ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದಗಳೇ ಇಲ್ಲದ ವಾಗ್ವಾದಗಳು

Last Updated 12 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ವೈದಿಕ ವೈದಿಕ ದರ್ಶನ
(ಪ್ರಾಚೀನ ಭಾರತೀಯ ವಾಗ್ವಾದಗಳು)
ಪ್ರ: ಋತುಮಾನ ಟ್ರಸ್ಟ್‌ 9480009997
ಪುಟಗಳು:136
ಬೆಲೆ: ₹150

‘ವಾದೇ ವಾದೇ ಜಾಯತೇ ತತ್ತ್ವಬೋಧಃ’ ಎಂಬ ಮಾತು ಭಾರತೀಯ ಸಂಸ್ಕೃತಿಯ ಬಹಳ ಮುಖ್ಯವಾದ ಆಯಾಮವೊಂದನ್ನು ನಿರೂಪಿಸುತ್ತದೆ. ಕೃಷ್ಣನು ಗೀತೆಯಲ್ಲಿ ‘ವಾದಃ ಪ್ರವದತಾಮಹಮ್‌’ ಎಂದಿದ್ದಾನೆ; ವಾದಿಗಳ ವಾದವೇ ನಾನು – ಎಂದು ಅವನು ವಾದದೊಂದಿಗೆ ತನ್ನನ್ನು ಸಮೀಕರಿಸಿಕೊಂಡಿದ್ದಾನೆ. ಪ್ರಾಚೀನ ಭಾರತೀಯ ಸಮಾಜದಲ್ಲಿ ವಾದ ಎನ್ನುವುದು ತುಂಬ ಮಹತ್ವದ ವಿದ್ಯಮಾನವಾಗಿತ್ತು. ಹೀಗೆಂದು ನಮ್ಮ ಇಂದಿನ ಟಿ.ವಿ. ಡಿಬೇಟ್‌ಗಳನ್ನೂ ಸಾಮಾಜಿಕ ಜಾಲತಾಣಗಳ ವಾದವೈಖರಿಯನ್ನೂ ನೋಡಿ ವಾದದ ಲಕ್ಷಣವನ್ನು ಅರ್ಥಮಾಡಿಕೊಳ್ಳುವುದು ಅಪಾಯಕರವೆನ್ನಿ! ಅಂದಿನ ವಾದಪರಂಪರೆಗೆ ನಿರ್ದಿಷ್ಟ ಲಕ್ಷಣಗಳೂ ಗುರಿಗಳೂ ಇರುತ್ತಿದ್ದವು.

ಉಡುಪಿಯ ಚಿಂತನ ವೇದಿಕೆ ಮತ್ತು ರಥಬೀದಿ ಗೆಳೆಯರು ವತಿಯಿಂದ 1997ರಲ್ಲಿ ಅಂಬಲಪಾಡಿ ದೇವಸ್ಥಾನದಲ್ಲಿ ವಿಚಾರ ಸಂಕಿರಣವೊಂದನ್ನು ಆಯೋಜಿಸಲಾಗಿತ್ತು. ‘ಪ್ರಾಚೀನ ಭಾರತೀಯ ವೈದಿಕ–ಅವೈದಿಕ‍ಪರಂಪರೆಯಲ್ಲಿ ನಡೆದ ತಾತ್ವಿಕ ವಾಗ್ವಾದ’ಗಳ ಕುರಿತು ನಡೆದ ಈ ಗೋಷ್ಠಿಯಲ್ಲಿ ಡಿ.ಆರ್‌. ನಾಗರಾಜ್‌, ಅವಧಾನಿ ಅಶ್ವತ್ಥನಾರಾಯಣ ಮತ್ತೂರು, ಎನ್‌. ರಂಗನಾಥ ಶರ್ಮ, ಪ್ರಭಾಕರ ಜೋಷಿ, ಶ್ರೀಪತಿ ತಂತ್ರಿ ಮತ್ತು ರಾಜನ್‌ ಗುರುಕ್ಕಳ್‌ ಅವರು ವಿಚಾರಗಳನ್ನು ಮಂಡಿಸಿದ್ದರು; ಯು.ಆರ್‌. ಅನಂತಮೂರ್ತಿಯವರದ್ದು ಅಧ್ಯಕ್ಷತೆ. ಈ ಚರ್ಚೆ ಆರಂಭಿಸಿ, ಗೋಷ್ಠಿಯ ಉದ್ದಕ್ಕೂ ಒಂದು ವಿಧದಲ್ಲಿ ಕೇಂದ್ರವ್ಯಕ್ತಿಯಾಗಿದ್ದವರು ಡಿ.ಆರ್‌. ನಾಗರಾಜ್‌. ಈ ಎಲ್ಲರ ಉಪನ್ಯಾಸಗಳ (ಅನಂತಮೂರ್ತಿಯವರ ಭಾಷಣ ಅಲಭ್ಯ) ಬರಹರೂಪವೇ ಪ್ರಕೃತ ಕೃತಿ ‘ವೈದಿಕ ಅವೈದಿಕ ದರ್ಶನ’. ಇಂಥ ಸ್ತುತ್ಯರ್ಹ, ಆದರೆ ಶ್ರಮದಾಯಕ ಕೆಲಸವನ್ನು ಮಾಡಿರುವ ಋತುಮಾನ ತಂಡಕ್ಕೆ ಅಭಿನಂದನೆಗಳು ಸಲ್ಲಲೇಬೇಕು.

ಉಪನ್ಯಾಸಗಳನ್ನು ಬರಹಕ್ಕೆ ಇಳಿಸಿ ಪ್ರಕಟಿಸುವಾಗ ಕೆಲವೊಂದು ಸಂಪಾದನ ನಿಯಮಗಳನ್ನು ಹಾಕಿಕೊಳ್ಳಬೇಕಾಗು
ತ್ತದೆ. ಉಪನ್ಯಾಸಕಾರರ ಉದ್ದುದ್ದದ ಔಪಚಾರಿಕ ಮಾತುಗಳು ಈ ಕೃತಿಗೆ ಬೇಕಾಗಿರಲಿಲ್ಲ. ಕೆಲವೊಮ್ಮೆ ಮಾತಿನ ಓಘದಲ್ಲಿ ಆಕರಗಳು, ವ್ಯಕ್ತಿಗಳ ಹೆಸರು, ಉದ್ಧರಣವಾಕ್ಯಗಳು ತಪ್ಪಾಗಿ ಹೇಳಿರುವ ಸಾಧ್ಯತೆಗಳಿರುತ್ತವೆ; ಅವನ್ನು ಸರಿಯಾದ ರೂಪಕ್ಕೆ ತಿರುಗಿಸಿಕೊಳ್ಳಬೇಕಾಗುತ್ತದೆ. (ಅಥವಾ ಸಂಪಾದಕರಾದರೂ ಅವನ್ನು ಸೂಚಿಸಬೇಕಾಗುತ್ತದೆ.) ಈ ಕೃತಿಯಲ್ಲಿ ಇಂಥ ನಾಲ್ಕಾರು ಸಂಪಾದನಕಾರ್ಯದ ಲೋಪ–ದೋಷಗಳಿರುವುದು ಎದ್ದುಕಾಣುವ ವಿವರ.

ಇನ್ನು ಇಲ್ಲಿರುವ ಬರಹಗಳು ಕೃತಿಯ ಆಶಯವನ್ನು ನೆರವೇರಿಸುವಲ್ಲಿ ಎಷ್ಟು ಯಶಸ್ವಿಯಾಗಿವೆ ಎಂಬುದನ್ನು ನೋಡಬಹುದು. ಇಲ್ಲಿಯ ಹಳೆಯ ಸಂವಾದಗಳಿಗೆ ಹೊಸ ಪ್ರತಿಕ್ರಿಯೆಯನ್ನು ಮನು ವಿ. ದೇವದೇವನ್‌ ನೀಡಿದ್ದಾರೆ. ‘ಪರಂಪರೆಯ(ನ್ನು) ಅರ್ಥೈಸಿಕೊಳ್ಳುವ ಸಾಧ್ಯತೆಗಳು ಅಪಾರವಾದ್ದು. ಮೇಲೆ ಸೂಚಿಸಿರುವುದು (ಮನು ದೇವದೇವನ್‌ ಅವರ ಸೂಚನೆ) ಅವುಗಳಲ್ಲಿ ಎರಡು ಸಾಧ್ಯತೆಗಳು ಮಾತ್ರ. ಅಂಥ ಸಾಧ್ಯತೆಗಳು ಈಗ ಪುಸ್ತಕರೂಪದಲ್ಲಿ ನಮ್ಮ ಕೈ ಸೇರಿರುವ ಈ ಸಂವಾದದಲ್ಲಿ ಇಲ್ಲ. ಹಾಗೆಂದು ಅದನ್ನು ವಿಶಾದಕರವೆಂದು ತಿರಸ್ಕರಿಸಬೇಕಿಲ್ಲ. ಏಕೆಂದರೆ ವರ್ತಮಾನದಲ್ಲಿ ನಮ್ಮ ಆಲೋಚನೆಗಳಲ್ಲಿ ಅನೇಕ ನೆಲೆಯಲ್ಲಿ ಮೈಗೂಡಿಸಿಕೊಂಡಿರುವ ನ್ಯೂನತೆಗಳಿಗೆ ಇವು ಕನ್ನಡಿ ಹಿಡಿದಂತೆ’ ಎಂಬ ಅವರ ಮಾತುಗಳು ಈ ಕೃತಿಯ ವೈಫಲ್ಯದ ಜೊತೆಗೆ ಸಾರ್ಥಕತೆಯನ್ನೂ ಕಾಣಿಸುತ್ತಿವೆ. ಸಾರಭೂತ ಪರಂಪರೆಯ ಪರಿಕಲ್ಪನೆಯಿಂದ ಬಿಡಿಸಿಕೊಂಡು, ಐತಿಹಾಸಿಕವಾಗಿ ಸ್ಪಂದಿಸುವುದು ಮತ್ತು ಪರಂಪರೆಯ ಸ್ವಜ್ಞಾನಶೋಧನೆ – ಈ ಎರಡು ಕ್ರಮಗಳ ಬಗ್ಗೆ ಮನು ಸೂಚಿಸುತ್ತಾರೆ. ಇದನ್ನು ಹೇಳುವಾಗ ಅವರು ಪರಂಪರೆಯನ್ನು ವಾಸ್ತುಕಲೆ, ಶಿಲ್ಪಶಾಸ್ತ್ರ, ಸಂಗೀತ, ವಿಜ್ಞಾನಗಳ ಮೂಲಕವೂ ಅರ್ಥೈಸಿಕೊಳ್ಳಬಹುದಲ್ಲವೆ ಎಂಬ ಮಹತ್ವದ ದಿಕ್ಸೂಚಿಯನ್ನು ಕಾಣಿಸುತ್ತಾರೆ. ಕಲಾಪರಂಪರೆಯ ಮೂಲಕವೇ ಪರಂಪರೆಯ ವೈಶಿಷ್ಟ್ಯವನ್ನು ಎತ್ತಿಹಿಡಿದ ಆನಂದ ಕುಮಾರಸ್ವಾಮಿ ಇಲ್ಲಿ ನೆನಪಾಗುತ್ತಾರೆ.

ಭಾರತದಲ್ಲಿ ನಡೆದಿರುವ ವೈದಿಕ–ಅವೈದಿಕ ದರ್ಶನಗಳ ವಿಕಾಸ–ವಾಗ್ವಾದಗಳ ಪರಂಪರೆ ತುಂಬ ದೊಡ್ಡದು. ಇವುಗಳ ಸ್ವರೂಪವನ್ನೂ ಮಹತ್ವವನ್ನೂ ಅಲ್ಪ ಸ್ಥಳಾವಕಾಶದಲ್ಲಿ ಸಮಗ್ರವಾಗಿ ನಿರೂಪಿಸುವುದು ಸುಲಭ ಅಲ್ಲ, ದಿಟ. ಆದರೆ ಇಲ್ಲಿಯ ಬಹುಪಾಲು ಉಪನ್ಯಾಸಗಳು ಆಂಶಿಕವಾಗಿಯೂ ಈ ವಿಷಯದಲ್ಲಿ ಸೋಲುತ್ತವೆ. ಒಂದು ನಿರ್ದಿಷ್ಟ ಕೇಂದ್ರವಿಲ್ಲದಿದ್ದರೆ ಹೇಗೆ ಚಿಂತನೆಗಳು, ಮಾತುಗಳು ಚದುರಿಹೋಗುತ್ತವೆ ಎಂಬುದಕ್ಕೆ ಈ ಕೃತಿ ಉದಾಹರಣೆಯಾಗಿದೆ. ಗೋಷ್ಠಿಯ ಕೇಂದ್ರವ್ಯಕ್ತಿಯಂತಿದ್ದ ನಾಗರಾಜ್‌ ಅವರ ಮಾತು ಮತ್ತು ವಿಚಾರಗಳ ಅಭಿವ್ಯಕ್ತಿಯಲ್ಲಿಯೇ ಇಂಥ ಶೈಥಿಲ್ಯವನ್ನು ಗಮನಿಸಬಹುದು. ಸದ್ಯಕ್ಕೆ ಒಂದೆರಡು ಮಾತುಗಳನ್ನಷ್ಟೆ ಇಲ್ಲಿ ಗಮನಿಸಲಾದೀತು. ಶಂಕರಾಚಾರ್ಯರಿಗಿಂತಲೂ ಸರಹಪಾದ ದೊಡ್ಡ ದಾರ್ಶನಿಕ – ಎಂಬ ಅವರ ಅನೇಕ ಸ್ನೇಹಿತರ ಮಾತನ್ನು ಅವರು ಉಲ್ಲೇಖಿಸುತ್ತಾರೆ. ಇದು ಸತ್ಯವೂ ಇರಬಹುದು ಎಂದೂ ವಾದಕ್ಕೆ ಅಂದುಕೊಳ್ಳೋಣ. ಆದರೆ ಅವರ ಈ ನಿಲುವನ್ನು ಸಮರ್ಥಿಸುವಂಥ ಒಂದೇ ಒಂದು ಮಾತು ಕೂಡ ಇಲ್ಲಿಲ್ಲ. ಶಂಕರಾಚಾರ್ಯರ ಆನಂತರದ ಭಾರತದಲ್ಲಿ ನಡೆದ ಎಲ್ಲ ವಾಗ್ವಾದಗಳಿಗೂ ಒಂದು ವಿಧದಲ್ಲಿ ಪೂರ್ವಪಕ್ಷವೋ ಅಥವಾ ಸಿದ್ಧಾಂತವೋ ಎಂದರೆ ಶಾಂಕರವೇದಾಂತವೇ. ಹೀಗಿರುವಾಗ ಇಂಥದೊಂದು ಮುಖ್ಯಪ್ರಸ್ಥಾನವನ್ನು ನಿರಾಕರಿಸುವಾಗ, ಅದರಲ್ಲೂ ಇಂಥ ವಿದ್ವತ್‌ ಗೋಷ್ಠಿಗಳಲ್ಲಿ, ತಕ್ಕ ಪ್ರಮಾಣಗಳನ್ನು ಮಂಡಿಸದಿದ್ದರೆ ಹೇಗೆ?

ಹೀಗೆಯೇ, ‘ವೇದದ ಬಗೆಗೆ ಭಾರತೀಯ ಸಂಸ್ಕೃತಿಯಲ್ಲಿ ಆಳವಾದ ಗೌರವ ಯಾವತ್ತೂ ಇರಲಿಲ್ಲ’ ಎನ್ನುತ್ತಾರೆ ನಾಗರಾಜ್‌. ಇಂಥ ಹಲವು ಬೀಸುಹೇಳಿಕೆಗಳನ್ನು ಅವರಲ್ಲಿ ಕಾಣಬಹುದು. ಕಲಾಮೀಮಾಂಸೆಯ ಹಿನ್ನೆಲೆಯಲ್ಲಿ ಮೂರು ಪ್ರಸ್ಥಾನಗಳನ್ನು ಗುರುತಿಸುತ್ತಾರೆ: ಶಂಕುಕಪ್ರಸ್ಥಾನ, ಅಭಿನವಗುಪ್ತನ ಪ್ರಸ್ಥಾನ; ಇವೆರಡನ್ನೂ ನಿರಾಕರಿಸುವ ಮೂರನೆಯದು ಶಿವಾದ್ವಯ ಪ್ರಸ್ಥಾನ. ವಿವರಣೆಯಲ್ಲಿ ಅಭಿನವಗುಪ್ತನ ‘ನಂತರದಲ್ಲಿ ಶೈವಾದ್ವಯದ ಹೊರತು ಇನ್ನಾವ ರೀತಿಯಲ್ಲೂ ನಾವು ರಸಸಿದ್ಧಾಂತಗಳನ್ನು ಅರ್ಥೈಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅವನ ಸಿದ್ಧಾಂತಗಳು ಪ್ರಭಾವಶಾಲಿಯಾಗಿವೆ’ ಎನ್ನುತ್ತಾರೆ! ಒಟ್ಟಿನಲ್ಲಿ ಅವರ ಮಾತುಗಳನ್ನು ಓದುತ್ತಿದ್ದರೆ ‘ಈಗಿನ ವೈಚಾರಿಕನಿಗೆ ಸ್ವಾತಂತ್ರ್ಯದ ಜೊತೆಗೆ ಬೇಜವಾಬ್ದಾರಿತನ ಕೂಡ ದತ್ತವಾಗಿದೆ’ ಎಂಬ ಅವರದ್ದೇ ಮಾತು ಪ್ರತಿಧ್ವನಿತವಾಗುತ್ತಿರುತ್ತದೆ. ಅವರು ಮೀಮಾಂಸಕರ ಅಗ್ನ್ಯಾಧಿಕಾರದ ಮೀಮಾಂಸೆ ಮತ್ತು ಪಾಂಚರಾತ್ರರ ಏಕಾಯನವಾದದ ಬಗ್ಗೆ ಆರಂಭವನ್ನು ಚೆನ್ನಾಗಿ ಮಾಡುತ್ತಾರೆ; ಆದರೆ ಅವರೇ ಹೇಳಿಕೊಂಡಂತೆ, ಬಹುಶಃ ಅವರ ‘quick wit’ನ ದೆಸೆಯಿಂದ ಅಲ್ಲೊಂದು ವಾದಸರಣಿ ಸ್ಥಾಪನೆಯಾಗುವುದಿಲ್ಲ.

ಪ್ರಭಾಕರ ಜೋಷಿ ಅವರ ಮಾತುಗಳಲ್ಲಿ ನಾಗರಾಜ್‌ ಅವರು ತಮ್ಮ ವಿಚಾರಮಂಡನ ಶೈಲಿಯ ಭಾಗವನ್ನೇಪ್ರತಿಫಲನವಾಗಿ ಕಂಡಿರುವುದು ಸ್ವಾರಸ್ಯಕರವಾಗಿದೆ. ಅವಧಾನಿ ಅಶ್ವತ್ಥನಾರಾಯಣ ಅವರಲ್ಲಿ ಪರಂಪರೆಯ ಜ್ಞಾನ ಸ್ಪಷ್ಟವಾಗಿ ಕಾಣುತ್ತದೆ; ರಂಗನಾಥ ಶರ್ಮ ಅವರ ಉಪನ್ಯಾಸಕ್ಕೂ ಗೋಷ್ಠಿಗೂ ಸಾವಯವ ಸಂಬಂಧ ಇದ್ದಂತೆ ತೋರುವುದಿಲ್ಲ; ಆದರೆ ಅದು ಭಾಷೆಯ ಬಗ್ಗೆ ಆಲೋಚನೆಗೆ ಪ್ರೇರಿಸುತ್ತದೆ.

ಮನು ದೇವದೇವನ್‌ ಅವರು ಪರಂಪರೆಯನ್ನು ಸಂಕುಚಿತವಾಗಿ ಕಾಣುವ ಕ್ರಮದಿಂದ ಬಿಡುಗಡೆಗೊಳಿಸಿಕೊಳ್ಳುವ ಅನಿವಾರ್ಯ ಮಾರ್ಗವನ್ನೂ ಸೂಚಿಸುತ್ತಾರೆ. ಹೀಗಾಗಿಯೇಶ್ರೀಪತಿ ತಂತ್ರಿ ಅವರ ಉಪನ್ಯಾಸದಲ್ಲಿರುವ ಐತಿಹಾಸಿಕ ಪ್ರಜ್ಞೆ ಅವರಿಗೆ ಮುಖ್ಯವಾಗಿ ಕಾಣುತ್ತದೆ. ಆದರೆ ಸಿದ್ಧಾಂತಗಳನ್ನು ಕಟ್ಟುವ ಮುನ್ನ ಪರಂಪರೆಯ ಆಕರಗಳ ಪರಿಚಯವೂ ಚೆನ್ನಾಗಿರಬೇಕಲ್ಲವೆ? ಉದಾಹರಣೆಗೆ, ತಂತ್ರಿಯವರು ಋಗ್ವೇದದಲ್ಲಿ ಯಜ್ಞದ ಕಲ್ಪನೆ ಅಷ್ಟಾಗಿ ಕಾಣದು ಎನ್ನುತ್ತಾರೆ. ಋಗ್ವೇದದ ಮೊದಲನೆಯ ಮಂತ್ರವೇ ಯಜ್ಞವನ್ನು ಕುರಿತದ್ದು. ವೇದಕಾಲದಲ್ಲಿ ಹೀಗೆಯೇ ಬದುಕಬೇಕು ಎನ್ನುವ ಕಟ್ಟುನಿಟ್ಟಿನ ಏನನ್ನೂ ಹೇಳಿಲ್ಲ – ಎಂಬುದೂ ಅವರ ಮಾತೇ. ಆದರೆ ವೇದಗಳ ಉದ್ದಕ್ಕೂ ಆದರ್ಶಜೀವನದ ತುಡಿತವನ್ನೇ ಕಾಣುತ್ತೇವೆ. ಉದಾಹರಣೆಗೆ, ಜೂಜಾಡಬೇಡ, ಕೃಷಿಯನ್ನು ಮಾಡು – ಎನ್ನುವುದು ಋಗ್ವೇದದ ಮಾತೇ.

ಈ ಕೃತಿಯಲ್ಲಿ ಎಷ್ಟೋ ಸಮಸ್ಯೆಗಳಿದ್ದರೂ, ವಾಗ್ವಾದಗಳ ಅನಿವಾರ್ಯತೆ ಸಮಾಜದಲ್ಲಿರುವುದರಿಂದ ಇಂಥ ಪ್ರಯತ್ನಗಳನ್ನು ಸ್ವಾಗತಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT