ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಮುಕ್ತತೆ ಮತ್ತು ಮುಗ್ಧತೆಗಳ ನಡುವೆ...

Last Updated 16 ಜನವರಿ 2021, 19:30 IST
ಅಕ್ಷರ ಗಾತ್ರ

ಬೆಳ್ಳಿಮೈ ಹುಳ
ಲೇ:
ಜ.ನಾ.ತೇಜಶ್ರೀ
ಪ್ರ: ವೈಷ್ಣವಿ ಪ್ರಕಾಶನ, 9620170027
ಪುಟಗಳು: 140
ಬೆಲೆ: 120

ಕವಿಯಾಗಿ ಕೆಲ ಕಾಡುವ ಕವಿತೆಗಳನ್ನು ನೀಡಿರುವ ಜ.ನಾ.ತೇಜಶ್ರೀಯವರು ಈಗ ‘ಬೆಳ್ಳಿಮೈ ಹುಳ’ ಎಂಬ ಮೊದಲ ಕಥಾಸಂಕಲನವನ್ನು ತಂದಿದ್ದಾರೆ. ಅವರ ಕಾವ್ಯವನ್ನು ಇಡಿಯಾಗಿ ಓದಿರುವ ನನಗೆ, ಕತೆಗಳ ತಾತ್ವಿಕತೆ, ಅವರ ಕವಿತೆಗಳ ಒಂದು ಕೋನದಿಂದ ಬಂದಿದೆ ಅನಿಸಿದೆ. ಹೀಗೆ ಹೇಳುವಾಗ ಅವರ ಕತೆಗಳಲ್ಲಿ ಮತ್ತೊಂದು ಕಾವ್ಯದ ಸೆಳಕುಗಳಿವೆ ಎಂಬುದನ್ನೂ ಮರೆಯುವಂತಿಲ್ಲ.

ಯಾವುದೇ ಕಥಾಲೋಕ ಬದುಕನ್ನು ನೋಡುವುದು ಒಂದು ಬಗೆಯಲ್ಲಿ ಆಲಯದಿಂದ ಬಯಲನ್ನು ಕಂಡಂತೆ. ತೇಜಶ್ರೀಯವರ ಇಲ್ಲಿನ ಕತೆಗಳ ಲೋಕದಲ್ಲಿ ವಿಚಿತ್ರ ರೀತಿಯ ಭಾವಲೋಕವೊಂದು ತಲ್ಲಣಿಸಿದೆ. ಈ ಭಾವಲೋಕವು ಬಹುತೇಕ ಹದಿಹರೆಯದ ಯುವತಿಯರ ಮತ್ತು ಮಕ್ಕಳ ಮುಗ್ಧಲೋಕದ ಬಾಳಾಟಗಳು, ಹಲಬಗೆಯ ತಾಕಲಾಟಗಳು, ತಾಜಾತನದ ಕನಸುಗಳು ಹಾಗೂ ಭಿನ್ನಬಗೆಯ ಆಸಕ್ತಿಗಳಿಂದ ಕೂಡಿದೆ. ಇವೆಲ್ಲವನ್ನೂ ಒಳಗೊಂಡು ಒಂದು ಪರಿಕಲ್ಪನೆಯನ್ನು ಬಳಸುವುದಾದರೆ ಇಲ್ಲಿನ ಒಟ್ಟು ಕತೆಗಳ ಕೇಂದ್ರ ‘ಬೇಟೆ ಮತ್ತು ಬೇಟ’ಗಳ ನಡುವೆ ಮನುಷ್ಯ ಸಂಬಂಧಗಳು ತೊಯ್ದಾಡುವ ಕ್ರಮ.

‘ಬೇಟೆ’ ಮಾನವೀಯ ವಲಯದ ಕ್ರೌರ್ಯವನ್ನು ಮತ್ತು ಅದರ ಬಿರುಕುಗಳನ್ನು ಅನಾವರಣಗೊಳಿಸಿದರೆ, ‘ಬೇಟ’ ಪ್ರೀತಿಯ ಗರ್ಭದಲ್ಲಿಯೇ ಭಗ್ನತೆಗಳು ಎದುರುಗೊಳ್ಳುವುದನ್ನು ಕಾಣುತ್ತೇವೆ. ಇದಕ್ಕೆ ‘ಬೇಟೆ’ ಕತೆಯೇ ನಿದರ್ಶನ. ಸುಗ್ಗಿ, ಮಗು ಹಾಗೂ ದೊಡ್ಡಯ್ಯನೆಂಬ ಹಿರಿಜೀವದ ಮೂಲಕ ಆರಂಭವಾಗುವ ಕತೆ ಅನೇಕ ತಿರುವುಗಳನ್ನು ಪಡೆದುಕೊಂಡು ಗ್ರಾಮಬದುಕಿನ ಮತ್ತು ಮನುಷ್ಯತ್ವದ ನಾಶವನ್ನೇ ತತ್ವವನ್ನಾಗಿ ಮಾಡಿಕೊಂಡಿದೆ.

ದೊಡ್ಡಯ್ಯನ ಮೂಲಕ ಏಕಕಾಲದಲ್ಲಿ ಬಾಲ್ಯ ಮತ್ತು ವರ್ತಮಾನ ಎರಡನ್ನೂ ಮುಖಾಮುಖಿಯಾಗಿಸಿ ತಾನಿರುವ ಕಾಲದ ಬದುಕು ಅತ್ಯಂತ ಭೀಕರವಾದದ್ದು ಎಂಬುದನ್ನು ಅವ್ಯಕ್ತರೂಪದಲ್ಲಿಯೇ ಕಾಣಿಸುವುದು ಈ ಕತೆಯ ಶಕ್ತಿ. ಆದರೆ, ಈ ಕತೆಯಲ್ಲಿ ಹಲವು ಬಾರಿ ವಿವರಗಳನ್ನು ಕತೆಗಾರ್ತಿಯಾಗಿ ವರ್ಣಿಸಿದರೆ, ಕೆಲವೊಮ್ಮೆ ಕವಿಯಾಗಿ ರೂಪಾಂತರಗೊಂಡು ಅಭಿವ್ಯಕ್ತಿಸಲಾಗಿದೆ. ಆ ವ್ಯತ್ಯಾಸಗಳು ಎದ್ದು ಕಾಣಿಸುತ್ತವೆ. ವಿವರ ಮತ್ತು ಘಟನೆಗಳಿಗೆ ಸಾತತ್ಯವಿಲ್ಲದೆ ಹೋದಾಗ ಶಿಲ್ಪದಲ್ಲಿ ಬಿರುಕು ಬೀಳುತ್ತದೆ. ಘಟನೆಗಳು ಅನೇಕ ಕಡೆ ದೃಶ್ಯಗಳಾಗುತ್ತವೆ. ಈ ಸವಾಲುಗಳನ್ನು ‘ಕರ್ಫ್ಯೂ’ ಕತೆಯಲ್ಲೂ ಕಾಣಬಹುದು. ಆಸ್ಪತ್ರೆಯಲ್ಲಿ ನಡೆಯುವ ವಿವರಗಳು ಮಾತುಕತೆಗಳಿಂದ ಒಳಗೊಂಡಿದ್ದರಿಂದ ಅಲ್ಲಿ ಸಂವಹನ ಮಾದರಿಯೊಂದು ಕಥನದ ಸಿದ್ಧಮಾದರಿಯನ್ನು ಮುರಿಯಲು ಹೊರಟು ಮತ್ತೆ ದಿಕ್ಕು ತಪ್ಪುತ್ತದೆ. ಆದರೆ, ಈ ಕತೆಗಳು ಗೆಲ್ಲುವುದು ತಮ್ಮೊಳಗೆ ಅದುಮಿಟ್ಟುಕೊಂಡಿರುವ ಭಾವುಕತೆಯಿಂದ. ಯಾವುದೇ ಕತೆ ಸಶಕ್ತವಾಗುವುದು ಇದರಿಂದಲೇ ಅಲ್ಲವೇ? ಕತೆಯು ಭಾವುಕತೆಯ ತಿರುವು ಧರಿಸುವುದು ಕೋಮುದ್ವೇಷದ ಗಲಾಟೆಯ ನಂತರ.

ಇಲ್ಲಿನ ಕೆಲ ಕತೆಗಳ ಮತ್ತೊಂದು ಜಗತ್ತು ಮಕ್ಕಳ ಮನೋಲೋಕಕ್ಕೆ ಸಂಬಂಧಿಸಿದ್ದು. ‘ಏರೋಪ್ಲೇನ್ ಚಿಟ್ಟೆ’ ಕತೆಯಲ್ಲಿ, ಇರುವ ಬದುಕು ಮತ್ತು ಸಹಜ ನಿಸರ್ಗಸ್ಥಿತಿಗಳನ್ನು ಅಭಿವ್ಯಕ್ತಿಸುವ, ಸಣ್ಣ ಸಂಗತಿಗಳನ್ನು ಕತೆಯಾಗಿಸುವ ಕೌಶಲ, ಗಮನಿಕೆಗಳು ಮುನ್ನೆಲೆಗೆ ಬಂದಿವೆ. ‘ಗಮನಿಕೆ’ಗಳು ಹೊಸತಲೆಮಾರಿನ ಕತೆಗಾರರಲ್ಲಿ ಅಷ್ಟಾಗಿ ದೊಡ್ಡ ಮಟ್ಟದ ದರ್ಶನವನ್ನು ಪಡೆಯುತ್ತಿಲ್ಲ. ತೇಜಶ್ರೀಯವರ ಕತೆಗಳಲ್ಲಿ ಗಮನಿಸಬೇಕಾದ ಅಂಶವೆಂದರೆ ರೋಗಗಳೇ ರೂಪಕಗಳಾಗುವುದು. ತುದಿಗಣ್ಣಿನಲ್ಲೂ ಸಾವಿನಂಚಿನೊಡನೆ ಮುಖಾಮುಖಿಯಾಗುವ ವ್ಯಕ್ತಿಗಳಿದ್ದಾರೆ. ಅವರಲ್ಲಿ ಬಹುಪಾಲು ಹೆಣ್ಣುಮಕ್ಕಳೇ ಆಗಿದ್ದಾರೆ. ಅವರು ಸಾವನ್ನು ಅಂಗೈಯಲ್ಲಿಟ್ಟುಕೊಂಡು ಎದುರಿಸಬಲ್ಲವರು.

ಮೇಲೆ ಹೇಳಿದ ಎಲ್ಲ ಕತೆಗಳಲ್ಲಿ ಈ ಸಂಕಲನದ ದೀರ್ಘವಾದ ಕತೆ ‘ಬೆಳ್ಳಿಮೈ ಹುಳ’. ಗಟ್ಟಿಕತೆಗೆ ಇರಬಹುದಾದ ಎಲ್ಲ ಲಕ್ಷಣಗಳನ್ನು ಮೈದುಂಬಿಸಿಕೊಂಡಿದೆ. ಇಲ್ಲಿನ ಅನುಭವ ತಾಕುವಷ್ಟು ಬೇರಾವ ಕತೆಗಳಲ್ಲೂ ಕಲೆಗಾರಿಕೆಯಿಂದ ತಾಕುವುದಿಲ್ಲ. ಇಲ್ಲಿನ ಕಲೆಗಾರಿಕೆಯು ಅನುಭವಗಳನ್ನು ನಿರಂತರವಾಗಿ ಸಾಗಿಸುತ್ತದೆ. ಬದುಕಿನ ತಲ್ಲಣ, ಕೌಶಲವನ್ನು ಧರಿಸಿ ದರ್ಶನದ ಹಂತಕ್ಕೆ ಏರುತ್ತದೆ. ಆಗಲೇ ಹೇಳಿದಂತೆ ‘ಗಮನಿಕೆಗಳು’ ವ್ಯಕ್ತಿಗಳ ಅಂತರಂಗವನ್ನು ವಿಸ್ತಾರಮಾಡುತ್ತವೆ. ಜಾನಕಿಯ ಪ್ರಜ್ಞೆಯ ಮೂಲಕ ಸಾಗುವ ಕಥನ ಭಿನ್ನ ತಿರುವುಗಳನ್ನು ಪಡೆದುಕೊಂಡು ಈ ತಿರುವುಗಳು ಹಲ ಬಗೆಯ ಜೀವಿತ ದಾರಿಗಳನ್ನು ತೆರೆದಿಡುತ್ತವೆ.

ಜಾನಕಿ ಓದುವ ಪುಸ್ತಕದೊಳಗೆ ಹುಳುವಿನ ಸಾವಿನ ವಿವರದೊಂದಿಗೆ ಸಾಗುವ ಕತೆ ಅನೇಕ ಅಂತರಂಗಗಳ ಸುಳಿದಾಟ, ಬಾಳಾಟಗಳು ಕಣ್ಣಮುಂದೆ ಹಾದುಹೋಗುತ್ತವೆ. ತಂದೆ ವೆಂಕಟರಮಣ ಮನೆಯ ಹೊರಗೆ ಪ್ರಗತಿಪರನಂತೆ ಕಂಡರೂ ಒಳಗೆ ಪರಮ ಢೋಂಗಿಯಾಗಿ, ಹಲವೊಮ್ಮೆ ಕ್ರೂರಿಯಾಗಿ ಕಾಣಿಸುತ್ತಾನೆ. ಎಲ್ಲ ಬಗೆಯ ‘ಶಬ್ದ’ಗಳನ್ನು ವಿರೋಧಿಸುವ ಈ ವ್ಯಕ್ತಿ ಸದ್ದಿಲ್ಲದೇ ಹೆಣ್ಣುಮಕ್ಕಳ ಮಾನಸಿಕ ನೆಮ್ಮದಿಯನ್ನು ಕಬಳಿಸಿದ್ದಾನೆ. ಜಾನಕಿಯು ಅಪ್ಪ ಚರ್ಚಿಸುವ ಪ್ರಗತಿಪರ ವಿಚಾರಗಳಿಗಿಂತ ಸ್ವ ಬದುಕನ್ನು ರೂಪಿಸಿಕೊಳ್ಳುವ ದಾರಿಯಲ್ಲಿ ಪುಸ್ತಕಗಳಲ್ಲಿರುವ ಅನೇಕ ಭಿನ್ನ ಪಾತ್ರಗಳ ಲೋಕಕ್ಕೆ ಜಾರುತ್ತಾಳೆ. ಕ್ರಮೇಣ ಬೋದಿಲೇರ್‌ನ ‘ಪಾಪದ ಹೂಗಳು’ ಕವಿತೆಗಳ ಬದುಕಿನ ಒಳತ್ವವನ್ನು ಹುಡುಕುತ್ತಾಳೆ.

ನಾವು ಈ ಕತೆಯನ್ನು ಸವೆದ ಸ್ತ್ರೀವಾದಿ ಮಾನದಂಡಗಳಿಂದ ನೋಡಬಾರದು. ಜಾನಕಿಯ ಬದುಕು ‘ಸಹಜ ಜೀವಿತ ಬದುಕೊಂದರ ರೂಪಕ’ ಮಾಲೆಯಲ್ಲೇ ತನ್ನ ಭಾವಲೋಕವನ್ನು ಅನ್ಯ ದಿಕ್ಕುಗಳಿಗೆ ಜಿಗಿತಗೊಳಿಸಿಕೊಳ್ಳುವುದರಲ್ಲಿ ಆಕೆಯ ಸ್ವಾತಂತ್ರ್ಯವಿದೆ; ಎಲ್ಲಕ್ಕಿಂತ ಮುಖ್ಯವಾಗಿ ‘ಇರುವಿಕೆ’ ಇದೆ. ಒಟ್ಟು ಕತೆಯ ಜೀವನಾನುಭವಗಳಿಗೆ ತಕ್ಕಂತೆ ವಿವರಗಳು ಕಥನಕ್ಕೆ ಬಿಗಿಯಾಗಿ ಅಂಟಿಕೊಂಡಿವೆ. ವಿನ್ಯಾಸದ ಚೌಕಟ್ಟಿನಲ್ಲಿ ಕ್ವಚಿತ್ತಾಗಿ ಮಿತಿಗಳನ್ನು ಕಂಡರೂ ತೇಜಶ್ರೀಯವರ ಕೆಲ ಕತೆಗಳು ದರ್ಶನ ದೃಷ್ಟಿಯಿಂದ ಕುತೂಹಲ ಹುಟ್ಟುವಂತೆ ಮಾಡಿವೆ. ಮುಂದೆ ಬರಬಹುದಾದ ಕತೆಗಳು ಇದನ್ನು ಇನ್ನೂ ಗಟ್ಟಿಯಾಗಿ ನಿರ್ಧರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT