ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಅಕ್ಕನ ಬದುಕಿನ ಮೇಲೆ ಚೆಲ್ಲಿದ ಬೆಳಕು

Last Updated 18 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಅಕ್ಕನ ಭಾವಕೋಶ ಅಪರೂಪದ್ದು. ಆಕೆಯ ಜೀವನ ವಿವರಗಳು ಅಷ್ಟು ಖಚಿತವಿಲ್ಲ. ಆದರೂ ಆಕೆಯ ನಂತರದಲ್ಲಿ ರಚನೆಗೊಂಡ ಅನೇಕ ಕೃತಿಗಳ ಮೂಲಕ ದೊರಕಿದ ವಿವರಗಳನ್ನೇ ಮರುರೂಪಿಸಿಕೊಂಡ ನಮ್ಮ ಪರಂಪರೆ ಆಕೆಯ ಧಾವಂತ, ತಲ್ಲಣ, ಒಳಗುದಿ ಆಕೆ ಮುಖಾಮುಖಿಯಾದ ಸಮಾಜ, ಸಮುದಾಯಗಳನ್ನು ಮತ್ತೆ ಮತ್ತೆ ಮರುವ್ಯಾಖ್ಯಾನಿಸಿಕೊಂಡಿದೆ. ಅದರಿಂದ ತನಗೇನು ಬೇಕೋ ಅದನ್ನು ಪಡೆದುಕೊಂಡಿದೆ. 800 ವರ್ಷಗಳಿಂದಲೂ ಈ ಪ್ರಕ್ರಿಯೆ ಅವ್ಯಾಹತವಾಗಿ ನಡೆದು ಬಂದಿರುವುದಕ್ಕೆ ಕಾರಣ ನೊಂದ ಸಮಾಜದ ಬಹುದೊಡ್ಡ ಕುರುಹಾಗಿ ಗೋಚರಿಸುವ ಆ ಕಾಲದ ವಿದ್ಯಮಾನ. ಆದುದರಿಂದಲೇ ಅಕ್ಕ ಎಲ್ಲ ಕಾಲದ, ಎಲ್ಲ ದೇಶದ ಹೆಣ್ಣುಮಕ್ಕಳ ನೋವು ಸಂಕಟಗಳ ಬಹುದೊಡ್ಡ ಪ್ರತೀಕ.

ನಮ್ಮ ಕಾಲಕ್ಕೆ ಹನ್ನೆರಡನೇ ಶತಮಾನವನ್ನು ವಿವರಿಸಿಕೊಳ್ಳುವುದೆಂದರೆ ಅದೇ ಗಂಡು ಹಿಡಿತ, ಅಶ್ಲೀಲ, ಲೈಂಗಿಕ ಹಿಂಸೆ, ಅತ್ಯಾಚಾರ, ಯಾತನೆ, ಹೊರಕ್ಕೆ ಬರಲು ಸಾಧ್ಯವಾಗದ ಚಕ್ರವ್ಯೂಹ ಮುಂತಾದ ಅನಿಷ್ಟಗಳು ನಮ್ಮ ಕಾಲಕ್ಕೂ ಮುಂದುವರಿದ ದುಸ್ಥಿತಿಯಾಗಿ ನೋಡುವುದು. ‘ನೋಯುವ ಹಲ್ಲಿಗೆ ನಾಲಗೆ ಪದೇ ಪದೇ ಹೊರಳುವ’ ರೀತಿಯಾಗಿ ನಮ್ಮ ಕಾಲದ ಮಹಿಳೆಯ ಸಂಕಟಗಳನ್ನು ಆ ಕಾಲದ ಪರಿಪ್ರೇಕ್ಷದಲ್ಲಿ ವಿವರಿಸಿಕೊಳ್ಳುವ ಮತ್ತು ಪರಿಹಾರ ಕಂಡುಕೊಳ್ಳುವ ಕ್ರಮ ಇದೆನಿಸುತ್ತದೆ. ಯಾಕೆಂದರೆ ಗಂಡಿನ ಯಜಮಾನ ಸಂಸ್ಕೃತಿಗೆ ಕೊನೆಯ ಮೊಳೆ ಹೊಡೆಯಲು ಸನ್ನದ್ಧವಾದ ಯುಗ ಅದು. ನಮ್ಮ ಶಿಷ್ಟ ಪರಂಪರೆ ಕಟ್ಟಿಕೊಟ್ಟ ಸ್ತ್ರೀಬಗೆಗಿನ ಎಲ್ಲ ಆಕೃತಿಗಳನ್ನೂ ಕುಟ್ಟಿ ಕೆಡವಲು ದೊಡ್ಡ ಹೆಜ್ಜೆಯನ್ನಿರಿಸಿದ ಕಾಲಘಟ್ಟ.

ಇಂತಹ ಆಶಯಗಳಿಗೆ ದನಿಯಾಗಲೆಂದೇ ರಚನೆಗೊಂಡಂತಿರುವ ಡಾ.ಎಚ್.ಎಸ್. ಅನುಪಮಾ ಅವರ ಮಹಾ ಕಾದಂಬರಿ ‘ಬೆಳಗಿನೊಳಗು ಮಹಾದೇವಿಯಕ್ಕ’ ಕೃತಿಯನ್ನು ವಿಶೇಷ ಆಸಕ್ತಿಯಿಂದ ನೋಡಬೇಕೆನಿಸುತ್ತದೆ. ಅನುಪಮಾ ಎದುರಿಸಿರುವ ಸವಾಲು ದೊಡ್ಡದು. ಅಷ್ಟೇ ಅಲ್ಲ, ಕಾದಂಬರಿಯ ಚೌಕಟ್ಟಿನಲ್ಲಿ(ಅಥವಾ ಚೌಕಟ್ಟೇ ಇಲ್ಲದ ಕಾದಂಬರಿಯಲ್ಲಿ) ಅಕ್ಕನ ಅನುಭವದ ಪಯಣವನ್ನು ವಿವರಿಸಿರುವ ಬಗೆಯೂ ವಿನೂತನ.

ಚರಿತ್ರೆಯ ಹಂಗನ್ನು ತೊರೆದಂತೆ ಕಂಡರೂ ಕಲ್ಪಿತ ಮತ್ತು ವಾಸ್ತವಗಳ ಗೆರೆ ಅಳಿಸಿ ಹೋದಂತಿರುವ ಕಾದಂಬರಿಯ ನಿರೂಪಣೆ ಅವರ ಏಕಾಗ್ರತೆಯ, ತಪಸ್ಸಿನ, ಸಮರ್ಪಣೆಯ, ಧ್ಯಾನದ ಫಲ. ಲೇಖಕಿ ತಾವು ಪರಿಭಾವಿಸಿದ ಅಕ್ಕನನ್ನು ಎಲ್ಲಿಯೂ ಕಟ್ಟಿ ಹಾಕದೆ ಸಹೃದಯಿಗಳು ತಮ ತಮಗೆ ತೋಚಿದಂತೆ ಪರಿಭಾವಿಸಿಕೊಳ್ಳಲು ಇಂಬೊದಗಿಸಿರುವುದು ಈ ನಿರೂಪಣೆಯ ವಿಶೇಷ. ಅಕ್ಕ, ಅನುಪಮಾ ಅವರಿಗೆ ಒಲಿದು ಒದಗಿ ಬಂದಿರುವಂತಿದೆ. ಅಕ್ಕನೇ ಅವರ ಕೈ ಹಿಡಿದು ನಡೆಸಿದಳೋ ಅಥವಾ ಅವರೇ ಅಕ್ಕನ ಕೈಹಿಡಿದು ನಡೆದರೋ ಅಥವಾ ಎರಡೂ ಸತ್ಯವೋ ಹೇಳುವುದು ಕಷ್ಟ.

ಅಕ್ಕ ಇಲ್ಲಿ ಎಲ್ಲಿಯೂ ನಿಲ್ಲುವುದಿಲ್ಲ. ನಿರಂತರ ನಡೆಯುತ್ತಲೇ ಇರುತ್ತಾಳೆ. ಹಾಗೆ ನಡೆವಾಗ ದಣಿವು ಆವರಿಸಿಕೊಂಡಾಗ ಕೆಲವು ಸ್ಥಳಗಳಲ್ಲಿ ಆಕೆ ತಂಗುವುದೂ ತಾತ್ಕಾಲಿಕ. ಅಲ್ಲಿ ಆಕೆ ಎದುರಿಸುವ ಥರಾವರಿ ಜನ, ಆಚರಣೆ, ಸಂಪ್ರದಾಯ, ಮೌಢ್ಯ, ಕಂದಾಚಾರ ಈ ಎಲ್ಲದಕ್ಕೂ ಮುಖಾಮುಖಿಯಾಗುವ ಅಕ್ಕನ ಮೂಲಕ ಬಹುಸಂಸ್ಕೃತಿಗಳ ದರ್ಶನವನ್ನೇ ಲೇಖಕಿ ಕಟ್ಟಿಕೊಡುತ್ತಾರೆ.

ಇಲ್ಲಿನ ಅಕ್ಕ ಸಾಂಪ್ರದಾಯಿಕ ಗ್ರಹಿಕೆಯ ಅಕ್ಕನಿಗಿಂತ ತುಂಬಾ ಭಿನ್ನ. ಮಹಿಳೆಯ ಸಂಕಟ, ಯಾತನೆ, ದುಃಖ, ದುಮ್ಮಾನಗಳಿಗೆ ಮಿಡಿಯುತ್ತಾ, ತಾನು ಸಂಧಿಸಿದ ಹೆಣ್ಣುಮಕ್ಕಳ ಶ್ರಮದಲ್ಲಿ ಭಾಗಿಯಾಗುತ್ತಾ, ದುಃಖಕ್ಕೆ ಕಣ್ಣೀರಾಗುತ್ತಾ, ಸಂತಸದಲ್ಲಿ ಬೆರೆಯುತ್ತಾ ಸಹಜ ಹೆಣ್ಣುಮಗಳಂತೆ ಅಕ್ಕನ ವರ್ತನೆ ಇರುವುದು ಇಷ್ಟವಾಗುತ್ತದೆ. ಇಲ್ಲಿನ ಅಕ್ಕನಲ್ಲಿ ಉರಿವಗ್ನಿ ಕನ್ನೆಯೂ ಇದ್ದಾಳೆ, ಆಲಿಕಲ್ಲಿನಷ್ಟು ತಣ್ಣನೆಯ ಸಮಾಧಾನಿಯೂ ಇದ್ದಾಳೆ. ಎಲ್ಲ ಏರುಪೇರಿನ ಜೊತೆಯಲ್ಲೇ ಅಕ್ಕ ನಡೆಯುತ್ತಾ ನಡೆಯುತ್ತಾ ಶಿಖರಕ್ಕೆ ಬೆಳಕಾಗುವ ವಿಕಾಸದ ಪರಿಯನ್ನು ಕಾದಂಬರಿ ಸಮರ್ಥವಾಗಿ ಹಿಡಿದಿಡುತ್ತದೆ.

ಆದರೂ ‘ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ’ ‘ಕಳವಳದ ಮನವು ತಲೆಕೆಳಗಾದುದವ್ವಾ’ ‘ನೀವು ಕಾಣಿರೇ ನೀವು ಕಾಣಿರೇ’ ಈ ರೀತಿಯ ಅಭಿವ್ಯಕ್ತಿಯಲ್ಲಿ ಕಾಣುವ ಅಕ್ಕನ ಭಾವ ತೀವ್ರತೆಗೆ ಇನ್ನಷ್ಟು ಒತ್ತು ನೀಡಿದ್ದರೆ ಕಾದಂಬರಿಗೆ ಹೊಸ ಆಯಾಮ ದೊರಕಬಹುದಿತ್ತೇನೋ. ಅಂದರೆ ಅಕ್ಕನಿಗೂ ಇದ್ದಿರಬಹುದಾದ ತುಮುಲ, ಸಂದಿಗ್ಧತೆ, ಆಕೆಯ ಲೈಂಗಿಕ ಬಯಕೆ ಮತ್ತದರ ಉದಾತ್ತ ನೆಲೆಗಳ ಸಂಕೀರ್ಣತೆ, ‘ಅಪ್ಪಿದರೆ ಅಸ್ಥಿ ನುಗ್ಗು ನುರಿಯಂತಾಗಬೇಕು’ ಎಂಬ ಅಭಿವ್ಯಕ್ತಿಯ ಮರ್ಮದ ವಿಶ್ಲೇಷಣೆ ಹೀಗೆ ಆಕೆಯ ವ್ಯಕ್ತಿತ್ವವನ್ನು ಮತ್ತೊಂದು ಆಯಾಮದಲ್ಲಿ ಹಿಡಿಯಬಹುದಾಗಿತ್ತೇನೋ.

ಅಕ್ಕ ಪ್ರಕೃತಿದೇವೈಕ್ಯವಾದಿ. ನಿಸರ್ಗದ ಚಲುವಿನಲ್ಲೂ, ಸಕಲ ಜೀವಸಮೂಹದಲ್ಲೂ ಚನ್ನಮಲ್ಲಿಕಾರ್ಜುನನ ಕಾಣುವ ಹಂಬಲಿ. ಮೌಢ್ಯಗಳ ಮೀರುತ್ತಾ, ಒಳಗಣ್ಣಾಗುತ್ತಾ, ಬಸವ, ಅಲ್ಲಮಾದಿ ಶರಣ ಶರಣೆಯಯರ ಗಡಣದಲ್ಲಿ ಕಲಿಯುವ ಕುತೂಹಲಿಯಾಗಿ ಅಕ್ಕ ಇಲ್ಲಿ ಕಾಣಿಸಿರುವುದು ಅಪೂರ್ವ. ಅದರಲ್ಲೂ ತಳವರ್ಗದ ವಚನಕಾರ್ತಿಯರ ಜೊತೆಗಿನ ಆಕೆಯ ಒಡನಾಟವಂತೂ ಕಾದಂಬರಿಯ ಕೇಂದ್ರಪ್ರಜ್ಞೆಯಂತೆ ತೋರುವುದು.

ಕಾದಂಬರಿಯ ಭಾಷೆಯಂತೂ ಬೆರಗು ಹುಟ್ಟಿಸುತ್ತೆ. ‘ಒಂದೂರ ಭಾಷೆ ಒಂದೂರಿನದಲ್ಲ’ ಎನ್ನುವ ಅಕ್ಕನ ಮಾತನ್ನೇ ಇಲ್ಲಿ ಅನುಪಮಾ ನಿಜಗೊಳಿಸಿದ್ದಾರೆ. ಹಲವು ಕನ್ನಡಗಳನ್ನು ಅವರು ಕರಗತ ಮಾಡಿಕೊಂಡಿರುವ ರೀತಿಯೂ ಸಹೃದಯರನ್ನು ಬೆಚ್ಚಿ ಬೀಳಿಸುವಂತಿದೆ. ಹಾಗೆಯೇ ಇಲ್ಲಿ ಪ್ರಸ್ತಾಪಿತವಾಗಿರುವ ಆಹಾರ ವೈವಿಧ್ಯ, ಆಹಾರ ಸಂಸ್ಕೃತಿಯ ಬಿಕ್ಕಟ್ಟಿನ ಇಂದಿನ ಸಂದರ್ಭಕ್ಕೆ ಕನ್ನಡಿ ಹಿಡಿದಂತಿದೆ. ಏಕರೂಪೀ ಕಥನಕ್ಕೆ ವಿರುದ್ಧವೆಂಬಂತೆ ಬಹುರೂಪೀ ಕಥನಗಳು ಇಲ್ಲಿ ದಂಡಿಯಾಗಿ ಬರುತ್ತವೆ. ಇದರಿಂದ ಕೃತಿಗೊಂದು ಸಮಕಾಲೀನತೆಯೂ ಒದಗಿದಂತಾಗಿದೆ.

ಕಾದಂಬರಿಯನ್ನು ಓದಿ ಮುಗಿಸಿದ ಮೇಲೆ ದಟ್ಟಡವಿಯನ್ನು ದಾಟಿ ಬಯಲಿಗೆ ಬಂದಾಗ ಆಗುವ ಅನುಭವವಾಗುವುದು. ಅದು ಕಾದಂಬರಿಯ ಶಕ್ತಿಯೂ ಹೌದು, ಮಿತಿಯೂ ಕೂಡ. ಕೆಲವು ಪಾಂಥಿಕ ಚರ್ಚೆಗಳನ್ನು ಮಿತಗೊಳಿಸಿದ್ದರೆ ಅಥವಾ ಅವನ್ನು ವರ್ಜಿಸಿದ್ದರೆ ಕಾದಂಬರಿಯ ಓಟಕ್ಕೆ ಯಾವ ಧಕ್ಕೆಯೂ ಆಗುತ್ತಿರಲಿಲ್ಲವೋ ಏನೋ? ಹಾಗೆಯೇ ಕಲ್ಯಾಣ ಪಟ್ಟಣದ ವರ್ಣನೆಯೂ ಅತಿಯಾಯಿತೇನೋ. ಆದರೆ ಅನುಭವ ಮಂಟಪದ ಚರ್ಚೆ ಸಹ್ಯವಾಗಿರುವುದು ಸಮಾಧಾನ ತರುವಂತಿದೆ. ಏನೇ ಆಗಲಿ, ‘ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ’ ಎಂದು ಕೇಳುತ್ತಲೇ ಎನ್ನಲ್ಲಿ ಎಲ್ಲವೂ ಉಂಟೆಂಬುದನ್ನು ಪರೋಕ್ಷವಾಗಿ ಸಾರುವ ರೂಪಕ ಪ್ರತಿಭೆ ಈ ನಮ್ಮ ಮಹಾದೇವಿಯಕ್ಕ ಎನ್ನುವುದನ್ನು ಕನ್ನಡ ಲೋಕಕ್ಕೆ ವಿಭಿನ್ನವಾಗಿ ತೆರೆದಿಟ್ಟಿರುವ ಲೇಖಕಿಯನ್ನು ಕನ್ನಡ ಲೋಕ ಅಭಿನಂದಿಸಲೇಬೇಕು.

ಕೃತಿ: ಬೆಳಗಿನೊಳಗು ಮಹಾದೇವಿಯಕ್ಕ
ಲೇ: ಎಚ್‌.ಎಸ್‌. ಅನುಪಮಾ
ಪ್ರ: ಲಡಾಯಿ ಪ್ರಕಾಶನ, ಗದಗ
ಸಂ: 9480286844

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT