ಭಾನುವಾರ, ಮಾರ್ಚ್ 26, 2023
24 °C

ಪುಸ್ತಕ ವಿಮರ್ಶೆ: ಪರಿಸರಸ್ನೇಹಿ ಕೃಷಿಲೋಕ

ಗಾಣಧಾಳು ಶ್ರಿಕಂಠ Updated:

ಅಕ್ಷರ ಗಾತ್ರ : | |

Prajavani

ಸಾವಯವ ಕೃಷಿ, ನೈಸರ್ಗಿಕ ಕೃಷಿ, ಪಾಳೇಕರ್ ಕೃಷಿ, ಜೀವ ಜೈತನ್ಯ ಕೃಷಿ... ಇಂಥ ವಿವಿಧ ಪರಿಸರಸ್ನೇಹಿ ಕೃಷಿ ಕ್ರಮಗಳಲ್ಲಿರುವ ವೈಜ್ಞಾನಿಕ ವಿವರಗಳ ಮೇಲೆ ಬೆಳಕು‌ ಚೆಲ್ಲುವ ವಿಶಿಷ್ಟ ಕೃತಿ ಟಿ.ಜಿ‌.‌ಎಸ್. ಅವಿನಾಶ್ ಅವರ 'ಬೆಳಕಿನ ಬೇಸಾಯ'.

ವಿಜ್ಞಾನವನ್ನು ನೆಲಕ್ಕೆ ಇಳಿಸಿ, ಅದನ್ನು ಅರ್ಥೈಸಿಕೊಂಡು ದಾಖಲಿಸಿರುವ ಕೃತಿ. ಇದು ಒಂದು ರೀತಿಯ ಕೃಷಿ ಸಸ್ಯ ಶಾಸ್ತ್ರವನ್ನು ಜನಸಾಮಾನ್ಯನಿಗೆ ತಲುಪಿಸುವಂತಹ ಉತ್ತಮ ಪ್ರಯತ್ನ.

ಪ್ರಸ್ತುತ ಕೃಷಿ ಕ್ಷೇತ್ರ ಹವಾಮಾನ ವೈಪರೀತ್ಯದ ಬಿಕ್ಕಟ್ಟು ಎದುರಿಸುತ್ತಿದೆ. ನೀರಿನ ಕೊರತೆ ಕಾಡುತ್ತಿದೆ, ಮಣ್ಣಿನಲ್ಲಿ ಇಂಗಾಲಾಂಶ ಕೊರತೆ ಇದೆ. ಇಳುವರಿ ಸಮಸ್ಯೆಯೂ ಉಂಟು. ಕೀಟ–ರೋಗ ನಿಯಂತ್ರಿಸಲು ಅಧಿಕ ಒಳಸುರಿ ಬಳಕೆ, ಬಂಡವಾಳ ಏರಿಕೆ... ಹೀಗೆ ಹಲವು ಸಮಸ್ಯೆಗಳು ವ್ಯಾಪಿಸುತ್ತಿರುವ ಈ ಹೊತ್ತಿನಲ್ಲಿ, ಅವಿನಾಶ್ ಅವರ ‘ಬೆಳಕಿನ ಬೇಸಾಯ‘ ಕೃತಿ, ಇಂಥ ಸಮಸ್ಯೆಗಳಿಗೆ ಒಂದಷ್ಟು ಪರಿಹಾರಗಳನ್ನು ತೆರೆದಿಡುತ್ತದೆ. ಪರ್ಯಾಯ ದಾರಿಗಳನ್ನು ತೋರಿಸುತ್ತದೆ.

ಮಣ್ಣಿನ ಗುಣಮಟ್ಟ ವೃದ್ಧಿ, ನೀರಿಂಗಿಸುವ ಹಾಗೂ ನೀರಿನ ಸದ್ಬಳಕೆಯ ಜಾಣ್ಮೆ, ಬೆಳೆಗಳ ಆಯ್ಕೆ ಮತ್ತು ಸಂಯೋಜನೆ, ವಾತಾವರಣದಲ್ಲಿರುವ ಪೋಷಕಾಂಶಗಳನ್ನು ಬಳಸಿಕೊಳ್ಳುವ ವಿಧಾನ, ರೋಗ ನಿಯಂತ್ರಣ, ಕೀಟದಿಂದ ರಕ್ಷಣೆಗಾಗಿ ಅನುಸರಿಸುವ ಜೈವಿಕ ಹಾಗೂ ಪಾರಿಸಾರಿಕ ವಿಧಾನಗಳ ಬಗ್ಗೆ ಉದಾಹರಣೆ ಸಹಿತ ವಿವರಣೆ ಕೃತಿಯಲ್ಲಿದೆ.

ಇದರಲ್ಲಿ ದಾಖಲಿಸಿರುವ ಎಲ್ಲ ಮಾಹಿತಿಗಳೂ ಪ್ರಯೋಗಕ್ಕೆ ಒಳಪಟ್ಟಿವೆ‌. ಲೇಖಕರೇ ತಮ್ಮ ಕೃಷಿ ಜಮೀನಿನಲ್ಲಿ ಈ ಎಲ್ಲ ಪ್ರಯೋಗಗಳನ್ನು ಅನುಸರಿಸಿ, ಅಳವಡಿಸಿಕೊಂಡು ಅದರ ಪರಿಣಾಮ, ಅನುಭವಗಳನ್ನು ದಾಖಲಿಸಿದ್ದಾರೆ. ಹಾಗಾಗಿ ಇದು ಅನುಭವಾಧಾರಿತ ಕೃತಿ.

ನಾರಾಯಣರೆಡ್ಡಿಯವರ ಪ್ರಾಯೋಗಿಕ ಕೃಷಿ ಪಾಠಗಳು, ಸುಭಾಷ್ ಪಾಳೇಕರ್‌ ಅವರ ನೈಸರ್ಗಿಕ ಕೃಷಿ, ಶ್ರೀಪಾದ್ ದಾಬೋಲ್ಕರ್ ಅವರ ‘ಹತ್ತು ಗುಂಟೆ ಕೃಷಿ’ ಪದ್ಧತಿ, ಪುಕುವೊಕಾ, ಬಿಲ್‌ ಮಾಲಿಸನ್‌ ಸೇರಿದಂತೆ ಹಲವು ಕೃಷಿ ಸಂತರು ಅನುಸರಿಸಿರುವ ವಿವಿಧ ನೈಸರ್ಗಿಕ ಕೃಷಿಯ ವಿಧಾನಗಳನ್ನು ಕೃತಿಯಲ್ಲಿ ದಾಖಲಿಸಲಾಗಿದೆ. ‘ಓದಿ ತಿಳಿದಿದ್ದನ್ನು, ಮಾಡಿ ತಿಳಿದದ್ದನ್ನು ಅನುಭವದ ಆಧಾರದ ಮೇಲೆ ದಾಖಲಿಸಿದ್ದೇನೆ’ ಎಂದು ಹೇಳುತ್ತಾ ಲೇಖಕರು, ಈ ಪದ್ಧತಿಗಳ ಕ್ರೆಡಿಟ್ ಅನ್ನು ಹಿರಿಯರಿಗೇ ಮೀಸಲಿಟ್ಟಿದ್ದಾರೆ.

ಅರ್ಧ ಎಕರೆಯಲ್ಲಿ ಒಂದು ಕುಟುಂಬದ ಅಗತ್ಯ ಪೂರೈಸುವ ‘ಆಹಾರ ಬನ’ ಸೃಷ್ಟಿಸುವ ಪರಿಕಲ್ಪನೆ, ಎರಡು ಎಕರೆಯಲ್ಲಿನ ಬೇಸಾಯ – ಕುಟುಂಬದ ಎಲ್ಲ ಆಹಾರ ಅಗತ್ಯ ಪೂರೈಸಿ, ಮೂರು ನಾಲ್ಕು ಲಕ್ಷ ಆದಾಯ ಪಡೆಯುವ ಸಾಧ್ಯತೆಗಳ ವಿವರ, ಬಾಹ್ಯ ಒಳಸುರಿಗಳನ್ನು (Input) ಆದಷ್ಟೂ ಕಡಿಮೆ ಬಳಸಿ, ಹತ್ತಾರು ತರಹದ ಗಿಡಮರ-ಬೆಳೆ ಸಂಯೋಜನೆ ಮಾಡುವ ವಿಧಾನ, ಮಳೆನೀರು ಸಂಗ್ರಹ, ಸಸ್ಯಜನ್ಯ ಕೀಟನಾಶಕ ತಯಾರಿಕೆಯಂತಹ ಹಲವು ಪರಿಸರಸ್ನೇಹಿ ಕೃಷಿ ವಿಧಾನಗಳನ್ನು ಕೃತಿಯಲ್ಲಿ ವಿವರಿಸಲಾಗಿದೆ. ಅಷ್ಟೇ ಅಲ್ಲ, ಬೆಳೆದ ಬೆಳೆ ಮೊದಲು ಮನೆ ಬಳಕೆಗೆ, ನಂತರ ಮಾರುಕಟ್ಟೆಗೆ ಎಂಬ ಸುಸ್ಥಿರ ಕೃಷಿ – ಸ್ವಾವಲಂಬಿ ಬದುಕಿನ ಪಾಠವಿದೆ. ಇದು ಸಣ್ಣ ಹಿಡುವಳಿದಾರರಿಗೆ ಉತ್ತಮ ಮಾದರಿ ಕೂಡ.

ಉಪ್ಪಿನಕಾಯಿ ಮಾದರಿ, ಭತ್ತ –ಕಬ್ಬು ಮಾದರಿ, ಮಳೆಯಾಶ್ರಿತ ಮಾದರಿ, ತೆಂಗು– ಅಡಿಕೆ ಮಾದರಿಗಳನ್ನು ನಕ್ಷೆಗಳ ಸಹಿತ ಪರಿಚಯಿಸಲಾಗಿದೆ. ಬೆಳೆ ಸಂಯೋಜನೆಯಲ್ಲಿ, ವಾಣಿಜ್ಯ ಬೆಳೆಗಳ ಜೊತೆಗೆ, ಆಹಾರ ಬೆಳೆಗಳು, ತೋಟಗಾರಿಕೆ ಬೆಳೆಗಳನ್ನೂ ಸೇರಿಸಿದ್ದಾರೆ. 

ಕೃತಿಯ ಆರಂಭದಲ್ಲಿ ಹೆಚ್ಚು ವೈಜ್ಞಾನಿಕ ಮಾಹಿತಿಗಳಿರುವುದು, ರೈತರ ದೃಷ್ಟಿಯಿಂದ ಓದಲು ತುಸು ಕಠಿಣವೆನಿಸುತ್ತದೆ. ಜೊತೆಗೆ, ಎರಡನೇ ಭಾಗದಲ್ಲಿರುವ ಆಹಾರ ಬನ, ಒಂದು ಎಕರೆಯ ಕೃಷಿ, ಬೆಳೆ ಸಂಯೋಜನೆ ನಕ್ಷೆಗಳು... ಸಣ್ಣ ಕೃಷಿಕರು ಅಳವಡಿಸಿಕೊಳ್ಳಬಹುದಾದ ಇಂಥ ವಿಧಾನಗಳನ್ನೇ ಪ್ರತ್ಯೇಕವಾಗಿ ಪುಟ್ಟ ಪುಸ್ತಕ ಮಾಡಬಹುದಿತ್ತು.

ಕೃತಿ: ಬೆಳಕಿನ ಬೇಸಾಯ
ಲೇ: ಅವಿನಾಶ್ ಟಿ.ಜಿ.ಎಸ್.
ಪ್ರ : ಅಹರ್ನಿಶಿ
ಸಂ: 9449174662, 944862851

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು