ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಹಾಸದ ಬಾವಿಯಲ್ಲಿ ಈಜಾಟ

Last Updated 31 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕವಿತೆ, ಗಜಲ್‌, ಕಥೆ, ನಾಟಕ, ಸಂದರ್ಶನ, ಅನುವಾದ ಹೀಗೆ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಲೇಖಕ ಚಿದಾನಂದ ಸಾಲಿ. ಇಷ್ಟು ಪ್ರಕಾರಗಳ ನಡುವೆ ‘ಆಡು ಮುಟ್ಟದ ಸೊಪ್ಪು’ ಎನ್ನುವಂತೆ ಇದ್ದ ಪ್ರಬಂಧವನ್ನೂ ‘ಮೂರನೇ ಕಣ್ಣು’ ಸಂಕಲನದ ಮೂಲಕ ಮುಟ್ಟಿ ಗಾದೆಗಿದ್ದ ಅಪವಾದವನ್ನು ಅಳಿಸಿಹಾಕಿದ್ದಾರೆ. ಇದರಲ್ಲಿನ ಹನ್ನೆರಡು ಪ್ರಬಂಧಗಳೂ ಕಥನದ ಕ್ಯಾನ್ವಾಸಿನ ಮೇಲೆಯೇ ಜೀವತಳೆದ ಭಿನ್ನ ಚಿತ್ರಗಳಂತೆ ಭಾಸವಾಗುತ್ತವೆ.

ಸಾಲಿ ಅವರದು, ಒಂದೇ ಪಾತ್ರದಲ್ಲಿ ತೀವ್ರವಾಗಿ ಹರಿಯುವಂಥ ಕಾವ್ಯಭಾಷೆಯಲ್ಲ; ಅದು ನಿರ್ಮಲ ಕೊಳದ ಮೇಲೆ ಹೂ ಬಿದ್ದಾಗ ಹಗುರವಾಗಿ ಎದ್ದು ವಿಸ್ತರಿಸಿಕೊಳ್ಳುತ್ತ ಹೋಗುವ ಅಲೆಯ ಉಂಗುರದಂಥದ್ದು. ಅತ್ತ ಕಾವ್ಯವೂ ಅಲ್ಲದ ಇತ್ತ ಬರಿಯ ವರದಿಯೂ ಅಲ್ಲದ ಅವೆರಡರ ನಡುವಣ ಹದದಲ್ಲಿ ಪಾಕಗೊಂಡ ಭಾಷೆ ಇಲ್ಲಿನ ಎಲ್ಲ ಪ್ರಬಂಧಗಳಿಗೆ ಆಪ್ತಕಾಂತಿಯನ್ನು ನೀಡಿವೆ.

ಭಾಷೆಯಲ್ಲಿನ ಈ ಆಪ್ತಗುಣ ಲೇಖಕರ ಜೀವನದೃಷ್ಟಿಯಿಂದ ಬಂದಿರುವುದರಿಂದಲೇ ಅವರಿಗೆ ಇಷ್ಟು ಭಿನ್ನ ವಿಷಯಗಳ ಬಗ್ಗೆಯೂ ಅಷ್ಟೇ ಉತ್ಸಾಹದಿಂದ ಬರೆಯುವುದು ಸಾಧ್ಯವಾಗಿದೆ.

‘ಬಸ್ಸಿನೊಳಗೆ ದೃಶ್ಯ ವೈಭವ’ ಪ್ರಬಂಧದಲ್ಲಿ ಬಸ್ಸಿನೊಳಗೆ ಸೀಟು ಹಿಡಿಯುವ, ಕಿಟಕಿಯಲ್ಲಿ ತೂರಿಕೊಳ್ಳುವ, ಬಗೆಬಗೆಯ ಜನರ ಅಸ್ತವ್ಯಸ್ತ ಒದ್ದಾಟವನ್ನು ಬಣ್ಣಿಸುತ್ತಾ ಲೇಖಕರು ಹೇಳುವ ಮಾತು: ‘ಆಹಾ... ಬಸ್ಸೆಂದರೆ ಬರೀ ಬಸ್ಸಲ್ಲೋ ಅಣ್ಣಾ, ಅದು ಸಾಕ್ಷಾತ್ ಶ್ರೀಕೃಷ್ಣ ಬಾಯ್ತೆರೆದು ತೋರಿಸಿದ ಬ್ರಹ್ಮಾಂಡ’. ಮೊದಲಿನ ಬಲುಮೋಜಿವ ವರ್ಣನೆಗಳನ್ನು ಓದಿದ ಮನಸ್ಸಿಗೆ ಶ್ರೀಕೃಷ್ಣನ ಬಾಯೊಳಗಿನ ಬ್ರಹ್ಮಾಂಡದ ಹೋಲಿಕೆ ಬಂದಾಕ್ಷಣ ಚಿತ್ರದಲ್ಲಿ ನೋಡಿದ್ದ ಬ್ರಹ್ಮಾಂಡದರ್ಶನದ ಬಿಂಬದೊಟ್ಟಿಗೆ ರಾಯಚೂರಿನ ಬಸ್ಸಿನ ಒದ್ದಾಟ ರಶ್ ಚಿತ್ರಣ ಸಮೀಕರಣಗೊಂಡು, ಪ್ರಯಾಸದ ಪಡಿಪಾಟಲಿಗೆ ಕಾಮಿಟಿ ಟಚ್ ಸಿಕ್ಕು ಕಿಸಕ್ಕನೆ ನಗುವಂತಾಗುತ್ತದೆ.

ಅವರು ಹೀಗೆ ನಗಿಸಿ ಸುಮ್ಮನಾಗುವುದಿಲ್ಲ. ಬಸ್ಸಿನೊಳಗನ್ನು ಅವರು ಬಣ್ಣಿಸುವ ರೀತಿ ನೋಡಿ: ‘ಯಾರದೋ ಮಗು ಕಂಡಕ್ಟರನ ತೊಡೆ ಮೇಲೆ, ಇನ್ಯಾರದೋ ಬ್ಯಾಗು ಮತ್ಯಾರದೋ ತೊಡೆ ಮೇಲೆ, ನಿಂತಿರುವ ಹುಡುಗರ ಕಾಪಿ ಪುಸ್ತಕಗಳು ಕುಳಿತಿರುವ ಹುಡುಗಿಯರ ಕೈಯಾಸರೆಯೊಳಗೆ, ಯಾರ್‍ಯಾರದೋ ಮನಸು ಯಾರ‍್ಯಾರದೋ ಮೇಲೆ...’ ಹೀಗೆ ಬ್ರಹ್ಮಾಂಡದ ಸಮೀಕರಣದೊಟ್ಟಿಗೆ ‘ವಸುಧೈವ ಕುಟುಂಬ’ದ ಮಿನಿಯೇಚರ್‌ ಒಂದನ್ನೂ ನಮ್ಮ ಮುಂದಿಡುತ್ತಾರೆ. ನಗಿಸುತ್ತಲೇ ನಮ್ಮನ್ನು ಮಿದುವಾಗಿಸುವ, ಹೆಚ್ಚು ಹೆಚ್ಚು ಮಾನವೀಯಗೊಳಿಸುವ ಚಿತ್ರಣಗಳು ಇಲ್ಲಿನ ಪ್ರಬಂಧಗಳಲ್ಲಿ ಅಲ್ಲಲ್ಲಿ ಎದುರುಗೊಳ್ಳುತ್ತವೆ.

‘ಮೀಂಗುಲಿಗನ ಈಸಿನ ಕನಸು’ ಈ ಸಂಕಲನದ ಶಕ್ತಿಶಾಲಿ ಪ್ರಬಂಧಗಳಲ್ಲಿ ಒಂದು. ಪುರಂದರ ದಾಸರ ‘ಈಸಬೇಕು ಇದ್ದು ಜೈಸಬೇಕು’ ಎಂಬ ಸಾಲಿನಿಂದ ಶುರುವಾಗುವ ಪ್ರಬಂಧದಲ್ಲಿ ಮುಂದೆ ಬರುವುದು ಸಂಸಾರ ಸಾಗರದಲ್ಲಿ ಈಸುವ ಕುರಿತಲ್ಲ. ಊರ ಬಾವಿಗಳಲ್ಲಿ ಈಸುತ್ತಲೇ ಬೆಳೆದಿದ್ದರ ಕುರಿತಾಗಿದ್ದು. ಆದರೆ ಇದು ನೀರಿನಲ್ಲಿ ಈಸುವುದರ ಕುರಿತು ಹೇಳುತ್ತಲೇ ಜೀವನಪ್ರೀತಿಯೆಂಬ ಜೀವಜಲದ ಸೆಲೆಯಮೂಲದಲ್ಲಿ ಕಟ್ಟಿಕೊಂಡಿರುವ ಕಸವನ್ನು ಸ್ವಚ್ಛಗೊಳಿಸಿ ಆನಂದದ ಸರಾಗ ಹರಿವಿಗೆ ಕಾರಣವಾಗುವಷ್ಟು ಈ ಪ್ರಬಂಧ ಶಕ್ತವಾಗಿದೆ.ಇಲ್ಲಿನ ಬಾವಿಗಳು ಊರಿನ, ಸಮುದಾಯದ ಸಾಮೂಹಿಕ ಜೀವನಾಡಿಗಳು – ಭಾವನಾಡಿಗಳೂ ಹೌದು. ದಿನದ ವಿವಿಧ ಹೊತ್ತುಗಳಲ್ಲಿ ಜೀವಚೈತನ್ಯದಿಂದ ನಳನಳಿಸುವ, ಬೇರೆ ಬೇರೆ ಬಗೆಯಲ್ಲಿ ಕಾಣಿಸುವ ಬಾವಿಗಳು ನಂತರ ನಿರ್ಜನವಾಗಿ ಭೀತಿಹುಟ್ಟಿಸುವ ಬಗೆಯಲ್ಲಿ ಬದುಕಿನ ಮಗ್ಗಲುಗಳ ಕುರಿತೂ ಹೊಳಹೊಂದು ಅಡಗಿರುವಂತಿದೆ.ಹಾಗಾಗಿಯೇ ಕೊನೆಯಲ್ಲಿ ಲೇಖಕರು ‘ಈಗ ಆ ಬಾವಿಗಳೆಲ್ಲ ಬತ್ತಿಹೋಗಿವೆ’ ಎನ್ನುವಾಗ ನಮ್ಮ ಸಾಮುದಾಯಿಕ ಜೀವಚೈತನ್ಯದ ಸೆಲೆಗಳೂ ಬತ್ತಿಹೋಗಿರುವುದರ ರೂಪಕವಾಗಿ ಕಾಣಿಸುತ್ತವೆ.

ಹಗುರವಾಗಿ, ನಗೆಯ ಸೆಲೆಯಾಗಿ ಆರಂಭವಾಗುವ ಅನೇಕ ಪ್ರಬಂಧಗಳು ಆ ನಗೆಯ ಮತ್ತೊಂದು ಬದಿಗೇ ಇದ್ದ ತೀವ್ರ ವಿಷಾದದ, ಗಂಭೀರವಾದ ಅಂಬುಧಿಗೆ ಜಿಗಿದು ನಮ್ಮನ್ನು ಡಿಸ್ಟರ್ಬ್ ಮಾಡುವುದೂ ಇದೆ. ‘ಮೂರನೇ ಕಣ್ಣಿಗೆ ನೂರಾರು ಗಾಯ!’ ಈ ಸಂಕಲನಲ್ಲಿ ಅತಿ ಹೆಚ್ಚು ಮಜ ಕೊಟ್ಟು ಓದಿಸಿಕೊಳ್ಳುವ ಪ್ರಬಂಧಗಳಲ್ಲಿ ಒಂದು. ಮಲವಿಸರ್ಜನೆಯ ಬಗೆಬಗೆ ಆಯಾಮಗಳನ್ನು ಚಕಚಕನೇ ವರ್ಣಿಸುತ್ತ ಹೋಗುವ ಈ ಪ್ರಬಂಧ, ಇಂಥ ಮಲವನ್ನು ನಮ್ಮಂಥ ಮನುಷ್ಯರೇ ಬಾಚುವ ಅನಿಷ್ಟ ಪದ್ಧತಿಯನ್ನು ಸಮಾಜ ಉಳಿಸಿಕೊಂಡಿರುವ ನಾಚಿಕೆಗೇಡಿನ ಸಂಗತಿಯ ಕುರಿತೂ ಗಮನ ಸೆಳೆದು ಬೆಚ್ಚಿಬೀಳಿಸುತ್ತದೆ.

ವಸ್ತುವೊಂದನ್ನು ಇಟ್ಟುಕೊಂಡು ಅದನ್ನು ಬಗೆಬಗೆಯಲ್ಲಿ ವಿಸ್ತರಿಸುತ್ತ ಹೋಗುವನಿರೂಪಣಾ ಕ್ರಮದಲ್ಲಿ ಕೆಲವೊಮ್ಮೆ ಬರಿದೆ ಲಂಬಿಸುತ್ತಿರುವಂತೆ ಭಾಸವಾಗುವುದೂ ಇದೆ. ಒಡಲೊಳಗಿನ ಕುಲುಮೆಯೊಳಗೆ ಬೆಂದು ಹದಗೊಂಡಿದ್ದು ಮತ್ತು ಕಾಳಜಿಯಿಂದ ಹೊರಗಿನಿಂದ ಆರೋಪಿಸಿಕೊಂಡು ಬರೆದಿದ್ದರ ನಡುವಿನ ವ್ಯತ್ಯಾಸ ತಿಳಿಯಬೇಕು ಎಂದರೆ ಹೆಣ್ಣಿನ ಕುರಿತಾಗಿ ಬರೆದ ‘ಒಂದು ಕಣ್ಣು ಬರೆದ ಮತ್ತೊಂದರ ಚಿತ್ರ’ ಮತ್ತು ‘ಜಾತಿ ಎಂಬ ಸೂತಕ’ ಎಂಬ ಪ್ರಬಂಧಗಳನ್ನು ಅಕ್ಕಪಕ್ಕ ಇಟ್ಟು ನೋಡಬಹುದು.

‘ಜಾತಿ ಎಂಬ ಸೂತಕ’ ಪ್ರಬಂಧದಲ್ಲಿ ಒಡಲೊಳಗಿನ ನೋವೇ ಸಾಲಾಗಿ ಪುಟಕ್ಕಿಳಿದಂತೆ ಭಾಸವಾಗುತ್ತದೆ. ‘ಎಲ್ಲಿದೆ ಜಾತಿ’ ಎಂದು ಕಣ್ಣುಮುಚ್ಚಿಕೊಂಡು ಕಿರುಚುವವರಿಗೆಲ್ಲರಿಗೂ ಈ ಪ್ರಬಂಧ ಎದೆಬಿರಿಯುವ ಘಟನೆಗಳನ್ನು ಮುಂದಿಕ್ಕದೆ, ತೀರಾ ಸಣ್ಣ ಸಣ್ಣ ಸಂಗತಿ, ದಿನಚರಿಗಳಲ್ಲಿ ಎದುರಾದ ಅನುಭವಗಳ ಮೂಲಕವೇ ಜಾತಿ ನಮ್ಮ ಸಮಾಜದೊಳಗೆ ಬೇರೂರಿರುವ ಬಗೆಯನ್ನು ಕಾಣಿಸುತ್ತ ಹೋಗುತ್ತದೆ. ಇದು ಸಂಕಲನದ ಅತ್ಯುತ್ತಮ ಬರಹಗಳಲ್ಲಿ ಒಂದು.

ಹೆಣ್ಣುಮಗುವಾದಾಗ ಮನೆಯವರ, ಆಸ್ಪತ್ರೆಯಲ್ಲಿ ವೈದ್ಯರ ಪ್ರತಿಕ್ರಿಯೆಗಳನ್ನು ಇಟ್ಟುಕೊಂಡೇ ಶುರುವಾಗುವ ‘ಒಂದು ಕಣ್ಣು ಬರೆದ ಮತ್ತೊಂದರ ಚಿತ್ರ’ ಹೆಣ್ಣಿನ ಸ್ಥಾನಮಾನಗಳು, ಅವಳ ಕುರಿತಾದ ಪೂರ್ವಗ್ರಹಗಳನ್ನು ಪಟ್ಟಿಮಾಡುತ್ತಲೇ ಹೋಗುತ್ತದೆ. ಆದರೆ ಈ ವಕೀಲಿಕೆಯ ಬಹುಭಾಗವನ್ನು ಆವರಿಸಿರುವ ಕ್ಲೀಷೆಗಳು ಮತ್ತು ದಾರಿ–ಪಥಿಕನಂಥ ಹೋಲಿಕೆಗಳ ಮೂಲಕ ಗಂಡು‌–ಹೆಣ್ಣನ್ನು ತೂಕಕ್ಕೆ ಹಚ್ಚಿರುವುದನ್ನು ಗಮನಿಸಿದರೆ ಈ ವಾದದ ಹಿಂದೆ ಅಡಗಿರುವುದೂ ಮಾರುವೇಷದ ಪುರುಷ ಅಹಂಕಾರವೇ ಇರಬಹುದೇನೋ ಎಂಬ ಸಂದೇಹವೂ ಕಾಡುತ್ತದೆ.

‘ಜ್ಞಾನದ ಅಧಿದೇವತೆ ಸರಸ್ವತಿ ಹೆಣ್ಣು, ಸಂಪತ್ತಿನ ಅಧಿದೇವತೆ ಲಕ್ಷ್ಮೀ ಹೆಣ್ಣು, ನಿದಿರಾದೇವಿ ಹೆಣ್ಣು, ಅನ್ನದ ಅಧಿದೇವತೆ ಅನ್ನಪೂರ್ಣೆ ಹೆಣ್ಣು, ಕಡೆಗೆ ನಮ್ಮೆಲ್ಲರನ್ನೂ ಹೊತ್ತು ನಿಂತಿರುವ ಭೂಮಿಯೂ ಹೆಣ್ಣೇ ಆಗಿದ್ದಾಳೆ’ ಎಂದು ಬರೆಯುವ ಮೂಲಕ ಲೇಖಕರು ತಾವು ಯಾವುದನ್ನು ಅಲ್ಲಗಳೆಯಲು ಹೊರಟಿದ್ದಾರೋ ಅದನ್ನೇ ಮತ್ತೊಂದು ದಾರಿಯಲ್ಲಿ ಅಪ್ಪಿಹಿಡಿದಂತೆ ಭಾಸವಾಗುತ್ತದೆ. ಚರ್ವಿತ ಚರ್ವಣಗಳಿಗೆಮೀರಿದ ಹಲವು ಸಾಲುಗಳು ಅಲ್ಲಲ್ಲಿ ಬೆಳ್ಳಿರೇಖೆಯಂತೆ ಮಿಂಚಿ ಮರೆಯಾಗುತ್ತದಾದರೂ ಇಡೀ ಪ್ರಬಂಧಕ್ಕೆ ಆ ಹೊಳಪು, ಕಾಡುವ ಧ್ವನಿಶಕ್ತಿ ಸಿಕ್ಕಿಲ್ಲ. ತನ್ನದಲ್ಲದ ಕಣ್ಣಿಂದ ನೋಡಹೊರಟಾಗ ಹುಟ್ಟಿಕೊಳ್ಳುವ ಕೃತಕತೆಯಲ್ಲಿ ಪ್ರಬಂಧ ಬಳಲಿದೆ. ‘ಗುರು ಕರುಣೆಯ ವರ ತಾಗಿ’ ಎಂಬ ಇನ್ನೊಂದು ಪ್ರಬಂಧವೂ ತನ್ನ ಪ್ರವಚನದ ಧಾಟಿಯಿಂದ ಕಿರಿಕಿರಿ ಹುಟ್ಟಿಸುತ್ತದೆ.

ಇಲ್ಲಿನ ಹನ್ನೆರಡು ಪ್ರಬಂಧಗಳಿಗೆ ನಾಗೇಶ ಹೆಗಡೆ ಬರೆದಿರುವ ಮುನ್ನುಡಿಯನ್ನೂ ಒಂದು ರಸವತ್ತಾದ ಪ್ರಬಂಧವಾಗಿಯೇ ಓದಿಕೊಳ್ಳಬಹುದು. ಸೃಜನ್ ಅವರ ನುರಿತ ಚಿತ್ರಗಳು ಪುಸ್ತಕದ ಹರಿತಗುಣ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT