ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಬಾನಾಡಿಗಳ ಲೋಕದಲ್ಲಿ ವಿಹಾರ

Last Updated 3 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಯಾವುದೇ ವ್ಯಕ್ತಿಗೆ ಛಾಯಾಗ್ರಹಣದ ಹುಚ್ಚು ಆರಂಭವಾದಾಗ ಸಾಮಾನ್ಯವಾಗಿ ಪ್ರಕೃತಿ, ಪಕ್ಷಿಗಳು ಮತ್ತು ಚಿಟ್ಟೆಗಳೇ ಆತನನ್ನು ಸೆಳೆಯುವ ಮೊದಲ ಅತಿಥಿಗಳು. ಒತ್ತಡದ ಜೀವನದಿಂದ ಒಂದಿಷ್ಟು ಹೊರಬರಲು ಹಲವರು ಇಂದು ಕೊರಳಲ್ಲಿ ಕ್ಯಾಮೆರಾದೊಂದಿಗೆ ಪ್ರಕೃತಿಯ ಮಡಿಲು ಸೇರುತ್ತಿದ್ದಾರೆ. ಹವ್ಯಾಸಗಳ ಪಟ್ಟಿಯಲ್ಲಿ ಪಕ್ಷಿ ವೀಕ್ಷಣೆಯೂ ಇತ್ತೀಚೆಗೆ ಅಗ್ರಸ್ಥಾನ ಪಡೆಯುತ್ತಿದೆ. ಹಲವರು ಈ ಬಾನಾಡಿಗಳನ್ನು ನೋಡುತ್ತಾ, ಅವುಗಳ ಚಲನವಲನಗಳನ್ನು ಗಮನಿಸುತ್ತಾ ಕಾಲ ಕಳೆದರೆ, ಇನ್ನೂ ಕೆಲವರು ಇವುಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು ತಾವೂ ಅವುಗಳ ಲೋಕದಲ್ಲಿ ಕಳೆದು ನೋಡುಗರನ್ನೂ ಅಲ್ಲಿಗೆ ಕರೆದೊಯ್ಯುತ್ತಾರೆ. ವಿಶ್ವನಾಥ ಸುವರ್ಣ ಇಂತಹ ಛಾಯಾಗ್ರಾಹಕರಲ್ಲಿ ಒಬ್ಬರು.

ನಾಲ್ಕು ವರ್ಷಗಳ ಹಿಂದೆ ‘ಕರುನಾಡ ಕೋಟೆಗಳ ಸುವರ್ಣ ನೋಟ’ ಎಂಬ ಬೃಹತ್‌ ಛಾಯಾಚಿತ್ರ ಸಂಪುಟವನ್ನು ಓದುಗರ ಎದುರಿಗಿರಿಸಿ, ಉತ್ತರದ ಬೀದರ್‌ನಿಂದ ದಕ್ಷಿಣದ ಕೊಡಗಿನವರೆಗೆ, ಪೂರ್ವದ ಚಿತ್ರದುರ್ಗದಿಂದ ಕರಾವಳಿಯ ಸುಲ್ತಾನ್‌ ಬತೇರಿಯವರೆಗೂ ಕೋಟೆ, ಅರಮನೆಗಳ ಕಥೆಗಳನ್ನು ಚಿತ್ರಗಳ ಮೂಲಕ ಕಟ್ಟಿಕೊಟ್ಟವರು ‘ಪ್ರಜಾವಾಣಿ’ ಪತ್ರಿಕೆಯ ಛಾಯಾಗ್ರಾಹಕರಾಗಿದ್ದ ಸುವರ್ಣ.

ಈ ಛಾಯಾಗ್ರಾಹಕನ ಕ್ಷೇತ್ರಕಾರ್ಯದ ಕುರಿತು ಅಚ್ಚರಿಯನ್ನು ಉಂಟುಮಾಡಿದ್ದ ಆ ಕೃತಿಯಲ್ಲಿ ಕೋಟೆ, ಅರಮನೆಗಳ ಚಿತ್ರಗಳ ಜೊತೆಗೆ ಅವುಗಳ ಬಗ್ಗೆ ಚಿಕ್ಕ ಟಿಪ್ಪಣಿಗಳು ಇದ್ದವು. ಆ ಅನುಭವವೇ ಹೊಸ ಕೃತಿಗೆ ಜೀವಾಳ. ಕೋಟೆ ಸುತ್ತಿ ಬಂದ ಸುವರ್ಣ, ಬಾನಾಡಿಗಳ ಲೋಕದಲ್ಲೇಕೆ ತಾವೂ ಹಾರಡಬಾರದು ಎಂದು ಪಣತೊಟ್ಟವರಂತೆ ಹಾರಿದ್ದಾರೆ. ಈ ಕೃತಿಯ ಗಾತ್ರವೇ ಅದಕ್ಕೆ ಸಾಕ್ಷ್ಯ ನುಡಿಯುತ್ತಿದೆ. ಸುಮಾರು 680 ಪುಟಗಳಲ್ಲಿ ಪಕ್ಷಿಲೋಕವನ್ನೇ ಹೊತ್ತು ತಂದಿರುವ ಈ ಕೃತಿ ಭರಪೂರ ಮಾಹಿತಿಯ ಆಗರವೂ ಹೌದು.

ಪಕ್ಷಿ ವೀಕ್ಷಣೆ ಮಾಡುವುದು ಅಥವಾ ಪಕ್ಷಿಗಳನ್ನು ಕ್ಯಾಮೆರಾದೊಳಗೆ ಸೆರೆ ಹಿಡಿಯುವುದು ಅಷ್ಟು ಸುಲಭದ ಮಾತಲ್ಲ. ಈ ಸಾಹಸಕ್ಕೆ ಅದೆಷ್ಟು ತಾಳ್ಮೆ ಇದ್ದರೂ ಸಾಲದು. ಈ ಮಾತಿಗೆ ನನ್ನದೇ ಅನುಭವವಿದೆ. ಆಗಿನ್ನೂ ಕ್ಯಾಮೆರಾ ಹುಚ್ಚು ಆರಂಭವಾಗಿತ್ತು. ನಮ್ಮ ಹಂಚಿನ ಮನೆಯ ಒಂದು ಬದಿಯಲ್ಲಿ ಸೂರಕ್ಕಿಯೊಂದು ಗೂಡುಕಟ್ಟಿ ಮೊಟ್ಟೆ ಇಟ್ಟಿತ್ತು. ಮೊಟ್ಟೆ ಒಡೆದು ಮರಿಯಾದಾಗ ಅದಕ್ಕೆ ಗುಟುಕು ನೀಡಲು ಬರುತ್ತಿದ್ದ ಸೂರಕ್ಕಿಯನ್ನು ಸೆರೆಹಿಡಿಯಲು ಕ್ಯಾನಾನ್‌ 1000ಡಿ 55–250 ಲೆನ್ಸ್‌ ಹಿಡಿದು ಹಲವು ದಿನ ಒದ್ದಾಡಿದ್ದೆ. ಇಷ್ಟೆಲ್ಲ ಪರಿಶ್ರಮದ ಬಳಿಕ ಸಿಕ್ಕಿದ್ದು ಒಂದೆರಡು ಚಿತ್ರಗಳಷ್ಟೇ. ಇದನ್ನೇಕೆ ನೆನಪಿಸಿಕೊಂಡೆ ಎಂದರೆ, ಈ ಕೃತಿಯಲ್ಲಿ ಮೇಲ್ನೋಟಕ್ಕೇ ಎರಡು ಸಾವಿರಕ್ಕಿಂತಲೂ ಅಧಿಕ ಛಾಯಾಚಿತ್ರಗಳು ಕಾಣುತ್ತವೆ. ಲೆಕ್ಕ ಹಾಕಿದರೆ ಅದಕ್ಕಿಂತಲೂ ಮಿಗಿಲಿರಬಹುದು. ಸುವರ್ಣ ಅವರ ಪರಿಶ್ರಮ ಹಾಗೂ ತಾಳ್ಮೆಗೆ ಈ ಚಿತ್ರಸಂಪುಟವೇ ಉದಾಹರಣೆ.

ಬಾನಾಡಿಯ ಒಂದೊಂದು ಟೇಕ್‌ ಆಫ್‌ಗೆ, ಲ್ಯಾಂಡಿಂಗ್‌ಗೆ, ಮರಿಗೆ ಗುಟುಕು ನೀಡುವ ದೃಶ್ಯಕ್ಕೆ, ಪ್ರಣಯದ ಕೇಳಿಗೆ ಛಾಯಾಗ್ರಾಹಕ ಭಾರವಾದ ಕ್ಯಾಮೆರಾವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಂಡು ಜಪ್ಪಿಸಿ ಕುಳಿತು ಕಾಯಬೇಕು. ಸುವರ್ಣ ಅವರ ಗಡಿಬಿಡಿಯನ್ನು ಬಲ್ಲವರಿಗೆ ಅವರು ಹೇಗೆ ಧ್ಯಾನಸ್ಥ ಸ್ಥಿತಿಯಲ್ಲಿ ಹೀಗೆ ಕಾಯುತ್ತಾರೆ ಎನ್ನುವುದೇ ಅಚ್ಚರಿ. ಕಾಡಿನಿಂದ, ಕೆರೆಯ ಏರಿಯಿಂದ, ನದಿಯ ದಡದಿಂದ ಅವರು ಹೆಕ್ಕಿ ತಂದ ‘ಆ್ಯಕ್ಷನ್‌’ ಚಿತ್ರಗಳು ಅವರ ಪರಿಶ್ರಮದ ಕಥೆಯನ್ನು ತಾವೇ ಹೇಳುತ್ತವೆ.

ಪಕ್ಷಿ ವೀಕ್ಷಣೆ ಬಗ್ಗೆ ಟಿಪ್ಸ್‌ ನೀಡುತ್ತಾ ಓದುಗರ ಪ್ರವೇಶಿಕೆ ಬಯಸುವ ಈ ಕೃತಿಯು ರಾಜ್ಯ ಪಕ್ಷಿ ‘ನೀಲಕಂಠ’ನಿಂದ ಆರಂಭವಾಗಿ ಕರುನಾಡ ಬಾನಲ್ಲಿ ಹಾರಾಡುವ 80 ಬಗೆಯ ಪಕ್ಷಿ ಪ್ರಭೇದಗಳ ಬಗ್ಗೆ ಸ್ಥೂಲವಾದ ಪರಿಚಯವನ್ನು ಹೊಂದಿದೆ. 80 ಪ್ರಭೇದಗಳಿದ್ದರೂ ಸುಮಾರು 200 ಹಕ್ಕಿಗಳ ಪರಿಚಯ ಈ ಕೃತಿಯಲ್ಲಿದೆ. ಹಕ್ಕಿಗಳ ಪ್ರಣಯ, ಮರಿಗಳ ಲಾಲನೆ–ಪಾಲನೆ, ಬದುಕನ್ನು ಸೂಕ್ಷ್ಮವಾದ ಕಣ್ಣುಗಳಿಂದ ನೋಡಿದ್ದಾರೆ ಸುವರ್ಣ.

ಪಕ್ಷಿಗಳ ಪ್ರಾದೇಶಿಕ ಹೆಸರು, ವೈಜ್ಞಾನಿಕ ಹೆಸರುಗಳ ಜತೆಗೆ ಅವುಗಳ ಗುಣಲಕ್ಷಣ, ಬದುಕು, ಆಹಾರ ಪದ್ಧತಿ, ಅವುಗಳು ಮುಖ್ಯವಾಗಿ ಕಂಡುಬರುವ ಸ್ಥಳ, ಅವುಗಳಿಂದಾಗುವ ಪ್ರಯೋಜನ, ಅವುಗಳ ಮೇಲೆ ನಡೆಸಲಾಗುತ್ತಿರುವ ಅಧ್ಯಯನ, ಅಳಿವಿನಂಚಿನಲ್ಲಿರುವ ಪ್ರಭೇದಗಳ ವಿವರವೂ ಇಲ್ಲಿದೆ. ಮಾಹಿತಿ ಹೆಕ್ಕಿ ಕೊಡುವಲ್ಲಿ ಕಲ್ಗುಂಡಿ ನವೀನ್‌ ಅವರ ಕ್ಷೇತ್ರ ಕಾರ್ಯ, ವಿಷಯ ಸಂಗ್ರಹದ ವ್ಯಾಪ್ತಿ ಇಲ್ಲಿ ಉಲ್ಲೇಖಾರ್ಹ.

ಇಂಗ್ಲಿಷ್‌ ಭಾಷೆಯಲ್ಲಿ ಸಲೀಂ ಅಲಿ, ಬಿಕ್ರಂ ಗ್ರೆವಾಲ್‌ ಮುಂತಾದ ಲೇಖಕರು ಪಕ್ಷಿ ಲೋಕವನ್ನು ಪರಿಚಯಿಸಿದ್ದಾರೆ. ಪ್ರಾದೇಶಿಕ ಭಾಷೆಗಳಲ್ಲಿ ಇವುಗಳ ಕೊರತೆ ಇದೆ. ಕನ್ನಡದಲ್ಲಿ ‌ಪಕ್ಷಿಲೋಕದ ಸುತ್ತು ಹೊಡೆಸುವ ಕೃತಿಗಳಿದ್ದರೂ, ಕಾಫಿ ಟೇಬಲ್‌ ಪುಸ್ತಕದ ಮಾದರಿಯ ಈ ಕೃತಿ ತನ್ನದೇ ಶೈಲಿಯಲ್ಲಿ ವಿಭಿನ್ನವಾಗಿದೆ. ಪಕ್ಷಿಗಳ ಕುರಿತು ಇಂತಹ ಸಮಗ್ರ ಚಿತ್ರ ಸಂಪುಟ ಈ ಹಿಂದೆ ಬಂದಿಲ್ಲ.

ಕೃತಿಗೆ ಬಳಸಿದ ಗ್ಲೇಜ್ಡ್‌ ಕಾಗದವೂ ಫೋಟೊ ಪ್ರಿಂಟ್‌ ಹಾಕಿಕೊಡುವ ಕಾಗದದಷ್ಟೇ ಉತ್ಕೃಷ್ಟವಾಗಿದ್ದು, ಇದರಿಂದ ಛಾಯಾಚಿತ್ರಗಳೂ ಕಣ್ಮುಂದೆ ಜೀವಪಡೆಯುತ್ತವೆ. ಪಕ್ಷಿವೀಕ್ಷಣೆ ಮತ್ತು ಛಾಯಾಗ್ರಹಣದ ಹವ್ಯಾಸಿಗಳಿಗೆ ಈ ಕೃತಿ ಒಂದು ಕೈಪಿಡಿಯಂತಿದೆ. ಶಾಲೆಗಳ ಗ್ರಂಥಾಲಯಗಳಲ್ಲೂ ಇರಲೇಬೇಕಾದ ಕೃತಿ ಇದಾಗಿದೆ. ಹಕ್ಕಿಗಳ ಲೋಕವನ್ನು ಮಕ್ಕಳಿಗೆ ಪರಿಚಯಿಸಲು ಇದರಿಂದ ಸಾಧ್ಯವಾಗಲಿದೆ.

ಪಕ್ಷಿ ವೀಕ್ಷಣೆಯ ಟಿಪ್ಸ್‌ ಜತೆಗೆ ಪಕ್ಷಿಗಳ ಛಾಯಾಗ್ರಹಣ, ಕ್ಯಾಮೆರಾ ಲೆನ್ಸ್‌, ಶಟರ್‌ಸ್ಪೀಡ್‌, ಐಎಸ್‌ಒ ಮುಂತಾದ ತಾಂತ್ರಿಕ ಮಾಹಿತಿಯೂ ಇದ್ದಿದ್ದರೆ ಪಕ್ಷಿಲೋಕದತ್ತ ಕಣ್ತೆರೆದು ನೋಡಲಿಚ್ಛಿಸುವ ಹವ್ಯಾಸಿ ಛಾಯಾಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಿರುತ್ತಿತ್ತು. ಪ್ರತೀ ಛಾಯಾಚಿತ್ರಕ್ಕೆ ಅಥವಾ ಚಿತ್ರಗಳ ಗುಂಪಿಗೆ ಒಂದೊಂದು ಅಡಿಬರಹವಿದ್ದಿದ್ದರೆ ಚಿತ್ರಗಳು ಮತ್ತಷ್ಟು ಜೀವಂತಿಕೆ ಪಡೆಯುತ್ತಿದ್ದವು ಎನ್ನಿಸದಿರಲಾರದು. ಕೆಲವೆಡೆ ಕಾಗುಣಿತ ದೋಷಗಳೂ ಓದಿನ ಓಘಕ್ಕೆ ಅಡ್ಡಿಯಾಗುತ್ತವೆ.

ಕೃತಿ: ಕನ್ನಡ ನಾಡಿನ ಬಣ್ಣದ ಬಾನಾಡಿಗಳು

ಪುಸ್ತಕ ಯೋಜನೆ ಹಾಗೂ ಛಾಯಾಗ್ರಹಣ: ವಿಶ್ವನಾಥ ಸುವರ್ಣ

ಕೃತಿಯ ಪಠ್ಯ ಲೇಖಕ: ಕಲ್ಗುಂಡಿ ನವೀನ್‌

ಪ್ರ: ಸುವರ್ಣ ಪಬ್ಲಿಕೇಷನ್‌, ಬೆಂಗಳೂರು

ಸಂ: 9916977442

ದರ: 3000

ಪುಟ: 688

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT