ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ರತ್ನ ಸಚಿನ್‌ ತೆಂಡೂಲ್ಕರ್‌: ‘ಕ್ರಿಕೆಟ್‌ ರತ್ನ’ದ ಜೀವನಗಾಥೆ

Last Updated 2 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಭಾರತ ರತ್ನ ಸಚಿನ್‌ ತೆಂಡೂಲ್ಕರ್‌
ಲೇಖಕ:
ಚನ್ನಗಿರಿ ಕೇಶವಮೂರ್ತಿ
ಪುಟಗಳು: 408
ಬೆಲೆ: ₹ 400
ಪ್ರಕಾಶಕರು: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್‌ 9242744854

***

ಕ್ರಿಕೆಟ್‌ ಆಸಕ್ತರಿಗೆಲ್ಲ ಚನ್ನಗಿರಿ ಕೇಶವಮೂರ್ತಿ ಅವರ ಹೆಸರು ಚಿರಪರಿಚಿತ. ಸುಮಾರು ನಾಲ್ಕು ದಶಕಗಳಿಂದ ಒಂದೇ ಶ್ರದ್ಧೆಯಿಂದ ಅವರು ಪ್ರಜಾವಾಣಿ ಒಳಗೊಂಡು ಪ್ರಮುಖ ಪತ್ರಿಕೆಗಳಿಗೆ ಅಂಕಿಅಂಶಗಳನ್ನು ನೀಡುತ್ತ ಬಂದಿದ್ದಾರೆ. ಈಗ 80ರ ಹರೆಯದಲ್ಲಿದ್ದರೂ, ಕಾಫಿ ಬೋರ್ಡ್‌ನ ಈ ನಿವೃತ್ತ ಉದ್ಯೋಗಿಯ ಕ್ರಿಕೆಟ್‌ ಪ್ರೀತಿ ಕೊಂಚವೂ ಕಡಿಮೆಯಾಗಿಲ್ಲ. ಈಗಲೂ ಪ್ರಮುಖ ಪಂದ್ಯಗಳಿಗೆ ಮುನ್ನ ಅಂಕಿ ಅಂಶಗಳನ್ನು ಸಿದ್ಧಪಡಿಸುತ್ತಾರೆ.

ಅಂಕಿ ಅಂಶಗಳನ್ನು ನೀಡುವುದರ ಜೊತೆಗೆ ಭಾರತದ ಕ್ರಿಕೆಟ್‌ ಇತಿಹಾಸ, ಭಾರತದ ಕ್ರಿಕೆಟ್‌ ನಾಯಕರು, ವಿಶ್ವ ಕ್ರಿಕೆಟ್‌ನಲ್ಲಿ ಕರ್ನಾಟಕದ ಆಟಗಾರರು ಮೊದಲಾದ ಕೃತಿಗಳನ್ನೂ ಬರೆದಿದ್ದಾರೆ. ಭಾರತದ ಕ್ರಿಕೆಟ್‌ ಕಣ್ಮಣಿ ಸಚಿನ್‌ ತೆಂಡೂಲ್ಕರ್‌ ಅವರ ಕುರಿತು ಇತ್ತೀಚಿಗಷ್ಟೇ ‘ಭಾರತ ರತ್ನ ಸಚಿನ್‌ ತೆಂಡೂಲ್ಕರ್‌’ ಜೀವನಕಥನ ಕೃತಿಯನ್ನು ಹೊರತಂದಿದ್ದಾರೆ. ಆದರೆ ಇದು ಸಚಿನ್‌ ಅವರ ಆತ್ಮಕಥೆಯ ಅನುವಾದವಲ್ಲ.

ಕ್ರಿಕೆಟ್‌ ಲೋಕದಲ್ಲಿ ಮನೆಮಾತಾಗಿರುವ ತೆಂಡೂಲ್ಕರ್‌ ಕುರಿತಾಗಿ ಈಗಾಗಲೇ ವಿವಿಧ ಭಾಷೆಗಳಲ್ಲಿ ಅನೇಕ ಕೃತಿಗಳು ಬಂದಿವೆ. ತೆಂಡೂಲ್ಕರ್‌ ಅವರ ಆತ್ಮಕಥನ ‘ಪ್ಲೇಯಿಂಗ್ ಇಟ್‌ ಮೈ ವೇ’ ಕೂಡ ಪ್ರಕಟವಾಗಿದೆ. ಆದರೆ ಕನ್ನಡದಲ್ಲಿ ಅವರ ಕುರಿತು ಇಷ್ಟೊಂದು ಮಾಹಿತಿಪೂರ್ಣ ಕೃತಿ ಇದುವರೆಗೆ ಪ್ರಕಟವಾಗಿರಲಿಲ್ಲ. ಆಂಥ ಕೊರತೆಯನ್ನು ನೀಗಿಸುವಲ್ಲಿ ಈ ಕೃತಿ ಯಶಸ್ವಿಯಾಗಿದೆ.

ತಮ್ಮ ಕುರಿತಾದ ಈ ಕೃತಿಗೆ ಸ್ವತಃ ಸಚಿನ್‌ ಮುನ್ನುಡಿ ಬರೆದಿರುವುದು ವಿಶೇಷ. ಅವರು ಈ ಹಿಂದೆ ಇತರ ಭಾಷೆಗಳ ಕೃತಿಗಳಿಗೆ ಮುನ್ನುಡಿ ಬರೆದಿರಲಿಲ್ಲ.

ಕೃತಿಯಲ್ಲಿ ಸಚಿನ್‌ ಬಾಲ್ಯ, ಕ್ರಿಕೆಟ್‌ನಲ್ಲಿ ಬೆಳೆದುಬಂದ ರೀತಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧನೆಯ ಹಾದಿ, ವಿವಾಹ, ಅವರ ಆಸಕ್ತಿ, ಮತ್ತೊಬ್ಬ ಮಹಾನ್‌ ಆಟಗಾರ ಬ್ರಾಡ್ಮನ್‌ ಜೊತೆ ಭೇಟಿ ಮೊದಲಾದ ವಿವರಗಳನ್ನು 32 ಅಧ್ಯಾಯಗಳಲ್ಲಿ ದಾಖಲಿಸಿದ್ದಾರೆ.ಕೃತಿಯಲ್ಲಿ ಸಮರ್ಥನೆ ನೀಡುವಂಥ ಸಾಕಷ್ಟು ಛಾಯಾಚಿತ್ರಗಳೂ ಇವೆ. ಆಸಕ್ತಿದಾಯಕ ಘಟನೆಗಳು, ಸ್ವಾರಸ್ಯಕರ ಪ್ರಸಂಗಗಳು, ಸಚಿನ್‌ ಬಗ್ಗೆ ವಿಶ್ವದ ಹಾಲಿ ಮತ್ತು ಮಾಜಿ ಆಟಗಾರರು, ಅಂಪೈರ್‌ಗಳು, ಆಡಳಿತಗಾರರ ಅನಿಸಿಕೆಗಳನ್ನೂ ದಾಖಲಿಸಿದ್ದಾರೆ.

ಕೆಲವು ಸ್ಯಾಂಪಲ್‌ಗಳು.... ‘ಸಚಿನ್ ಕ್ರೀಸ್‌ನಲ್ಲಿದ್ದಾಗ ನನಗೆ ಅಂಪೈರಿಂಗ್‌ ಕೆಲಸ ಬೇಸರ ತರುವುದಿಲ್ಲ’ ಎಂದು ದಕ್ಷಿಣ ಆಫ್ರಿಕಾದ ಅಂಪೈರ್‌ ರೂಡಿ ಕರ್ಟ್ಜನ್‌ ಹೇಳುತ್ತಾರೆ. ‘ಸಚಿನ್‌ಗೆ ಕೆಟ್ಟ ಎಸೆತಗಳನ್ನು ಹಾಕಬೇಡಿ, ಏಕೆಂದರೆ ಅವರು ಉತ್ತಮ ಎಸೆತಗಳನ್ನು ಕೂಡ ಬೌಂಡರಿಗೆ ಅಟ್ಟುತ್ತಾರೆ’ ಎನ್ನುತ್ತಾರೆ ಆಸ್ಟ್ರೇಲಿಯಾದ ವೇಗಿ ಮೈಕೆಲ್‌ ಕ್ಯಾಸ್ಪ್ರೊವಿಚ್‌. ‘ಸಚಿನ್‌ ಹೊಡೆತಗಳನ್ನು ಬಾರಿಸುವಾಗ ಕವರ್ಸ್‌ನಲ್ಲಿ ಫೀಲ್ಡ್‌ ಮಾಡುವ ಕರ್ಸ್ಟನ್‌ಗೆ ನಾನು ಅವರು ಫೀಲ್ಡ್‌ ಮಾಡಬೇಕೇ ಹೊರತು ಹೊಡೆತಗಳಿಗೆ ಚಪ್ಪಾಳೆ ತಟ್ಟುವುದಲ್ಲ ಎಂದು ಹೇಳಿರುವುದುಂಟು’ ಎಂದು ಹ್ಯಾನ್ಸಿ ಕ್ರೊನಿಯೆಹೇಳಿದ್ದಿದೆ. ಇಂಥ ಕೆಲವು ಕುತೂಹಲಕರ ಹೇಳಿಕೆಗಳು ಒಂದು ಅಧ್ಯಾಯದಲ್ಲಿವೆ.

ಸಚಿನ್‌ ಬಗ್ಗೆ ಇರುವ ಟೀಕೆಗಳನ್ನೂ ಅವರು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಸಚಿನ್‌ ಶತಕ ಹೊಡೆದ ಹೆಚ್ಚಿನ ಸಂದರ್ಭಗಳಲ್ಲಿ ಭಾರತ ಸೋಲುತ್ತದೆ ಎಂಬುದು ಸಾಮಾನ್ಯವಾಗಿ ಕೇಳಿಬರುವ ಟೀಕೆ. ಇಂಥ ಟೀಕಾಕಾರರ ಆರೋಪಗಳಲ್ಲಿ ಹುರುಳಿಲ್ಲ ಎಂಬುದನ್ನೂ ಅವರು ಅಂಕಿ ಅಂಶಗಳಲ್ಲಿ ನಿರೂಪಿಸಿದ್ದಾರೆ. ಇವೆಲ್ಲ ಕುತೂಹಲಕರವೇ.

ಸ್ವತಃ ಅಂಕಿ ಅಂಶ ತಜ್ಞರಾಗಿರುವ ಕಾರಣ ಅದಕ್ಕೇ 35 ಪುಟಗಳನ್ನು ಮೀಸಲಿಟ್ಟಿದ್ದಾರೆ. ಲೇಖನಗಳಲ್ಲೂ ಈ ಮಾಹಿತಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಪ್ರಮಾಣದಲ್ಲಿವೆ. ಸಚಿನ್‌ ತೆಂಡೂಲ್ಕರ್‌ ತಮಗೆ ಮೊದಲಿನಿಂದಲೂ ಇಷ್ಟ ಎಂಬುದನ್ನೂ ಲೇಖಕರು ಆರಂಭದಲ್ಲೇ ಹೇಳಿಕೊಂಡಿದ್ದಾರೆ. ಇದು ಜೀವನಕಥನ ಆಗಿರುವ ಕಾರಣ ಕೆಲವು ಕಡೆ ಹೊಗಳಿಕೆ ಹೆಚ್ಚಾದಂತೆ ಭಾಸವಾಗುತ್ತದೆ. ಭಾಷೆಯನ್ನು ಬಿಗಿಗೊಳಿಸಿದರೆ ಕೃತಿಯ ಮೌಲ್ಯ ಇನ್ನಷ್ಟು ಹೆಚ್ಚುತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT