ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವ ಎನಗೆ ಹಿಂಗಿತು (ಕಥೆ)

Last Updated 19 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಏ ಯ್! ನೋಡಮ್ಮ, ಏನ್ ನಿನ್ನೇಮು? ನೀನೇ ತಾನೆ ಮಲ್ಲಿಕಾ? ಅಧ್ಯಕ್ಷರು ಕರೀತಾವ್ರೆ ಬಾ...

ಮುಂಜಾನೆ ಎಫ್.ಎಂ.ನಲ್ಲಿ ಕೇಳಿದ್ದ ‘ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು’ ಹಾಡನ್ನು ಗುನುಗುತ್ತ ಸ್ಟಾಫ್‍ ರೂಮಿನಲ್ಲಿ ಕಸ ಗುಡಿಸುತ್ತಿದ್ದ ಮಲ್ಲಿಕಾ ಆ ಕಡೆಯಿಂದ ತೂರಿ ಬಂದ ಗಡಸು ದನಿಗೆ ಬೆಚ್ಚಿ ಕತ್ತೆತ್ತಿ ನೋಡಿ, ಕಣ್ಮೇಲೆ ಹಾರಾಡುತ್ತಿದ್ದ ತಲೆಕೂದಲನ್ನು ಕಿವಿಸಂದಿಗೆ ಸಿಗಿಸಿಕೊಳ್ಳುತ್ತ ಎದ್ದು ನಿಂತಳು. ಅವನು ನಿಂತು ಕೂಗಿದ್ದ ಭಂಗಿಯನ್ನು ಒಂದಿನಿತೂ ಬದಲಿಸದೆ ದುರುದುರು ನೋಡಿದ. ಯಾರಿಗೆ ಕರೆದನೆಂದು ತಿಳಿಯಲಿಲ್ಲ.

‘ಏನು ಹಿಂಗೆ ನಿಂತಬುಟ್ಟೆ? ನಿನ್ಗೇ ಹೇಳಿದ್ದು ಬಾ...ಬಾ...’ ಮತ್ತೆ ಅವನದು ಅದೇ ಕಡುಪು.

ಮಲ್ಲಿಕಾಗೆ ತನ್ನನ್ನೇ ಕರೆಯುತ್ತಿರುವುದು ಎಂದು ಖಾತ್ರಿಯಾಯಿತು. ಆದರೆ ಆ ಅಧ್ಯಕ್ಷ ಯಾರು? ತಿಳಿಯಲಿಲ್ಲ. ಈ ವ್ಯಕ್ತಿಯ ಒರಟು ರಭಸಕ್ಕೆ ಯಾಕೆ ಅಂತ ಕೇಳಲೂ ಆಗಲಿಲ್ಲ. ಈ ದೊಡ್ಡ ಶಾಲಾ ಕಟ್ಟಡಕ್ಕೆ ಹಲವು ಕೋಣೆಗಳು; ಹಲವಾರು ದಾರಿಗಳು. ಆ ಹಿರಿಯೆ ನಾಗಕ್ಕ ಆ ಕಡೆಯ ಭಾಗಕ್ಕೆ ಕಸಗುಡಿಸುವ ಕೆಲಸ ವಹಿಸಿರಲಿಲ್ಲ. ಪೊರಕೆಯನ್ನು ಮೂಲೆಗಿಟ್ಟು ಕೈ ಒರೆಸಿಕೊಳ್ಳುತ್ತ ಅಳುಕು ಹೆಜ್ಜೆಯೂರುತ್ತ ಬಾ ಬಾ ಅಂದು ಹೊರಟವನನ್ನು ಹಿಂಬಾಲಿಸಿದಳು.

ಅವನು ಕರೆತಂದು ತೋರಿದ ಕೋಣೆಯ ಬಾಗಿಲು ಮುಚ್ಚಿತ್ತು. ಅಪ್ಪಣೆ ಇಲ್ಲದೆ ಮುಚ್ಚಿರುವ ಬಾಗಿಲನ್ನು ತಳ್ಳಿ ಕೈಕೆಳಗಿನ ನೌಕರರು ಒಳ ಹೋಗಬಾರದೆಂಬ ರೂಢಿಯನ್ನು ನಾಗಕ್ಕ ಬಂದ ಹೊಸದರಲ್ಲಿಯೇ ತಿಳಿಸಿದ್ದಳು. ಇವಳು ಬಾಗಿಲ ಬಳಿ ನಿಂತುಬಿಟ್ಟಳು. ಕೊನೆಗೆ ಅವನು ‘ಹೊಸಬಳಾ ನೀನು? ಯಾರ‍್ಯಾರಿಗೊ ವಸೀಲಿ ಬಾಜಿ ಹಚ್ಚಿ ಬಂದ್‍ಬುಡ್ತೀರಿ? ಹೂಂ ಒಳಗ್ಹೋಗು, ಸಾಹೇಬ್ರು ಕಾಯ್ತ ಅವರೆ’ ಅಂತ ಗದರಿಸಿದ.

ಮಲ್ಲಿಕಾ ಆ ಮಾತು ಕೇಳಿ ತಬ್ಬಿಬ್ಬಾದಳು. ತನ್ನ ಗಂಡನ ಪರಿಚಯಸ್ಥ ಡ್ರೈವರಣ್ಣನ ಮೂಲಕ ಇಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು ದಿಟ. ಅಷ್ಟು ದೂರದಿಂದ ಬೆಳಿಗ್ಗೆ 7 ಗಂಟೆಗೆ ಬಂದರೆ ಸಂಜೆ 4.30ರವರೆಗೆ ಕೆಲಸ. ಹಾಗಾಗಿ ಇಲ್ಲಿ ಕೆಲಸ ಕೊಡಿಸಿದ ಡ್ರೈವರಣ್ಣನ ಪರಿಚಯ ಮಾಡಿಕೊಂಡು ಮಾತಾಡಿಸಲೂ ಆಗಿರಲಿಲ್ಲ. ಆಗ ಈಗ ಅನ್ನುತ್ತಲೇ ಆರು ತಿಂಗಳು ಉರುಳಿ ಹೋಗಿತ್ತು.

ಈಗ ಇವನು ‘ನೀನು ಯಾವ ಸೀಮೆ ಹೆಂಗ್ಸು? ನನ್ನನ್ನೇ ಬೈಸಬೇಕು ಅಂತ ಮಾಡಿದ್ದೀಯಾ? ಒಳಕ್ಕೋಗು’ ಅಂದವನೇ ಬಿರು ನುಡಿಯಿಂದ ಬಾಗಿಲು ತಳ್ಳಿದ. ಮಲ್ಲಿಕಾಳಿಗೆ ಕತ್ತು ಹಿಡಿದು ಕೂಪಕ್ಕೆ ತಳ್ಳಿದಂತಾಯಿತು. ಕಿರ್‍ಗುಡುತ್ತ ಮತ್ತೆ ತಂತಾನೆ ಮುಚ್ಚಿಕೊಂಡ ಬಾಗಿಲ ಬಳಿಯೇ ನಿಂತು ಬೆದರುಗಣ್ಣಾಡಿಸಿದಳು. ಅವರೇ ಇರಬೇಕು ಅಧ್ಯಕ್ಷರು, ಎದುರುಗಡೆಯ ದೊಡ್ಡ ಕುರ್ಚಿಯ ಮೇಲೆ ಕೂತಿದ್ದರು. ಅವರ ಮುಂದಿನ ಉದ್ದನೆ ಟೇಬಲ್‌ ಸುತ್ತ ಸಮತಟ್ಟಾದ ಕುರ್ಚಿಗಳು. ಟೇಬಲಿನ ಕಡೆ ಅಂಚಿನಲ್ಲಿ ತನ್ನ ಮೆಚ್ಚಿನ ನಿವೇದಿತಾ ಟೀಚರ್. ಅವರ ಪಕ್ಕ ಕೊಂಚ ದೂರ ಪ್ರಿನ್ಸಿಪಾಲ್ ಮೇಡಂ. ಈ ಪ್ರಿನ್ಸಿಪಾಲ್ ಮೇಡಂ ತಾಯಿ ತರಹ, ಒಳ್ಳೆಯವರು. ಇವರೇ ತಮಗೆಲ್ಲ ಕೆಲಸ ವಹಿಸುವುದು. ಕೊಂಚ ಉಸಿರಾಟ ಸಲೀಸು ಅನಿಸಿತು. ಹಣೆ, ಮೂಗು, ತುಟಿಯಂಚಿನಲ್ಲಿ ಜಿನುಗುತ್ತಿದ್ದ ಬೆವರನ್ನು ಒರೆಸಿಕೊಂಡು ಅಪ್ಪಣೆಯಾಗಲಿ ಎಂಬಂತೆ ಕೈಮುಗಿದು ನಿಂತಳು. ಸಂಸ್ಥೆಯ ದೊಡ್ಡವರು ಎದುರು ಸಿಕ್ಕರೆ ಕೈಮುಗಿಯಬೇಕೆಂದು ನಾಗಕ್ಕ ಹೇಳಿದ್ದಳು.

‘ಇವಳೇನಾ?’ ಅಧ್ಯಕ್ಷರ ಚೂಪು ಮಾತು ತೂರಿ ಬಂತು. ಅವರ ನೋಟವಂತೂ ಬೆಂಕಿಕೊಳ್ಳಿಯಂತಿತ್ತು. ನಿವೇದಿತಾ, ‘ಎಸ್ ಸರ್, ಶಿ ಈಸ್ ದ ಲೇಡಿ’ ಅಂದರು. ಪ್ರಿನ್ಸಿಪಾಲ್ ಮೇಡಂ ಸೈತ ತನ್ನನ್ನೇ ದುರುದುರು ನೋಡುತ್ತಿದ್ದರು. ಇವಳಿಗೀಗ ಏನೋ ಆಗಿದೆ ಎಂಬ ಅನುಮಾನ ಶುರುವಾಯಿತು.

ಇಡೀ ಕೋಣೆ ತುಂಬ ಕೊಂಚ ಹೊತ್ತು ಕಡು ಮೌನ. ವಿಷಯವೇನೆಂದು ತಿಳಿಸದೆ ಈ ಮೌನದಲ್ಲೆ ಹರಿಸುತ್ತಿದ್ದ ಅವರ ದೃಷ್ಟಿ ಮಾತ್ರ ಉಸಿರುಕಟ್ಟಿಸುವಂತಿತ್ತು. ಅವಳು ನಿಂತಲ್ಲೇ ಹೊಸಕಾಡತೊಡಗಿದಳು. ಈಗ ಆ ಕಡೆಯಿಂದ ಅಧ್ಯಕ್ಷರು ಅಸಹನೆಯಿಂದಲೇ ‘ರೀ, ಆಶಾ ಮೇಡಂ, ಅದೇನು ಅಂತ ಎನ್‍ಕ್ವೈರಿ ಮಾಡ್ರಿ’ ಅಂತ ಹೇಳಿ ತಮ್ಮ ಪಕ್ಕದಲ್ಲಿದ್ದ ಫೈಲನ್ನು ಮುಂದಕ್ಕೆ ಎಳೆದುಕೊಂಡರು.

ಆವೊತ್ತು ತಾನು ಸ್ಟಾಫ್‌ರೂಮಿನ ಟೇಬಲಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ನಿವೇದಿತಾ ಟೀಚರ್ ‘ರೀಟಾ ಮೇಡಂ, ಈ ಆಯಾಳನ್ನು ಗಮನಿಸ್ತಿದ್ದೀರಾ? ಈಕೆ ಸದಾ ನನ್ನನ್ನೇ ನೋಡ್‌ತಿರ್ತಾಳೆ. ನನ್ನ ವಾರ್ಡ್‌ರೋಬ್ ಹತ್ರನೇ ಸುಳಿದಾಡ್‍ತಿರ್ತಾಳೆ. ಕೇಳಿದ್ರೆ ಏನೂ ಇಲ್ಲ ಮೇಡಂ ಅಂತ ನಯವಾಗಿ ಜಾರಿಕೊಳ್ತಾಳೆ. ಪೆಕ್ಯೂಲಿಯರ್ ಲೇಡಿ! ಇಂಥೋರ ಬಗ್ಗೆ ಕೇರ್‌ಫುಲ್ಲಾಗಿ ಇರಬೇಕಪ್ಪ’ ಅಂದಿದ್ದರು. ರೀಟಾ ಮೇಡಂ ಮಾತ್ರ ಸುಮ್ಮನೆ ನೋಡಿ ನಗಾಡಿದ್ದರು.

ಮಲ್ಲಿಕಾ ಅವತ್ತು ಮೇಡಂ ರೇಗಿಸುತ್ತಿದ್ದಾರೆ ಅಂದುಕೊಂಡಿದ್ದಳು. ಆದರೆ ಇವತ್ತು ಕರೆದು ನಿಲ್ಲಿಸಿ, ದುರುಗುಟ್ಟುವುದನ್ನು ನೋಡಿದರೆ ತಾನು ಏನೋ ತಪ್ಪು ಮಾಡಿದ್ದೀನಿ ಅಂತ ತೀರ್ಮಾನ ಮಾಡಿದಂತಿದೆ! - ಗಾಬರಿ ಆಯಿತು.

ಆದಾಗ್ಯೂ ಮಲ್ಲಿಕಾಳಿಗೆ ತನ್ನ ಯಾವುದೊ ತಪ್ಪಿಗಾಗಿ ಕರೆಸಿ ನಿಲ್ಲಿಸಿರಬಹುದೆಂದು ನಂಬಲಾಗಲಿಲ್ಲ. ತನ್ನ ಕೆಲಸದ ಬಗ್ಗೆ ಈವರೆಗೆ ಒಂದು ಕೊಂಕು ಮಾತು ಹೇಳಿಸಿಕೊಂಡಿದ್ದಿಲ್ಲ. ಅಲ್ಲದೆ ತನಗೆ ಬೇಕಾದ ಇಬ್ಬರು ಮೇಡಂದಿರು ಇಲ್ಲಿದ್ದಾರೆ! ಅದರಲ್ಲೂ ಈ ನಿವೇದಿತಾ ಟೀಚರ್ ಅಂದರೆ ತನ್ನ ಅಚ್ಚುಮೆಚ್ಚು.

ಮಲ್ಲಿಕಾಳು ನಿವೇದಿತಾ ಟೀಚರನ ರೂಪ-ನಿಲುವನ್ನು ತನ್ನ ಮನಕ್ಕೆ ತಂದುಗೊಂಡಳು. ಇವರು ದಿಟವಾಗಿ ಅಂದ, ಅಲಂಕಾರ, ಸಂಪತ್ತಿನ ಒಡತಿ!

ತಾನು ಮುಂಜಾನೆ 4 ಗಂಟೆಗೇ ಎದ್ದು ಮನೆ ಮುಸುರೆ ತೊಳೆದು 6 ಗಂಟೆಗೇ ಗಂಡ ಮತ್ತು ತನಗೆ ತಿಂಡಿ, ಊಟ ಸಿದ್ಧಮಾಡಿ ತಾನೂ ಸಿದ್ಧವಾಗಿ ಸಮವಸ್ತ್ರದ ಸೀರೆಯಾದರೂ ನಿವೇದಿತಾ ಟೀಚರ್ ಥರವೇ ಉಟ್ಟು ತುಳುಕುವ ರೂರಲ್ ಬಸ್ಸು ಹಿಡಿದು ಸೌಧಾಮಿನಿ ಛತ್ರದ ಬಳಿ ಇಳಿದು ನಡೆದು ಬರುವವರೆಗೆ ಎಲ್ಲವೂ ಗಡಿಬಿಡಿ. ಬಂದ ಮೇಲಂತೂ ಸ್ಟಾಫ್‍ರೂಮಿಗೊ ಕ್ಲಾಸ್‍ರೂಮಿಗೊ ಲಕಲಕನೆ ನಡೆದು ಹೋಗುವ ನಿವೇದಿತಾ ಟೀಚರ್ ಕಂಡರೆ ಸಾಕು ಆಯಾಸವೆಲ್ಲ ಪರಿಹಾರ. ಒಂದು ಬಗೆಯ ಉತ್ಸಾಹ-ಹುರುಪು!

ಆಗತಾನೆ ಕೆಲಸಕ್ಕೆ ಸೇರಿದ ಹೊಸದು. ಹೇರ್‌ಸ್ಟ್ರೇಟ್‌ ಮಾಡಿಕೊಂಡು, ಹೈಹೀಲ್ಡ್ ಚಪ್ಪಲಿ ತೊಟ್ಟು ಬಂದಿದ್ದು ಕಂಡ ಹಿರಿಯೆ ನಾಗಕ್ಕ ‘ಇದೇನೇ, ಹಿಂಗೆ ಬಂದ್ರೆ ನೋಡಿದೋರು ಏನಂದಾರು? ಬೇಕಾದ್ರೆ ಗಂಡನ ಜ್ವತೆ ಸಿಟಿಗಿಟಿಗೆ ಹೋದಾಗ ಹಿಂಗೆಲ್ಲ ಮಾಡ್ಕೊಂಡು ಹೋಗು’ ಅಂತ ಹೇಳಿದ ಮೇಲೆ ಅಟೆಂಡರ್‌ಗಳು ಅಂದ ಮಾಡಿಕೊಂಡು ಇಲ್ಲಿಗೆ ಬರುವಂತಿಲ್ಲ. ಆದರೆ ಹೊರಗಡೆಗೆ ಇವರ‍್ಯಾರ ಹಂಗೂ ಇಲ್ಲ ಅನ್ನುವ ತಿಳಿವಳಿಕೆ ಬಂತು. ಗಂಡ ಯಾವತ್ತೂ ಬೇಡ ಅನ್ನಲಿಲ್ಲ.

ಒಮ್ಮೆ ಊಟದ ಬಿಡುವುನಲ್ಲಿ ತಮ್ಮ ರೂಮಿನಲ್ಲಿ ಕೂತಿದ್ದಾಗ ಬ್ಲೂ ಸ್ಯಾರಿ ಉಟ್ಟು ಆ ಕಡೆ ಹಾದು ಹೋದ ನಿವೇದಿತಾ ಟೀಚರನ್ನೇ ನೋಡುತ್ತಿದ್ದ ತನಗೆ ‘ಏನು ಹಂಗೆ ನೋಡ್ತೀಯೆ ಮಲ್ಲಿ? ಆಯಮ್ಮನ್ನ ನೋಡುತ್ತಿದ್ರೆ ನಿನ್ಗೆ ಅಸೂಯೆನಾ? ನೀನು ಹೆಚ್ಚುಕಮ್ಮಿ ಅವರಷ್ಟೇ ಚಂದ ಇದ್ದಿ! ಅವರಂಗೆ ಬಾಬ್‍ಕಟ್ ಮಾಡಿಸ್ಕೊಂಡ್ರೆ ಹೋಲ್ಕೇನೆ ಬ್ಯಾಡ. ಹಂಗಂತ ಅವರ ಜ್ವತೆಗೆ ಸ್ಪರ್ಧೆಗಿಳಿದೀಯಾ ಜೋಕೆ?’ ಅಂತ ನಾಗಕ್ಕ ನಕ್ಕಿದ್ದಳು.

ದಿಟವಾಗಿ ನಾಗಕ್ಕನ ನಗು ಮಲ್ಲಿಕಾಳಲ್ಲಿ ಭಾವತರಂಗಗಳನ್ನೇ ಎಬ್ಬಿಸಿಬಿಟ್ಟಿತ್ತು. ಅವತ್ತು ರಾತ್ರಿ ತಡವಾಗಿ ಬಂದ ಗಂಡನಿಗೆ ಊಟ ಬಡಿಸುವುದನ್ನು ಬಿಟ್ಟು ‘ರೀ ನಾನು ನಮ್ಮ ನಿವೇದಿತಾ ಟೀಚರ್‍ನಷ್ಟೇ ಚಂದಾಗಿದ್ದೀನಾ?’ ಅಂತ ಕೇಳಿಯೇ ಕೇಳಿದ್ದಳು. ಅವನು ತನ್ನ ಯೂನಿಫಾರಂನ್ನು ಕಳಚುತ್ತಾ ‘ಇದೇನೇ ನಿನ್ನ ಗುಂಗು? ಫೇಷಿಯಲ್ ಮಾಡಿಸ್ಕೊಂಡು ಬಣ್ಣಬಣ್ಣದ ಡ್ರೆಸ್ ಹಾಕೊ. ಆಗ ನೋಡು, ಅವರನ್ನೇ ಏನು ರಂಭೆಯನ್ನೂ ಮೀರಿಸ್ತೀಯಾ?... ಈಗ ಮೊದ್ಲು ಊಟ ಹಾಕು. ಊಟಿಯಿಂದ ಒಂದೇ ಸಮ್ನೆ ಡ್ರೈವ್ ಮಾಡಿ ಬಂದಿರೋದು, ಸಾಕಾಗ್ಯದೆ’ ಅಂದಿದ್ದ.

ಆಶಾ ಮೇಡಂ ‘ರೀ ನಿವೇದಿತಾ, ಸ್ಟಾಫ್‍ರೂಮಿನಲ್ಲಿರೊ ನಿಮ್ಮ ವಾರ್ಡ್‌ರೋಬ್‌, ನಿಮ್ಮ ವ್ಯಾನಿಟಿ ಬ್ಯಾಗು, ಇನ್ನೊಮ್ಮೆ ಹುಡುಕಿ. ಮನೇಲೇ
ನಾದ್ರು ಬಿಟ್ಟು ಬಂದಿದ್ದಿರಾ ನೆನೆಪಿಸಿಕೊಳ್ಳಿ. ದಿನಾ ನೀವು ಸ್ಕೂಲ್ಗೆ ಬರೋದಿಕ್ಕೆ ಟ್ಯಾಕ್ಸಿ ಎಂಗೇಜ್ ಮಾಡಿದ್ದೀರಲ್ವಾ ಆ ಡ್ರೈವರನ್ನೂ ಒಮ್ಮೆ ಕೇಳಿ’ ಅಂದರು.

ನಿವೇದಿತಾ ಟೀಚರ್ ಸಿಡುಕಿನಿಂದ ‘ಏನು ಮೇಡಂ ಮತ್ತೆ ಅದನ್ನೇ ಹೇಳ್ತೀರಿ? ನೆಕ್ಲೇಸ್ ಕದ್ದಿರೋಳು ಇವಳೇ! ಶಿ ಈಸ್ ದಿ ಕಲ್‍ಪ್ರಿಟ್’ ಅಂತ ಕಡ್ಡಿ ಮುರಿದಂತೆ ಅಂದರು.

ಅಧ್ಯಕ್ಷರು ನಿವೇದಿತಾಳ ಮುಖ ನೋಡಿ ಮತ್ತೆ ಫೈಲ್‍ಗೆ ಸಹಿ ಮಾಡತೊಡಗಿದರು.

ಮಲ್ಲಿಕಾಳಿಗೆ ಈಗ ಧಸ್ಸಕ್ಕನೆ ನಿಂತ ನೆಲ ಕುಸಿದಂತಾಯಿತು. ಗಂಡ ಪ್ರತಿ ತಿಂಗಳು ತನ್ನ ಸಂಬಳವನ್ನು ತಂದು ಕೊಡುತ್ತಿದ್ದ. ಆದರೂ ತನ್ನ ನೆರೆಹೊರೆಯ ಹೆಂಗಸರು ಕೆಲಸಕ್ಕೆ ಹೋಗುತ್ತಿರುವಂತೆ ತಾನು ಹೋಗಬೇಕೆಂದು, ಗಂಡ ಬೇಡವೆಂದರೂ ಬಿಡದೆ, ಕೆಲಸ ಕೊಡಿಸುವಂತೆ ಬಲವಂತ ಮಾಡಿದ್ದಳು. ತಾನೂ ದುಡಿಯಬೇಕೆಂಬ ಒತ್ತಾಸೆ. ಆದರೆ.... ಆದರೆ ತಾನು ಕದ್ದು ಶೋಕಿ ಮಾಡುತ್ತೇನೆಂದರೆ...? ಉಹುಂ! ಉಸಿರು ಕಟ್ಟಿದಂತಾಯಿತು. ಮನಸ್ಸಿಗೆ ಕತ್ತಲೆ ಕವಿದಂತಾಯಿತು.

ಆಶಾ ಮೇಡಂ ‘ಓಕೆ! ನೋಡಮ್ಮ, ಇವತ್ತು ಇವರ ನೆಕ್ಲೇಸ್ ಕಾಣೆಯಾಗಿದೆಯೆಂತೆ. ಸಂಜೆ ಪಾರ್ಟಿಗೆ ಹೋಗಬೇಕೂಂತ ತಂದಿದ್ರಂತೆ. ಅದು ವ್ಯಾನಿಟಿ ಬ್ಯಾಗ್‍ನಲ್ಲಿ ಇತ್ತಂತೆ. ನೀನು ಆ ವಿಭಾಗದಲ್ಲೇ ಕೆಲ್ಸ ಮಾಡೋಳು, ಹೇಳು ನೀನು ನೋಡಿದ್ಯಾ? ಹೆಂಗೆ?’

ಇದು ರೆಕ್ಕೆ ಬಿಚ್ಚಿ ವಿಹರಿಸುತ್ತಿದ್ದ ಹಕ್ಕಿಮರಿಗೆ ಭರ್ರನೆ ಹದ್ದು ಎರಗಿದಂತೆ! ಮಲ್ಲಿಕಾ ನಿಂತಲ್ಲೇ ಜಲಜಲನೆ ಬೆವರತೊಡಗಿದಳು. ಎಂಥ ಆರೋಪ? ಮುಖ ಕಪ್ಪಿಟ್ಟಿತು. ಇನಿತು ವಾಕ್ಯವನ್ನು ಹೊರ ಹಾಕಲಾಗದೆ ತೊದಲಿದಳು.

ನಿವೇದಿತಾ ಟೀಚರ್ ‘ನೋಡಿ ಮೇಡಂ ಸಿಕ್ಕಿಬಿದ್ದೆ ಅಂತ ಹೆಂಗೆ ಬೆವರ್ತಾ ಇದ್ದಾಳೆ! ಇವಳಲ್ದೆ ಬೇರೆ ಯಾರೂ ಅದನ್ನ ಮುಟ್ಟಿಲ್ಲ. ನೀನು ನೋಡಿದಾ ಅಂತ ಕೇಳಿದ್ರೆ ಬಾಯಿ ಬಿಡ್ತಾಳಾ?’ ಅಂದರು.

ಅಧ್ಯಕ್ಷರು ಉರಿಕೋಪದಿಂದ ‘ಪ್ರಿನ್ಸಿಪಾಲರೆ, ಇವಳ್ನ ಕರ್ಕೊಂಡೋಗಿ. ಅವಳ ಬ್ಯಾಗು, ರೂಮು ಎಲ್ಲ ಸರ್ಚ್ ಮಾಡಿ. ಇವಳ ನೋಡಿದ್ರೆ ನನಗೂ ಡೌಟ್ ಬರುತ್ತೆ. ಪ್ರೂ ಸಿಕ್ಲಿ ಬಿಡ್ಲಿ, ಇಂಥೋರ್ನೆಲ್ಲ ಮೊದ್ಲು ಒದ್ದು ಆಚೆಗೆ ಹಾಕಿ, ಐ ಡೋಂಟ್ ಆಲೋ ದೆಂ’ ಅಂದರು.

ನಿವೇದಿತಾ ಟೀಚರ್ ‘ಥ್ಯಾಂಕ್ಸ್ ಸರ್‌’ ಅಂತ ಮೇಲೆದ್ದರು. ಆಶಾ ಮೇಡಂ ಮುಂದಿದ್ದ ತಮ್ಮ ಡೈರಿ ತಕೊಂಡು ಹೊರ ಬಂದರು. ಮಲ್ಲಿಕಾ ನೆರಳಂತೆ ಹಿಂಬಾಲಿಸಿದಳು. ತಾನು ನಡೆಯುತ್ತಿದ್ದೇನೆಯೋ ತರಗೆಲೆಯಂತೆ ಸರಿಯುತ್ತಿದ್ದೇನೆಯೋ ತಿಳಿಯಲಿಲ್ಲ.

ಈ ನಿವೇದಿತಾ ಟೀಚರಾ ಆರೋಪ ಮಾಡ್ತಿರೋದು? ಹಂಗಾದ್ರೆ ಇಲ್ಲೀಗಂಟ ನೋಡುತ್ತಿದ್ದ ರೀತಿ...!? ಗಂಟಲು ಒಣಗಿ ಬಂತು.

ಆಶಾ ಮೇಡಂ ತಮ್ಮ ಅಟೆಂಡರ್ ಮಾಯಮ್ಮನಿಗೆ ‘ಸರ್ಚ್’ ಮಾಡಲು ಸೂಚಿಸಿದರು. ವಿಷಯ ತಿಳಿದ ಇತರರು ರೂಮಿನ ಮುಂದೆ ಸೇರಿದರು. ಮಾಯಮ್ಮ ಒಂದು ಕಡೆಯಿಂದ ಬ್ಯಾಗುಗಳನ್ನು ಪರಿಶೀಲಿಸಿದಳು. ಟೇಬಲ ಸಂದಿ, ದಿನಪತ್ರಿಕೆಗಳನ್ನು ಜೋಡಿಸಿದ್ದ ಮೂಲೆ, ಮುರಿದ ಅಲ್ಮೇರಾಗಳ ಅಂಚು ಗೊಂಚುಗಳನ್ನೆಲ್ಲ ಶೋಧಿಸಿದಳು. ನೆಕ್ಲೇಸ್ ಎಲ್ಲೂ ಕಾಣಲಿಲ್ಲ.

ಆಶಾ ಮೇಡಂ ನಿವೇದಿತಾ ಟೀಚರನ ಮುಖ ನೋಡಿದರು. ನಿವೇದಿತಾ ಟೀಚರ್ ವ್ಯಘ್ರಗೊಂಡು ‘ಲೇ, ನಾನು ರೆಸ್ಟ್‌ರೂಂಗೆ ಹೋಗಿದ್ದಾಗ ನೀನು ನನ್ನ ವ್ಯಾನಿಟಿ ಬ್ಯಾಗ್ ತಕೊಂಡು ನೋಡುತ್ತಿದ್ದೆ. ನಾನು ಬರುವಷ್ಟರಲ್ಲಿ ನೀನು ಅದ್ರ ಧೂಳು ಒರೆಸುವಂಗೆ ನಾಟಕ ಮಾಡ್ದೆ. ನೀನಲ್ಲದೆ ಬೇರೆ ಯಾರೂ ಈ ಕೆಲಸ ಮಾಡಿಲ್ಲ. ಮರ್ಯಾದೆಯಿಂದ ನೆಕ್ಲೇಸ್ ತಂದು ಒಪ್ಪಿಸಿಬಿಡು, ನಿನ್ನನ್ನ ಬಿಟ್ಟು ಬಿಡ್ತೀನಿ. ಇಲ್ಲಾಂದ್ರೆ ಪೊಲೀಸ್ನೋರಿಗೆ ಕಂಪ್ಲೆಂಟ್ ಕೊಡ್ತೀನಿ. ಅವರು ನಾಕು ಒದ್ರೆ ಆಗ ಬಾಯಿ ಬಿಡ್ತಿ’ ಅಂತ ರೇಗಿದರು.

ಮಲ್ಲಿಕಾಳಿಗೆ ಕಂಠ ಬಿಗಿದಿತ್ತು. ಮಾತು ಹೊರಡುತ್ತಿರಲಿಲ್ಲ. ಕಣ್ಣೀರು ಮಾತ್ರ ಸುರಿಯುತ್ತಿತ್ತು. ನಾಗಕ್ಕನಾದಿಯಾಗಿ ನಿಂತಿದ್ದವರಿಗೆಲ್ಲಾ ಬಾಯಿ ಕಟ್ಟಿತ್ತು. ನಿವೇದಿತಾ ಟೀಚರ್ ಮತ್ತೆ ‘ವ್ಯಾನಿಟಿ ಬ್ಯಾಗ್ ಯಾಕೆ ತಕೊಂಡಿದ್ದೆ ಹೇಳು?’ ಜಗ್ಗಿಸಿ ಕೇಳಿದರು. ಅದಕ್ಕೆ ಧೂಳು ಅಂಟಿಕೊಂಡಿತ್ತು. ಅದನ್ನು ಒರೆಸಿ ಎಷ್ಟು ಚೆನ್ನಾಗಿದೆಯಂತ ಆಸೆಯಾಗಿ ಮುಟ್ಟಿದೆ ಅಂತ ಹೇಳಲು ಅವಳಿಗೆ ನಾಲಿಗೆಯೇ ಹೊರಳಲಿಲ್ಲ. ಅದು ಗಂಟಲೊಳಗೆ ಅಂಟಿಕೊಂಡಿತ್ತು.

ಆಶಾ ಮೇಡಂ ಕನಿಕರದಿಂದಲೇ ‘ನೋಡಮ್ಮ ಹಿಂಗೆ ಅಳ್ತಾ ನಿಂತ್ರೆ ನೀನು ಕಳ್ಳಿಯಲ್ಲ ಅಂತ ಫ್ರೂ ಆಗುತ್ತಾ? ಈಗ್ಲೂ ಕಾಲ ಮಿಂಚಿಲ್ಲ, ತಕೊಂಡಿದ್ರೆ ಕೊಟ್ಟುಬಿಡು’ ಅಂದರು. ರಮ್ಯಾ ಟೀಚರ್ ‘ಒಳ್ಳೆ ಮಳ್ಳಿಯಂಗೆ ನಿಂತಿದ್ದಾಳೆ. ಇಂಥೋರ್ನ ಬಿಡಬಾರ್ದು’ ಅಂದರು. ಉಳಿದ ಟೀಚರುಗಳು ಹೂಗುಟ್ಟತೊಡಗಿದರು. ಅಷ್ಟೊತ್ತಿಗೆ ಸೆಲ್ವಿ ಜೊತೆ ಬಂದ ರೀಟಾ ಟೀಚರ್ ‘ನೋಡಿ, ಈ ಸೆಲ್ವಿಗೆ ಒಂದು ಹ್ಯಾಂಡ್‍ಪರ್ಸ್ ಸಿಕ್ಕಿದೆ. ಅದನ್ನ ನಾಗಕ್ಕನಿಗೆ ಕೊಡೋದಿಕ್ಕೆ ಹೋಗಿದ್ದಳಂತೆ. ಅಷ್ಟರಲ್ಲಿ ಈ ಗಲಾಟೆ ಕಂಡು ನನ್ನ ಹತ್ರ ಬಂದು ಹೇಳಿದಳು. ನಿವೇದಿತಾ ಇದೆಯಾ ನೋಡ್ರಿ ನಿಮ್ಮ ಪರ್ಸ್? ಕೊಡಮ್ಮ ಅದನ್ನ’ ಅಂದರು. ನಿವೇದಿತಾ ಅದನ್ನು ಈಸಿಕೊಂಡು ಒಳಹೊರಗೆಲ್ಲ ನೋಡುತ್ತಾ ತಲೆಯಾಡಿಸಿದರು. ಟೀಚರುಗಳು ಸಿಕ್ತು ಅಂತ ಉದ್ಗಾರ ಮಾಡಿದರು. ಇಲ್ಲೀವರೆಗೂ ಮಾತು ಕಳೆದುಕೊಂಡಿದ್ದ ತನ್ನ ಸಹೋದ್ಯೋಗಿಗಳು ‘ಮಲ್ಲಿಕಾ ಕಳ್ಳಿಯಲ್ಲ’ ಅಂತ ದನಿ ಏರಿಸಿದರು. ಮಲ್ಲಿಕಾ ಕತ್ತೆತ್ತಿ ಎಲ್ಲರನ್ನೊಮ್ಮೆ ನೋಡಿದಳು. ಈಗ ಮುಕ್ತವಾಗಿ ದುಃಖ ಉಮ್ಮಳಿಸಿ ಬಂತು. ಓಡಿ ಬಂದು ಸೆಲ್ವಿಯ ತಬ್ಬಿಕೊಂಡಳು.

ಇಲ್ಲಿಯವರೆಗೆ ಕರಾಳ ಮೌನ ತುಂಬಿದ್ದ ರೂಮು ಈಗ ಸಶಬ್ದಗೊಂಡಿತು. ಕೆಲವರ ಮುಖ ಸುಕ್ಕುಗಟ್ಟಿ ಕಣ್ಣಾಲಿ ನೆನೆದವು. ತುಮುಲದ ನೀರವತೆಯನ್ನು ಭೇದಿಸಿದ ಆಶಾ ಮೇಡಂ ‘ಬನ್ನಿ ಅಧ್ಯಕ್ಷರಿಗೆ ರಿಪೋರ್ಟ್ ಮಾಡೋಣ’ ಅಂದರು. ಕೇವಲ ಅಹಂ, ದರ್ಪ, ದುಡುಕು ಸ್ವಭಾವದಿಂದಲೇ ಗಂಡನಿಗೆ ವಿಚ್ಛೇದನ ನೀಡಿ ಈಗ ಒಂಟಿಯಾಗಿದ್ದರೂ ಈ ನಿವೇದಿತಾರಿಗೆ ಇನ್ನೂ ಬುದ್ಧಿ ಬರಲಿಲ್ಲ ಅಂತ ರೀಟಾ ಮೇಡಂನ ಮನಸ್ಸು ತುಂಡಾದ ಹಾವಿನ ಬಾಲದಂತೆ ಪಟಗುಟ್ಟಿತು.

ಈಗ ನಿವೇದಿತಾ ಟೀಚರ್ ‘ಛೆ! ಎಲ್ಲ ಕನ್‍ಫ್ಯೂಸನ್’ ಅಂತ ತನಗೆ ತಾನೆ ಉದ್ಗರಿಸಿದರು. ಇದಕ್ಕೆ ಆಶಾ ಮೇಡಂ ‘ಕನ್‍ಫ್ಯೂಸನ್‌ ಇರೋದು ನಿಮಗಷ್ಟೆ ಬನ್ನಿ, ನೀನೂ ಬಾಮ್ಮ’ ಅಂತ ಹೇಳಿ ಸರಸರನೆ ಅತ್ತ ನಡೆದರು.

ಅಧ್ಯಕ್ಷರು ಛೇಂಬರ್‌ನಲ್ಲಿ ಲ್ಯಾಪ್‍ಟಾಪ್ ನೋಡುತ್ತಿದ್ದರು. ಅದರಿಂದ ಬಿಡಿಸಿಕೊಂಡು ಕತ್ತೆತ್ತಿ ‘ವಾಟ್ ಹ್ಯಾಪೆನ್ಡ್’ ಅಂದರು. ಆಶಾ ಮೇಡಂ ‘ಶಿ ಈಸ್ ಇನೋಸೆಂಟ್ ಸರ್. ನಿವೇದಿತಾ ಅವರ ದುಡುಕೇ ಸೀನ್ ಕ್ರಿಯೇಟ್ ಆಗಲು ಕಾರಣ. ನೆಕ್ಲೇಸ್ ಅಲ್ಲೇ ಇತ್ತು. ಮಲ್ಲಿಕಾ ಒಳ್ಳೆ ಹುಡುಗಿ. ಮೋರೆವರ್, ಶಿ ಈಸ್ ವೆರಿ ಹಾರ್ಡ್ ವರ್ಕರ್’ ಅಂದರು.

ಅಧ್ಯಕ್ಷರು ‘ವಾಟ್ ಈಸ್ ದಿಸ್ ನಿವೇದಿತಾ’ ಅವಳತ್ತ ಅತೃಪ್ತಿನೋಟ ಬೀರಿ, ಇತ್ತ ತಿರುಗಿ ಬಾಡಿ ಹೋಗಿದ್ದ ಮಲ್ಲಿಕಾಳ ಮುಖ ನೋಡಿದರು. ತನ್ನ ಒಡನಾಡಿಗಳ ಸಮಾಧಾನದಿಂದ ತಹಬಂಧಕ್ಕೆ ಬಂದಿದ್ದ ಅವಳಿಗೀಗ ಮತ್ತೆ ದುಃಖ ಉಕ್ಕಿ ಬಂತು. ಅಧ್ಯಕ್ಷರು ‘ಯಾಕೆ ಅಳ್ತೀಯಾ? ನೀನು ಕದ್ದಿಲ್ಲವಲ್ಲ? ನಿನ್ನನ್ನೇನು ಕೆಲ್ಸದಿಂದ ತೆಗೆಯೋದಿಲ್ಲ. ಹೋಗು ಕೆಲ್ಸ ಮಾಡೋಗು’ ಅಂತ ಹೇಳಿದರು. ನಿವೇದಿತಾ ಟೀಚರ್ ತಲೆ ತಗ್ಗಿಸಿ ಹೊರಬಂದರು. ಆಶಾ ಮೇಡಂ ಅಧ್ಯಕ್ಷರ ಕೊಠಡಿಯಲ್ಲಿ ಉಳಿದರು.

ನಾಗಕ್ಕ, ಸೆಲ್ವಿಯರೆ ಮಲ್ಲಿಕಾಳಿಗೆ ‘ನೀನು ಕಳ್ಳಿಯಲ್ವಲ್ಲ ದುಃಖ ಯಾಕೆ?’ ಅಂತ ಸಮಾಧಾನ ಮಾಡಿದರು. ಅವಳಿಗೆ ದುಃಖ, ಆತಂಕ, ಅವಮಾನಗಳು ಕ್ಷೀಣವಾಗುತ್ತ ಬಂದವು. ನಿರಾಳ ತಳವೂರತೊಡಗಿತು. ಗಂಡ ನೆನಪಾದ. ಹಳ್ಳಿಯಲ್ಲಿದ್ದರೂ ಅಪ್ಪ ಅವ್ವ ಕೇಳಿದ್ದನ್ನೆಲ್ಲ ಕೊಡಿಸಿಕೊಂಡು ಬೆಳೆಸಿದ್ದ ಪ್ರೀತಿ ನೆನಪಾಯಿತು. ಗಂಡನ ಅಭಿಮಾನ ಮತ್ತು ಅಪ್ಪ ಅವ್ವರ ಪ್ರೀತಿಯನ್ನು ತಾನು ಅಪವಿತ್ರಗೊಳಿಸಿಕೊಂಡೆ ಅನಿಸಿತು.

ಉಳಿದವರೆಲ್ಲ ತಂತಮ್ಮ ಕೆಲಸಗಳಿಗೆ ಮರಳಿದರು. ಮಲ್ಲಿಕಾ ಈಗ ನೇರವಾಗಿ ಕೊಠಡಿಗೆ ಬಂದು ಬ್ಯಾಗ್ ಎತ್ತಿಕೊಂಡು ಅಧ್ಯಕ್ಷರ ಕೋಣೆ ಬಳಿಗೆ ಮತ್ತೆ ಬಂದಳು. ಬಾಗಿಲಲ್ಲಿ ಕೂತಿದ್ದ ಅಟೆಂಡರ್ ‘ಯಾಕೆ ತಿರುಗಿ ಬಂದೆ’ ಅಂತ ತಡೆದು, ಕೇಳಿದರೂ ಉತ್ತರ ನೀಡದೆ ತಾನೇ ಬಾಗಿಲು ತಳ್ಳಿಕೊಂಡೆ ಒಳ ಬಂದಳು.

ಅಧ್ಯಕ್ಷರು ಮತ್ತು ಪ್ರಿನ್ಸಿಪಾಲ್ ಆಶಾ ಮೇಡಂ ಅವರು ಶಾಲಾ ಮಕ್ಕಳ ಪರ್‍ಫಾರ್‍ಮೆನ್ಸ್ ಬಗ್ಗೆ ಗಹನ ಚರ್ಚೆಯಲ್ಲಿದ್ದರು. ಇವಳು ಹೀಗೆ ನುಗ್ಗಿ ಬಂದದ್ದು ಪ್ರಿಯವಾಗಲಿಲ್ಲ. ಇದು ಉದ್ಧಟತನದ ಪರಮಾವಧಿ ಎನ್ನುವಂತೆ ಅಧ್ಯಕ್ಷರು ಇವಳನ್ನು ದುರುಗುಟ್ಟಿ ನೋಡುತ್ತ ಯಾಕೆ ಮತ್ತೆ ಬಂದೆ ಎಂಬಂತೆ ಕತ್ತು ಕುಣಿಸಿದರು. ಆದರೆ ಮಲ್ಲಿಕಾ ಆಶಾ ಮೇಡಂನತ್ತ ನೋಡುತ್ತ ‘ನಾನಿಲ್ಲಿ ಕೆಲ್ಸ ಮಾಡಲ್ಲ. ಬಿಡ್ತಾ ಇದ್ದೀನಿ. ಇಲ್ಲೀವರೆಗೆ ಮಾಡಿದ ಕೆಲ್ಸಕ್ಕೆ ನನ್ನ ಸಂಬಳ ಕೊಡಿ ಸಾಕು ಮನೇಗೆ ಹೋಯ್ತೀನಿ...’ ಅಂದಳು.

ಈ ಅರ್ಧ ದಿನದ ಎಪಿಸೋಡಿನಲ್ಲಿ ಅವಳು ಆಡಿದ ಮೊದಲ ಮಾತು. ಅದು ತಿರಸ್ಕಾರವೋ ಸ್ವಾಭಿಮಾನವೋ ಸಿಟ್ಟೋ ಸಂಕಟವೋ!? ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಪ್ರಿನ್ಸಿಪಾಲರಿಗೂ ತಿಳಿಯಲಿಲ್ಲ. ಶಾಲಾಡಳಿತದಲ್ಲಿ ಚಾಣಾಕ್ಷರಾಗಿದ್ದ ಅಧ್ಯಕ್ಷರಿಗೂ ಹೊಳೆಯಲಿಲ್ಲ. ಇಬ್ಬರೂ ಮಿಕಿ ಮಿಕಿ ನೋಡತೊಡಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT