಕಾಣುತ್ತಾನೆ’ ಎಂದು ಹೇಳುತ್ತಲೇ, ‘ಶಾಲೆ ಕಾಲೇಜುಗಳಲ್ಲಿ ಗ್ಲೋಬು / ಅಖಂಡತೆಯ ಸೂತ್ರದಡಿ ತಿರುಗುತ್ತದೆ’ ಎನ್ನುತ್ತಾರೆ. ಹೌದಲ್ಲವೇ, ಶಾಲೆಯ ಚೌಕಟ್ಟಿನಲ್ಲಿ ಗ್ಲೋಬಿನ ಮೂಲಕ ಅಖಂಡತೆಯ ಪಾಠ ಕಲಿಯದೆ ಹೋದರೆ, ಶಾಲೆಯಿಂದ ಹೊರಗೆ ಬಂದ ಮಕ್ಕಳು ಬಹುತ್ವವನ್ನು ಹಂಬಲಿಸುವುದು ಸಾಧ್ಯವೇ?

ಹಕ್ಕಿಲೋಕ ಕವಿಯಾಗಿ ರಘುನಾಥರನ್ನು ಮತ್ತೆ ಮತ್ತೆ ಸೆಳೆದಿದೆ. ‘ಶಾಂತಿ ದಂಡು’ ಕವಿತೆಯಲ್ಲಿ, ದಿಕ್ಕುದಿಕ್ಕುಗಳಿಂದ ಕರವಾಲ ಬೀಸುತ್ತ ಬರುವ ಕತ್ತಲಿಗೆ ಉತ್ತರವಾಗಿ, ಶಾಂತಿಯ ದಂಡು ಮೆರವಣಿಗೆ ಹೊರಟಂತೆ ಕಾಣಿಸುವ ಬಾತುಕೋಳಿಗಳ ಹಿಂಡನ್ನು ಕಾಣಿಸುತ್ತಾರೆ. ಕೂತಾಗ, ಕೂಗಿದಾಗ ಗಮನಸೆಳೆಯದ ಕಾಗೆ, ‘ರೆಕ್ಕೆ ಬಿಚ್ಚಿದಾಗ / ಎಲ್ಲ ಹಕ್ಕಿಗಳಂತೆ ಅದೂ ಅದ್ಭುತ’ ಎನ್ನುತ್ತಾರೆ. ಹಕ್ಕಿಯ ಬದುಕಿನ ಅರ್ಥಪೂರ್ಣತೆಯನ್ನು ಅದರ ಹಾರಾಟದಲ್ಲಿ ಕಾಣುವುದು, ಅನಾಥ ಗರಿಯೊಂದರ ಮೂಲಕ ಹಕ್ಕಿ ಬದುಕಿನ ಸಾರ್ಥಕತೆಯನ್ನು ಕಲ್ಪಿಸಿಕೊಳ್ಳುವ ಬೇಂದ್ರೆಯವರ ‘ಗರಿ’ ಕವಿತೆಯನ್ನು ನೆನಪಿಸುವಂತಿದೆ.

ಹಕ್ಕಿಯ ಸಾರ್ಥಕತೆ ಅದರ ಹಾರಾಟದಲ್ಲಿದೆ. ರಘುನಾಥ ಮೇಷ್ಟ್ರ ಬದುಕಿನ ಸಾರ್ಥಕತೆ ಎಲ್ಲಿದೆ? ಅದಕ್ಕಾಗಿ ಅವರು ಮಾಡಿರುವ ಕೆಲಸಗಳನ್ನು ಗಮನಿಸಬೇಕು. ಅವರು ರೂಪಿಸಿರುವ ‘ನಮ್ಮ ಮಕ್ಕಳು’ ಬಳಗದ ಮೂಲಕ ಕೆಳವರ್ಗದ ನೂರಾರು ಮಕ್ಕಳು ಓದಿ ಸ್ವಾವಲಂಬಿಗಳಾಗಿದ್ದಾರೆ. ‘ಹಸಿರುಹೊನ್ನು’ ಬಳಗ ಸಾವಿರಾರು ಗಿಡಗಳನ್ನು ನೆಟ್ಟು ಆರೈಕೆ ಮಾಡಿದೆ. ಮೇಷ್ಟ್ರ ನೇತೃತ್ವದಲ್ಲಿಯೇ ಅಲೆಮಾರಿಗಳಿಗಾಗಿ ‘ಹಸಿರು ಹೊನ್ನೂರು’ ಎನ್ನುವ ಪುಟ್ಟ ಊರೇ ರೂಪುಗೊಂಡಿದೆ. ಶಾಲೆಯ ಮೇಷ್ಟ್ರೊಬ್ಬರು ತಮ್ಮ ಸಂಕಲ್ಪಬಲದಿಂದ ಸಮಾಜಕ್ಕೇ ಮಾರ್ಗದರ್ಶಕರಾಗಿರುವುದು ಹೀಗೆ.

ತೆಲುಗು ಮತ್ತು ಕನ್ನಡ ಭಾಷೆಗಳ ಕೊಂಡಿಯಾಗಿ ದುಡಿದಿರುವುದು ರಘುನಾಥರ ಬಹುಮುಖ್ಯವಾದ ಕೆಲಸಗಳಲ್ಲೊಂದು. ಕನ್ನಡಮ್ಮನ ಜೊತೆಗೆ ತೆಲುಗು ತಲ್ಲಿಯ ಒಲವನ್ನೂ ಅವರು ಸವಿದಿರುವ ರೂಪದಲ್ಲಿ ‘ಗೋಂಗೂರ’ ಸಂಪುಟವನ್ನು ಗಮನಿಸಬಹುದು. ಶ್ರೀಕೃಷ್ಣದೇವರಾಯ, ಶ್ರೀನಾಥ, ತ್ಯಾಗರಾಜ, ಕೈವಾರ ನಾರೇಯಣ, ಶಾಹಜಿ, ಪೋತಲೂರಿ ವೀರಬ್ರಹ್ಮಂ, ಗದ್ದರ್‌ – ಹೀಗೆ ಅನೇಕ ಬರಹಗಾರರು ಹಾಗೂ ಅವರ ಕೃತಿಗಳ ಕುರಿತ ಚರ್ಚೆಯೊಂದಿಗೆ ಕೆಲವು ಅನುವಾದಿತ ಬರಹಗಳೂ ಸೇರಿಕೊಂಡಿರುವುದು ‘ಗೋಂಗೂರ’ ಕೃತಿಗೆ ತೆಲುಗು ಸಾಹಿತ್ಯಲೋಕದ ಪ್ರವೇಶಿಕೆಯ ಗುಣ ದೊರಕಿಸಿಕೊಟ್ಟಿದೆ.

‘ಮಾರ್ಕ್ಸೋ ನಾಲೆಡ್ಜೋ?’ ಎನ್ನುವ ಲೇಖನವನ್ನು ರಘುನಾಥರ ಬದುಕು–ಬರವಣಿಗೆಗೆ ಸಂಬಂಧಿಸಿದ ರೂಪಕವನ್ನಾಗಿ ನೋಡಬಹುದು. ಒಂಬತ್ತನೇ ತರಗತಿಯಲ್ಲಿ ಕಡಿಮೆ ಅಂಕಗಳನ್ನು ಪಡೆದ ಮಗನ ಕುರಿತು ತಂದೆ ದೂರು ತಂದಾಗ, ಮೇಷ್ಟ್ರು ವಿದ್ಯಾರ್ಥಿಯನ್ನು ವಿಚಾರಿಸುತ್ತಾರೆ. ಆಗ ಆ ಶಿಷ್ಯ, ‘ಮೇಷ್ಟ್ರೆ, ಮಾರ್ಕ್ಸೋ ನಾಲೆಡ್ಜೋ?’ ಎಂದು ಪ್ರಶ್ನಿಸುತ್ತಾನೆ. ತಾವು ಹೇಳಿಕೊಟ್ಟ ಪಾಠವನ್ನೇ ಶಿಷ್ಯ ಪುನರುಚ್ಚರಿಸಿದಾಗ, ಮೇಷ್ಟ್ರು ನಿರುತ್ತರರಾಗುತ್ತಾರೆ. ಅಂಕ ಮತ್ತು ಜ್ಞಾನದಲ್ಲಿ ಯಾವುದು ದೊಡ್ಡದು ಎನ್ನುವ ಜಿಜ್ಞಾಸೆಯಲ್ಲಿಯೇ ತರಗತಿಯನ್ನು ಪ್ರವೇಶಿಸಿ, ಈ ದಿನ ಮಾಡಬೇಕಾದ ಪಾಠ ಯಾವುದು ಎಂದು ವಿದ್ಯಾರ್ಥಿನಿಯೊಬ್ಬಳನ್ನು ಪ್ರಶ್ನಿಸಿ, ತಮಗರಿವಿಲ್ಲದೆಯೇ ‘ಮಾರ್ಕ್ಸೋ ನಾಲೆಡ್ಜೋ?’ ಎಂದು ಉದ್ಗರಿಸುತ್ತಾರೆ. ಆಗ ಆ ಹುಡುಗಿ ನೀಡುವ ಉತ್ತರ: ‘ಎರಡೂ ಅಲ್ಲ ಮೇಷ್ಟ್ರೇ, ಪದ್ಯ’. ಹೌದು, ರಘುನಾಥ ಅವರ ಬದುಕು ಲೆಕ್ಕಾಚಾರಗಳನ್ನು ಮೀರಿದ್ದು, ಕಾವ್ಯವೇ ಆಗಿರುವಂತಹದ್ದು.

ರಘುನಾಥರ ಈವರೆಗಿನ ಬರವಣಿಗೆಯನ್ನು ಒಟ್ಟು ಏಳು ಸಂಪುಟಗಳಲ್ಲಿ ಪ್ರಕಟಿಸಿರುವ ‘ನಿವೇದಿತ ಪ್ರಕಾಶನ’ ಅಭಿನಂದನೆಗೆ ಅರ್ಹ. ಆದರೆ, ಈ ಕೆಲಸ ಇನ್ನಷ್ಟು ಅಚ್ಚುಕಟ್ಟಾಗಿರಬೇಕಿತ್ತು. ಪುಸ್ತಕದ ಒಟ್ಟಾರೆ ವಿನ್ಯಾಸ ಹಾಗೂ ಪರಿವಿಡಿ ಇನ್ನಷ್ಟು ನೇರ್ಪುಗೊಳ್ಳಬಹುದಿತ್ತು. ರಘುನಾಥರ ಬದುಕು–ಬರವಣಿಗೆಯನ್ನು ಪರಿಚಯಿಸುವ ವಿಸ್ತೃತ ಬರಹವೊಂದರ ಅಗತ್ಯವಿತ್ತು. ರಘುನಾಥರ ವಿಚಾರ–ಸಾಧನೆಗಳನ್ನು ಓದುಗರಿಗೆ ಸಮರ್ಪಕವಾಗಿ ತಿಳಿಸುವ ನಿಟ್ಟಿನಲ್ಲಿ, ಅವರ ಕುರಿತಾದ ಬರಹಗಳು, ಸಂದರ್ಶನಗಳನ್ನೂ ಒಟ್ಟುಗೂಡಿಸಬಹುದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT