ಬುಧವಾರ, ಫೆಬ್ರವರಿ 1, 2023
16 °C

ಪುಸ್ತಕ ವಿಮರ್ಶೆ | ಬಾಪು ಸಂಕೀರ್ಣ ವ್ಯಕ್ತಿತ್ವದ ಅನಾವರಣ

ಮೋಹನ್ ಕುಮಾರ್ ಮಿರ್ಲೆ Updated:

ಅಕ್ಷರ ಗಾತ್ರ : | |

Prajavani

ಕೃತಿ: ಎಲ್ಲರ ಗಾಂಧೀಜಿ
ಸಂಪಾದಕ: ನಟರಾಜ್‌ ಹುಳಿಯಾರ್‌
ಪ್ರ: ಪಲ್ಲವ ಪ್ರಕಾಶನ, ಬಳ್ಳಾರಿ
ಸಂ: 8880087235

***

ನಟರಾಜ್ ಹುಳಿಯಾರ್ ಅವರು ಸಂಪಾದಿಸಿರುವ ‘ಎಲ್ಲರ ಗಾಂಧೀಜಿ’ ಇದುವರೆಗೆ ಕನ್ನಡದಲ್ಲಿ ಬಂದಿರುವ ಗಾಂಧೀ ಕುರಿತ ಇತರೆ ಕೃತಿಗಳಿಗಿಂತ ಭಿನ್ನವಾಗಿದ್ದು, ಗಾಂಧೀಜಿಯನ್ನು ಅವರದೇ ಬರವಣಿಗೆಗಳ ಹಲವು ಭಿನ್ನ ಕೋನಗಳಿಂದ ಕಟ್ಟಿಕೊಡುವ ಪ್ರಯತ್ನವಾಗಿದೆ. ಡಿ.ಎಸ್. ನಾಗಭೂಷಣ ಅವರ ‘ಗಾಂಧಿ ಕಥನ’ದ ನಂತರ ಬಂದ ಗಾಂಧೀ ಕುರಿತ ಮಹತ್ವದ ಕೃತಿ ಇದಾಗಿದೆ.

ಗಾಂಧೀ ದ್ವೇಷದ ಹೊಸ ಚಹರೆಗಳು ಕಾಣುವ ಆತಂಕಕಾರಿ ಬೆಳವಣಿಗೆಯ ಈ ಹೊತ್ತಿನಲ್ಲಿ ಗಾಂಧೀಜಿ ಬಗೆಗಿನ ಹಲವು ಪೂರ್ವಗ್ರಹಗಳಿಗೆ ಉತ್ತರವಾಗಿಯೂ ಈ ಕೃತಿ ಕಾಣುತ್ತದೆ. ಗಾಂಧೀಜಿ ಇಲ್ಲಿ ಅಸ್ಪೃಶ್ಯತೆಯ ವಿರುದ್ಧ ನಿರಂತರ ಹೋರಾಟ ನಡೆಸಿದ ಜಾತ್ಯತೀತ ನಾಯಕನಾಗಿ, ಅಪ್ಪಟ ಸ್ತ್ರೀವಾದಿಯಾಗಿ, ಧಾರ್ಮಿಕ ಸಾಮರಸ್ಯದ ಪ್ರತಿಪಾದಕನಾಗಿ, ಶಿಕ್ಷಣ, ಉದ್ಯೋಗ, ಆರೋಗ್ಯ ಮುಂತಾದ ಹಲವು ಭಿನ್ನ ಕ್ಷೇತ್ರಗಳಲ್ಲಿನ ಪ್ರಯೋಗಗಳಲ್ಲಿ ತೊಡಗಿದ ಸಂಶೋಧಕನಾಗಿ, ಸರಳ ಜೀವನದ ಪ್ರತಿಪಾದಕನಾಗಿ, ಬದುಕನ್ನು ಸಮಗ್ರ ದೃಷ್ಟಿಕೋನದಿಂದ ಧನಾತ್ಮಕವಾಗಿ ನೋಡುವ ಪ್ರಯೋಗಶೀಲನಾಗಿ ವಿಶಿಷ್ಟ ವ್ಯಕ್ತಿತ್ವದ ಸಂತನಾಗಿ ಓದುಗರ ಎದುರು ನಿಲ್ಲುತ್ತಾರೆ.

ಅಹಿಂಸೆಯ ಪರಮ ಪ್ರತಿಪಾದಕ ಗಾಂಧೀಜಿ ಎಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸತ್ಯದ ಹಾದಿಯನ್ನೇ ಆರಿಸಿಕೊಳ್ಳುವ ಬಗೆ ವಿಸ್ಮಯಕಾರಿಯಾಗಿದ್ದು, ಈ ಕೃತಿಯಲ್ಲಿ ಅಂತಹ ಹಲವಾರು ಪ್ರಸಂಗಗಳು ಸ್ಥಾನ ಪಡೆದಿವೆ. ಹಾಗಂತ ಗಾಂಧಿ ಅವರ ಆರಾಧನೆ ಈ ಕೃತಿಯ ಉದ್ದೇಶವಲ್ಲ. ಬದಲಿಗೆ ಗಾಂಧಿ ಕುರಿತ ಚಾಲ್ತಿಯಲ್ಲಿರುವ ಅನೇಕ ವಾದ ವಿವಾದಗಳನ್ನು ವಸ್ತುನಿಷ್ಠವಾಗಿ ಓದುಗರ ಮುಂದೆ ಇಡಲಾಗಿದೆ. ಗಾಂಧೀಜಿ ತಮ್ಮ ಜೀವಿತ ಕಾಲದಲ್ಲಿ ಎದುರಾದ ಹಲವು ಅಪವಾದಗಳಿಗೆ ಗೊಂದಲಗಳಿಲ್ಲದ ಉತ್ತರಗಳನ್ನು ನೀಡಿದ್ದು, ಅಂತಹ ವಿವರಗಳನ್ನೆಲ್ಲ ಸಂಪಾದಕರು ಹಲವು ಮೂಲಗಳಿಂದ ಸಂಗ್ರಹಿಸಿ, ಸೂಕ್ತ ಸಂಯೋಜನೆಯೊಂದಿಗೆ ಒಂದೆಡೆ ಕ್ರೋಢೀಕರಿಸಿ ಕೊಟ್ಟಿರುವುದು ಈ ಕೃತಿಯ ವೈಶಿಷ್ಟ್ಯ.

ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿರುವ ಗಾಂಧೀಜಿಯ ಮಾತು ಮತ್ತು ಬರಹಗಳು ಈ ಕೃತಿಯ ಮೂಲಕ ಕನ್ನಡಿಗರಿಗೆ ಒಂದೆಡೆ ದೊರೆಯುವಂತಾಗಿದೆ. ಇಲ್ಲಿನ ಪ್ರತೀ ಅಧ್ಯಾಯ ಸಂಕ್ಷಿಪ್ತವಾಗಿದ್ದು,  ಬಿಡಿಬಿಡಿಯಾಗಿ ಯಾವ ಭಾಗದಿಂದಲಾದರೂ ಓದನ್ನು ಆರಂಭಿಸಬಹುದಾಗಿದೆ.

‘ಗಾಂಧಿ’ ಕೇವಲ ಒಂದು ವಿಚಾರವಷ್ಟೇ ಅಲ್ಲ ಅಥವಾ ಹೊರಗಿನ ಚಿಂತನೆಯೂ ಅಲ್ಲ. ಅದು ಎಲ್ಲರ ಒಳಗೂ ಸುಪ್ತವಾಗಿರುವ ಮಾನವೀಯ ಮಿಡಿತ. ಇಂತಹ ಗಾಂಧಿಯನ್ನು ಅನಾವರಣ ಮಾಡಿಕೊಳ್ಳಬೇಕಾದುದು ಈ ಹೊತ್ತಿನ ಅಗತ್ಯ ಮತ್ತು ಅನಿವಾರ್ಯ ಆಗಿದೆ. ಈ ಕೃತಿ, ಗಾಂಧಿಯನ್ನು ಕುರಿತ ಈವರೆಗಿನ ಕೃತಿಗಳ ಮರು ಪ್ರಸ್ತುತಿ ಆಗದೆ, ಗಾಂಧಿಯನ್ನು ಈ ಕಾಲಕ್ಕೆ ಹೇಗೆ ಕೊಡಬೇಕು ಹಾಗೆ ಕೊಡುವ ಒಂದು ಪ್ರಯತ್ನವಾಗಿದೆ. ಇಲ್ಲಿ ಸ್ಥಾನ ಪಡೆದಿರುವ ಗಾಂಧೀ ಚಿಂತನೆಗಳು, ಪ್ರಯೋಗಗಳು, ನಿಲುವುಗಳು, ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತವಾದುವು.

ಗಾಂಧಿ ಸೌಮ್ಯವಾಗಿಯೇ ತೋರುವ ‘ನಿರ್ಭಯತೆ’, ಏಕಾಂಗಿ ಬುದ್ಧಿಜೀವಿಯಂತೆ ಇಡೀ ಸಮುದಾಯವನ್ನು ಮುನ್ನಡೆಸುವ ರೀತಿ ಮತ್ತು ಅವರು ತೆಗೆದುಕೊಳ್ಳುತ್ತಿದ್ದ ದಿಟ್ಟ ನಿಲುವು ಕೃತಿಯ ಉದ್ದಕ್ಕೂ ತಿಳಿಯುತ್ತಾ ಹೋಗುತ್ತವೆ. ಇಲ್ಲಿ ದಾಖಲಾಗಿರುವ ಗಾಂಧೀಜಿ ಮತ್ತು ಕಸ್ತೂರಬಾ ಅವರ ನಡುವಿನ ಸಂಬಂಧದ ಚಿತ್ರಣವು ಗಂಡು ಹೆಣ್ಣಿನ ಸಂಬಂಧದ ಅಮೂರ್ತ ಹಾಗೂ ಸಂಕೀರ್ಣ ನೆಲೆಗಳನ್ನು ಘನವಾಗಿ ಕಟ್ಟಿಕೊಡುತ್ತದೆ. ಹಾಗೆಯೇ ಪುರುಷ ಪ್ರಧಾನ ಸಮಾಜ ಗಂಡಿಗೆ ಒದಗಿಸಿಕೊಡುವ ಸವಲತ್ತುಗಳನ್ನು ಈ ಕೃತಿ ವ್ಯಂಗ್ಯದಲ್ಲಿ ಧ್ವನಿಸುತ್ತದೆ.

‘ನಮ್ಮ ಹಿಂದೆ ಒಂದು ದೊಡ್ಡ ಸಮೂಹ ಇಲ್ಲದಿದ್ದಾಗಲೂ, ನಮಗೆ ಶಸ್ತ್ರಾಸ್ತ್ರಗಳ ಬಲವಿಲ್ಲದಿದ್ದಾಗಲೂ ಪ್ರತಿಯೊಬ್ಬರ ಅಂತರಂಗದಲ್ಲೂ ವ್ಯವಸ್ಥೆಯನ್ನು ಎದುರಿಸುವ ಶಕ್ತಿ ಇದೆ ಎಂಬುದನ್ನು ಗಾಂಧೀಜಿ ತೋರಿಸಿಕೊಟ್ಟರು’ ಎಂಬ ಲೋಹಿಯಾ ಅವರ ಮಾತು, ಪುಟ ತಿರುವಿದಂತೆಲ್ಲ ಸ್ಪಷ್ಟವಾಗುತ್ತಾ ಹೋಗುತ್ತದೆ.

ಗಾಂಧೀಜಿ ಕುರಿತ ಈ ಕೃತಿಯಲ್ಲಿ ಅಮೂಲ್ಯ ಮಾನವೀಯ ಸಂದೇಶಗಳಿವೆ. ಬಹಳ ಮುಖ್ಯವಾಗಿ ಪ್ರಸ್ತುತ ಭಾರತದ ಧಾರ್ಮಿಕ ಅಸಹಿಷ್ಣುತೆಗೆ ಮುಲಾಮಿದೆ. ಧರ್ಮ ಕುರಿತ ತರ್ಕಗಳು, ತರ್ಕಾತೀತವಾದ ನಿಲುವುಗಳು ಇಲ್ಲಿನ ಬರಹಗಳಲ್ಲಿವೆ. ಧನಾತ್ಮಕ ಬದಲಾವಣೆಗಳಿಗೆ ತಮ್ಮನ್ನು ಒಡ್ಡಿಕೊಳ್ಳಲು ಬಯಸುವವರಿಗೆ ಈ ಕೃತಿಯಲ್ಲಿ ಸಾಕಷ್ಟು ಪಾಠಗಳಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು